'ಹಾಡೆನ್ನ ದೈವತವು ಹಾಡೆನ್ನ ಜೀವಿತವು...’ : ಡಾ. ಚೆನ್ನವೀರ ಕಣವಿ


ನಾನು ಹೊಂಬಳದಲ್ಲಿ (ಧಾರವಾಡ ಜಿಲ್ಲೆ) ಹುಟ್ಟಿದರೂ ನನ್ನ ಬಾಲ್ಯವನ್ನು ಕಳೆದುದು ಶಿರುಂದದಲ್ಲಿ(ಆಗ ಗದಗ ತಾಲೂಕ ಸ್ಥಳ, ಈಗ ಜಿಲ್ಲೆ). ಈ ಗಾಢತೆಗೆ ನಾನು ಬೆಳೆದು ಬಂದ ಗ್ರಾಮೀಣ ಪರಿಸರ ಕಾರಣ ಎನ್ನುತ್ತಾರೆ ಕವಿ ಚೆನ್ನವೀರ ಕಣವಿ. ನಾಡೋಜ ಡಾ.ಚೆನ್ನವೀರ ಕಣವಿಯವರೊಂದಿಗೆ ‘ಹೊಸ ಮನುಷ್ಯ’ ಮಾಸಪತ್ರಿಕೆಗಾಗಿ ವಿನಯಾ ಒಕ್ಕುಂದ ಅವರು ನಡೆಸಿದ ವಿಶೇಷ ಸಂದರ್ಶನ ನಿಮ್ಮ ಓದಿಗಾಗಿ...

ಶುಭ್ರ ಮುಂಜಾವಿನ ಎಳೇ ಬಿಸಿಲಿನಲ್ಲಿ ಹಸಿರು ಮಕಮಲ್ ಗರಿಕೆಯ ಮೇಲೆ ಕೂತ ಇಬ್ಬನಿಯ ಮಣಿಗಳಂತೆ ಮೆಲುದನಿಯಲ್ಲಿ ಕನ್ನಡದ ಶಬ್ಧಗಳನ್ನು ಜೋಡಿಸುತ್ತಾ ಲೋಕದ ಸೌಂದರ್ಯವನ್ನು ಕಟ್ಟಿಕೊಟ್ಟಿರುವ ಮತ್ತು ಬಹುತೇಕ ಕಾವ್ಯಕ್ಕೇ ತಮ್ಮ ಸಾಹಿತ್ಯ ಜೀವನವನ್ನು ಮುಡಿಪಾಗಿಟ್ಟಿರುವ ಧಾರವಾಡದ ಕವಿ ಚೆನ್ನವೀರ ಕಣವಿಯವರನ್ನು ‘ಹೊಸ ಮನುಷ್ಯ’ದ ದಶವಾರ್ಷಿಕ ವಿಶೇಷ ಸಂಚಿಕೆಗಾಗಿ ಮಾತನಾಡಿಸಿರುವವರು ಧಾರವಾಡದವರೇ ಆದ ಕವಯತ್ರಿ ಮತ್ತು ಕತೆಗಾರ್ತಿ ವಿನಯಾ ಒಕ್ಕುಂದ ಅವರು.

ನಮಸ್ಕಾರ ಸರ್, ಕನ್ನಡ ಕಾವ್ಯಲೋಕವನ್ನು ನಿಮ್ಮ ಕವಿತೆಗಳ ಕಾಂತಿಯುತವಾಗಿಸಿದ್ದೀರಿ. ಏಳು ದಶಕಗಳನ್ನು ಮಿಕ್ಕಿ ಮೀರಿದ ಕಾವ್ಯಾನ೦ಸ೦ಧಾನದ ತಪ ನಿಮ್ಮದು. ಏನಾದರೂ ಇರಲಿ ಹಾಡ ನಿಲ್ಲಿಸಬೇಡ ಎಂಬ ಧೈಯದಲ್ಲಿ ಜೀವಕ್ಕೂ-ಕಲೆಗೂ ಇರುವ ಅನನ್ಯತೆಯನ್ನು ದರ್ಶಿಸಿದ್ದೀರಿ. ಕವಿತೆ ನಿಮ್ಮ ಭಾಷೆ ಕವಿತೆಯಿಂದ ಬಾಳು, ಬಾಳಿನಿಂದ ಕವಿತೆ ಪರಸ್ಪರ ಹೊಳಪುಗೊಂಡಿದ್ದನ್ನು ನಮ್ಮ ತಲೆಮಾರು ಬಲು ಬೆರಗಿನಿಂದ, ಗೌರವದಿಂದ ನೋಡಿದೆ.

ವಿನಯಾ ಒಕ್ಕುಂದ: ವೈಯಕ್ತಿಕವಾಗಿ ನಾನು, ನಿಮ್ಮ-ಶಾಂತಾದೇವಿಯವರ ಮಮತೆಯ ರುಚಿ ಉಂಡವಳು, ಈಗ... ಬದುಕಿನ ಇಳಿಸಂಜೆಯ ಏಕಾಂತದಲ್ಲಿ ಕಾವ್ಯದುಸಿರಿನ 'ತುಂಬಿದ ಕೊಡ'ದಂತಿರುವ ನಿಮ್ಮೊಂದಿಗೆ, 'ಹೊಸ ಮನುಷ್ಯ' ಪತ್ರಿಕೆಗಾಗಿ ಮಾತನಾಡುತ್ತಿರುವುದು ನನ್ನ ಬಾಳಿನ ಪುಣ್ಯ ಎಂದುಕೊಂಡಿದ್ದೇನೆ. ಇವು ಪ್ರಶ್ನೆಗಳಲ್ಲ. ಮಾತಿಗೆ ನೆಪಗಳು...
ಚೆನ್ನವೀರ ಕಣವಿ: 'ಏನಾದರೂ ಇರಲಿ, ಹಾಡ ನಿಲ್ಲಿಸಬೇಡ
ದೀಪ ಪಟ್ಟನೆ ಆರಿ ಹೋಗಬಹುದು
ನನ್ನೆದೆಯ ಕತ್ತಲೆಯ ಕಣ್ಣುಕಪ್ಪಡಿ ಮತ್ತೆ
ಮೂಲೆ ಮೂಲೆಗೆ ಹೋಗಿ ಹಾಯಬಹುದು'

ಈ ಸಾಲು 'ಮತ್ತೊಂದು ಪುಟ್ಟ ಹಕ್ಕಿಗೆ' ಕವನದಲ್ಲಿಯದು. ಒಂದು ನಿರಾಶೆಯ ಮನೋಸ್ಥಿತಿಯಲ್ಲಿ ಈ ಪದ್ಯವನ್ನು ಬರೆದದ್ದು.

'ಹಾಡೆನ್ನ ದೈವತವು ಹಾಡನ್ನ ಜೀವಿತವು
ಮತ್ತೆ ಮತ್ತುಳಿದವರ ಮಾತು ಬೇಡ'

ಎಂದು ಅಂತ್ಯವಾಗುತ್ತದೆ. ನನ್ನ ಇಡೀ ಜೀವನ ಹಾಡಿಗೆ ತೆರೆದುಕೊಂಡಿದ್ದು, ' ಮತ್ತೆ ಮತ್ತುಳಿದವರ ಮಾತು ಬೇಡ' ಎಂಬ ಆಸಕ್ತಿಯಲ್ಲಿ ಬರೆದದ್ದು. 'ಅದೇ ನನ್ನ ಧೈಯದಲ್ಲಿ ಜೀವನಕ್ಕೂ ಕಲೆಗೂ ಇರುವ ಅನನ್ಯತೆಯನ್ನು ದರ್ಶಿಸಿದ್ದೀರಿ' ಎಂದು ನೀವು ಅರ್ಥೈಸಿದ್ದೀರಿ. ನಿಮ್ಮ ಭಾಷೆ ಕವಿತೆಯಂತೆ ಬಾಳು ಕವಿತೆ ಪರಸರ ಹೊಳಪುಗೊಂಡಿದ್ದನ್ನು ನಮ್ಮ ತಲೆಮಾರು ಬಲು ಬೆರಗಿನಿಂದ ಗೌರವದಿಂದ ನೋಡಿದೆ ಎಂದು ಅರ್ಥಪೂರ್ಣವಾಗಿ ಅರ್ಥೈಸಿದ್ದೀರಿ. ಅದು ನಿಮ್ಮ ವಿಮರ್ಶೆಯ ಹರಿತವನ್ನು ತೋರಿಸುತ್ತದೆ. ಶಾಂತಾದೇವಿಯವರ ಮಮತೆಯ ರುಚಿ ಉಂಡವರು ನೀವು, ನೀವು 'ಹೊಸ ಮನುಷ್ಯ' ಪತ್ರಿಕೆಗಾಗಿ ಸಂದರ್ಶನ ಮಾಡುತ್ತಿರುವುದು ಹೇಗೆ ನಿಮ್ಮ ಬಾಳಿನ ಪುಣ್ಯವೋ ಹಾಗೇ ನನ್ನ ಬಾಳಿನ ಪುಣ್ಯವೂ ಹೌದು.

ಆ ಪತ್ರಿಕೆ ನಿಲ್ಲಲಿದೆ ಎಂದು ಕೇಳಿದೆ. ಅದು ನಿಲ್ಲಬಾರದು. ಅದು ಸಮಾಜವಾದಿ ಮಾಸಪತ್ರಿಕೆ, ಅನೇಕರು ಲೇಖನಗಳನ್ನು ಅದಕ್ಕೆ ಬರೆಯುವುದೇ ಹೆಮ್ಮೆ ಎಂದುಕೊಂಡವರು.

ವಿನಯಾ ಒಕ್ಕುಂದ: ಸರ್, ಕಾವ್ಯವನ್ನು ಇಷ್ಟು ಹಚ್ಚಿಕೊಂಡಿರಿ. ಅದು ನಿಮಗೆ ಅಷ್ಟು ಒಲಿಯಿತು. ಈ ಗಾಢತೆಗೆ ನೀವು ಬೆಳೆದು ಬಂದ ಪರಿಸರ ಕಾರಣವೇ?
ಚೆನ್ನವೀರ ಕಣವಿ: ನಾನು ಹೊಂಬಳದಲ್ಲಿ (ಧಾರವಾಡ ಜಿಲ್ಲೆ) ಹುಟ್ಟಿದರೂ ನನ್ನ ಬಾಲ್ಯವನ್ನು ಕಳೆದುದು ಶಿರುಂದದಲ್ಲಿ(ಆಗ ಗದಗ ತಾಲೂಕ ಸ್ಥಳ, ಈಗ ಜಿಲ್ಲೆ). ಈ ಗಾಢತೆಗೆ ನಾನು ಬೆಳೆದು ಬಂದ ಗ್ರಾಮೀಣ ಪರಿಸರ ಕಾರಣ.
ಅದು ಏಕೋಪಾಧ್ಯಾಯ ಶಾಲೆ, ಒಂದನೇ ಇಯತ್ತೆಯಿಂದ ನಾಲ್ಕನೆಯ ಇಯತ್ತೆಯವರೆಗೆ ಮಾತ್ರ ಅದು ಇತ್ತು. ಎಲ್ಲ ವಿಷಯಗಳನ್ನು ನಮ್ಮ ತಂದೆ ಜಾಣ್ಮೆಯಿಂದ ಕಲಿಸುತ್ತಿದ್ದರು. ಇದು ಈಗಲೂ - ಆಶ್ಚರ್ಯದ ವಿಷಯ. ನಮ್ಮ ಶಾಲೆಯನ್ನು 'ಸಾಲಿಗುಡಿ' ಎಂದು ಸಹ ಕರೆಯುತ್ತಿದ್ದರು. ಅಂದ ಹಾಗೆ, ಹಣಮಂತ ದೇವರ ಗುಡಿಯಲ್ಲಿಯೇ ನಮ್ಮ ಶಾಲೆ ಪಾರಂಭವಾಯಿತು. ಮುಂದೆ ಬೇರೆ ಕಟ್ಟಡಕ್ಕೆ ಹೋದರೂ 'ಸಾಲಿಗುಡಿ' ಎಂದೇ ಪ್ರಸಿದ್ಧವಾಯಿತು. ಜನರೂ ಅದನ್ನು ಬಳಸುತ್ತಿದ್ದರು.

ನಮ್ಮ ಶಾಲೆಯ ಎದುರಿಗೆ ಲೋಕೋಪಯೋಗಿ ಇಲಾಖೆ ಬಾವಿಯನ್ನು ಕಟ್ಟಿಸಿದ್ದರು. ಅಲ್ಲಿ ಕಟ್ಟೆಯ ಕೆಳಗೆ ಸುತ್ತಲೂ ಹೊಲೆಯರು/ಮಾದರು ಒಂದೇ ಸಮನೆ ಬೇಡಿ ನೀರು ಹಾಕಿಸಿಕೊಳ್ಳುವ ಸ್ಥಿತಿ ಅವರದಾಗಿತ್ತು. ಯಾರು ಬಿಡುವು ದೊರೆತರೂ ತಲಾ ಒಂದು ಬಿಂದಿಗೆ ಸುರಿಯತೊಡಗಲು ಹೊಲೆಯರು ಅಷ್ಟಕ್ಕೆ ತೃಪ್ತಿ ಪಡೆಯುತ್ತಿದ್ದರು.

ಇದರ ಪ್ರಭಾವವೋ ಏನೋ ಮುಂದೆ ನನ್ನ 'ಭಾವಜೀವಿ' ಖಂಡಕಾವ್ಯದಲ್ಲಿ.
"ಕೆರವು ಹೊಲಿಯುವ ದೀನ ದಲಿತ ಮಾದರ ದುರುಗ
ಮುಟ್ಟಬೇಡಿರಿ ತಂದೆ ಎಂಬ ನುಡಿಗೆ
ನನ್ನೆದೆಯ ಕಸಿವಿಸಿಯ ಹೇಳತೀರದು ಆಗ
ಬಾಲಕರಿಗೆಲ್ಲಿಯದು ಮಡಿಮೈಲಿಗೆ?” ಎಂಬ ಸಾಲು ಬಂದಿರಬೇಕು.

ನಮ್ಮೂರಲ್ಲಿ ಒಕ್ಕಲಿಗರೇ ಹೆಚ್ಚಿದ್ದರೂ ಅವರ ಜೊತೆಗೆ ಕಮ್ಮಾರ, ಬಡಿಗೇರ, ಪತ್ತಾರ ಎಲ್ಲರೂ ಇರುತ್ತಿದ್ದರು. ಒಡ್ಡರ ಓಣಿಯಲ್ಲಿ ಹೆಣ್ಣುಮಕ್ಕಳು ಕುಬುಸ ಹಾಕುತ್ತಿರಲಿಲ್ಲ. ಅವರ ಆಚೆ ಹೊಲೆಯರ/ಮಾದರ ಓಣಿ, ಒಕ್ಕಲಿಗರ ದನ ಸತ್ತರೆ ಮಾದರು ಬೇಕೇಬೇಕು. ಅವರು ಅದರ ಚರ್ಮದಿಂದ ಚಪ್ಪಲಿ ಕೆರವು ಮಾಡುತ್ತಿದ್ದರು. ಊರ ಮಂದಿ ಅವನ್ನು ಕೊಳ್ಳುತ್ತಿದ್ದರು. ಗೌಡರಿಗೆ ಪುಕ್ಕಟೆ ಕೊಡುತ್ತಿದ್ದರು. ಅವರು ಇನ್ನಾವುದೇ ರೂಪದಿಂದ ಅವರಿಗೆ ಉಪಕರಿಸುತ್ತಿದ್ದರು.

ಕಟಗೇರಮ್ಮ ನಮ್ಮ ಗ್ರಾಮದೇವತೆ, ಮಂಗಳವಾರಕ್ಕೊಮ್ಮೆ ಪಲ್ಲಕ್ಕಿ ಸೇವೆ. ಅಂದು ವೀರಗಾರರ ಪದ. ಅವರು ಬಾರಿಸುತ್ತಿದ್ದ ಡೊಳ್ಳಿನ ಜೊತೆಗೆ ಹಾಡುತ್ತಿದ್ದರು, ಅವು ವೀರಗಾರರ ಪದವೆಂದು ಪ್ರಸಿದ್ಧವಾಗಿದ್ದವು.

ನಮ್ಮೂರ ಬದಿಯ ಶಿರಹಟ್ಟಿಯ ಫಕ್ಕೀರ ಸ್ವಾಮಿಯವರ ಜಾತ್ರೆ ಬಹು ವಿಜೃಂಭಣೆಯಿಂದ ನಡೆಯುತ್ತಿತ್ತು. ಒಂದೆಡೆ ನಗಾರಖಾನೆಯಲ್ಲಿ ಧೂಪ ದೀಪ ಬೆಳಗುತ್ತಿದ್ದರು. ಕಾಯಿ ಒಡೆದು ಮಂಗಳಾರತಿ ಮಾಡುತ್ತಿದ್ದರೆ, ಇನ್ನೊಂದೆಡೆ ಸಕ್ಕರೆ ಓದಿಸುತ್ತಿದ್ದರು.

ಅಂದು ನಾಟಕ ಕಂಪನಿ ಬರುತ್ತಿದ್ದವು. ಅದರಲ್ಲಿ ಒಂದು ಕಂಪನಿ 'ಅಕ್ಷಯಾಂಬರ' ಆಡುತ್ತಿದ್ದರು. ಮತ್ತೊಂದು ಡಿಕಂದಗಲ್ ಹನುಮಂತರಾಯರಯರದು. ಅದು ‘ಬಡತನದ ಭೂತ' ಆಡುತ್ತಿದ್ದರು. ನಾಟಕ ಮುಗಿದ ಮೇಲೆ ಅಲ್ಲೇ ಥೇಟರಿನಲ್ಲೇ ಕೆಲ ಜನ ಮಲಗುತ್ತಿದ್ದರು. ಒಟ್ಟು ರಾತ್ರಿ ಹೀಗೆ ಕಳೆಯುತ್ತಿದ್ದರು.

ಮಧ್ಯಾಹ್ನ ಬಗೆ ಬಗೆಯ ತಿಂಡಿಗಳ ಅಂಗಡಿ ತೆರೆದಿರುತ್ತಿದ್ದವು. ಅದರ ಜೊತೆಗೆ ಸೋಡಾದ ಅಂಗಡಿಗಳೂ ಇರುತ್ತಿದ್ದವು.

ಚುರುಮುರಿ, ಅದರಲ್ಲಿ ಡಾಣಿ ಹಾಕಿಸಿಕೊಂಡು ಜನ ತಿನ್ನುತ್ತಿದ್ದರು, ಬೆಂಡು ಬತ್ತಾಸ ಕೂಡಾ.ತೇರಿನ ಮುನ್ನ ದಿನ ಕಡುಬಿನ ಕಾಳಗ, ಫಕೀರ ಸ್ವಾಮಿಗಳು ಬಿಳಿಯ ಕುದುರೆಯ ಮೇಲೆ ಕುಳಿತು ಉಂಡಿಗಡಬನ್ನು ಆಚೆಗೆ ಈಚೆಗೆ ಒಗೆಯುತ್ತಿದ್ದರು.

ಮರುದಿನ ತೇರನ್ನು ಎಳೆಯುತ್ತಿದ್ದರು. ಅವರ ಮಿಣಿಯನ್ನು ಹಿಡಿದು ಎಳೆಯಲು ನಾಮೇಲು ನೀ ಮೇಲು ಎಂದು ಜನ ಮುನ್ನುಗ್ಗುತ್ತಿದ್ದರು. ತೇರಿಗೆ ಬಾಳೆಹಣ್ಣು, ಉತ್ತತ್ತಿ ಒಗೆಯುತ್ತಿದ್ದರು. ಅದನ್ನೇ ಕೆಲವರು ಪ್ರಸಾದವೆಂದು ಭಾವಿಸುತ್ತಿದ್ದರು. ಜಾತ್ರೆ ಸುಮಾರು ಒಂದು ತಿಂಗಳು ಜರುಗುತ್ತಿತ್ತು. ಅದಕ್ಕೆ ಪರಿಷೆಯೆಂದು ಕರೆಯುತ್ತಿದ್ದರು.

ಊರ ಮುಂದಿನ ಹಳ್ಳದಲ್ಲಿ ಎತ್ತುಗಳ ಮೈ ತೊಳೆದು ಹೊಲಸನ್ನು ತೊಳೆಯುತ್ತಿದ್ದು ಸಾಮಾನ್ಯ ದೃಶ್ಯ.

ಒಂದು ದಿನ ಗುಳುಗುಳು ಆಡುತ್ತಲೇ ನನ್ನ ಹಣವೇ ಖರ್ಚಾಗಿತ್ತು. ಆದಿನ ಬರಿ ಚುರುಮರಿ ತಿಂದು ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದೆ. ಆ ದಿನ ಮಳೆ ಬಹಳ ಸುರಿಯಿತು. ಊರ ಮುಂದಿನ ಹಳ್ಳ ತುಂಬಿ ಹರಿಯುತ್ತಿತ್ತು. ಅಂದು ರಾತ್ರಿ ಅಂಬಾರಮ್ಮನ ಗುಡಿಯಲ್ಲಿ ಮಲಗಿ ಊರಿಗೆ ಹೋದೆ. ನಮ್ಮ ತಂದೆ ಸಿಟ್ಟಿಗೆದ್ದಿದ್ದರು.

ನಮ್ಮೂರ ಶಾಲೆಯ ಮಗ್ಗಲಿಗೆ ಚಹಾದಂಗಡಿಯತ್ತು, ಜಾತ್ರೆಗೆ ಬರುವ ಮಂದಿಗೆ ಆದು ಆಶ್ರಯಸ್ಥಾನವಾಗಿತ್ತು. ಒಂದು ಬಿಲ್ಲಿಗೆ ಒಂದು ಕಾಗದ ಪುಡಿಕೆಯಲ್ಲಿ ಬಜಿಯನ್ನು ದಾರ ಸುತ್ತಿ ಕೊಡುತ್ತಿದ್ದರು, ಅದನ್ನು ತಿಂದು ನೀರು ಕುಡಿದರೆ ಮತ್ತೇನೂ ಬೇಕು ಅನಿಸುತ್ತಿರಲಿಲ್ಲ.

ವಿನಯಾ ಒಕ್ಕುಂದ: ಕಾವ್ಯ ಕಲೆಯ ಸಾಂಗತ್ಯಕ್ಕೆ ಮನಸ್ಸನ್ನು ಮಾಗಿಸುತ್ತಿದ್ದ ಆ ದಿನಗಳು ಇಂದಿನ ಮಕ್ಕಳಿಗೆ ಬೇರೆ ರೂಪದಲ್ಲಾದರೂ ಸಿಗುತ್ತಿದೆ ಅನ್ನಿಸುತ್ತಿದೆಯೇ?
ಚೆನ್ನವೀರ ಕಣವಿ: ಕಾವ್ಯ ಕಲೆಯ ಸಾಂಗತ್ಯಕ್ಕೆ ಮನಸ್ಸನ್ನು ಮಾಗಿಸುತ್ತಿದ್ದ ಆ ದಿನಗಳು ಇಂದಿನ ಮಕ್ಕಳಿಗೆ ಬೇರೆ ರೂಪದಲ್ಲಿ ಸಿಗುತ್ತಿದೆ ಎಂದು ಅನ್ನಿಸುತ್ತಿಲ್ಲ. ‘ನಲಿ- ಕಲಿ’ ರೂಪದಲ್ಲಿ ಸಿಕ್ಕರೂ ಸಿಗಬಹುದು.

ವಿನಯಾ ಒಕ್ಕುಂದ: ಸಾನೆಟ್- ನಿಮ್ಮ ಪ್ರೀತಿಯ ಅಭಿವ್ಯಕ್ತಿಯ ಪ್ರಕಾರ. ಆದರೆ ಸರ್, ವ್ಯಕ್ತಿಚಿತ್ರ ಮತ್ತು ಸಾನೆಟ್ ಎಂಬ ಸಂಕರ ಆ ರೂಪದ ವಿಶಿಷ್ಟತೆಯೇ? ಅಥವಾ ನೀವು ಅದನ್ನು ಮಿದ್ದಿ ಹದಗೊಳಿಸಿದ್ದೇ?
ಚೆನ್ನವೀರ ಕಣವಿ: ನನ್ನ ಪ್ರಥಮ ಕವನಸಂಕಲನ ಕಾವ್ಯಾಕ್ಷಿಯಲ್ಲಿ 15ಕ್ಕೂ ಹೆಚ್ಚು ಸಾನೆಟ್ ಗಳು ಬಂದಿವೆ. ಹೌದು; ಸಾನೆಟ್ ನನ್ನ ಪ್ರೀತಿಯ ಅಭಿವ್ಯಕ್ತಿ ಪ್ರಕಾರ. ವ್ಯಕ್ತಿಚಿತ್ರ ಪ್ರಕಾರ. ವ್ಯಕ್ತಿಚಿತ್ರ ಮತ್ತು ಸಾನೆಟ್ ಸಂಕರ ರೂಪವೂ ಅದರ ವೈಶಿಷ್ಟ್ಯ. ಆಮೇಲೆ ಮತ್ತೆ ಅದನ್ನು ಮಿದ್ದಿ ಹದಗೊಳಿಸಿದ್ದೂ ನಿಜ. ಭಾಷೆ ನಮ್ಮ ಬೆಂಬಲಕಿರಬೇಕು. ಭಾಷೆಯಲ್ಲಿ ಅದನ್ನು ತಿದ್ದಿ ತಿಡಬೇಕು. ಬಳ್ಳಾರಿಯ ಲೋಹಿಯಾ ಪ್ರಕಾಶನ ನನ್ನ ‘ಸುನೀತ ಸಂಪುಟ’ ವನ್ನು ಪ್ರಕಟಿಸಿದೆ. ಅದರ ಎರಡನೆಯ ಮುದ್ರಣ ಹೆಚ್ಚಿನ ಸಾನೆಟ್ ಗಳನ್ನು ಹೊಂದಿದೆ. ಶ್ರೀ ಅತ್ರಿ ‘ಗಾಯಕ’ ರವರು ಡಾ.ಜಿ.ಎಸ್. ಶಿವರುದ್ರಪ್ಪನವರ ಅಧ್ಯಕ್ಷತೆಯಲ್ಲಿ ನನಗೆ ‘ಸುನೀತ ಸಾಮ್ರಾಟ್’ ಎಂದು ಬಿರುದು ಕೊಟ್ಟುದನ್ನು ಇಲ್ಲಿ ನೆನಪಿಸಬಹುದು.

ಇದಕ್ಕೆ ಚತುರ್ದಶಿ ಪದ ಎಂದು ರಾಷ್ಟ್ರಕವಿ ಗೋವಿಂದ ಪೈಯವರು ಕರೆಯುತ್ತಿದ್ದರು. ಮಾಸ್ತಿಯವರು ಸಾನೆಟ್ ಗೆ ‘ಸುನೀತ’ ಎಂದು ಕರೆದರು. ಬೇಂದ್ರೇಯವರು ಅಷ್ಟಷಟ್ಪದಿ ಎಂದು ಕರೆದರು. ಮೊದಲ ಎಂಟು ಸಾಲುಗಳಲ್ಲಿ ಭಾವ ತುಂಬಿ ಬರುತ್ತಿತ್ತು. ಉಳಿದ ಆರು ಸಾಲುಗಳಲ್ಲಿ ವೈಚಾರಿಕತೆ ಮಿನುಗುತ್ತಿತ್ತು. ಕುವೆಂಪು ಅವರು ‘ಕೃತ್ತಿಕೆ’ ಸಂಗ್ರಹದಲ್ಲಿ ಪ್ರಾಸಗಳನ್ನು ಕಟ್ಟುನಿಟ್ಟಾಗಿ ಬಳಸುತ್ತಿದ್ದರು. ಕೊನೆಯ ಎರಡು ಸಾಲಿನಲ್ಲಿ ಸಾರವತ್ತಾದುದನ್ನು ಹೇಳುತ್ತಿದ್ದರು.

ಇವರೆಲ್ಲರ ಪ್ರಭಾವ ನನ್ನ ಮೇಲಿದೆ. ವಿನಾಯಕ ಸಾನೆಟ್ಟಿನಲ್ಲಿ ಅದೇನದಲ್ಲ ಅಂತ ಒಂದು ಶಬ್ಧ ಬರುತ್ತದೆ. ಅದು ವಿನಾಯಕರ mannerism ಆಗಿದೆ. ಅವರ ವ್ಯಕ್ತಿತ್ವದಲ್ಲಿಯ, ಅವರ ಮಾತುಗಾರಿಕೆಯಲ್ಲಿ ಈ ವಿಶಿಷ್ಟವಾದ ಮತ್ತು ಉಪಯುಕ್ತವಾದ ರೀತಿಯಲ್ಲಿ ಬಳಸಿಕೊಂಡಿದ್ದೇನೆ ಎಂದು ಅನಿಸುತ್ತದೆ. ಹಾಗೆ ಅದನ್ನು ಮಿದ್ದಿ ಹದಗೊಳಿಸಿದ್ದೇನೆ.

ಉದಾಹರಣೆಗೆ ‘ತುಂಬುದಿಂಗಳು’ ಸಾನೆಟ್ಟಿನಲ್ಲಿ ‘ಮಿಟ್ಟು ಮಿಸುಕದೆ ಇರುವ’ (ನಾನು ಅಪರಿಚಿತನೇ ?) ಎಂದು ಕಂಸಿನಲ್ಲಿ ಹಾಕಿ, ಬೇರೆ ಅರ್ಥಕ್ಕೆ ಎಡೆಗೊಡುವುದುಂಟು . ಕೊನೆಯ ಎರಡು ಸಾಲುಗಳಲ್ಲಿ...

‘ಹಸಿವೆಯಾದರೆ ಬಂದು ತಡೆಯಲು ಒಲ್ಲ’
ಇರಬಹುದು ( ಅದು ಮಾತ್ರ ನನ್ನ ಖಾತೆಯದಲ್ಲ)

ಎಂದು ವಿನೋದದಲ್ಲಿ ಬೇರೆ ಧ್ವನಿಸುವುದುಂಟು.

‘ಕಾಲಾತೀತ’ ಎನ್ನುವ ಸಾನೆಟ್ಟಿನಲ್ಲಿ ‘ಬಿಡುವಿಲ್ಲ ಅರ್ಜಂಟು’ ಎಂದು ಪ್ರಾರಂಭಿಸಿ, ಕೊನೆಯ ಸಾಲಿನಲ್ಲಿ...

‘ಅಂಥ ಮನಸ್ಸಿನಲ್ಲಿ ಶಾಂತಿ ಯಾರಿಗಿಹುದೋ ಕಾಣೆ’ ಎಂದು ಮುಕ್ತಾಯಿಸುವುದು ಒಂದು ಚಮತ್ಕಾರವೇ.

ಹಳಕಟ್ಟಿಯವರ ಸಾನೆಟ್ಟಿನಲ್ಲಿ ಕೊನೆಯ ಎರಡು ಸಾಲುಗಳು :
'ಗೋಳಗುಮ್ಮಟ ತಾನೆ ತಲೆಬಾಗಿಸಿತು ನಿಮಗೆ
ಏಳು ಸಲ ಕರೆದರೂ ಎಚ್ಚರಾಗದು ನಮಗೆ'
ಎಂದು ನಾಡಿನ ಸ್ಥಿತಿಯನ್ನು ಸೂಚಿಸುವುದುಂಟು.

ವಿನಯಾ ಒಕ್ಕುಂದ: ನೀವು ಸದಾ ಸಂವೇದನಾಶೀಲತೆಯನ್ನು ಎತ್ತರಿಸಿಕೊಳ್ಳಲು ವಿಸ್ತರಿಸಿಕೊಳ್ಳಲು ತುಡಿದವರು. ಸ್ವಾತಂತ್ರ್ಯಾನಂತರದ ಭಾರತದ ಚರಿತ್ರೆಯೊಂದಿಗಿನ ಮುಖಾಮುಖಿ ನಿಮ್ಮ ಮತ್ತು ಕವಿತೆಗಳಲ್ಲಿದೆ. ಅನುವಾದ ಕವಿತೆಗಳನ್ನಂತೂ ನಿಮ್ಮದೇ ಇನ್ನೊಂದು ದನಿಯಾಗಿಸಿದಿರಿ. ಎದ್ದಿ ಕಝಕ್ ಕವಿತೆಗಳನ್ನು, ತಮಿಳು ಕವಿತೆಗಳನ್ನು ಹೀಗೇ ಗ್ರಹಿಸಬೇಕು ಅಲ್ಲವೇ?
ಚೆನ್ನವೀರ ಕಣವಿ: ಕಝಕ್ ಕವಿತೆಗಳನ್ನು, ತಮಿಳು ಕವಿತೆಗಳನ್ನು ಹೀಗೇ ಗ್ರಹಿಸಬಹುದು.

ವಿನಯಾ ಒಕ್ಕುಂದ: ಸರ್, ನೀವು 'ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ' ಎಂದವರು. ಆದರೆ ಮೃದುಮಾತು ಎಂದರೆ ಅವಕಾಶವಾದಿ ಮಾತಲ್ಲ ಎಂದು ಬಾಳಿದಿರಿ. ಈ ಮೃದುವಚನದಲ್ಲೂ ಹಕ್ಕೊತ್ತಾಯದ ತಾಕತ್ತಿದೆ ಎಂದು ಕಾಣಿಸಿದಿರಿ. ಈ ನೆಲದ ಸೌಹಾರ್ದ ಪರಂಪರೆಗೆ, ಬಹುತ್ವಕ್ಕೆ ಧಕ್ಕೆ ಒದಗಿದಾಗಲೆಲ್ಲ ಜನಚಳುವಳಿಯೊಂದಿಗೆ ನಿಂತಿದ್ದೀರಿ. ಅತ್ಯಾಚಾರ ವಿರೋಧಿ ಹೋರಾಟ, ಕನ್ನಡ ಪರ ನಿಲುವು, ಎನ್.ಆರ್.ಸಿ. ವಿರೋಧದ ಗಟ್ಟಿ ಧ್ವನಿ ನಿಮ್ಮದಾಗಿತ್ತು ಸರ್, ಚರಿತ್ರೆ ಅಲಕ್ಷಿಸಬಾರದ ಸಂಗತಿಗಳಿವು. ಸರ್, ಕವಿ ಕಲಾವಿದರು ಸಾಂಸ್ಕೃತಿಕ ವಿಮರ್ಶಕರಾಗಿರಬೇಕು - ಸಾಮಾಜಿಕ ಆರೋಗ್ಯದ ಚಿಂತಕರಾಗಿರಬೇಕು – ಎಂಬುದಕ್ಕೆ ನಿಮ್ಮ ಅಭಿಪ್ರಾಯ ಏನು?
ಚೆನ್ನವೀರ ಕಣವಿ: 'ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ' 'ಮೃದು ಮಾತು' ಎಂದರೆ ಖಂಡಿತ ಅವಕಾಶವಾದಿಯಲ್ಲ. 'ಮೃದು ವಚನದಲ್ಲೂ ಹಕ್ಕೊತ್ತಾಯದ ತಾಕತ್ತಿದೆ' ಎಂದು ನೀವು ಕಾಣಿಸಿದ್ದು ಅದನ್ನು ಚೆನ್ನಾಗಿ ಗ್ರಹಿಸಿದ್ದೀರಿ ಎನ್ನುವುದಕ್ಕೆ ಸಾಕ್ಷಿ.

ಕವಿ-ಕಲಾವಿದರು ಸಾಂಸ್ಕೃತಿಕ ವಿಮರ್ಶಕರಾಗಿರಬೇಕು. ಸಾಮಾಜಿಕ ಆರೋಗ್ಯದ ಚಿಂತಕರಾಗಿರಬೇಕು. ಅದಕ್ಕೆ ನನ್ನ ಒಪ್ಪಿಗೆಯಿದೆ. ಚರಿತ್ರೆಯನ್ನು ಯಾವತ್ತೂ ಅಲಕ್ಷಿಸಬಾರದು. ಪ್ರತಿಯೊಬ್ಬ ಸಮಕಾಲೀನ ಮಹತ್ವದ ಕವಿ 'ರಾಷ್ಟ್ರಕವಿ' ಪದವಿಗೇರಬೇಕು, ಹಾಗಾದರೆ ಎಲ್ಲವೂ ಚೆನ್ನ.

ವಿನಯಾ ಒಕ್ಕುಂದ: ಯಾವ ಸಂದರ್ಭ ಅಂತ ಸರಿಯಾಗಿ ನೆನಪಿಲ್ಲ. ಮಹಿಳಾ ಚರಿತ್ರೆಯ ಬಗ್ಗೆ ಮಾತನಾಡುತ್ತ, ಕಿತ್ತೂರ ಚೆನ್ನಮ್ಮನ ಕುದುರೆ ಸವಾರಿ, ಯುದ್ಧ, ಕತ್ತಿವರಸೆ ಬಗ್ಗೆ ಅನುಮಾನಿಸಿದ್ದ ಷ. ಶೆಟ್ಟರ್ ಅವರ ಬರವಣಿಗೆ: ಸರ್ಕಾರ ನೇಮಿಸಿದ ಕಮಿಟಿ, ಕಿತ್ತೂರಿನ ಮನೆಯಲ್ಲಿ ಮುದುಕಿಯೊಬ್ಬರು ಆಡಿದ ಮಾತುಗಳ ಬಗ್ಗೆ ಹೇಳಿದ್ದಿರಿ. ಆ ಮಾತು ನನ್ನೊಳಗೆ ಹೊಕ್ಕಿ ಕುಳಿತಿದೆ. ನೀವದನ್ನು ಎಲ್ಲೂ ದಾಖಲಿಸಿದಂತಿಲ್ಲ. ಆ ಬಗ್ಗೆ ಹೇಳ್ತೀರಾ ಸರ್?
ಚೆನ್ನವೀರ ಕಣವಿ: ಆಗ ಕುಲಪತಿಯಾಗಿದ್ದವರು ಡಾ.ಆರ್.ಸಿ. ಹಿರೇಮಠ. ಕಿತ್ತೂರ ಚೆನ್ನಮ್ಮನ ಕುದುರೆ ಸವಾರಿ, ಯುದ್ಧ, ಕತ್ತಿವರಸೆ ಬಗ್ಗೆ ಅನುಮಾನಿಸಿದವರು ಡಾ. ಷ. ಶೆಟ್ಟರವರು. ಅದಕ್ಕೊಂದು ಸಮಿತಿಯನ್ನು ವಿಶ್ವವಿದ್ಯಾಲಯ ನೇಮಿಸಿತು. ಅದು ತನ್ನ ಅಭಿಪ್ರಾಯವನ್ನು ನೇರವಾಗಿ ವಿಶ್ವವಿದ್ಯಾಲಯಕ್ಕೆ ತಿಳಿಸಲಿಲ್ಲ. ಅದು ಅಲ್ಲಿಗೆ ಮುಚ್ಚಿಹೋಯಿತು.

ವಿನಯಾ ಒಕ್ಕುಂದ: ಸರ್, ನವೋದಯ ಸಾಹಿತ್ಯ ಕನಸಿದ ದಾಂಪತ್ಯ ಧರ್ಮವನ್ನು ಬಾಳಿದವರು ನೀವು. ಈಗ... ಶಾಂತಾದೇವಿಯವರ ಜೊತೆಯಿಲ್ಲ. ಈ ಸಂಕಟದ ಬಗ್ಗೆ ಹೇಳುತ್ತೀರಾ ಸರ್? ಯಾಕೆಂದರೆ, ನಮಗೆ ಭ್ರಮೆಗಳಿವೆ. ನೋವು-ವಿಷಾದ ಹೆಣ್ಣನ್ನು ಗಾಢವಾಗಿ ಕಲಕುತ್ತದೆ. ಒಂದು ವಯೋಮಾನವನ್ನು ತಾಕುತ್ತದೆ. ವ್ಯಕ್ತಿ ದೊಡ್ಡವನಾದಷ್ಟೂ ನೋವು ಸಣ್ಣದಾಗುತ್ತದಾ?... ನಿಮ್ಮ ನೋವನ್ನು ಕೆದಕಲು ಅಲ್ಲ ಸರ್, ಈ ಪ್ರಪಂಚದಲ್ಲಿ ಒಬ್ಬರಲ್ಲ ಒಬ್ಬರು ಎದುರಿಸಲೇಬೇಕಾದ ವಿಷಾದಯೋಗವಲ್ಲವೇ, ಅದಕ್ಕೆ...
ಚೆನ್ನವೀರ ಕಣವಿ: ಒಟ್ಟು ಎಲ್ಲವನ್ನೂ ನೆನಸಿದರೆ ಬಹಳ ಸಂಕಟವಾಗುತ್ತದೆ. ವೈಚಾರಿಕತೆಗೆ ಎಲ್ಲೂ ನೆಲೆಯಿಲ್ಲವೆನಿಸುತ್ತದೆ. ಹೌದು; ನವೋದಯ ಸಾಹಿತ್ಯ ಕನಸಿದ ದಾಂಪತ್ಯ ಧರ್ಮವನ್ನು ಬಾಳಿದವರು ನಾವು.

'ರಸವೆ ಜನನ, ವಿರಸ ಮರಣ
ಸಮರಸವೇ ಜೀವನ'

ಅಂದು ಬದುಕನ್ನು ನಡೆಸಿದವರು ನಾವು, ವ್ಯಕ್ತಿ ದೊಡ್ಡವನಾದಷ್ಟೂ ನೋವು ಸಣ್ಣದಾಗುವುದಿಲ್ಲ. ಹೆಂಡತಿ ಆತ್ಮಸಂಗಾತಿ ಎಂದು ಭಾವಿಸಿದವಗೆ ಹೊಂಡುವ ವಿಷಾದಯೋಗವಿದು.

ವಿನಯಾ ಒಕ್ಕುಂದ: ಶಾಂತಾದೇವಿ ಕಣವಿಯವರ ಯಾವ ಗುಣ, ನಿಮ್ಮ ದೃಷ್ಟಿಯಲ್ಲಿ ತುಂಬ ದೊಡ್ಡದು ಸರ್? ಅವರೆಂದೂ ಹೇಳಿಕೊಂಡವರಲ್ಲ. ಅವರ ಬಗ್ಗೆ ಹೇಳುವ ಸಂದರ್ಭವೂ ಕಡಿಮೆಯೇ ಇತ್ತು. [ಅಮೃತಾ ಪ್ರೀತಂ ಸಂಗಾತಿ ಇಮ್ರೋಜ್ ಅವರಿಗೆ ಒಮ್ಮೆ, ಎಲ್ಲ ಹುಡುಗಿಯರಿಗೂ ನಿಮ್ಮಂತ ಸಂಗಾತಿ ದೊರೆತಿದ್ದರೆ... ಎಂದು ಕೇಳಿದರಂತೆ. ಅದಕ್ಕೆ ಇಮ್ರೋಜ್ 'ಎಲ್ಲ ಹುಡುಗಿಯರೂ ಅಮೃತಾ ಅಲ್ಲ' ಎಂದು ಉತ್ತರಿಸಿದರಂತೆ, ಅಮೃತಾ ಇಲ್ಲದ ದಿನಗಳ ಮಾತುಕತೆ ಇದಾಗಿತ್ತು] ಈ ನೆನಪಿನಿಂದ ಕೇಳಿದೆ.
ಚೆನ್ನವೀರ ಕಣವಿ: ಶಾಂತಾದೇವಿ ಕಣವಿಯವರ ತಾಳ್ಮೆ ಬಹಳ ದೊಡ್ಡದು. ಅಷ್ಟಿಷ್ಟಕ್ಕೇ ಅವರು ಮಣಿಯುತ್ತಿರಲಿಲ್ಲ. ಮಕ್ಕಳೆಲ್ಲರನ್ನೂ ಅಚ್ಚುಕಟ್ಟಾಗಿ, ಶಿಸ್ತಿನಿಂದ ಬೆಳೆಸಿದರು. ಎಲ್ಲರೂ ಅವರವರ ವ್ಯಕ್ತಿತ್ವಕ್ಕೆ ತಕ್ಕಂತೆ ಚೆನ್ನಾಗಿಯೇ ಬಾಳಿದ್ದಾರೆ.

ದೊಡ್ಡ ಮಗ ಶಿವಾನಂದನ ಅಂತರ್ ಜಾತಿಯ ಮದುವೆಗೆ ಎಂದೂ ಅಡ್ಡಬರಲಿಲ್ಲ. ಸ್ವತಃ ತಮ್ಮ ಅಳಿಯ ಆನಂದ (ಅಂದು) ಅಂತರ್ ಜಾತಿಯ ಮದುವೆ ಮಾಡಿಕೊಂಡ. ಅವರ ತಮ್ಮ ಲಿಂಗರಾಜ ಅಂದೂನ ತಂಗಿಯನ್ನೇ, ಕಿನ್ನರಿಯನ್ನು ಮದುವೆಯಾದ. ಅವರ ಮಗಳಂತೂ ಅಂತರ್‌ ದೇಶಿಯ ಮದುವೆಯಾಗಿ ಈಗ ಸುಖವಾಗಿದ್ದಾರೆ. ಇವೆಲ್ಲವನ್ನು ಶಾಂತಾ ಒಮ್ಮೆಯೂ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಅಂತಹ ಸಹನೆ, ಔದಾರ್ಯ ಅವಳದು.

ವಿನಯಾ ಒಕ್ಕುಂದ: ಧಾರವಾಡದ ನಂಟು- ನಿಮ್ಮ ಅಂತಃಸತ್ವ, ಧಾರವಾಡದ ಬಹುತ್ವವನ್ನು ಒಪ್ಪಿ-ಅಪ್ಪಿ ನಡೆದವರು ನೀವು, ಈ ಬಗ್ಗೆ ಏನಾದರೂ..
ಚೆನ್ನವೀರ ಕಣವಿ: ನಾನು ಧಾರವಾಡಕ್ಕೆ ಬಂದದ್ದು 1941ನೇ ಇಸವಿ. ಈಗಾಗಲೇ 80 ವರ್ಷ ಸಮೀಪಿಸಿತು. ಗರಗದಿಂದ ಮುಲ್ಕಿ ಪರೀಕ್ಷೆ ಪಾಸಾಗಿ ಬಂದವನಿಗೆ ಮುರುಘಾಮಠದಲ್ಲಿ ಸಹಜವಾಗಿಯೇ ಪ್ರವೇಶ ಸಿಕ್ಕಿತು, ಆರ್.ಎಲ್.ಎಸ್. ಹಾಯ್ ಸ್ಕೂಲಿಗೆ ಸೇರಿದೆ. ಹೆಡ್‌ಮಾಸ್ತರ್‌ ವೀ.ರು. ಕೊಪ್ಪಳ ಅವರು ನನಗೆ ಬಹಳ ಪ್ರೋತ್ಸಾಹಿಸಿದರು. ಸಾಹಿತ್ಯದಲ್ಲಿ ಅಭಿರುಚಿ ಹುಟ್ಟಿಸಿದರು. ಅವರು ಸ್ವತಃ ಲೇಖಕರಾಗಿದ್ದರು. ನಮ್ಮ ಕಾಲಕ್ಕೇ ಹಾಯ್‌ಸ್ಕೂಲ್ 'ಮಿಸಲೆನಿ' ಬಂತು. ಅದರಲ್ಲಿ ನನ್ನ ಕವನಗಳು, ನಗೆಬರಹಗಳು ಪ್ರಕಟವಾದವು. ಪ್ರತಿವರ್ಷ ನನ್ನ ಕವಿತೆಗಳು ಇದ್ದೇ ಇರುತ್ತಿದ್ದವು.

ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘ ಬಹಳ ಪ್ರೋತ್ಸಾಹ ನೀಡಿದವು. ಬೇಂದ್ರೆಯವರ ಸಾರ್ವಜನಿಕ ಭಾಷಣವನ್ನು ನಾನು ಮೊದಲು ವಿದ್ಯಾವರ್ಧಕ ಸಂಘದಲ್ಲಿಯೇ ಕೇಳಿದ್ದು. ಆಗ ಪ್ರತಿಯೊಂದು ಸಭೆಯಲ್ಲಿ ಕಾವ್ಯಗಾಯನ (ಈಗಿನ ಸುಗಮ ಸಂಗೀತ) ಇರುತ್ತಿತ್ತು. ಬೇಂದ್ರೆಯವರು ತಮ್ಮದೇ ಆದ ಧಾಟಿಯಲ್ಲಿ 'ಪಾತರಗಿತ್ತಿ ಪಕ್ಕಾ', 'ಶ್ರಾವಣಾ' ಪದ್ಯಗಳನ್ನು ಹಾಡುತ್ತಿದ್ದರು.

ಹೀಗೆ ಧಾರವಾಡದ ನಂಟು, ಅಂತಃಸತ್ವ, ಧಾರವಾಡದ ಬಹತ್ವ ನನ್ನನ್ನು ಬಹಳ ಪ್ರಭಾವಿಸಿತು. ಮುಂದೆ ನನ್ನ ಏಳನೆಯ ಸಂಕಲನ 'ನೆಲಮುಗಿಲು' ಸಂಕಲನಕ್ಕೆ ಬೇಂದ್ರೆಯವರಿಂದಲೇ ಮುನ್ನುಡಿ ಬರೆಸಿದೆನು. ಅದರಲ್ಲಿ ಧಾರವಾಡ ತತ್ವಕ್ಕೆ ಒತ್ತು ಹಾಕಿ ಬರೆದರು.

ಮುರುಘಾಮಠದಲ್ಲಿ ಮೊಟ್ಟ ಮೊದಲಿನ ಬಾರಿ ಪಂ.ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು ಅವರ ವಚನ ಸಂಗೀತವನ್ನು ಕೇಳಿ ಸಂತೋಷಪಟ್ಟವನು. ಇದರಿಂದ ವಚನಸಾಹಿತ್ಯದ ಬಗ್ಗೆ ಒಲವು ಬಲಿಯಲು ಕಾರಣವಾಯಿತು.

ವಿನಯಾ ಒಕ್ಕುಂದ: ಇಂದಿನ ಸಾಹಿತ್ಯಕ, ಸಾಂಸ್ಕೃತಿಕ ಸ್ಥಿತಿ-ಗತಿಯ ಬಗ್ಗೆ... ಹೇಳುತ್ತೀರಾ?
ಚೆನ್ನವೀರ ಕಣವಿ: ಇಂದಿನ ಸಾಹಿತ್ಯಕ-ಸಾಂಸ್ಕೃತಿಕ ಸ್ಥಿತಿ-ಗತಿಯ ಬಗ್ಗೆ ಹೇಳಬೇಕೆಂದರೆ, ಇಂದು ಪತ್ರಿಕೆಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲವೂ ಸಾಹಿತ್ಯಕ ಪತ್ರಿಕೆಗಳಲ್ಲ. ರಾಜಕೀಯವೂ ಅದರಲ್ಲಿ ಸೇರಿರುತ್ತದೆ.

ಇಂದಿನ ಯುವಕರಿಗೆ ಬೇಗ ಪ್ರಸಿದ್ದಿಗೆ ಬರುವ ಆತುರ ಹೆಚ್ಚಾಗಿದೆ. ಸರಿಯಾದ ಅಧ್ಯಯನ ಮಾಡುತ್ತಿಲ್ಲ. ಸಂಶೋಧನೆಯಂತೂ ನಿಲುಕದ್ದು, ಪದ್ಯ-ಗದ್ಯ ಬರೆಯುತ್ತಿದ್ದಾರೆ. ಪ್ರಾಸ, ಲಯದ ಮಾತನ್ನು ಹೇಳಬೇಕಿಲ್ಲ. ಛಂದಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಎಲ್ಲ ವಿಚಾರ ಸಂಕಿರಣಗಳಿಗೆ ಪ್ರಬಂಧ ಮಂಡಿಸುವ ಆತುರ.

ಶುದ್ಧವಾಗಿ ಕನ್ನಡವನ್ನು ಬರೆಯಲಿಕ್ಕೂ ಬರುವುದಿಲ್ಲ. ಬೆಂಗಳೂರಿನ 'ಕಂಗ್ಲಿಷ್ ಹೆಚ್ಚಾಗಿದೆ.

ಆದರೂ ಜೀವನ ನಡೆಸುವುದಕ್ಕೆ ತೊಂದರೆಯಿಲ್ಲ. ಹೇಗೂ ಜೀವನ ಸಾಗುತ್ತದೆ. 'ಆಡಾಡ್ತ ಆಯುಷ್ಯ ನೋಡ್ ನೋಡ್ತ ದಿನಮಾನ ನಡದsದ, ನಡದsದ..

(ಸಂದರ್ಶಕರು : ವಿನಯಾ ಒಕ್ಕುಂದ, ಕೃಪೆ : ಹೊಸ ಮನುಷ್ಯ, 2022 ಫೆಬ್ರುವರಿ)

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...