ಕಾಡುಪಯಣದ ಅನೇಕ ವಿಚಾರಗಳನ್ನು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ: ರಾಜು ಹಗ್ಗದ


'ಕಾಡಿನ ಕೃತಿಗಳೆಂದರೆ ಓದಲೂ ಖುಷಿ. ಸ್ವಾಮಿ ಪೊನ್ನಾಚಿ ಅವರ ಬರಹಗಳು ಕೂಡ ಕಾಡಿನ ಕುರಿತಾದ ಅವರ ಅದಮ್ಯ ಉತ್ಸಾಹ ಮತ್ತು ಅಲ್ಲಿನ ಜನಜೀವನದ ಬದುಕನ್ನು ಹಾಸು ಹೊಕ್ಕಾಗಿ ಬೆರೆತು, ಅಲ್ಲಿನ ಜೀವನವನ್ನು ಕಲ್ಪನೆಗಳಿಗೆ ಅವಕಾಶಗಳಿಲ್ಲದಂತೆ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ'  ಎನ್ನುತ್ತಾರೆ ರಾಜು ಹಗ್ಗದ ಅವರು ಅಮೂಲ್ಯ ಪುಸ್ತಕ ಪ್ರಕಟಿಸಿರುವ ಸ್ವಾಮಿ ಪೊನ್ನಾಚಿ ಅವರ 'ಕಾಡು ಹುಡುಗನ ಹಾಡು ಪಾಡು' (ಅನುಭವ ಕಥನ) ಕುರಿತು ಬರೆದ ಅರ್ಥಪೂರ್ಣ ವಿಮರ್ಶೆ ಇಲ್ಲಿದೆ. 

ಬಹುದಿನಗಳ ನಂತರ ಕಾಡಿನ ಪಯಣ ಬೆಳೆಸಿದಷ್ಟೆ ಖುಷಿಯಾಯ್ತು. ಕಾಡು, ಅಲ್ಲಿನ ವನ್ಯಜೀವಿಗಳು, ಅಲ್ಲಿನ ಬುಡಕಟ್ಟು ಜನಾಂಗದ ಬದುಕು, ಕಾಡಿನ ಬದುಕು ಬವಣೆಗಳ ಕುರಿತಂತೆ ಬಹಳಷ್ಟು ಕೃತಿಗಳು ಬಂದಿವೆ. ಅಂತಹ ಕೃತಿಗಳ ಸಾಲಿಗೆ ಲೇಖಕರ ಈ ಕೃತಿ ಸೇರುತ್ತದೆ. ಕಾಡಿನ ಜನರ ಜನಜೀವನ ಅಲ್ಲಿನ ಬದುಕು, ರಾಜಕೀಯ ಜೀವನ, ಸಾಂಸ್ಕೃತಿಕ ಜೀವನಗಳನ್ನು ಒಳಗೊಂಡ ಬರಹಗಳು ಓದುಗರನ್ನು ಆವರಿಸಿಕೊಂಡು ಪುಸ್ತಕ ಓದುವಂತೆ ಮಾಡುತ್ತದೆ. ಕಾಡಿನ ಪರಿಸರದ ಜೊತೆಗಿರುವ ಬದುಕಿನ ಅನುಭವದ ಕಥನಗಳು ಈ ಕೃತಿಯಲ್ಲಿ ಹೇರಳವಾಗಿರುವುದರಿಂದ ಸ್ವಾಮಿ ಪೊನ್ನಾಚಿಯವರ ಕಾಡು ಹುಡುಗನ ಹಾಡು ಪಾಡು ಕೃತಿ ಓದುಗರನ್ನು ಬಹುಬೇಗ ಸೆಳೆದಿಟ್ಟುಕೊಳ್ಳುತ್ತದೆ.

ನಾನು ಮೊದಲು ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳನ್ನು ಓದಿದಾಗ ಕಾಡು ಅದೆಷ್ಟು ನಿಗೂಢ ಅನಿಸಿತ್ತು. ಕಾಡಿನ ಕೃತಿಗಳೆಂದರೆ ಓದಲೂ ಖುಷಿ. ಸ್ವಾಮಿ ಪೊನ್ನಾಚಿ ಅವರ ಬರಹಗಳು ಕೂಡ ಕಾಡಿನ ಕುರಿತಾದ ಅವರ ಅದಮ್ಯ ಉತ್ಸಾಹ ಮತ್ತು ಅಲ್ಲಿನ ಜನಜೀವನದ ಬದುಕನ್ನು ಹಾಸು ಹೊಕ್ಕಾಗಿ ಬೆರೆತು, ಅಲ್ಲಿನ ಜೀವನವನ್ನು ಕಲ್ಪನೆಗಳಿಗೆ ಅವಕಾಶಗಳಿಲ್ಲದಂತೆ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಓದುತ್ತಾ ಸಾಗಿದಂತೆ ನಾವೂ ಪ್ರತಿ ಪಾತ್ರದೊಂದಿಗೆ ಕಾಡಿನಲ್ಲಿ ಕುತೂಹಲದಿಂದ ಹಾಗೂ ತುಂಬಾ ಖುಷಿಯಿಂದ ನಾವು ಹೊರಟು ಬಂದ ಅನುಭವ ನಮ್ಮದಾಗುತ್ತದೆ. ಕಾಡುಪಯಣದ ಅನೇಕ ವಿಚಾರಗಳನ್ನ ತಮ್ಮ ಲೇಖನಗಳಲ್ಲಿ ಚಿತ್ರಿಸುತ್ತಾ ಹೋಗಿದ್ದಾರೆ. 

ಒಟ್ಟು 17 ಲೇಖನಗಳ ಅನುಭವಕಥನವಿದ್ದು  ಆರಂಭದ ಬಹಳಷ್ಟು ಲೇಖನಗಳು ಕಾಡಿನ ಪಯಣ, ಅಲ್ಲಿನ ಜನರ ಬದುಕಿನ ರೀತಿ, ಕಾಡುಪ್ರಾಣಿಗಳ ಹಾವಳಿ, ಅಲ್ಲಿ ಅಂದು ಕಾರ್ಯನಿರ್ವಹಿಸಿದ ಪೊಲೀಸರ ಕಾರ್ಯವೈಖರಿ, ಪೊಲೀಸರು ಜನರೊಂದಿಗೆ ಬೆರೆಯುವ ರೀತಿ, ಸೊಲ್ಲಿಗರ ಬದುಕಿನ ರೀತಿ, ಕಾಡುಪ್ರಾಣಿಗಳ ಬದುಕಿನ ರೀತಿಯನ್ನು ಕಾಣಬಹದು. ಲೇಖನಗಳನ್ನು ಓದುತ್ತಾ ಓದುತ್ತಾ ಕಾಡಿನೊಂದಿಗೆ ನಾವು ಕೂಡ  ಒಂದು ಸುತ್ತು ಹಾಕಿಬಂದ ಅನುಭವ ನಮ್ಮದಾಗುತ್ತದೆ.

ಬಿಳಿಗಿರಿ ಬನದ ದೊರೆ ಎಂಬ ಲೇಖನದಲ್ಲಿ ತಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಾಗಿದ್ದಾರೆ.  ಮಾರಿಸ್ ಎಂಬ ಬ್ರಿಟಿಷ್ ಅಧಿಕಾರಿಯ ಕುರಿತಾದ ಅಲ್ಲಿನ ಜನರ ಮನೋಭಾವ ಹಾಗೂ ಅವರು ಇವತ್ತಿಗೂ ನೆನೆಯುವ ಪರಿಗೆ  ಅವರ ಕಾರ್ಯವೈಕರಿ ಹಾಗೂ ಅವರು ಅಲ್ಲಿನ ಜನರಿಂದ ಗಳಿಸಿಕೊಂಡ ಪ್ರೀತಿ ವಿಶ್ವಾಸಗಳನ್ನ ಇಲ್ಲಿ ಕಾಣಬಹುದು. ಇನ್ನೂ ಬಹಳಷ್ಟು ಲೇಖನಗಳು ತಮ್ಮ ಅನುಭವದ ಮೂಸೆಯಲ್ಲಿ ತಮ್ಮ ಬಾಲ್ಯದ ನೆನಪುಗಳು  ಅಲ್ಲಿನ ಆಡು ಭಾಷೆಯ ಜೊತೆಗೆ ತುಂಬಾ ಸೊಗಸಾಗಿ ಹೇಳಿದ್ದಾರೆ. 

ಪುಸ್ತಕದ ಒಟ್ಟಾರೆ ಲೇಖನಗಳನ್ನು ಗಮನಿಸಿದಾಗ ಆರಂಭದ ಬಹಳಷ್ಟು ಲೇಖನಗಳು ಓದುಗರನ್ನು ಹಿಡಿದುಕೊಳ್ಳುವಂತೆ ಮಾಡುತ್ತವೆ. ನನಗೂ ಕೂಡ ಹಾಗೆ ಆಯ್ತು. ಎಲ್ಲೋ ತೇಜಸ್ವಿ ಸಿಕ್ಕರೂ ಎಂಬ ಭಾವ ಮನದೊಳಗೆ ಬಂದು ಸಂಭ್ರಮಿಸಿದ್ದು ಉಂಟು. ಅರ್ಧ ಭಾಗ ಮುಗಿದ ನಂತರ ಮುಂಬರುವ ಒಂದಿಷ್ಟು ಲೇಖನಗಳು ತಮ್ಮ ಬಾಲ್ಯದ ಬದುಕಿನ ಕಥಾನಕಗಳಾಯಾಗಿದ್ದರು ಕೂಡ ಅಲ್ಲಿನ ಬದುಕಿನ ರೀತಿ ನೀತಿಗಳು, ಅಲ್ಲಿನ ಜನರ ಒಡನಾಟದೊಂದಿಗೆ ಬೆಳೆದ ಬದುಕಿನ ಕಥಾಹಂದರಗಳನ್ನು ತುಂಬಾ ಸೊಗಸಾಗಿ ಬಿತ್ತುತ್ತ ಸಾಗಿದ್ದಾರೆ.

ಅನುಭವ ಕಥನಗಳೇ ಹಾಗೆ ನಾವು ಓದುತ್ತಾ ಸಾಗಿದಂತೆ ನಮ್ಮ ಬದುಕಿನ ಪಯಣವು ಅದರೊಟ್ಟಿಗೆ ಸಾಗುತ್ತಾ ನಮ್ಮ ಬದುಕಿನ ಬಾಲ್ಯದ ನೆನಪುಗಳು ಕೂಡ  ಪುಸ್ತಕ ಓದುತ್ತ ಸಾಗಿದಂತೆ ಬಂದು ಹೋಗುತ್ತವೆ. ನಮ್ಮ ಬಾಲ್ಯಕ್ಕೂ ಅವರ ಬಾಲ್ಯಕ್ಕೂ ಬಹಳಷ್ಟು ಸಾಮ್ಯತೆಗಳೇನು ಇಲ್ಲದಿದ್ದರೂ ಕೂಡ ಲೇಖಕರು ಬಾಲ್ಯವನ್ನು ಕಾಡಿನೊಟ್ಟಿಗೆ ಬೆಸೆದುಕೊಂಡ ಪರಿಗೆ ನಾನು ಬೆರಗಾಗಿದ್ದೆನೆ. ಲೇಖಕರು ತಮ್ಮ ವಯೋಮಾನದವರಲ್ಲದ ಮಕ್ಕಳೊಟ್ಟಿಗೆ ಈಜಾಟಕ್ಕೆ ಹೊರಡುವುದು,  ತಮ್ಮ ತಂದೆಯವರಿಗೆ ಪತ್ರಗಳನ್ನ ಬರೆದು ಅಂಜಿಸುವುದು,  ಹೀಗೆ ತಮ್ಮ ಬಾಲ್ಯದ ಬಹಳಷ್ಟು ಅನುಭವಗಳನ್ನು ಬರೆದಾಗಲೆಲ್ಲ ನಾವೂ ಕೂಡ ನಮ್ಮ ಬಾಲ್ಯದ ಕೀಟಲೆಯ ಪ್ರಸಂಗಗಳನ್ನು ನೆನೆಯುತ್ತಲೇ ಓದುತ್ತ ಸಾಗಿದ್ದು ಇದೆ. ಬಾಲ್ಯವೆಂದರೆ ಬೆರಗು. ಆ ದಿನಗಳು ಮತ್ತೆ ಬರದೆಂದು ಆದರೆ ಬರಹದ ಮೂಲಕ, ಓದಿನ ಮೂಲಕ ನಾವೆಲ್ಲ ಆ ಲೋಕವನ್ನು ಪ್ರವೇಶಿಸಿ ಬರಬಹುದು. ಅಂತಹ ಬಾಲ್ಯದ ಸೊಬಗನ್ನು, ಬೆರಗನ್ನು ತುಂಬಾ ಅಚ್ಚುಕಟ್ಟಾಗಿ ತಮ್ಮ ಲೇಖನಗಳಲ್ಲಿ ಚಿತ್ರಿಸಿದ್ದಾರೆ.

ನಗರ ಬದುಕಿಗೂ ಹಾಗೂ ಕಾಡು ಬದುಕಿಗೂ ಇರುವಂತಹ ಬಹಳಷ್ಟು ಸೂಕ್ಷ್ಮ ವಿಚಾರಗಳನ್ನು ಪ್ರತಿ ಲೇಖನದ ಮುಕ್ತಾಯಕ್ಕೆ  ಚಿತ್ರಿಸುತ್ತ ಸಾಗಿದ್ದಾರೆ. ನಗರೀಕರಣದ ಆಡಂಬರಕ್ಕೆ ಜ್ಯೋತು ಬಿದ್ದ ನಾವುಗಳೆಲ್ಲ ಗ್ರಾಮೀಣ ಸೊಗಡಿನ ಬಹಳಷ್ಟು ವಿಚಾರಗಳನ್ನ ಮರೆತು ಸಾಗುತ್ತಿದ್ದೇವೆ ಎಂಬ ನೋವನ್ನು ಅಲ್ಲಲ್ಲಿ ಹಂಚಿಕೊಳ್ಳುತ್ತಾ ಸಾಗಿದ್ದಾರೆ.

“ಪುಸ್ತಕದ ನಾಕಕ್ಷರ ಬರೆಯುವುದು ಮತ್ತು ಓದುವುದನ್ನು ಕಲಿತರೆ ಸಾಕ್ಷರರು ಎಂದುಕೊಂಡು ಉಳಿದೆಲ್ಲ ಮೂಲ ಕಸುಬನ್ನು ಮೂಲೆಗುಂಪಾಗಿಸಿರುವ ನಮ್ಮ ಶಿಕ್ಷಣ ವ್ಯವಸ್ಥೆ, ಯಾವ ರೀತಿಯಲ್ಲೂ ಸೋಲಿಗರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಹಕಾರಿಯಾಗುವುದಿಲ್ಲ.” ಎಂಬ ಅಂಶ ನಾಗರಿಕತೆಯ ಹೆಸರಿನಲ್ಲಿ, ಮುಂದುವರೆದಿದ್ದೆವೆ ಎಂಬ ಒಂದಿಷ್ಟು ಅಂಕಿಸಂಖ್ಯೆಗಳನ್ನಿಟ್ಟುಕೊಂಡು ಸಾಗುತ್ತಿರುವ ನಮಗೆ ನಮ್ಮದೇ ಬದುಕು ನಮ್ಮ ಭವಿಷ್ಯದ ರೂವಾರಿಗಳ ಬದುಕನ್ನು ಕಟ್ಟುವಲ್ಲಿ ಶಿಕ್ಷಣವನ್ನು ಹೇಗೆಲ್ಲ ತಂದು ನಿಲ್ಲಿಸಿದ್ದೆವೆ ಎಂದು ಚೂರು ಆಲೋಚಿಸಿದರೇ ಗೊತ್ತಾಗುತ್ತದೆ. ನಾವು ಮುಂದುವರೆದಿಲ್ಲ ತುಂಬಾ ಕಳೆದುಕೊಂಡು ಮುಂದೆ ನಿಂತಿದ್ದೆವೆ ಅಷ್ಟೇ ಎಂದು.  

ಅದೇ ರೀತಿಯಾಗಿ “ಒಂದು ಎಡವಟ್ಟಾಗದೆ ನೂರಾರು ಹೆರಿಗೆ ಮಾಡಿಸಿದ ಅಜ್ಜಿಯ ಮುಂದೆ ಮೊನ್ನೆ ಸ್ಕ್ಯಾನಿಂಗ್ ಮಾಡಿಸಿಕೊಂಡು ಬಂದು ಕೂತ ಮೊಮ್ಮಗಳಿದ್ದಾಳೆ. ಕಾಡನ್ನು ನಂಬಿದ್ದ ಜೀವದ ಮುಖದಲ್ಲಿ ನೆಮ್ಮದಿಯ ಛಾಯೆ ಕಂಡರೆ; ನಗರಕ್ಕೆ ಮೊರೆಹೋದ ಮುಖದಲ್ಲಿ ಚಿಂತೆಯ ಸುಕ್ಕು ಎದ್ದು ಕಾಣುತ್ತಿದೆ. ಕಾಡಿನ ಜೀವನದ ನೆಮ್ಮದಿ ಮತ್ತು ನಗರ ಬದುಕಿನ ಆತಂಕಗಳೆರಡು ಕೂಡ ಒಂದೇ ಮನೆಯಲ್ಲಿ ಮುಖಾಮುಖಿಯಾಗಿ ಕುಳಿತಿವೆ”. ಎಂಬ ಸಾಲುಗಳು ಓದುಗರನ್ನ ಕ್ಷಣ ಕಾಲ ನಮ್ಮನೇ ನಾವು ಆಲೋಚಿಸುವಂತೆ ಮಾಡುತ್ತದೆ. 

ಹೀಗೆ ನವನವೀನ ಭಾವಲಹರಿಯ ಬಾಲ್ಯದ ಲೋಕಕ್ಕೆ ನೀವು ಮರಳಲು ಹಾಗೂ ಕಾಡಿನ ಪಯಣ ಶುರು ಮಾಡಬೇಕೆ ಖಂಡಿತ ತಪ್ಪದೇ  ಈ ಕೃತಿ ಓದಿ ಆನಂದಿಸಿ

ಧನ್ಯವಾದಗಳು
-ರಾಜು ಹಗ್ಗದ

 

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಕನ್ನಡದ ಮುನ್ನೋಟ ಎಂಬುದು ನುಡಿ ಬೆಳವಣಿಗೆಯನ್ನು ಕುರಿತ ಸಂಕಥನವಾಗಿದೆ

04-05-2024 ಬೆಂಗಳೂರು

‘ಕನ್ನಡ ನುಡಿ ಬೆಳವಣಿಗೆಯನ್ನು ಕುರಿತು ಮಾತನಾಡುವುದೆಂದರೆ ಅದು ನುಡಿ ನೀತಿ ಮತ್ತು ಯೋಜನೆಯ ನಿಲುವುಗಳನ್ನು ಹೊರತು...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...