ಹಲವು ಪುರಾಣ ಸ್ತ್ರೀಪಾತ್ರಗಳ ಮನೋಲೋಕ ಅನಾವರಣಗೊಂಡಿದೆ


"ಸ್ತ್ರೀವಾದಿ ಚಿಂತನೆಯು ಕೇವಲ ಸ್ತ್ರೀ ಕುರಿತು, ಸ್ತ್ರೀ ಪರವಾಗಿ ಮಾತ್ರ ಕಾಳಜಿ ವಹಿಸುವುದಿಲ್ಲ; ಅದು ಒಟ್ಟು ಮನುಕುಲದ ಕುರಿತು, ಸಮಾನತೆಯ ಕುರಿತು ಕಾಳಜಿ ಹೊಂದಿದೆ. ಈ ತಾತ್ವಿಕತೆಯು 'ಭರತಕಲ್ಪ'ದಲ್ಲಿ ತುಂಬ ಸಮರ್ಥ ವಾಗಿ ಒಡಮೂಡಿದೆ," ಎನ್ನುತ್ತಾರೆ ಆರ್. ಸುನಂದಮ್ಮ. ಅವರು ತಮ್ಮಭರತಕಲ್ಪ’ ಕೃತಿಯಲ್ಲಿ ಬರೆದ ಮಾತುಗಳಿವು.

'ಮಹಿಳೆಯರಿಗೆ ಮಹಿಳೆಯರದ್ದೇ ಆದ ಪುರಾಣಗಳಿಲ್ಲ. ಪುರುಷರು ನಿರ್ಮಿಸಿದ ಪುರಾಣಗಳಲ್ಲಿ ಮಹಿಳೆಯರು ಪುರುಷರ ಮೂಗಿನ ನೇರಕ್ಕೆ ರೂಪಿತರಾದವರಂತೆ ಕಂಡುಬರುತ್ತಾರೆ. ಅವರದೇ ಆದ ಸಂವೇದನೆಗಳಿರುವ, ಸ್ವತಂತ್ರ ಅಸ್ತಿತ್ವ ಇರುವ, ಮಹಿಳಾ ಪಾತ್ರಗಳು ಮತ್ತು ಅವರ ದೃಷ್ಟಿಕೋನಗಳು ಪುರುಷ ನಿರ್ಮಿತ ಪುರಾಣಗಳಲ್ಲಿ ಕಾಣೆಯಾಗಿವೆ' ಎಂಬುದಾಗಿ ಸಿಮನ್ ದಿ ಬುವಾ ಹೇಳಿದ್ದಾರೆ. ಕನ್ನಡ ಮಾತ್ರವಲ್ಲ ಯಾವುದೇ ಭಾಷೆಯ ಸಾಹಿತ್ಯವನ್ನು ಅಭ್ಯಾಸ ಮಾಡುವ ಸ್ತ್ರೀವಾದಿ ಚಿಂತಕರಿಗೆ ಬುವಾರ ಮಾತು ಅಕ್ಷರಶಃ ನಿಜ ಎಂಬುದು ತಟ್ಟನೆ ಮನವರಿಕೆಯಾಗುತ್ತದೆ. ಇಂತಿರುವ ಪುರಾಣಗಳ ಕುರಿತು ಲೇಖಕಿಯರು ಏನನ್ನು ಹೇಳಿದ್ದಾರೆ ಎಂಬುದನ್ನು ಗಮನಿಸಿದರೆ, ಕನ್ನಡದ ಹಿರಿಯ ಲೇಖಕಿಯಾದ ಆರ್ ಕಲ್ಯಾಣಮ್ಮ ಅವರಿಂದ ತೊಡಗಿ, ಎಚ್. ವಿ. ಸಾವಿತ್ರಮ್ಮ, ನಳಿನಾ ಮೂರ್ತಿ, ಅನುಪಮಾ ನಿರಂಜನ, ವೈದೇಹಿ, ಎಂ. ಎಸ್.ವೇದಾ, ಎಸ್. ವಿ. ಪ್ರಭಾವತಿ ಮುಂತಾದ ಹಲವರು ಪುರಾಣ ಜಗತ್ತನ್ನು ಪರಿಶೀಲಿಸುವ, ವಿಶ್ಲೇಷಿಸುವ, ಪುನರ್ ಕಟ್ಟುವ ಕೆಲಸಗಳನ್ನು ತಮ್ಮ ಕಥೆ, ಕಾದಂಬರಿಗಳಲ್ಲಿ ಮಾಡಿದ್ದಾರೆ.

ಇದರ ಫಲವಾಗಿ ಮಾಧವಿ, ಸೀತೆ, ಊರ್ಮಿಳೆ, ಕೌಸಲ್ಯ, ದೌಪದಿ, ಕುಂತಿ, ಅಹಲೈ, ಶಕುಂತಲಾ, ಅಂಬೆ ಮುಂತಾದ ಹಲವು ಪುರಾಣ ಸ್ತ್ರೀಪಾತ್ರಗಳ ಮನೋಲೋಕ ಅನಾವರಣಗೊಂಡಿದೆ. ನವೋದಯದಲ್ಲಿ ಮಾನವತಾವಾದಿ ನೆಲೆಯಿಂದ ಪುರಾಣದ ಸ್ತ್ರೀಪಾತ್ರಗಳನ್ನು ಮರುಚಿತ್ರಿಸಿದ ಲೇಖಕರ ಕೃತಿಗಳಲ್ಲಿ ಈ ಪುರಾಣದ ಮಹಿಳೆಯರು ಉದಾತ್ತೀಕರಣಕ್ಕೆ ಒಳಗಾಗಿದ್ದಾರೆ; ಅಂಚಿನಿಂದ ಕೃತಿಯ ಕೇಂದ್ರದಲ್ಲಿ ಕಾಣಿಸುವಷ್ಟು ಪ್ರಖರವಾಗಿ ಒಡಮೂಡಿದ್ದಾರೆ. ಆದರೆ ಅವರೊಳಗೂ ಪುರುಷ ಪ್ರಧಾನ ಸಮಾಜದ ಸಿದ್ಧ ನಿಲುವುಗಳು, ನಂಬಿಕೆಗಳು, ದೃಷ್ಟಿಕೋನಗಳು ಸ್ತ್ರೀಪಾತ್ರಗಳ ಇರುವಿಕೆ, ಚಿಂತನೆ ಮತ್ತು ವ್ಯಕ್ತಿತ್ವವನ್ನು ರೂಪಿಸಿರುವುದನ್ನು ಮರೆಯುವಂತಿಲ್ಲ. ಆದರೆ ಮಹಿಳಾ ಲೋಕದೃಷ್ಟಿಯು ಪುರುಷರ ಲೋಕದೃಷ್ಟಿಗಿಂತ ಎಲ್ಲಿ, ಹೇಗೆ ಮತ್ತು ಯಾವ ನೆಲೆಗಳಲ್ಲಿ ಭಿನ್ನವೂ ಅನನ್ಯವೂ ಆಗಿವೆ ಎಂಬುದನ್ನು ಲೇಖಕಿಯರು ತಮ್ಮ ಕೃತಿಗಳಲ್ಲಿ ಅಭಿವ್ಯಕ್ತಿಸಿದ್ದಾರೆ.

ಪ್ರಸ್ತುತ ಪ್ರೊ. ಆರ್. ಸುನಂದಮ್ಮ ಅವರು ಈ ಲೇಖಕಿಯರ ಹಾದಿಯಲ್ಲಿ ಸಾಗಿದರೂ ಅವರಿಗಿಂತ ಭಿನ್ನವಾದ ವಸ್ತುವಿಷಯವನ್ನು 'ಭರತಕಲ್ಪ'ದಲ್ಲಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾದಂಬರಿಯು ಒಟ್ಟು ರಾಮಾಯಣದಲ್ಲಿ ಅಂಚಿನಲ್ಲೇ ಉಳಿದ ಭರತನನ್ನು ಕೇಂದ್ರಕ್ಕೆ ತಂದುನಿಲ್ಲಿಸಿದ ಕಾರಣಕ್ಕೆ ಮಾತ್ರ ಮುಖ್ಯವಾಗಿರುವುದಿಲ್ಲ. ಹದಿನಾಲ್ಕು ವರ್ಷಗಳ ಕಾಲ ಅಣ್ಣನ ಹೆಸರಿನಲ್ಲಿ ಆಳ್ವಿಕೆ ಮಾಡಿದ, ಆಳ್ವಿಕೆ ಮಾಡಬೇಕಾಗಿ ಬಂದ ಭರತನ ಸಂವೇದನೆಗಳಾಗಲಿ, ಕರ್ತೃತ್ವ ಶಕ್ತಿಯಾಗಲಿ, ಆತ ಎದುರಿಸಿರಬಹುದಾದ ಇಕ್ಕಟ್ಟು-ಬಿಕ್ಕಟ್ಟುಗಳಾಗಲಿ, ಅವನ ಸಾಧನೆಗಳಾಗಲಿ ಯಾರಿಗೂ-ಕವಿಗೂ ರಾಮಭಕ್ತರಿಗೂ ಸಹೃದಯ ಓದುಗರಿಗೂ-ಇದುವರೆಗೆ ಗಮನಿಸಬೇಕಾದ ಸಂಗತಿ ಎನಿಸಿರಲಿಲ್ಲ ಎಂಬುದನ್ನು ತಿಳಿಸಿದ ಕಾರಣಕ್ಕೂ ಈ ಕಾದಂಬರಿ ಮುಖ್ಯವಾಗುತ್ತದೆ. ರಾಮನ ಅಯನ(ಣ)ವೇ ಮುಖ್ಯವಾಗಿ, ಅವನ ಸಾಧನೆ, ಸುಖ-ದುಃಖ, ಬದುಕಿನ ಏರಿಳಿತಗಳ ವಿವರಗಳೇ ರಾಮಾಯಣವನ್ನು ಆವರಿಸಿವೆ. ಇದರಿಂದ ಭರತನು ಅಣ್ಣನ ಆಜ್ಞಾಪಾಲಕನಾಗಿ ರಾಮನ ಪಾದುಕೆಯನ್ನು ಸಿಂಹಾಸನದಲ್ಲಿಟ್ಟು ರಾಜ್ಯಭಾರ ಮಾಡಿ, ಹದಿನಾಲ್ಕು ವರ್ಷಗಳ ಬಳಿಕ ಅಣ್ಣನಿಗೆ ಮರಳಿ ರಾಜ್ಯವನ್ನು ಒಪ್ಪಿಸಿದ ಎಂಬ ಸರಳ ರೇಖಾತ್ಮಕ ಚಿತ್ರ ಮಾತ್ರ ಎಲ್ಲರಿಗೂ ಸುಪರಿಚಿತವಾಗಿರುವುದು. ಇಂಥ ಹದಿನಾಲ್ಕು ವರ್ಷಗಳ ಕಾಲ ಭರತ ಕಳೆದ ಬದುಕು, ಅವನ ಸಂವೇದನೆಗಳು ಪುರಾಣದ ಇತರ ಸ್ತ್ರೀಪಾತ್ರ ಗಳಂತೆ ಮೌನದ ಚಿಪ್ಪಿನಲ್ಲಿ ಅಡಗಿ ಕುಳಿತುಬಿಟ್ಟಿದ್ದವು. ಅಂಥ ಕತ್ತಲಲೋಕಕ್ಕೆ ಸ್ತ್ರೀವಾದಿ ನೋಟವೆಂಬ ಬೆಳಕನ್ನು ಹರಿಯಬಿಟ್ಟ ಲೇಖಕಿಯು ಓದುಗರಿಗೆ ತೋರಿಸಿದ್ದು ಪಳಪಳ ಹೊಳೆವ ಮುತ್ತುಗಳನ್ನು!

ಇಲ್ಲಿಯ ಭರತ ಸಂದರ್ಭದ ಬಲಿಪಶು. ಅನಿರೀಕ್ಷಿತವಾಗಿ ಎದುರಾದ ದುರ್ಬರ ಸನ್ನಿವೇಶವನ್ನು ಮತ್ತು ಎಲ್ಲರ ಕಣ್ಣಲ್ಲಿ ದಿಢೀರನೆ ಖಳನಾಯಕನಾಗಿ ರೂಪುಗೊಂಡ ತನ್ನ ಸನ್ನಿವೇಶವನ್ನು ಧೃತಿಯಿಂದ ನಿಭಾಯಿಸಿದ್ದಲ್ಲದೆ, ಎಲ್ಲರಿಗೂ ತನ್ನ ಯೋಜಿತ ಕೆಲಸ ಮತ್ತು ಗುರಿಯಿಂದ ಉತ್ತರ ನೀಡಿರುವುದು ಕೃತಿಯ ವಿಶೇಷತೆ. ಆತನ ಸಮಯಪ್ರಜ್ಞೆ, ಸಹನಶೀಲತೆ ಮುಂತಾದ ಗುಣಗಳು ಅವನು ಪುಟಕ್ಕಿಟ್ಟ ಚಿನ್ನದಂತೆ ಬೆಳಗುವುದಕ್ಕೆ ಕಾರಣವಾಗಿವೆ. ಕಾದಂಬರಿಯಲ್ಲಿ ಭರತ ಕೇಂದ್ರದಲ್ಲಿ ಇದ್ದುಕೊಂಡೇ ಇತರ ಹಲವು ಪಾತ್ರಗಳ ಜೀವಂತಿಕೆಗೆ, ಸೃಜನಶೀಲತೆಗೆ, ಬದುಕಿನ ವಿಸ್ತಾರಕ್ಕೆ ಚಿಮ್ಮುಹಲಗೆಯಾಗಿ ನಿಂತಿರುವುದು ಮಹತ್ವದ ಸಂಗತಿಯಾಗಿದೆ. ತನ್ನ ಸುತ್ತಲೂ ಸಂಶಯ, ಅನುಮಾನ, ಅಪನಂಬಿಕೆ ಮತ್ತು ತಿರಸ್ಕಾರದ ಕಣ್ಣುಗಳನ್ನು ಕಂಡೂ, ಅಂತ ಕಣ್ಣುಗಳಲ್ಲಿ ಬೆಳೆದಿದ್ದ ಪೊರೆಯನ್ನು ವೈದ್ಯನಂತೆ ಕಿತ್ತೊಗೆಯುವಲ್ಲಿ ಭರತನ ಪರಿಶ್ರಮದ ಅಗಾಧತೆಯು ಕಾದಂಬರಿಯ ಮುಖ್ಯ ತಿರುಳಾಗಿದೆ.

ಕಾದಂಬರಿಯಲ್ಲಿ ಭರತನದು ಅನನ್ಯ ವ್ಯಕ್ತಿತ್ವ. ಆತ ಏಕಕಾಲಕ್ಕೆ ಸ್ತ್ರೀ ಮತ್ತು ಪುರುಷ ಇಬ್ಬರ ಲೋಕದೊಳಗೂ ಸಲೀಸಾಗಿ ಸಂವಹನ ಮಾಡಬಲ್ಲ ಕುಶಲಿ (ಶಿವರಾಮ ಕಾರಂತರ ಸರಸಮ್ಮನ ಸಮಾಧಿ ಕಾದಂಬರಿಯ ಚಂದ್ರಪ್ಪನಂತಹ ವ್ಯಕ್ತಿತ್ವ). ಈ ಎರಡೂ ಲೋಕಗಳು ಪರಸ್ಪರ ಹತ್ತಿರದಲ್ಲೇ ಬದುಕಿದ್ದರೂ ಒಂದು ಇನ್ನೊಂದಕ್ಕೆ ಅನ್ಯವಾಗಿ ಉಳಿದಿರುವುದು ಜೀವನದ ಚೋದ್ಯ. ಹೀಗೆ ಸಮಾನಾಂತರವಾಗಿ ಆದರೆ ಸ್ವಾಯತ್ತವಾಗಿ ಉಳಿದ ಈ ಲೋಕಗಳೊಳಗೆ ಸಲೀಸಾಗಿ ಪ್ರವೇಶಿಸಲು ಯಾರಿಗೇ ಆಗಲಿ ವಿಶಿಷ್ಟವಾದ ಕೌಶಲ್ಯವು ಅಗತ್ಯ. ಅದು ಭರತನಿಗೆ ದಕ್ಕಿದ್ದು ಕೂಡ ತುಂಬಾ ಸಾಂಕೇತಿಕವಾಗಿ, ಆದರೆ ಸಹಜವಾಗಿ! ಅಜ್ಜಿಯ ಮನೆಯ ಹೆಣ್ಣಾಳಿಕೆಯನ್ನು ಎಳವೆಯಿಂದಲೇ ಕಂಡ ಭರತನು ಬೆಳೆದಂತೆ ತಂದೆ ಮನೆಯ ಗಂಡಾಳಿಕೆಯನ್ನೂ ಎದುರುಗೊಂಡ. ಎರಡರ ಅನುಕೂಲ-ಅನನುಕೂಲ, ಸಾಧನೆ-ಸಾಧ್ಯತೆ, ಸಾರ್ಥಕತೆ-ನಿರರ್ಥಕತೆಗಳು ಭರತನಿಗೆ ಅಂಗೈನೆಲ್ಲಿಯಂತೆ ದೃಗ್ಗೋಚರ. ಆದುದರಿಂದಲೇ ಆತನಿಗೆ ಮಾಂಡವಿ, ಶ್ರುತಕೀರ್ತಿ, ಊರ್ಮಿಳೆ, ಕೌಸಲ್ಯ, ಸುಮಿತ್ರೆ ಮತ್ತು ತಾಯಿ ಕೈಕೆಯೊಂದಿಗೆ ಸಂವಹನ ಸಾಧ್ಯವಾದಂತೆ ವಸಿಷ್ಠ, ಜಾಬಾಲಿ ಮುಂತಾದ ಮುನಿಗಳು, ಮಂತ್ರಿಗಳು, ಸೈನಿಕರು, ಪ್ರಜೆಗಳು ಹೀಗೆ ಎಲ್ಲರೊಡನೆಯೂ ಸಂವಹನ ಸಾಧ್ಯವಾಗಿದೆ; ಅವರೆಲ್ಲರ ಕನಸು-ಚಿಂತನೆ-ಲೋಕಗ್ರಹಿಕೆಗಳ ವಿನ್ಯಾಸ ಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಿದೆ. ಕೈಕೆಗೆ ಇದು ಸಾಧ್ಯವಾಗದೇ ಇದ್ದುದೆ ಅವಳೆಲ್ಲ ದುರಂತಗಳ ಮೂಲ ಎಂಬ ನಿಲುವು, ಗಂಡಾಳಿಕೆಯ ಪ್ರತಿಷ್ಠೆಯ ನಿರರ್ಥಕತೆಯ ತಥ್ಯವು ಕಾದಂಬರಿಯಲ್ಲಿ ಸೂಚಿತವಾಗಿದೆ.

ಬದುಕಿನ ವಾಸ್ತವಕ್ಕೆ ಮುಖಾಮುಖಿಯಾಗುತ್ತ, ಕಾಲದ ಜೊತೆಗೆ ತಾವೂ ಮಾಗುವ ಪಾತ್ರಗಳು ಕಾದಂಬರಿಯಲ್ಲಿ ಹೇರಳವಾಗಿವೆ. ಕೌಸಲ್ಯ, ಕೈಕೆ, ಊರ್ಮಿಳೆ, ಮಾಂಡವಿ ಮುಂತಾದವರು ಒಂದೆಡೆಯಾದರೆ, ಕಥಾಹಂದರದಲ್ಲಿ ಹೊಸ ಸೇರ್ಪಡೆಯಾಗಿ ಬರುವ ಚೀರಿಣಿ, ಚುಕ್ಕಿ, ಮೇಘನಾದ, ರೇತಿ, ರೇತ ಮುಂತಾದವರು ಇನ್ನೊಂದೆಡೆಯಿಂದ ಕಾದಂಬರಿಯ ಮಹತ್ವವನ್ನು ಹೆಚ್ಚಿಸಿದ್ದಾರೆ. ಸಾಮೂಹಿಕ ಜೀವನ, ಸಮೂಹ ಪ್ರಜ್ಞೆ, ಪರಿಸರಸ್ನೇಹಿ ಬದುಕು, ಅಧಿಕಾರಕ್ಕೆ ಅಂಟಿಕೊಳ್ಳದ, ಸದಾ ಹೊಸತನಕ್ಕೆ ತುಡಿಯುವ ಮನಸ್ಸುಗಳು- ಅರಮನೆ, ಗುರುಮನೆ ಮತ್ತು ಸಾಮಾನ್ಯರ ಗುಡಿಸಲುಗಳವರೆಗೆ- ಅಸಾಧ್ಯದ್ದನ್ನು ಸಾಧಿಸಬಲ್ಲವು ಎಂಬ ನಿಲುವು ಕಾದಂಬರಿಯೊಳಗೆ ಸಹಜವಾಗಿ ಒಡಮೂಡಿದೆ. ಆರಂಭದ ಭಾಗದಲ್ಲಿ ಬರುವ ಬೇಟೆಯ ಪ್ರಸಂಗವು ಒಟ್ಟಾಗಿ ಮುಂದೆ ಭರತನು ಗಂಡಾಳಿಕೆಯ ಅರಮನೆಯೊಳಗೆ ಹೇಗೆ ಸುಲಭದ ಬೇಟೆಯಾಗುತ್ತಾನೆ ಎಂಬುದನ್ನು ಧ್ವನಿಸುವಷ್ಟು ಸಶಕ್ತವಾಗಿದೆ. ಲವಲವಿಕೆಯ, ಕನಸುಗುಣಿತನದ,

ಹುಡುಗಾಟಿಕೆಯ ದಂಪತಿಗಳ ಚಿತ್ರಣದಿಂದ ಆರಂಭವಾದ ಕಾದಂಬರಿಯು, ಬದುಕಿನ ಸಾರ್ಥಕ್ಯದ ಹೊಸ ಸಾಧ್ಯತೆಯನ್ನು ಕಂಡುಕೊಂಡ ಪ್ರಬುದ್ಧ ಮಧ್ಯವಯಸ್ಕ ದಂಪತಿಗಳ ನೆಲೆಯಿಂದ ಕೊನೆಯಾಗಿದೆ. ಈ ನಡುವಲ್ಲಿ ರಾಜಕಾರಣದ ಹಾಸು-ಹೊಕ್ಕುಗಳು, ಪ್ರತಿಷ್ಠೆ-ದೈನ್ಯದ ಮನೋಕ್ಷೇಷಗಳು, ಆರಸು-ಪ್ರಜೆಗಳಿಂದ ದಾಟಲಾದ ಹೆಜ್ಜೆ ಗುರುತುಗಳು ಇತ್ಯಾದಿ ಹಲವು ಸಂಗತಿಗಳು ಕಾದಂಬರಿಯೊಳಗೆ ಔಚಿತ್ಯಪೂರ್ಣವಾಗಿ ಬೆಸೆದುಕೊಂಡಿವೆ.

ಸ್ತ್ರೀವಾದಿ ಚಿಂತನೆಯು ಕೇವಲ ಸ್ತ್ರೀ ಕುರಿತು, ಸ್ತ್ರೀ ಪರವಾಗಿ ಮಾತ್ರ ಕಾಳಜಿ ವಹಿಸುವುದಿಲ್ಲ; ಅದು ಒಟ್ಟು ಮನುಕುಲದ ಕುರಿತು, ಸಮಾನತೆಯ ಕುರಿತು ಕಾಳಜಿ ಹೊಂದಿದೆ. ಈ ತಾತ್ವಿಕತೆಯು 'ಭರತಕಲ್ಪ'ದಲ್ಲಿ ತುಂಬ ಸಮರ್ಥ ವಾಗಿ ಒಡಮೂಡಿದೆ. ತೆರೆಯಾಚೆ, ತೆರೆಮರೆ, ತೆರೆಯ ಅಂಚಲ್ಲಿ ಉಳಿದವರಿಗೆಲ್ಲ ಇಲ್ಲಿ ಮಾನ್ಯತೆ ಮಾತ್ರವಲ್ಲ ಘನತೆಯ ಬದುಕು ಮತ್ತು ದೃಷ್ಟಿಕೋನ ಇರುವ ಸಾಧ್ಯತೆಯನ್ನು 'ಕಾಣಿಸಿದೆ'. ಭಕ್ತಿಯ ಭರದಲ್ಲಿ ನಾವು ಎಡವಿದ್ದೆಲ್ಲಿ? ತೂಕಡಿಸಿ ದ್ದೆಲ್ಲಿ? ತರ್ಕಕ್ಕೆ ವಿರಾಮ ನೀಡಿದ್ದೆಲ್ಲಿ? ಇತ್ಯಾದಿ ಪ್ರಶ್ನೆಗಳಿಗೂ ಕಾದಂಬರಿಯು ಪರೋಕ್ಷವಾಗಿ ಉತ್ತರಿಸಿದಂತಿದೆ. ರಾಮಾಯಣಗಳ ಭಾರದಲ್ಲಿ ಫಣಿರಾಜ ತಿಣುಕಿದ ಎಂದು ಕುಮಾರವ್ಯಾಸ ಹೇಳಿದ್ದರೂ ಅನಂತರವೂ ರಾಮಾಯಣದ ಮರುನಿರ್ಮಿತಿಯು ಮುಗಿದಿಲ್ಲ. ನಾವು ನಿರ್ಲಕ್ಷಿಸಿದ ಜನಪದ ರಾಮಾಯಣಗಳ ಮತ್ತು ಸ್ತ್ರೀ ಸಮುದಾಯವು ರಾಮಾಯಣದ ಕುರಿತು ಹೊಂದಿರುವ ನಿಲುವುಗಳ ಶೋಧಕ್ಕೆ ಹೋಗಲು ಇನ್ನೂ ಅವಕಾಶವಿದೆ ಎಂಬುದನ್ನು ಆರ್. ಸುನಂದಮ್ಮ ಅವರ 'ಭರತಕಲ್ಪ'ವು ಸಾಬೀತುಪಡಿಸಿದೆ. ಈ ಕಾದಂಬರಿ ರಚನೆಯ ಪೂರ್ವದಲ್ಲಿ ಲೇಖಕಿಯು ಮಾಡಿಕೊಂಡ ಸಿದ್ಧತೆಗಳು ಅಪಾರ. ಅವು ಯಾವುವೂ ಹೊರೆಯಾಗದಂತೆ ಕಾದಂಬರಿಯೊಳಗೆ ಸಕಾರಣ ಸ್ಥಾನವನ್ನು ಪಡೆದಿವೆ. ಗೊತ್ತಿರುವ ಕಥೆಯನ್ನೇ ಮತ್ತೆ ಹೇಳಹೊರಡುವವರಿಗೆ ಓದುಗರ ಏಕಾಗ್ರತೆಯದೆ ದೊಡ್ಡ ಸವಾಲು. ಭರತ ಕಲ್ಪವು ಇಂಥ ಸವಾಲನ್ನು ಕೌಶಲ್ಯ ದಿಂದ ಮತ್ತು ಭಿನ್ನ ದೃಷ್ಟಿಕೋನದಿಂದ ಗೆದ್ದುಕೊಂಡಿದೆ. ಇಂಥ ಅಪರೂಪದ ಸೂಕ್ಷ್ಮ ಒಳನೋಟದ ಕೃತಿಯನ್ನು ನೀಡಿದ ಲೇಖಕಿಗೆ ಹಾರ್ದಿಕ ಅಭಿನಂದನೆ ಗಳು.

- ಪ್ರೊ. ಸಬಿಹಾ ಭೂಮಿಗೌಡ

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...