ಕೆಲವು ಬರಹಗಳು ಬಾಲ್ಯದ ಎಷ್ಟೋ ನೆನಪುಗಳನ್ನು ನೆನಪಿಸುತ್ತವೆ


"ಮಕ್ಕಳ ಮನಸ್ಸು ಎಳೆಯ ಕಾಗದವಿದ್ದಂತೆ ಅದರಲ್ಲಿ ಮೃದುವಾಗಿ ಬರೆಯುವುದಷ್ಟೇ ನಾವು ನೋಡಬೇಕು, ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು, ಯಾರಾದರು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದರೂ ನಾವು ಕೊಡುವ ಪ್ರೋತ್ಸಾಹದಿಂದ ಮಕ್ಕಳ ಮನಸ್ಸಿನ ಮೇಲೆ ಕೀಳರಿಮೆ ಎಂಬ ಕಪ್ಪಾದ ಗೀಟು ಬೀಳುವುದನ್ನು ತಪ್ಪಿಸಬಹುದೆಂದು ಹೇಳುವ ಕಥೆಯೂ ಚೆನ್ನಾಗಿದೆ," ಎನ್ನುತ್ತಾರೆ ಕಾರ್ತಿಕೇಯ. ಅವರು ಶುಭಶ್ರೀ ಭಟ್ಟ ಅವರ ‘ಇಹದ ತಳಹದಿ’ ಕೃತಿ ಕುರಿತು ಬರೆದ ವಿಮರ್ಶೆ.

ಇಲ್ಲಿ ಒಟ್ಟಾರೆ 27 ಅಂಕಣ ಬರಹಗಳಿವೆ. ಈ ಎಲ್ಲಾ ಬರಹಗಳಲ್ಲಿ ಅವರ ಜೀವನದ ಅನುಭವಗಳನ್ನು ಸುಂದರವಾಗಿ ತೆರೆದಿಟ್ಟಿದ್ದಾರೆ. ಪ್ರತಿಯೊಂದು ಬರಹದಲ್ಲೂ ಆ ಬರಹಕ್ಕೆ ತಕ್ಕಂತೆ ಕಥೆ ಹಾಗು ಆ ಕಥೆಗೆ ಸಂಬಂಧಪಟ್ಟಂತೆ ಪರಿಹಾರವನ್ನೂ ಸೂಚಿಸಿದ್ದಾರೆ. ಕೆಲವು ಬರಹಗಳನ್ನು ಓದಿದಾಗ ಆ ಬರಹದಲ್ಲಿ ಬರುವ ಪಾತ್ರಗಳೇ ಇರಲಿ, ಪ್ರಸಂಗಗಳೇ ಇರಲಿ ಕೆಲವು ನನಗೂ ಅನುಭವವಾಗಿದೆ, ಕೆಲವು ಬರಹಗಳು ಬಾಲ್ಯದ ಎಷ್ಟೋ ನೆನಪುಗಳನ್ನು ನೆನೆಪಿಸುತ್ತವೆ. ಶುಭಶ್ರೀ ಭಟ್ಟರವರ ಬರವಣಿಗೆ ಶೈಲಿ ತುಂಬಾ ಇಷ್ಟವಾಯಿತು.

ರೇಡಿಯೋ ಎಂಬ ಜಗತ್ತಿನಲ್ಲಿ ತನಗಿಂತಲೂ ಮೊದಲು ಅಮ್ಮನ ಮಡಿಲು ತುಂಬಿದ ರೇಡಿಯೋ ಎಂಬುದು ಅಮ್ಮನ ಮೇಲೆ ತದನಂತರ ತನ್ನ ಮೇಲೆ ಹೇಗೆ ಪರಿಣಾಮ ಬೀರಿತೆಂಬುದನ್ನು ಕಥೆಯ ರೂಪದಲ್ಲಿ ಹೇಳಿರುವುದು ಖುಷಿಕೊಟ್ಟಿತು.

ಬೆಂಗಳೂರಿನಿಂದ ಊರಿಗೆ ಬಂದಾಗ ಏನ್ ಸಾಪ್ಟ್ವೇರ? ಬೆಂಗಳೂರ? ಇದು ತನ್ನ ಊರಾದರೂ ಇದು ತಮ್ಮೂರಲ್ಲವಾ ಎಂಬ ಭಾವನೆ ತರಿಸುವಂತಹ ಪ್ರಶ್ನೆಗಳು, ಐಟಿಯಲ್ಲಿ ಕೆಲಸ ಮಾಡಿಕೊಂಡು ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡು ಸಂಸಾರ ಸಾಗಿಸುವ ಅಮ್ಮಂದಿರ ಕಥೆಯನ್ನು ಓದಿದಾಗ ಕನಿಕರವಾಗುತ್ತದೆ.

ಮಕ್ಕಳ ಮನಸ್ಸು ಎಳೆಯ ಕಾಗದವಿದ್ದಂತೆ ಅದರಲ್ಲಿ ಮೃದುವಾಗಿ ಬರೆಯುವುದಷ್ಟೇ ನಾವು ನೋಡಬೇಕು, ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು, ಯಾರಾದರು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದರೂ ನಾವು ಕೊಡುವ ಪ್ರೋತ್ಸಾಹದಿಂದ ಮಕ್ಕಳ ಮನಸ್ಸಿನ ಮೇಲೆ ಕೀಳರಿಮೆ ಎಂಬ ಕಪ್ಪಾದ ಗೀಟು ಬೀಳುವುದನ್ನು ತಪ್ಪಿಸಬಹುದೆಂದು ಹೇಳುವ ಕಥೆಯೂ ಚೆನ್ನಾಗಿದೆ. ಇದರ ಜೊತೆ ನಮ್ಮ ಹೆಣ್ಣು ಮಕ್ಕಳಿಗೆ ಪುರಾಣದ ರಾಧೆ, ಸೀತೆಯರ ತಾಳ್ಮೆಯ, ಸಹನೆಯ ಕಥೆಗಳನ್ನಲ್ಲದೆ ರಾಣಿ ಚೆನ್ನಭೈರಾದೇವಿ, ಚೆನ್ನಮ್ಮ ರವರ ಶೌರ್ಯದ ಕಥೆಗಳನ್ನೂ ಇಂದಿನ ಸಮಾಜದ ಪರಿಸ್ಥಿಯಲ್ಲಿ ಹೇಳಬೇಕಾಗುತ್ತದೆ. ಮನೆಯ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಕುರಿತು ಹೇಳಿಕೊಡಬೇಕು, ಅವಳನ್ನು ಪೂಜಿಸುವುದು ಬೇಡ ಆಕೆಗೆ ಗೌರವ ತೋರಿಸಿದರೆ ಸಾಕು ಎಂಬ ಕಥೆ ಅದ್ಭುತವಾಗಿದೆ.

ಶೃಂಗೇರಿಯ ಸಮೀಪ ಗೌಡ್ಲು ಎಂಬ ಬುಡಕಟ್ಟಿನ ಜನಾಂಗದ ಬಗ್ಗೆ ಈ ಬರಹದಲ್ಲಿದೆ. ಮಳೆಯ ದೇವರೆಂದೇ ಹೆಸರಾದ ಕಿಗ್ಗ ಋಷ್ಯಶೃಂಗೇಶ್ವರ ಜಾತ್ರೆಯ ಸಮಯದಲ್ಲಿ ಅತೀ ಎತ್ತರದ ಗರುಡಗಂಭಕ್ಕೆ ಸರಿಸಮಾನವಾಗಿ ರಥ ಕಟ್ಟುವುದಕ್ಕೆ ಹಾಗು ಕಿಗ್ಗ ರಥ ಎಳೆಯುವುದಕ್ಕೆ ಗೌಡ್ಲುಗಳಿಗೆ ಪ್ರಥಮ ಸ್ಥಾನವಿರುವ ಮಾಹಿತಿಯನ್ನೂ ತಿಳಿಸಿದ್ದಾರೆ.

ಯಾರು ಯಾವ ಕ್ಷೇತ್ರದಲ್ಲಿರಲಿ, ತಮ್ಮ ತಮ್ಮ ಕೆಲಸವನ್ನು ಬೇರೆಯವರ ಕೆಲಸದೊಂದಿಗೆ ಹೋಲಿಕೆ ಮಾಡುವುದು ತಪ್ಪು. ಅವರವರ ಕೆಲಸದಲ್ಲಿ ಅವರವರದೇ ಸವಾಲುಗಳಿರುತ್ತವೆ. ಯಾವ ಬೆಟ್ಟವೂ ನುಣ್ಣಗಿರುವುದಿಲ್ಲ, ಅಲೆಲ್ಲಾ ಕಲ್ಲೂ ಇರುತ್ತದೆ, ಮುಳ್ಳೂ ಇರುತ್ತದೆ, ನಾವು ನೋಡುವ ದೃಷ್ಟಿ ಬದಲಾಗಬೇಕು ಎನ್ನುವ ಮಾತುಗಳು ಇದರ ಜೊತೆಗೆ ಗಂಡಸಿಗೂ ಗೊತ್ತಾಗಲಿ ಬಿಡಿ ಗೌರಿ ದುಃಖ ಎನ್ನುವ ಬರಹದಲ್ಲಿ ಮೂಲತಃ ಹೆಣ್ಣಿಗಿರುವಷ್ಟು ಸೂಕ್ಷ್ಮ ಮನಸ್ಸು, ಗಂಡಿಗಿರುವುದಿಲ್ಲ, ಮುಟ್ಟು, ಬಸುರಿ, ಬಾಣಂತನ ಎಂಬ ದೈಹಿಕ ಬದಲಾವಣೆಯಲ್ಲಿ ಆಕೆ ಪಡುವ ಸಂಕಟ, ನೋವು ಆತನಿಗೆ ತಟ್ಟಿರುವ ಸಾಧ್ಯತೆಯಿಲ್ಲ ಆದ್ದರಿಂದ ಅಕೆಯ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು, ಸಂಧರ್ಭಕ್ಕೆ ತಕ್ಕಂತೆ ಸಹನೆಯಿಂದ ವರ್ತಿಸಬೇಕು ಎನ್ನುವ ಮಾತುಗಳು ಮನಸ್ಸಿಗೆ ಹತ್ತಿರವಾಗುತ್ತದೆ.

ನಿಂದಕರಿರಬೇಕು ಜಗದೊಳುವಿನಲ್ಲಿ, ಹೊಗಳುವಿಕೆಗೆ ಖುಷಿಪಡುವುದು ಎಷ್ಟು ಶೀಘ್ರವೋ ತೆಗಳಿಕೆಗೆ ಕುಗ್ಗುವೂದೂ ಬೇಗನೆಯೆ. ಹೊಗಳಿಕೆಯನ್ನು ಮನಸ್ಸಿಗೆ ತೆಗೆದುಕೊಳ್ಳದೆ, ನಿಂದನೆಗೆ ಕುಗ್ಗದೆ ಛಲದಿಂದ ಬದುಕಿ ತೋರಿಸುವ ಹಾಗು ನಿಂದನೆಗೊ ಒಳಗಾಗದೆ ಗಟ್ಟಿ ಮನಸ್ಸನ್ನು ಬೆಳಸಿಕೊಳ್ಳಬೇಕೆನ್ನುವ ಕಥೆಯೂ ಹಾಗು ಹೊಟ್ಟೆ ಕಿಚ್ಚಿನಿಂದ ಆಗುವ ಮಾನಸಿಕ ಕ್ಷೋಭೆಗೂ, ಬೇರೆಯವರ ಗೆಲುವನ್ನು ಮನಃಪೂರ್ವಕವಾಗಿ ಸಂಭ್ರಮಿಸುವಾಗ ಮನ್ಸಿಸ್ಸಿಗಾಗವು ಸಂತೋಷ, ನೆಮ್ಮದಿ ಅಷ್ಟಿಷ್ಟಲ್ಲಾ, ಈ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು, ಟೀಕಿಸುವವರನ್ನು ಮೆಚ್ಚಿಸಲಾಗಲಿಲ್ಲ ಎಂದು ತೊಳಲಾಡುವುದಕ್ಕಿಂತ ಅವರನ್ನೆಲ್ಲಾ ಏಕೆ ಮೆಚ್ಚಿಸಿ ತಾನು ಜೀವನ ನಡೆಸಬೇಕು ಎಂಬ ಮನೋಭಾವ ಬೆಳಸಿಕೊಂಡರೆ ಮನಸ್ಸಿಗೆ ತೃಪ್ತಿ, ಏನೇ ಇರಲಿ ತೆರದ ಮನಸ್ಸಿನಿಂದ ಬಂದದನ್ನು ಸಂತೋಷವಾಗಿ ನಗುತ್ತಲೇ ಸ್ವೀಕರಿಸಿದಾಗ ಆಗುವ ತೃಪ್ತಿ ಹೇಳತೀರದ್ದು ಎನ್ನುವ ಈ ಎಲ್ಲಾ ಬರಹಗಳೂ ಅರ್ಥಪೂರ್ಣವಾಗಿದೆ.

ರಾಮಾಯಣವನ್ನು ಸೀತೆ, ಊರ್ಮಿಳೆ ದೃಷ್ಟಿಯಲ್ಲಿ ನೋಡಿದಾಗ ಇದು ಸೀತಾಯಣವೂ ಹೌದು ಎನ್ನುವ ಬರಹವೂ ಚೆನ್ನಾಗಿದೆ. ಹೆಣ್ಣಿನ ಸಂಕಟ, ತುಮುಲಗಳಿಂದ ಶುರುವಾಗುವ ರಾಮಾಯಣ ಮಗಿಯುವುದೂ ಹೆಣ್ಣಿನ ನೋವಿನೊಂದಿಗೆ ಎಂಬ ಭಾವ ತೀವ್ರವಾಗಿ ತಟ್ಟುವ ಪ್ರಸಂಗವನ್ನೂ ಸುಂದರವಾಗಿ ತೆರದಿಟ್ಟಿದ್ದಾರೆ. ರಾಮಾಯಣದ ನುಡುಗಟ್ಟುಗಳನ್ನು ಬಳಸುತ್ತಾ, ಬಾಲ್ಯದಿಂದ ಕಥೆಗಳನ್ನು ಅಜ್ಜಿಯಿಂದ ಕೇಳಿಸಿಕೊಂಡು ಬೆಳೆದು ರಾಮನಿಗಿಂತ ಹೆಚ್ಚು ಸೀತೆ ಹಾಗು ಊರ್ಮಿಳೆಯ ಪಾತ್ರಗಳ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿರುವ ರೀತಿ ಅತ್ಯದ್ಭುತ.

ಎಷ್ಟೋ ಬರಹಗಳಲ್ಲಿ ಅಲ್ಲಲ್ಲಿ ಕವಿಗಳ ಕವಿತೆಗಳ ಸಾಲುಗಳು ಹಾಗು ಅದರ ಅರ್ಥವೂ ಬರಹಕ್ಕೆ ತಕ್ಕಂತೆ ಹೇಳಿರುವೂದು ಸುಂದರವಾಗಿ ಮೂಡಿಬಂದಿದೆ. ಮುನ್ನುಡಿಯಲ್ಲಿ ಹೇಳಿದ ಹಾಗೆ ಇದು ಅಂತರಂಗದ ಕಥನವೂ ಹೌದು, ಬಹಿರಂಗದ ಕಥನವೂ ಹೌದು. ಕೆಲವಡೆ ಅಂತರಂಗ ಮತ್ತು ಬಹಿರಂಗ ಎಂಬ ದ್ವಂದ್ವಗಳನ್ನು ಮೀರಿದ ಕಥನ ಕೂಡ ಹೌದು.

- ಕಾರ್ತಿಕೇಯ

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...