ಪ್ರತಿನಿತ್ಯ ಮಧ್ಯರಾತ್ರಿಯ ನೀರವದಲ್ಲಿ ಅಷ್ಟಷ್ಟೇ ಅರಳುತ್ತ ಆದ ಕಾದಂಬರಿಯಿದು


"ಮನೆತನವೊಂದು ಉತ್ತುಂಗ ಸ್ಥಿತಿಯಲ್ಲಿರುವಾಗ ದಿಢೀರ್ ಇಲ್ಲವಾಗುವುದು, ಅದನ್ನು ಸಂಕೇತಿಸುವಂತೆ ಬದುಕಿದ್ದೂ ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಸುಬ್ಬಮ್ಮ ಹಾಗೂ ರಾಧಕ್ಕೆ ದೇಶಾಂತರ ಹೊರಟುಬಿಡುವುದು...ಇಂತಹ ಸಂಗತಿಗಳನ್ನು ಹೇಳುವಾಗ ಮನೆತನವೊಂದರ ಮುಖ್ಯ ಪಾತ್ರಗಳ ದಟ್ಟಣೆ ಸಹಜ," ಎನ್ನುತ್ತಾರೆ ರಾಜಶೇಖರ ಜೋಗಿನ್ಮನೆ. ಅವರು ತಮ್ಮ ‘ಕೇಳು ಧನಂಜಯ’ ಕೃತಿಗೆ ಬರೆದ ಲೇಖಕನ ನುಡಿ.

ಕಥೆಯೊಂದು ತಾನಾಗಿಯೇ ಹುಟ್ಟಿಕೊಳ್ಳುವ ಹಾಗೂ ಇರುವ ಕಥನವೊಂದು ಇರದ ಕಥೆಯೊಂದಿಗೆ ಬೆಸೆದುಕೊಂಡ ವಿಸ್ಮಯವೊಂದು ಘಟಿಸಿದ ಸಮಾಧಾನದಲ್ಲಿ ಕೇಳು ಧನಂಜಯ ಎಂಬ ಈ ಕಾದಂಬರಿಯನ್ನು ಓದುಗರ ಮಡಿಲಿಗೆ ಹಾಕುತ್ತಿದ್ದೇನೆ.

ಕಥೆ-ಕಾದಂಬರಿಗಳೆಂದರೆ ಸತ್ಯವಲ್ಲದ್ದನ್ನು ಹಾಗೂ ಸತ್ಯವಾಗಬಲ್ಲದ್ದನ್ನು ಸತ್ಯವೆಂಬಂತೆ ಹೇಳುವುದಲ್ಲವೇ..? ಹಾಗೆಂದು ಅದೇ ಪೂರ್ಣಸತ್ಯ ಎನ್ನಲಾರೆ. ಏಕೆಂದರೆ ಈ ಸೃಜನೆಯಲ್ಲಿ ನಿಜದ ನೆರಳು ಇದ್ದೇ ಇದೆ. ಎಂದೋ ಕಾಡಿದ ಘಟನೆ, ಎಂದೋ ಕೇಳಿದ ಕಥನ, ಬದುಕಿನ ಹಾದಿಯಲ್ಲಿ ದೊರೆತ ಅನುಭವ, ಬೇರೆ ಬೇರೆ ಓದಿನಿಂದ ದಕ್ಕಿದ ಸಂಗತಿಗಳು ಮುಂದುವರಿಯಲು, ಪಾತ್ರವೊಂದು ಎಲ್ಲವೂ ಇಲ್ಲಿ ಇಣುಕಿವೆ. ಅರಳಲು ಅಗತ್ಯವೆನಿಸಿದಾಗ ಪೂರಕ ಮಾಹಿತಿ ಅರಸಿ ಅಲೆದಿದ್ದೇನೆ, ಅಂತರ್ಜಾಲದಲ್ಲಿ ತಡಕಾಡಿದ್ದೇನೆ. ಬಲ್ಲವರಲ್ಲಿ ಕೇಳಿ ಬಗೆಹರಿಸಿಕೊಂಡಿದ್ದೇನೆ. ಹಾಗೆಂದು ಸಿಕ್ಕ ಎಲ್ಲವನ್ನೂ ತುರುಕುವ ದುಸ್ಸಾಹಸ ಮಾಡಿಲ್ಲ. ಕಥನಕ್ಕೆ ಬೇಕಷ್ಟನ್ನೇ ಬಳಸಿಕೊಂಡಿದ್ದೇನೆ. ನಿತ್ಯ ಸುದ್ದಿಗಳ ಜೊತೆಯಲ್ಲಿಯೇ ಇರಬೇಕಾದ ಪತ್ರಕರ್ತ ವೃತ್ತಿ ನನ್ನದಾಗಿರುವ ಕಾರಣದಿಂದ ಪ್ರತಿನಿತ್ಯ ಮಧ್ಯರಾತ್ರಿಯ ನೀರವದಲ್ಲಿ ಅಷ್ಟಷ್ಟೇ ಅರಳುತ್ತ ಆದ ಕಾದಂಬರಿಯಿದು.

ಸುಮಾರು ಹದಿನಾರನೇ ಶತಮಾನದಲ್ಲಿ ಆರಂಭವಾಗಿ ಇನ್ನೂರು ವರ್ಷಗಳಷ್ಟು ಕಾಲ ಸಾಗುವ ಮೊದಲ ಭಾಗ ಅಕ್ಷರಶಃ ಕಟ್ಟಿದ ಕಥನ, ಅಂಬೆಗಾರಿನ ವೆಂಕಟೇಶ ಹೆಗಡೆಯಿಂದ ಶುರುವಾಗಿ ಗೋವಿಂದ ಹೆಗಡೆ ಎಂಬಾತ ಶ್ರೀಕಾರ ಹಾಕಿದ ಜಂಗಮಪುರ, ಸಂಗೀತ, ಯಕ್ಷಗಾನ, ರಾಜರ ಆಡಳಿತ, ವಿದೇಶ ವ್ಯವಹಾರ, ಹೀಗೆ ಸಮೃದ್ಧವಾಗಿ ಸಾಗುತ್ತ ಗಜಾನನ ಹೆಗಡೆಯ ಕಾಲದವರೆಗೆ ಪಾತ್ರಗಳು ಬದಲಾಗುತ್ತ ಸಾಗುವುದೆಲ್ಲ ಇರದಿರುವುದನ್ನು ಇದ್ದಂತೆ ಸೃಷ್ಟಿಸಿದ್ದು.

ಮನೆತನವೊಂದು ಉತ್ತುಂಗ ಸ್ಥಿತಿಯಲ್ಲಿರುವಾಗ ದಿಢೀರ್ ಇಲ್ಲವಾಗುವುದು, ಅದನ್ನು ಸಂಕೇತಿಸುವಂತೆ ಬದುಕಿದ್ದೂ ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಸುಬ್ಬಮ್ಮ ಹಾಗೂ ರಾಧಕ್ಕೆ ದೇಶಾಂತರ ಹೊರಟುಬಿಡುವುದು...ಇಂತಹ ಸಂಗತಿಗಳನ್ನು ಹೇಳುವಾಗ ಮನೆತನವೊಂದರ ಮುಖ್ಯ ಪಾತ್ರಗಳ ದಟ್ಟಣೆ ಸಹಜ.

ಹೀಗಾಗಿ ಆ ಪಾತ್ರಗಳ ಗುರುತು ಹಿಡಿಯಲು ಓದುಗರಿಗೆ ಕಿರಿಕಿರಿ ಆಗಬಹುದೆಂಬ ಕಾರಣಕ್ಕೆ ವಂಶವೃಕ್ಷವನ್ನೂ ಅಳವಡಿಸಿದ್ದೇನೆ. ಎರಡನೇ ಭಾಗ ಅರವತ್ತರ ದಶಕದಲ್ಲಿ ಆರಂಭವಾಗುವುದರಿಂದ ಹಾಗೂ ಪಾತ್ರಗಳ ಗೋಜಲು ಇಲ್ಲದಿರುವುದರಿಂದ ಅದಕ್ಕೆ ವಂಶವೃಕ್ಷ ಬೇಕಾಗಲಾರದು ಎಂದು ಭಾವಿಸಿದ್ದೇನೆ. ಬೇರೆಯದೇ ಕಥೆಯೇನೋ ಎಂದು ಭಾಸವಾಗುವ ಎರಡನೇ ಭಾಗಕ್ಕೂ ಮೊದಲನೆಯ ಭಾಗಕ್ಕೂ ಅವಿನಾಭಾವ ಸಂಬಂಧವೊಂದು ಸೃಷ್ಟಿಯಾಗುವ ಸಮಾಧಾನವನ್ನು ಬರಹಗಾರನಾಗಿ ನನಗೆ ಈ ಕಾದಂಬರಿ ಕೊಟ್ಟಿದೆ.

ಕಥೆಯನ್ನು ಅನಂತಜ್ಜ ಹೇಳುತ್ತಿದ್ದಾನೆ. ಸಹಜವಾಗಿ ಕಥೆ ಭೂತ-ವರ್ತಮಾನದ ನಡುವೆ ಇಲ್ಲಿ ಅನಂತಜ್ಜ ಕಥೆಗಾರ, ಧನಂಜಯ ಕೇಳುಗ ಸಣ್ಣಪ್ಪಜ್ಜನಿಂದ ಕೇಳಿಸಿಕೊಂಡ ಸಂಚರಿಸುತ್ತಿರುತ್ತದೆ. ಹೀಗಾಗಿ ಕಾದಂಬರಿಯಲ್ಲಿ ನಾನು ಪ್ರವೇಶಿಸುವ ಪ್ರಮೇಯ ಬರಲಿಲ್ಲ. ಕೇಳು ಧನಂಜಯ ಎಂದು ಹೇಳುವವನು ಕಥೆಯ ಪಾತ್ರವಾದ ಅನಂತ ನಾನು ಹೇಳಬೇಕಾದ್ದನ್ನು ಕಥೆಯ ಅವನೇ ಹೇಳಿದ್ದಾನೆ.

ಈ ಕಾದಂಬರಿಯ ಮೂಲಕ ಮಹತ್ವವಾದುದನ್ನೇನೋ ಹೇಳಬೇಕೆಂಬ ದರ್ದು ನನ್ನದಲ್ಲ. ಆದರೆ ಓದುಗರಿಗೆ ಅಂಥದೇನಾದರೂ ಸಿಕ್ಕರೆ ಅದು ಕಾದಂಬರಿಯ ಗೆಲುವು, ಈ ಕಾದಂಬರಿಯೆಂಬ ಕಥಾಹಂದರ ತನ್ನದೇ ಆದ ವೈಶಿಷ್ಟ್ಯವನ್ನು ದಕ್ಕಿಸಿಕೊಂಡಿದೆ ಎಂಬ ನಂಬಿಕೆ ನನಗಂತೂ ಇದೆ.

ಈ ಕಾದಂಬರಿ ಏನು ಹೇಳುತ್ತದೆ ಎನ್ನುವುದನ್ನು ನಾನು ಹೇಳಬೇಕಾಗಿಲ್ಲ. ಆದರೆ ಬರೆಯುತ್ತ ಹೋದ ಹಾಗೆ ಈ ಕಾದಂಬರಿ ನನ್ನ ತಿಳಿವಳಿಕೆಯ ಮಿತಿಯನ್ನು ವಿಸ್ತಾರವಾಗಿಸಿದೆ ಎಂದು ಹೇಳದೇ ಇರಲಾಗದು.

ಅದು ಹೇಗೆಂದರೆ... ಜೋಗಿಬೆಟ್ಟದ ಅವದೂತರು, ರಾಜನ್ ಪಾಂಡೆ, ಸುಬ್ರಾಯ ಶಾಸ್ತ್ರಿ, ಶ್ಯಾಮಾ ಜೋಯಿಸರು, ಕಥೆ ಹೇಳುವ ಅನಂತಜ್ಜ... ಹೀಗೆ ಆಯಾ ಪಾತ್ರಗಳ ವ್ಯಕ್ತಿತ್ವ ಕಟ್ಟುವ ಪ್ರಕ್ರಿಯೆಯಲ್ಲಿ ನನಗೆ ತಿಳಿದಿರದ ಸಂಗತಿಗಳ ಕುರಿತು ತಿಳಿದುಕೊಳ್ಳಬೇಕಿತ್ತು. ಅದಕ್ಕೆ ತಿಳಿದವರು ನೆರವಾದರು.

ಏರುವ ಇಳಿಯುವ; ಅರಳುವ-ಮುದುಡುವ ನಿಯಮ ನಿಸರ್ಗಕ್ಕಷ್ಟೇ ಅಲ್ಲ, ಇಡೀ ಬ್ರಹ್ಮಾಂಡಕ್ಕೂ ಎಂಬ ಸಹಜ ಅರಿವು ಕೃತಿ ಓದಿ ಮುಗಿಸಿದಾಗ ಕಾಣುವುದಾದರೂ ಕಾದಂಬರಿ ಅಷ್ಟು ಮಾತ್ರವೇ? ಅಥವಾ ಅದಕ್ಕಿಂತ ಆಚೆ ಇನ್ನೇನನ್ನೋ ಒಳಗೊಂಡಿದೆಯೇ ಎಂಬುದನ್ನು ಓದುಗರೇ ಹೇಳಬೇಕು. ಒಟ್ಟಾರೆ ಓದುವ ಸುಖಕ್ಕೆ ಕೇಳು ಧನಂಜಯನಿಂದ

ಮೋಸವಾಗಲಾರದು ಅಂದುಕೊಂಡಿರುವೆ.

ನಿಮ್ಮವ,

ರಾಜಶೇಖರ ಜೋಗಿನ್ಮನೆ

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...