ಕಾಡಿನ ಜೊತೆಗಿದ್ದ ಒಡನಾಟದ ನೆನಪುಗಳ ಸಂಕಲನ ‘ಕಾಡು ಕಾಡ್ತು’


"ಯಾವುದೋ ಒಂದು ಮರದ ಕೈಗೆಟಕುವ ಕೊಂಬೆ ಹತ್ತಿ ಕೂತು, ಕೈಲೊಂದು ಪುಸ್ತಕ ಹಿಡಿದು, ಚಿಲಿಪಿಲಿ ಹಕ್ಕಿಗಳ ಕೂಗು ಆಲಿಸುತ್ತಾ ಹಗಲುಗನಸಿನ ಲೋಕದಲ್ಲಿ ಕಳೆದುಹೋಗುತ್ತಿದ್ದ ಆ ಕ್ಷಣಗಳು ಆನಂದದ ತುರೀಯಾವಸ್ಥೆಯ ಕ್ಷಣಗಳೇ ಸೈ. ಅಂಥದ್ದೊಂದು ದಿವ್ಯಾನುಭೂತಿಯನ್ನು ದಿನದಿನ ದಯಪಾಲಿಸುತ್ತಿದ್ದ ಹನುಮಾಪುರದ ಪರಿಸರ, ಸುತ್ತಲಿನ ಕಾಡು ಹಾಗೂ ಅವುಗಳ ಜೊತೆಗಿದ್ದ ನನ್ನ ಒಡನಾಟದ ನೆನಪುಗಳ ಸಂಕಲನ ಇದು," ಎನ್ನುತ್ತಾರೆ ರೇಖಾ ಹೆಗಡೆ ಬಾಳೇಸರ. ಅವರು ತಮ್ಮ `ಕಾಡು ಕಾಡ್ತು' ಕೃತಿಗೆ ಬರೆದ ಲೇಖನವಿದು.

ನಾನು ಬಾಲ್ಯದ ಮೊದಲಾರು ವರ್ಷಗಳನ್ನು ಕಳೆದ ಹನುಮಾಪುರ, ಉತ್ತರ ಕನ್ನಡದ ಮುಂಡಗೋಡು ತಾಲ್ಲೂಕಿನ ಒಂದು ಕುಗ್ರಾಮ. ಆ ಸಮಯದಲ್ಲಿ ವಿದ್ಯುತ್, ಟಾರು ರಸ್ತೆ, ಬಸ್ ಸಂಪರ್ಕ ಏನನ್ನೂ ಕಾಣದ, ಶಾಲೆಯಿದ್ದೂ ಉತ್ತಮ ಶಿಕ್ಷಕರಿಲ್ಲದ ಕಾಡು ಹಳ್ಳಿ, ಹೇರಳ ಜನಸಂಖ್ಯೆ, ಧಾರಾಳ ಬಡತನ, ಅನಕ್ಷರತೆ- ಇವಿಷ್ಟೇ ಆಗ ಆ ಊರಿನ ಆಸ್ತಿ. ಅಂಥ ಪರಿಸರದ ಊರಿನಿಂದ ಸುಮಾರು ಒಂದು ಮೈಲು ದೂರದ ದೇವಗುಂಡಿ ಎಂಬಲ್ಲಿ ನಮ್ಮ ಒಂಟಿ ಮನೆ ಮತ್ತು ಜಮೀನು. ದೇವಗುಂಡಿಯಲ್ಲಿ ವಾಸವಿದ್ದರೂ, ನಮ್ಮ ಮನೆಯನ್ನು ನಾವು ಹನುಮಾಪುರದ ವಿಸ್ತರಣೆ ಎಂದೇ ಗುರುತಿಸುತ್ತಿದ್ದೆವು.

ಅಷ್ಟು ಜನಸಂಪರ್ಕ ಬಿಟ್ಟರೆ ಉಳಿದಂತೆ ಕಾಡು, ಕಾಡು ಮತ್ತು ಎಲ್ಲೆಲ್ಲೂ ಕಾಡು. ಮನೆಯ ಎದುರಿದ್ದ ದೇವಗುಂಡಿ ಕೆರೆ, ಅದಕ್ಕೆ ತಾಗಿ ಇದ್ದ ಒಂದಿಷ್ಟು ಗದ್ದೆ ಬಯಲು, ಸುಮಾರು ಒಂದೂವರೆ ಮೈಲು ದೂರದಲ್ಲಿ ಕಾಡ ನಡುವಲ್ಲಿದ್ದ ಮಾಸ್ತಮ್ಮನ ಗುಡಿ ಮತ್ತು ಅದರ ಹೆಸರನ್ನೇ ಹೊತ್ತ ಸನಿಹದ ಹಳ್ಳ, ಕೂಲಿ ಕೆಲಸಕ್ಕೆ ಬರುತ್ತಿದ್ದ ಊರಿನ ಜನ, ಮನೆಯ ಸದಸ್ಯರಾಗಿದ್ದ ದನಕರುಗಳು, ನಾಯಿ ಬೆಕ್ಕುಗಳು- ಇವೆಲ್ಲ ನಮ್ಮ ಒಡನಾಟದ ಅವಿಭಾಜ್ಯ ಅಂಗಗಳಾಗ. ಇವಷ್ಟೇ ಅಲ್ಲದೇ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಬದುಕಿನೊಂದಿಗೆ ತಳಕು ಹಾಕಿಕೊಂಡಿದ್ದ ಹುಲಿ, ಕಿರುಬ, ಆನೆ, ಹಂದಿ, ಮಂಗಗಳಂತಹ ಕಾಡು ಪ್ರಾಣಿಗಳೂ ಅನಿವಾರ್ಯ ಒಡನಾಡಿಗಳೇ ಆಗಿದ್ದವು.

ಇಲ್ಲಿ ನಾವು ಎಂದರೆ ನಾನು, ಅಪ್ಪ-ಅಮ್ಮ, ನನಗೆ ಚಿಕ್ಕಪ್ಪನಂತಿದ್ದ ಗೋಪಾಲಣ್ಣ, ಆತನ ಪತ್ನಿ ಗೌರತ್ತಿಗೆ ಮತ್ತು ಅಕ್ಟೋಬರ್, ಮೇ ರಜೆಗಳಲ್ಲಿ ನಮ್ಮನ್ನು ಸೇರಿಕೊಳ್ಳುತ್ತಿದ್ದ ಅಣ್ಣ-ಅಕ್ಕ. ಮುಂದೆ ಶಾಲೆಗೆ ಸೇರಿ ವಲಸೆ ಹಕ್ಕಿಯಾದ ನಾನೂ ಅಣ್ಣ-ಅಕ್ಕನವರಂತೆ ರಜಾಕಾಲದ ವಿದ್ಯಮಾನವಾದೆ. ಸುಮಾರು ಮೂವತ್ತಾರು ವರ್ಷ ಹನುಮಾಪುರದಲ್ಲಿ ಜೀವನ ಮಾಡಿದ ಅಪ್ಪ, ಈಗೊಂದು ಹತ್ತು ವರ್ಷಗಳ ಹಿಂದೆ ಅನಿವಾರ್ಯ ಕಾರಣಗಳಿಂದ ಅಲ್ಲಿಯ ಜಮೀನು ಮಾರಿ, ತನ್ನ ಹುಟ್ಟೂರಾದ ಸಿದ್ದಾಪುರ ತಾಲ್ಲೂಕಿನ ಬಾಳೇಸರಕ್ಕೆ ವಾಪಸ್ಸಾಗಿದ್ದಾನೆ. ಹನುಮಾಪುರದಿಂದ ದೂರವಾಗಿ ಎಷ್ಟೇ ಕಾಲವಾದರೂ, ಬಿಟ್ಟು ಬರುವ ಮುನ್ನ ಕಟ್ಟಿಕೊಂಡು ಬಂದ ಬುತ್ತಿ ನೆನಪುಗಳು ಇನ್ನೂ ತಾಜಾ ಇವೆ. ಬಾಲ್ಯದ ವಿವಿಧ ಹಂತಗಳಲ್ಲಿ ಅಲ್ಲಿನ ಪರಿಸರದ ಜೊತೆ ನಡೆಸಿದ ಗುದುಮುರಿಗೆ, ಗೆಳೆತನಗಳ ನೆನಪೆಲ್ಲ ಇಂದಿನ ಧಾವಂತದ ಬದುಕಿನಲ್ಲೂ ಮಳೆಗಾಲದ ಹಬ್ಬಗಳಂತೆ ಪದೇ ಪದೆ ಎದುರಾಗಿ ತನಿಸು ಉಣಿಸುತ್ತಿವೆ. ನನ್ನೊಳಗಿನ ಬರಹಗಾರ್ತಿಯನ್ನು ಕಟ್ಟಿದ ಪ್ರೋಟಿನ್‌ಗಳು ಅವು.

ಅಡವಿಯೆಂದರೆ ಅದೇನು ಹುಚ್ಚೋ... ನನ್ನ ಬಾಲ್ಯ, ಹದಿಹರೆಯ ದಿನಗಳಲ್ಲಿ ಪುಸ್ತಕಗಳನ್ನು ಬಿಟ್ಟರೆ ನಾನು ಅತಿಹೆಚ್ಚು ಪ್ರೀತಿಸಿದ್ದು ಅಡವಿಯನ್ನು. ಮುಗಿಲಿಗೆ ಏಣಿ ಚಾಚುವ ಸಾಗವಾನಿ, ಮತ್ತಿ, ಹೆದ್ದೇಗ, ಬೀಟೆ ಮರಗಳು, ಗಾಳಿ ಬೀಸಿದಾಗೆಲ್ಲ ಒಂಥರಾ 'ಸುಂಯ್' ಎಂದು ಸದ್ದು ಮಾಡುವ ಬಿದಿರು ಮಟ್ಟಿಗಳು, ಆ ಮಟ್ಟಿಗಳ ಬುಡದಲ್ಲಿ ಬಿದ್ದಿರುತ್ತಿದ್ದ ಪುಟ್ಟ ಪುಟ್ಟ ನವಿಲು ಗರಿಗಳು, ನುಣ್ಣನೆ ನುಣುಪಿನ ನಂದಿ- ಬಿರು ಬಿರುಸಿನ ಮತ್ತಿ ಮರಗಳು, ಕಾಡುಹಣ್ಣುಗಳನ್ನು ಎತ್ತಿ ಒಗೆದು ಕೊಕ್ಕಿನಲ್ಲಿ ಕ್ಯಾಚ್ ಮಾಡುತ್ತಿದ್ದ ಕೊಕ್ಕಾನಕ್ಕಿ (ಮಂಗಟ್ಟೆ)ಗಳು, ಚಂದದ ತೊಗಲಿನ ಕ್ಯಾಸಳಿಲು (ಮಲಬಾರ್ ಅಳಿಲು)... ಒಂದೊಂದು ಸ್ಪರ್ಶ, ಒಂದೊಂದು ಗಾನ, ಒಂದಿನಿತು ಮೌನ ಎಲ್ಲ ನನ್ನೊಳಗಿನ ಅಂತರ್ಮುಖಿ ಜೀವವನ್ನು ಬೆಚ್ಚಗೆ ತಬ್ಬಿಕೊಂಡ ಭಾವಗಳು. ನಾನು ಆಡದ ಮಾತುಗಳನ್ನು ಹಾಡದ ಹಾಡನ್ನು ಒಂದು ಸೊಲ್ಲೂ ಬಿಡದೇ ಸಂಪೂರ್ಣ ಕೇಳಿಸಿಕೊಂಡವು ನನ್ನೂರ ಕಾಡು, ಮರ, ಕೆರೆ, ಕಲ್ಲುಗಳು.

ಯಾವುದೋ ಒಂದು ಮರದ ಕೈಗೆಟಕುವ ಕೊಂಬೆ ಹತ್ತಿ ಕೂತು, ಕೈಲೊಂದು ಪುಸ್ತಕ ಹಿಡಿದು, ಚಿಲಿಪಿಲಿ ಹಕ್ಕಿಗಳ ಕೂಗು ಆಲಿಸುತ್ತಾ ಹಗಲುಗನಸಿನ ಲೋಕದಲ್ಲಿ ಕಳೆದುಹೋಗುತ್ತಿದ್ದ ಆ ಕ್ಷಣಗಳು ಆನಂದದ ತುರೀಯಾವಸ್ಥೆಯ ಕ್ಷಣಗಳೇ ಸೈ. ಅಂಥದ್ದೊಂದು ದಿವ್ಯಾನುಭೂತಿಯನ್ನು ದಿನದಿನ ದಯಪಾಲಿಸುತ್ತಿದ್ದ ಹನುಮಾಪುರದ ಪರಿಸರ, ಸುತ್ತಲಿನ ಕಾಡು ಹಾಗೂ ಅವುಗಳ ಜೊತೆಗಿದ್ದ ನನ್ನ ಒಡನಾಟದ ನೆನಪುಗಳ ಸಂಕಲನ ಇದು.

ಮೊದಲ ಹೊತ್ತಿಗೆ ಹೊರಬರುತ್ತಿರುವ ಈ ಹೊತ್ತಿನಲ್ಲಿ ನನ್ನ ಬರವಣಿಗೆಯ ಯಾನದಲ್ಲಿ ಸ್ಫೂರ್ತಿಯಾಗಿ, ಗುರುಗಳಾಗಿ, ದಾರಿ ತೋರಿ ನಿಂತವರನ್ನು ಸ್ಮರಿಸಲಿಚ್ಛಿಸುತ್ತೇನೆ. ಎಳವೆಯಿಂದಲೇ ಪುಸ್ತಕ ಪ್ರೀತಿಯನ್ನು ಬೆಳೆಸಿದ ಅಪ್ಪ-ಅಮ್ಮ, ಬರವಣಿಗೆಯ ರುಚಿ ಹತ್ತಿಸಿ ಮಾರ್ಗದರ್ಶನ ಮಾಡಿದ ಹಿರಿಯ ಪತ್ರಕರ್ತ ಶ್ರೀ ನಾಗೇಶ ಹೆಗಡೆಯವರು, ಪತ್ರಿಕೋದ್ಯಮದ ಅಆಇಈ ಕಲಿಸಿದ ಗುರುಗಳಾದ ಶ್ರೀ ವಿಶ್ವೇಶ್ವರ ಭಟ್ಟರು, ಉದ್ಯೋಗ ನೀಡಿದ್ದಲ್ಲದೇ ನನ್ನ ಲೇಖನಗಳನ್ನು ಪ್ರಕಟಿಸಿ, ಪ್ರೋತ್ಸಾಹಿಸಿದ 'ಪ್ರಜಾವಾಣಿ' ಬಳಗ, ಈ ಪುಸ್ತಕವನ್ನು ಸುಂದರವಾಗಿ ಪ್ರಕಟಿಸುವ ಮೂಲಕ ನನ್ನ ಬಹುದಿನದ ಕನಸನ್ನು ನನಸು ಮಾಡುತ್ತಿರುವ 'ಬಹುರೂಪಿ' ಪ್ರಕಾಶನ ಮತ್ತು ಶ್ರೀ ಜಿ.ಎನ್.ಮೋಹನ್ ಸರ್ ಹಾಗೂ ನನ್ನೆಲ್ಲ ಬರಹಗಳ ಮೊದಲ ಓದುಗ ಕಮ್ ವಿಮರ್ಶಕರಾದ ಪತಿ ಶ್ರೀ ಜಯರಾಮ್ ಹೆಗಡೆ ಅವರಿಗೆ ನಾನು ಚಿರಋಣಿ. ನನಗೆ ಸಲಹೆಗಳನ್ನು ನೀಡಿ, ಬರಹಗಳನ್ನು ಬರೆಸಿ, ಓದಿ ಬೆನ್ನುತಟ್ಟಿದವರ ಪಟ್ಟಿ ದೊಡ್ಡದಿದೆ. ಅವರಿಗೆಲ್ಲ ನನ್ನ ಮನಸ್ಸಿನಲ್ಲಿ ದೊಡ್ಡ ಜಾಗವಿದೆ.

- ರೇಖಾ ಹೆಗಡೆ ಬಾಳೇಸರ

 

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...