ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್


ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿತ್ರಗಳ ಮೂಲಕ ಮಾತ್ರವಲ್ಲದೇ ಬದುಕಿನಲ್ಲಿಯೂ ಸಾಮಾಜಿಕ ನ್ಯಾಯಕ್ಕಾಗಿ ತುಡಿಯುತ್ತಿದ್ದ ಒಬ್ಬ ಅಪ್ಪಟ ಕಲಾವಿದ. ಅವರ ಚಿತ್ರಗಳು ಕನ್ನಡಿಗರಿಗೆ ನೀಡಿದ ದೃಷ್ಟಿ ಎಂಥಹದ್ದು ಎಂಬುದರ ಕುರಿತು ಕವಿ, ಲೇಖಕ ಡಾ. ಹುಲಿಕುಂಟೆ ಮೂರ್ತಿ ಅವರು ಈ ಹಿಂದೆ ಬರೆದಿದ್ದ ಲೇಖನ ಮತ್ತೊಮ್ಮೆ ನಿಮ್ಮ ಓದಿಗಾಗಿ.

ರಾಜಣ್ಣ ಎಂಬ ಜಾತಿ ವಿನಾಶದ ಅಸ್ತ್ರ

ರಾಜಕುಮಾರ್ ನನ್ನ ಬದುಕನ್ನು ಆವರಿಸಿದ್ದು ಎಷ್ಟು ಸಹಜವೋ ಅಷ್ಟೇ ವಿಚಿತ್ರ. ಎಂಬತ್ತೊಂಬತ್ತು, ತೊಂಬತ್ತರಿಂದ ತೊಂಬತ್ತಾರು, ತೊಂಬತ್ತೇಳರ ಸಮಯದಲ್ಲಿ ನಮ್ಮ ಸುತ್ತ ಮುತ್ತಲ ಊರುಗಳಲ್ಲಿ ವಿಡಿಯೋ ಪ್ಲೇಯರ್ ಮತ್ತು ಟಿ.ವಿ.ಗಳನ್ನು ಬಾಡಿಗೆ ತಂದು ಸಿನಿಮಾ ಪ್ರದರ್ಶನ ಏರ್ಪಡಿಸುವುದು ಶುಭ ಸಮಾರಂಭ ಮಾಡುವವರ ಹೆಗ್ಗಳಿಕೆಯಾಗಿತ್ತು. ಆ ಸಿನಿಮಾಗಳಲ್ಲಿ ಎರಡಾದರೂ ರಾಜಕುಮಾರ್‌ ಸಿನಿಮಾಗಳು ಇರಲೇಬೇಕಿತ್ತು. ಭಕ್ತಕುಂಬಾರ, ಬಬ್ರುವಾಹನ, ಹುಲಿಯ ಹಾಲಿನ ಮೇವು, ಕವಿರತ್ನ ಕಾಳಿದಾಸ, ಭಕ್ತ ಪ್ರಹ್ಲಾದ.. ಮುಂತಾದ ಸಿನಿಮಾಗಳನ್ನು ನಾನು ನೋಡಿದ್ದು ಹಾಗೆಯೇ. ಇವುಗಳ ಜತೆ ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್, ಶಿವರಾಜಕುಮಾರ್ ಸಿನಿಮಾಗಳೂ..

ಮದುವೆ, ಹೊಸಗೆ, ಗೃಹಪ್ರವೇಶ ಥರದ ಕಾರ್ಯಕ್ರಮಗಳ ಜತೆಗೆ ಈ ಸಿನಿಮಾ ಪ್ರದರ್ಶನ ಕಡ್ಡಾಯವಾಗಿರುತ್ತಿದ್ದರಿಂದ ಸುತ್ತಲಿನ ಯಾವುದಾದರೂ ಹಳ್ಳಿಯಲ್ಲಿ ಇಂಥದ್ದೊಂದು ಕಾರ್ಯಕ್ರಮ ವಾರದಲ್ಲಿ ಎರಡು ದಿನವಾದರೂ ಇರುತ್ತಿತ್ತು. ನನ್ನ ಎಂಟನೇ ವಯಸ್ಸಿನಿಂದ ಶುರುವಾದ ಈ ‘ಸಿನಿಮಾ ಯಾನ’ ಎಸ್ಸೆಸ್ಸೆಲ್ಸಿ ಮುಗಿಯುವವರೆಗೂ ಮುಂದುವರಿದಿತ್ತು. ಈ ಮಧ್ಯೆ ಅಣ್ಣಾವ್ರು ನನ್ನನ್ನು ಆವರಿಸಿದ್ದು ಮಾತ್ರ ಒಂದು ತೀರಾ ವಯಕ್ತಿಕ ಕಾರಣಕ್ಕೆ. ನಾನು ಮತ್ತು ನನ್ನ ಎರಡನೇ ಅಕ್ಕ ಈ ಸಿನಿಮಾ ಪ್ರದರ್ಶನಗಳಿಗೆ ತಪ್ಪದೇ ಹಾಜರಾಗುವ ಫಣ ತೊಟ್ಟಿದ್ದೆವು. ಹಾಗೂ ಪ್ರತಿ ಪ್ರದರ್ಶನಕ್ಕೂ ಅಪ್ಪನಿಂದ ಒದೆಸಿಕೊಳ್ಳುತ್ತಿದ್ದೆವು. ಎಷ್ಟೋ ಅರ್ಧ ರಾತ್ರಿಗಳು ಮನೆಯ ಹೊರಗೇ ಮಲಗಿದ್ದಿದೆ. ತೊಟ್ಟ ಫಣವನ್ನು ಮುಂದುವರಿಸಿಕೊಂಡು ಹೋಗುವ ಹಾಗೂ ಅಪ್ಪನ ಒದೆತದಿಂದ ತಪ್ಪಿಸಿಕೊಳ್ಳುವ ಮಾಯಾಜಾಲವೊಂದು ಹಲವು ಒದೆತಗಳ ನಂತರ ನಮಗೆ ಗೋಚರಿಸಿತು. ಅದು; ನನ್ನ ತಂದೆಗೆ ರಾಜಕುಮಾರ್ ಸಿನಿಮಾಗಳೆಂದರೆ ಪ್ರಾಣ; ಅಂದರೆ ಅಣ್ಣಾವ್ರ ಭಕ್ತ. ಈ ಘನ ಅಭಿಮಾನವನ್ನು ನಾವು ಸದ್ಬಳಕೆ ಮಾಡಿಕೊಳ್ಳಲು ಶುರು ಮಾಡಿದೆವು. ಯಾರ ಮನೆಯ ಹತ್ತಿರ ವಿಸಿಪಿ ಹಾಕಿದರೂ ಅದರಲ್ಲಿ ರಾಜಕುಮಾರ್ ಸಿನಿಮಾಗಳನ್ನು ಮಾತ್ರ ನೋಡಿಕೊಂಡು ಬರುತ್ತೇವೆ ಎಂಬ ಕೋರಿಕೆಗೆ ಮನ್ನಣೆ ಸಿಗಲು ಶುರುವಾಯಿತು. ಒಂದು ವೇಳೆ ಅಪ್ಪನಿಗೆ ಹೇಳದೆ ಹೋಗುವ ಸಂದರ್ಭ ಬಂದರೆ, ಸಿನಿಮಾ ನೋಡಿ ಬಂದ ಮೇಲೆ ರಾಜಕುಮಾರ್ ಸಿನಿಮಾ ಹಾಕಿದ್ದರು ಎಂದು ಹೇಳಿ ಒದೆಯಿಂದ ತಪ್ಪಿಸಿಕೊಳ್ಳುವ ಮಾಯಾಜಾಲ ನಡೆದುಬಿಡುತ್ತಿತ್ತು. ಹೀಗಾಗಿ ಅಪ್ಪನ ಒದೆತದಿಂದ ತಪ್ಪಿಸುತ್ತಿದ್ದ ಅಣ್ಣಾವ್ರ ಸಿನಿಮಾಗಳು ಅಪ್ಪನಿಗೆ ಯಾಕೆ ಇಷ್ಟವಾಗುತ್ತಿದ್ದವು ಎಂಬುದನ್ನು ಯೋಚಿಸುತ್ತಲೇ ಬೆಳೆದ ನನಗೆ ಅಮ್ಮನ ನೀತಿ ಪಾಠದ ಜತೆಗೂ ಅವುಗಳ ಪಾತ್ರಗಳು ಬೆರೆತಿರುತ್ತಿದ್ದುದರಿಂದ ನಿಧಾನಕ್ಕೆ ನನ್ನನ್ನು ಆವರಿಸತೊಡಗಿದವು. ನನ್ನವ್ವನಿಗೆ ಬಬ್ರುವಾಹನ ಸಿನಿಮಾ ಎಷ್ಟರಮಟ್ಟಿಗೆ ಕಾಡಿತ್ತೆಂದರೆ, ಸ್ಕೂಲಿನ ವಿಷಯವೋ, ಗೆಳೆತನದ ವಿಷಯವೋ ಬಂದಾಗೆಲ್ಲಾ ‘ಹೂಡು ಬಾಣಗಳ ಮಾಡುವೆ ಮಾನಭಂಗ’ ಎಂದು ಬಬ್ರುವಾಹನ ಅರ್ಜುನನಿಗೆ ಹೇಳುವ ಮಾತನ್ನು ಅತಿ ಸೋಜಿಗದಿಂದ ಹೇಳುತ್ತಿದ್ದರು. ಅವರ ಮಾತಿನಲ್ಲಿ ಅಪ್ಪನ ಎದೆ ಮಟ್ಟಕ್ಕೆ ಬೆಳೆದ ಮಗನೊಬ್ಬ ಅಪ್ಪನ ಮಾನಭಂಗ ಮಾಡುವ ಮಾತಾಡುವುದರ ಬಗ್ಗೆ ಸೋಜಿಗವಿತ್ತು. ಅದನ್ನು ಹೇಳುತ್ತಾ ಅದೇನನ್ನೋ ದೇನಿಸುತ್ತಾ ಕೂತುಬಿಡುತ್ತಿದ್ದರು.

ಹೀಗೇ ನನ್ನೊಳಗೆ ಬೆಳೆದ ರಾಜಣ್ಣ ಇಂದು ಕಾಲೇಜಿನಲ್ಲಿ ಯಾವುದೇ ಪಾಠ ಹೇಳುತ್ತಿದ್ದರೂ ಎಲ್ಲದರ ಆತ್ಯಂತಿಕ ಉದಾಹರಣೆಯಾಗಿ ಇನ್ನೂ ಬೆಳೆಯುತ್ತಲೇ ಇದ್ದಾರೆ. ಬುದ್ಧಿ ಕಂಡಾಗಿನಿಂದ ಯಾವ ದೇವರಿಗೂ ಕೈ ಮುಗಿಯದ ನಾನು ಅಣ್ಣಾವ್ರ ಹೆಸರೋ, ಭಾವಚಿತ್ರವೋ ಕಂಡಾಗ ನನಗೇ ಗೊತ್ತಿಲ್ಲದ ಹಾಗೆ ಕೈಮುಗಿಯುತ್ತೇನೆ. ಹಾಗೆ ಕೈ ಮುಗಿದ ಹೊತ್ತಲ್ಲಿ ಅವರ ನಗುವೋ, ಹಾಡೋ ಎದೆಯಲ್ಲಿ ಸುಳಿದು ಮನಸ್ಸು ಒಂಥರಾ ಹಗುರಾಗುತ್ತದೆ.

ಜಾತಿ ವಿನಾಶದ ಅಸ್ತ್ರ

ಕಲೆಯನ್ನು ಜಾತಿಯಂಥ ಪಿಡುಗುಗಳ ವಿನಾಶಕ್ಕೆ ಬಳಸಿಕೊಳ್ಳಬೇಕೆಂದು ನಮ್ಮ ನಾಡಿಗೆ ತೋರಿಸಿಕೊಟ್ಟಿದ್ದೇ ರಾಜಣ್ಣ. ಒಂದರ್ಥದಲ್ಲಿ ಜಾತಿ ವಿನಾಶದ ಅಸ್ತ್ರಗಳಾಗಿ ಮೂಡಿಬಂದ ರಾಜ್‌ಕುಮಾರ್ ಸಿನಿಮಾಗಳು ನಿರ್ಮಾಪಕ, ನಿರ್ದೇಶಕರ ಹಿಡಿತವನ್ನು ಮೀರಿ ರಾಜ್ ಕಾರಣಕ್ಕೆ ಆತ್ಯಂತಿಕ ಮಾನವೀಯ ಮಾದರಿಗಳಾಗಿ ಸಮಾಜವನ್ನು ವ್ಯಾಪಿಸಿದವು ಎನ್ನಬಹುದು. ಬಹುಷಃ ರಾಜಣ್ಣರಷ್ಟು ಬಹುರೂಪಿ ಸಾಮುದಾಯಿಕ ಕೌಶಲ್ಯಗಳನ್ನು ತಮ್ಮ ಪಾತ್ರಗಳ ಮೂಲಕ ತೆರೆಯ ಮೇಲೆ ಕಾಣಿಸಿದ ಇನ್ನೊಬ್ಬ ನಟ ಭಾರತೀಯ ಚಿತ್ರರಂಗದಲ್ಲೇ ಇಲ್ಲ ಎಂಬುದು ನನ್ನ ಗ್ರಹಿಕೆ.

ಎಲ್ಲಾ ಜಾತಿಗರ ಪಾತ್ರಗಳನ್ನು ಅಭಿನಯಿಸಿ ಅವರೆಲ್ಲರ ಪ್ರೀತಿಯನ್ನು ಸಂಪಾದಿಸುವ ಸ್ವಾರ್ಥ ಅವರಿಗಿತ್ತು ಎಂಬ ನೆಗೆಟೀವ್ ವಾದಗಳನ್ನು ಹಲವರು ಮಾಡಿದರೂ, ಆ ಪ್ರಯೋಗವನ್ನು ಇನ್ಯಾವ ನಟನೂ ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆ ಹುಟ್ಟುವುದು ಸಹಜ. ರಾಜಣ್ಣ ಖಂಡಿತವಾಗಿ ಎಲ್ಲಾ ಜಾತಿಗರ ಮನಸ್ಸನ್ನು ಗೆಲ್ಲಲು ಈ ಥರದ ‘ನಾಟಕ’ ಮಾಡುವ ಅಗತ್ಯವಿರಲಿಲ್ಲ; ಅವರು ಯಾವುದೇ ಪಾತ್ರ ಮಾಡಿದರೂ ಅವರನ್ನು ಅಪ್ಪಿಕೊಳ್ಳುವ ತಳಸಮುದಾಯಗಳ ಕಲಾಸಕ್ತಿ ಅದ್ಯಾಕೆ ಬೇರೆ ನಟನನ್ನು ಅಷ್ಟು ನಂಬಲಿಲ್ಲ ಎಂಬುದಕ್ಕೆ ಅವರ ನಟನೆಯ ಸಾಮರ್ಥ್ಯವನ್ನು ನಾವು ಗಮನಿಸಬೇಕು. ಯಾಕೆಂದರೆ ಕರ್ನಾಟಕದ ತಳ ಸಮುದಾಯಗಳು ತಮ್ಮ ಅಸ್ಮಿತೆಯೊಳಗೇ ಜನಪದೀಯ ಕಲೆಗಾರಿಕೆಯನ್ನು ಉಳ್ಳಂಥವು. ಆ ಸಮುದಾಯಗಳಿಗೆ ಆಧುನಿಕ ಕಲಾಭಿವ್ಯಕ್ತಿಯಾದ ಸಿನಿಮಾ ಮಾಧ್ಯಮವು ರಾಜಣ್ಣರಿಂದ ಹತ್ತಿರವಾಯಿತು ಎಂಬುದಕ್ಕೆ ಯಾವ ಮಾನವಶಾಸ್ತ್ರೀಯ ಅಧ್ಯಯನದ ಅಗತ್ಯವೂ ಇಲ್ಲ. ಕಲೆಯ ಕಾರಣಕ್ಕಾಗಿ ಅವರ ಸಿನಿಮಾಗಳನ್ನು ಮೈಲುಗಟ್ಟಲೆ ಹೋಗಿ ನೋಡಿಕೊಂಡುಬರುತ್ತಿದ್ದ ಕರ್ನಾಟಕದ ಎಲ್ಲಾ ಜನ ಸಮುದಾಯಗಳು, ಆ ಸಿನಿಮಾಗಳು ತಮ್ಮ ಬದುಕುಗಳನ್ನೇ ಅಭಿನಯಿಸುತ್ತಿರುವುದ ಕಂಡು ಮೋಡಿಗೆ ಒಳಗಾದಂತೆ ಅವುಗಳ ಹಿಂದೆ ಬಿದ್ದವು. ಹಿಂದೂ ಸಮಾಜದ ಶ್ರೇಣೀಕೃತ ವ್ಯವಸ್ಥೆಯನ್ನು ಪುಷ್ಟೀಕರಿಸುವಂತಹ ಒಂದೇ ಒಂದು ಮಾತನ್ನೂ ನಾನು ರಾಜಣ್ಣರ ಯಾವ ಪಾತ್ರಗಳ ಬಾಯಲ್ಲೂ ಕೇಳಿಲ್ಲ. ಬದಲಾಗಿ ಬಾರತೀಯ ಸಮಾಜದ ಬಡವರ ಬದುಕುಗಳಲ್ಲಿನ ಬಣ್ಣಗಳನ್ನು ಬೇಕೆಂತಲೇ ಹಮ್ಮುಳ್ಳ ಸಿರಿವಂತರಿಗೆ ಅರ್ಥ ಮಾಡಿಸುವ ಕೆಲಸವನ್ನು ರಾಜಣ್ಣ ಅದೆಷ್ಟು ಸಿನಿಮಾಗಳಲ್ಲಿ ಮಾಡಿದ್ದಾರೋ..

ಕನ್ನಡ ಚಿತ್ರರಂಗದ ಝೆನ್ ‘ಗುರು’ ಡಾ.ರಾಜ್‌ಕುಮಾರ್‌

ತಾನು ಮಾಡಿದ ಪಾತ್ರಗಳ ಹಾಗೆ ಕಲಾವಿದನೊಬ್ಬ ಬದುಕಬೇಕಾಗಿಲ್ಲ; ಆದರೆ, ರಾಜಣ್ಣ ಹಾಗೆ ಬದುಕಲು ಪ್ರಜ್ಞಾಪೂರ್ವಕವಾಗಿ ಬದುಕಲು ಯತ್ನಿಸಿದರೋ, ಅಥವಾ ಅವರ ಬದುಕೇ ಹಾಗೋ ಅರ್ಥವಾಗಲೊಲ್ಲದು. ರಾಜಣ್ಣ ಅಭಿಮಾನಿಗಳ ದೇವರಾಗಿ ಮೆರೆಯುತ್ತಿದ್ದ ಸಂದರ್ಭದಲ್ಲಿ ಒಂದು ಘಟನೆ ನಡೆಯುತ್ತದೆ. ಈ ಘಟನೆಯನ್ನು ರಾಘವೇಂದ್ರ ರಾಜ್‌ಕುಮಾರ್ ಪತ್ರಿಕೆಯೊಂದರ ತಮ್ಮ ಬರವಣಿಗೆಯಲ್ಲಿ ಉಲ್ಲೇಖಿಸಿದ್ದರು. ಇದು ನನ್ನನ್ನು ಬಹಳವಾಗಿ ಕಾಡಿದ ಘಟನೆ. ಸಿನಿಮಾವೊಂದರ ಶೂಟಿಂಗ್‌ನಲ್ಲಿ ಕಂಠೀರವ ಸ್ಟುಡಿಯೋದಲ್ಲಿದ್ದಾಗ ರಾಜಣ್ಣರ ಪರ್ಸ್ ಕಳೆದು ಹೋಗುತ್ತದೆ; ಸಿನಿಮಾ ಸಿಬ್ಬಂದಿ ಆಕಾಶವೇ ಕಳಚಿ ತಲೆಯಮೇಲೆ ಬಿದ್ದಂತೆ ಭಯಭೀತರಾಗಿ ಪರ್ಸ್ ಹುಡುಕತೊಡಗುತ್ತಾರೆ. ಆದರೆ, ರಾಜಣ್ಣ ಪಾರ್ವತಮ್ಮನವರನ್ನು ಕರೆದುಕೊಂಡು ಗ್ರೀನ್ ರೂಂಗೆ ಹೋಗುತ್ತಾರೆ. ಹೊರಗೆ ನೋಡುತ್ತಿದ್ದವರಿಗೆಲ್ಲಾ ಭಯ ಕಾಡುತ್ತದೆ, ಆದರೆ, ರಾಜಣ್ಣ ಪಾರ್ವತಮ್ಮನವರನ್ನು ಕೇಳುತ್ತಾರೆ.. ‘ಅಲ್ಲಾ ಪಾರ್ವತಿ ಆ ಪರ್ಸಲ್ಲಿ ಇಂದಿಪ್ಪತ್ತು ರೂಪಾಯಿ ದುಡ್ಡು ಇಡೋದು ಅಲ್ವಾ.. ಪಾಪ ಅದನ್ನು ಎತ್ತಿಕೊಂಡವನು ಏನೆಲ್ಲಾ ಕಲ್ಪನೆ ಮಾಡಿಕೊಂಡಿದ್ದನೋ.. ಅದರಲ್ಲಿರುವ ನಷ್ಯದ ಡಬ್ಬಿ ನೋಡಿ ‘ನೋಡೋಕೆ ದೊಡ್ಡ ನಟ ಹತ್ತು ರೂಪಾಯಿ ಇಲ್ಲ ಪರ್ಸಲ್ಲಿ’ ಅಂತಾ ಬೈದುಕೊಳ್ಳಲ್ವಾ...?’ ಅಂತ.. ಆನಂತರ ಪಾರ್ವತಮ್ಮನವರು ಕಳ್ಳರಿಗಾಗಿ ರಾಜಣ್ಣರ ಪರ್ಸಿನಲ್ಲಿ ಐವತ್ತಕ್ಕಿಂತ ಹೆಚ್ಚು ದುಡ್ಡನ್ನು ಇಡುತ್ತಿದ್ದರಂತೆ.

ಇದೇ ಥರದ ಝೆನ್ ಕತೆಯೊಂದಿದೆ. ಝೆನ್ ಗುರುವೊಬ್ಬ ಆ ತಿಂಗಳಿನಲ್ಲಿ ಸಾಮಾನ್ಯವಾಗಿ ಬೌದ್ಧರು ಆಚರಿಸುವ ಅಸಂಗ್ರಹ ವ್ರತವನ್ನು ಆಚರಿಸುತ್ತಿರುತ್ತಾನೆ ಅದರಿಂದಾಗಿ ಅವನ ಮನೆಯಲ್ಲಿ ಸಣ್ಣದೊಂದು ಕಾಳೂ ಕೂಡ ಇರವುದಿಲ್ಲ; ಅಂತಹ ಸಂದರ್ಭದಲ್ಲಿ ತುಂಬಿದ ಹುಣ್ಣಿಮೆ ರಾತ್ರಿಯಲ್ಲಿ ಕಳ್ಳನೊಬ್ಬ ಅವನ ಮನೆಗೆ ಕನ್ನ ಹಾಕುತ್ತಾನೆ. ಆ ಕಳ್ಳನಿಗೆ ಮನೆಯೆಲ್ಲಾ ಹುಡುಕಿದರೂ ಬಿಡಿಗಾಸಿರಲಿ., ತಿನ್ನಲು ಕೂಡಾ ಏನೂ ಸಿಗುವುದಿಲ್ಲ; ಆಗ ಮನೆಯಲ್ಲಿಯೇ ಮಲಗಿದ್ದ ಆ ಗುರುವಿಗೆ ಎಚ್ಚರವಾಗಿ ನೋಡುತ್ತಾನೆ.. ಕಳ್ಳ ಮುಂದೆ ನಿಶ್ಚೇತನನಾಗಿ ಕುಳಿತಿದ್ದಾನೆ; ಆಗ ಆ ಗುರು ಅವನಿಗೆ ತನ್ನ ಮೈಮೇಲಿದ್ದ ಬಟ್ಟೆಯನ್ನು ಬಿಚ್ಚುಕೊಟ್ಟು, ‘ಬೇಸರ ಪಟ್ಟುಕೊಳ್ಳಬೇಡ.. ನನ್ನ ಮನೆಯಲ್ಲಿ ನಿನಗೆ ಏನೂ ಸಿಗದಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ’ ಎಂದು ಸಂತೈಸಿ ಕಳಿಸಿ ಅದೇ ಯೋಚನೆಯಲ್ಲಿ ಮನೆಯ ಮುಂದಿನ ಬಂಡೆಯೊಂದರ ಮೇಲೆ ಕುಳಿತು ಹುಣ್ಣಿಮೆ ಚಂದಿರನನ್ನು ದಿಟ್ಟಿಸುತ್ತಾ... ‘ಪಾಪ ಎಷ್ಟೋಂದು ನಿರೀಕ್ಷೆಯಿಂದ ಬಂದಿದ್ದ ಆ ಕಳ್ಳನಿಗೆ ಈ ಚಂದ್ರನನ್ನು ತಂದುಕೊಡುವ ಹಾಗಿದ್ದರೆ...?’ ಎಂದು ಯೋಚಿಸುತ್ತಾನೆ... ನನಗೆ ರಾಜಣ್ಣರ ಪರ್ಸಿನ ಕತೆ ಕೇಳಿದಾಗ ಈ ಕತೆಯೂ, ಈ ಕತೆ ಕೇಳಿದಾಗ ರಾಜಣ್ಣರ ಪರ್ಸಿನ ಕತೆಯೂ ನೆನಪಾಗುತ್ತದೆ. ಇದು ಸಮಾಜವಾದ. ಬಹುಷಃ ರಾಜಣ್ಣ ಸಮಾಜವಾದವನ್ನಾಗಲಿ, ಈ ಮೇಲಿನ ಝೆನ್ ಕತೆಯನ್ನಾಗಲಿ ಓದಿರಲಿಕ್ಕಿಲ್ಲ; ನಿಜ ಮಾನವೀಯ ಪ್ರಜ್ಞೆ ಇರುವ ಪ್ರಜ್ಞಾವಂತರಿಗೆ ಮಾತ್ರ ತಮ್ಮ ಹೊಟ್ಟೆ ತುಂಬಿದ ನಂತರ ಹಸಿದವರ ನೆನಪಾಗುತ್ತದೆ. ಅದು ರಾಜಣ್ಣರ ಪ್ರಜ್ಞೆ. ಈ ಕಾಲಕ್ಕೆ ನಮ್ಮೆಲ್ಲರಿಗೂ ಈ ಪ್ರಜ್ಞೆ ಬೆಳಕಾಗಬೇಕು

ಅವರು ಏನೂ ಮಾಡಲಿಲ್ಲವೇ...?

ರಾಜಣ್ಣ ಕನ್ನಡಿಗರಿಗೆ ಏನು ಮಾಡಿದರು ಎಂಬ ಪ್ರಶ್ನೆ ಎಲ್ಲಿಂದ ಹುಟ್ಟಿದ್ದು ಎಂದು ನಾವು ಹಿಚುಕಿ ನೋಡಬೇಕಿಲ್ಲ. ಅವರ ಕಲಾ ಸಾರ್ವಭೌಮತೆಗೆ ಬೆದರಿದ ವೈದಿಕ ಮನಸ್ಸು ಇಂಥದ್ದೊಂದು ಹುಳುವನ್ನು ಸೃಷ್ಟಿಸಿ ಜನರ ನಡುವೆ ಬಿಟ್ಟಿತು. ಒಬ್ಬ ಕಲಾವಿದ ಸಮಾಜಕ್ಕೆ ಏನೆಲ್ಲಾ ಮಾಡಬಲ್ಲ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಈ ಮೇಲಿನ ಪ್ರಶ್ನೆಯೇ ಹುಟ್ಟುವುದಿಲ್ಲ; ಆ ಪ್ರಶ್ನೆಗೆ ನಾವು ಒತ್ತು ಕೊಟ್ಟರೆ ಯಾರ ಬಗ್ಗೆಯೆಲ್ಲಾ ನಾವು ಈ ಪ್ರಶ್ನೆ ಕೇಳಬಹುದು..? ಪಂಪ, ರನ್ನರು, ಕುವೆಂಪು- ಕಾರಂತರು ಕನ್ನಡಕ್ಕೆ ಕನ್ನೆಡಿಗರಿಗೆ ಏನು ಮಾಡಿದರು ಎಂಬ ಪ್ರಶ್ನೆಯನ್ನು ನಾವು ಕೇಳಿಬಿಟ್ಟರೆ.. ಉತ್ತರ ಸುಲಭದ್ದೇ..?

ಯಾವ ಸಮುದಾಯ ಕಲೆಗೆ ಬದುಕಿನಲ್ಲಿ ಅತ್ಯಂತ ಮರ‍್ಯಾದೆ ಕೊಟ್ಟು ತನ್ನ ಬದುಕಿನ ಭಾಗವಾಗಿಸಿಕೊಂಡಿತ್ತೋ ಆ ಸಮುದಾಯಕ್ಕೆ ಮಾನವೀಯತೆಯ ಪಾಠ ಮಾಡಿವೆ ರಾಜ್ ಚಿತ್ರಗಳು. ‘ಸಂಪತ್ತಿಗೆ ಸವಾಲ್’ ಚಿತ್ರ ನೋಡಿದ ದಲಿತನೊಬ್ಬನ ಎದೆಯಲ್ಲಿ ಪಾಳೆಗಾರಿಕೆ ವಿರುದ್ಧದ ಜಾಗೃತಿ ಮೂಡಿ ಮಾಲಕನೆದುರು ಅಮಾನವೀಯತೆಯನ್ನು ಎದುರಿಸಿ ನಿಲ್ಲುವ ಶಕ್ತಿ ನೀಡಿದ್ದು ಸುಲಭದ ವಿಷಯವೇ..? ‘ಬಡವರ ಬಂಧು’ ನೋಡಿದ ಹೋಟೆಲ್ ಮಾಣಿಯೊಬ್ಬನ ಹೃದಯದಲ್ಲಿ ಹುಟ್ಟುವ ಚೈತನ್ಯವನ್ನೇ ಅಲ್ಲವೇ ಬಸವಣ್ಣ, ಅಂಬೇಡ್ಕರರು ಬಯಸಿದ್ದು..? ರಾಜ್ ಈ ಮೂಲಕ ಬಸವಣ್ಣ ಅಂಬೇಡ್ಕರರ ಚಳವಳಿಯನ್ನು ಮುಂದುವರಿಸಿಲ್ಲವೇ..? ಕುವೆಂಪು ರೈತನ ಕುರಿತು ಹೇಳಿದ್ದನ್ನು ರಾಜಣ್ಣ ಅಭಿನಯಿಸಲಿಲ್ಲವೇ..? ಕಲಾವಿದ ಮಾತ್ರವಲ್ಲ; ಬೇರೆ ಯಾವ ಚಳುವಳಿಗಾರರೂ ಮಾಡದ ಕೆಲಸವನ್ನು ರಾಜಣ್ಣ ತಮ್ಮ ಅಭಿನಯದಿಂದ ಮಾಡಿದ್ದನ್ನು ಸುಳ್ಳು ಎಂದರೆ, ನಾವು ಅಸಮಾನತೆಯನ್ನು ಬೆಂಬಲಿಸಿದಂತಾಗುವುದಿಲ್ಲವೇ..?

ಈ ಎಲ್ಲಾ ಕಾರಣಗಳಿಂದ ರಾಜಣ್ಣರನ್ನು ನಾವು ನಮ್ಮ ಎದೆಗಳಲ್ಲಿ ಎಂದಿಗೂ ಬತ್ತದಂತೆ ಕಾಪಿಟ್ಟುಕೊಳ್ಳಬೇಕಿದೆ.. ಇಲ್ಲದಿದ್ದರೆ ನಮಗೆ ಕಲೆಯಿರಲಿ; ಮನುಷ್ಯತ್ವ ಎನ್ನುವುದರ ಅರ್ಥ ಗೊತ್ತಿಲ್ಲ ಎಂದೇ ಅರ್ಥ.

- ಹುಲಿಕುಂಟೆ ಮೂರ್ತಿ

 

MORE FEATURES

ವಿಮರ್ಶೆ ಎನ್ನುವುದು ಕೇವಲ ಪರಿಶ್ರಮದಿಂದ ಸಿದ್ಧಿಸುವ ಕಲೆಯಲ್ಲ

05-05-2024 ಬೆಂಗಳೂರು

'ಕನ್ನಡ ಸಾಹಿತ್ಯದಲ್ಲಿ ವಿರಳಾತಿ ವಿರಳರಾಗಿರುವ ವಸ್ತು ನಿಷ್ಠ ವಿಮರ್ಶಕರ ನಡುವೆ ಪ್ರಮುಖರಾದ ನರೇಂದ್ರ ಪೈ ಅವರ ಹೊಸ ...

ಕೌಟುಂಬಿಕ, ಸಾಮಾಜಿಕ ಪರಿಸರವೇ ದುಷ್ಕೃತ್ಯಕ್ಕೆ ಕಾರಣ

05-05-2024 ಬೆಂಗಳೂರು

'ಎಲ್ಲಾ ಕಾಲಘಟ್ಟದಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದೆ. ಆದರೆ ಅದರ ಪ್ರಮಾಣ ದಿನೇ, ದಿನೆ ಹೆಚ್ಚಾಗುತ್ತಿದೆ....

ಮನ ತಟ್ಟಿದ ಕೃತಿ ‘ಹಿಮಾಲಯನ್ ಬ್ಲಂಡರ್’ 

05-05-2024 ಬೆಂಗಳೂರು

"ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಇದುವರೆಗೂ ಕುವೆಂಪು, ತೇಜಸ್ವಿ, ಭೈರಪ್ಪ ಸೇರಿದಂತೆ ಹಲವರ ಕ...