'ಹುಲಿ ಹೆಜ್ಜೆ' ಹೆಸರೇ ಹೇಳುವಂತೆ ರೋಚಕ ಕಾದಂಬರಿ


‘ಇದು ಒಂದು ಅಪರಾಧ ತನಿಖೆಯ ಕಥೆಯಾದರೂ, ಸಾಮಾಜಿಕ ಆಗುಹೋಗುಗಳನ್ನು ಚರ್ಚೆಗೆ ಗುರಿಯಾಗಿಸುವ ಕಥೆ ಎನ್ನುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ’ ವಾಸುದೇವ್ ಮೂರ್ತಿ ಪಿ. ಅವರು ‘ಹುಲಿ ಹೆಜ್ಜೆ’ ಕಾದಂಬರಿ ಕುರಿತು ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.

"ಹುಲಿ ಹೆಜ್ಜೆ” ಹೆಸರೇ ಹೇಳುವಂತೆ ಇದೊಂದು ರೋಚಕ ಕಥಾವಸ್ತು ಹೊಂದಿರುವ ಕಾದಂಬರಿ. ತರಂಗ ವಾರಪತ್ರಿಕೆಯಲ್ಲಿ ಸುಮಾರು 25 ವಾರಗಳು ಧಾರಾವಾಹಿಯಾಗಿ ಪ್ರಕಟವಾಗಿ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದ ಕಾದಂಬರಿ. ಇದು ನನ್ನ ನಾಲ್ಕನೆಯ ಪುಸ್ತಕ. ಮೊದಲ ಮೂರು ಪುಸ್ತಕಗಳಾದ “ದಿ ಪರ್ಫೆಕ್ಟ್ ಮರ್ಡರ್”, “ಪಾತಾಳಗರಡಿ” ಮತ್ತು “ದಾಳ'ಗೆ ಪ್ರೋತ್ಸಾಹ ನೀಡಿ ಆಶೀರ್ವದಿಸಿದ್ದ ನೀವು ಈ ಪ್ರಯತ್ನವನ್ನೂ ಸ್ವೀಕರಿಸುವಿರೆಂದು ನಂಬಿದ್ದೇನೆ.

ಮನುಷ್ಯನ ಜೀವನದ ಗುರಿಯನ್ನು, ಅವನ ಅನುಭವಗಳು, ಅವನ ಬಯಕೆಗಳು ಮತ್ತು ಅವನ ವಿಚಾರಧಾರೆಗಳು ನಿರ್ಧರಿಸುತ್ತವೆ. ಇದರಲ್ಲಿ ಸರಿ- ತಪ್ಪುಗಳ ತರ್ಕವಿರುವುದಿಲ್ಲ. ಯಾಕೆಂದರೆ ಅಲ್ಲಿ ಅವನ ಗುರಿಗೆ ಅವನದ್ದೇ ಆದ ಕಾರಣಗಳು ಇರುತ್ತವೆ. ಆದರೆ, ಅವನ ಆ ಗುರಿಯೆಡೆಗಿನ ದಾರಿ ಸಮಾಜದ ವ್ಯವಸ್ಥೆಯ ಭಾಗವಾಗಿರಬೇಕೇ ಹೊರತು ಮಾರಕವಾಗಿರಬಾರದು. ಆ ಸರಿ- ತಪುಗಳನ್ನು ತಿಳಿಸುವವರ್ಯಾರು? ಅದು ಲೇಖಕನ ಕೆಲಸವಲ್ಲ ಲೇಖಕನ ಕೆಲಸ ಆ ಎರಡೂ ಮುಖಗಳನ್ನು ಪರಿಚಯಿಸುವುದು. ಕಾದಂಬರಿಕಾರನಾಗಿ ನಾನು ಇಲ್ಲಿ ವಹಿಸಿರುವ ಪಾತ್ರವೂ ಅಷ್ಟೇ .

'ಹುಲಿ ಹೆಜ್ಜೆ' ರಾಚೇನಹಳ್ಳಿ ಎನ್ನುವ ಒಂದು ಪುಟ್ಟ ಗ್ರಾಮದಲ್ಲಿ ನಡೆದ ಒಂದು ಡಬಲ್ ಮರ್ಡರ್ ನಿಂದ ಪ್ರಾರಂಭವಾಗುವ ಕಥೆ. ಈ ಕೊಲೆ ತನ್ನ ಕದಂಬ ಬಾಹುಗಳನ್ನು ವಿಸ್ತರಿಕೊಂಡು, ಒಂದು ಮಹಾ ವಿಪ್ಲವದತ್ತ ಕರೆದೊಯ್ಯುವ ಕಥೆ. ಇದು ಒಂದು ಅಪರಾಧ ತನಿಖೆಯ ಕಥೆಯಾದರೂ, ಸಾಮಾಜಿಕ ಆಗುಹೋಗುಗಳನ್ನು ಚರ್ಚೆಗೆ ಗುರಿಯಾಗಿಸುವ ಕಥೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ವಿಶಿಷ್ಟ ಕಾದಂಬರಿ ನಿಮಗೆ ಹಿಡಿಸುವುದೆಂದು ನಂಬಿದ್ದೇನೆ.

'ಒಂದು ಕಾದಂಬರಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅದು ತನ್ನನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ' ಎಂಬುದು ಇಂಗ್ಲೀಷ್ ಲೇಖಕರರೊಬ್ಬರ ನುಡಿ. ಈ ಕಾದಂಬರಿ ಬರೆಯುವಾಗ ನನಗೆ ಕೂಡಾ ಇದೇ ಅನುಭವವಾಗಿದೆ. ಈ ಕಾದಂಬರಿಯನ್ನು, ಈಗ ಪುಸ್ತಕ ರೂಪದಲ್ಲಿ ನಿಮ್ಮ ಕೈಗೆ ತಲುಪಿಸುತ್ತಿರುವ ಹರಿವು ಪ್ರಕಾಶನದ ತಂಡಕ್ಕೆ ನನ್ನ ಹೃತ್ತೂರ್ವಕ ನಮನಗಳು. ನನ್ನ ಕಥೆ, ಕಾದಂಬರಿಗಳನ್ನು ಓದಿ, ಪ್ರೋತ್ಸಾಹಿಸಿ ಬೆಳೆಸಿದ ನನ್ನ ಓದುಗ ದೊರೆಗಳಿಗೂ ಈ ಮೂಲಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.

ನನ್ನ ನಾಲ್ಕನೇ ಕೂಸು, ಕನಸು ನಿಮ್ಮ ಮುಂದಿದೆ. ನಿಮ್ಮ ಅಭಿಪ್ರಾಯಗಳನ್ನು ಅರಿಯಲು ಕಾತುರದಿಂದಿದ್ದೇನೆ. ಒಂದು ರಿವ್ಯೂ, ಒಂದು ಮೆಸೇಜ್ ಅಥವಾ ಒಂದು ಸಣ್ಣ ಕಾಲ್ ನನ್ನನ್ನು ಇನ್ನಷ್ಟು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ.

ವಂದನೆಗಳೊಂದಿಗೆ

-ವಾಸುದೇವ್ ಮೂರ್ತಿ ಪಿ.

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...