ವರ್ತಮಾನದ ತಲ್ಲಣಗಳನ್ನು ಬಿಚ್ಚಿಡುತ್ತ ಅನೇಕ ಕವಿತೆಗಳು ಜೀವದಳೆದಿವೆ


"ಅಪ್ಪ ಮಗಳ ಬಾಂಧವ್ಯ ತೊರೆಯಾಗಿ ಝರಿಯಾಗಿ ಹರಿದು ಸಂತಸ ತುಂಬುವ, ಪುಟ್ಟ ಮಗು ಆಡುವ ಭಾಷಾ ಪ್ರಯೋಗ ಅದರಿಂದ ಸಿಗುವ ಆನಂದ. ನಿಷ್ಕಲ್ಮಶ ಮನಸ್ಸಿನ ಭಾವನೆಗಳ ಆಸೀಮ ಪ್ರೀತಿಯ ಒಂದು ಝಲಕು ಇದು. ನಾವೀಗ ವಿಜ್ಞಾನದ ನೂರೆಂಟು ಆವಿಷ್ಕಾರಗಳನ್ನು ಅನುಭವಿಸುತ್ತಿರುವ ಕಾಲಘಟ್ಟದಲ್ಲಿದ್ದೇವೆ," ಎನ್ನುತ್ತಾರೆ ಭಾರತಿ ಪಾಟೀಲ್. ಅವರು ಸಿದ್ಧಾರೂಢ ಗು. ಕಟ್ಟಿಮನಿ ಅವರ ‘ತುಂತುರು ಮಳೆ’ ಕೃತಿಗೆ ಬರೆದ ವಿಮರ್ಶೆ.

ತುಂತುರು ಮಳೆ ಶೀರ್ಷಿಕೆ ಹೊತ್ತ ಸಿದ್ಧಾರೂಢ ಕಟ್ಟೀಮನಿ ಅವರ ಈ ಸಂಕಲನದಲ್ಲಿ ನವಿರು ಭಾವಗಳು ತುಂತುರು ಮಳೆಯಾಗಿ ಸಂಬಂಧಗಳನ್ನು ಹಸಿರಾಗಿಟ್ಟುಕೊಳ್ಳುತ್ತಲೇ ವರ್ತಮಾನದ ತಲ್ಲಣಗಳನ್ನು ಬಿಚ್ಚಿಡುತ್ತ ಅನೇಕ ಕವಿತೆಗಳು ಜೀವದಳೆದಿವೆ. ಜೀವಪರವಾದ ಕಾಳಜಿ, ಜೀವನೋತ್ಸಾಹ, ಸಂವೇದನೆಗಳ ಅಭಿವ್ಯಕ್ತಿಯಲ್ಲಿ ಅರಳಿವೆ. ಭೂತ ವರ್ತಮಾನದ ಭಿನ್ನ ಭಿನ್ನ ರೂಪಗಳು ಮೈದೋರಿವೆ. ಜೀವ ಜಗತ್ತಿನ ಅನೇಕ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು ಭಾಷೆಯ ಸ್ವರೂಪವನ್ನು ಹಿಗ್ಗಿಸುವುದನ್ನು ಸಿದ್ಧಾರೂಢ ಅವರು ರೂಢಿಸಿಕೊಂಡಿದ್ದಾರೆ. ಲೋಕೋಭಿನ್ನ ಸಂಬಂಧಗಳನ್ನು ವೈವಿಧ್ಯಮಯವಾಗಿ ಬಳಸಿಕೊಂಡು, ಭಾವ ಪ್ರಧಾನತೆಯನ್ನು ಅನುಭವಿಸಿಕೊಂಡು ಬರೆದ ಕವಿತೆಗಳು ಈ ಸಂಕಲನದಲ್ಲಿವೆ. ಚಂದ ಬಂಧ ಹಾಗೂ ಪ್ರತಿಮಾವಿಧಾನದ ಗೊಡವೆ ಅವರ ಕವಿತೆಗಳಿಗಿಲ್ಲ. ಸಹಜವಾದ ಭಾಷೆ ಭಾವಗಳ ಕಟ್ಟಡದಂತೆ ಅವರ ಕವಿತೆಗಳಿದ್ದರೂ ಭಾವ ಪ್ರಾಧಾನ್ಯತೆ ಇಲ್ಲಿ ಮುಖ್ಯ ಗುಣವಾಗಿದೆ.

ಪಪ್ಪಾ ಹಪ್ಪಾ ತಿನ್ಸು
ನನ್ನಾಗಮನದ ಸಂಭ್ರಮ
ನನ್ಮಗಳು ಓಡಿ ಬರುತಿಹಳು
ನನ್ನ ತೋಳೇರಿ ಅಪ್ಪಲು.
( ಪಪ್ಪಾ ಹಪ್ಪಾ ತಿನ್ಸು )

ಅಪ್ಪ ಮಗಳ ಬಾಂಧವ್ಯ ತೊರೆಯಾಗಿ ಝರಿಯಾಗಿ ಹರಿದು ಸಂತಸ ತುಂಬುವ, ಪುಟ್ಟ ಮಗು ಆಡುವ ಭಾಷಾ ಪ್ರಯೋಗ ಅದರಿಂದ ಸಿಗುವ ಆನಂದ. ನಿಷ್ಕಲ್ಮಶ ಮನಸ್ಸಿನ ಭಾವನೆಗಳ ಆಸೀಮ ಪ್ರೀತಿಯ ಒಂದು ಝಲಕು ಇದು. ನಾವೀಗ ವಿಜ್ಞಾನದ ನೂರೆಂಟು ಆವಿಷ್ಕಾರಗಳನ್ನು ಅನುಭವಿಸುತ್ತಿರುವ ಕಾಲಘಟ್ಟದಲ್ಲಿದ್ದೇವೆ. ಮನುಷ್ಯನ ನೈತಿಕ ನಿಲುವುಗಳು ಬದಲಾಗುತ್ತಿವೆ. ಮಾನವ ಸoಬಂಧಗಳಿಗಿಂತ ಕೃತಕತೆ ಮೇಲುಗೈ ಸಾಧಿಸಿದೆ. ಆದರೂ ಪ್ರಕೃತಿಯು ತನ್ನ ಮೂಲ ಸ್ವಭಾವವನ್ನು ತೊರೆದಿಲ್ಲ. ಮನುಷ್ಯನಿಗೆ ಬದುಕಲು ಬೇಕಾದುದೆಲ್ಲವನ್ನು ಪೂರೈಸುವತ್ತಲೇ ಅದರ ಗುರಿಯಿದೆ. ಅದು ತನ್ನತನ ಬಿಟ್ಟಿಲ್ಲ.. ಅಂಥ ಸುಂದರ ತಾಣವಾದ 'ಎಡಕು ಮೇರಿ ಝರಿ' ಕೊಡುವ ಆಲ್ಹಾದಕರ ನೋಟವನ್ನು ಅನುಭವಿಸುತ್ತ ನಿಸರ್ಗದ ಚಲುವಿಗೆ ಸೋತು ಕವಿಯು ಅದನ್ನು ಕವಿತೆಯಲ್ಲಿ ಹಿಡಿದಿಡುವ ಪ್ರಯತ್ನವಾಗಿದೆ.

ಝರಿ ಝರಿ ಸುಂದರಿಯ ನೋಡಲ್ಲಿ
ಹಸಿರುಸಿರು ಸೊಬಗು ಸವಿ ಇಲ್ಲಿ
ರಮ್ಯ ನಿಸರ್ಗ ನೆಲವೇ ಕಾಣದು
ಅಲ್ಹಾದಕರ ಆಮ್ಲಜನಕ ಹೊತ್ತ ಗಾಳಿ.
( ಎಡಕು ಮೇರಿ ಝರಿ)

ಕಾಡಿನ ಮಧ್ಯ ರೈಲು ಹಳಿ ಸುರಂಗ ಮಾರ್ಗದಲ್ಲಿ ಚಲಿಸುವ ರೈಲು, ವಿಜ್ಞಾನದ ಪ್ರತೀಕವಾದರೆ, ಅದನ್ನು ದಾಟಿದರೆ ಮೈ ನವೀರೇಳಿಸುವ ಜಲಪಾತವನ್ನು ಕಂಡಾಗ ಆಗುವ ಅನುಭವವು ಪ್ರಕೃತಿಯ ವೈಭವವನ್ನು ಕಣ್ಣಿಗೆ ಮನಸ್ಸಿಗೆ ಸಂತಸದ ಅಲೆಗಳಲ್ಲಿ ತೇಲುವಂತೆ ಮಾಡುವದಾಗಿದೆ.

ಇನ್ನು ಪ್ರಕೃತಿಯ ಮೂಲಮಂತ್ರ ವನ್ನು ಚನ್ನಾಗಿ ಅರಿತುಕೊಂಡು ಬಾಳುವ ಹಾಗೂ ಪ್ರಕೃತಿಯೊಂದಿಗೆ ತನ್ನ ಅವಿನಾಭಾವ ಸಂಬಂಧಗಳನ್ನು ಉಳಿಸಿಕೊಂಡಿರುವ ಪ್ರಾಣಿ ಪ್ರಪಂಚದ ಅಗಣಿತ ಜೀವಿಗಳು ಅಮೂಲ್ಯ ವಾದವುಗಳು.. ನಾವು ನೋಡೇ ಇರದ, ಕೇಳಿಯೇ ಇರದ ಅಂಥಹ ಸಾವಿರಾರು ಪ್ರಾಣಿಗಳಲ್ಲಿ ಡೊಡೊ ಪಕ್ಷಿಯೂ ಒಂದು. ಅದರ ಆವಿಷ್ಕಾರ ಸಾವಿರಾರು ವರುಷಗಳ ಹಿಂದಿನದು.

ಮನುಷ್ಯನ ವಿಕೃತಿ ದುರಾಸೆಗೆ ಪ್ರಾಣಿಪ್ರಪಂಚದ ಅಪರೂಪದ ಜೀವಿಗಳು ಅಳಿವಿನ ಅಂಚಿನಲ್ಲಿರುವದು ದುರಂತದ ಸಂಗತಿ. ಪ್ರಕೃತಿಯ ಸಮತೋಲನ ಕಾಪಾಡಲು ಪ್ರಕೃತಿ ಹೆಣಗುತ್ತಿದ್ದರೆ ವಿಕೃತಿ ಮೆರೆವಲ್ಲಿ ಮನುಷ್ಯ ಸದಾ ಕಾರ್ಯನಿರತ ನಾಗಿರುವದು ಪ್ರಾಣಿ ಪ್ರಪಂಚದ ಬಗ್ಗೆ ಚಿಂತಿತಮನಸ್ಸುಗಳಿಗೆ ಅಘಾತ ತರುವ ವಿಷಯವಾಗಿದೆ. ಐದು ಸಾವಿರ ವರ್ಷಗಳ ಹಿಂದಿನ ಈ ಪ್ರಜಾತಿ ಈಗಿಲ್ಲ. ಕಾರಣ ಮನುಷ್ಯನ ದುರಾಸೆ. ಇಪ್ಪತ್ತು ಕೆಜಿ ತೂಕ ಮೂರು ಅಡಿ ಎತ್ತರದ ಈ ಪಕ್ಷಿ ನೆಲದ ಮೇಲೆ ಗೂಡು ಕಟ್ಟಿ ಕೇವಲ ಹಣ್ಣು ತಿಂದು ಬದುಕುವಂಥದ್ದು. ಹದಿನೇಳನೆಯ ಶತಮಾನದಲ್ಲಿ ನಿರ್ನಾಮವಾಗುತ್ತದೆ. ಇಂತಹ ಅನೇಕ ಪ್ರಕೃತಿ ಹಾಗೂ ವಿಜ್ಞಾನ ಕುರಿತ ಚಿಂತಿತ ಕವಿತೆಗಳು ಇಲ್ಲಿವೆ.ಅದರಲ್ಲಿ
ಡೊಡೊ..ಕೂಡಾ ಒಂದು.

ಪರಿಸರ ವಿಚಾರಗಳ ಬಗ್ಗೆ ಅಂದಿನ ಖ್ಯಾತ ಚಿಂತಕರಲ್ಲಿ ಒಬ್ಬರಾದ 'ವಿಂಡಲ್ ಬೆರಿ 'ಅವರು ತಮ್ಮ ಪುಸ್ತಕದಲ್ಲಿ ನಾಗರಿಕತೆ ಹಾಗೂ ವನ್ಯತೆಗಳ ನೇರ ಸಂಬಂಧಗಳನ್ನು ತೆರೆದಿಡುತ್ತಾರೆ... ಮನುಷ್ಯ ವನ್ಯಮೃಗಗಳ ಜೊತೆಗೂ ಪ್ರತಿ ಹಸ್ತಕ್ಷೇಪ ಮಾಡುವದರಿಂದ ಉಂಟಾಗುವ ನೇರ ಪರಿಣಾಮಗಳ ಬಗ್ಗೆ ಕವಿ ಚಿಂತಿತನಾಗುತ್ತಾನೆ. ಪ್ರಾಣಿ ಪ್ರಪಂಚದ ವಿಶಿಷ್ಟ ಗ್ರಹಿಕೆಯನ್ನು ಕುತೂಹಲದಿಂದ ನೋಡುವ ಕವಿಯು ಮನುಷ್ಯನನ್ನು ಮೀರಿಸುವ ಪ್ರೇಮದ ರೂಪಗಳನ್ನು ನಿರೂಪಿಸುತ್ತಾರೆ. ಇದನ್ನು ಪ್ರಾಣಿ
ಪ್ರಪಂಚದಲ್ಲಿ ಕಂಡು ಬೆರಗಾಗುವ ಸರದಿ ನಮ್ಮದು.

ದುಂಡು ಕಲ್ಲುಗಳ ಆರಿಸಿ
ತೋರಿಸಬೇಕು ಯೋಗ್ಯತೆ
ಇಷ್ಟವಾದ ಕಲ್ಲು ತಂದ
ಗಂಡಿನೊಂದಿಗೆ ಪ್ರೇಮಗೀತೆ.
( ಪೆಂಗ್ವಿನ್ ಪ್ರೇಮ )

ಪ್ರಕೃತಿಯಲ್ಲಿ ಹೆಣ್ಣುಗಂಡಿನ ಸಂಬಂಧಗಳನ್ನು ಬಲಪಡಿಸುವ ಕಾರಣಕ್ಕಾಗಿ ಯೋಗ್ಯತೆ ಅಳತೆಗೋಲಾಗುವ ಪ್ರಸಂಗಗಳು ನೂರಾರು. ಸಂವೇದನೆಗಳನ್ನು ಬಾಹ್ಯ ಬಲದಲ್ಲಿ ಅಳೆವ ಆಶ್ಚರ್ಯ ಪ್ರಸಂಗಗಳು ಅದೆಷ್ಟೋ ಪ್ರಾಣಿ ಪಕ್ಷಿ ಪ್ರಪಂಚದಲ್ಲಿ ನೋಡುತ್ತೇವೆ. ಅವು ಅದನ್ನು ಯಥಾವ ತ್ತಾಗಿ ಪಾಲಿಸಿಕೊಂಡು ಬರುತ್ತಿರುವ ಅಪರೂಪದ ದೃಶ್ಯವನ್ನು ತಮ್ಮ ಕಾವ್ಯದಲ್ಲಿ ಸಿದ್ಧಾರೂಢ ಅವರು ಚಿತ್ರಿಸಿರುವದು ವಿಶೇಷವಾಗಿದೆ. ಇಂಥವುಗಳ ಮೂಲಕ ಜೀವ ಭಾವಗಳ ಸಮ್ಮಿಲನದಲ್ಲಿ ಹೊಸ ಹೊಸ ರೂಪಗಳ ದರ್ಶನ ಒಂದೇ ಕಾಲಕ್ಕೆ ಸೀಮಿತವಾದುದಲ್ಲ ಏಕೆಂದರೆ ಕಾವ್ಯದ ಮೂಲ ದೃವ್ಯವೇ ಚಲನಶೀಲತೆ.

ಹೂಗೆನ್ನೆ ಸವರಿ ಆತ್ಮಕತೆ
ಹೇಳುವ ಬೃಂಗಕೆ
ಮತ್ತೆ ಮೈ ಅಲ್ಲಾಡಿಸಿ ಹೇಳಿದೆ ಬಳ್ಳಿ,
ಈಗ ಬೇಡ, ಸೂರ್ಯನಿಹ ಅಲ್ಲಿ
ಅಹೋರಾತ್ರಿ ಹೇಳುವೆ.
( ತೋಳ್ ಬೆರಳ ತುದಿಯಲಿ )
ಕಾವ್ಯ ಸೂಕ್ಷ್ಮತೆ ಎಂದರೆ ಎಚ್ಚರವಾಗಿ ಕೆಲವು ನೆಲೆಗಳನ್ನು ಹುಡುಕುವದು. ಬಳ್ಳಿಯಲ್ಲಿ ಹೂ ಅರಳಲು ಸೂರ್ಯ ಬೇಕು... ಹೂವಿಗೆ ಪರಾಗ ಸ್ಪರ್ಶಕೆ ದುಂಬಿಯೂ ಬೇಕು.. ಕಾಣದೆ ಇರುವುದನ್ನು ಕಾಣುವಂತೆ ಹೇಳುವ ಎಚ್ಚರಿಕೆ ಈ ಸಾಲುಗಳಲ್ಲಿ ಕಾಣುವಂಥದ್ದು.

ವಿದೇಶ ಎಲ್ಲ ಸುತ್ತಿ ಬಂದೆ
ಸಂಸ್ಕೃತಿ ಎಲ್ಲ ಕೊಟ್ಟು ಬಂದೆ
ಪೂರ್ತಿ ಕನ್ನಡ ಪ್ರೀತಿ ಹಾಗೇ ತಂದೆ
ಹಾಯ್ ಕನ್ನಡ!
( ಹಾಯ್ ಕನ್ನಡ!)
ಕನ್ನಡಿಗನಾಗಿ ಕನ್ನಡದ ಅಭಿಮಾನ ಮೆರೆಯದಿದ್ದರೆ ಕನ್ನಡದ ಬಗ್ಗೆ ಕವಿತೆ ಬರೆಯದಿದ್ದರೆ ಅದು ಅಪೂರ್ಣ. ಎಲ್ಲೇ ಇರಲಿ ಹೇಗೇ ಇರಲಿ ಕನ್ನಡದ ಪ್ರೀತಿ ಕಳೆಯುವದಿಲ್ಲ.. ಕೊಟ್ಟರೂ ಕಡಿಮೆಯಾಗುವದಿಲ್ಲ. ಸಂಸ್ಕೃತಿಯ ಭಾಗವಾದ ಕನ್ನಡದ ಹಿರಿಮೆ ಎಂದಿಗೂ ತನ್ನ ಎದೆಯಲ್ಲೇ ಇರುವಂಥದ್ದು ಎನ್ನುವ ಕನ್ನಡದ ಪ್ರೀತಿ ಪ್ರತಿಯೊಬ್ಬ ಕವಿಯ ಎದೆಯಲ್ಲಿ ಮೊಳೆಯುವಂತೆ ಇವರ ಕವಿತೆ ಸಾಲುಗಳು ಇಲ್ಲಿವೆ.

'ಬೈಕಲ್ 'ಎನ್ನುವ ಅವರ ಕವಿತೆ ಹೇಳುವದು ಮನುಷ್ಯನ ಯಾಂತ್ರಿಕ ಜೀವನವು ಶರೀರಕ್ಕೆ ವ್ಯಾಯಾಮವಿರದೆ ಅನಾರೋಗ್ಯಕ್ಕೆ ಒಳಗಾಗುತ್ತಿರುವದನ್ನು ತಪ್ಪಿಸಲು ತಂತ್ರಜ್ಞಾನ ವಿಜ್ಞಾನ ಮುಂದುವರಿಯಲಿ ಎನ್ನುವದರೊಟ್ಟಿಗೆ ಹೊಸ ಚಿಗುರು ಹಳೇಬೇರು ಎಲ್ಲ ಇದ್ದರೆ ಅದರ ಸೊಬಗೇ ಬೇರೆ ಎನ್ನುವ ನಿಲುವು ಇದೆ.

ರಮ್ಯ ಕಾವ್ಯ ಪುಷ್ಪ, ಕವಿತೆಯಾದಳು, ಹೊಸವರುಷ,ಎಣ್ಣೆಯ ನದಿ, ಪ್ರಳಯ, ವೈನೋತ್ಸವ,ಪೊಲೀಸರಿಲ್ಲದ ಧರೆ, ಜೇಡನೃತ್ಯ ಹೀಗೆ ಭಿನ್ನ ಭಾವ, ಭಿನ್ನ ವಿಷಯ ಗಳನ್ನು ಒಳಗೊಂಡ ಕವಿತೆಗಳು ಇವೆ. ವಿವಿಧ ವಿಷಯಗಳಿಗೆ ಸಂಬಂಧಿಸಿದ ಐವತ್ತು ಕವಿತೆಗಳ ಸಂಕಲನವು ಸಿದ್ಧಾರೂಢರ ಸಾಹಿತ್ಯಾಸಕ್ತಿಯ ನಿರಂತರತೆಯನ್ನು ವೈವಿಧ್ಯತೆಯ ಸ್ವರೂಪವನ್ನು ತೋರುವಂಥದ್ದು.

ಸಿದ್ಧಾರೂಢರ ವೇದನೆಯಗಲೀ, ಹಳಹಳಿಕೆಯಾಗಲೀ, ವಿಶಾದವಾಗಲೀ, ಸಂತೋಷವಾಗಲೀ ಓದುಗರಿಗೆ ತಟ್ಟುವದು ಅವರ ಪ್ರಾಮಾಣಿಕತೆಯ ಬರಹದಿಂದ. ಕವಿಭಾವದ ಅವ್ಯಕ್ತ ಅಭಿಪ್ಸೆಯಿಂದ. ಶಬ್ದ ಚಮತ್ಕಾರದಿಂದಾಗಲಿ ಭಾವೋತ್ಕಟ ಸೋಜಿಗವಾಗಲಿ ಅಲ್ಲ. ಅವರು ಚಿಂತಿತ ವಿಷಯಗಳಿಗೆ ಸೂಕ್ಷ್ಮತೆಯ ರೂಹು ಹುಡುಕಿಕೊಂಡು ಹದಗೊಂಡು ಹೊರಟರೆ ಅವರ ಕಾವ್ಯ ಮಹತ್ವದ ತಿರುವು ಪಡೆದುಕೊಳ್ಳಲು ಸಾಧ್ಯ.

- ಭಾರತಿ ಪಾಟೀಲ್
ಕವಯತ್ರಿ

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...