ಪ್ರೇಮವೆಂದರೆ ಹಾಗೆ ಪ್ರತಿಯೊಬ್ಬ ಕವಿಯನ್ನು ಬೆಂಬಿಡದೆ ಕಾಡಿದ ಬೇತಾಳ


"ಪ್ರೇಮವೆಂದರೆ ಕವಿತೆಯಲ್ಲಿನ ಸಾಲುಗಳಿವು ಪ್ರೇಮಕ್ಕೆ ಹಲವಾರು ನಿದರ್ಶನಗಳನ್ನು ನೀಡಿ ಪ್ರೇಮ ರುಜುವಾತು ಪಡಿಸುತ್ತಾರೆ. ಸುಟ್ಟ ಪಾದ ಮತ್ತು ವಸ್ತ್ರದ ತುಂಡು ಕವಿತೆಯಲ್ಲಿ, ಅಮಾಯಕ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವಾದಾಗಲೂ ಹೆತ್ತವರು ಮಾತ್ರ ಕಣ್ಣೀರಾದರೂ, ಜಾತಿ, ಧರ್ಮದ ಅಡ್ಡಗೋಡೆಗಳನ್ನು ಕಟ್ಟಿಕೊಂಡು ನಾವೆಲ್ಲ ಒಂದೇ ಎಂಬುದನ್ನು ಮರೆತ ಮನುಷ್ಯತ್ವಗಳಿಗೆ ಹೇಳಲು ಏನಿದೆ? ಕೇಳಲು ಏನಿದೆ?," ಎನ್ನುತ್ತಾರೆ ಮೈಲಾರಪ್ಪ ಬೂದಿಹಾಳ. ಅವರು ಶಿಲ್ಪಾ ಮ್ಯಾಗೇರಿ ಅವರ ‘ಚೈತ್ರದ ಚರಮಗೀತೆ’ ಕೃತಿ ಕುರಿತು ಬರೆದ ವಿಮರ್ಶೆ.

ಚೈತ್ರದ ಚರಮಗೀತೆ: ಕವನ ಸಂಕಲನ
ಲೇಖಕರು: ಶಿಲ್ಪಾ ಮ್ಯಾಗೇರಿ
ಪ್ರಕಾಶಕರು: ವಿಶಾಲ ಪ್ರಕಾಶನ ಮಾದಿನೂರು ಕೊಪ್ಪಳ
ಬೆಲೆ : 100/-
ಪ್ರಥಮ ಮುದ್ರಣ : 2024
ಸಂಪರ್ಕ ಸಂಖ್ಯೆ : 94835 69196

ಕವಿತೆಯೆಂದರೆ ಕವಿಯ ಭಾವ ಬುಗ್ಗೆ, ಅನುಭವಿಸಿದ ನೋವು ಯಾತನೆ, ಸಾಮಾಜಿಕವಾಗಿ ಕಂಡುಂಡ ವಾಸ್ತವಿಕತೆಯನ್ನು ಅಥವಾ ಕಲ್ಪನಾತ್ಮಕ ತೆಯನ್ನು ಕೆಲವು ಪದಗಳಲ್ಲಿ ಹಿಡಿದಿಡುವ ಕಲೆಯೇ ಕವಿತೆ. ಕವಿತೆ ಕಟ್ಟುವಿಕೆಗೂ ಓದಿಗೂ ಅವಿನಾಭಾವ ಸಂಬಂಧ ನಾವು ಹೇಗೆ ಓದುತ್ತೇವೆಯೊ ಆ ನೆಲೆಗಟ್ಟಿನ ಮೇಲೆ ಕವಿತೆ ರೂಪಗೊಳ್ಳುತ್ತದೆ, ನನ್ನ ಪ್ರಕಾರ ಕವಿತೆ ಹುಣಸೆ ಅಥವಾ ಮಾವು ಇದ್ದ ಹಾಗೆ ಕೆಲವರಿಗೆ (ಮಾವು / ಹುಣಸೆ) ಮಿಡಿ ಇಷ್ಟವಾದರೆ ಕೆಲವರಿಗೆ ಡೋರೆ, ಹಲವರಿಗೆ ಮಾಗಿದ ಹಣ್ಣು ಇಷ್ಟವಾಗುವಂತಿದ್ದರೂ, ಕೂಡ ಮಾಗಿದ ಮೇಲೆ ಕವಿತೆಯನ್ನು ಎಲ್ಲರೂ ಇಷ್ಟಪಡುತ್ತಾರೆ. ಅಂತಹ ಇಷ್ಟಪಡುವ ಕವಿತೆಯನ್ನು ಕಟ್ಟುವ ನಿಟ್ಟಿನಲ್ಲಿ ಸಾಗುತ್ತಿರುವ ಕವಯತ್ರಿ ಶಿಲ್ಪಾ ಮ್ಯಾಗೇರಿ, ಈಗ ನಾಲ್ಕನೇಯ ಕೃತಿ "ಚೈತ್ರದ ಚರಮಗೀತೆ" ಕವನ ಸಂಕಲನದ ಮೂಲಕ ಲೌಕಿಕತೆಯ ಬಂಧನ ಜೊತೆಗೆ ಮಹಿಳೆಯ ಸಮಾನತೆಯ ಕೂಗನ್ನು ಅಮೃತಮತಿ, ಈ ಯುಗದ ಗಾಂಧಾರಿ, ಊರ್ಮಿಳೆ ಕವಿತೆಗಳ ಮೂಲಕ ವ್ಯಂಗ್ಯವಾಡುತ್ತಾರೆ.

"ಹದಿನಾರು ಸಾವಿರ ಮಡದಿಯರ
ರಮಣ ಕೃಷ್ಣನ ಕುರಿತು ತಕರಾರಿಲ್ಲ ನಮ್ಮಲ್ಲಿ
ಐವರು ಗಂಡಂದಿರ ಒಡತಿ ಪಾಂಚಾಲಿ
ನಾರಿ ರತ್ನ ಜಗದಲ್ಲಿ"

ಅಮೃತಮತಿ ಕವಿತೆಯಲ್ಲಿನ ಸಾಲುಗಳಿವು, ಪ್ರಾಚೀನ ಕಾಲದಿಂದಲೂ ಪುರುಷ ಪ್ರಧಾನವಾಗಿರುವ ಸಮಾಜದ ವ್ಯವಸ್ಥೆಯ ನ್ನು ಕಾಣುತ್ತವೆ, ಕೃಷ್ಣ ಸಾವಿರ ಮಡದಿಯರ ಸರದಾರನಾದರೂ ಯಾರು ಕೂಡ ಕೃಷ್ಣನತ್ತ ಬೆರಳು ಮಾಡಿ ತೋರದೆ ಪ್ರಶ್ನಿಸದೆ, ಐವರು ಗಂಡದಿರ ಒಡತಿ ಪಂಚಾಲಿಯ ಕುರಿತಾದ ವಿವಿಧ ಗುಲ್ಲುಗಳು ಹುಟ್ಟಿಕೊಳ್ಳುತ್ತವೆ ಎಂಬುದನ್ನು ಕವಯಿತ್ರಿ ಪುರುಷ ಪ್ರಧಾನ ಸಮಾಜಿಕ ವ್ಯವಸ್ಥೆಗೆ ಕವಿತೆಯೆಂಬ ಕನ್ನಡಿ ಮೂಲಕ ಸತ್ಯವನ್ನು ಪ್ರತಿಪಾದಿಸುತ್ತಾರೆ.

ಕದಳಿಯ ವನದಲ್ಲಿ ಕೊನರಿದ ಪುಷ್ಪ ಕವಿತೆಯಲ್ಲಿ ಅಖಂಡ ಅಧಿಪತ್ಯ ತೊರೆದು, ರಾಜ್ಯ ಭೋಗ ತ್ಯಜಿಸಿ ಚನ್ನಮಲ್ಲಯ್ಯನೇ ಶಾಶ್ವತ ಎಂಬುದನ್ನು ತಿಳಿಸಿ ಕೊಟ್ಟ ಅಕ್ಕಮಹಾದೇವಿಯ ಬದುಕಿನ ಚಿತ್ರಣದ ಜೊತೆಗೆ ಕವಯಿತ್ರಿ ಬದುಕಿನ ಎಳೆಯನ್ನು ಬಿಡಿ ಬಿಡಿಯಾಗಿಸಿ ಅಕ್ಕಮಹಾದೇವಿಯ ಬದುಕಿನ ಸಾರ್ಥಕತೆಯ ಮುಂದೆ ತಮ್ಮ ಸ್ವಾರ್ಥ ಬದುಕಿನ ಸಾಮ್ಯತೆಯನ್ನು ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಮುಖವಾಡದ ಮರೆಯಲ್ಲಿ ಕವಿತೆಯಲ್ಲಿ ಸಂಪ್ರದಾಯ ಬದುಕಿನ ಮೂಲ ತಳಹದಿಯ ಮೇಲೆ ರೂಪಗೊಂಡ ಬದುಕಿಗೂ ಇಂದಿನ ಬದುಕಿನ ಚಿತ್ರಣದಲ್ಲಾದ ಉಡುಗೆ ತೊಡುಗೆ ಬದಲಾವಣೆ, ಕನ್ನಡದ ನಂಟಿನ ಪದಗಳು ಕಳೆದು ಆಂಗ್ಲ ಪದಗಳಿಗೆ ಅಂಟಿಕೊಂಡಿದ್ದು, ಶಾಲಾ ಕಾಲೇಜುಗಳೇ ರಾಜಕೀಯವಾಗಿ ಬಹು ಬಣ್ಣ ಪಡೆದುಕೊಂಡಿರುವುದು, ಕುಟುಂಬಗಳ ಮಾನವೀಯ ಸಂಬಂಧಗಳು ಮರೆಯಾಗಿ ವೃದ್ಧಾಶ್ರಮಕ್ಕೆ ಹಿರಿಯ ಜೀವಿಗಳನ್ನು ತಳ್ಳುತ್ತಿರುವುದನ್ನು ವ್ಯಂಗವಾಗಿ ಕವಿತೆ ಮೂಲಕ ಕಟ್ಟಿಕೊಡುತ್ತಾರೆ.

ಸಂತೋಷವೆಂಬುದು ಬದುಕಿನ ಆಳಕ್ಕಿಳಿದಾಗ ಮಾತ್ರ ಸಿಗುವಂತದ್ದು, ಪೈಸೆಯಲ್ಲಿ ಸಿಗುವಂತ ಮಿಟಾಯಿ ರುಚಿಯನ್ನು ಯಾವ ದೊಡ್ಡ ನೋಟು ಪೈಸೆಗೆ ಸಮವಲ್ಲ, ಹಾಗಾಗಿ ಕವಯತ್ರಿ ಶಿಲ್ಪಾ ಮ್ಯಾಗೇರಿಯವರು ಬಾಲ್ಯದಲ್ಲಿ ಕಳೆದು ಹೋದ ತಮ್ಮೂರಿನ ಜಾತ್ರೆಯ ಸವಿನೆನಪುಗಳನ್ನು ಮನದಂಗಳಕ್ಕಿಳಿಸಿ ಈಗಿನ ಸಗಣಿ ಕಾಣದ ಅಂಗಳ ಹಾಗೂ ಜಾತ್ರೆಯ ಆಡಂಬರವನ್ನು ಅಣಕಿಸುತ್ತಾರೆ. ಪ್ರೇಮವೆಂದರೆ ಹಾಗೆ ಪ್ರತಿಯೊಬ್ಬ ಕವಿಯನ್ನು ಬೆಂಬಿಡದೆ ಕಾಡಿದ ಬೇತಾಳವೆಂದರೆ ತಪ್ಪಾಗಲಿಕ್ಕಿಲ್ಲ.

"ಪ್ರೇಮವೆಂದರೆ ನನಗೂ ಗೊತ್ತಿಲ್ಲ
ಇರಬಹುದು ಹೃದಯದಿಂದ ಹೃದಯಕ್ಕೆ
ಎಳೆದ ಸರಳ ರೇಖೆ"

ಪ್ರೇಮವೆಂದರೆ ಕವಿತೆಯಲ್ಲಿನ ಸಾಲುಗಳಿವು ಪ್ರೇಮಕ್ಕೆ ಹಲವಾರು ನಿದರ್ಶನಗಳನ್ನು ನೀಡಿ ಪ್ರೇಮ ರುಜುವಾತು ಪಡಿಸುತ್ತಾರೆ. ಸುಟ್ಟ ಪಾದ ಮತ್ತು ವಸ್ತ್ರದ ತುಂಡು ಕವಿತೆಯಲ್ಲಿ, ಅಮಾಯಕ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವಾದಾಗಲೂ ಹೆತ್ತವರು ಮಾತ್ರ ಕಣ್ಣೀರಾದರೂ, ಜಾತಿ, ಧರ್ಮದ ಅಡ್ಡಗೋಡೆಗಳನ್ನು ಕಟ್ಟಿಕೊಂಡು ನಾವೆಲ್ಲ ಒಂದೇ ಎಂಬುದನ್ನು ಮರೆತ ಮನುಷ್ಯತ್ವಗಳಿಗೆ ಹೇಳಲು ಏನಿದೆ? ಕೇಳಲು ಏನಿದೆ? ಬಟ್ಟೆಯ ತುಂಡಿಗೆ ಧರ್ಮದ ಲೇಪನ ಮಾಡಿದವರಿಗೆ ಕವಯತ್ರಿ ಚಳಿ ಬಿಡಿಸುವ ಮೂಲಕ ಧರ್ಮಾಂಧರಿಗೆ ಬುದ್ದಿ ಕಲಿಸುತ್ತಾರೆ. "ಚೈತ್ರದ ಚರಮಗೀತೆ " ಕವನ ಸಂಕಲನದ ಶೀರ್ಷಿಕೆಯಾಗಿದ್ದು ಇದರ ಎರಡು ಸಾಲುಗಳನ್ನು ಇಲ್ಲಿ ಉಲ್ಲೇಕ ಮಾಡಲೇ ಬೇಕು.

"ಸಾವಿರ ದೀಪಗಳ ಸಾಲು ನಾಲಿಗೆಯಲ್ಲಿದೆ
ಸಾಯಿಸುವ ಈಟಿಯೂ ಅವನ ಕಣ್ಣಲ್ಲೇ ಇದೆ"

ಕವಿತೆಯು ಕವನ ಸಂಕಲನದ ತಲೆಬರಹ ದಂತೆ ಮುಕಟಪ್ರಾಯವಾಗುತ್ತದೆ. ಒಟ್ಟು ಸಂಕಲನದಲ್ಲಿ 46 ಕವಿತೆಗಳಿದ್ದು ಹೆಣ್ಣಿನ ಶೋಷಣೆ, ಮತ್ತು ಸಮಾನತೆ, ಬಾಲ್ಯದ ನೆನಪುಗಳು, ಇನಿಯನ ಸುತ್ತ ಹೆಣೆದ ಪ್ರೇಮ ಕವಿತೆಗಳಿವೆ ಕವನ ಸಂಕಲನದ ಮುನ್ನುಡಿಯನ್ನು ನಾಡಿನ ಹಿರಿಯ ಕವಿ ಮತ್ತು ವಿಮರ್ಶಕರಾದ ಡಾ ವೈ.ಎಂ ಯಾಕೊಳ್ಳಿಯವರು ಬರೆದದ್ದು ಕವನ ಸಂಕಲನಕ್ಕೆ ಮತ್ತಷ್ಟು ಇಂಬು ದೊರೆತರೆ ಬೆನ್ನುಡಿಯನ್ನು ಮಂಡ್ಯದ ಕವಯತ್ರಿ ಮಂಜುಳಾ ಕಿರುಗಾವಲುರವರ ಆಪ್ತತೆಯ ಬರಹದ ಸ್ಪರ್ಷವಿದ್ದು, ಕವಯತ್ರಿ ಶಿಲ್ಪಾ ಮ್ಯಾಗೇರಿಯವರು ಪ್ರಸ್ತುತ ಸಾಮಾಜಿಕ ಹೊಣೆಗಾರಿಕೆ ಹೊತ್ತು ಸಾಮಾಜಿಕ ತಲ್ಲಣಗಳಿಗೆ ಕವಿ ಮನ ಮಿಡಿದಿದ್ದೆ ಆದರೆ ಕವನ ಸಂಕಲನಕ್ಕೆ ಮತ್ತಷ್ಟು ಮೆರಗು ಹೆಚ್ಚುತ್ತಿತ್ತು, ಆದರೂ ಮಹಿಳಾ ಸಂವೇದನೆಯ ಸಮಾನತೆಯ ಸಾಲಿನಲ್ಲಿ ಗಟ್ಟಿ ಧ್ವನಿಯೆತ್ತಿ ನಿಂತಿರುವುದು ಹೆಮ್ಮೆ ಸಂಗತಿ.

- ಮೈಲಾರಪ್ಪ ಬೂದಿಹಾಳ ಮುಗಿಲ ಹಕ್ಕಿ

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...