ಕಾವ್ಯಕ್ಕೆ ಪ್ರತ್ಯೇಕವಾದ ಭಾಷೆಯಿದೆ ಎಂದು ಭಾವಿಸುವುದೇ ತಪ್ಪು: ಚೆನ್ನವೀರ ಕಣವಿ


ಕಣವಿಯವರ ಕಾವ್ಯದ ವ್ಯಂಜಕ ಗುಣವೇ ಅ೦ಥದು. ಅವರ ಭಾಷೆ ನಯವಾಗಿದ್ದಂತೆ ಸತ್ವಶಾಲಿಯಾಗಿದೆ; ಸಹಜವಾಗಿದ್ದಂತೆ ಚೇತೋಹಾರಿಯೂ ಆಗಿದೆ. ಕಣವಿಯವರ ವ್ಯಕ್ತಿತ್ವವೂ ಅವರ ಕಾವ್ಯಕ್ಕಿಂತ ಭಿನ್ನವಾದುದೇನಲ್ಲ. ಇಂದಿನ ಬೌದ್ಧಿಕ ಜಗತ್ತು ಹಾಗೂ ಕನ್ನಡ ಕಾವ್ಯ ಪರಿಸರವನ್ನು ಹಿನ್ನೆಲೆಯಾಗಿಟ್ಟುಕೊ೦ಡು ಅವರ ಜೊತೆ ಮಾತಿಗಿಳಿದಾಗ ಹೊಮ್ಮಿದ ವಿಚಾರಗಳು ಮನನೀಯವಾಗಿದ್ದವು ಎಂದು ಹೇಳುತ್ತಾರೆ ಸಂದರ್ಶಕ ಸಿದ್ದರಾಮ ಪೂಜಾರಿ. ಅವರು ಕವಿ ಚೆನ್ನವೀರ ಕಣವಿ ಅವರೊಂದಿಗೆ ನಡೆಸಿದ ಸಂದರ್ಶನ ನಿಮ್ಮ ಓದಿಗಾಗಿ..

ಕವಿ ಶ್ರೀ ಚೆನ್ನವೀರ ಕಣವಿಯವರ ಮನೆ 'ಚೆಂಬೆಳಕು’ ಸಮೀಪಿಸಿದಾಗ ವೈಶಾಖದ ಸಂಜೆಯ ಹೊಂಬೆಳಕು. ಬಿಸಿಲಿನ ಪ್ರಖರತೆಯ ಮಧ್ಯದಲ್ಲೂ ಸಂಜೆ ಉದಾಸವಾಗಿರಲಿಲ್ಲ. ಪ್ರಫುಲ್ಲಿತವಾಗಿತ್ತು. ಅಲ್ಲಿಯ ಪರಿಸರವೇ ಹಾಗೆ! ಸುಂದರ ಹೂದೋಟದ ಮಧ್ಯೆ ಅವರ ಮನೆಯಿದೆ. ಬಾಗಿಲು ತೆರೆದಾಗ ಕಣವಿಯವರ ತೆರೆದ ಹೃದಯದ ಸ್ವಾಗತ ಕಾದಿತ್ತು. "ಒಳಗೆ ಬನ್ನಿ'' ಎಂದು ಹೇಳುವಾಗ ಕಣ್ಣಂಚಿನಲ್ಲೂ ತುಳುಕುವ ಮೃದು ಮಾತು; ನಿರ್ಮಲ ಅಂತಃಕರಣ ಸೂಸುವ ಮುಗುಳು ನಗೆ ಒಳಗೆ ಕಾಲಿಟ್ಟಾಗ ಭಯ ಸಂಕೋಚಗಳು ಮಾಯವಾಗಿ ಕವಿ ನಮ್ಮವರಾಗಿ ಬಿಡುತ್ತಾರೆ. ಹಾಗೆಯೇ 'ಚೆಂಬೆಳಕು' ನಮ್ಮದಾಗುತ್ತದೆ.

ಪ್ರಾರಂಭದಿಂದಲೂ ಪ್ರಥಮ ದರ್ಜೆಯ ಕವಿಯಾಗಿ ಕಾಣಿಸಿಕೊಂಡು, ಆಧುನಿಕ ಕನ್ನಡ ಕಾವ್ಯ ಲೋಕದ ಮಹತ್ವದ ಕವಿಗಳಲ್ಲಿ ಒಬ್ಬರಾಗಿ ಮುನ್ನಡೆದ ಕಣವಿಯವರು ಈಗ ಅರವತ್ತು ದಾಟಿದ್ದಾರೆ. ನವೋದಯದ ಮಣ್ಣಿನಲ್ಲಿ ಮೊಳಕೆಯೊಡೆದ ಅವರ ಕಾವ್ಯ, ನವ್ಯದ ಗುಣಗಳನ್ನು ಒಪ್ಪಿಕೊಂಡು ಹೊಸಕಾಲದ ಹೊಸ ಅನುಭವದ ಸಮಗ್ರ ಶೋಧನೆಯಲ್ಲಿ ನಿರತವಾಗಿ ಪರಿವರ್ತನೆಯನ್ನು ಕಂಡುಕೊಳ್ಳುತ್ತಲೇ ಬಂದಿದೆ. ಹಾಗೆಂದೇ ಕಣವಿಯವರು ಸಮನ್ವಯಶೀಲ ಕವಿ. ಸಮನ್ವಯಶೀಲತೆ ಅವರ ಕಾವ್ಯದ ಮಿತಿಯಲ್ಲ. ಅದು ವ್ಯಕ್ತವಾಗುವುದು ಅದರ ಗತಿ ಶೀಲತೆಯಲ್ಲಿ. ಅವರಲ್ಲಿರುವ 'ಚಿರ೦ತನ ದಾಹ'ದ ನಿರಂತರ ಪ್ರಕ್ರಿಯೆ ಕಾವ್ಯವಾಗಿ ಪ್ರಕಟಗೊಳ್ಳುತ್ತದೆ.

ಸ್ನೇಹ, ಪ್ರೀತಿ, ಮಾನವೀಯತೆ, ಮಾರ್ದವತೆ, ನಿಸರ್ಗಪ್ರಿಯತೆ, ಅನುಭಾವಿಕತೆ, ಮೌಲ್ಯಪ್ರಜ್ಞೆಗಳೆಲ್ಲವನ್ನೂ ಉಳಿಸಿಕೊಳ್ಳುತ್ತಲೇ ಅವರ ಆಸಕ್ತಿಗಳು ಹೆಚ್ಚು ಹೆಚ್ಚು ವಿಸ್ತಾರಗೊಳ್ಳುತ್ತ ವಾಸ್ತವದ ಅರಿವಿನ ಬೆಳಕಿನಲ್ಲಿ ಅವರ ಕಾವ್ಯ ಸಂಭವಿಸುತ್ತದೆ. ಯಾವುದೇ ಒಂದು ಸಿದ್ಧಾಂತಕ್ಕೆ ಜೋತು ಬೀಳದೆ ತನ್ನ ಅಭಿರುಚಿ ಹಾಗೂ ಕಾವ್ಯಪ್ರಜ್ಞೆಯನ್ನು ಸದಾ ಜಾಗೃತವಾಗಿರಿಸಿಕೊಂಡು ಅವರು ಮುಂದುವರಿಯುತ್ತಾರೆ. ಪರಂಪರೆ ಹಾಗೂ ವಾಸ್ತವಿಕತೆಯ ಅರಿವನ್ನು ತಮ್ಮ ವ್ಯಕ್ತಿತ್ವದಲ್ಲಿ ಕರಗಿಸಿಕೊಂಡು ಅವರು ಕಾವ್ಯಕೃಷಿಗೆ ತೊಡಗುತ್ತಾರೆ. ಸೂಕ್ಷ್ಮ ಅಂತಃಪ್ರಜ್ಞೆಯ ಅಭಿವ್ಯಕ್ತಿಯ ಅವರ ಕಾವ್ಯವಾಗುತ್ತದೆ. ಅನುಭವ, ವೈಚಾರಿಕತೆಗಳ ಸಮ್ಮಿಳಿತದ ರಸಸಿದ್ಧಿಯ, ಅನುಭೂತಿಯ ಅಭಿವ್ಯಕ್ತಿಯಲ್ಲಿ ಅವರ ಕಾವ್ಯಕ್ಕೆ `ಜೀವಂತ ಗತಿ' ಪ್ರಾಪ್ತವಾಗುತ್ತದೆ. ಅಂತೆಯೇ ಅವರು ಪ್ರತಿಭಾಶಾಲಿ ಕವಿ: ಅಂಥವರು ಮಾತ್ರ ಪರಂಪರೆಗಳ ಬದಲಾವಣೆಗಳೊಂದಿಗೆ ಕಾವ್ಯ ಗುಣವನ್ನು ಕಾಪಾಡಿಕೊಂಡು ಬರುತ್ತಾರೆ.

ರಾಜಕೀಯಮಯವಾದ ಇಂದಿನ ಸ್ಥಿತಿಗತಿ, ಕುಸಿಯುತ್ತಿರುವ ಮೌಲ್ಯಗಳಿಂದ ನೈತಿಕತೆಯನ್ನೇ ಕಳೆದುಕೊಂಡು ರೋಗಗ್ರಸ್ತವಾದ ವ್ಯವಸ್ಥೆಗೆ ಕಣವಿ ಯವರ ವ್ಯಂಗ್ಯ ವಿಡಂಬನೆಗಳು ಚುಚ್ಚು ಮದ್ದಿನ ಹಾಗೆ ಯಾವಾಗಲೂ ಆರೋಗ್ಯ ಕರ, ಅವು ಯಾರನ್ನೂ ಘಾಸಿ ಗೊಳಿಸುವುದಿಲ್ಲ. ಅವರ ಕಾವ್ಯದ ವ್ಯಂಜಕ ಗುಣವೇ ಅ೦ಥದು. ಅವರ ಭಾಷೆ ನಯವಾಗಿದ್ದಂತೆ ಸತ್ವಶಾಲಿಯಾಗಿದೆ; ಸಹಜವಾಗಿದ್ದಂತೆ ಚೇತೋಹಾರಿಯೂ ಆಗಿದೆ. ಕಣವಿಯವರ ವ್ಯಕ್ತಿತ್ವವೂ ಅವರ ಕಾವ್ಯಕ್ಕಿಂತ ಭಿನ್ನವಾದುದೇನಲ್ಲ. ಇಂದಿನ ಬೌದ್ಧಿಕ ಜಗತ್ತು ಹಾಗೂ ಕನ್ನಡ ಕಾವ್ಯ ಪರಿಸರವನ್ನು ಹಿನ್ನೆಲೆಯಾಗಿಟ್ಟುಕೊ೦ಡು ಅವರ ಜೊತ ಮಾತಿಗಿಳಿದಾಗ ಹೊಮ್ಮಿದ ವಿಚಾರಗಳು ಮನನೀಯವಾಗಿದ್ದವು.

ಪ್ರಶ್ನೆ : ನವೋದಯ ಕಾವ್ಯಪರಿಸರದ ಹಿನ್ನೆಲೆಯಲ್ಲಿ ಕಾವ್ಯಕೃಷಿಗೆ ತೊಡಗಿ, ಕನ್ನಡದ ಮಹತ್ವದ ಹಾಗೂ ಪ್ರಜ್ಞಾವಂತ ಕವಿಯಾಗಿ ಉಳಿದ ನೀವು ಇತ್ತೀಚಿನ ಕಾವ್ಯಗಳನ್ನು ಹೇಗೆ ಗ್ರಹಿಸುತ್ತೀರಿ?
ಉತ್ತರ :
ಇತ್ತೀಚಿನ ಕಾವ್ಯ ಎಂದು ಕರೆವಾಗಲೂ ಕನ್ನಡ ಕಾವ್ಯದ ಒಟ್ಟು ಪರಂಪರೆಯ ಹಿನ್ನೆಲೆಯಲ್ಲಿಯೇ ಅದು ಮೂಡಿಬಂದದ್ದು ಎಂಬುದನ್ನು ಮರೆಯಬಾರದು. ಪರಂಪರೆಯ ಸಾರವನ್ನು ಹೀರಿಕೊಂಡು ಸಮಕಾಲೀನ ಪ್ರಶ್ನೆಯಿಂದ ಹೊಸತನ್ನು ನೀಡಬಲ್ಲ ಕಾವ್ಯ ನನಗೆ ಗಮನಾರ್ಹವೆನಿಸುತ್ತದೆ. ಪಂಥ, ಧೋರಣೆ, ಸಿದ್ಧತೆ, ಇತ್ಯಾದಿ ವಿಚಾರಗಳೆಲ್ಲ ಅದು ಕವಿತೆಯಾಗಿ ನಮ್ಮ ಮನಸ್ಸನ್ನು ಹಿಡಿದ ಮೇಲೆ ಅಲ್ಲವೆ? ಇತ್ತೀಚಿನ ಕವಿಗಳಲ್ಲಿ ಕೆಲವರಾದರೂ ಇದನ್ನು ಲಕ್ಷದಲ್ಲಿಟ್ಟಿರುವುದು ಸಂತೋಷದ ಸಂಗತಿ.

ಪ್ರಶ್ನೆ: ನವೋದಯ ಕಾವ್ಯದ ಪರಂಪರೆ ಪೂರ್ಣಗೊಂಡು ಮನ್ವಂತರ ಕಾಲವನ್ನು ದಾಟಿ ಬರಬೇಕಾದ ಸಂದರ್ಭದಲ್ಲಿ ನಿಮಗಾದ ವಿಶಿಷ್ಟ ಅನುಭವ ಎಂಥದು?
ಉತ್ತರ: ನವೋದಯ ಕಾವ್ಯದ ಪರಂಪರೆ ಪೂರ್ಣಗೊಳ್ಳುವ ಹೊತ್ತಿಗೆ ನನ್ನ ಆಸಕ್ತಿಗಳು ವಿಸ್ತಾರಗೊಳ್ಳತೊಡಗಿದ್ದವು. ಜೀವನದ ವಾಸ್ತದ ಅರಿವು ರಮ್ಯತೆಯನ್ನು ಭೇದಿಸತೊಡಗಿದ್ದರೂ ಆದರ್ಶಪ್ರಿಯತೆಗೆ ಭಂಗವುಂಟಾಗಿರಲಿಲ್ಲ. ಪ್ರಗತಿಶೀಲತೆಯ ತೆರೆಯೊಂದು ರಭಸದಿಂದ ಹಾಯ್ದು ಹೋದದ್ದನ್ನು ಗಮನಿಸಿದ್ದೆ. ಕಾವ್ಯದೊಡನೆ ಸಂಘರ್ಷಕ್ಕೆ ತೊಡಗಿದಾಗಲೂ ನವೋದಯದೊಡನೆ ನನ್ನ ಸಂಬಂಧ ಆತ್ಮೀಯ ಸಾಗಿತ್ತು. ಅನುಭವದ ಸಮಗ್ರ ಶೋಧನೆ ಜೀವಂತ ಭಾಷೆಯ ನುಡಿಗಟ್ಟು, ಆಡು ಮಾತಿನ ಲಯ, ಮುಂತಾದವು ನವ್ಯರಲ್ಲಿ ನಾವು ಒಪ್ಪಿಕೊಂಡ ಗುಣಗಳು. ಆದರೆ ಅವರ ತೀವ್ರ ನಿರಾಶೆ, ಒಬ್ಬಂಟಿತನ, ಕಾಮೋತ್ಸಾಹಗಳು ನನ್ನ೦ಥವರನ್ನು ಕಾಡಲಿಲ್ಲ. ಮನ್ವಂತರ ಕಾಲವನ್ನು ದಾಟಿ ಬಂದ ಮೇಲೂ ಸ್ನೇಹ, ಪ್ರೀತಿ, ಮಾನವೀಯತೆ, ಮೌಲ್ಯ ಪ್ರಜ್ಞೆಗಳನ್ನು ನಾವು ಜತನವಾಗಿ ಕಾಪಾಡಿಕೊಂಡಿದ್ದೇವೆಂದೇ ಹೇಳಬಹುದು.

ಪ್ರಶ್ನೆ: ಸ್ವಾತಂತ್ರೋತ್ತರ ಭಾರತದಲ್ಲಿ ಇಂದಿನ ಲೇಖಕ ನಿಜವಾದ ಅರ್ಥದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾನೆಯೇ? ವೈಯಕ್ತಿಕವಾಗಿ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎಂದಾದರೂ ಕುತ್ತು ಬ೦ದೊದಗಿದೆಯೆ?
ಉತ್ತರ:
ಹಾಗೆ ನೋಡಿದರೆ ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರಬಾರದು. ಆದರೆ ನಮ್ಮ ಜೀವನ ರಾಜಕೀಯಮಯವಾಗಿಬಿಟ್ಟಿರುವುದರಿ೦ದ ಜಾತಿ, ಧರ್ಮ, ನೈತಿಕತೆ, ರಾಷ್ಟ್ರೀಯತೆ ಇತ್ಯಾದಿಗಳ ನೆವದಲ್ಲಿ ಅದಕ್ಕೆ ಆಗಾಗ ಆತಂಕ' ಒದಗಿದ್ದುಂಟು. ನಮ್ಮ ವಿಚಾರಗಳೇ ಪ್ರಸಾರಗೊಳ್ಳದಂತೆ ವ್ಯವಸ್ಥೆ ಉಪಾಯಗಳನ್ನು ಯೋಚಿಸಬಲ್ಲದು. ಸಂಶೋಧಕರೊಬ್ಬರ ವಿವಾದಕ್ಕೀಡಾದ ಲೇಖನಗಳ ಮುಕ್ತ ಚರ್ಚೆಗೆಂದು ಧಾರವಾಡದಲ್ಲಿ ಇತ್ತೀಚೆಗೆ ವಿಚಾರವಾದಿಗಳ ಸಭೆಯೊಂದನ್ನು ಏರ್ಪಡಿಸಿದಾಗ ಅದು ನಡೆಯದಂತೆ ನೋಡಿಕೊಳ್ಳಲಾಯಿತು. ಇಂಥ ಅನೇಕ ಉದಾಹರಣೆಗಳನ್ನು ಕೊಡಬಹುದು.

ಪ್ರಶ್ನೆ: ಸಲ್ಮಾನ್‌ರಶ್ದೀ ಪ್ರಕರಣ ಸಾಂಸ್ಕೃತಿಕ ಜಗತ್ತಿನಲ್ಲಿ ಎಬ್ಬಿಸಿರುವ ಮೂಲಭೂತ ಪ್ರಶ್ನೆ ಲೇಖಕನ ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿಮಿತಿಗಳಿಗೆ ಸಂಬಂಧಿಸಿದ್ದು. ಇದು ಈ ಸ್ವಾತಂತ್ರದ ಸೀಮಾರೇಖೆ ಎಂದು ನಿಶ್ಚಿತವಾಗಿ ಹೇಳುವುದು ಹೇಗೆ?
ಉತ್ತರ:
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಇತಿಮಿತಿಗಳಿವೆ. ಇಲ್ಲವೆಂದಲ್ಲ. ಸೃಜನಾತ್ಮಕ ಕೃತಿಗಳಲ್ಲಿ ಅದರ ಉಲ್ಲಂಘನೆಯನ್ನು ಗುರುತಿಸುವುದು ಬಹಳ ಕಷ್ಟ. ಇಂದಿನ ಸಮಾಜ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ತನ್ನ ಅರ್ಥವನ್ನೇ ಕಳೆದುಕೊಂಡಂತಿದೆ. ಆದರೆ ಹೆದರಿಕೆ ಬೆದರಿಕೆಗಳಿಂದ ಲೇಖಕನಿಗೆ ಮಾನಸಿಕ ಹಿಂಸೆಯನ್ನುಂಟುಮಾಡುವುದು ಅತ್ಯಂತ ಅನಾಗರಿಕವಾದದ್ದು.

ಪ್ರಶ್ನೆ: (ಮತ್ತೆ ಕಾವ್ಯಕ್ಕೆ ಬರೋಣ) ನವೋದಯ ಹಾಗೂ ನವ್ಯ ಈ ಎರಡೂ ಕಾವ್ಯ ಪರಂಪರೆಗಳ ಸಮನ್ವಯ ಸಿದ್ದಿಯಲ್ಲಿ ನಿಮಗೆ ಸಮಾಧಾನ ದೊರಕಿದೆಯೆ? 'ಇನ್ನೊಂದು ಸಾಧನೆಯ ಸಿದ್ಧತೆಯ ದೃಷ್ಟಿಯಿಂದ ಸದಾ ಸೃಜನಶೀಲ ಹಾಗೂ ಪರಿವರ್ತನಶೀಲ ಕವಿಯಾದ ನೀವು ಕೇವಲ ಸಮನ್ವಯ ಕವಿಯಾಗಿ ಉಳಿಯಬಾರದಲ್ಲವೆ?
ಉತ್ತರ:
ಹಳತು, ಹೊಸತು ಕೂಡಿ ಬೇರೊಂದು ಪಾಕವಾಗಿ ಮುಂದುವರಿಯುವ ಪ್ರಯತ್ನ ನನ್ನ ಜಾಯಮಾನಕ್ಕೆ ಒಗ್ಗುವಂಥದು. 'ಸಿದ್ಧಿ'ಯ ಮಾತು ಬೇರೆ, ಹಾಗೆ ನೋಡಿದರೆ ಕನ್ನಡ ಕಾವ್ಯ ಕಾಲಕಾಲಕ್ಕೆ ಸಮನ್ವಯಕ್ಕೆ ಹಾತೊರೆಯುತ್ತಲೇ ಬಂದಿದೆ. ನವೋದಯವೂ ಒಂದು ದೃಷ್ಟಿಯಿಂದ ಸಮನ್ವಯ ಕಾವ್ಯವೇ. ಆದ್ದರಿಂದ ಸಮನ್ವಯವನ್ನು ಸಂಕುಚಿತ ಅರ್ಥದಲ್ಲಿ ನೋಡದೆ ಅದನ್ನು ಕೂಡಾ ಗತಿಶೀಲವಾಗಿರುವುದನ್ನು ಮನಗಾಣುವುದು ಅವಶ್ಯವಾಗಿದೆ. ಬದಲಾವಣೆಯನ್ನು ಅದು ವಿರೋಧಿಸದೆ ಅದರ ಒಳ್ಳೆಯ ಅಂಗಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಎಚ್ಚರಿಕೆಯಿಂದ ಮುಂದುವರಿಯುತ್ತದೆ.

ಪ್ರಶ್ನೆ: ಅನುಭವ ಮತ್ತು ವೈಚಾರಿಕತೆಗೆರಡೂ ಕರಗಿ ಕಲಾತ್ಮಕವಾಗಿ ರೂಪಾಂತಗೊಳ್ಳುವ ಪ್ರಕ್ರಿಯೆಯಲ್ಲಿ ಕಾವ್ಯ ಸಿದ್ಧಿಸುತ್ತದೆ?
ಉತ್ತರ:
ಅದೂ ಒ೦ದು ಕಾಲ. ದ್ವಿತೀಯ ಜಾಗತಿಕ ಯುದ್ಧ ಮುಗಿದು ವರ್ಷವೊಂದು ಕಳೆದಿತ್ತಾದರೂ, ಅದರ ಘೋರ ಪರಿಣಾಮಗಳಿಂದ ಹೊರಬರಲು ಜಗತ್ತು ಹವಣಿಸುತ್ತಿತ್ತು. ಖಾನಾವಳಿಯಲ್ಲಿ ಮೂರು ದಿನ ಮೀರಿ ನೀವು ಊಟ ಮಾಡಬೇಕಿದ್ದರೆ ತಾತ್ಪೂರ್‍ತಿಕ ರೇಶನ್ ಕಾರ್ಡು ತಂದು ಕೊಡಬೇಕಾಗುತ್ತಿತ್ತು, ಖಾನಾವಳಿಯ ಊಟ ಅನಿವಾರ್ಯವಾಗಿಯಾಗಲು ಕನಸುಗಳನ್ನು೦ಡು ಬದುಕಲೆತ್ನಿಸುತ್ತಿದ್ದ ವಯಸ್ಸು ನನಗಾಗ. ಹದಿನೈದು ತುಂಬುವುದರಲ್ಲಿದ್ದಾಗ ತಂದೆ-ತಾಯಿಗಳ ನಿಶ್ಚಿತ ಆಶ್ರಯದಿಂದ ಹೊರಬಂದು ಧಾರವಾಡದಲ್ಲಿ ಸ್ವತಂತ್ರವಾಗಿದ್ದು ಓದನ್ನು ಮುಂದುವರಿಸುವ ಕನಸು ಕಾಣುತ್ತಿದ್ದ ನನ್ನನ್ನು ವಿಧಿ ತಂದು ನಿಲ್ಲಿಸಿದ ಧಾರವಾಡದ ಆಳಣಾವರ ಚಾಳಿನ ಒಂದು ಕೋಣೆಯಲ್ಲಿ. ಧಾರವಾಡದಲ್ಲಿ ನಾವು ಎಡವಿ ಒಂದೊಂದು ಕಲ್ಲಿನಿಂದಲೂ ಕಾವ್ಯ ಒಸರುತ್ತದೆಂಬ ಭ್ರಮೆಯಲ್ಲಿ ನಾನಿದ್ದ ಆ ಕಾಲದ ಕನಸಿಗೂ ವಸ್ತುಸ್ಥಿತಿಗೂ ಅಂತರವಿರಬಲ್ಲದೆಂದು ಗ್ರಹಿಸಲೇ ಸಾಕಷ್ಟು ಸಮಯ ಹಿಡಿಯಿತು. ಆಗಲೇ ಒಂದು ದಿನ ನನ್ನ ಗಮನಕ್ಕೆ ಬಂತು: ಇಬ್ಬರು ಉದಯೋನ್ಮುಖ ಕವಿಗಳು ನನ್ನ ಹತ್ತಿರದಲ್ಲೇ ಇದ್ದಾರೆಂದು. ಚೆನ್ನವೀರ ಕಣವಿ ಮತ್ತು ಸಿ.ಚ. ಅನಾಡ ನಾನಿದ್ದ ಕೋಣೆಯ ಹಿ೦ಬದಿಯ ಕೋಣೆಯಲ್ಲಿದ್ದರು. ಮ್ಯಾಟ್ರಿಕ್ ವರ್ಗದಲ್ಲಿ ಓದುತ್ತಿದ್ದ ಅವರಿಬ್ಬರ ಬಗ್ಗೆ ನನ್ನ ಸಮವಯಸ್ಕರು ಆಗಲೇ ಗೌರವದಿಂದ ಆಡಿಕೊಳ್ಳುತ್ತಿದ್ದರು. ಆದರೆ ನನಗೆ ಆಗ ಅವರೊಂದಿಗೆ ಬಂದ ಸಂಪರ್ಕ ಪರಸ್ಪರ ಮುಗುಳ್ನಗುವಿಗೆ ಮಾತ್ರ ಸೀಮಿತವಾಗಿ ಉಳಿಯಿತು.

ಪ್ರಶ್ನೆ : ಸಮರ್ಥವಾಗಿ ಅಭಿವ್ಯಕ್ತಿಯನ್ನು ಪಡೆದ ಅನುಭೂತಿಯಲ್ಲಿ ಇಷ್ಟು ಪಾಲು ವೈಚಾರಿಕ, ಇಷ್ಟು ಪಾಲು ಭಾವಾತ್ಮಕ ಎಂದು ವಿಂಗಡಿಸಿ ಹೇಳುವುದು ಸಾಧ್ಯವೇ ಇಲ್ಲ (ಮನ್ವಂತರ-7 'ಕಾವ್ಯ ದಲ್ಲಿ ವೈಚಾರಿಕತೆ' ಕೀರ್ತಿನಾಥ ಕುರ್ತಕೋಟಿ) ಎಂದ ಮೇಲೆ ಇಂದಿನ ಕಾವ್ಯ ವೈಚಾರಿಕತೆಯ ಭಾವದಿಂದ ನರಳುತ್ತಿರುವುದು ಅದರ ವೈಫಲ್ಯವೆಂದೇ ಹೇಳಬೇಕಲ್ಲವೆ?
ಉತ್ತರ:
ನಿಮ್ಮ ಪ್ರಶ್ನೆಯ ಮೊದಲ ಭಾಗದಲ್ಲಿಯ (ನೀವು ಕಂಡಿರುವ ವೈಫಲ್ಯಕ್ಕೆ) ವಿವೇಚನೆಯೇ ತಕ್ಕ ಉತ್ತರವಾಗಬಲ್ಲದು.

ಪ್ರಶ್ನೆ: ಗದ್ಯ ಪದ್ಯ ಪರಸ್ಪರ ವೈರಿಗಳಲ್ಲ. ಗದ್ಯದಲ್ಲಿಯ ಮಾತಿನ ಲಯ, ಸಂಭಾಷಣೆಯ ಸೊಗಸನ್ನು ಪದ ಸ್ವೀಕರಿಸಿದರೆ ಅದರ ಗುಣ ಗೌರವ ಇನ್ನೂ ಹೆಚ್ಚುತ್ತದೆ. ಒಪ್ಪಿಕೊಳ್ಳೋಣ. ಆದರೆ ಕಾವ್ಯ ಸ್ವರೂಪಕ್ಕೆ ಇದರಿಂದ ಧಕ್ಕೆಯಾಗುವುದಿಲ್ಲವೆ?
ಉತ್ತರ:
ನನಗೆ ಹಾಗೆ ಅನಿಸುವುದಿಲ್ಲ. ಆದರೆ ಕಾವ್ಯದ ಉಳಿದ ಲಕ್ಷಣಗಳನ್ನು ಕೈಬಿಡಬಾರದು ಅಷ್ಟೇ.

ಪ್ರಶ್ನೆ: ಇತ್ತೀಚೆಗೆ ಭಾವಗೀತೆಗಳು ಮತ್ತೆ ಚಿಗುರೊಡೆಯುತ್ತಿವೆ. ಇದು ನವೋದಯ ಅಥವಾ 'ರೋಮ್ಯಾಂಟಿಕ್’ ಪರಂಪರೆಯ ಪುನರಾವರ್ತನೆಯೆ?
ಉತ್ತರ: ಇತ್ತೀಚಿನ ಭಾವಗೀತೆಗಳಲ್ಲಿ ನವೋದಯ ಕಾಲದ ಭಾವೋದ್ರೇಕವನ್ನು ಕಾಣಲಾರಿರಿ. ಸಮಕಾಲೀನತೆಯ ಸ್ಪಂದನದೊಂದಿಗೆ ನಮ್ಮ ಭಾವಲೋಕವನ್ನು ಹೊಸ ದೃಷ್ಟಿಯಿಂದ ಅವಲೋಕಿಸಿ ಅಭಿವ್ಯಕ್ತಿಗೊಳಿಸುವ ಪ್ರಯತ್ನ ಇವುಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ಇದು ರೋಮ್ಯಾಂಟಿಕ್ ಪರಂಪರೆಯ ಪುನರಾವರ್ತನೆಯಲ್ಲ. (ಕ್ಯಾಸೆಟ್‌ಗಳಿಗಾಗಿಯೇ ಬರೆದ ಪದ್ಯಗಳಿಗೆ ಮಾತ್ರ ಈ ಮಾತು ಅನ್ವಯಿಸುವುದಿಲ್ಲ.)

ಪ್ರಶ್ನೆ: ಕಾವ್ಯ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆಯೆ? ಕಾವ್ಯದತ್ತ ಜನರ ಒಲವು ಕಡಿಮೆಯಾಗಲು ಕಾರಣ? ಕಾವ್ಯಕ್ಕೆ ಈಗ ರಕ್ಷಣೆಯ ಅಗತ್ಯವಿದೆಯೆ?
ಉತ್ತರ:
ಕಾವ್ಯವನ್ನು ತಾವಾಗಿಯೇ ಆಸಕ್ತಿಯಿಂದ ಓದುವವರ ಸಂಖ್ಯೆ ಯಾವ ಕಾಲಕ್ಕೂ ಕಡಿಮೆಯೇ. ಆದರೆ ಅದರ ಬಗ್ಗೆ ಅಭಿರುಚಿಯುಳ್ಳವರು ಇಲ್ಲವೆಂದಲ್ಲ . ಮೊದಲಿಗಿಂತಲೂ ಈಗ ಕವಿಗೋಷ್ಠಿಗಳು ಹೆಚ್ಚಾಗಿ ನಡೆಯುತ್ತಿವೆ. ಶ್ರೋತೃಗಳ ಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಜನರ ಒಲವನ್ನು ಗಳಿಸಿಕೊಳ್ಳುವುದು ಕವಿಗಳಲ್ಲಿ ಕೂಡಿದೆ. ಕಾವ್ಯಕ್ಕೆ ರಕ್ಷಣೆಯ ಅಗತ್ಯ ಕುರಿತು ಪ್ರಸ್ತಾಪಿಸಿದ್ದೀರಿ. ಕೆಲವು ಕವಿಗಳೆನಿಸಿಕೊಂಡರಿಂದಲೇ ಅದಕ್ಕೆ ರಕ್ಷಣೆ ಬೇಕಾಗಿದೆ ಎಂದು ಅನಿಸುವುದಿಲ್ಲವೆ? (ನಗು)

ಕವಿಗಳು ತಮ್ಮ ಕವಿತೆಗಳನ್ನು ಮಾತ್ರವಲ್ಲದೇ ಅನ್ಯ ಕವಿಗಳ ಕವಿತೆಗಳನ್ನೂ ಓದಿ ತೋರಿಸುವ ಪರಿಪಾಠ ಬೆಳೆಯಬೇಕೆನ್ನಿಸುತ್ತದೆ ಜಿ ಪಿ. ರಾಜರತ್ನಂ, ರಂ. ಶ್ರೀ. ಮುಗಳಿ ಅಂಥ ಆದರ್ಶವನ್ನು ಮುಂದುವರಿಸುವ ಅಗತ್ಯವಿದೆ.

ಪ್ರಶ್ನೆ: "ಕಾವ್ಯಶೈಲಿಯ ಮೂಲ ಗುಣ ಅದರ ಮಾಂತ್ರಿಕತೆ, ಜೀವನವನ್ನು ಕಲೆಯಾಗಿ ಪಲ್ಲಟಿಸುವ ಪವಾಡ ಇದಿಲ್ಲದೆ ಶೈಲಿಯು ನವ್ಯವಾಗಬಹುದು, ಕಾವ್ಯವಾಗಲಾರದು"- (ವಿ.ಕೃ. ಗೋಕಾಕ) ಈ 'ಮಾಂತ್ರಿಕತೆ' ವಿಮರ್ಶೆಯ ಪರಿ ಭಾಷೆಯಾಗಿ ಕೂಡ ಉಳಿದುಬಂದಿಲ್ಲ. ಬಹುಶಃ 'ಮಾಂತ್ರಿಕತೆ' ಶಬ್ದದಲ್ಲಿ ರೊಮ್ಯಾಂಟಿಕ್ ಅಂಶವಿದೆ ಎಂದು ಭಾವಿಸಲಾಗುತ್ತಿದೆಯೆ? ಹಾಗಿದ್ದಲ್ಲಿ ಈ ಪದಕ್ಕೆ ವಿಮರ್ಶೆಯ ವಿಶೇಷ ಅರ್ಥವ್ಯಾಪ್ತಿ ನೀಡಬಾರದೇಕೆ?
ಉತ್ತರ:
'ಮಾಂತ್ರಿಕತೆ' ವಿಮರ್ಶೆಯ ಪರಿ ಭಾಷೆಯಾಗಿ ಉಳಿದಿರದಿದ್ದರೂ ನಿಜವಾದ ವಿಮರ್ಶಕ ಕಾವ್ಯದ ಆ ಗುಣವನ್ನು ಮರೆತಿದ್ದಾನೆಂದು ಭಾವಿಸಕೂಡದು. ಶಬ್ದ, ನಾದ, ಅರ್ಥಗಳ ಅಪೂರ್ವವಾದ ಸಂಯೋಜನೆಯಿಂದ ಕಾವ್ಯ ಪಡೆಯುವ ಮೋಡಿಯೇ ಮಾಂತ್ರಿಕತೆ, ಅದರ ಅರ್ಥವ್ಯಾಪ್ತಿಯನ್ನು ಸುಮ್ಮನೆ ಹಿಗ್ಗಿಸುವುದೇಕೆ?

ಪ್ರಶ್ನೆ: ಅನುಭವದ ತೀವ್ರತೆಗೆ ಛಂದಸ್ಸು ಬ೦ಧನಕಾರಿಯಲ್ಲವೆ?
ಉತ್ತರ:
ಎಂಥ ಅನುಭವದ ತೀವ್ರತೆಯಿದ್ದಾಗಲೂ ಕವಿತೆಯಲ್ಲಿ ಅದು ತನಗೆ ತಕ್ಕ ಛಂದೋ ಶರೀರವನ್ನು ಪಡೆದುಕೊಂಡೇ ಹೊರ ಹೊಮ್ಮುತ್ತದೆ. ಛಂದೋಗತಿ ಯಾಂತ್ರಿಕವಾದಾಗ ಮಾತ್ರ ಅದು ಬಂಧನಕಾರಿ ಎನಿಸಬಹುದು.

ಪ್ರಶ್ನೆ: ಕಾವ್ಯ ರಚನಾ ಕೌಶಲ (workman ship) ಅಥವಾ ಕಲೆಗಾರಿಕೆ(croftmanship) ಯಿಂದಾಗಿ ಕಾವ್ಯಭಾಷೆ ಕೃತಕವೆನಿಸುವುದಿಲ್ಲವೆ?
ಉತ್ತರ:
ಕಾವ್ಯಕ್ಕೆ ಪ್ರತ್ಯೇಕವಾದ ಭಾಷೆಯಿದೆ ಎಂದು ಭಾವಿಸುವುದೇ ತಪ್ಪು. ಆದರೆ ವಸ್ತುವಿಗೆ ತಕ್ಕಂತೆ ಅದನ್ನು ಹದಗೊಳಿಸಬೇಕಾಗುತ್ತದೆ. ನೀವು ಹೇಳುವ ರಚನಾ ಕೌಶಲ ಅಥವಾ ಕಲೆಗಾರಿಕೆಯಿಂದ ಸಹಜತೆಗೆ ಕುಂದುಬರದಂತೆ ಕಾವ್ಯಭಾಷೆ ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತದೆ.

ಪ್ರಶ್ನೆ: ಶ್ರೇಷ್ಠ ಕಾವ್ಯ ಬಿಡಿ ಕವಿತೆಗಳಲ್ಲಿ ಮಾತ್ರ ಸಂಭವಿಸುತ್ತದೆಯೆ? ಹಾಗಾದರೆ, ನೀವೇಕೆ ಮಹಾಕಾವ್ಯ ರಚಿಸಲಿಲ್ಲ?
ಉತ್ತರ:
ಹಾಗೇನಿಲ್ಲ. ಇಂದಿನ ಮುಖ್ಯ ಕಾವ್ಯ ಪ್ರಕಾರದಲ್ಲಿ ನನ್ನ ಮನಸ್ಸು ಕೇಂದ್ರೀಕೃತವಾಗಿರುವುದರಿಂದ ಕಥನಕ್ಕೆ ಹವಣಿಸಿಲ್ಲ.

ಪ್ರಶ್ನೆ: ನವ್ಯತೆ ನಿಮ್ಮ ಕಾವ್ಯದ ಆಂತರಿಕ ಅವಶ್ಯಕತೆಯಾಗಿ ಬಂದಿರದ ಹೊರಗಿನ ಪ್ರಭಾವವಾಗಿ ಬಂದಿದೆ ಎನ್ನುವ ಕುರ್ತಕೋಟಿಯವರ ಅಭಿಪ್ರಾಯಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಉತ್ತರ: ನಾನು ನವ್ಯ ಕವಿ ಎಂದು ಹೇಳಿಕೊ೦ಡಿದ್ದರಲ್ಲವೆ ಆ ಪ್ರಶ್ನೆ ಏಳುವುದು?

ಪ್ರಶ್ನೆ: ನಿಮ್ಮ ಸಮಕಾಲೀನ ಕವಿಗಳಿಗಿಂತ ನೀವು ಹೇಗೆ ಭಿನ್ನ? ಓರ್ವ ಕವಿಯಾಗಿ ನಿಮ್ಮನ್ನು ನೀವು ಹೇಗೆ ಗುರುತಿಸಿಕೊಳ್ಳುತ್ತೀರಿ ?
ಉತ್ತರ:
ಪ್ರತಿಯೊಬ್ಬರ ವ್ಯಕ್ತಿತ್ವ ನಿರ್ಮಾಣದಲ್ಲಿಯೇ ಆ ಭಿನ್ನತೆಯಿದೆ. ಅದಕ್ಕನುಸರಿಸಿ ಸಮಕಾಲೀನರಾಗಿಯೂ ನಮ್ಮದು ಭಿನ್ನ ರುಚಿ. ಕನ್ನಡ ಕಾವ್ಯ ಪರಂಪರೆಯ ಒಂದು ಅಂಗವಾಗಿಯೇ ನಾನು ನನ್ನನ್ನು ಗುರುತಿಸಿಕೊಳ್ಳುತ್ತೇನೆ.

ಪ್ರಶ್ನೆ: ನಿಮ್ಮ ಹೊಸ ಕವಿತೆಗಳ ಆಶಯವೇನು?
ಉತ್ತರ:
ವಿವಿಧ ಆಸಕ್ತಿಗಳಿಗೂ ಕವಿತೆಯಲ್ಲಿ ಅಭಿವ್ಯಕ್ತಿ ನೀಡುವುದು. ಮನುಷ್ಯತ್ವಕ್ಕೆ ವಿರೋಧವಾದದ್ದನ್ನು ಸೂಕ್ಷ್ಮವಾಗಿ ಪ್ರತಿಭಟಿಸುವುದು. ಬದುಕಿನ ನೆಮ್ಮದಿಯನ್ನು ಕಾಪಾಡಿ ಕೊಳ್ಳುವುದು. ಜೀವನದ ಅಗಾಧತೆಯ ಅರಿವನ್ನು ಪಡೆಯುತ್ತ ಪ್ರೀತಿಸುವುದು.

(ಸಂದರ್ಶಕ : ಸಿದ್ದರಾಮ ಪೂಜಾರಿ, ಕೃಪೆ : ಕಸ್ತೂರಿ, ಜುಲೈ 1989)

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...