ಲೇಖಕರು ಯಾರನ್ನೂ ನಿರಾಶೆಗೊಳಿಸದೆ ಎಲ್ಲ ಪಾತ್ರಗಳ ಬಗ್ಗೆಯೂ ಮನಸಾರೆ ಚಿತ್ರಿಸಿದ್ದಾರೆ


"ಲೇಖಕರೂ ಕಾದಂಬರಿಯಲ್ಲಿ ಆಗಾಗ ಬರುವುದಲ್ಲದೆ ಪಾತ್ರಗಳ ಜೊತೆ ಸಂಭಾಷಣೆಯನ್ನೂ ನಡೆಸುತ್ತಾರೆ. ತಮ್ಮ ಬಗ್ಗೆ ಮಾಸ್ತರರು (ಲೇಖಕರು) ಅವರ ಪುಸ್ತಕದಲ್ಲಿ ಬರೆದಿರುವುದನ್ನು ತಿಳಿದ ಪಾತ್ರಗಳು ಮಾಸ್ತರರಿಗೇ ತನ್ನ ಬಗ್ಗೆ ಹೀಗೆ ಬರೆಯಬಾರದಿತ್ತು, ಅದರಿಂದ ತನ್ನ ಪಾತ್ರಕ್ಕೆ ಕೆಟ್ಟ ಹೆಸರು ಬಂದಿತೆಂದು ಆದ್ದರಿಂದ ಒಳ್ಳೆ ರೀತಿಯಲ್ಲೀ ಬರೆಯಿರಿ ಎಂದು ಆದೇಶಿಸುವ ಪಾತ್ರಗಳ ಪ್ರಸಂಗಗಳು ಸ್ವಾರಸ್ಯಕರವಾಗಿವೆ," ಎನ್ನುತ್ತಾರೆ ಕಾರ್ತಿಕೇಯ ಭಟ್. ಅವರು ಡಾ. ವ್ಯಾಸರಾವ್ ನಿಂಜೂರ್ ಅವರ ‘ತೆಂಕನಿಡಿಯೂರಿನ ಕುಳುವಾರಿಗಳು’ ಕೃತಿ ಕುರಿತು ಬರೆದ ವಿಮರ್ಶೆ.

ಕಾದಂಬರಿ: ತೆಂಕನಿಡಿಯೂರಿನ ಕುಳುವಾರಿಗಳು
ಲೇಖಕರು: ಡಾ. ವ್ಯಾಸರಾವ್ ನಿಂಜೂರ್
ಪ್ರಕಾಶಕರು: ಅಂಕಿತ ಪುಸ್ತಕ
ಮೊದಲನೆಯ ಮುದ್ರಣ: 2016
ಬೆಲೆ: 225

ಕುಳುವಾರಿಗಳು ಎನ್ನುವ ಪದ ಕರಾವಳಿ ಜಿಲ್ಲೆಗಳಲ್ಲಿ ಪ್ರಚಲಿತವಿದ್ದು, ಇದು ಹೆಚ್ಚು ಕಡಿಮೆ ಆಸಾಮಿಗಳು ಎನ್ನುವ ಅರ್ಥವನ್ನು ಧ್ವನಿಸುತ್ತದೆ ಎಂಬುದನ್ನು ಲೇಖಕರು ಮುನ್ನುಡಿಯಲ್ಲಿ ಹೇಳಿದ್ದಾರೆ. ಇದು ತೆಂಕನಿಡಿಯೂರಿನ ಕುಳುವಾರಿಗಳ ಕಥೆ, ಒಬ್ಬೊಬ್ಬ ಕುಳುವಾರಿಗಳದು ಒಂದೊಂದು ಕಥೆ.

ದುಗ್ಗಪ್ಪಶೆಟ್ಟರಿಗೆ ಊರಿನಲ್ಲಿ ತಾನು ಪ್ರತಿಷ್ಠಿತ ಕುಳ ಎಂದು ರಾರಾಜಿಸಬೇಕು ಹಾಗು ತನ್ನದೆ ಹೆಸರಿನವರಾದ ದುಗ್ಗಪ್ಪಯ್ಯ ಹೆಗ್ಗಡೆಯವರ ಸೊಕ್ಕು ಮುರಿಯಬೇಕೆಂಬುವ ಬಯಕೆ, ಆದರೆ ಎಷ್ಟೇ ಪ್ರಯತ್ನಪಟ್ಟರೂ ಅದು ನೆರವೇರುತ್ತಿರಲಿಲ್ಲ. ಶೆಟ್ಟರು ಕೆಟ್ಟವರಲ್ಲ, ಬೇರೆಯವರಿಗೆ ಕೆಡುಕೆಣಿಸುವವರೂ ಅಲ್ಲ, ತನ್ನ ಗಂಡ ಭೋಳೆ ಸ್ವಭಾವದ ಬೋದಾಳ ಶಂಕರ ಎನ್ನುವುದು ಹೆಂಡತಿ ರುಕ್ಕು ಶಡ್ತಿಯ ಅಭಿಪ್ರಾಯ. ಇವರಲ್ಲದೆ ದುಗ್ಗಪ್ಪ ಹೆಗ್ಗಡೆ, ಶಿವರಾಮ ಭಟ್ಟರು, ಜಿಲ್ಲಾ ನಾಯ್ಕರು, ತನಿಯ, ಶಂಭು, ಶೇಖರ ಹಾಗು ಸುಂದರ, ಚಿಕ್ಕು, ಕಿಟ್ಟಪ್ಪು, ಕಾಳು ಭಟ್ಟರು, ಶೀನು ಭಟ್ಟರು ಈ ಎಲ್ಲಾ ಆಸಾಮಿಗಳ ಕತೆಯನ್ನು ನಮ್ಮ ಮುಂದೆ ಹಂತ ಹಂತವಾಗಿ ತೆರದಿಡುತ್ತಾ ಹೋಗುತ್ತಾರೆ, ಓದುತ್ತಾ ಓದುತ್ತಾ ಆ ಆಸಾಮಿಗಳ ಕಥೆಯಲ್ಲಿ ತಲ್ಲೀನರಾಗಿಬಡುತ್ತೇವೆ. ಕೆಲವು ಪ್ರಸಂಗಗಳು ಹಾಸ್ಯೋಸ್ಪದವಾಗಿ ಮೂಡಿಬಂದಿವೆ. ಲೇಖಕರು ಹೀಗೆ ಹೇಳುತ್ತಾರೆ * ಏನಾದರೂ ಮಾಡಲು ಹೋಗಿ ಮತ್ತೇನಾದರೂ ಆಗುವಂತಾದರೆ ತಮ್ಮಲ್ಲಿ ಅದಕ್ಕೆ “ಕುಪ್ಪಣ್ಣಯ್ಯನ ಕಶಿಗಿಶಿ” ಎಂದೋ ಅಥವಾ “ಸುಬ್ಬಯ್ಯ ಶೆಟ್ರಿ ವಿಲೇವಾರಿ” ಎಂದೋ ಹೇಳುವ ರೂಢಿ, ಅದರ ಜೊತೆ ತೆಂಕನಿಡಿಯೂರಿನ ಪೋಕರಿ ಹುಡುಗರು “ದುಗ್ಗಪ್ಪ ಶೆಟ್ರ ಕಂಬಳದಂತೆ” ಎನ್ನುವ ಮಾತನ್ನು ಸೇರಿಸಿ ಖುಷಿಪಟ್ಟಿದ್ದರು*. ಅದಕ್ಕೆ ಕಾರಣವೂ ಇತ್ತು, ಬೆಳ್ಳಳೆ ಕಂಬಳದಲ್ಲಿ ದುಗ್ಗಪ್ಪ ಶೆಟ್ಟರ ಕೋಣ ಓಡಸಿಲಿಕ್ಕೆ ಹೋಗಿ ಬಾರುಕೋಲಿನಿಂದ ಒಡೆದ ಚೀಂಕ್ರನನ್ನು ಅಟ್ಟಿಸಿಕೊಂಡು ಹೋಗಿದ್ದು, ತಾನು ಬದುಕುಳಿದರೇ ಸಾಕೆಂದು ಚೀಂಕ್ರನು ಮರ ಹತ್ತಿದ್ದು, ಅಲ್ಲಿ ಕೆಂಪಿರುವೆ ದಾಳಿಗೆ ತುತ್ತಾಗಿ ಧಡಾರನೆ ಬಿದ್ದದ್ದು, ಬೂದ ಗೋಲಿ ಸೋಡಾ ಹಾಗು ತನಿಯ ಮಡಿಕೆ ತುಂಬ ಕಳ್ಳು ಕುಡಿಸಿದ ಬಳಿಕ ಚೀಂಕ್ರ ಚಡ್ಡಿಯಲ್ಲೇ ಮೂತ್ರ ಮಾಡಿದ್ದು ಇದನ್ನು ಇಡೀ ಊರೇ ನೆನಸಿಕೊಂಡು ನಕ್ಕಾಗ ಶೆಟ್ಟರಿಗೆ ಅವಮಾನವಾಗಿತ್ತು, ಆದ್ದರಿಂದ ತೆಂಕನಿಡಿಯೂರಿನ ಪೋಕರಿ ಹುಡುಗರು ದುಗ್ಗಪ್ಪ ಶೆಟ್ರ ಕಂಬಳದಂತೆ ಎನ್ನುವ ಮಾತನ್ನು ಸೇರಿಸಿ ಖುಷಿಪಟ್ಟಿದ್ದರು.

ಇನ್ನು ಮತ್ತೊಂದು ಸಂಗತಿಯೆಂದರೆ ಲೇಖಕರೂ ಕಾದಂಬರಿಯಲ್ಲಿ ಆಗಾಗ ಬರುವುದಲ್ಲದೆ ಪಾತ್ರಗಳ ಜೊತೆ ಸಂಭಾಷಣೆಯನ್ನೂ ನಡೆಸುತ್ತಾರೆ. ತಮ್ಮ ಬಗ್ಗೆ ಮಾಸ್ತರರು (ಲೇಖಕರು) ಅವರ ಪುಸ್ತಕದಲ್ಲಿ ಬರೆದಿರುವುದನ್ನು ತಿಳಿದ ಪಾತ್ರಗಳು ಮಾಸ್ತರರಿಗೇ ತನ್ನ ಬಗ್ಗೆ ಹೀಗೆ ಬರೆಯಬಾರದಿತ್ತು, ಅದರಿಂದ ತನ್ನ ಪಾತ್ರಕ್ಕೆ ಕೆಟ್ಟ ಹೆಸರು ಬಂದಿತೆಂದು ಆದ್ದರಿಂದ ಒಳ್ಳೆ ರೀತಿಯಲ್ಲೀ ಬರೆಯಿರಿ ಎಂದು ಆದೇಶಿಸುವ ಪಾತ್ರಗಳ ಪ್ರಸಂಗಗಳು ಸ್ವಾರಸ್ಯಕರವಾಗಿವೆ. ಪಾಂಚ, ಜಿಲ್ಲ, ಚಂಪಾ, ಮಾಲತಿ ಇನ್ನು ಕೆಲವರು ತಮ್ಮ ಬರಹದಲ್ಲಿ ತಾವು ಬರಲೇ ಇಲ್ಲ, ತಮ್ಮ ಕುರಿತೂ ಬರೆಯಬೇಕೆಂದು ತಮಗೂ ಒಂದು ಸ್ಥಾನ ಕಲ್ಪಿಸಿಕೊಡಬೇಕೆಂದು ಕೇಳಿಕೊಂಡಾಗ ಲೇಖಕರು ಯಾರನ್ನೂ ನಿರಾಶೆಗೊಳಿಸದೆ ಎಲ್ಲ ಪಾತ್ರಗಳ ಬಗ್ಗೆಯೂ ಮನಸಾರೆ ಚಿತ್ರಿಸಿದ್ದಾರೆ.

ಶಿವರಾಮ್ ರಾವ್ ಅಂದರೆ ಊರಲ್ಲಿ ಯಾರಿಗೂ ಗೊತ್ತಾಗುತ್ತಿರಲಿಲ್ಲ ಅದೇ ತಟ್ಟಿ ಹೋಟಲು ಭಟ್ಟರು ಅಂದರೆ ಊರಿಗೇ ಅವರು ಪ್ರಸಿದ್ಧಿ, ಅವರ ತಟ್ಟಿ ಹೋಟಲು ಆ ಊರಿಗಿದ್ದ ಏಕೈಕ ಪಂಚತಾರಾ ಹೋಟೆಲು, ಅವರ ಹೋಟೇಲು ತೆರೆಯುವುದಕ್ಕೆ ದುಗ್ಗಪ್ಪ ಹೆಗ್ಗಡೆಯವರ ಸಹಾಯ ಹಾಗು ಅವರಲ್ಲಿ ಸಿಗುವ ರುಚಿಕರವಾದ ತಿಂಡಿ ತಿನಿಸುಗಳ ಕುರಿತು ಸುಂದರವಾಗಿ ವಿವರಿಸಿದ್ದಾರೆ. ಇದರ ಜೊತೆ ಜನರ ನಂಬಿಕೆಗಳ ಕುರಿತೂ ವಿವರಣೆ ಕೊಡುತ್ತಾರೆ, ಉದಾಹರಣೆಗೆ ತಮ್ಮ ಊರಿನಲ್ಲಿ ಬೊಬ್ಬರ್ಯ ಭೂತ ಮುನಿದಿದೆ, ಪಂಜುರ್ಲಿ ಮುನಿದಿದೆ, ಬೆಳ್ಳಳೆ ಮಾಲಿಂಗೇಶ್ವರನಿಗೆ ಸಹಸ್ರ ಬೊಂಡಾಭಿಷೇಕ ಮುಡುವುದೇ ಇದಕ್ಕೆ ಪರಿಹಾರ ಎಂದು ಭೂತ ನುಡಿಕಟ್ಟು ಕೊಟ್ಟಿದೆ ಎನ್ನುವ ನಂಬಿಕೆಗಳು.

ಊರು ಬಿಟ್ಟು ಮುಂಬಯಿಗೆ ಹೋದ ದುಗ್ಗಪ್ಪ ಶೆಟ್ಟರ ಮಗ ಶಂಭುವಿನ ಕಥೆ ಇದೆ, ಆತನು ಮುಂಬಯಿಗೆ ಹೋಗಬೇಕು ದೊಡ್ಡ ಜನ ಅನಿಸಿಕೊಳ್ಳಬೇಕೆಂದು ಹೋಗಿರುತ್ತಾನೆ, ಆತನು ದೊಡ್ಡ ಜನ ಯಾವಾಗಾಗುತ್ತಾನೋ ಊರಿಗೆ ಯಾವಾಗ ಬರುತ್ತಾನೋ ಎನ್ನುವ ಚಿಂತೆಯಲ್ಲಿ ಶೆಟ್ಟರು ಜೀವನ ಸಾಗಿಸುತ್ತಾರೆ. ಶಂಭುವಿನ ಸಮಾಚಾರ ತಿಳಿಯಲು ಜ್ಯೋತಿಷ್ಯ ಕೇಳಿಸಿ, ಕೇರಳದ ಯಾವನೊ ಸುಡುಗಾಡು ಮಂತ್ರವಾದಿ ಅಂಜನ ಹಾಕಿಸಿ, ನಾಗ ತಂಬಿಲ, ಭೂತಕ್ಕೆ ಪನಿವಾರ ಸೇವೆ, ಭೋಗ, ನಾಗಮಂಡಲ, ಪಂಜುರ್ಲಿಗೆ ಕೋಲ ನಡೆಸುವ ಶೆಟ್ಟರ ಭಾವನೆಗಳನ್ನು ಅತ್ಯದ್ಭುತವಾಗಿ ವರ್ಣಿಸಿದ್ದಾರೆ.

ಇದರ ಜೊತೆಗೆ ಮುಂಬಯಿಯಲ್ಲಿ ನಡೆಯುವ ತೆಂಕನಿಡಿಯೂರಿನ ಕುಳುವಾರಿಗಳ ಕಥೆಯನ್ನೂ ಎಳೆಎಳೆಯಾಗಿ ವಿವರಿಸುತ್ತಾರೆ, ದುಗ್ಗಪ್ಪ ಹೆಗ್ಗಡೆ ಮಕ್ಕಳಾದ ಶೇಖರ, ಸುಂದರರ ದುಷ್ಕೃತ್ಯಗಳ ಬಗ್ಗೆ, ಕೊಲೆ, ಎಕ್ಸ್ ಟಾರ್ಶನ್, ಡ್ರಗ್ಸ್, ವಿದೇಶಿ ಮಾಲುಗಳ ಕಾಳದಂಧೆ, ವೇಶ್ಯಾ ವ್ಯಾಪರ ಹೀಗೆ ಅದೆಷ್ಟೋ ಅಪರಾಧಗಳನ್ನು ಮಾಡುವ ಶೇಖರ, ಸುಂದರರ ಕುರಿತು, ಮಾಲತಿಯನ್ನು ಚಂದು ಶೆಟ್ಟಿಯ ಮೂಲಕ ಘರವಾಲಿಗೆ ಮಾರಿದ್ದು, ಹೆಗ್ಗಡೆ ಸೋದರರು ಶಂಭುವನ್ನು ಕೊಲ್ಲಿಸಲು ಯತ್ನಿಸಿದ್ದು, ಆದರೆ ಶಂಭುವಿನ ಬ್ಯಾಂಕಿನ ಗೆಳೆಯರ ಸಹಾಯದಿಂದ ಪಾರಾಗಿ ನಂತರ ಉಡುಪಿ ಕಫೆಯ ಶೇಠ್ ಆದದ್ದು, ಚಂಪಾರಾಣಿ ಪ್ರಸಂಗ, ಶಂಭು ಮಾಲತಿಯ ಭೇಟಿ, ಆಕೆಯೊಂದಿಗ ಮದುವೆ, ಬ್ಯಾಂಕಿನ ಗೆಳೆಯ ನರಸಿಂಹನ ಹತ್ಯೆ, ಎಕ್ಸ್ ಟಾರ್ಶನ್, ಡ್ರಗ್ಸ್, ವಿದೇಶಿ ಮಾಲುಗಳ ಕಾಳದಂಧೆ, ವೇಶ್ಯಾ ವ್ಯಾಪರ ಕೇಸುಗಳಲ್ಲಿ ಶೇಖರನಿಗೆ ಶಿಕ್ಷೆಯಾದದ್ದು, ಸುಂದರ ಆಕಸ್ಮಿಕವಾಗಿ ನಾಪತ್ತೆಯಾದದ್ದು ಎಲ್ಲವನ್ನೂ ವಿವರಿಸುತ್ತಾರೆ.

ಊರಿನಲ್ಲಿ ಒಂದು ಸುದ್ಧಿ ಹೇಗೆಲ್ಲಾ ಹರಡುತ್ತೆಂದರೆ, ಶೆಟ್ಟರ ಕೋಣಗಳು ಚೀಂಕ್ರನನ್ನು ಅಟ್ಟಿಸಿಕೊಂಡು ಹೋದದ್ದು, ಕೋಳಿಯಂದಲ್ಲಿ ಶೆಟ್ಟರಿಗೆ ಗೆಲುವಾದದ್ದು, ಶಂಭು ಮುಂಬಯಿಗೆ ಓಡಿಹೋದ, ಪತ್ತೆಯಾದ ನಂತರ ಶೆಟ್ಟರಿಗೆ ೫೦೦ ರೂ ಮನಿ ಆರ್ಡರ್ ಬಂದಾಗ ವಿಷಯ ಜಿಲ್ಲನಿಗೆ ತಿಳಿದು ತಟ್ಟಿ ಹೋಟಲಿನ ಭಟ್ಟರಿಗೆ ಶೆಟ್ಟರಿಗೆ ಶಂಭು ೫೦೦೦ ಕಳುಹಿಸಿದ್ದಾನೆಂದು, ಶಿವರಾಮ ಭಟ್ಟರು ಹೆಗ್ಗಡೆಯವರಲ್ಲಿ ಶಂಭು ೫೦೦೦೦ ಕಳುಹಿಸಿದನೆಂದು , ಇದನ್ನು ತಿಳಿದ ಹೆಗ್ಗಡೆ ಹಾಗು ಇನ್ನಿತರ ಕುಳುವಾರಿಗಳು ಶಂಭು ಏನೋ ಅಡ್ಡದಾರಿಯೇ ಹಿಡಿದಿರಬೇಕು, ಹೋಟಲ್ ವ್ಯಾಪಾರ ಮಾಡುತ್ತಾ ೫೦೦೦೦ ಸಾವಿರ ಕಳುಹಿಸಿದ್ದಾನೆಂದರೆ ನಂಬಲು ಸಾಧ್ಯವಿಲ್ಲ ಎಂದು ಮಾತಾನಾಡಿಕೊಂಡಿದ್ದರು, ಮಾಲತಿ ಓಡಿಹೋದಳು, ಮೊದುವೆಯಾಗದೇ ಶಂಭುವಿನಿಂದ ಬಸುರಾದಳು, ಆದ್ದರಿಂದ ಶಂಭುವು ಮಾಲತಿ ಗುಟ್ಟಾಗಿ ಮದುವೆಯಾದದ್ದು ಹೀಗೆ ಒಂದು ಸುದ್ಧಿಯು ಊರಿನಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವಿಷಯಗಳ ಕುರಿತೂ ಹೇಳುತ್ತಾರೆ.ಈ ಒಂದಲ್ಲಾ ಒಂದು ಸುದ್ಧಿಗಳು ನಾವು ನಮ್ಮ ಬಾಲ್ಯದಿಂದ ಕೇಳಿರುವಂತವುಗಳೇ.

ಈ ಕಾದಂಬರಿಯಲ್ಲಿ ಅಲ್ಲಲ್ಲಿ ತುಳುವಿನ ಪದಗಳೂ ಬಳಸಿದ್ದಾರೆ. ನನಗೂ ತುಳು ಅರ್ಥವಾಗುವ ಕಾರಣ ಆ ಪದಗಳನ್ನು ಓದುತ್ತಿದ್ದಾಗ ಏನೋ ಒಂದು ರೀತಿ ಸಂತೋಷವಾಗುತ್ತಿತ್ತು. “ಈ ಕಾದಂಬರಿ ಓದಿ ಮುಗಿಸಿದ ನಂತರ ಕಂಬಳವನ್ನು ನೋಡಿದ ಹಾಗಾಯ್ತು, ತಟ್ಟಿ ಹೋಟಲಿನ ಬಿಸ್ಕಟ್ಟು, ಆಂಬೋಡೆಯನ್ನು ಸವಿದದ್ದಾಯ್ತು, ನಾಗ ತಂಬಿಲ, ಭೂತಕ್ಕೆ ಪನಿವಾರ ಸೇವೆ, ಭೋಗ, ನಾಗಮಂಡಲ, ಪಂಜುರ್ಲಿಗೆ ಕೋಲ ಇವೆಲ್ಲವನ್ನೂ ನೋಡಿದ ಹಾಗಾಯ್ತು, ಮುಂಬಯಿ ಜೀವನವನ್ನೂ ಅನುಭವಿಸಿದ್ದಾಯ್ತು, ಕುಳುವಾರಿಗಳ ಜೊತೆ ಸಂಭಾಷಣೆಯನ್ನೂ ನಡೆಸಿದ್ದಾಯ್ತು, ಅಲ್ಲಲ್ಲಿ ಕಾಣಿಸಿಕೊಳ್ಳುವ ಲೇಖಕರನ್ನೂ ಮಾತಡಿಸಿದ ಹಾಗಾಯ್ತು. ಒಂದೊಳ್ಳೆ ಕಾದಂಬರಿಯನ್ನು ಓದಿದ ಖುಷಿಯೂ ಆಯ್ತು.”

- ಕಾರ್ತಿಕೇಯ

 

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...