ವೈದೇಹಿಯವರ ಕಾವ್ಯ ಜಗತ್ತು


"ಲೋಕಾನುಭವವನ್ನು ಸೃಜಿಸುವ ಈ ಜಗತ್ತಿನಲ್ಲಿ ಏನೆಲ್ಲವನ್ನ ತನ್ನೊಳಗೆ ಪೋಷಿಸಿ ಕಾಪಿಟ್ಟಿದೆ. ಹುಳು, ಉಪ್ಪಟೆ, ಪಕ್ಷಿ, ಪ್ರಾಣಿ, ನದಿ, ಕಾಡು, ಬರಡು, ಕಸಕಡ್ಡಿ, ಮೆಕ್ಕಲುಮಣ್ಣು... ನಿಸರ್ಗವನ್ನ ಬಿಟ್ಟು ಉಳಿದಿರುವ ಮನುಷ್ಯ ಜಗತ್ತು ಮಾತ್ರ ಹೀಗೆ ಅಭೇದ್ಯವಾಗಿಲ್ಲ. ವರ್ಗ ಸಮಾಜದ ಹಲವು ಅವಸ್ಥೆ ರೂಪಗಳಲ್ಲಿ ಆ ಜಗತ್ತು ಬೇರ್ಪಟ್ಟಿದೆ," ಎನ್ನುತ್ತಾರೆ ಕಾವ್ಯ ಎಂ.ಎನ್. ಅವರು ವೈದೇಹಿಯವರ ಕಾವ್ಯ ಜಗತ್ತು ಕುರಿತು ಬರೆದ ಲೇಖನ.

ವೈದೇಹಿಯವರ ಕಾವ್ಯ ಜಗತ್ತು: ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು –( ತಿಳಿದವರೇ ಹೇಳಿ)

ಗೊತ್ತಿಲ್ಲದ ಸ್ಥಿತಿಯೇ, ಗೊತ್ತಾಗುವ ಮತ್ತೊಂದು ಸ್ಥಿತಿಗೆ (ಜಗತ್ತಿಗೆ) ಪಲ್ಲಟವಾಗುವ ಒಟ್ಟು ಅರಿವಿನ ಮಹಾಪಯಣವನ್ನು ಸಣ್ಣ ಸಾಲಿನ ಕಾವ್ಯವೊಂದು ಘನವಾಗಿ ಧ್ವನಿಸಿ ಅವರ ಅನುಗಾಲದ ಕಾವ್ಯ ತತ್ವದ ರುಜಿತ್ವವನ್ನು ಕಾಣಿಸಿದೆ. “ಹೆಣ್ಣು ತನ್ನ ಒಳಲೋಕವನ್ನು ಕಾಪಾಡಿಕೊಳ್ಳುವುದು ರೂಪಕಗಳ ಮೂಲಕ” ಎನ್ನುವ ಮಾತಿದೆ. ವೈದೇಹಿಯವರ ಕಾವ್ಯ ರೂಪಕ ಪ್ರತಿಮೆಗಳು ಹೆಣ್ಣಿನ ಒಳಜಗತ್ತನ್ನು ಯವಾಗಲೂ ಮರೆಮಾಚದೆ ಸದಾಸೀದ ಪ್ರಕಟಿಸಿರುವಂತೇ ಗೋಚರಿಸುತ್ತದೆ. ಬಿಗುವಾದ ಸಾಮಾಜಿಕ ಕಟ್ಟುಪಾಡಿನ ನಡುವೆಯೂ ಕಾವ್ಯಕ್ಕೆ ಖಾಸ ಎನ್ನುವಂತೆ ದಕ್ಕಿದ ಒಂದು ಅಮರ‍್ತ ಸ್ಥಿತಿ ಪದ್ಯದಲ್ಲಿ ಹೊಸ ಆವೇಶವೊಂದನ್ನ ಸದ್ದಿಲ್ಲದೆ ತಣ್ಣಗೆ ಪೊರೆದಿರುವುದಕ್ಕೆ ತಿಳಿದವರೇ ಹೇಳಿ ಥರಹದ ಹಲವು ಕಾವ್ಯಗಳೆ ಪ್ರಬಲ ಸಾಕ್ಷಿ. ವೈದೇಹಿಯವರ ಕಾವ್ಯ ಮಾರ್ಗ ಯಾವುದು ಎಂಬ ಆನುಷಂಗಿಕ ಪ್ರಶ್ನೆಗೆ ಸರಳ ರೇಖೆಯಂತಹ, ತೊಡರುಗಳಿಲ್ಲದ ಉತ್ತರ ಹೇಳಲು ಸಾಧ್ಯವೇ ಇಲ್ಲ. ಪದ್ಯಗಳು ನದಿಯಂತೆ ಹರಿವ ದ್ರವೀಕರಣ ಸ್ಥಿತಿಸ್ಥಾಪಕತ್ಯ ಪಡೆದಿದ್ದು ಹರಿದತ್ತ ಚಿತ್ತ ಎನ್ನುವ ಹಾಗೆ ವಿಸ್ತಾರವಾಗಿ ಪ್ರಕಟವಾಗಿವೆ. ಪ್ರಕೃತಿಯಿಂದ ಪ್ರಪಂಚದತ್ತ( ಮನುಷ್ಯ ಜಗತ್ತು), ಅಡುಗೆ ಮನೆಯಿಂದ ಹೊರ ಜಗತ್ತಿನತ್ತ ಜಿಗಿವ ಸಾಲುಸಾಲು ಕಾವ್ಯಪಕಳೆಗಳು ದಕ್ಕಿದ ಲೋಕದ ಅರಿವನ್ನು ತನ್ನಷ್ಟಕ್ಕೆ ಗುನುಗಿಕೊಳ್ಳುವ, ಇನ್ನೊಬ್ಬರಿಗೆ ತಲುಪಿಸುವ ಹಾಗೆ ಓದಿನ ಅನುಭವಕ್ಕೆ ಸಾಧಿತವಾಗುತ್ತವೆ.

ಲೋಕಾನುಭವವನ್ನು ಸೃಜಿಸುವ ಈ ಜಗತ್ತಿನಲ್ಲಿ ಏನೆಲ್ಲವನ್ನ ತನ್ನೊಳಗೆ ಪೋಷಿಸಿ ಕಾಪಿಟ್ಟಿದೆ. ಹುಳು, ಉಪ್ಪಟೆ, ಪಕ್ಷಿ, ಪ್ರಾಣಿ, ನದಿ, ಕಾಡು, ಬರಡು, ಕಸಕಡ್ಡಿ, ಮೆಕ್ಕಲುಮಣ್ಣು... ನಿಸರ್ಗವನ್ನ ಬಿಟ್ಟು ಉಳಿದಿರುವ ಮನುಷ್ಯ ಜಗತ್ತು ಮಾತ್ರ ಹೀಗೆ ಅಭೇದ್ಯವಾಗಿಲ್ಲ. ವರ್ಗ ಸಮಾಜದ ಹಲವು ಅವಸ್ಥೆ ರೂಪಗಳಲ್ಲಿ ಆ ಜಗತ್ತು ಬೇರ್ಪಟ್ಟಿದೆ. ಹದ್ದುಬಸ್ತಿನಲ್ಲಿಡುವ ನಿಯಂತ್ರಣ ನಿಯಮ, ನಿಷೇಧ ಬಹಿಷ್ಕಾರಗಳು ಮನುಷ್ಯ ಲೋಕದ ಹಿಂಸೆಯ ತಾಪಮಾನ, ವ್ಯಸನ ರೋಗವನ್ನ ತೋರುತ್ತವೆ. ಅಖಂಡ ಸ್ವರೂಪಿಯಾದ ನಿಸರ್ಗದ ಎದಿರಲ್ಲಿ ಲಂಗದಾವಣಿಯ ಹುಡುಗಿಯೊಬ್ಬಳು ತನ್ನ ಅಂತರಂಗ ಬಹಿರಂಗ ಲೋಕದ ಇರಿಸುಮುರಿಸನ್ನ ಪ್ರಾಮಾಣಿಕವಾಗಿ ಛಿoಟಿಜಿess ಮಾಡಿಕೊಳ್ಳುವ ಹಾಗೆ ಇವೆ ಅವರ ಪದ್ಯಗಳು.
ಚೀಲದೊಳಗಿನ ತಿರುಳನು
ಹುಡುಕಿ ತೆಗೆಯಲಾದರೂ ಹಾಗೆ
ಮಾಡಲಾಗದು ನೀವು
ನೋಡಬಾರದು ಚೀಲದೊಳಗನು –( ನೋಡಬಾರದು ಚೀಲದೊಳಗನು )
ಮಹಿಳೆ ತನ್ನೊಳಗೆ ಗಮ್ಯವಾಗಿ ಅಪ್ರಕಟಿತ ಲೋಕವೊಂದನ್ನ ಜತನವಾಗಿರಿಸಿಕೊಂಡಿದ್ದು, ಯಾವಾಗಲೋ ಒಮ್ಮೆ ಕಥೆಯಾಗಿಬಿಡುವ ಅಥವ ಕಾವ್ಯವಾಗಿಬಿಡುವ ಆ ಜಗತ್ತು ತೆರೆದು ತೋರುವ ಕಾಣ್ಕೆ ಹಿರಿದು. ಚೀಲ ಅನ್ನುವುದು ಅಂಥದ್ದೇ ಒಂದು ರೂಪಕ. ಚೀಲದೊಳಗೆ ಅಜ್ಞಾತವಾಗಿರುವ ಪ್ರಪಂಚವನ್ನು ಲೋಕದ ಮುಂದೆ ನಿಧಾನವಾಗಿ ಪದರು ಪದರು ಬಿಚ್ಚಿ ತೆರೆದು ತೋರುವ ನಿರಾತಂಕ ಗಳಿಗೆಗೆ ಪದ್ಯವೂ ಕಾಯುತ್ತದೆ ಕವಿಯೂ ಕಾಯುತ್ತಾರೆ. ಲೋಕನಿಂದೆ, ಕುಹುಕಗಳ ಮಧ್ಯೆ ಚೀಲದೊಳಗೆ ಮೈಚಾಚಿಕೊಂಡಿರುವ ಅಡಿಕೆ, ಪಿನ್ನು, ಪೆನ್ನು, ಬಾಡಿದ ಹೂವಿನ ಎಸಳು, ಅದುಮಿಟ್ಟ ಡಬ್ಬಿ, ತುಟಿಬಣ್ಣ, ಯಾರದ್ದೋ ಮನೆ ವಿಳಾಸ, ಕಳೆದದ್ದರ ಗಳಿಸಿದ್ದರ ಸಣ್ಣಪುಟ್ಟ ಕುರುಹು ಕಸ ಎಲ್ಲವೂ ಸತ್ಯದ ಘಾಟಿನಲ್ಲಿ ಮಿಂದ ಹಾಗೆ ಹೊಸ ಅರ್ಥವನ್ನು ಓದುಗರಿಗೆ ದಾಟಿಸಲು ಇಚ್ಚಿಸುತ್ತದೆ. ಬೆರಣಿ ತಟ್ಟುವ ಹುಡುಗಿ, ಅಡುಗೆಮನೆ ಹುಡುಗಿ, ಮಾಡು ಹೊದೆಸುವ ಹುಡುಗಿ, ರಸ್ತೆ ಅಂಚಿನಲಿ ನಿಂತು ಮೃದು ಕೈಗಳಿಂದ ಹೂವ ಮಾರುವ ಪೋರಿ (ವೈದೇಹಿ ಅವರ ಪದ್ಯಗಳ ಶೀರ್ಷಿಕೆ) ಚಿತ್ರ ಬಿಡಿಸುವಾಕೆಯ ಕುಂಚದಲ್ಲಿ ಅರಳುತ್ತಾರೆ ತಮ್ಮ ಒಳಜಗತ್ತನ್ನ ಮೆಲ್ಲ ಕಾಣಿಸುತ್ತಾರೆ. ಲೋಕಾನುಭವದ ಕಡು ನಿಚ್ಚಳ ಸತ್ಯಗಳಿಗೆ ಹಲವು ಸಲ ಪುಳಕಗೊಳ್ಳುತ್ತಾರೆ ಬಹಳ ಸಲ ನಿಡುಸುಯ್ಯುತ್ತಾರೆ. ಇವೇ ವೈದೇಹಿಯವರ ಒಟ್ಟು ಕಾವ್ಯದ ಗುಟ್ಟು.

ಬದುಕೇ ಕಾವ್ಯಕ್ಕೆ ವಸ್ತುವಾಗಿ ಬಳಕೆಯಾಗಿದೆ ಬಹಳ ಕಡೆ.
ಸಾಂಬ್ರಾಣಿ ಸಿಪ್ಪೆ ಬಿಡಿಸುತ್ತಿರುವ ತನ್ನ
ಎತ್ತಿ ಒಯ್ದು ಸಾಮ್ರಾಜ್ಞಿ ಮಾಡಿ
ರಾಮ ರಾಮಾ ! ಲಂಕೆಗೋ ಅಯೋಧ್ಯೆಗೋ
ಛೇ ಕೇಳಿ ಹಳಸಿದ ಅವವೇ ಊರುಗಳ ಹೆಸರುಗಳು.
ವೈದೇಹಿಯವರ ಕಾವ್ಯದ ಪ್ರಾಪಂಚಿಕತೆ ಬದುಕಿನ ಗದ್ದಲದ ನಡುವೆಯೂ ಧ್ಯಾನಸ್ಥ ಸ್ಥಿತಿಯೊಂದನ್ನ ಒಳಲೋಕದಲ್ಲಿ ಪ್ರಶಾಂತವಾಗಿ ಧರಿಸಿದೆ. ಹೊರ ಆವರಣದ ಅನಿಶ್ಚಿತತೆ ಅದರ ಸಹಜ ನೆಮ್ಮದಿಯನ್ನು ತಾಕಲಾರದು ಎಂದೂ. ಅಸ್ವಾಭಾವಿಕ ಚರಿತ್ರೆ ಇತಿಹಾಸ ಪುರಾಣ ನಿಷ್ಠೆಗಳನ್ನ ತ್ಯಜಿಸಿ ಅಥವ ಅಲ್ಲಿಂದಲೇ ಬದುಕಿನ ವಸ್ತುನಿಷ್ಟ ರೂಪಕ್ಕೆ ನಿರಂತರ ಹಾಯ್ದು ಮಹಿಳಾ ಲೋಕದ ಅನಿಶ್ಚಿತತೆ, ಕಳವಳ, ಸಂಭ್ರಮ ಎಲ್ಲವನ್ನೂ ಪುನರುಚ್ಚರಿಸುತ್ತವೆ ಪದ್ಯಗಳು. ದಿನವಹಿಯ ನಿತ್ಯ ಕಾಯಕದಲ್ಲಿ ತನಗೆ ಒದಗುವ ಸ್ಥಳ ಅವಕಾಶದ ಮಿತ ಸಾಧ್ಯತೆಗಳಲ್ಲೆ ಅಸೀಮವಾದ ಜೀವನ್ಮಮುಖಿ ಸ್ವಭಾವವನ್ನ ಎಲ್ಲ ಪಾತ್ರ ಪದ್ಯಗಳು ಪೊಷಿಸಿವೆ. ಪ್ರಶ್ನೆ, ಸಿಟ್ಟು, ಹೊಂದಿಕೆ, ಅಸಹನೆ, ಮೌನ, ಮಾತು, ಒಳಬಂಡಾಯವ ಮೆಲ್ಲಗೆ ಧ್ವನಿಸುವ ಪದ್ಯಗಳು ಪಟ್ಟದ ಅರಸಿಯಾದವಳೂ ನುಂಗಿದ ನಿಂದೆ, ನಿಷ್ಟುರ, ಕಡಿವಾಣವ ವಿಜೃಂಭಿಸದೆ ನಿಡುಸುಯ್ಯುತ್ತದೆ. ಹಾಗಾಗಿಯೇ ಅವಳ ಉಯಿಲು ಎನ್ನುವಂಥಹ ಕವಿತೆ ಎಲ್ಲರ ದನಿಯನ್ನೂ ದಾಖಲಿಸಿದಂತೆಯೇ ಕಣ್ಣಿಗೆ ರಾಚುತ್ತದೆ.
ಎಲ್ಲಿ ಬಚ್ಚಿಡಲಿ ಹಾ ಗೀರು ಗಾಯದ ನೋವು
ತೇಯುವೆಯಾ ಅಜ್ಜೀ ಗಜ್ಜುಗದ ಹರಳು ? ( ಗೆಳತಿಯ ಗುಟ್ಟು )
ಮದ್ದಿನಿಂದ ವಾಸಿಯಾಗದ ಗಾಯಕೆ ಪರಿಹಾರ ಒದಗುತ್ತದೆಯೆ.... ಪರಂಪರೆಯಿಂದಾದ ಗಾಯದ (ಪ್ರತಿಮೆ) ತೀವ್ರತೆ ಮಾರ್ಮಿಕವಾಗಿ ಅನುರಣಿಸುತ್ತವೆ ಇನ್ನಷ್ಟು ಪದ್ಯಗಳಲ್ಲಿ. ಹರೆಯದ ಬದುಕಿನ ದುರಂತ ಗಳಿಗೆಗಳು ಕುಸಿದ ವ್ಯಕ್ತಿತ್ವಗಳ ಪರಿಚಯಿಸಿ ಸಾಗುವಾಗ ದಿಕ್ಕೆಟ್ಟ ಬದುಕಿನ ಗೋಳಿನ ಹೊರೆ ಯಾರ ಹೆಗಲಿಗೆ ಹೆಚ್ಚು ಅನ್ನುವುದನ್ನ ಸಮಾಜದ ಆವರಣದಲ್ಲೆ ನಿಂತು ಇಡಿಯಾಗಿ ಅಂಥ ಪದ್ಯ ಕಾಣಿಸುತ್ತದೆ. ಬದುಕೆಂದರೆ ? ಏನೇನೋ ವಿವರಣೆಗಳು ನಾಲಿಗೆಯ ತುಂಬ ಹರಿದಾಡುವ ಹೊತ್ತಿಗೂ ಅದು ಅಡುಗೆಮನೆಯ ನಡುಮನೆಯ ಹೊಸ್ತಿಲು ದಾಟದ ಕತ್ತಲ ಕಮಟು ವಾಸನೆಯ ಗಾಢ ಕಪ್ಪಿನ ಶೈಶವದ ದುರಂತವೇ ಅನ್ನಿಸಿಬಿಡುತ್ತದೆ ಪದ್ಯ ಓದಿದಾಗ.

ಬದುಕಿನ ವಿಷಾದವೇ ಕಾವ್ಯದ ವಸ್ತುವಲ್ಲ ಆದರೆ ದುತ್ತನೆ ಮುಖಾಮುಖಿಯಾಗುವ ಅಸಂಗತ ಕ್ಷಣಗಳು ಯಾರ ಮರ್ಜಿಯವು ? ಈ ಪ್ರಶ್ನೆ ವೈದೇಹಿಯರ ಹಲವು ಪದ್ಯದಲಿ ಮತ್ತೆಮತ್ತೆ ಕಾಣಿಸುತ್ತದೆ. ಸ್ವಯಂವರ ಗೀತೆ ಇಂಥ ಸಂಕಿರ್ಣತೆಯನ್ನ ದಾಖಲಿಸಿರುವ ಪದ್ಯ.
ಸ್ವಯಂವರಿಸುವ ಸ್ವಾತಂತ್ಯ್ರ
ನಾಟಕವೇ ಸಾಕಿನ್ನು
ಅಪ್ರತಿಮ ಸೂಕ್ಷ್ಮಕ್ಕೆ ಗದ್ದಲದ ನಂಟೇ ?
ನನ್ನಾಯ್ಕೆ ಸಂತೆಯಲಲ್ಲ (ಸ್ವಯಂವರ ಗೀತೆ )
ಅಂತರಂಗದ ನುಡಿಯನ್ನು ಹೀಗೆ ಗಟ್ಟಿಯಾಗಿ ದಾಟಿಸುವುದು ಸಲೀಸೆ? ಎಲ್ಲಾದರೂ ಯಾವ ಜಾಗದಲ್ಲಾದರೂ. ಹೆತ್ತವರ, ಸುತ್ತಲಿನವರ ಬಿರುಸುನೋಟಕೆ ವಿಚಲಿತವಾಗದೆ ಸೆಟೆದು ನುಡಿಯುವ ಈ ಛಾತಿ ಎಷ್ಟು ಹೆಣ್ಣುಮಕ್ಕಳಲ್ಲಿದ್ದಾತು. ಮನೋಚಿತ್ತದ ಒಳವೃತ್ತದಲಿ ಚಿಗುರುವ ಹೂಕನಸುಗಳ ಒತ್ತಿಟ್ಟೆ ತುಟಿಮೇಲಿನ ನಗು ಮಾಸದಂತೆ ಬದುಕುವುದನ್ನ ರೂಢಿಸುವ ಸಾಮಾಜಿಕ ವಾಸ್ತವಗಳನ್ನ ಕವಿತೆ ಪ್ರತಿಭಟಿಸುತ್ತದೆ. ಮತ್ತಲ್ಲಿಂದಲೇ ತನ್ನ ಪ್ರತಿರೋಧದ ಸ್ವಭಾವಗಳಿಗಾಗಿ ಕಟಕಟೆಗೆ ಈಡಾಗಿ ಪರಿತಪಿಸುವ ಹೆಣ್ಣು ಮನಗಳಿಗೆ ಪದ್ಯ ಸಾಂತ್ವನ ಹೇಳುತ್ತದೆ. ಆಂರ‍್ಯದ ಬಯಕೆ ಬೇಗುದಿಗಳಿಗೆ ಹೊರಲೋಕ ಕಿವಿಯಾನಿಸಿದ್ದೇನೋ ಕಡಿಮೆಯಲ್ಲವೇ ಹಾಗಾಗಿ.
ಸುಡುತಲಿದೆ ಭೌತ ವ್ಯಥೆ
ಗಾಳಿ ಇದೆ. ಉಸಿರಿಲ್ಲ!
ಬದುಕಿನ ವಿಷಣ್ಣ ಗಳಿಗೆಗಳು, ದಾಂಪತ್ಯದ ಬಿರುಕು, ಒತ್ತಿರಿಸಲ್ಪಟ್ಟ ಹಳಹಳಿಗಳು, ಪ್ರಪಾತಕ್ಕೆ ತಳ್ಳುವ ಐಹಿಕ ಏರಿಳಿತಗಳು ಉಸಿರುಗಟ್ಟಿಸುವ ಬಂಧ ಬಂಧನಗಳು ನಿರಾಳ ಚಾಚುತ್ತವೆ ಪದ್ಯದವರೆಗೂ. ಈ ಎಲ್ಲದರಾಚೆ ಹರಿಯುವ ಓಟ ನದಿಯಂತೆ ಬಲುಕ್ಷಿಪ್ರ ಅವರಲ್ಲಿ.

ವೈದೇಹಿಯವರ ಮನೆವಾರ್ತೆ ಪದ್ಯ ಅವರೇಳಿದಂತೆ ಹೊಸ ಅಡಿಗೆ ಸಾಹಿತ್ಯ. ಮನೆಯೊಳಗೆ ಮನೆ ಹುಟ್ಟಿ ಬದುಕು ಬಡಿವಾರವೆಲ್ಲಾ ವಿಘಟನೆಯಾಗುವ ವಿಷಾದ ಹಳೆಕಾಲ-ಆಧುನಿಕ ಕಾಲದ ನಡುವೆ ನಿಂತು ತೋರುತ್ತದೆ. ಅಡುಗೆಮನೆ ವೈದೇಹಿಯವರಿಗೆ ಕರ್ಮಭೂಮಿಯಾಗಿ ಕಾಣುತ್ತದೆ. ಹಾಗಾಗಿ “ಅಡುಗೆ ಮನೆಯೆ ನನ್ನ ಜಗ” ಎಂದು ತೊಡರದೆ ಘೋಷಿಸುತ್ತಾರೆ. ಹೊರ ಜಗತ್ತು ಏನೆಲ್ಲದಕ್ಕೆ ಫ್ರೂಪ್ ಆಗಬಲ್ಲದೋ ಅದೆಲ್ಲವನ್ನೂ ಅಡುಗೆಮನೆಯಿಂದಲೇ ಧಾರಣೆ ಮಾಡಿಕೊಳ್ಳುವ ಸ್ಥಿತಿ ಅಪರೂಪದ ಪ್ರತಿಮೆ ಮತ್ತು ಕವಿಸಮಯದಲ್ಲಿ ಪದ್ಯಗಳಲ್ಲಿ ಪ್ರಕಟವಾಗಿದೆ. ಆಕೆ ಆತ ಭಾಷೆ, ಗಗನ ಚುಕ್ಕಿ-ಪರ್ಣಕುಟಿ, ದೇವರಿನ್ಯಾಕೆ?- ಕರೆಯುವುದಿಲ್ಲ, ಅಮ್ಮ ಗೊಣಗಾಟ- ಈ ಪದ್ಯಗಳನ್ನ ಗಮನಿಸಬಹುದು. ಇವರ ಅಡುಗೆ ಮನೆ ಹುಡುಗಿ ಪದ್ಯ ಬಿಡುಗಡೆ ಬಯಸುವ ಹೆಣ್ಣಿನ ರೂಪಕವಾಗಿ ಅನುಕ್ತವಾಗಿದೆ. ಬಾಗಿಲಿಲ್ಲದ, ಕಿಟಕಿಯಿಲ್ಲದ, ಕೊನೆಗೆ ಕಿರುಗಿಂಡಿಯೂ ಇಲ್ಲದ ಅಡುಗೆಮನೆಯ ಪ್ರತಿಮೆ, ಕ್ರಿಸ್ತ ಪೂರ್ವದಿಂದ ಮಹಿಳೆಗೆ ನಿರ್ಮಾಣವಾದ ಕಾರಾಗೃಹವನ್ನ ಮಾರ್ಮಿಕವಾಗಿ ಸಂಕೇತಿಸುತ್ತದೆ. ಸಂಸಾರ ಸಸಾರವಲ್ಲ ಎಂಬ ಅರಿವಿಟ್ಟುಕೊಂಡೆ ಅದರೊಳಗಿನ ಉಸುಕುಗಳನ್ನೆಲ್ಲಾ ಪದಗಳಲ್ಲಿ ಚೆಲ್ಲಿಬಿಡುವ ನಿರುಮ್ಮಳತೆ ಹೊಸದೇನನ್ನೋ ಅನುಭವಕ್ಕೆ ದಾಟಿಸುತ್ತದೆ.

ಇಂಥದ್ದೆ ಮತ್ತೋಂದು ಪದ್ಯ ಕನಕನ ತಂಗಿ ಮತ್ತು ದೇವರು. ಕನಕನಿಗಾಗಿ ಯಾರೋ ಸಿದ್ದಮಾಡಿದ ಕಿಂಡಿಯಲ್ಲೆ ದರ್ಶನ ನೀಡಿದ ಕೃಷ್ಣನ ಪ್ರಸಂಗ ಬೇರೆಬೇರೆ ಚರ್ಚೆಯಲ್ಲಿ ನಿಂತಿರುವಾಗ ಕನಕನ ತಂಗಿ ಎನ್ನುವ ಮೆಟಾಫರ್ ಧಾರ್ಮಿಕ ವಲಯದ ಜಿಜ್ಞಾಸೆಯನ್ನು ಮತ್ತಲ್ಲಿ ಹೆಣ್ಣಿಗಿರುವ ಸ್ಪೇಸ್ ನ ಮುಖ್ಯ ಪ್ರಶ್ನೆಯೊಂದನ್ನು ಜಗತ್ತಿನೆದಿರು ಎಸೆಯುತ್ತದೆ. ಧರ್ಮ ಮತ್ತು ಅದರ ನಿಚ್ಚಳ ರೂಪ ಕಾಣುವ ಅನುಭಾವ ಜಗತ್ತು ವೈದೇಹಿಯವರಲ್ಲಿ ಜಟಿಲವಾಗಿ ಕಾಣಿಸುವುದಿಲ್ಲ ಅದು ಭಾಷೆಯ ತೊಡಕು ಎಂದು ಪದ್ಯ ಬರೆಯುತ್ತಾರೆ. ನಿತ್ಯ ಬದುಕಿನ ವ್ಯವಹಾರಗಳಲ್ಲೆ ಧ್ಯಾನಸ್ಥ ಸ್ಥಿತಿ ತಲುಪುವ ಸರಾಗ ಕ್ರಿಯೆಯ ಹಾಗೆ ಭಾವಿಸುತ್ತಾರೆ. ಬಯಲು ಆಲಯ. ಶುಚಿ ಅಶುಚಿ, ಮನೆಯನ್ನ ಒಪ್ಪೋರಣವಾಗಿಟ್ಟಂತೆ ಚಿತ್ತಭಾವಗಳ ತೊಳೆದುಕೊಳ್ಳುವ ಸಂಗತಿ ಎಂದು ಹೇಳುತ್ತಾರೆ. ಅಕ್ಕ ಚೆನ್ನ ಶರೀಪ ಬುದ್ಧ, ಗುಡಿ ಆಲಯಗಳೆಲ್ಲ ಥೇಟ್ ಮನೆಯಂತೆ, ಮನೆಯವರಂತೆ ಅನ್ನಿಸುತ್ತಾರೆ ಅವರಿಗೆ.

ಹುಡುಕಾಟ ವೈದೇಹಿ ಅವರ ಕಾವ್ಯಸ್ವಭಾವ. ನಾನು ಎಂಬ ಗುರುತು ಹುಡುಕುವಾಗ ಅದು ಸಾಧಿತವಾಗುವುದು ಅವರಿಗೆ ಬದುಕಿನಿಂದ. ಮತ್ತದರ ತಾವನ್ನು ಅಲ್ಲಿಂದಲೇ ಕಟ್ಟಿಕೊಳ್ಳುವ ಕ್ರಿಯೆಗೆ ಕಾವ್ಯವೂ ಪುರಾವೆಯೆ.
ಚಲನೆಯಲೂ ನಿಶ್ಚಲದ ನಿಶ್ಚಯದ ಗತಿಯವಳು
ಆಗುವವಳಲ್ಲ ಹದಿನಾರು ಸಾವಿರಕೆ ಮತ್ತೊಂದು
ಸಣ್ಣ ಪ್ರಾತ, ಸಣ್ಣ ದನಿ, ಸಣ್ಣ ಅಲೆಯಂತೆ ಇದ್ದರೂ ಘನತೆಯ ಕಳಚಿಕೊಳ್ಳದ, ರಾಜಿಯಾಗದ ಭಾವ ಅಸ್ತಿತ್ವದ ಹೊಸ ಹುಡುಕಾಟವಾಗಿ ಕಾಣಿಸುತ್ತದೆ. “ಒಪ್ಪಿಕೊಂಡೆನು ನಿನ್ನಾಳ ನನಗಿಲ್ಲ” ಎನ್ನುತ್ತಲೇ ಭೂಮಿ ಆಕಾಶ, ಕಾಡು ಮೇಡು, ಎಲ್ಲ ಪ್ರಪಂಚವನ್ನ ವ್ಯಾಪಿಸುವ ಪಾದರಸದ ಗುಣ ಹೆಣ್ಣಾಗಿರುವುದರಿಂದಲೇ ಎನ್ನುವ ಅಭಿಮಾನ.

ನಾನು ಯಾರು ಎಂಬುದರ ಖಚಿತ ತಿಳುವಳಿಕೆಗಳು ಇರುವುದರಿಂದ ಹೇಣ್ಣಾದ ಬಗ್ಗೆ ಎಲ್ಲೂ ಹಳಹಳಿಯನ್ನೇನೋ ತೋರುವುದಿಲ್ಲ ನಿಜ ಆದರೆ ಆ ಹುಟ್ಟಿನ ಕಾರಣಕ್ಕೆ ಹೊರಬೇಕಾದ ತೆರಬೇಕಾದ ಭಾರಗಳ ಬಗ್ಗೆ ನಿಟ್ಟುಸಿರು ಹತಾಸೆ ಸಿಟ್ಟು ವ್ಯಂಗ ಇದ್ದೇಇದೆ. ಭೂತ, ವರ್ತಮಾನ, ಭವಿಷ್ಯ ಸವಾಲಾದಷ್ಟು ಅಲಿಂದಲೇ ಮತ್ತೇ ಹುಟ್ಟುಪಡೆಯುವ ಗುಣ ನಿರರ್ಥಕವಾಗಂತೆ ಎಚ್ಚರವಹಿಸುವ ಪ್ರಜ್ಙೆಯೊಂದು ಪಾಸಿಟಿವ್ ವೈಬ್ ಒಂದನ್ನ ಬದುಕಿಗೆ ಒದಗಿಸುತ್ತದೆ.
ನನ್ನ ಮಗಳೇ ಕೇಳು ನಮ್ಮ ಹಿರಿಯರ ಹಾದಿ
ರಕ್ತ ಒಣಗಿದ ಸರಳು
ಒಣ ಮರಮರಮರಾಮಮಂತ್ರದ ಮರಳು
ಸಾಲು ಉರುಳು
ನಡೆ ಮಗೂ ಹೆಗಲಲಿದೆ
ಸಾವಿರ ಸವಾಲು.
ತನ್ನ ಸುತ್ತಲಿನ ಬೇಲಿಯನ್ನ ದಾಟಲು ಒಳಗಿನ ವಿವೇಕವೇ ಎಚ್ಚರದ ಪಾತ್ರ ವಹಿಸುತ್ತದೆ. ಈ ಥರದ ಅಂತರಂಗದ ದಾರಿಯ ನಡಿಗೆಯಲ್ಲಿ ನಂಬಿಕೆ ಇಟ್ಟಂತೆ ಕಾಣುವ ವೈದೇಹಿಯವರು ತಮ್ಮ ಬರೆಹಗಳಲ್ಲಿ ವೇಗವಾದ ಸ್ತ್ರೀವಾದದ ತಾತ್ತ್ವಿಕತೆಗಳನ್ನ ಬಲವಂತದಿಂದ ತುಂಬುವುದಿಲ್ಲ. ಹಾಗಾಗಿಯೇ ಇವರ ಬರೆಹಗಳು ಮಹಿಳಾ ವಿಮೋಚನೆ ಹೊರೆಯನ್ನ ನಿರ್ಭಾರದಲ್ಲಿ ಹೆಗಲಿಂದ ಹೆಗಲಿಗೆ ದಾಟಿಸಿದಂತೆ ಕಾಣುತ್ತದೆ.

ಬೆಡಗಿನ ಕಾವ್ಯಭಾಷೆ
ರುಮು ರುಮು ಭಾಷೆ ಪರಾಗ ಜಾಲ! ಒಂದು ಪದ್ಯದಲ್ಲಿ ಹೀಗೆ ಬರೆದರೆ ಮತ್ತೊಂದರಲ್ಲಿ ಕತ್ತಲಾಗಿದೆ.... ಮುಕ್ತ, ವಾಗರ್ಥ ನಿರುಕ್ತವಾಗಿದೆ(ನಿರುಕ್ತ). ಕಾವ್ಯಭಾಷೆ ಮಾಂತ್ರಿಕವಾಗಿದೆ. ಇದು ವೈದೇಹಿಯವರ ಬರೆಹದ ತಂತ್ರವೂ ಇರಬಹುದು. ಒಂದೇ ಓದಿಗೆ ಅರ್ಥ ದಾಟಿಸದ ಹಲವು ಪದ್ಯಗಳು ಬೆಡಗಿನ ರೂಪವನ್ನ ಹೊತ್ತು ಕಾಣುತ್ತದೆ ಬಹಳ ಸಲ. ಅರ್ಥವೂ – ಅದನ್ನ ಹೊಳೆಯಿಸುವ ಭಾಷೆಯೂ ವಾಗಾರ್ಥ, ವಾಚಾರ್ಥದ ಆಚೆಗೆ ಮತ್ತೇನನ್ನೋ ಮುಟ್ಟಿದಂತೆ ಅನ್ನಿಸುತ್ತದೆ. ಅರ್ಥ ಸ್ಥಿತಿ ಅಥವ ಭಾಷೆಯ ಇನ್ನರ್ ಸೌಲ್ ಗಿಂತ ಕವಿತೆ ಬೇರೆಯದೆ ಪ್ಲಾಟ್ ಫಾರ್ಮನತ್ತ ಚಲಿಸುವ ಅನುಭವ ದಟ್ಟವಾಗಿ ಆಗುತ್ತದೆ. ಒಂದರ್ಥದಲಿ ಕಾವ್ಯದ ಅರ್ಥವಿವರಣೆ ಬಿಗುವಾಗುತ್ತದೆ ಕೂಡ. ಒಂದೆರಡು ಪದ್ಯ ಉದಾಹರಿಸುವುದಾದರೆ :
ಕತ್ತಲೆಯ ಮಂಚದಲಿ
ಪಕ್ಷವಾತದ ಅಜ್ಜ
ಮಳೆಯ ದನಿಗೊಂದು ಕಿವಿ
ಕಣ್ಣ ನಿರ್ವಿಣ್ಣ ಹನಿ
ತೊಟ್ಟಿಕ್ಕುತಿದೆ.... ಮಾತು
ದೂರವಾಯಿತೆ ಕರ್ಕವೃತ್ತ!
ಉತ್ತರಾಯಣಕ್ಕಿನ್ನು ಆ ಆ ಆ...ರು ತಿಂಗಳು
ಉಂಟಲ್ಲ ಚಿತೆ ಮೇಲೆ ಮಾಡು ?
ದಾನಕ್ಕೆ ಒಳ್ಳೆ ಕೊಡೆ ಕೊಡು......ಮಳೆ ಜೋಡು
ಹಾಸಿಗೆಗೆ ದಪ್ಪ ವಲ್ಲಿ
ನಾಕು ದಿನ ಬಳಸಲಿ
.....ಸಾವೆಲ್ಲಿಗೆ ಹೋಗಿದೆ ?
......ಬೇಗ ಬರಲಿ
**
ದೀಪ ನುಂಗಿದರೂ
ಕತ್ತಲಿಲ್ಲ
**
ರಸಿಕ ಶಿಕೆಯಲ್ಲಿ ಹೇನುಂಟು, ಮಲ್ಲಿಗೆಯುಂಟು
ಜನ್ಮಾಂತರದ ಜೊಂಟು ವಾಸನೆ ಕಾಂತ

ವೈದೇಹಿಯವರು ಕವಿಯಾಗಿ ಬಹಳ ಕಡೆ ಕಾಡುತ್ತಾರೆ. ಅವರ ಕಾವ್ಯಗಳೂ ಕೂಡ. ಆದರೆ ಕಾವ್ಯವಸ್ತುವಿನ ಹರವು ಸಮಾಜದ ಎತ್ತರಕ್ಕೇರಿದಷ್ಟು ಆಳಕ್ಕಿಳಿಯುವುದಿಲ್ಲ. ಸಾಮಾಜಿಕ ಘರ್ಷಣೆಗಳ ವಿಷಯದಲ್ಲಿ ಸೆಲೆಕ್ಟಿವ್ ಆಗಿ ವಿಚಾರ ಮಂಡಿಸುವ ಹಾಗೆ ಅವರು ಕಾಣಿಸುತ್ತಾರೆ. ಪುರಾತನ ಪರಂಪರೆಯ ಪ್ರತಿಗಾಮಿತನವ (ಉದಾ: ಸಬಾಲ್ಟ್ರನ್‌ಗಳ ವಿಷಯ, ನೆಟಿವ್ ಊರುಗಳಲ್ಲಿ ಇಲ್ಲವೇ ಅವರು ಬೆಳೆದ ವಾತಾವರಣದಲ್ಲಿ ಆಚರಣೆಲಿದ್ದ ಅಸ್ಪೃಶ್ಯತೆ ಗೇಣಿ ಊಳಿಗಮಾನ್ಯ ಪುರೋಹಿತಶಾಹಿ ಇತ್ಯಾದಿ) ಪ್ರಬಲವಾಗಿ ಖಂಡಿಸಿದ್ದು ಕಡಿಮೆ, ಎಲ್ಲ ವರ್ಗದ ಜನರ ಎಲ್ಲ ಥರದ ಶೋಷಣೆಯ ಕುರಿತು ಗಟ್ಟಿಯಾಗಿ ಮಾತಾಡಿದ್ದೂ ಕಡಿಮೆ. ಇದು ಅವರ ಬರೆಹದ ಮಿತಿ ಇರಬಹುದು. ಜಗವೆಲ್ಲಾ ಹೆಣ್ಣು ನೋಡ ಎನ್ನುವಂತೆ ವೈದೇಹಿಯವರ ಕಾವ್ಯವೆಲ್ಲ ಹೆಣ್ಣಾಗೆ ಕಂಡರು ಆ ಎಲ್ಲ ಹೆಣ್ಣುಗಳು ಮಧ್ಯಮ ವರ್ಗವನ್ನೆ ಪ್ರತಿನಿಧಿಸುತ್ತಾರೆ. ಒಂದು ವರ್ಗದ ಹೆಣ್ಣುಗಳ ಮನೋವ್ಯಥೆ ಮತ್ತು ಹೋರಾಟವನ್ನ, ಅಸ್ಮಿತೆಯ ಹುಡುಕಾಟವನ್ನ ಕಲಾತ್ಮಕವಾಗಿ ಕಟ್ಟುಕೊಡುವಲ್ಲಿ ವೈದೇಹಿಯವರು ಎಂದೂ ಸೋತಿಲ್ಲ ಆದರೆ ಆ ಆವರಣದಲ್ಲಿ ಕೂಲಿಹೆಂಗಸರದ್ದೋ, ಜಾತಿ ಕಾರಣಕ್ಕೆ ಹೊರಗಿಟ್ಟು ಬಹಿಷ್ಕರಿಸಿದ್ದರ ನೋವು ಉಣ್ಣುವ ಹೆಂಗಸರು ಮಕ್ಕಳದ್ದೋ, ಗುಲಾಮ ಬದುಕು ಜೀವಿಸುವ ಅಂಚಿನ ಸಮುದಾಯದ ಹೆಣ್ಣಿನದ್ದೋ ದುಖಃ ದನಿ ಪಡೆದದ್ದು ಕಡಿಮೆಯೆ. ಅಕ್ಚರ ಲೋಕ ತೆರೆದು ತೋರಿಸದ ದುರ್ಬಲ ವರ್ಗಸಮುದಾಯಗಳ ನೋವಿನ ಕಥೆಯನ್ನ ಕಾವ್ಯವಾಗಿಸಲು ವೈದೇಹಿ ಪ್ರಯತ್ನಿಸದೆ ಇರುವುದು ನಷ್ಟವಾಗಿಯೆ ನನಗೆ ಕಾಣುತ್ತಿದೆ. ವಸಾಹತು ಸಂದರ್ಭದ ನಂತರ ಬದಲಾವಣೆಯ ಹೊಸಅಲೆಗೆ ಈಡಾಗಿ ಹೊಸ ಜಗತ್ತನ್ನು ಪ್ರವೇಶಿಸಿದ ಮೇಲ್ ಮಧ್ಯಮ ವರ್ಗದ ಮಹಿಳಾ ಲೋಕವನ್ನ, ಅವರ ತೊಡಕುಗಳ ಬಿಕ್ಕಟ್ಟುಗಳನ್ನ ಬಿಡಿಸಿ ತೋರಿದ್ದೇ ವೈದೇಹಿಯವರ ಬರೆಹದ ಭೌತಿಕ ಗುರುತಾಗಿದೆ.

- ಕಾವ್ಯ ಎಂ.ಎನ್
ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿನಿ
ಶಿವಮೊಗ್ಗ

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...