ಓದುಗ ಬಳಗ ಹೆಚ್ಚಿಸಲು ಬೇಕು ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರ


'ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ನಾವು ಒಂದು ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಈಗಿನ ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರವನ್ನು ಬಳಸಬೇಕಿದೆ. ಒಬ್ಬ ಓದುಗ ವಾರಕ್ಕೆ ನಾಲ್ಕು ಜನ ಓದುಗರನ್ನು ರೂಪಿಸಬೇಕು. ಆ ನಾಲ್ಕು ಜನ ಮುಂದಿನ ವಾರದಲ್ಲಿ ಮತ್ತೆ ನಾಲ್ಕು ಜನ ಓದುಗರನ್ನು ಸೃಷ್ಟಿಸಬೇಕು' ಎನ್ನುತ್ತಾರೆ ಪತ್ರಕರ್ತ ಕುಮಾರ ಸುಬ್ರಹ್ಮಣ್ಯ ಎಸ್. ಅವರು ವಿಶ್ವ ಪುಸ್ತಕ ದಿನದ ಪ್ರಯುಕ್ತ ಬರೆದ ಅರ್ಥಪೂರ್ಣ ಲೇಖನ ನಿಮ್ಮ ಓದಿಗಾಗಿ. 

ಓದಿನ ಸ್ವರೂಪ ಈಗ ಬದಲಾಗಿದೆ. ಡಿಜಿಟಲ್‌ ಪರದೆಗಳು ಕೈಯಲ್ಲಿ ರಾರಾಜಿಸುತ್ತಿದೆ. ಹೀಗಿರುವಾಗ ಪುಸ್ತಕವನ್ನು ಕೊಂಡು ಓದುವವರ ಸಂಖ್ಯೆ ಇಳಿಕೆ ಆಗಿದೆ ಎಂಬುದು ಕಹಿ ವಿಚಾರವಾದರೂ ಅಷ್ಟೇ ಸತ್ಯ ಕೂಡಾ. ಹಾಗೆಂದ ಮಾತ್ರಕ್ಕೆ ಬರವಣಿಗೆ ಲೋಕ ಕುಸಿದಿಲ್ಲ. ಬರೆಯುವವರು ಹುಟ್ಟಿಕೊಳ್ಳುತ್ತಿದ್ದಾರೆ, ಬರೆಯುತ್ತಿದ್ದವರು ಮುಂದುವರೆಸಿದ್ದಾರೆ. ವರ್ಷಕ್ಕೆ ಹತ್ತರಿಂದ ಹನ್ನೆರಡು ಸಾವಿರ ಪುಸ್ತಕಗಳು ಐಎಸ್‌ಬಿಎನ್‌ ಅಡಿಯಲ್ಲಿ ಪ್ರಕಟವಾಗುತ್ತದಂತೆ. ಐಎಸ್‌ಬಿಎನ್‌ನಲ್ಲಿ ದಾಖಲಾಗದೇ ಇನ್ನೆಷ್ಟು ಪುಸ್ತಕಗಳು ಪ್ರಕಟವಾಗುತ್ತವೆ ಎಂಬುದು ಲೆಕ್ಕಹಾಕುವುದು ಕಷ್ಟ. 

ಪುಸ್ತಕ ಮಾಡುವುದೂ ಉದ್ಯಮ ಆಗಿರುವ ಕಾಲಗಟ್ಟದಲ್ಲಿ ಲಾಭ ನಷ್ಟಗಳ ಲೆಕ್ಕಾಚಾರ ಇದ್ದದ್ದೇ, ಮಾಡಬೇಕಾದ್ದೆ. ಇದು ವ್ಯಾಪಾರಿಕರಣದ ದೃಷ್ಟಿಕೋನದಿಂದ ಅಲ್ಲದಿದ್ದರೂ, ಓದುಗ ಬಳಗ ಹೇಗಿದೆ ಎಂದು ತಿಳಿಯಲು. ಕನ್ನಡ ಪುಸ್ತಕಗಳ ಮಾರಾಟ ಮತ್ತು ವ್ಯಾಪಾರದ ಬಗ್ಗೆ ನಾವು ನೋಡುವಾಗ ಒಂದು ಮುದ್ರಣ 1000 ಪ್ರತಿಗಳನ್ನು ಹೊಂದಿರುತ್ತದೆ. 7 ರಿಂದ 8 ಕೋಟಿ ಜನಸಂಖ್ಯೆ ಇರುವ ಈ ಭಾಷಿಕ ವಲಯದಲ್ಲಿ 1000 ಕೃತಿ ಮಾರಾಟವಾದರೆ ಅದು ದೊಡ್ಡ ಸಂಭ್ರಮ. ಅಂದರೆ ಓದುಗ ಬಳಗ ಎಷ್ಟು ಕಡಿಮೆ ಇದೆ ಎನ್ನುವುದು ಗಮನಾರ್ಹ ವಿಷಯ. 

ವರ್ಷಕ್ಕೆ 10,000 ಪುಸ್ತಕಗಳು ಬರುತ್ತಿರುವುದೇ ಆದರೆ ಒಬ್ಬ ಓದುಗ ಒಂದು ದಿನಕ್ಕೆ 27 ಪುಸ್ತಕವನ್ನು ಓದಬೇಕು. ಆಗ ಮಾತ್ರ ವರ್ಷದಲ್ಲಿ ಪ್ರಕಟವಾದ ಎಲ್ಲಾ ಪುಸ್ತಕಗಳನ್ನು ಓದಿದಂತೆ. ಅದು ಸಾಧ್ಯವೇ ಇಲ್ಲ. ಕನಿಷ್ಟ ದಿನಕ್ಕೆ 10 ಪುಟವನ್ನಾದರೂ ಓದುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಆದರೆ ಪುಟಗಟ್ಟಲೆ ಓದುವ ಹವ್ಯಾಸ ನಮ್ಮಿಂದ ದೂರವಾಗಿ ವರ್ಷಗಳೇ ಕಳೆಯಿತು ಎನ್ನಬಹುದು. ಅಷ್ಟು ತಾಳ್ಮೆ ನಮ್ಮಲ್ಲಿಲ್ಲ. ಯಾವುದೇ ಸುದ್ದಿಯನ್ನು ಕೇವಲ ಶಿರೋನಾಮೆಯಲ್ಲಿ ನಿರ್ಧಾರ ಮಾಡಿಬಿಡುತ್ತೇವೆ. ಓದು ಎಂಬುದು ಶಾಲೆ, ಕಾಲೇಜು ಮಟ್ಟಕ್ಕೆ ಮುಕ್ತಾಯವಾಗುತ್ತದೆ. ಅಲ್ಲಿಯೂ ಸಾಹಿತ್ಯದ ಓದಿಲ್ಲ. ಕೇವಲ ಅಂಕಕ್ಕಾಗಿ ಪಠ್ಯವನ್ನೂ ಓದುವುದಿಲ್ಲ. ಕೇವಲ ನೋಟ್ಸ್‌ ಎಂಬ ಸಿದ್ಧ ಉತ್ತರಗಳನ್ನು ಮಾತ್ರ ಓದುವಂತಾಗಿದೆ. ಮೊಬೈಲ್‌ ಪರದೆಯಲ್ಲಿ ಬರುವ 10 -20 ಪದಗಳನ್ನು ಅದು ʼಹʼ ಕಾರ ʼಅʼ ಕಾರ ತಪ್ಪು ಬರೆದಿರುವುದನ್ನು ಹಂಚಿಕೊಂಡು ಕಾಲ ಕಳೆಯುವ ಕಾಲ ಬಂದಿದೆ. 

ವಾಕ್ಯ ರಚನೆಯಲ್ಲಿ ಸಂಧಿ ಸಮಾಸ ಬಗ್ಗೆ ಅರಿವಿರದಿದ್ದರೆ ಹೋಗಲಿ ಬಿಡಿ, ವಿಭಕ್ತಿ ಪ್ರತ್ಯೇಯ, ಏಕವಚನ, ಬಹುವಚನ ಬಳಕೆಯ ಬಗ್ಗೆಯೂ ಈಗಿನ ಪೀಳಿಗೆಗೆ ಬಳಸಲು ಬರುತ್ತಿಲ್ಲ. ಅದಕ್ಕೆ ಕಾರಣ ವಾಕ್ಯ ರಚನೆಯ ಬಗ್ಗೆ ಅರಿವಿಲ್ಲದಿರುವುದು. ಪುಸ್ತಕ ಓದಿನಿಂದ ಇಂತಹ ಸಮಸ್ಯೆ ಸರಳವಾಗಿ ಬಗೆಹರಿಯುತ್ತದೆ. ಶಿವರಾಮ ಕಾರಂತರ ಒಡನಾಡಿ ಆಗಿದ್ದ ಮಹಾಬಲೇಶ್ವರ ಭಟ್ಟರ ಬಳಿ ಒಮ್ಮೆ ಮಾತನಾಡಿದ್ದೆ. ಆಗ ಅವರು ಹೇಳಿದ್ದರು. ಕಾರಂತರನ್ನು ಭೇಟಿ ಮಾಡಲು ಒಮ್ಮೆ ಹೋಗಿದ್ದಾಗ ಅವರು ಕನ್ನಡ ಶಬ್ದ ಕೋಶವನ್ನು ಓದುತ್ತಿದ್ದರಂತೆ. ಅದನ್ನು ಕಂಡು ಮಹಬಲೇಶ್ವರ ಭಟ್ಟರು ಶಬ್ದ ಕೋಶ ಏಕೆ ಓದುತ್ತಿದ್ದೀರಿ ಎಂದು ಕೇಳಿದರಂತೆ. ಕಾರಂತರು ಇದರಲ್ಲಿರುವ ಯಾವುದಾದರು ಶಬ್ದ ಬಳಸದೇ ಬಾಕಿ ಮಾಡಿದ್ದೇನಾ ಎಂದು ನೋಡುತ್ತಿದ್ದೆ ಎಂದರಂತೆ. 

ಕನ್ನಡ ಕೋಶದ ಎಲ್ಲಾ ಪದಗಳನ್ನು ಬಳಸಿದ ಕಾರಂತರು, ಹಳ್ಳಿಯ ಸೊಗಡಿನ ಭಾಷೆಯನ್ನು ಹಾಗೇ ಬರೆದ ತೇಜಸ್ವಿ, ಕೆಲ ಪದಗಳನ್ನು ತಾವೇ ಠಂಕಿಸಿದ ಕುವೆಂಪು, ಜೀವನದ ಸಾರವನ್ನೇ ಮಂಕುತಿಮ್ಮನಲ್ಲಿ ಹೇಳಿಸಿದ ಡಿವಿಜಿ, ಕಾದಂಬರಿಗಳ ಮೂಲಕ ಅಂದಿನ ಕಾಲದಲ್ಲಿ ಜನರನ್ನು ಸೆಳೆದ ಅನಕೃ, ತರಾಸು ಇವರಲ್ಲದೇ ಅಗಣಿತ ಕನ್ನಡ ಬರಹಗಾರರಿದ್ದಾರೆ. ಕನಿಷ್ಠ ಇವರ ಬಗ್ಗೆ ತಿಳಿಸದುಕೊಳ್ಳುವಷ್ಟಾದರೂ ನಾವು ಓದಬೇಕಾಗಿದೆ. ಆಗ ಶಬ್ದ ಭಂಡಾರ ಹೆಚ್ಚಾಗುತ್ತದೆ. ದೈನಂದಿನ ಮಾತಿನಲ್ಲಿ ಹೊಸ ಹೊಸ ಪದಗಳು ನಾಲಿಗೆಯಿಂದ ಹೊರಳುತ್ತದೆ.   

ಓದುಗರನ್ನು ಸಾಧಿಸುವುದು ಹೇಗೆ?: 

ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ನಾವು ಒಂದು ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಈಗಿನ ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರವನ್ನು ಬಳಸಬೇಕಿದೆ. ಒಬ್ಬ ಓದುಗ ವಾರಕ್ಕೆ ನಾಲ್ಕು ಜನ ಓದುಗರನ್ನು ರೂಪಿಸಬೇಕು. ಆ ನಾಲ್ಕು ಜನ ಮುಂದಿನ ವಾರದಲ್ಲಿ ಮತ್ತೆ ನಾಲ್ಕು ಜನ ಓದುಗರನ್ನು ಸೃಷ್ಟಿಸಬೇಕು ಎಂಬಂತೆ. ಹೀಗೆ ಮಾಡಿದಲ್ಲಿ ಓದುಗರ ಸಂಖ್ಯೆ ಹೆಚ್ಚಾಗುದಂತೂ ಖಂಡಿತಾ. ಪ್ರತಿಯೊಬ್ಬರು ನಾಲ್ಕು ಜನ ಓದುಗರನ್ನು ಸೃಷ್ಟಿಸಬೇಕು. ಇದು ನಿಸ್ವಾರ್ಥವಾಗಿ ಮಾಡಿದರೆ ಮಾತ್ರ ಸಾಧ್ಯ. 

ವರ್ಷದಲ್ಲಿ ಎಷ್ಟೋ ಡೇಗಳು ಬಂದು ಹೋಗುತ್ತದೆ. ಹೆಚ್ಚಿನವು ಆ ದಿನಕ್ಕೆ ಮಾತ್ರ ಆಚರಣೆ ಆಗಿರುತ್ತದೆ. ಪುಸ್ತಕ ದಿನವೂ ಅದೇ ಸಂಪ್ರದಾಯಕ್ಕೆ ಹೋಗದೇ. ದಿನಕ್ಕೊಂದಿಷ್ಟು ಪುಟ ಓದುವ ಹವ್ಯಾಸ ಬೆಳೆಸಿಕೊಳ್ಳೋಣ. ವಿಕಾಸ ವಾದ ಸಿದ್ಧಾಂತದಂತೆ ನಾವು ಬಳಸದೇ ಇರುವ  ಅಂಗ ನಿಧಾನವಾಗಿ ನಿಷ್ಕ್ರಿಯೆ ಆಗುತ್ತದೆ. ಮೆದುಳಿನ ಓದುವ ಸಾಮರ್ಥವೂ ಅದೇ ತೆರನಾಗುವ ಸಾಧ್ಯತೆ ಇದೆ. ಈಗಾಗಲೇ ನಮ್ಮ ಓದಿನ ಸಾಮರ್ಥ್ಯ ಕಡಿಮೆ ಆಗಿದೆ. ಮುಂದೊಂದು ದಿನ ಇದು ಇನ್ನಷ್ಟೂ ಕುಂಟಿತವಾದರ ಅಚ್ಚರಿಯೇನಲ್ಲ.

MORE FEATURES

ವಿಮರ್ಶೆ ಎನ್ನುವುದು ಕೇವಲ ಪರಿಶ್ರಮದಿಂದ ಸಿದ್ಧಿಸುವ ಕಲೆಯಲ್ಲ

05-05-2024 ಬೆಂಗಳೂರು

'ಕನ್ನಡ ಸಾಹಿತ್ಯದಲ್ಲಿ ವಿರಳಾತಿ ವಿರಳರಾಗಿರುವ ವಸ್ತು ನಿಷ್ಠ ವಿಮರ್ಶಕರ ನಡುವೆ ಪ್ರಮುಖರಾದ ನರೇಂದ್ರ ಪೈ ಅವರ ಹೊಸ ...

ಕೌಟುಂಬಿಕ, ಸಾಮಾಜಿಕ ಪರಿಸರವೇ ದುಷ್ಕೃತ್ಯಕ್ಕೆ ಕಾರಣ

05-05-2024 ಬೆಂಗಳೂರು

'ಎಲ್ಲಾ ಕಾಲಘಟ್ಟದಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದೆ. ಆದರೆ ಅದರ ಪ್ರಮಾಣ ದಿನೇ, ದಿನೆ ಹೆಚ್ಚಾಗುತ್ತಿದೆ....

ಮನ ತಟ್ಟಿದ ಕೃತಿ ‘ಹಿಮಾಲಯನ್ ಬ್ಲಂಡರ್’ 

05-05-2024 ಬೆಂಗಳೂರು

"ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಇದುವರೆಗೂ ಕುವೆಂಪು, ತೇಜಸ್ವಿ, ಭೈರಪ್ಪ ಸೇರಿದಂತೆ ಹಲವರ ಕ...