ಪ್ರತಿಕ್ಷಣ ಸಮಾಜವನ್ನು ಕಿತ್ತು ತಿನ್ನುವ ಈ ಕ್ರಿಮಿಕೀಟಗಳಿಗೆ ಆಯಸ್ಸೇನೂ ಇಲ್ಲ


`ನಕಾರಾತ್ಮಕ ಪಾತ್ರಗಳು ನಕಾರಾತ್ಮಕವಾಗಿಯೇ ಜೀವಿಸುತ್ತಾ ಸಮಾಜದ ಮುಖ್ಯವಾಹಿನಿಯಲ್ಲಿ ಸಮಾಜಮುಖಿಯಾಗಿ ಪರಿವರ್ತನೆಯಾಗಲು ಒಂದಿಷ್ಟು ಪ್ರಯತ್ನ ಪಡದೇ ಸ್ವಾರ್ಥದಲ್ಲಿ ಅಂತ್ಯ ಕಾಣುವ ಈ ಪಾತ್ರಗಳ ಬೆಲೆಯೇನು? ಬದುಕಿದ್ದರೂ ಸತ್ತಂತೆ ಎನ್ನುತ್ತಾರೆ' ಉಮೇಶ್ ಎಸ್.ಕೆ. ಅವರು ತಮ್ಮ ‘ಕರಿಯಪ್ಪ ಮೇಷ್ಟ್ರು ನಡೆದಿದ್ದೇ ದಾರಿ ನೈಜ ಘಟನೆಯಾಧಾರಿತ ಕೃತಿಗೆ ಬರೆದ ಲೇಖಕರ ಮಾತು.

ತಲೆಯಲ್ಲಿ ಯಾವ ಕಾಯಕವು ಚಿಕ್ಕದೂ ಯಾವ ಕಾಯಕವು ದೊಡ್ಡದೂ ಅಲ್ಲ. ಕೈಗೆ ಸಿಕ್ಕಿದ್ದನ್ನೇ ಪಂಚಾಮೃತವನ್ನಾಗಿ ಮಾಡಿಕೊಂಡು ತಾನೂ ತಿಂದು ಪರರಿಗೂ ಬಡಿಸಿ, ಸಹಸ್ರಾರು ಸೂರ್ಯೋದಯಗಳ ನಡುವೆ ತನ್ನ ನಿಸ್ವಾರ್ಥ ದುಡಿಮೆಯಲ್ಲಿ ಕೈಲಾಸ ಕಂಡವನೊಬ್ಬನ ವೀರಗಾಥೆ. ಹನ್ನೆರಡು ತಿಂಗಳು ಸುರಿಸಿದ ಬೆವರಿಗೆ ನವಿರಾಗಿ ಬೆಳೆದ ಆ ಕಬ್ಬು ತಲೆಯೆತ್ತಿ ಜೊಲ್ಲೆಯಾಗಿ ಚಪ್ಪರಿಸುವ ಹೊತ್ತಿಗೆ, ಗಾಣದೊಳಗೆ ನುಗ್ಗಿ ಅರಿದು ಕೊಪ್ಪರಿಗೆ ಸೇರಿದ ಆ ಸಿಹಿರಸ ಅಲ್ಲೇ ಕುದಿದು ಅಚ್ಚಿನೊಳಗೆ ಸೇರಿ ಚಪ್ಪರಿಸುವವರ ಭೋಜನಕ್ಕೆ ನೀ ಸೇರಿ ನೀನೇನೋ ಸಾಕ್ಷತ್ಕಾರ ಗಳಿಸಿಕೊಂಡು ಬಿಟ್ಟೆ. ನಿನ್ನಲ್ಲಿಯಾವ ಸ್ವಾರ್ಥವಿದೆ ಹೇಳು?

ಸ್ವಾರ್ಥದ ಗೀಜಗದ ಗೂಡಲ್ಲಿ ಸಿಹಿ ತಿಂದು ನೀ ಸೇರಿ ಮಾಡಿದ್ದು ಏನೋ? ಊರಲ್ಲಿ ಗಂಜಿಯುಂಡು ಮಲಗಿದ್ದ ಮುಗ್ಧರಿಗೆ ನಿನ್ನ ಬಕಾಸುರ ಆಸೆಗೆ ನಶೆ ಏರಿಸಿ ಅಮಾಯಕರ ಪ್ರಾಣವನ್ನೇ ತೆಗೆದು ಬಿಟ್ಟೆ. ನಿನ್ನ ದುರುಳ ಹೊಟ್ಟೆಗೆ ಬಡಬಗ್ಗರುಗಳ ಹರಕಲು ಬಟ್ಟೆಯನ್ನೂ ಬಿಡದ ನೀನು ಜಗ್ಗಿಸಿ ಎಳೆದೆ. ನಿಸ್ವಾರ್ಥದ ಬದುಕನ್ನು ಕಟ್ಟಿಕೊಂಡು ಕಾಯಕವೇ ಕೈಲಾಸ ಎಂದು ದುಡಿಯುವರನ್ನು ಹುಡುಕಿ ಮಾತ್ಸರ್ಯದ ವಿಷವಿಟ್ಟು ಜೈಲು ಪಾಲು ಮಾಡಿದೆ. ಧರೆಗೆ ಬಂದು ಪಿಳಿಪಿಳಿ ಕಣ್ಣು ಬಿಟ್ಟು ಚೆಂದನದ ಚಿಟ್ಟೆವನದಲ್ಲಿ ಹಾರಾಡಲು ಮೇಲೇರುವಾಗಲೇ ಅವರ ರೆಕ್ಕೆಗಳ ಮುರಿದು ಬಿಟ್ಟೆ. ತನ್ನ ಸ್ವಾರ್ಥಕ್ಕೆ ಕೆಂಪು ಹಣ್ಣನ್ನು ಮೈದುಂಬಿ ನಿಂತಿದ್ದ ನಿನ್ನ ಸೊಂಟಕ್ಕೆ ಕೊಡಲಿ ಇಟ್ಟಬಿಟ್ಟೆ. ನಿಶ್ಯಬ್ಧದ ಕಾಡೊಳಗೆ ಬೆಳೆದು ನೂರಾರು ಹಕ್ಕಿಪಕ್ಷಿಗಳಿಗೆ ನೀ ಊಟವಿಟ್ಟೆ. ಆದರೆ ಈ ರಕ್ತಚಂದನವನದ ಸರ್ವನಾಶಕ್ಕೆ ನೀನಿಂತೆ. ಈಗ ನೀನೆಲ್ಲಿ ನಿಂತೆ ಇದು ನಿನ್ನ ವರವೋ ಶಾಪವೋ? ದೇವರೇಬಲ್ಲ. ವಿಧಿಲಿಖಿತ ನೀ ನಾಶಕ್ಕೆ ನಿಂತರೆ ನಿನ್ನ ವಿನಾಶದ ನೆರಳುಗಳು ನಿನ್ನನ್ನು ನಿರಂತರ ಹಿಂಬಾಲಿಸಿ ತೀರ್ಪಿಗೆ ಕಾಯು ವಂತೆಯೇ ಇಲ್ಲ. ಈ ತೀರ್ಪೇ ಅಂತಿಮತೀರ್ಪು. ನೀ ಬೆಳೆದ ಬೆಳೆಯ ಫಲವನ್ನು ನೀನು ಹೇಗೆ ಅನುಭವಿಸುತ್ತೀಯೋ ಎಂಬುದೇ ಈ ಪುಸ್ತಕದ ವಿಸ್ತಾರ.

ಇಲ್ಲಿ ಜೀವಂತ ಪಾತ್ರಗಳಾಗಿ ತಮ್ಮ ಜೀವನದಲ್ಲಿ ಅನುಭವಿಸಿದ ಹಾಗೂ ಅನುಸರಿಸಿದ ಜೀವನದ ಮೌಲ್ಯಗಳು ಸಿಹಿವುಂಡ ಜನರಲ್ಲಿ ಎಷ್ಟು ವಿಭಿನ್ನ? ಎಷ್ಟು ಭೀಭತ್ಸ ಹಾಗೂ ಎಷ್ಟು ನಿಸ್ವಾರ್ಥ? ಎಂಬುದಷ್ಟೇ ಇಲ್ಲಿ ಬರುವ ಪಾತ್ರಗಳು ಅಷ್ಟೇ ಜೀವಂತವಾಗಿ ತಮ್ಮ ಸಾರ್ಥಕ ಜೀವನವನ್ನು ಮುಗಿಸುವಾಗ ತನ್ನ ನಿಸ್ವಾರ್ಥದ ಸೇವೆಯಲ್ಲಿ ತನಗೆ ಸಲ್ಲಬೇಕಾದ ಮರ್ಯಾದೆ ಹೇಗೆ ಸಲ್ಲುತ್ತದೆ ಎಂಬುದು ಒಂದು ನಿದರ್ಶನವಾಗಿ ಎದ್ದು ಕಾಣಬಹುದು. ಓದುಗ ಜಾಣರಾದ ನೀವು ಈ ಕಾದಂಬರಿಯನ್ನು ಎಷ್ಟು ಜೀವಂತವಾಗಿಸುತ್ತೀರೋ ಅಲ್ಲಿಯವರೆಗೂ ಸಕಾರಾತ್ಮಕವಾಗಿ ಎಲ್ಲಾ ಪಾತ್ರಗಳು ನ್ಯಾಯ ಕೊಡುತ್ತಾ ಸಾಗುತ್ತವೆ.

ನಕಾರಾತ್ಮಕ ಪಾತ್ರಗಳು ನಕಾರಾತ್ಮಕವಾಗಿಯೇ ಜೀವಿಸುತ್ತಾ ಸಮಾಜದ ಮುಖ್ಯವಾಹಿನಿಯಲ್ಲಿ ಸಮಾಜಮುಖಿಯಾಗಿ ಪರಿವರ್ತನೆಯಾಗಲು ಒಂದಿಷ್ಟು ಪ್ರಯತ್ನ ಪಡದೇ ಸ್ವಾರ್ಥದಲ್ಲಿ ಅಂತ್ಯ ಕಾಣುವ ಈ ಪಾತ್ರಗಳ ಬೆಲೆಯೇನು? ಬದುಕಿದ್ದರೂ ಸತ್ತಂತೆ. ಬದುಕುವ ಕೆಲಪಾತ್ರಗಳು ಸಮಾಜದಲ್ಲಿ ನಿರಂತರವಾಗಿ ಬೆಂಕಿಹೊಗೆಯಂತೆ ಬೆಸೆದುಕೊಂಡಿರುತ್ತವೆ. ಆದ್ದರಿಂದ ತಾನು ಮಾಡುವ ಕೆಲಸವನ್ನು ಚಿಕ್ಕ ಕೆಲಸ ಎಂದು ಭಾವಿಸಿ ಕೊರಗಿ, ಅದಕ್ಕೆ ನ್ಯಾಯ ಕೊಡದೇ ತಾನೂ ತೃಪ್ತಿ ಪಡದೇ ಜೀವಂತವಾಗಿ ಸಾಯಿಸಿ ಬಿಡುವ ಪಾತ್ರಕ್ಕೆ ಗೀಜಗದಟ್ಟಿಯ ಕರಿಯಪ್ಪ ಮೇಷ್ಟ್ರುವಿನ ಪಾತ್ರ ಹೊಸದೇನೂ ಇಲ್ಲ. ಆದರೆ ಅದು ಪಡೆದಿದ್ದು ಮಾತ್ರ ಮುಗಿಲಷ್ಟು ಪ್ರೀತಿ, ವಿಶ್ವಾಸ ಹಾಗೂ ಅಭೂತಪೂರ್ವ ಯಶಸ್ಸು.

ದೇವರನ್ನೇ ಬಗೆದು ಭಕ್ಷಿಸಿ ಬಿಡುವ ಪಾತ್ರಗಳು ಎದ್ದು ನಿಲ್ಲುತ್ತವೆ. ಇವರು ಹಾಸಿದ್ದು, ಹೊದ್ದಿದ್ದು, ತಿಂದಿದ್ದು, ಕುಡಿದಿದ್ದು ರಕ್ತಪಿಪಾಸು. ಪ್ರತಿಕ್ಷಣ ಸಮಾಜವನ್ನು ಕಿತ್ತು ತಿನ್ನುವ ಈ ಕ್ರಿಮಿಕೀಟಗಳಿಗೆ ಆಯಸ್ಸೇನೂ ಇಲ್ಲ. ಅವು ಅಣಬೆಯಂತೆ ಕೊಳೆತು ಗೊಬ್ಬರವಾಗಿ ಬಿಡುತ್ತವೆ. ಒಬ್ಬ ಶಿಕ್ಷಕ ತನ್ನ ಕೆಲಸದಲ್ಲಿ ಒಂದು ಮಹಾನ್ ಶಕ್ತಿಯನ್ನು ತನ್ನ ಬೆನ್ನಿಂದೆ ತನಗರಿವಿಲ್ಲದಂತೆ ಸಾಗುತ್ತಿರುವ ಆ ಬೃಹತ್ ತೇರು ಪರಮಾತ್ಮನನ್ನು ಹೇಗೆ ಹೊತ್ತಿ ಸಾಗಿಬಿಡುತ್ತದೆ ಎಂಬುದೇ ಇಲ್ಲಿನ ಜೀವಂತ ಪಾತ್ರದ ಚಮತ್ಕಾರ.

ಈ "ಕರಿಯಪ್ಪ ಮೇಷ್ಟ್ರು ನಡೆದಿದ್ದೇ ದಾರಿ" ಪುಸ್ತಕ ಬರೆಯಲು ಪ್ರಾರಂಭಿಸಿದಾಗ ನನಗೆ ಉತ್ತೇಜಿಸಿದ ನನ್ನ ಆತ್ಮೀಯ ಸ್ನೇಹಿತರು ಹಾಗೂ ನನ್ನ ಒಡನಾಡಿ ಪೊಲೀಸ್ ಅಧಿಕಾರಿಗಳು, ನ್ಯಾಯವಾದಿಗಳು. ಈ ಪುಸ್ತಕವನ್ನು ಅದ್ಭುತವಾಗಿ ನುಡಿ ಅಕ್ಷರಗಳನ್ನು ಕೂರಿಸಿದ ವಿ.ಡಿ. ಲಕ್ಷ್ಮೀನಾರಾಯಣ ರವರಿಗೆ ನನ್ನ ಹೃದಯ ಪೂರ್ವಕ ವಂದನೆಗಳು.

ಈ "ಕರಿಯಪ್ಪ ಮೇಷ್ಟ್ರು ನಡೆದಿದ್ದೇ ದಾರಿ" ಪುಸ್ತಕ ಹೆಸರಾಂತ ಪ್ರಕಾಶನ ಸಂಸ್ಥೆಯಾದ ಸ್ವಪ್ನ ಬುಕ್ ಹೌಸ್‌ನ ನಿರ್ದೇಶಕರಾದ ನಿತಿನ್ ಶಾರವರಿಗೆ ಹಾಗೂ ಈ ಪುಸ್ತಕದ ಅಕ್ಷರ ಜೋಡಣೆಯಲ್ಲಿ ಸಹಕರಿಸಿದ ದಿವ್ಯಾ ಪ್ರಿಂಟ್ರಾನಿಕ್ಸ್‌ನ ಸಿಬ್ಬಂದಿ ವರ್ಗಕ್ಕೂ, ಪುಸ್ತಕಕ್ಕೆ ಅಂದವಾದ ಮುಖಪುಟ ರಚಿಸಿಕೊಟ್ಟ ಪ್ರವೀಣ್ ಬೇಲೂರ್ ಇವರಿಗೆ ನನ್ನ ಅನಂತ ವಂದನೆಗಳು.
-ಉಮೇಶ್ ಎಸ್.ಕೆ.

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...