ಒಳ್ಳೆ ಕವಿಗಳನ್ನು, ಲೇಖಕರನ್ನು ಗುರುತಿಸಿ ಅವರ ಪುಸ್ತಕ ಪ್ರಕಟಿಸಬೇಕು. : ಚೆನ್ನವೀರ ಕಣವಿ


'ನನ್ನ ಕಾವ್ಯಜೀವನದಲ್ಲಿ ಬೇಂದ್ರೆ, ಮಧುರ ಚೆನ್ನರ ಪ್ರಭಾವ ಹೆಚ್ಚಿದೆ. ಮಧುರಚೆನ್ನರ ತಾತ್ವಿಕ ಚಿಂತನೆ 'ನನ್ನ ನಲ್ಲ' ಕವಿತೆಯಲ್ಲಿ ಬೇಂದ್ರೆ 'ಸಖೀಗೀತ'ದ ಪಟ್ಟಪಾಡೆಲ್ಲ ಹುಟ್ಟು ಹಾಡಾಗಿ ಹರಿದ ರೀತಿಯ ಜನಪದ ಧಾಟಿ ಇವರ ಕವಿತೆಗಳ ಪ್ರೇರಣೆ ಪಡೆದರೂ ಸಮನ್ವಯ ನಿಲುವನ್ನು ನನ್ನ ಕಾವ್ಯದಲ್ಲಿ ರೂಢಿಸಿಕೊಂಡೆ' ಎನ್ನುತ್ತಾರೆ ಕವಿ ಚೆನ್ನವೀರ ಕಣವಿ. ಅವರೊಂದಿಗೆ ಕೆ.ಎನ್. ವಿಜಯಲಕ್ಷ್ಮಿ ಅವರು ನಡೆಸಿದ ಸಂದರ್ಶನವೊಂದರ ಮಾತುಕತೆಯ ಸ್ವರೂಪ ನಿಮ್ಮ ಓದಿಗಾಗಿ.

"ನವೋದಯ ಪ್ರಮುಖ ಕವಿಗಳಲ್ಲಿ ಒಬ್ಬರಾದ ಚೆನ್ನವೀರ ಕಣವಿಯವರು ಸುಮಾರು ಐದು ದಶಕಗಳಿಂದಲೂ ಸತತವಾಗಿ ಕಾವ್ಯ ಬರೆಯುತ್ತಿರುವ ಕವಿ. ಸರಳತೆ, ಸ್ನೇಹಪರತೆ, ಶಿಸ್ತು ಇವು ಅವರ ಹುಟ್ಟಿನಿಂದಲೇ ಬಂದ ಗುಣಗಳು. ಅವರು ಹನ್ನೊಂದು ಕವನ ಸಂಕಲನಗಳನ್ನೂ, ಮೂರು ವಿಮರ್ಶಾತ್ಮಕವಾದ ಗದ್ಯಕೃತಿಗಳನ್ನೂ ಬರೆದಿದ್ದಾರೆ. ಅವರ ಕಾವ್ಯದ ಬಗ್ಗೆ 'ಚೆಂಬೆಳಕು' ಎಂಬ ಅಭಿನಂದನಾ ಗ್ರಂಥ 1980 ರಲ್ಲಿ ಹೊರಬಂದಿತು." (ಸಂದರ್ಶನ ಮೂಲ ಬರಹದಿಂದ)

* ನಿಮ್ಮ ಕಾವ್ಯಜೀವನದ ಆರಂಭದ ಪ್ರಭಾವ ಪ್ರೇರಣೆಗಳು ಎಂಥದ್ದು?
ಕಣವಿ : ನನ್ನ ಕಾವ್ಯಜೀವನದಲ್ಲಿ ಬೇಂದ್ರೆ, ಮಧುರ ಚೆನ್ನರ ಪ್ರಭಾವ ಹೆಚ್ಚಿದೆ. ಮಧುರಚೆನ್ನರ ತಾತ್ವಿಕ ಚಿಂತನೆ 'ನನ್ನ ನಲ್ಲ' ಕವಿತೆಯಲ್ಲಿ ಬೇಂದ್ರೆ 'ಸಖೀಗೀತ'ದ ಪಟ್ಟಪಾಡೆಲ್ಲ ಹುಟ್ಟು ಹಾಡಾಗಿ ಹರಿದ ರೀತಿಯ ಜನಪದ ಧಾಟಿ ಇವರ ಕವಿತೆಗಳ ಪ್ರೇರಣೆ ಪಡೆದರೂ ಸಮನ್ವಯ ನಿಲುವನ್ನು ನನ್ನ ಕಾವ್ಯದಲ್ಲಿ ರೂಢಿಸಿಕೊಂಡೆ.

*ಆಧುನಿಕ ಕನ್ನಡ ಕಾವ್ಯ ಚಳವಳಿಗಳು ನಿಮ್ಮ ಕಾವ್ಯ ಧೋರಣೆಯನ್ನು ನಿಯಂತ್ರಿಸಿತೇ ? ಅಥವಾ ಅಂಥ ಚಳವಳಿಗಳ ನೆಲೆಗಳನ್ನು ನೀವು ಮೀರಿದಿರೇ ಹೇಗೆ ?
ಕಣವಿ :
ನವೋದಯ, ನವ್ಯ, ದಲಿತ, ಬಂಡಾಯ ಯಾವ ಹೊಸ ಪ್ರವಾಹ ಬಂದರೂ ಅವುಗಳೊಂದಿಗೆ ಸಂಪರ್ಕ ಬೆಳೆಸುವ ಬಯಕೆ ನನ್ನದು. ನನಗೆ ಬಂಡಾಯ ಕಾವ್ಯಕ್ಕಿಂತಲೂ ದಲಿತರ ಸಂವೇದನೆ ಸೂಕ್ಷ್ಮತೆಗಳು ನನ್ನನ್ನು ಮುಟ್ಟಿತು. ಸರ್ವಜ್ಞ ವಚನಕಾರರಲ್ಲೂ ಬಂಡಾಯ ಪ್ರವೃತ್ತಿಯ ಶ್ರೇಷ್ಠ ವಚನಗಳಿವೆ.1950ರಲ್ಲಿ ಅಡಿಗರಿಂದ ನವ್ಯಕಾವ್ಯ ಪ್ರಾರಂಭವಾಯಿತು. ಆಡುಮಾತಿನ ಲಯ ಪ್ರತಿಮೆ, ಶಿಲ್ಪ ಕಾವ್ಯಸ್ವರೂಪ ಇವುಗಳಲ್ಲಿ ಹೊಸತು ಮೂಡಿಬಂತು. ನಿರಾಶೆ, ಲೈಂಗಿಕ ವಿಕೃತಿ, ಯಾಂತ್ರಿಕತೆ, ಜೀವನದ ಅರ್ಥಹೀನತೆ ಇಂಥ ವಸ್ತುವನ್ನು ಹೊರತುಪಡಿಸಿ ನನಗೆ ಒಗ್ಗುವ ಮೂಲಸತ್ವ ಮಾತ್ರ ಸ್ವೀಕರಿಸಿ ನಾನು ಕಾವ್ಯ ಬರೆಯತೊಡಗಿದೆ.

* ಕನ್ನಡ ಪರಸಂಸ್ಥೆಗಳ ಜೊತೆಗೆ ನೀವು ಸಂಪರ್ಕವಿಟ್ಟುಕೊಂಡವರು ಈ ನಿಟ್ಟಿನಲ್ಲಿ ಏನಾದರೂ ಹೇಳುವುದಿದೆಯೇ ?
ಕಣವಿ : ಪುಸ್ತಕ ಪ್ರಾಧಿಕಾರ, ಪರಿಷತ್ತು ಇವೆಲ್ಲಾ ಕನ್ನಡ ಪರಸಂಸ್ಥೆಗಳು. ಇಂಥ ಸಾಂಸ್ಥಿಕ ನೆಲೆಗಳಿಂದ ಕನ್ನಡದ ಬೆಳವಣಿಗೆ ಸಾಧ್ಯವಾಗಬಹುದು. ಪ್ರಕಾಶಕರು ಇದ್ದಾರೆ. ಹವ್ಯಾಸಿ ಪುಸ್ತಕ ಪ್ರಕಾಶಕರೂ ಇದ್ದಾರೆ. ಒಳ್ಳೆ ಕವಿಗಳನ್ನು, ಲೇಖಕರನ್ನು ಗುರುತಿಸಿ ಅವರ ಪುಸ್ತಕ ಪ್ರಕಟಿಸಬೇಕು. ಹಳೆಯ ಒಳ್ಳೆಯ ಪುಸ್ತಕಗಳನ್ನೂ ಗುರುತಿಸಿ ಮರುಪ್ರಕಟನೆ ಮಾಡಿಸಬೇಕು. ಪ್ರತಿ ಜಿಲ್ಲೆಯಲ್ಲೂ ಪುಸ್ತಕದ ಮಳಿಗೆ ಸ್ಥಾಪಿಸಬೇಕು. ಕರ್ನಾಟಕದ ಎಲ್ಲಾ ಪುಸ್ತಕಗಳೂ ಕೆಲವೊಮ್ಮೆಕಾಣಲು ಸಿಗುವುದಿಲ್ಲ. ಈ ಪರಸಂಸ್ಥೆಗಳು ಆ ಕಾರ್ಯಗಳನ್ನು ಇನ್ನೂ ತ್ವರಿತಗತಿಯಲ್ಲಿ ಮಾಡಿತೋರಿಸಬೇಕಾಗಿದೆ.

*ಈ ಹೊತ್ತು ಸೃಷ್ಟಿಯಾಗುತ್ತಿರುವ ತರುಣ ಪೀಳಿಗೆಯ ಕಾವ್ಯಸೃಷ್ಟಿ ನಿಮಗೇನನ್ನಿಸುತ್ತೆ?
ಕಣವಿ : ಇಂದು ಬೇಕಾದಷ್ಟು ಯುವ ಕವಿಗಳು ಬರೆಯುತ್ತಿದ್ದಾರೆ. ನನಗೆ ತಿಳಿದಂತೆ ಅವರು ಸರಿಯಾದ ಅಧ್ಯಯನಶೀಲರಾಗಿ ಹಿಂದಿನ, ಇಂದಿನ ಕಾವ್ಯಗಳನ್ನು ಶ್ರದ್ಧೆಯಿಂದ ಓದಿಕೊಂಡಿಲ್ಲ. ಹಳೇ ಪರಂಪರೆ ಕವಿಗಳಿಂದ ನಾವು ಕಲಿಯುವುದು ಸಾಕಷ್ಟಿದೆ. ಭರವಸೆ ಮೂಡಿಸುವ ಕವಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ.

* ಮಹಿಳಾ ಕವಿಯತ್ರಿಯರ ಕಾವ್ಯರಚನೆಯ ಬಗೆಗೆ ಒಂದೆರಡು ಮಾತು ಹೇಳಿ.
ಕಣವಿ : ಈಗ ಅನೇಕ ಮಹಿಳಾ ಕವಿಯತ್ರಿಯರು ಕಾವ್ಯ ಬರೆಯುತ್ತಿದ್ದಾರೆ. ಪ್ರತಿಭಾ ನಂದಕುಮಾರ್, ಚ. ಸರ್ವಮಂಗಳ, ಮುಕ್ತಾಯಕ್ಕ, ಶಶಿಕಲಾ ವೀರಯ್ಯಸ್ವಾಮಿ, ಮಾಲತಿ ಪಟ್ಟಣ ಶೆಟ್ಟಿ, ಹೇಮಾ ಪಟ್ಟಣಶೆಟ್ಟಿ, ಇವರು ನಿಸ್ಸಂಕೋಚದಿಂದ ಕಾವ್ಯಕ್ಕೆ ಧ್ವನಿಕೊಟ್ಟಿದ್ದಾರೆ. ಕೆಲವರಲ್ಲಿ ಪುರುಷರ ಬಗ್ಗೆ ಆಕ್ರೋಶ ಹೆಚ್ಚು ಕಂಡುಬರುತ್ತದೆ. ಆದಷ್ಟೂ ಸಮತೋಲನವನ್ನು ಕಾಯ್ದುಕೊಂಡು ಕಾವ್ಯ ಬರೆದರೆ ಇನ್ನೂ ಉತ್ತಮ ಕವನಗಳು ಮೂಡಿಬರಬಹುದು.

(ಸಂದರ್ಶನ - ಕೆ.ಎನ್. ವಿಜಯಲಕ್ಷ್ಮಿ, ಕೃಪೆ : ಲಂಕೇಶ್ ಪತ್ರಿಕೆ, ಸೆಪ್ಟೆಂಬರ್ -14, 1994)

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...