ಕಥೆಗಳು ವಿಶಿಷ್ಟ ಕಥಾ ಹಂದರದ ಮೂಲಕ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ


"ಒಟ್ಟಿನಲ್ಲಿ ಮನುಷ್ಯ ಮನುಷ್ಯನ ನಡುವಿನ ದ್ವೇಷ, ಅನುಮಾನ, ದರ್ಪ, ಅಸಹಾಯಕತೆ ಪ್ರೀತಿ, ತ್ಯಾಗ, ಒಂಟಿತನದ ನೋವು, ಎಲ್ಲವನ್ನು ಒಳಗೊಂಡಿರುವ ಇಲ್ಲಿನ ಕಥೆಗಳು ಮನಸ್ಸನ್ನು ತಣಿಸುವುದರ ಜೊತೆಗೆ ಯೋಚಿಸುವಂತೆ ಮಾಡುತ್ತದೆ," ಎನ್ನುತ್ತಾರೆ ವಾಣಿಶ್ರೀ ಕೊಂಚಾಡಿ. ಅವರು ಲೇಖಕ ವಿನಾಯಕ ಅರಳ ಸುರಳಿ ಅವರ ‘ಮರ ಹತ್ತದ ಮೀನು’ ಕೃತಿ ಕುರಿತು ಬರೆದ ವಿಮರ್ಶೆ.

ಪುಸ್ತಕದ ಹೆಸರು: ಮರ ಹತ್ತದ ಮೀನು
ಲೇಖಕರು: ವಿನಾಯಕ ಅರಳ ಸುರಳಿ
ಪ್ರಕಾಶಕರು ಸಾಹಿತ್ಯ ಲೋಕ ಪಬ್ಲಿಕೇಶನ್ಸ್
ಬೆಲೆ: 165 ರೂ/

ಲೇಖಕರ ಬಗ್ಗೆ:
ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ವಿನಾಯಕ ಅರಸುರುಳಿಯವರು ಕಾಮರ್ಸ್ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ ಇವರು ಸುಮಾರು ಎಂಟು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಹುಟ್ಟೂರಿನಿಂದಲೇ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಬರಹಗಾರರಾಗಿರುವ ಇವರು ಕವನ, ಲಲಿತ ಪ್ರಬಂಧ ಹಾಗೂ ಸಣ್ಣ ಕಥೆಗಳನ್ನು ಬರೆದಿದ್ದಾರೆ. ಇವರ ಅನೇಕ ಬರಹಗಳು 'ತುಷಾರ' 'ಮಯೂರ' 'ಮಂಗಳ' 'ಉದಯವಾಣಿ ' 'ವಿಜಯ ಕರ್ನಾಟಕ' 'ನಿಮ್ಮೆಲ್ಲರ ಮಾನಸ' ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೈಸೂರು ಅಸೋಸಿಯೇಷನ್ ಮುಂಬೈ ಇವರು 2016 ರಲ್ಲಿ ನಡೆಸಿದ 'ನೇಸರು ಜಾಗತಿಕ ಸಣ್ಣ ಕಥೆಗಳ ಸ್ಪರ್ಧೆ' ಹಾಗೂ ಇದೇ ಸಂಸ್ಥೆಯವರು 2017 ರಲ್ಲಿ ನಡೆಸಿದ 'ನೇಸರು ಜಾಗತಿಕ ಕನ್ನಡ ಕವನಗಳ ಸ್ಪರ್ಧೆ'ಯಲ್ಲಿ ಬಹುಮಾನವನ್ನು ಪಡೆದಿದ್ದಾರೆ .ಅಷ್ಟೇ ಅಲ್ಲದೆ 'ಕನ್ನಡ ಸಂಘ ಸಿಂಗಾಪುರ: ಇವರು 2017 ರಲ್ಲಿ ನಡೆಸಿದ ಸಣ್ಣ ಕಥೆಗಳ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. ಇವರ ಲಲಿತ ಪ್ರಬಂಧ ಸಂಕಲನ 'ನವಿಲುಗರಿ ಮರಿ ಹಾಕಿದೆ' 2021ರಲ್ಲಿ ಬಿಡುಗಡೆಯಾಗಿದೆ .

ಪ್ರಸ್ತುತ "ಮರ ಹತ್ತದ ಮೀನು" ಕಥಾಸಂಲನ 2023ನೇ ಸಾಲಿನ ಈ ಹೊತ್ತಿಗೆ ಪ್ರಶಸ್ತಿಯನ್ನು ಪಡೆದ ಕೃತಿಯಾಗಿದೆ.

ಈ ಕಥಾ ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಪ್ರತಿಯೊಂದು ಕಥೆಯೂ ವಿಶಿಷ್ಟ ಕಥಾ ಹಂದರದ ಮೂಲಕ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೆಲವನ್ನಷ್ಟೇ ನಾನಿಲ್ಲಿ ಪರಿಚಯಿಸುತ್ತಿದ್ದೇನೆ.

*********************************

1. ಗೋಪಿಯ ಅಜ್ಜಿ;
ಮುಗ್ಧ ಮನಸ್ಸಿನ ಹುಡುಗನೊಬ್ಬನ ಕಥೆ ಇದಾಗಿದೆ. ಗೋಪಿಯೆಂಬ ಹುಡುಗನಿಗೆ ತನ್ನ ಅಜ್ಜಿ (ತಂದೆಯ ತಾಯಿ- ಕಾವೇರಜ್ಜಿ) ಮತ್ತೆ ಮನೆಗೆ ವಾಪಸ್ ಬರುತ್ತಿದ್ದಾಳೆ ಎಂಬ ಸುದ್ದಿ ಖುಷಿ ನೀಡಿದರೆ, ಆತನ ಅಮ್ಮನ ಮುನಿಸನ್ನು ಮಾತ್ರ ದುಪ್ಪಟ್ಟು ಮಾಡುತ್ತದೆ. ಯಾಕೆಂದರೆ ನಮ್ಮ ಮನೆಯಲ್ಲೇ ಇದ್ದ ಅಜ್ಜಿಯನ್ನು ತಾವೇ ಸಾಕುತ್ತೇವೆ ಎಂದು ಕರೆದೊಯ್ದು ಇದೀಗ ಹುಷಾರು ತಪ್ಪಿದ ಅಜ್ಜಿಯನ್ನು ಮತ್ತೆ ಇಲ್ಲಿ ಬಿಟ್ಟು ಹೋದ ದೊಡ್ಡಪ್ಪ ದೊಡ್ಡಮ್ಮನ ಈ ನಡೆ ಆಕೆಗೆ ಸಿಟ್ಟು ತರಿಸಿರುತ್ತದೆ. ಅಲ್ಲದೆ ಅತ್ತೆ ದೇಹ ಬಲವಿದ್ದಾಗ ತನಗೆ ಮಾಡಿದ ಮಾನಸಿಕ ಶೋಷಣೆ ಇನ್ನೂ ಆಕೆಗೆ ಮಾಗದ ಗಾಯವಾಗಿ ಉಳಿದಿದೆ. ಈ ಹಿರಿಯರ ಕೋಪ, ಅದಕ್ಕಿರುವ ಕಾರಣಗಳು ಗೋಪಿಯ ಮುಗ್ಧ ಮನಸ್ಸಿಗೆ ಅಲ್ಪಸ್ವಲ್ಪ ತಿಳಿದರೂ ಅದರ ಆಳವನ್ನು ಅರಿಯುವ ವಯಸ್ಸು ಆತನದ್ದಲ್ಲ. ಅಜ್ಜಿ ಎಂದರೆ ಆತನಿಗೆ ಪ್ರೀತಿ. ಈ ಹಿಂದೆ ಇದೇ ಅಜ್ಜಿ ದೊಡ್ಡಪ್ಪ ದೊಡ್ಡಮ್ಮ ಜೊತೆ ಸೇರಿ ಅಮ್ಮನ ಮೇಲೆ ಹರಿಹಾಯ್ದಾಗ, ಅಮ್ಮ ಅತ್ತು ತನ್ನ ತಬ್ಬಿ ಮಲಗಿದಾಗ 'ಅಮ್ಮ ಪಾಪ' ಅನಿಸುತ್ತಿದ್ದುದೂ ನಿಜವೇ. ಆದರೆ ಇದೀಗ ಪ್ರಾಯವಾಗಿ ಮೊದಲಿನಂತೆ ನಡೆಯಲಾಗದ ಅಳುವ ಅಜ್ಜಿಯನ್ನು ನೋಡಲು ಗೋಪಿಗೆ ಬೇಸರವಾಗುತ್ತಿತ್ತು. ಅಜ್ಜಿ, ತನ್ನನ್ನು ನೋಡಲು ಬಂದವರೆಲ್ಲಾ ಕೊಟ್ಟ ತಿಂಡಿಯನ್ನು ಅಡಗಿಸಿ ತನಗೆ ಕೊಟ್ಟು ಮುದ್ದು ಮಾಡುತ್ತಿದುದಲ್ಲದೇ, ಅಮ್ಮನ ಕಣ್ಣು ತಪ್ಪಿಸಿ, ಕೊಡುತ್ತಿದ್ದ ಉತ್ತುತ್ತೆ, ಚ್ಯೂಯಿಂಗಂ, ದ್ರಾಕ್ಷಿ ಆಕೆಯ ಪ್ರೀತಿ ಆಳವನ್ನು ತಿಳಿಸುತ್ತಿತ್ತು. ಗೋಪಿಯೂ ಅಷ್ಟೇ. ಅಮ್ಮನಿಗೆ ತಿಳಿಯದಂತೆ ಅವರ ಹಣದಲ್ಲಿ ಪಕ್ಕದ ಹೋಟೆಲಿನಿಂದ ಕಾರ್ಸೇವು ಗೋಳಿಬಜೆ, ಬೋಂಡಾ ತಂದು ಕೊಡುತ್ತಿದ್ದ. ಇದೀಗ ಯಾರ ತಪ್ಪು ದೇವರೇ ಬಲ್ಲ, ಅಜ್ಜಿ ಬಂದ ದಿನದಿಂದ ಮನೆಯಲ್ಲಿ ಅಜ್ಜಿಯ ವಿಷಯವಾಗಿ ಏನೇನೋ ಕಾರಣಕ್ಕೆ ಶುರುವಾದ ಜಗಳ ಅಮ್ಮನ ಬೈಗುಳ, ಅಪ್ಪನೂ ಜೊತೆ ಸೇರಿ, ಕೊನೆಗದು ಅಜ್ಜಿಯ ಕಣ್ಣೀರಲ್ಲಿ ಕೊನೆಯಾಗುವುದನ್ನು ನೋಡುವ ಗೋಪಿಗೆ ಬೇಸರವಾಗುತ್ತಿತ್ತು.

ಮುಂದೆ ಹೈಸ್ಕೂಲಿಗೆ ದೂರದ ಊರು ಸೇರಿದ ಗೋಪಿಗೆ ಅಜ್ಜಿಯನ್ನು ಆಗಾಗ ನೋಡಲಾಗುತ್ತಿರಲಿಲ್ಲ. ಕೊನೆಗೆ ಆತ ಮನೆಗೆ ಬಂದಿದ್ದೇ ಅಜ್ಜಿಯ ಸಾವಿನ ಸುದ್ದಿ ಕೇಳಿ. ಅಜ್ಜಿಯ ಶವ ಕಂಡಾಗ, ಅಜ್ಜಿ ಹಾಗೂ ತನಗಿದ್ದ ಬಾಂಧವ್ಯದ ಎಲ್ಲಾ ಘಟನೆಗಳು ನೆನಪಾಗುವ ಗೋಪಿಗೆ ಮನಸ್ಸು ಭಾರವಾಗುತ್ತದೆ. ಕೊನೆಯಲ್ಲಿ ಅಜ್ಜಿ ಕಾರ್ಸೇವು ತಂದು ಕೊಡೆಂದು ಕೊಟ್ಟಿದ್ದ ಐದು ರೂಪಾಯಿಯ ನಾಣ್ಯ ಇನ್ನೂ ತನ್ನ ಬ್ಯಾಗಲ್ಲೇ ಇದೆ ಎಂದು ನೆನಪಾಗುವ ಗೋಪಿಗೆ ಅದನ್ನು ತೆಗೆದು ಸವರಿದಾಗ ಅಜ್ಜಿಯ ಧ್ವನಿಯೇ ಕೇಳಿದಂತಾಗುತ್ತದೆ. ಅತ್ತೆಯಾಗಿ, ತಾಯಿಯಾಗಿ ಹೃದಯ ಗೆಲ್ಲದ ಕಾವೇರಮ್ಮ 'ಗೋಪಿಯ ಅಜ್ಜಿ'ಯಾಗಿ ಎಲ್ಲರ ಮನಸ್ಸನ್ನು ಗೆಲ್ಲುತ್ತಾಳೆ.

2. ಮರ ಹತ್ತದ ಮೀನು:
ಚಿಕ್ಕಂದಿನಿಂದಲೂ ಕೀಳರಿಮೆಯಿಂದಲೇ ಬೆಳೆದಿರುವ ಗೌತಮ್ ಟಿ.ಕೆ, ತನ್ನೆಲ್ಲಾ ಮನಸ್ಸಿನ ಭಾವನೆಗಳನ್ನು ದ್ವಂದಗಳನ್ನು ಹೊರ ಹಾಕಿದ್ದು ಬರವಣಿಗೆ ಮೂಲಕ. ತನ್ನ ಅಪ್ಪನೊಡನೆ ತನ್ನನ್ನು ಹೋಲಿಸಿ, ಸದಾಕಾಲ ಹಂಗಿಸುತ್ತಿದ್ದ ಅಮ್ಮ ಆತನನ್ನು ಬದಲಾಯಿಸುವ ಪ್ರಯತ್ನವೇ ಮಾಡಲಿಲ್ಲ. ನಾಲ್ಕು ಜನರ ಎದುರು ಮಾತನಾಡಲಾಗದ ಭಯದಿಂದಲೇ ಇರುತ್ತಿದ್ದ ಗೌತಮ್ ಕೊನೆಗೂ ಹಿಡಿದ ವೃತ್ತಿ ಅವನಿಗೆ ವಿರುದ್ಧವಾದುದು. ಇನ್ಸೂರೆನ್ಸ್ ಪಾಲಿಸಿಯ ಕಾರ್ಪೊರೇಟ್ ಕಂಪೆನಿಯಲ್ಲಿ ಕೆಲಸಕ್ಕೆ ಇದ್ದ ಗೌತಮ ವಾರಾಂತ್ಯಕ್ಕೆ ತನ್ನ ಟಾರ್ಗೆಟ್ ನ್ನು ತಲುಪಲಾಗದೆ, ಬಾಸ್ ನಿಂದ ಪ್ರತಿದಿನವೂ ಬೈಗುಳವನ್ನು ತಿನ್ನುತ್ತಿದ್ದ. ಅಲ್ಲದೇ ತನ್ನ ಕಲೀಗ್ ಗಳಿಂದ ಅವಹೇಳನಕ್ಕೆ ಗುರಿಯಾಗುತ್ತಲೇ ಇದ್ದ.

ಗೌತಮನಿಗೆ ತನ್ನ ಸಹೋದ್ಯೋಗಿಗಳೆಲ್ಲಾ ತಮ್ಮವಾಗ್ಝರಿಯಿಂದಲೇ ಅನೇಕ ಪಾಲಿಸಿಗಳನ್ನು ಮಾಡಿ ಅದು ಹೇಗೆ ಬಾಸ್ ನಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳುತ್ತಾರೆಂದೇ ಅರಿವಾಗುತ್ತಿರಲಿಲ್ಲ. ಅವನು ಅನುಭವಿಸುವ ಕೀಳರಿಮೆ, ಒಂಟಿತನ ಅಸಹಾಯಕತೆ ಇವಕ್ಕೆಲ್ಲಾ ಆತ ಪರಿಹಾರ ಕಂಡುಕೊಂಡಿದ್ದೇ ಬರಹಗಾರನಾಗಿ. ತನ್ನ ಮನಸ್ಸಿನ ಭಾವನೆಗಳನ್ನು ಕಥೆಯಾಗಿ ಬರೆದು ಪತ್ರಿಕೆಗಳಿಗೆ ಕಳಿಸುತ್ತಲೇ ಇದ್ದ ಆತನ ಕಥೆ ಕೊನೆಗೂ 'ಮಾಸ್ತಿ ಕಥಾ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನವಾಗಿ ಆಯ್ಕೆಯಾದಾಗ ಖುಷಿಯಾಗಿದ್ದ. ತುಂಬಿದ ಸಭೆಯಲ್ಲಿ ಪ್ರಶಸ್ತಿ ಸ್ವೀಕರಿಸಿ, ಎಲ್ಲರ ಕರತಾಡನದ ಪ್ರಶಂಸೆಯ ನುಡಿಗಳಲ್ಲಿ, ಸಂತೋಷ ಇಮ್ಮಡಿಯಾಗಿತ್ತು. ಆದರೆ ಸಮಾರಂಭವೆಲ್ಲ ಮುಗಿದ ಮೇಲೆ ಆತನಿಗೆ ಗೆಳೆಯ ಮಾಡಿದ್ದ ಫೋನ್ ಕರೆಯೊಂದು ಆತನನ್ನು ಹತಾಶನನ್ನಾಗಿ ಮಾಡಿತ್ತು. ಪ್ರಮೋಷನ್ ಲಿಸ್ಟ್ ನಲ್ಲಿ ಕೆಲವರ ಹೆಸರಿದ್ದು ಕೆಲವರನ್ನು ಪ್ರಮೋಟ್ ಮಾಡಿದ್ದಾರೆ ಎಂದು ಹೇಳುತ್ತಾ , ಆತನ ಜೊತೆ ನನ್ನನ್ನೂ... ಎಂದು ಹೇಳದ ತಡವರಿಸುವ ಗೆಳೆಯನ ಮಾತಿನ ಅರ್ಥವನ್ನು ಅರಿಯುವ ಗೌತಮನಿಗೆ ತನಗೆ ಕಡಿಮೆ ರೇಟಿಂಗ್ ಬಂದಿದೆ ಎಂದು ಗೊತ್ತಾಗಿ ಹೋಗುತ್ತದೆ. ಬದುಕಿಗೆ ವೃತ್ತಿ ಬೇಕು, ಅದರಿಂದಲೇ ಜೀವನ ನಿರ್ವಹಣೆ. ಆದರೆ ಆತನಿಗೆ ಅದೇ ಕೈಕೊಡುತ್ತದೆ. ಇಷ್ಟದ ಪ್ರವೃತ್ತಿಯೇ ವೃತ್ತಿಯಾದರೆ ಅದರ ಸಂಪಾದನೆ ತನ್ನ ಲಕ್ಷಗಳ, ಮೀರಿದ ಸಾಲದ ಶೂಲಗಳನ್ನು ಸರಿದೂಗಿಸಲಾರದೆಂಬ ಸತ್ಯದ ಅರಿವಿರುವ ಗೌತಮನಿಗೆ, ಕೆಲಸವಿಲ್ಲದ ತಾನು ಸರೀಕರ ಕಣ್ಣಿನಲ್ಲಿ, ಹೆಣ್ಣು ಕೊಡುವ ಮಾವನ ತಕ್ಕಡಿಯಲ್ಲಿ ಇಳಿದು ಹೋಗುವ ಭಾವವನ್ನು ಯೋಚಿಸಿಯೇ ಹಿಂಸೆಯಾಗುತ್ತದೆ. ಲೇಖಕನಾಗಿ ಪ್ರಸಿದ್ಧನಾಗಿರುವ 'ಗೌತಮ ತಾರೆ ಹಿತ್ಲು' , ಬಾಸ್ ಕರೆದು ಬಯ್ಯುವ, ಕಲಿಗ್ ಗಳೆಲ್ಲ ಕಡೆಗಣಿಸುವ 'ಗೌತಮ್ ಟಿ ಕೆ' ಇವರಿಬ್ಬರಲ್ಲಿ 'ತಾನು ಯಾರು'? ಎಂಬುದೇ ಆತನಿಗೆ ಪ್ರಶ್ನೆಯಾಗುತ್ತದೆ. ಬರಹಗಾರನಾದ ಗೌತಮ ಮೀನಾಗಿ ಸಾಗರದಲ್ಲಿ ಈಜ ಬಯಸುತ್ತಾನೆ. ಆದರೆ ಅದನ್ನು ತೊರೆದು ಅನಿವಾರ್ಯವಾದ ಮರವನ್ನೂ ಸರಿಯಾಗಿ ಹತ್ತಲಾರದೇ ಎಡವುವ ಚಿತ್ರಣವನ್ನು ನಾವಿಲ್ಲಿ ಕಾಣಬಹುದು. ಬದುಕಿನ ಅನಿವಾರ್ಯತೆಯು ನಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸಲಾರದೇ ಹೋದರೆ, ಅತ್ತ ಈಡೇರಿಸಬಹುದಾದ ಕಾರ್ಪೋರೇಟ್ ಜಗತ್ತೂ ಕೂಡಾ ಇಷ್ಟಪಟ್ಟು ಕಷ್ಟಪಟ್ಟರೆ ಮಾತ್ರ ಶಾಶ್ವತವೆಂಬ ಸತ್ಯವನ್ನು ಈ ಕಥೆ ತಿಳಿಸುತ್ತದೆ.

3 ಚಿಕಿತ್ಸೆ:
ಹಣದ ದಾಹ, ಅಧಿಕಾರದ ದಾಹ, ಪ್ರಸಿದ್ಧಿಯ ದಾಹ ಹೀಗೆ ಮುಗಿಯದ ದಾಹಗಳಿಂದ ಬದುಕನ್ನು ನಡೆಸುತ್ತಿದ್ದ ವ್ಯಕ್ತಿ ತನ್ನ ವ್ಯಕ್ತಿತ್ತ್ವದಿಂದಾಗಿ ತನ್ನ ಬಳಗವನ್ನೆಲ್ಲಾ ಕಳಕೊಂಡರೂ ಬದಲಾಗುವುದಿಲ್ಲ. ಮಾಡಿದ ಪಾಪಕ್ಕೆ ವಿಧಿ ಕೊಟ್ಟ ಬಳುವಳಿ 'ಕ್ಯಾನ್ಸರ್' ಎಂಬ ದೊಡ್ಡ ವ್ಯಾಧಿಯನ್ನು. ಸಾಲು ಸಾಲಾಗಿ ಬಂದ ರೋಗಿಗಳನ್ನು ಹಣದ ಮುಖ ನೋಡಿ ಚಿಕಿತ್ಸೆ ಕೊಟ್ಟ ಡಾಕ್ಟರ್ ಗೆ ಈ ಕಾಯಿಲೆ ಬಂದಾಗ ನೋಡಲು ಹೊರಟಿದ್ದು ಹಳ್ಳಿಯ ವೈದ್ಯರನ್ನು ತನ್ನನ್ನು ಅಲ್ಲಿ ಹೋಲಿಸಿದಾಗ ಕಂಡುಕೊಂಡ ನಿಜಾಂಶ. ಭೇಟಿಯಾದ ಅಪರಿಚಿತ, ಆತನ ಬದುಕು, ಕೊನೆಗೆ ಆತನ ಸಾವು ಇವೆಲ್ಲಾ ಡಾಕ್ಟರ್ ನ ಪಶ್ಚಾತಾಪಕ್ಕೆ ಕಾರಣವಾಗುತ್ತದೆ. ಬದುಕಿನಲ್ಲಿ ಆತ ಕಂಡುಕೊಂಡ ಸತ್ಯಾ ಸತ್ಯತೆಯಿಂದ ಬದಲಾದ ಡಾಕ್ಟರ್ ಕೊನೆಯಲ್ಲಿ ಸಾಮಾನ್ಯ ಮನುಷ್ಯನೊಬ್ಬನ ದುಃಖಕ್ಕೆ ಬದಲಾಗುವ ಪರಿ ಅದ್ಭುತ. 'ಸಾವೆಂಬ ಪರಮಸತ್ಯಕ್ಕೆ ಇಲ್ಲದ ಮದ್ದುಗಳ ಹುಡುಕುವ ವ್ಯರ್ಥ ಪ್ರಯತ್ನದಲ್ಲಿ ವೆಚ್ಚ ಮಾಡುವ ಬದಲು ಅಂಥವರ ಅಕಾಲ ಮರಣವನ್ನು ಮುಂದೂಡಲು ನನ್ನ ಕೈಲಾದ ಸಹಾಯವನ್ನು ಮಾಡಬಯಸುತ್ತೇನೆ' ಎಂದು ಹೇಳುತ್ತಾ ಪಶ್ಚಾತ್ತಾಪ ಪಡುವ ಡಾಕ್ಟರ್ ಕೊನೆಗೂ ಅವರ ಖಾಯಿಲೆಗೆ ಅದನ್ನೇ ಚಿಕಿತ್ಸೆಯಾಗಿ ಬಳಸುವುದು, ಅವರ ಬದಲಾದ ಮನಸ್ಸಿನ ಭಾವವನ್ನು ತೆರೆದಿಡುತ್ತದೆ. ಪ್ರಸ್ತುತ ಕಾಲದ ವೈದ್ಯಕೀಯ ಚಿಕಿತ್ಸಾ ಕ್ರಮದ ಒಳನೋಟವನ್ನು ತೆರೆದಿಡುವ ಮೂಲಕ ವಾಸ್ತವದ ನಿಜಾಂಶವನ್ನು ಹೇಳುವ ಪ್ರಯತ್ನ ಮಾಡುವ ಈ ಕಥೆ ತನ್ನ ನಿರೂಪಣೆಯಿಂದಲೇ ಗೆದ್ದಿದೆ ಎನ್ನಬಹುದು.

4 ಭೂಮಿ:
ತಂದೆ ತೀರಿ ಹೋದ ಮೇಲೆ ತಾಯಿಯೊಡನೆ ಒಂಟಿಯಾಗಿ ದೊಡ್ಡಪ್ಪನ ಹಂಗಿನಲ್ಲಿ ಬೆಳೆದ ಹೆಣ್ಣು ಭೂಮಿ. ತನ್ನೆಲ್ಲ ಬದುಕಿನ ಬೇಸರವನ್ನು ಬಾಲ್ಯದ ಗೆಳೆಯ ಮನುವಿನೊಡನೆ ಹಂಚುತ್ತಾಳೆ. ದೊಡ್ಡಪ್ಪನ ಆಸರೆಯಿಂದ ಹೊರ ಬಂದು ಹಾಸ್ಟೆಲ್ ಸೇರಿದ ಭೂಮಿಗೆ‌ ಅಲ್ಲಿ ಹಾಸ್ಟೆಲ್ ವಾರ್ಡನ್ ನ ಕರಾಳ ರೂಪದ ಅರಿವಾಗುತ್ತದೆ.

ಕಷ್ಟಪಟ್ಟು ಕಲಿತು ಕೆಲಸ ಹಿಡಿದು ಅಮ್ಮನನ್ನು ಹಂಗಿನ ಜೀವನದಿಂದ ಮುಕ್ತಿಗೊಳಿಸಿದ ಆಕೆಗೆ ಪ್ರೀತಿಸಿದ ಹುಡುಗ ಕೈಕೊಟ್ಟಾಗ ಮಾತ್ರ ಗಂಡು ಜಾತಿಯ ಮೇಲಿದ್ದ ಅಲ್ಪಸಲ್ಪ ನಂಬಿಕೆಯು ಹೊರಟು ಹೋಗುತ್ತದೆ. ವರ್ಷಗಳು ಕಳೆದು ಮನುವನ್ನು ಭೇಟಿ ಮಾಡುವ ಆಕೆ ಅಮ್ಮನಿಗೆ ಇದೀಗ ಕ್ಯಾನ್ಸರ್ ಎಂದು ಹೇಳಿ ತನ್ನ ಆತಂಕವನ್ನು ವ್ಯಕ್ತಪಡಿಸುತ್ತಾಳೆ. ಅಲ್ಲದೆ ಅಮ್ಮನ ಕಡೆಯಿಂದ ಬಂದ ಪ್ರಪೋಸಲ್, ಹುಡುಗ 'ನಾಗಚಂದ್ರ' ಎಂಬುವನ ಬಗ್ಗೆ ಮಾಹಿತಿಯನ್ನು ಕಲೆಹಾಕುವ ಕೆಲಸವನ್ನು ಆತನಿಗೆ ನೀಡುತ್ತಾಳೆ. ಕಲೆ ಹಾಕಿದ ಮನುವಿಗೆ ಆತ ಕೆಟ್ಟವನು ಎಂದು ಹೇಳಲಾಗದ ವ್ಯಕ್ತಿತ್ತ್ವದವನಾದರೂ, ಭೂಮಿಯು ಬಯಸದ ಭಾವುಕ ಮನಸ್ಸಿನ ವ್ಯಕ್ತಿಯಾಗಿರದೇ ಅದರ ವಿರುದ್ಧ ಸ್ವಭಾವದವನಾಗಿದ್ದ. ಆತ ಭಾವಕತೆಗಿಂತ ಪ್ರಾಕ್ಟಿಕಲ್ ಆಗಿದ್ದ ಕಾರಣ ಕಾರ್ಪೊರೇಟ್ ಪ್ರಪಂಚದ ಯಾಂತ್ರಿಕ ಜೀವನವನ್ನು ಇಷ್ಟಪಟ್ಟಿದ್ದ, ಅಲ್ಲದೇ ಅವನ ಪ್ರಾಕ್ಟಿಕಲ್ ನ ತೀವ್ರತೆ ಎಷ್ಟು ಎಂದರೆ ಜೊತೆಯಗಿದ್ದ ಪ್ರೀತಿಯು ಹಠಾತ್ತಾನೇ ಅವನಿಂದ ದೂರ ಹೋದರೂ ಹಿಂದೆ ಮುಂದೆ ಯೋಚಿಸದೆ ಟಾಟಾ ಮಾಡುವಷ್ಟು ನಿರ್ಭಾವುಕತೆ ಆ ಹುಡುಗನಲ್ಲಿತ್ತು. ಪೇಟಿಯ ಅನೇಕ ಬಾರಿ ರೆಸ್ಟೋರೆಂಟ್ ಗಳಲ್ಲಿ ಅವನ ಹೆಜ್ಜೆ ಗುರುತುಗಳನ್ನು ಕಾಣಬಹುದಾಗಿತ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ಭೂಮಿ ಯಾವ ವ್ಯಕ್ತಿತ್ವದವನನ್ನು ಬಯಸಿದ್ದಳೋ ಅದಕ್ಕೆ ವಿರುದ್ಧ. ಸ್ವಭಾವದವನು ಅವನಾಗಿದ್ದ ಎಂಬುದು ತಿಳಿಯುತ್ತದೆ. ಈ ವಿಷಯವನ್ನೆಲ್ಲಾ ಕಲೆ ಹಾಕಿ ಮನು ಹೇಳಿದಾಗ ಭೂಮಿ ಅರೆ ಕ್ಷಣ ಮೌನವಾಗುತ್ತಾಳೆ.

ಮತ್ತೆ ಸ್ವಲ್ಪ ಸಮಯ ಭೂಮಿಯ ಸುದ್ದಿ ಮನುವನ್ನು ತಲುಪುವುದೇ ಇಲ್ಲ. ವಾರ್ಷಿಕ ಅಂತ್ಯದ ಒತ್ತಡದಿಂದ ಮನುವೂ ಈ ವಿಷಯವನ್ನೇ ಮರೆತಿರುತ್ತಾನೆ. ಆದರೆ ಬಟ್ಟೆ ಅಂಗಡಿಯಲ್ಲೊಮ್ಮೆ ಆಕೆಯನ್ನು ಅನಿರೀಕ್ಷಿತ ಭೇಟಿಯಾದಾಗ ತನ್ನ ಮದುವೆ ಸಂಬಂಧ ನಿಶ್ಚಯವಾದ ಬಗ್ಗೆ ಹೇಳುತ್ತಾಳೆ. ಹುಡುಗ ಅದೇ 'ನಾಗಚಂದ್ರ' ಅಂದಾಗ ಮನುವಿಗೆ ಆಶ್ಚರ್ಯವಾಗುತ್ತದೆ. ಅವನ ಬಗ್ಗೆ ಅಷ್ಟೂ ಗೊತ್ತಿದ್ದು ಯಾಕೆ ಒಪ್ಪಿಕೊಂಡೆ ಎಂದು ಕೇಳಿದಾಗ ಎಂದು ಕೇಳಿದಾಗ ಅಮ್ಮನ ಕ್ಯಾನ್ಸರ್ ಎರಡನೇ ಹಂತ ತಲುಪಿರುವ ಬಗ್ಗೆ, ಚಿಕಿತ್ಸೆಗೆ ತಿಂಗಳಿಗೆ 40,000 ಬೇಕಾಗುವ ಬಗ್ಗೆ ತಿಳಿಸುತ್ತಾಳೆ. ಇದರಲ್ಲಿ ಅರ್ಧದಷ್ಟನ್ನು ಅವನು ಕೊಟ್ಟರೂ ಅವನನ್ನು ಉಳಿಸಬಹುದೆಂಬುದನ್ನೂ, ಇದಕ್ಕೆ ನಾಗಚಂದ್ರ ಈಗಾಗಲೇ ಒಪ್ಪಿರುವ ಬಗ್ಗೆ ಸಂತಸವನ್ನೂ ವ್ಯಕ್ತಪಡಿಸುತ್ತಾಳೆ. ಒಂದು ಕಾಲದಲ್ಲಿ 'ಭೂಮಿ' ಗಾಗಿ ದೊಡ್ಡಪ್ಪನ ಮನೆಯವರ ಹಿಂಸೆಗಳನ್ನು ಸಹಿಸಿಕೊಂಡು, ಬದುಕಿದ್ದ ಅಮ್ಮನಿಗೋಸ್ಕರ ತನ್ನೆಲ್ಲಾ ಆಸೆ, ನಿರೀಕ್ಷೆಗಳನ್ನು ಗಾಳಿಗೆ ತೂರಿ ಅಮ್ಮನ ಸುಖಕ್ಕಾಗಿ ತನ್ನ ಸುಖವನ್ನು ತ್ಯಾಗ ಮಾಡುವ ಭೂಮಿ, ಇಲ್ಲಿ ಹೆಸರಿಗಷ್ಟೇ 'ಭೂಮಿ 'ಆಗಿರದೆ ಭೂಮಿ ತೂಕದ ಹೆಣ್ಣಾಗಿ ತ್ಯಾಗಮಯಿಯಾಗುತ್ತಾಳೆ.

5. ಗೋಡೆ:
ದಾಯಾದಿ ಮತ್ಸರ ,ಕಲಹಗಳ ಚಿತ್ರಣವನ್ನು ಅನಾವರಣಗಳಿಸುವ ಕಥೆ ಇದಾಗಿದೆ. ಮನೆಯ ಗೋಡೆಗಳಂತೆ ನಮ್ಮ ಮನಸ್ಸಲ್ಲೂ ಗೋಡೆಯನ್ನು ಕಟ್ಟಿ, ಸಂಬಂಧವೆಂಬ ಬಂಧವನ್ನು ಒಮ್ಮೆ ಕಡಿದರೆ ಮುಂದೆ ಅದನ್ನು ಸರಿ ಮಾಡಲು ಅಸಾಧ್ಯ. ಮನದಲ್ಲಿ ಅಸಮಾಧಾನದ ಬೆಂಕಿ ಉರಿಯಲು ಪ್ರಾರಂಭಿಸಿದ ಕೂಡಲೇ ನಂದಿಸಬೇಕು. ಇಲ್ಲವಾದಲ್ಲಿ ತುಪ್ಪ ಸುರಿಯುವ ಜನರಿಂದ ಸಂಬಂಧವೇ ಕಡಿದು ಹೋದೀತು.ಸರಿ ತಪ್ಪುಗಳ ವಿವೇಚನೆ, ಸ್ವಾರ್ಥ, ಅಹಂನಿಂದಾಗಿ ಅಣ್ಣ ತಮ್ಮಂದಿರ ನಡುವಿನ ಪ್ರೀತಿ, ದ್ವೇಷವಾಗಿ ಮಾರ್ಪಾಡಾಗುವ ಚಿತ್ರಣವನ್ನು ನಾವಿಲ್ಲಿ ಕಾಣಬಹುದು.

ರವಿ ಮತ್ತು ಅಭಿ ಅಣ್ಣ ತಮ್ಮಂದಿರ ಮಕ್ಕಳು ಪರಸ್ಪರ ಆಟವಾಡಿಕೊಂಡು,ಮುನಿಸಿಕೊಂಡು

ಬೆಳೆಯುತ್ತಿದ್ದ ಎಳೆಯ ಜೀವಗಳು. ಅಭಿಯ ದುಬಾರಿ ಆಟಕೆಗಳನ್ನು ನೋಡಿ ಇಷ್ಟಪಡುವ ರವಿ. ಇಬ್ಬರೂ ತಮ್ಮ ಆಟಿಕೆಗಳನ್ನು ವಿನಿಮಯ ಮಾಡಿಕೊಂಡು , ಎರಡೂ ಮನೆಗಳಲ್ಲಿ ಆಟವಾಡುತ್ತಿದ್ದರು. ಆದರೆ ಒಮ್ಮೆ ದೊಡ್ಡಮ್ಮ ರವಿಯ ಕೈಯಿಂದ ಅಭಿಯ ಆಟಿಕೆಯನ್ನು ಬೇರ್ಪಡಿಸಿ, ಬೈದಾಗ ಅವರು ಬೈದಿದ್ದಾದರೂ ಯಾರಿಗೆ ಎಂದೇ ಅರ್ಥವಾಗದ ರವಿ ವಾಪಸ್ ಮನೆಗೆ ಬಂದಿದ್ದ .ಅಭಿಯ ಅಳು ಮನೆಗೂ ಕೇಳಿಸುತ್ತಿತ್ತು. ಆಮೇಲೆ ಅಭಿ ರವಿಯ ಮನೆಗೆ ಬರುವುದು ನಿಂತಿತ್ತು. ಅಷ್ಟೇ ಅಲ್ಲದೆ ಅಪ್ಪ ದೊಡ್ಡಪ್ಪನ ನಡುವೆ ಗಲಾಟೆಯಾಗಿ ಎರಡು ಮನೆಗಳ ನಡುವೆ ದೊಡ್ಡ ಗೋಡೆಯೊಂದು ಕಟ್ಟುವಂತಾಗಿ, ಅಣ್ಣ ತಮ್ಮನ ಮನೆಯ ಸಂಪರ್ಕ ಸಂಪೂರ್ಣ ಕಡಿದಿತ್ತು.

ಗೋಡೆ ಅಷ್ಟೇನೂ ಗಟ್ಟಿ ಇರದ ಕಾರಣ ಮಾರನೇ ವರ್ಷದ ಮಳೆಗಾಲಕ್ಕೆ ಅದರ ಮೇಲೆನೆರಡು ಸಾಲು ಬಿದ್ದಿತ್ತು. ಆನಂತರ ತೀರಿಹೋದ ಅಜ್ಜನ ಅಪರಕರ್ಮಗಳಲ್ಲಿ ಬೇರೆಯಾಗಿದ್ದ ಅಣ್ಣ ತಮ್ಮಂದಿರು ಒಂದಾದರು. ಸರಂಜಾಮುಗಳ ಸಾಗಾಣಿಕೆಗಾಗಿ ಗೋಡಿಯ ಮಧ್ಯದೊಂದು ಜಾಗವನ್ನು ಕೆಡವಿ, ಭಾಗ ಮಾಡಲಾಯಿತು. ನಂತರದ ಸ್ವಲ್ಪ ದಿನಗಳ ಕಾಲ ರವಿ ಹಾಗೂ ಅಭಿ ಅಂಗಳದಲ್ಲಿ ಆಡತೊಡಗಿದರು. ಮತ್ತೆ ಪ್ರತಿ ಮಳೆಗಾಲಕ್ಕೂ ಗೋಡೆಯ ಸ್ವಲ್ಪ ಸ್ವಲ್ಪ ಭಾಗ

ಬೀಳುತ್ತಲೆ ಹೋಯಿತು ಎರಡು ಮನೆಯವರು ನಡೆಯುವಾಗ ದಾರಿಗೆ ಅಡ್ಡವಿರುವ ಇಟ್ಟಿಗೆಗಳನ್ನು ಪಕ್ಕಕ್ಕಿಟ್ಟು ನಡೆದು ಹೋಗುತ್ತಿದ್ದರು. ಕಾಲ ಸರಿಯಿತು. ಇದೀಗ ಇಬ್ಬರಿಗೂ ಮದುವೆಯಾಯಿತು. ಮದುವೆಯಲ್ಲಿ ಎರಡೂ ಮನೆಯವರು ಸಡಗರದಿಂದ ಓಡಾಡಿದರು. ಇದೀಗ ಕಟ್ಟಿದ ಗೋಡೆಯ ಕೊನೆಯ ಸಾಲಿನ ಇಟ್ಟಿಗೆಯು ಮದುವೆಯ ದಿಬ್ಬಣದ ಕಾರು ಬಂದಾಗ ತಾಗಿ ಬಿದ್ದು ಹೋಯಿತು. ಮುಂದೆ ಅಭಿಗೂ ರವಿಗೂ ಮಕ್ಕಳಾಯಿತು. ಅಣ್ಣ ತಮ್ಮಂದಿರ ಕಾಲಕ್ಕೆ ದ್ವೇಷದಿಂದ ಕಟ್ಟಿದ್ದ ಗೋಡೆ ಬಿದ್ದು ಸ್ನೇಹವೇ ತುಂಬಿತ್ತು. ಆದರೆ ಅವರಿಬ್ಬರ ಮನೆಯ ಸಾಕುಪ್ರಾಣಿಗಳು, ಎರಡೂ ಮನೆಗಳಲ್ಲಿ ಬಂದು ಮಾಡುವ ಅವಾಂತರಗಳನ್ನು ಕೆಲಸದವಳು ವೈಭವೀಕರಿಸಿ, ದ್ವೇಷದ ಬೀಜ ಬಿತ್ತಲು ಶುರು ಮಾಡಿದ್ದರಿಂದ, ಮೂರನೇ ಪೀಳಿಗೆಯಲ್ಲೂ ಪುನಃ ದ್ವೇಷ ಮೊಳೆತು ಅದು ಹೆಮ್ಮರವಾಗಲು ಇನ್ನೂ ಕೆಲವು ಕೆಲಸದವರ ಧ್ವನಿ ಸೇರಿತು. ಪ್ರೀತಿಯು ಅಳಿಸಿ ಹೋಗಿ ಮತ್ತೆ ಎರಡು ಮನೆಗಳ ನಡುವೆ ಗೋಡೆ ಎದ್ದಿತು. ಕೊನೆಗೂ ದ್ವೇಷ ಗೆದ್ದಿತು, ಪ್ರೀತಿ ಸೋತಿತು.

ಇಲ್ಲಿನ ಉಳಿದ ಕಥೆಗಳಾದ 'ಕೆಂಪು ಕುಂಕುಮ -ಕಪ್ಪು ಕುಂಕುಮ', `ನೆಲೆ ', ' ಸ್ವಯಂ', 'ಸಕಲಕಲಾವಲ್ಲಭ', 'ಒಣ ಮರದ ಹಸಿರೆಲೆ' ಮೊದಲಾದುವೂ ಕೂಡಾ ತನ್ನ ವಸ್ತು, ಶೈಲಿ ಹಾಗೂ ನಿರೂಪಣೆಯಿಂದಾಗಿ ಮನಸ್ಸನ್ನು ಗೆಲ್ಲುತ್ತದೆ.

*********************************

ಅಲ್ಲದೇ ಕಥೆಗಳಲ್ಲಿ ಬರುವ ,
*ಟಾರ್ಗೆಟ್ ಗಳು ಬಿಕಾರಿಯಾಗದ ತರಕಾರಿಗಳಂತೆ ಉಳಿಯುತ್ತದೆ.
* ಹೊಸ ಬೆಳದಿಂಗಳ ಹೊಸಿಲು ದಾಟಬೇಕು.
* ಗುಲಾಬಿಯ ಪಕಳೆಗಳನ್ನು ಕಿವುಚಿದಂತೆ ಕೆಂಪಾಗಿದ್ದ ಕಣ್ಣು
* ಅರ್ಧ ಮುಚ್ಚಿದ ಕಾಗದ ಬಾಕ್ಸ್ ಒಳಗಿನ ಎರೇಸರ್, ಶಾರ್ಪ್ನರ್ ಗಳು ಏನನ್ನೂ ಅಳಿಸಲಾಗದೆ, ಏನನ್ನೂ ಹೆರೆಯಲಾಗದೆ ಅಸಹಾಯಕವಾಗಿ ಮಲಗಿದ್ದವು.
ಇಂತಹ ಅನೇಕ ವಾಕ್ಯಗಳು ಆ ಸಂದರ್ಭದ ತೀವ್ರತೆಯ ಚಿತ್ರಣವನ್ನು ಮನಸ್ಸಿಗೆ ನೇರವಾಗಿ ಮುಟ್ಟುವಂತೆ ಮಾಡುವುದಲ್ಲದೆ ಇಷ್ಟವೂ ಆಗುತ್ತದೆ. ಒಟ್ಟಿನಲ್ಲಿ ಮನುಷ್ಯ ಮನುಷ್ಯನ ನಡುವಿನ ದ್ವೇಷ, ಅನುಮಾನ, ದರ್ಪ, ಅಸಹಾಯಕತೆ
ಪ್ರೀತಿ, ತ್ಯಾಗ, ಒಂಟಿತನದ ನೋವು, ಎಲ್ಲವನ್ನು ಒಳಗೊಂಡಿರುವ ಇಲ್ಲಿನ ಕಥೆಗಳು ಮನಸ್ಸನ್ನು ತಣಿಸುವುದರ ಜೊತೆಗೆ ಯೋಚಿಸುವಂತೆ ಮಾಡುತ್ತದೆ.

- ವಾಣಿಶ್ರೀ ಕೊಂಚಾಡಿ

MORE FEATURES

ಕೌಟುಂಬಿಕ, ಸಾಮಾಜಿಕ ಪರಿಸರವೇ ದುಷ್ಕೃತ್ಯಕ್ಕೆ ಕಾರಣ

05-05-2024 ಬೆಂಗಳೂರು

'ಎಲ್ಲಾ ಕಾಲಘಟ್ಟದಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದೆ. ಆದರೆ ಅದರ ಪ್ರಮಾಣ ದಿನೇ, ದಿನೆ ಹೆಚ್ಚಾಗುತ್ತಿದೆ....

ಮನ ತಟ್ಟಿದ ಕೃತಿ ‘ಹಿಮಾಲಯನ್ ಬ್ಲಂಡರ್’ 

05-05-2024 ಬೆಂಗಳೂರು

"ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಇದುವರೆಗೂ ಕುವೆಂಪು, ತೇಜಸ್ವಿ, ಭೈರಪ್ಪ ಸೇರಿದಂತೆ ಹಲವರ ಕ...

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...