ನಾನು ಕಾವ್ಯದಲ್ಲಿ ಬಯಸುವುದು ಭಾವನಾದಗಳ ಪರಿಣತಿಯನ್ನು: ಚೆನ್ನವೀರ ಕಣವಿ


ಸರಳತೆ ನನ್ನ ಕಾವ್ಯದ ಸಹಜ ಗುಣ ಅಷ್ಟೇ. ವರ್ಣಕತೆಯಿಂದ ಓದುಗರು ಆಕರ್ಷಿತರಾಗುವುದಿಲ್ಲವೆ? ಆ ಮೇಲೆ ಅದರ ಆಳಕ್ಕೆ ಅವರನ್ನು ಕರೆದೊಯ್ಯಲಿಕ್ಕೆ ಸುಲಭ. ಕಾವ್ಯ ಆಡುವ ಮಾತಿನಲ್ಲೇ ಅಲಂಕಾರವಿದೆ; ಹೊರಗಲ್ಲ. ಇನ್ನು ’ನಾದಮಯತೆ’ ನನ್ನ ಕಾವ್ಯದಲ್ಲಿ ಕಾಣದು ಎಂದಿರಿ. ನಾನು ಕಾವ್ಯದಲ್ಲಿ ಬಯಸುವುದು ಭಾವನಾದಗಳ ಪರಿಣತಿಯನ್ನು ಎನ್ನುವ ವಿಚಾರವನ್ನು ಚೆನ್ನವೀರ ಕಣವಿ ಅವರು ಕಮಲಾ ಹೆಮ್ಮಿಗೆಯವರ ಸಂದರ್ಶನದಲ್ಲಿ ಹೇಳುತ್ತಾರೆ. ‘ಚೆಂಬೆಳಕಿನಲ್ಲೊಂದು ಸಂಜೆ; ಸಾಹಿತಿ ಚೆನ್ನವೀರ ಕಣವಿಯೊಂದಿಗೆ’ ಕುರಿತ ಸಂದರ್ಶನ ನಿಮ್ಮ ಓದಿಗಾಗಿ...

ಇದೇ ಜೂನ್ ಇಪ್ಪತ್ತಾರಕ್ಕೆ, ಅರುವತ್ತರ ಅಂಚಿನಲ್ಲಿರುವ ಸಾಹಿತಿ, ಶ್ರೀ ಚೆನ್ನವೀರ ಕಣವಿಯವರನ್ನು ಸಂದರ್ಶಿಸಲು ಹೋದಾಗ- ಧಾರವಾಡದ ಅಡ್ಡಮಳೆಯ ಆರ್ಭಟ. ಕಲ್ಯಾಣನಗರದ ಅವರ ಮನೆ ‘ಚೆಂಬೆಳಕು’ ವಿನಲ್ಲಿ, ಅವರು ವಾತ್ಸಲ್ಯದಿಂದ ಬೆಳೆಸಿದ ಹೂವಿನ ಗಿಡಗಳು, ಹಾಗೆ- ಹೀಗೆ ತಲೆಯಾಡಿಸುತ್ತಿದ್ದವು.

ಕೊಕ್ಕರೆ ಗರಿಯಂತೆ ಬೆಳ್ಳಗಿನ ಜುಬ್ಬಾ, ಪೈಜಾಮ ಧರಿಸಿದ್ದ ಕಣವಿಯವರು ತಮ್ಮ ಸಾಹಿತಿ ಪತ್ನಿ ಶ್ರೀಮತಿ ಶಾಂತಾದೇವಿ ಕಣವಿಯವರೊಂದಿಗೆ ಬರಮಾಡಿಕೊಂಡರು. ಕಿಟಕಿಯೊಳಗೆ ಕೋಲ್ಮಿಂಚು ಸುಳಿಯುತ್ತಿದ್ದಂತೆ, ವಿದ್ಯುತ್ ಕಣ್ಣು ಮುಚ್ಚಾಲೆಯಾಡತೊಡಗಿತು. ಕವಿ ‘ಮಳೀ ನೋಡಿದ್ರ ಮಾತೇ ಬ್ಯಾಡ ಅನಿಸ್ತದ’ ಎಂದರು. ಕವಿಪತ್ನಿ, ಮೇಣದ ಬತ್ತಿ ಹಚ್ಚಿದಾಗ ಒಂದು ಬಗೆಯ ತೀವ್ರ ಆಪ್ತಭಾವ ಎಲ್ಲರನ್ನೂ ಆವರಿಸಿತು. ‘ವಿದ್ಯುದ್ವೀಪಕ್ಕಿಂತ ತಂಪದ ನೋಡ್ರಿ. ಹೆಚ್ಚು ವಿಚಾರ ಮಾಡ್ಲಿಕ್ಕೆ ಹಚ್ತದ’ ಎಂದರು ಕಣವಿ. ‘ಬಹುಶಃ ಕವಿತೆ ಕೊಡುವ ಆಪ್ತ, ಖಾಸಗೀ ಅನುಭವದ ಹಾಗೆ?’ ಎಂದೆ -ಮುಗುಳ್ನಕ್ಕು ‘ನೋಡ್ರಿ, ಬೇಂದ್ರೆಯವರನ್ನ ಶ್ರಾವಣದ ಕವಿ ಅಂಧಂಗ ನನ್ನೂ ಮಳೆಗಾಲದ ಕವಿ ಅಂತ ಒಬ್ರು ಕರೆದಾರ’ ಎಂದರು. (ನಿಜವೇ, ಧಾರವಾಡದ ಮಳೆ, ತನ್ನೆಲ್ಲ ಭವ್ಯತೆಯೊಂದಿಗೆ ಅದರ ಕಾವ್ಯದಲ್ಲಿ ಚಿತ್ರಿತವಾಗಿದೆ.)

ಸಂದರ್ಶನ, ಮಾತುಕತೆ ಮುಗಿಯಿತು. ಚಹಾಪಾನ ಇತ್ಯಾದಿಯ ನಂತರ, ತೋಟಕ್ಕೆ ಹೋದೆವು. ಮಳೆ ಸಣ್ಣಗಿತ್ತು. ಮಾವಿನಗಿಡ, ಹೆಚ್ಚಿನ ಹನಿಗಳನ್ನು ತಳಿಯುತ್ತಿತ್ತು. ಮಾವಿನ ಕಾಯಿಗಳು, ಹುಳಿಯ ಸೊಕ್ಕಿನಿಂದ ತೂಗುತ್ತಿದ್ದವು. ಎಟಕುತ್ತಿದ್ದರಿಂದ ಕೈಯಲ್ಲಿ ಹಿಡಿದೆ. ಕಣವಿಯವರು ‘ಹಣ್ಣಾದ ಮೇಲೆ ನೀವು ಇನ್ನೋಮ್ಮೆ ಬರಬೇಕು’ ಎಂದರು. ‘ಒಗರು ಒಳ್ಳೆಯದಲ್ಲ’ ಎಂದು ತಮ್ಮದೇ ಶೈಲಿಯಲ್ಲಿ ಸೂಚ್ಯವಾಗಿ ತಿಳಿಸಿದ್ದರು! ಅಲ್ಲೇ ಅಶೋಕದ ಗಿಡವಿತ್ತು. ಚಿಗುರುಗಳನ್ನು ಸೂಚಿಸುತ್ತ ‘ಎಣ್ಣೆ ಬಳಿದು ಕೊಡಂಗನಿಸ್ತದಲ್ಲ?’ ಎಂದರು. (ಯುಗಾದಿಯ ಕವಿತೆ’ ಎಂಬ ಸಾನೆಟ್ಟಿನಲ್ಲಿ ಅವರು ಇದೇ ಉಪಮೆ ಬಳಸಿದ್ದು ನೆನಪಾಯಿತು.)

ಮಳೆ ನಿಂತಿತು. ವಾತಾವರಣ ತಂಪಾಗಿತ್ತು. ನಾನು ವಾಪಸು ಬಂದೆ. ಚೆಂಬೆಳಕು ಮನಸ್ಸನ್ನು ತುಂಬಿಕೊಂಡಿತ್ತು.
ತಮ್ಮ ‘ಜೀವಧ್ವನಿ’ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಣವಿಯವರು ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನೂ ಪಡೆದಿದ್ದಾರೆ. ‘ಸಾಹಿತ್ಯ ಚಿಂತನ’, ಕಾವ್ಯಾನುಸಂಧಾನ’ ‘ಸಮಾಹಿತ’ ಇವು ಮೂರೂ ಗದ್ಯಕೃತಿಗಳು.

‘ಕಾವ್ಯಾಕ್ಷಿ’ ಯಿಂದ (1949) ‘ಹೂವು ಹೊರಳುವವು ಸೂರ್‍ಯನ ಕಡೆಗೆ’ (ಗೇಯ ಕವಿತೆಗಳು) ಒಟ್ಟು ಹನ್ನೆರಡು ಕವನ ಸಂಕಲನಗಳು. ‘ಚಿರಂತನದಾಹ’ ಆಯ್ದ ಕವನಗಳ ಸಂಕಲನ. ಮಕ್ಕಳ ಪದ್ಯ ಕೃತಿಯನ್ನೂ ಹೊರತಂದಿದ್ದಾರೆ. ಬಾನುಲಿ, ದೂರದರ್ಶನಗಳಲ್ಲಿ ಅನೇಕ ಕಾರ್‍ಯಕ್ರಮಗಳನ್ನು ನೀಡುತ್ತಿದ್ದಾರೆ. ಕನ್ನಡ ಕ್ರಿಯಾಸಮಿತಿಯ ಅಧ್ಯಕ್ಷರಾಗಿದ್ದಾರೆ.

ಕಣವಿಯವರೇ, ನಿಮ್ಮದು ‘ಸಮನ್ವಯ ಕಾವ್ಯ ಮಾರ್ಗ’ ಎನ್ನಿಸಿಕೊಂಡಿದೆ. ‘ಮಧ್ಯಮಾ ಮಾರ್ಗದ್ದು’ ಎಂದೂ ಹಲವರು ಕರೆದಿದ್ದಾರೆ. ನಿಮ್ಮ ಇಂಥ ಸಮನ್ವಯತೆ ಅನಿವಾರ್‍ಯವಾಗಿ ಒಡಮೂಡಿದ್ದೆ? ಇಲ್ಲ.. ಪ್ರಯೋಗಶೀಲ ಮೂಲವಾದದ್ದೆ- ಅಥವಾ ನವ್ಯದಿಂದಾದ ನಿರಾಶೆ ಏನಾದರೂ..?
ಕಣವಿ : ನೋಡ್ರಿ, ಈ ಪದ ಹೀಗೆ ಬಳಕೆಯಲ್ಲಿ ಬರಲಿಕ್ಕೆ ಒಂದು ಸಂದರ್ಭ ಬಹುಶಃ ನಿಮಿತ್ತವಾಗಿರಬಹುದು. ಅದೇನು ಅಂದರೆ, 1967ನೇ ಇಸ್ವಿ, ನವೆಂಬರದಲ್ಲಿ ಗೋಕಾಕರು ಬೆಂಗಳೂರಿನಿಂದ ‘ಸಮನ್ವಯ’ ಎಂಬ ತ್ರೈಮಾಸಿಕವೊಂದನ್ನು ಪ್ರಾರಂಭಿಸಿದರು. ನಾಲ್ಕೈದು ವರ್ಷ ಚೆನ್ನಾಗಿಯೂ ನಡೀತು. ಅದರ ಸಂಪಾದಕ ಸಮಿತಿಯಲ್ಲಿ ನಾನೂ ಇದ್ದೆ. ಶಿವರುದ್ರಪ್ಪನವರೂ ಇದ್ದರು. ನಮ್ಮನ್ನು ಸಮನ್ವಯ ಕವಿಗಳೆಂದು ಕರೆಯಲು ಕೆಲವರಿಗಾದರೂ ಇದು ಪ್ರೇರಣೆ ನೀಡಿರಬಹುದಲ್ಲವೇ? ಆದರೆ ಆ ಪತ್ರಿಕೆಯ ಧ್ಯೇಯವಾಕ್ಯದಲ್ಲಿರುವ ಒಂದು ಮಾತನ್ನು ಹಲವರು ಗಮನಿಸಿದಂತಿಲ್ಲ. ಆದೇನೆಂದರೆ “ಸಮನ್ವಯ ದೃಷ್ಟಿಯೆಂದು ಸಮಸ್ತ ವೈವಿಧ್ಯಗಳನೆಲ್ಲಾ ಒಂದು ಏಕಾತನೆಗೆ ತರುವ ಪ್ರಯತ್ನವಲ್ಲ, ಅಥವಾ ಎಲ್ಲವನ್ನೂ ಸದ್ದಿಲ್ಲದೆ ಒಪ್ಪಿಕೊಂಡು ಸಂತೈಸಿಕೊಳ್ಳುವ ಸುಲಭ ಸಮಾಧಾನ ತಂತ್ರವೂ ಅಲ್ಲ”

1956ರಲ್ಲಿ ಪ್ರಕಟವಾದ ನನ್ನ ‘ದೀಪಧಾರಿ’ ಕವನ ಸಂಗ್ರಹದ ಮುನ್ನುಡಿಯಲ್ಲಿ ಆ ಕವಿತೆಗಳ ಬಗ್ಗೆ ಹೇಳುತ್ತ ”ಆಧುನಿಕ ಭಾವಗೀತೆ ಹಾಗೂ ನವ್ಯ ಮಾರ್ಗಗಳ ನಡುವೆ ನಿರ್ಮಾಣಗೊಂಡಿರುವ ಕಂದರಕ್ಕೆ ಇದು ಸೇತುವೆಯಾದೀತು” ಎಂಬ ಭಾವನೆ ವ್ಯಕ್ತಪಡಿಸಿದ್ದೆ. ಮುಂದೆಯೂ ನನ್ನ ರೀತಿಯಲ್ಲಿ ನಾನು, ಕಾವ್ಯ ರಚನೆಯನ್ನು ಮುಂದುವರೆಸಿಕೊಂಡು ಬಂದೆ. ಕನ್ನಡ ಕಾವ್ಯ ಪರಂಪರೆಯಲ್ಲಿಯ ನನ್ನ ಶ್ರದ್ದೆ ಹಾಗೂ ಹೊಸದರ ಬಗೆಗಿನ ನನ್ನ ಗುಣಸ್ವೀಕಾರ ದೃಷ್ಟಿ ಇವು ಸ್ವಾಭಾವಿಕವಾಗಿಯೇ ಸಮನ್ವಯತೆಗೆ ಕಾರಣ. ಆದ್ದರಿಂದ ಅದು ಕೇವಲ ಪ್ರಯೋಗಮೂಲವಾದದ್ದಲ್ಲ.

*ಅಂದ ಹಾಗೆ ‘ಒಂದು ತಲೆಮಾರಿನ ಕಣ್ಣು ತೆರೆಸಿದ ಕವಿ’ ಅಡಿಗರ ಸಂಪರ್ಕ ನಿಮಗೆ ಆಗ ಬಂದಿತ್ತೆ?
ಕಣವಿ : ಬಂದಿತ್ತು. ತುಂಬ ಆತ್ಮೀಯವಾಗಿಯೇ. (ಈಗಲೂ ಅಷ್ಟೇ) 1950ರಿಂದಲೇ ಅಡಿಗರೊಡನೆ ನನ್ನ ಪತ್ರ ವ್ಯವಹಾರ ಪ್ರಾರಂಭವಾಗಿತ್ತು. ತಡೀರಿ. ನಿಮಗೂ ಅಷ್ಟು ತೋರಿಸ್ತೇನೆ (ಇಷ್ಟಂದು, ಒಳಗೆ ಹೋಗಿ ಹಳೆಯ ಪತ್ರಗಳ ಒಂದು ಕಟ್ಟನ್ನೇ ತಂದರು. ಒಂದಿಷ್ಟೂ ಜೀರ್ಣವಾಗಿಲ್ಲದ, ಜತನವಾಗಿಟ್ಟಂಥ ಪತ್ರಗಳು ಅವು ಎಂಬುದನ್ನು ನಾನು ಗಮನಿಸಿದೆ.
ಇದ ನೋಡ್ರೀ, ಅಡಿಗರು ಅವರು ನನ್ನ ಮೊದಲೆರಡು ಕವನ ಸಂಕಲನಗಳನ್ನೋದಿ (ಕಾವ್ಯಾಕ್ಷಿ, ಭಾವಜೀವಿ) ಬರೆದ ಪತ್ರ :
‘ನಿಮ್ಮಲ್ಲಿ ಕಾಣುವ ಒಂದು ದೊಡ್ಡ ಗುಣ : ಯಥಾರ್ಥತೆ- ಸಿನ್ಸಿಯಾರಿಟಿ. ಈ ನಿಮ್ಮ ಕವನಗಳಲ್ಲಿ ಯಾವ ವಿಧವಾದ ನಾಟಕೀಯತೆ, ಪೋಸಿಂಗ್ ಕೊಂಚವೂ ಇಲ್ಲ. ಕಂಡುದನ್ನು ಉಂಡುದನ್ನು ಮಾತ್ರ ಹೇಳುವ ದೊಡ್ಡ ಕಲೆಗಾರನ ದೊಡ್ಡ ಗುಣ ಇಲ್ಲಿ ಕಂಡು ಬರುತ್ತದೆ’.
ಇಷ್ಟೇ ಅಲ್ಲ ಎಚ್ಚರಿಕೆಯ ಸಲಹೆಯೂ ಇರುತ್ತಿತ್ತು. “ಕಲೆಯ ಇದಿರು ವಿನಯವನ್ನು ಬಿಡಬೇಡಿ. ಈ ವಿನಯದ ಹಿಂದೆ ಇರಬೇಕಾದುದು ಚಿರಂತನವಾದ ಅತೃಪ್ತಿ… ನಾವು ಕವಿಗಳೆನ್ನಿಸಿಕೊಳ್ಳುವವರು ಸದಾ ಆತ್ಮವಿಮರ್ಶೆಯ ಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ನಮ್ಮ ಕಲೆ ಕೆಡುತ್ತದೆ”.
ಇವೆಲ್ಲ ಮಾತುಗಳು ಆಗ ನನಗೆ ಮಾರ್ಗದರ್ಶಕವಾಗಿದ್ದೆವೆಂಬುದನ್ನು ಸ್ಮರಿಸದೇ ಇರಲಾರೆ.

*ನಿಮ್ಮ ಕಾವ್ಯವನ್ನು ಅಭ್ಯಾಸ ಮಾಡಿದಾಗ ಅಲಂಕಾರಿಕತೆ, ನಾದಮಯತೆಗಳಿಗೆ ವಿರುದ್ದವಾಗಿ ಸರಳತೆ, ವರ್ಣಕತೆಗಳು ಸ್ಥಾನ ಪಡೆದಿರುವುದನ್ನು ಗುರ್ತಿಸಿದ್ದೇನೆ. ಇದಕ್ಕೆ ನಿಮ್ಮದೇ ಆದ ಉದ್ದೇಶ ಕಾರಣಗಳು ಇವೆಯೇ? ಹೇಳಿ.
ಕಣವಿ : ಸರಳತೆ ನನ್ನ ಕಾವ್ಯದ ಸಹಜ ಗುಣ ಅಷ್ಟೇ. ವರ್ಣಕತೆಯಿಂದ ಓದುಗರು ಆಕರ್ಷಿತರಾಗುವುದಿಲ್ಲವೆ? ಆ ಮೇಲೆ ಅದರ ಆಳಕ್ಕೆ ಅವರನ್ನು ಕರೆದೊಯ್ಯಲಿಕ್ಕೆ ಸುಲಭ. ಕಾವ್ಯ ಆಡುವ ಮಾತಿನಲ್ಲೇ ಅಲಂಕಾರವಿದೆ; ಹೊರಗಲ್ಲ. ಇನ್ನು ’ನಾದಮಯತೆ’ ನನ್ನ ಕಾವ್ಯದಲ್ಲಿ ಕಾಣದು ಎಂದಿರಿ. ನಾನು ಕಾವ್ಯದಲ್ಲಿ ಬಯಸುವುದು ಭಾವನಾದಗಳ ಪರಿಣತಿಯನ್ನು.

*ನಿಮ್ಮ ಕಾವ್ಯ ಜೀವನದ ಮೇಲೆ ಕರ್ನಾಟಕ ಸಂಸ್ಕೃತಿಯ ಕೇಂದ್ರಗಳಲ್ಲೊಂದಾದ ಧಾರವಾಡ ಬಹಳ ಗಾಢವಾಗಿ ಅಚ್ಚೊತ್ತಿದೆಯಲ್ಲವೆ? ಈ ಬಗೆ ಸ್ವಲ್ಪದರಲ್ಲಿ ಹೇಳ್ರಿ.
ಕಣವಿ : ಓಹೋ ಓಂಡಿತವಾಗಿ. ಸ್ವಲ್ಪದರಲ್ಲೇ ಹೇಳ್ತೀನಿ ಕೇಳ್ರಿ. ನಾನು ಧಾರವಾಡಕ್ಕೆ ಹಾಯಸ್ಕೂಲ ಶಿಕ್ಷಣಕ್ಕೆ ಬಂದಿದ್ದು 1941ರಲ್ಲಿ. ಅಂದಿನಿಂದಲೂ ಧಾರವಾಡ ನನ್ನೂರೇ ಎನ್ನಿಸಿತು. ನಗರವಾಗಿದ್ದೂ ಆಗ ಇಲ್ಲಿ ಹಳ್ಳಿಯ ವಾತಾವರಣ. ಹೀಗಾಗಿ ಇದು ಪರಕೀಯ ಅನ್ನಿಸಲಿಲ್ಲ. ಬಯಲುಸೀಮೆ ಹಾಗೂ ಮಲೆನಾಡು ಎರಡರ ಸೆರಗಿನಂತಿರುವ ಇಲ್ಲಿಯ ನಿಸರ್ಗ ತುಂಬ ಚೇತೋಹಾರಿಯಾಗಿತ್ತು. ಆಗ ಮೇಲಿಂದ ಮೇಲೆ ನಡೆಯುತ್ತಿದ್ದ ವಿದ್ವಾಂಸರ ಭಾಷಣಗಳು, ಸಾಹಿತ್ಯಿಕ ಸಭೆ ಸಮಾರಂಭಗಳು, ಕಾವ್ಯಗಾಯನ ಕಾರ್‍ಯಕ್ರಮಗಳು. (ಬೇಂದ್ರೆಯವರ ‘ಶ್ರಾವಣ ಬಂತು’, ಆನಂದ ಕಂದ’ ರ ‘ಜಯ ಜಯ ಫಾಲ್ಗುಣಾ’ ನರಸಿಂಹ ಸ್ವಾಮಿಗಳ ‘ರಾಯರು ಬಂದರು’ ಮೊದಲಾದ ಕವಿತೆಗಳನ್ನು ಭಾಗವತ ಮಾಸ್ತರರು ಹಾಡಿದಾಗ ನಾನು ಫುಲಕಗೊಳ್ಳುತ್ತಿದ್ದೆ. ಸ್ವತಃ ಬೇಂದ್ರೆಯವರೇ ತಮ್ಮ ಕವಿತೆಗಳನ್ನು ತಮ್ಮದೇ ಧಾಟಿಯೊಳಗೆ ಅಂದು, ಹೊಸ ಬಗೆಯ ಅನುಭವ ತಂದುಕೊಡುತ್ತಿದ್ದರು.)

ಇನ್ನು ಮುರುಘಾಮಠದ ಉಚಿತ ಪ್ರಸಾದ ನಿಲಯದ ಮೃತ್ಯುಂಜಯ ಸ್ವಾಮಿಗಳು, ವೀ.ರು. ಕೊಪ್ಪಳ ಮಾಸ್ತರು, ಕರ್ನಾಟಕ ಕಾಲೇಜದ ಪ್ರೊ.ಮಾಳವಾಡ. ಪ್ರೊ. ಮೆನೆಜಸ್, ಕರ್ನಾಟಕ ವಿದ್ಯಾವರ್ಧಕ ಸಂಘದ ಸಭೆ ಸಮಾರಂಭಗಳಲ್ಲಿ ಪ್ರಮುಖರಾಗಿರುತ್ತಿದ್ದ ಪ್ರೊ. ಬಸದನಾಳ, ಬೆಟಗೇರಿ ಕೃಷ್ಣಶರ್ಮ, ಶಂಭಾಜೋಶಿ, ಉತ್ತಂಗಿ ಚೆನ್ನಪ್ಪ, ಡಾ. ಪಾವಟೆ, ಶ್ರೀರಂಗರು ಮೊದಲಾದವರನ್ನ ಸ್ಮರಿಸಲೇಬೇಕು.

ನಾವು ಕೆಲವು ಗೆಳೆಯರು- ಶಿವೇಶ್ವರ ದೊಡ್ಡಮನಿ, ಕೀರ್ತಿನಾಥ ಕುರ್ತಕೋಟಿ, ಶಂಕರ ಮೊಖಾಸಿ, ವಸಂತ ಕವಲಿ, ಚಿದಂಬರ ದೀಕ್ಷಿತ ಮುಂತಾದವರು ‘ಕಾವ್ಯಾನುಭವ ಮಂಟಪ’ ಕಟ್ಟಿಕೊಂಡು, ವಾರಕೊಮ್ಮೆ, ನನ್ನ ರೂಮಲ್ಲಿಯೇ ನಮ್ಮ ನಮ್ಮ ಕವಿತೆಗಳ ವಾಚನ- ವಿಮರ್ಶೆ ನಡೆಸುತ್ತಿದ್ದೆವು. ಬಸವರಾಜ ಕಟ್ಟೀಮನಿ, ಆಗಿನಿಂದಲೇ ನಮಗೆ ಹಿರಿಯ ಸ್ನೇಹಿತರಾಗಿ ಪ್ರೋತ್ಸಾಹಿಸುತ್ತಿದ್ದರು.

*ನೀವು ಕನ್ನಡಕ್ಕಾಗಿ ಮೊದಲಿನಿಂದ ದುಡಿದವರು. ಗೋಕಾಕ್ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದಿರಿ. ಕನ್ನಡ ಕ್ರಿಯಾ ಸಮಿತಿಯಲ್ಲಿ ಅಗ್ರರಿದ್ದೀರಿ. ಸದ್ಯ, ಬೆಳಗಾವಿ ಗಡಿಸಮಸ್ಯೆಯ ಬಗ್ಗೆ ನಿಮ್ಮ ದೃಷ್ಟಿಯಲ್ಲಿ ಏನು ಪರಿಹಾರವಿದೆ?
ಕಣವಿ : ಬೆಳಗಾವಿ ಗಡಿ ಸಮಸ್ಯೆ, ಎಂದೋ ಮುಗಿದು ಹೋಗಿದೆ -ಏನ್ರೀ.. ಅಲ್ಲಿರುವ ಕನ್ನಡಿಗರೂ, ಮರಾಠಿಗಳೂ ಇಂದಿಗೂ ಬಂಧುಗಳಂತೇ ಸಹಜೀವನ ನಡೆಸುತ್ತಿದ್ದಾರೆ. ಆದರೆ ಅದನ್ನೊಂದು ಸಮಸ್ಯೆ ಯಾಗಿ ಭ್ರಮಿಸಿರುವವರು, ಮಹಾರಾಷ್ಟ್ರದ ಕೆಲವು ಸ್ವಾರ್ಥ ರಾಜಕಾರಣಿಗಳು ಹಾಗೂ ಅವರ ಕಾರಸ್ಥಾನದ ಕೆಲವು ಪತ್ರಿಕೆಗಳು. ಇದಕ್ಕೆ ಕೇಂದ್ರವೂ ಕೆಲಮಟ್ಟಿಗೆ ಹೊಣೆಗಾರ ಎನ್ನಬಹುದು. ಮಹಾಜನ ವರದಿ ಬಂದಾಗಲೇ, ಮೊದಲೇ ಒಪ್ಪಿಕೊಂಡಂತೆ ಅದನ್ನ ತಕ್ಷಣ ಜಾರಿಗೆ ತಂದು, ತನ್ನ ಕರ್ತವ್ಯವನ್ನು ಅದು ಈಡೇರಿಸಬೇಕಿತ್ತು. ಈಗಾದರೂ ಯಾರ ಮರ್ಜಿಯನ್ನೂ ಕಾಯದೇ ಕೇಂದ್ರ, ತನ್ನ ತಪ್ಪನ್ನು ತಿದ್ದಿಕೊಂಡು, ಕಟ್ಟುನಿಟ್ಟಿನ ಧೋರಣೆ ತಳೆಯುವದೊಂದೇ ಇದಕ್ಕೆ ಪರಿಹಾರ…

*ಮತ್ತೆ ಕಾವ್ಯದ ಕಡೆಗೆ ಹೊರಳೋಣ್ರಿ ಕಣವಿಯವರೆ, ಈಗಿನ ಪರಿಸ್ಥಿತಿ ನೋಡಿದರೆ ಕವಿಗಣವೂ ಸಹಿತ ‘ಬಂದ ದಾರಿಯ ಕಡೆಗೆ ಕಣ್ಣ ಹೊರಳಿಸುತ್ತಿದೆ’ಯೇನೋ ಅನಿಸ್ತದೆ. ನವೋದಯ ನವ್ಯಗಳಲ್ಲಿ ಸಾಕಷ್ಟು ಕೃಷಿ ಮಾಡಿದ ನಿಮಗೆ, ಇಂದಿನ ಸ್ಥಿತಿಯೊಳಗೆ ಯಾವ ಮಾರ್ಗ ಸರಿ ಎಂದು ಕಾಣಿಸಿದೆ?
ಕಣವಿ :
ನಡೆದು ಬಂದ ದಾರಿಯನ್ನುಅವಲೋಕಿಸುವುದು- ಒಳ್ಳೇದು. ಅಂದರೆ, ನಾವು ಹಿಡಿದ ದಾರಿ ಸರಿ ಇದೆಯೋ ಇಲ್ಲವೋ ಹೊಳೀತದೆ! ಇಂದಿನ ಜೀವನದ ಸಮಸ್ಯೆಗಳು, ಸವಾಲುಗಳು, ಕವಿಯ ಸೂಕ್ಷ್ಮ ಸಂವೇದನೆಗೆ ಒಳಪಟ್ಟು ತಕ್ಕ ವಿಚಾರಪ್ರಾಣಲಿಯೊಂದಿಗೆ, ಕಾವ್ಯದ ರೂಪವನ್ನು ಮರೆಯದೆ ಪ್ರಸ್ತುತಕ್ಕೂ ಸಲ್ಲಬಹುದಾದ ಹಿಂದಿನ ಕಾವ್ಯಮಾರ್ಗಗಳ ಓಳ್ಳೆಯ ಅಂಶಗಳನ್ನು ಮೈಗೂಡಿಸಿಕೊಂಡು, ಆದಷ್ಟು ಜನಕ್ಕೆ ಮುಟ್ಟುವ ರೀತಿಯಲ್ಲಿ ಮುಂದುವರೆಯುವುದು ಇಂದಿನ ಸ್ಥಿತಿಯಲ್ಲಿ ಸರಿಯಾದ ಮಾರ್ಗವೆಂದು ತೋರುತ್ತದೆ. ಪಂಥಗಳಾವುದೇ ಇರಲಿ ಕವಿ, ತನ್ನ ನಿಜವನ್ನು ತಾನು ತಿಳಿದಿರಬೇಕು.

*ಓದುವ ಕವಿತೆ, ಕೇಳುವ ಕವಿತೆ, ಹಾಡುವ ಕವಿತೆ, ಕಡೆಗೆ ನೋಡುವ ಕವಿತೆ (ಗೀತಚಿತ್ರ) ಕೂಡ ಬಂದಿರುವ ಈ ಕಾಲದಲ್ಲಿ ಕವಿತೆಗಿರುವ ಸಾಧ್ಯತೆಗಳು ಹೆಚ್ಚಾಗಿವೆ ಎನಿಸುತ್ತದೆಯೋ. ಇಲ್ಲ ಕವಿತೆಯ ನಿಗೂಢ, ತೀವ್ರತೆಗಳು ಕಡಿಮೆ ಆಗುತ್ತಿವೆ ಎನಿಸುತ್ತೋ?
ಕಣವಿ : ಇವೆಲ್ಲದರಿಂದ ಕಾವ್ಯ, ಜನಪ್ರಿಯವಾಗುವ ಅಥವಾಬಹಳ ಜನಕ್ಕೆ ಹೋಗಿ ಮುಟ್ಟುವ ಸಾಧ್ಯತೆಗಳು ಹೆಚ್ಚಾಗಿರುವುದರಲ್ಲಿ ಸಂದೇಹವಿಲ್ಲ. ಹಾಡುವ ಹಾಗೂ ನೋಡುವ ಕವಿತೆಗಳು, ಗೇಯತೆ ಮತ್ತು ದೃಶ್ಯಗಳಿಂದ ಕಿವಿಗೂ ಕಣ್ಣಿಗೂ ಹಿತವಾಗಿ, ಪರಿಣಾಮಕಾರಿಯಾಗಬಲ್ಲವು. ಈ ಸಾಧ್ಯತೆಗಳಿಂದ ಕವಿತೆಯ ಗೂಢತೆ ತೀವ್ರತೆಗಳು ಕಡಿಮೆಯಾಗದಂತೆ ನೋಡಿಕೊಳ್ಳುವುದು ಅವನ್ನು ಬಳಸುವ ಕಲಾವಿದರ ಸಾಮರ್ಥ್ಯವನ್ನಲಂಬಿಸಿದೆ. ಅಲ್ಲದೆ ಅದು, ಕೇಳುಗರ, ಅಥವಾ ನೋಡುಗರ ಕಲ್ಪನಾಶಕ್ತಿಯನ್ನು ಕುದುರಿಸುವಂತಿರಬೇಕು!

* ಗೇಯ ಕವನಗಳು ಜನಪ್ರಿಯವಾಗಿವೆ. ಮತ್ತೆ ಭಾವಗೀತೆಗಳ ಯುಗ ಬಂದಿದೆ. ನೀವೂ ಈಚೆಗೊಂದುಗೇಯ ಕವಿತೆಗಳ ಸಂಕಲನ, ‘ಹೂವು ಹೊರಳುವವು ಸೂರ್‍ಯನ ಕಡೆಗೆ’ ಹೊರತಂದಿದ್ದೀರಿ. ಈ ಬದಲಾವಣೆಗಳ ಮೂಲ ಏನಿದ್ದೀತು? ಸಂವಹನ ಸುಲಭವಾಗಲೆಂಬ ಕವಿಯ ಹಂಬಲೆ? ಅಥವಾ ಪ್ರೊಸೈಕ್ ಆಗುತ್ತಿರುವ ಬದುಕಿಗೊಂದಿಷ್ಟು ಚೈತನ್ಯ ಹುಟ್ಟಲೆಂಬ ಉದ್ದೇಶವೆ?
ಕಣವಿ : ಮತ್ತೆ ಭಾವಗೀತೆಗಳ ಕಾಲ ಬಂದಿರುವುದು ಖಂಡಿತಕ್ಕೂ ಒಳ್ಳೆಯದು. ಅಲ್ಲದೆ, ಕಾವ್ಯ ತೀರ ಉಸಿರುಕಟ್ಟಿಸುವ ಕೆಲಸವಾಗಬಾರದಲ್ಲವೆ? ತಂತ್ರಶಿಲ್ಪ ಎಂದು ನವ್ಯರು ಭಾವಗೀತೆ, ಮಕ್ಕಳಕವಿತೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಅಷ್ಟು ಮಟ್ಟಿಗೆಜನರ ಸಂತೋಷಕ್ಕೆ ಚ್ಯುತಿ ಒದಿಗಿಸಿದಂತಾಯ್ತು. ನಮ್ಮ ಕಾವ್ಯಪರಂಪರೆಯಲ್ಲಿ ಹಾಡು, ಒಂದು ಮುಖ್ಯ ಅಂಶವಾಗಿರುವುದನ್ನು ಅಲ್ಲಗೆಳೆಯೋದು ಹೇಗೆ ಹೇಳ್ರಿ? ಇದನ್ನನುಲಕ್ಷಿಸಿ, ‘ನವ್ಯ’ ರಾಗಿದ್ದರವರು ಹಲವರೂ ಮತ್ತೆ ಭಾವಗೀತೆಗಳನ್ನ ಬರೆಯತೊಡಗಿರುವುದು ಒಳ್ಳೆಯ ಲಕ್ಷ್ಮಣ. ನೀವಂದಹಾಗೆ ಈ ಬದಲಾವಣೆಗಳ ಮೂಲ, ಸಂವಹನ ಸುಲಭವಾಗಲೆಂಬ ಹಂಬಲದ್ದು. ಅಲ್ಲದೇ ಭಾವಗೀತೆ ಅಥವಾ ಹಾಡು, ಜೀವನದ ಪ್ರೀತಿಯಿಂದ ಹೊರಹೊಮ್ಮುವುದರಿಂದ ಕೇಳುಗರ ಮನಸ್ಸನ್ನು ಬೇಗ ಆರ್ದ್ರಗೊಳಿಸುತ್ತದೆ. ಗಟ್ಟಿ ನೆಲವನ್ನುಅಗೆಯಬೇಕಾದಗಲೂ, ಅದಕ್ಕೆ ಮೊದಲು ಸ್ವಲ್ಪ ನೀರುಣ್ಣಿಸಿ ಮೃದುಗೊಳಿಸುವುದಿಲ್ಲವೇ? ಯಾವುದೇ ಉತ್ತಮ ಕಾವ್ಯ ಭಾವ ಗೀತಾತ್ಮೆಯನ್ನು ಸಂಪೂರ್ಣ ನಿರಾಕರಿಸಿ ನಿಲ್ಲುವುದಾಗಲೀ, ಗೆಲ್ಲುವುದಾಗಲೀ ಸಾಧ್ಯವಿಲ್ಲವೆಂದೇ ನನ್ನ ಅನಿಸಿಕೆ. ‘ಗೀತರೂಪ’ವೂ ಕಾವ್ಯದ ಒಂದು ಪ್ರಕಾರ ತಾನೆ? ಆದರೆ ಅದೇ ಹೊತ್ತಿಗೆ ಕಾವ್ಯಗುಣವನ್ನೂ ಅದು ಕಾಪಾಡಿಕೊಂಡಿರಬೇಕಾದ್ದು ಅಗತ್ಯ. (ಅಂಥ ಕೆಲವು ಉತ್ತಮ ಗೀತೆಗಳನ್ನು ನೀವೂ ಈಚೆಗೆ ಬರೆದಿದ್ದೀರಿ.)

*ನೀವು ಗದ್ಯ ಕೃತಿಗಳನ್ನು ರಚಿಸಿದ್ದಿದೆಯಲ್ಲವೆ? ಆದರೂ ಪದ್ಯದ ಬಗ್ಗೆ ನಿಮ್ಮ ಒಲವು ಹೆಚ್ಚೇ ಅನಿಸುತ್ತದೆ. ಕಾರಣಗಳನ್ನು ಹೇಳುತ್ತಿರಾ?
ಕಣವಿ : ಭಾವಗಳು, ಕವಿತೆಯಲ್ಲಿ ಒಂದು ಪೂರ್ಣಾವಸ್ಥೆಯ ರೂಪವನ್ನು ತಾಳಿ ನಿಲ್ಲುವುದರಿಂದ ಕಾವ್ಯ ರಚನೆಯಲ್ಲಿಯ ಸುಖ ಗದ್ಯದ ಬರವಣಿಗೆಯಲ್ಲಿ ನನಗೆ ಅಷ್ಟು ಮಟ್ಟಿಗೆ ಸಿಕ್ಕಿಲ್ಲವೆನಿಸುತ್ತದೆ. ಮಳೆಯಿಂದ ಸುರಿದ ನೀರು, ನೆಲ ಮೇಲೆ, ಸಳಸಳ ಹರಿದು ಹೋಗುವುದಕ್ಕೂ, ಅದೇ ನೀರು ನೆಲದಲ್ಲಿ ಇಂಗಿ ಮುಂದೆ ಒಂದೆಡೆಯಲ್ಲಿ ಚಿಲುಮೆಯಾಗಿ ಪುಟಿಯುದಕ್ಕೂ ಇರುವ ಅಂತರವೇ ಗದ್ಯ ಹಾಗೂ ಪದ್ಯಗಳ ಬರವಣಿಗೆಗಿರುವ ಅಂತರವೆಂದು ತೋರುತ್ತದೆ.

*ಅಂದ ಹಾಗೆ, ನೀವೊಂದು ಕವಿಯತೆಯಲ್ಲಿ ಅಂದಿರುವ ‘ಬರೆದ ಕವಿತೆಯ ಭಾರ ಬರೆಯದ ಕವಿತೆಗಿಂತ ಹೆಚ್ಚಲ್ಲ’ ಎಂಬ ಮಾತು ನನಗೆ ತುಂಬ ಪ್ರಿಯವಾದುದು. ಇಂಥ ಎಷ್ಟೋ ಕವಿತೆಗಳನ್ನ ನೀವು ನಿಮ್ಮೊಳಗೆ ಇಟ್ಟುಕೊಂಡಿರಲಿಕ್ಕೆ ಸಾಕು. ಕವಿತೆ ಬರೆಯಬೇಕೆನ್ನಿಸಿ, ಆದರೂ ಬರೆಯದ -ವಿಚಿತ್ರಾನುಭವದ ಭಗ್ಗೆ ನಿಮಗೇನಾದರೂ ಹೇಳಬೇಕೆನಿಸುತ್ತದೆಯೇ? (ಇದು ಅಭಿವ್ಯಕ್ತಿಯ ಕಷ್ಟಕ್ಕೆ ಸಂಬಂಧಿಸಿದ್ದರಿಂದ ಕೇಳಬೇಕೆನ್ನಿಸಿದೆ.)
ಕಣವಿ : (ನಗು) ನೋಡ್ರಿ ಹೆಮ್ಮಿಗೆ, ಕವಿತೆ ಬರೆದ ಆ ಕ್ಷಣಕ್ಕೆ ನಮ್ಮ ಎದೆಯ ಭಾರ ಇಳಿದಂತಾಗಬಹುದು. ಆದರೆ ಆ ಮೇಲೆ ನಾವೇನು ಹೇಳಬಯಸಿದ್ದೇವೋ ಅದೆಲ್ಲವೂ ಅದರಲ್ಲಿ ಬರಲಿಲ್ಲ ಎಂಬ ಅರಕೆ, ಉಳಿದೇ ಉಳಿಯುತ್ತದೆ. ಉಳಿದ ಅನುಭವಗಳೊಟ್ಟಿಗೆ ಅದೂ ಕೂಡಿಕೊಂಡು, ಮತ್ತೆ ಆಕಾರ ತಳೆವ ಸಂದರ್ಭಕ್ಕಾಗಿ ನಾವು ಕಾಯಬೇಕಾಗುತ್ತೆ. ನೆನೆದಾಗಲೆಲ್ಲ ಮನಸ್ಸಿನಲ್ಲಿ ಅದು ಸುಳುಹುದೋರಿ ಹೊಳಹು ಹಾಕುತ್ತಿರುತ್ತದೆ. ಆ ಸಂವೇದನೆಯೇ ನೀವಂದ ವಿಚಿತ್ರಾನುಭವ! ಹೀಗೆ, ಬರೆಯದ ಕವಿತೆಯ ಭಾರ, ಬರೆದ ಕವಿತೆಗಳಿಗಿಂತ ಹೆಚ್ಚ ಎನಿಸುತ್ತದೆ.

*ನೀವು ಕವಿತೆ ಬರೆದ ನಂತರದ ಕ್ಷಣಗಳು ಹೇಗಿರುತ್ತವೆ? ತಿಳಿವ ಕುತೂಹಲ ನನಗೆ…
ಕಣವಿ : ತುಂಬ ಉಲ್ಲಾಸಮಯವಾಗಿರುತ್ತೆ. ಮನಸ್ಸು ಗರಿಹಗುರವಾಗಿರುತ್ತೆ. ಹಾಗೆಯೇ ಬರೆದದ್ದನ್ನು ಪುನಃ ಪುನಃ ಓದಿ, ನನ್ನಷ್ಟಕ್ಕೆ ಖುಷಿಪಡುತ್ತೇನೆ.

*"ಕವಿ ಓರ್ವ ವ್ಯಕ್ತಿಯಾಗಿ ತನ್ನ ಸುತ್ತಣ ಅನುಭವ ಜೀವನದ ಬೆಳವಣಿಗೆಯಲ್ಲಿ ಆಸಕ್ತಿ ತಳೆದಷ್ಟು ಅವನ ಕಾವ್ಯಕ್ಕೆ ಹೊಸ ಆಯಾಮ ದೊರೆಯುತ್ತದೆ” ಎಂಬುದು ನಿಮ್ಮ ಮಾತು. ಆದರೆ ಅದು, ಅವನ ಕಾವ್ಯಕ್ಕೆ ಹೊಸ ಆಯಾಮ ದೊರಕಿಸುತ್ತದೆಂಬುದಷ್ಟೇ ಸೀಮಿತವೆ? ಅಥವಾ ಅದು ಅವನ ಸಾಮಾಜಿಕ ಹೊಣೆಯನ್ನೂ ಹೆಚ್ಚಿಸುವುದೆ?
ಕಣವಿ : ಅದು ಅಷ್ಟಕ್ಕೇ ಸೀಮಿತವಾಗಿರಬೇಕಿಲ್ಲ. ಸಾಮಾಜಿಕ ಹೊಣೆಯಲ್ಲಿ ಕವಿಯೂ ಪಾಲುಗಾರನೆ. ಅವು ಪರಸ್ಪರ ಪೂರಕವಾದಗಲೇನೇ ಅರ್ಥಪೂರ್ಣ.

*ನಿಮ್ಮ ಹೆಚ್ಚಿನ ಕವಿತೆಗಳು ಸಾಮಾಜಿಕ ಪ್ರತಿಕ್ರಿಯೆಯಾಗಿ ಬಂದಂಥವು (ಉದಾ : ಯಾರು ಕೇಳುತ್ತಾರೆ ಹೇಳಿರಣ್ಣಾ ಹಾಗೂ ತುರ್ತು ಪರಿಸ್ಥಿತಿ ಕುರಿತ ಹಲವಾರು ಕವಿತೆಗಳು) ಕಾವ್ಯ ಪ್ರತಿಕ್ರಿಯಾತ್ಮವಾಗಿರಬೇಕೋ, ಪ್ರಚೋದನಾತ್ಮಕವಾಗಿರಬೇಕೋ ಯಾವುದು ಸಾಧು -ನಿಮ್ಮ ಅಭಿಪ್ರಾಯದಲ್ಲಿ ?
ಕಣವಿ : ಕೇವಲ ಪ್ರತಿಕ್ರಿಯಾತ್ಮಕವೂ ಇಲ್ಲವೇ ಕೇವಲ ಪ್ರಚೋದನಾತ್ಮಕವೂ ಆಗದೆ, ಬುದ್ದಿ ಭಾವಗಳನ್ನು ಹದಗೊಳಿಸಿ ಸಂಸ್ಕಾರಗೊಳಿಸಬಲ್ಲಂತೆ, ರಸಾತ್ಮಕವಾಗಿರಬೇಕು. ಇದೊಂದಿದ್ದರೆ, ಉಳಿದೆಲ್ಲವೂ ಅದರ ಜೊತೆಗೇನೆ ಬರುತ್ತವೆ.

( ಸಂದರ್ಶನ : ಕಮಲ ಹೆಮ್ಮಿಗೆ, ಕೃಪೆ : ತುಷಾರ, ಜುಲೈ 1988)

ಚೆನ್ನವೀರ ಕಣವಿ ಲೇಖಕ ಪರಿಚಯ
ಕಮಲಾ ಹೆಮ್ಮಿಗೆ ಲೇಖಕ ಪರಿಚಯ

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...