ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು


‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 2020ರಲ್ಲಿ ಹೆಗ್ಗೋಡಿನಲ್ಲಿದ್ದಾಗ ನನಗೆ ನನ್ನ ಜೀವನ ಚರಿತ್ರೆಯನ್ನು ಬರೆಯಬೇಕೆಂಬ ಹುಮ್ಮಸು ಬಂತು,’ ಎನ್ನುತ್ತಾರೆ ಭಾರತಿ ಭಟ್. ಅವರು ತಮ್ಮ ‘ಬದುಕು ಬರಹ’ ಕೃತಿಗೆ ಬರೆದ ಸಾಲುಗಳಿವು.

ಈ ಪುಸ್ತಕದಲ್ಲಿ ನಾನು ನನ್ನ ಎಳೆಹರೆಯದಿಂದ ತೊಡಗಿ ಮುದಿತನದ ಎಂದರೆ 80ನೇ ವರ್ಷದ ವರೆಗೆ ನಡೆದುದನ್ನು ತುಂಬಾ ಅಡಕವಾಗಿ ಬರೆದಿದ್ದೇನೆ. 1963ರಲ್ಲಿ ನನ್ನ ಮದುವೆಯಾಯಿತು. ಆಮೇಲೆ ನನ್ನ ನಡುಹರೆಯದ ಜೀವನ. ಹಲವಾರು ಊರುಗಳಲ್ಲಿ ಮತ್ತು ನಾಡುಗಳಲ್ಲಿ ನನ್ನ ಪತಿಯೊಡನೆ ಮತ್ತು ಮಕ್ಕಳೊಡನೆ ಒಡನಾಡಿದ ಸುದ್ದಿಗಳನ್ನು ಇದರಲ್ಲಿ ಬರೆದಿದ್ದೇನೆ. ಪುಣೆಯಲ್ಲಿದ್ದಾಗ, ಮತ್ತು ಬೇರೆಯೂ ಹಲವು ಕಡೆಗಳಲ್ಲಿದ್ದಾಗ ನಾನು ದಿನಚರಿ ಬರೆಯುತ್ತಿದ್ದೆ. ಆದರೆ, ಅವುಗಳನ್ನೆಲ್ಲ ನಾನು ಇಟ್ಟುಕೊಂಡಿಲ್ಲ. ಹಾಗಾಗಿ, ನನ್ನ ನೆನೆಪಿಂದಲೇ ಈ ಸುದ್ದಿಗಳನ್ನು ಆರಿಸಿ ಬರೆಯಬೇಕಾಗಿದೆ.

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 2020ರಲ್ಲಿ ಹೆಗ್ಗೋಡಿನಲ್ಲಿದ್ದಾಗ ನನಗೆ ನನ್ನ ಜೀವನ ಚರಿತ್ರೆಯನ್ನು ಬರೆಯಬೇಕೆಂಬ ಹುಮ್ಮಸು ಬಂತು. ಆದರೆ, ಅದಕ್ಕೆ ನೆರವಾಗಲು ನನ್ನ ಬಳಿ ನಾನು ನನ್ನ ಮದುವೆಯಾದಂದಿನದಲೂ ಬರೆಯುತ್ತಿದ್ದ ದಿನಚರಿ ಇರಲಿಲ್ಲ.

ನನ್ನ ನೆನಪಿಗೆ ಬಾರದ ಹಿಂದಿನ ಸುದ್ದಿಗಳನ್ನು ನನ್ನ ಪತಿಯನ್ನು ಕೇಳಿ, ಮತ್ತು ಹಿಂದಿನ ನನ್ನ ಬರಹಗಳಲ್ಲಿ ಬರೆದುದನ್ನು ಓದಿ, ಬರೆದಿದ್ದೇನೆ. ನನ್ನ ಮಗಳು ಮಾಲತಿಯೂ ಕೆಲವು ಸುದ್ದಿಗಳನ್ನು ತಿಳಿಸಿದಳು. ನನ್ನ ಮಗ ನಾರಾಯಣ ಅವನಿಗೆ ನಾನು ಬರೆದಿದ್ದ ಕೆಲವು ಪತ್ರಗಳನ್ನು ಮತ್ತು ಅವಗೆ ನಾನು ಕೊಟ್ಟಿದ್ದ ಕೆಲವು ದಿನಚರಿಗಳನ್ನು ಇಟ್ಟುಕೊಂಡಿದ್ದ. ಅವುಗಳನ್ನು ಓದಿಕೊಂಡು ಹಿಂದೆ ನಡೆದ ಕೆಲವು ಸುದ್ದಿಗಳನ್ನು ಅವನು ನನಗೆ ಬರೆದು ಕೊಟ್ಟಿದ್ದ.

ನಾನು ಈ ಪುಸ್ತಕವನ್ನು ಬರೆಯುತ್ತಿದ್ದಾಗ ನನ್ನ ಚಿಕ್ಕಪ್ಪನ ಮಗ ಡಾ. ಶ್ರೀಧರ ಭಟ್ ಬರೆದ ಬಡೆಕ್ಕಿಲ ವಂಶಾವಳಿ ಎಂಬ ಪುಸ್ತಕ ಸಿಕ್ಕಿತು. ಅದನ್ನು ಓದಿದ ಮೇಲೆ, ನನಗೆ ಹಿಂದಿನ ಕೆಲವು ಸುದ್ದಿಗಳು ನೆನೆಪಿಗೆ ಬಂದುವು. ಅವನ್ನೂ ಇದರಲ್ಲಿ ಸೇರಿಸಿದ್ದೇನೆ. ಬದುಕು ಬರಹ ನಾನು ಕಂಪ್ಯೂಟರ್‌ನಲ್ಲಿ ಟೈಪಿಸಿದ ಈ ಬರಹವನ್ನು ನನ್ನ ಮಗಳು ಮಾಲತಿ ಓದಿನೋಡಿ ಕೆಲವು ಕಡೆ ಸರಿಪಡಿಸಿದ್ದಾಳೆ, ಮತ್ತು ಅದನ್ನು ಅವಳ ಪ್ರಿಂಟರಿನಲ್ಲಿ ಪ್ರಿಂಟ್‌ ಮಾಡಿ ಕೊಟ್ಟಿದ್ದಾಳೆ. ಇದರ ಡಿಟಿಪಿ ಕೆಲಸವನ್ನು ನನ್ನ ಪತಿ ಶಂಕರ ಭಟ್ಟರು ಮಾಡಿದ್ದಾರೆ. ನನ್ನ ಆಲ್ಬಂನಲ್ಲಿದ್ದ ಫೋಟೊಗಳಲ್ಲಿ ಕೆಲವನ್ನು ಆರಿಸಿ, ಅವನ್ನು ಈ ಪುಸ್ತಕದ ಕೊನೆಯಲ್ಲಿ ಕೊಡುವಂತೆ ನನ್ನ ಮಗಳು ಮಾಲತಿ ಅವನ್ನು ಎಡಿಟ್ ಮಾಡಿದ್ದಾಳೆ. ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಬೆಂಗಳೂರಿನ ಹರಿವು ಪ್ರಕಾಶನದವರಿಗೆ, ಇದಕ್ಕೊಂದು ಚಂದವಾದ ಹೊದಿಕೆಯನ್ನು ಬಿಡಿಸಿಕೊಟ್ಟ ಶ್ರೀಯುತ ವಲ್ಲೀಶ್ ಕುಮಾರ್ ಅವರಿಗೆ, ಮತ್ತು ಇದನ್ನು ಅಂದವಾಗಿ ಅಚ್ಚು ಹಾಕಿಸಿದ ಗಣೇಕ ಮುದ್ರಣಾಲಯದವರಿಗೆ ನಾನು ಆಭಾರಿ.

-ಭಾರತಿ ಭಟ್

MORE FEATURES

ವಿಮರ್ಶೆ ಎನ್ನುವುದು ಕೇವಲ ಪರಿಶ್ರಮದಿಂದ ಸಿದ್ಧಿಸುವ ಕಲೆಯಲ್ಲ

05-05-2024 ಬೆಂಗಳೂರು

'ಕನ್ನಡ ಸಾಹಿತ್ಯದಲ್ಲಿ ವಿರಳಾತಿ ವಿರಳರಾಗಿರುವ ವಸ್ತು ನಿಷ್ಠ ವಿಮರ್ಶಕರ ನಡುವೆ ಪ್ರಮುಖರಾದ ನರೇಂದ್ರ ಪೈ ಅವರ ಹೊಸ ...

ಕೌಟುಂಬಿಕ, ಸಾಮಾಜಿಕ ಪರಿಸರವೇ ದುಷ್ಕೃತ್ಯಕ್ಕೆ ಕಾರಣ

05-05-2024 ಬೆಂಗಳೂರು

'ಎಲ್ಲಾ ಕಾಲಘಟ್ಟದಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದೆ. ಆದರೆ ಅದರ ಪ್ರಮಾಣ ದಿನೇ, ದಿನೆ ಹೆಚ್ಚಾಗುತ್ತಿದೆ....

ಮನ ತಟ್ಟಿದ ಕೃತಿ ‘ಹಿಮಾಲಯನ್ ಬ್ಲಂಡರ್’ 

05-05-2024 ಬೆಂಗಳೂರು

"ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಇದುವರೆಗೂ ಕುವೆಂಪು, ತೇಜಸ್ವಿ, ಭೈರಪ್ಪ ಸೇರಿದಂತೆ ಹಲವರ ಕ...