ಯೋಗ... ಅಭ್ಯಾಸವಾಗುವುದು ಯಾವಾಗ?


"ಯೋಗದ ಅಭ್ಯಾಸದಿಂದ ಆರೋಗ್ಯದ ಜೊತೆಗೆ ಆಗುವ ಮತ್ತೊಂದು ಉಪಯೋಗವೆಂದರೆ ಅದು ನಮ್ಮ ಅಂತಃಶಕ್ತಿಯನ್ನು, ಧೀಃಶಕ್ತಿಯನ್ನು ಉದ್ದೀಪಿಸುವುದಾಗಿದೆ. ಪ್ರತಿ ವ್ಯಕ್ತಿಯ ಒಳಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ಬೇಕಾದ ಆತ್ಮವಿಶ್ವಾಸವನ್ನು ಯೋಗ ನಿಸ್ಸಂಶಯವಾಗಿ ಕೊಡುತ್ತದೆ.," ಎನ್ನುತ್ತಾರೆ ಲೇಖಕಿ ನಂದಿನಿ ಹೆದ್ದುರ್ಗ. ಅವರು ವಿಶ್ವ ಆರೋಗ್ಯ ದಿನದ ಪ್ರಯುಕ್ತ ಬರೆದ ‘ಯೋಗ... ಅಭ್ಯಾಸವಾಗುವುದು ಯಾವಾಗ’ ? ಲೇಖನ ನಿಮ್ಮ ಓದಿಗಾಗಿ.

ನಂಗಾಗ ಐದು ವರ್ಷ ಇದ್ದಿರಬಹುದು. ಅಪ್ಪ ಅಮ್ಮ ಕೂಡುಕುಟುಂಬದಿಂದ ನಾವು ಮೂವರೂ ಮಕ್ಕಳು ಕೈಗೂಸುಗಳಾಗಿದ್ದಲೇ ಆಚೆ ಬಂದಿದ್ದರು. ಊರಾಚೆಗಿದ್ದ ತಾತನ ಮತ್ತೊಂದು ಜಮೀನು ಅಪ್ಪನ ಪಾಲಿಗೆ ಸಿಕ್ಕಿತ್ತು. ಆ ಊರಾಚೆಯ ಜಮೀನೆಂದರೆ ದ್ವೀಪದ ಹಾಗೆ. ದ್ವೀಪವೆಂದರೆ ಸುತ್ತಕ್ಕೂ ನೀರೇ ಇರಬೇಕು ಅಂತೇನೂ ಇಲ್ಲ. ಮನೆಯ ಸುತ್ತಕ್ಕೂ ದೊಡ್ಡ ದೊಡ್ಡ ಬೆಟ್ಟಗಳು ಮತ್ತದರ ತಪ್ಪಲಿಗೆ ಅಪ್ಪನ ಈ ಜಮೀನು.

ಫರ್ಲಾಂಗಾಚೆ ಇರುವ ದೊಡ್ಡ (?) ರಸ್ತೆಯಲ್ಲಿ ಅಪರೂಪಕ್ಕೆ ಓಡಾಡ್ತಿದ್ದ ಎತ್ತಿನ ಗಾಡಿಯನ್ನು ನಾವು ಮೂವರೂ ಮಕ್ಕಳೂ ಮೆಟ್ಟಿಲು ಬಳಿಯಿದ್ದ ಎತ್ತರದ ಜಾರುಗುಪ್ಪೆಯೇರಿ ಗೋಣು ಎಟುಕಿಸಿ ನೋಡುತ್ತಿದ್ದೆವು.‌ ಕೆಲವೊಮ್ಮೆ ಅಜ್ಜಿ ಕೂಡ ಗಾಡಿ ಹೂಡಿಸಿಕೊಂಡು ಪಕ್ಕದ ಸಣ್ಣ ಪಟ್ಟಣದಲ್ಲಿದ್ದ ಬ್ಯಾಂಕಿಗೆ ಹೋಗುತ್ತಿದ್ದರು. ನಾವು ಆಗೆಲ್ಲ ಅಜ್ಜಿಗೆ ಕೇಳಲೆಂಬಂತೆ ಕೀರಲು ಕೂಗಿನಲ್ಲಿ 'ಅಜ್ಜೀಈಈಈಇ' ಅಂತ ಕೂಗ್ತಿದ್ದಿದ್ದು ಎದುರಿನ ಗದ್ದೆ ಕೂಡ ದಾಟುತ್ತಿರಲಿಲ್ಲ. ತಿಂಗಳಾನುಗಟ್ಟಲೆ ಹೊರ ಜನರ ಮುಖ ನಮಗೆ ನೋಡಲು ಸಿಗುತ್ತಿರಲಿಲ್ಲ.

ನಮ್ಮ ಈ ದ್ವೀಪವಾಸಿ ಮನೆಯಿಂದ ಬಲಕ್ಕೆ ತಿರುಗಿ ಮೇಲಕ್ಕೆ ಹೊರಳಿದರೆ ಒಂದು ಪುಟ್ಟ ಊರು. ಅಲ್ಲೊಂದು ಏಕೋಪಾಧ್ಯಾಯ ಶಾಲೆ. ನಾವು ಮೂವರೂ ಮಕ್ಕಳ ಒಂದು ಎರಡು ಮೂರನೇ ಇಯತ್ತೆಯ ಓದು ಸಾಗಿದ್ದು ಅಲ್ಲೆ. ಮನೆಯಲ್ಲಿ ಅಪ್ಪ ಅಮ್ಮ ಮತ್ತು ನಾವು ಮೂವರು ಮಕ್ಕಳು ಮಾತ್ರ ಇದ್ದ ನಮಗೆ ಆಗೆಲ್ಲ ಎರಡು ಕಿಮೀ ಆಚೆಗಿದ್ದ ಅಜ್ಜಿ ಮನೆಗೆ ಹೋಗುವುದು ಅಂದರೆ ಅದೇ ದೊಡ್ಡ ಟೂರು.

ಯಾವೆಲ್ಲ ಕಾರಣ ಹುಡುಕಿ ಶನಿವಾರ ಅಜ್ಜಿ ಮನೆಗೆ ಹೋಗ್ಬರ್ತೀವಿ ಅಂತ ಹೇಳಿ ಅಪ್ಪನ್ನ ಒಪ್ಪಿಸ್ತಿದ್ವಿ ನೆನಪಾಗ್ತಿಲ್ಲವಾದರೂ ತಿಂಗಳಲ್ಲಿ ಒಂದು ಶನಿವಾರವಾದರೂ ಅಜ್ಜಿಮನೆಗೆ ವಿಸಿಟ್ ಗ್ಯಾರೆಂಟಿ. ನಿರ್ಜನ ರಸ್ತೆ ಆದರೂ ಯಾವ ಆತಂಕವೂ ಇಲ್ಲದೆ ಬರೀ ಮಕ್ಕಳನ್ನೇ ಕಳಿಸುತ್ತಿದ್ದ ಸಮೃದ್ಧ ಕಾಲ ಅದು.

ಮುಂದಿನದ್ದು ಹೇಳಬೇಕಿರುವ ಸಂಗತಿ.
ಹಾಗೆ ಬಯಸಿ ಬಯಸಿ ಹೋಗುತ್ತಿದ್ದ ಅಜ್ಜಿಮನೆಯಲ್ಲಿ ಇರ್ತಿದ್ದಿದ್ದು ಅಜ್ಜಿ ಮತ್ತು ಇಬ್ಬರು ಚಿಕ್ಕಪ್ಪಂದಿರು..ಜೊತೆಗೆ ತವರು ಮನೆಗೆ ಬಂದಿದ್ದರೆ ಯಾರಾದರೊಬ್ಬ ಸೋದರತ್ತೆ ಮತ್ತು ನಮ್ಮದೇ ವಾರಿಗೆಯ ಅವರ ಮಕ್ಕಳು. ಅದ್ಯಾವ ಆಹಾರ ವಿಜ್ಞಾನ ಅಜ್ಜಿ ಮನೆಯಲ್ಲಿ ಆಗಿನ ಕಾಲಕ್ಕೇ ಬೆಳೆದಿತ್ತೋ ಏನೋ ಗೊತ್ತಿಲ್ಲ. ಈಗ ನೆನೆಸಿದ್ರೂ ಅಚ್ಚರಿ ಅನ್ನುವಷ್ಟು ಬ್ಯಾಲೆನ್ಸ್ಡ್ ಆಹಾರಪದ್ದತಿಯ ಅಭ್ಯಾಸ ಅವರಿಗಿತ್ತು.

ಅಕ್ಕಿ ರಾಗಿ ಗೋದಿ... ಯಥೇಚ್ಛವಾಗಿ ಹಾಲು ಮೊಸರು ಬೆಣ್ಣೆ ತುಪ್ಪ.. ಆಗಿನ ಕಾಲಕ್ಕೆ ದುಬಾರಿಯಾದ ತೆಂಗಿನಕಾಯಿ ಅಜ್ಜಿಮನೆಯಲ್ಲಿ ಭರಪೂರ. ದೊಡ್ಡ ತೆಂಗಿನತೋಟವಿತ್ತು. ಇದಲ್ಲದೆ ಸೀತಾಫಲ ರಾಮಫಲ,ಸೀಬೆ ಸಪೋಟ ಮಾವು ಕಿತ್ತಳೆ ನೆಲ್ಲಿ ಕಾಮ್ರಾಕ್ಷಿ ಆಗಿನ ಕಾಲದಲ್ಲಿ ಯಾರೂ ಆ ಭಾಗದಲ್ಲಿ ಬೆಳೆಯದ ಬಿಳಿ ದ್ರಾಕ್ಷಿ, ಮಾದಾಲ ಹಣ್ಣು ...ಋತುವಿಗೆ ತಕ್ಕಂತೆ ಅಯಾ ಹಣ್ಣಿನ ದಾಸ್ತಾನು ಮನೆಯಲ್ಲಿ ಇರ್ತಿತ್ತು.

ಇದು ಸಾಲದೆಂಬಂತೆ ಅಜ್ಜಿ ಮನೆಯ ತೋಟದಲ್ಲಿ ಬೃಹದಾಕಾರದ ಐದಾರು ಗೇರುಮರಗಳಿದ್ದವು. ಶನಿವಾರ ಅಜ್ಜಿ ಮನೆಗೆ ಬಂದ ನಂತರದ ನಮ್ಮ ಮೊದಲ ಕಾರ್ಯಕ್ರಮ ಗೇರುಬೀಜ ಆಯುವುದು. ಯಾರು ಹೆಚ್ಚು ಎನ್ನುವ ಪೈಪೋಟಿ. ಜೊತೆಗೆ ಎತ್ತರದ ಮರದಲ್ಲಿದ್ದ ಕೆಂಪನೆಯ ಗೇರು ಹಣ್ಣುಗಳನ್ನು ಒಡೆಯದಂತೆ ಕೆಡವಿ ಮನಸೋ ಇಚ್ಚೆ ತಿನ್ನುವುದು.

ನನ್ನ ಅಪ್ಪನ ಮನೆಯ ಅನುವಂಶೀಯತೆಯಲ್ಲಿ ಬಹುತೇಕ ಗಂಡುಮಕ್ಕಳು ಆರು ಅಡಿ ಎತ್ತರಕ್ಕಿದ್ದರೆ ಹೆಣ್ಣು ಮಕ್ಕಳೆಲ್ಲರೂ ಐದೂವರೆ ಯ ಆಸುಪಾಸಿಗೆ ಇದಾರೆ. ಬಹುಶಃ ನಮ್ಮ ಅದ್ಭುತ ಆಹಾರ ನಮ್ಮನ್ನು ಸುಪುಷ್ಟವಾಗಿ ಬೆಳೆಸಿರಬಹುದಾ ಅಂತೊಂದು ಅನುಮಾನ ನನಗೆ. ಅಚ್ಚರಿಯ ಸಂಗತಿ ಎಂದರೆ ನನ್ನ ಇಬ್ಬರೂ ಚಿಕ್ಕಪ್ಪಂದಿರು ಹಗಲೆಲ್ಲ ಗದ್ದೆ ತೋಟದ ಕೆಲಸಗಳಲ್ಲಿ ಬಿಡುವಿರದಂತೆ ದಣಿಯುತ್ತಿದ್ದರೂ ಬೆಳಿಗ್ಗೆ ನಾಲ್ಕೂವರೆ ಐದಕ್ಕೆಲ್ಲ ಎದ್ದು ಅಂಗಳದಲ್ಲಿ ವ್ಯಾಯಾಮ ಮಾಡ್ತಾ ಇದ್ದಿದ್ದು.

ನಾಗರಿಕತೆಯ ಯಾವ ಸೋಂಕೂ ಇಲ್ಲದ ಪುಟ್ಟ ಊರಿನಲ್ಲಿ ದೇಹವನ್ನು ಹುರಿಗಟ್ಟಿಸ್ಲಿಕ್ಕೆ ಆರೋಗ್ಯವಾಗಿಡಲಿಕ್ಕೆ ವ್ಯಾಯಾಮ ಬೇಕು ಅಂತ ಚಿಕ್ಕಪ್ಪ ಅವರಿಗೆ ತಿಳುವಳಿಕೆ ಬಂದಿದ್ದಾದರೂ ಹೇಗೆ?

ಚಿಕ್ಕವರು ನಾವು ಮೂವರೂ ಮಕ್ಕಳು ಅಷ್ಟು ಹೊತ್ತಿಗೇ ಅವರ ಜೊತೆಗೆ ಏಳ್ತಿದ್ದಿದ್ದಕ್ಕೆ ಕಾರಣ ಅವರ ವ್ಯಾಯಾಮ. ಅವರು ಅಂಗಳದಲ್ಲಿ ಎರಡು ಇಟ್ಟಿಗೆಯಿಟ್ಟು ಪುಷ್ಅಪ್ಸ್ ಮಾಡುತ್ತಿದ್ದಿದ್ದು.‌, ಪ್ಲ್ಯಾಂಕ್ಸ್ ಥರದ್ದೇನೂ ಮಾಡ್ತಿದ್ದಿದ್ದು, ಪೂರ್ವಕ್ಕೆ ತಿರುಗಿ ದೇಹವನ್ನು ಸೊಗಸಾಗಿ ಹಿಗ್ಗಿಸಿ ಬಗ್ಗಿಸಿ ಕಸರತ್ತು ಮಾಡುತ್ತಿದ್ದಿದ್ದು ನೋಡುವುದೆಂದರೆ ನಾವು ಮೂವರಿಗೂ ಇನ್ನಿಲ್ಲದ ಖುಷಿ.

ಆಗೆಲ್ಲ ನಮ್ಮ ಕಣ್ಣಿಗೆ ನಮ್ಮ ಚಿಕ್ಕಪ್ಪಂದಿರು ಹೀರೋ.
ಹೀಗೆ ಹೀರೋ ಥರ ಆಗಲು ವ್ಯಾಯಾಮ ಮಾಡಬೇಕು ಎನ್ನುವ ಕಾನ್ಸೆಪ್ಟ್ ನಾವು ಮೂವರೂ ಮಕ್ಕಳಿಗೆ ಆಗಿನಿಂದಲೇ ಹೊಕ್ಕಿರಬೇಕು ಅನಿಸುತ್ತದೆ.

ಯಥಾ ಪ್ರಕಾರ ನಮ್ಮ ಸ್ಕೂಲು ಅದೇ ಊರಿನಲ್ಲಿ ಮುಂದುವರೆದಿತ್ತು. ಆಗೆಲ್ಲ ಒಂದು ವರ್ಷ ಬಹಳ ನಿಧಾನವಾಗಿ ಕಳೆಯುತ್ತಿತ್ತಾ ಅಂತ ಅನುಮಾನ ಆಗ್ತದೆ. ಬಹಳ ಕಡಿಮೆ ಓದಿದ್ದ ಅಮ್ಮ ತಾನು ದಪ್ಪಗಾಗ್ತಿನಿ ಅಂತ ದಿನವೂ ನೂರು ಸಿಟ್ಅಪ್ಸ್ ಮಾಡ್ತಿದ್ರು. ಹೊಟ್ಟೆ ದಪ್ಪಗಾಗಬಾರದು ಅಂತ ಅರ್ಧಸರ್ವಾಂಗಾಸನದಲ್ಲಿ ಐದಾರು ನಿಮಿಷ ನಿಲ್ತಿದ್ರು. ಮನಸ್ಸೊಂದಕ್ಕೆ ವ್ಯಾಯಾಮ ಎನ್ನುವ ಕ್ರಿಯೆಯ ಕುರಿತು ಆಸಕ್ತಿ ಹುಟ್ಟಬೇಕಾದ್ದು ಎಳೆವೆಯಲ್ಲೇ.. ಮನೆಯಂಗಳದಲ್ಲೇ. ವ್ಯಾಯಾಮದಿಂದ ದೇಹ ಬುದ್ದಿ ಚುರುಕಾಗ್ತದೆ ಅಂತ ಯಾವ ಓದೂ ಹೇಳಿಕೊಡುವ ಮುನ್ನವೇ ಹಿರಿಯರನ್ನು ನೋಡುವ ಮೂಲಕ ನಮಗದರ ತಿಳುವಳಿಕೆ ಮೂಡಿಯಾಗಿತ್ತು.

ಅಪ್ಪನೂ ಸಣ್ಣಪುಟ್ಟ ದೇಹ ಹುರಿಗೊಳಿಸುವ ಕಸರತ್ತು ಮಾಡುತ್ತಿದ್ದರಾದರೂ ಬಹುತೇಕ ನಾವು ಅವರಿಂದ ಸ್ಪೂರ್ತಿ ಪಡೆದದ್ದು ಅವರ ಅನನ್ಯ ಪರಿಸರ ಪ್ರಜ್ಞೆಯನ್ನು.

ಎಲ್ಲೆಲ್ಲಿಂದಲೋ ಹೆಕ್ಕಿ ತಂದು ಬೆಳೆಸುತ್ತಿದ್ದ ಗಿಡಗಂಟೆಗಳು,ಹಾದಿಯಲ್ಲಿ ಸಿಕ್ಕುವ ಅಪರೂಪ ಬಣ್ಣ ಆಕಾರವಿರುವ ಕಲ್ಲುಗಳನ್ನು ತಂದು ನಮಗೆ ತೋರಿಸುತ್ತಿದ್ದಿದ್ದು. ತೋಟ ಮಾಡುವಾಗ ಭಾವಿ ತೋಡುವಾಗ ತೋಟಕ್ಕೆ ಹೊಸ ರಸ್ತೆ ಮಾಡಿಸುವಾಗ ಸಿಕ್ಕುತ್ತಿದ್ದ ಅವಶೇಷದಂತಹ ಪದಾರ್ಥಗಳನ್ನು ಚೆನ್ನಾಗಿ ತಿಕ್ಕಿ ತೊಳೆದು ಅದರ ಕುರಿತು ವಿಶೇಷ ಕಥೆಗಳನ್ನು ಕಟ್ಟುತ್ತಿದ್ದಿದ್ದು, ಆಗಿನ ಕಾಲಕ್ಕೆ ಉತ್ತರ ಭಾರತ ಪ್ರವಾಸ ಹೋಗಿ ಅಲ್ಲಿನ ಗಂಗೆ ಯಮುನೆಯ ಜೊತೆಗೆ ತಾನು ದರ್ಶಿಸಿದ ಪುಣ್ಯ ನದಿಗಳ ನೀರನ್ನು ಗಾಜಿನ ಕುಪ್ಪಿಯಲ್ಲಿ ಶೇಖರಿಸಿ ತಂದು ನಮ್ಮ ಸೇದೋಬಾವಿಗೆ ಸುರಿದು ತನ್ನ ಬಾವಿಯ ನೀರು ಗಂಗೆಯಷ್ಟೇ ಪವಿತ್ರ ಎಂದಿದ್ದು.. ಆನಂತರದಲ್ಲಿ ಬಂದುಹೋಗುವವರಿಗೆಲ್ಲ ತನ್ನ ಬಾವಿಯಲ್ಲಿ ಸಪ್ತನದಿ ನೀರು ಸೇರಿದೆ ಅಂತ ಹೆಮ್ಮೆಯಿಂದ ಹೇಳುತ್ತಿದ್ದಿದ್ದು, ಮರ ಗಿಡ ಮಣ್ಣು ಕೆರೆ ನಾಯಿ ಹಸು ಬೆಕ್ಕು ಎಲ್ಲವನ್ನೂ ಬಹಳ ಪ್ರೀತಿಯಿಂದ ‘ನನ್ ಮಗಂದು,, ಏನ್‌ಚೆನ್ನಾಗಿದೆ ನೋಡು’ ಅಂತ ಮುದ್ದಿನಲ್ಲೇ ಬಯ್ಯುವುದು, ಮಣ್ಣು ನೀರು ಗಾಳಿ ಬೆಳಕನ್ನು ಕೃತಜ್ಞತಪೂರ್ವಕವಾಗಿ ಸ್ಮರಿಸುವ ತಿಳುವಳಿಕೆ ನೀಡಿದ್ದು, ಅನಗತ್ಯವಾಗಿ ಒಂದು ಎಲೆ ಹರಿದರೂ ಈಗಲೂ ಕೋಪಿಸಿಕೊಳ್ಳುವುದು, ಹಾದಿಯಲ್ಲಿ ಸಿಕ್ಕ ಎಂಥದೋ ಹೊಳೆಯುವ ವಸ್ತುವನ್ನೂ ಮನೆಗೆ ತಂದು ಇದು ಬಹಳ ಅದೃಷ್ಟ ಇರುವವರಿಗೆ ಮಾತ್ರ ಸಿಗುವುದು ಅಂತ ರಸವತ್ತಾಗಿ ಕಥೆ ಹೇಳುವುದು... ಹೀಗೆ ಹೇಳಿದಷ್ಟೂ ಮುಗಿಯದ ಪರಿಸರ ಪ್ರೀತಿಯ ಕಥೆಗಳು ನಮ್ಮಪ್ಪ.

ನಮಗಂತೂ ನಾವು ಇಂಥ ಅದೃಷ್ಟ ವಂತ ಅಪ್ಪನ ಮಕ್ಕಳಾಗಿರುವುದರಿಂದಲೇ ನಾವು ಭಾರಿ ಭಾರಿ ಅದೃಷ್ಟವಂತರು ಅಂತಲೂ ಅನಿಸ್ತಿತ್ತು. ನನಗೆ ಅಮ್ಮನಿಂದ ಸಿಕ್ತಿದ್ದ ತಾಜಾ ತಾಜಾ ಹೊಡೆತ, ಬಾಯಿತುಂಬುವ ಬೈಗುಳಗಳು, ಶನಿವಾರ ಭಾನುವಾರದ ಖಾಯಂ ತೊಗರಿ ರೇಷ್ಮೆ ಹೊಲದ ಕೆಲಸ ಇವೆಲ್ಲವು ಇದ್ದೂ ನಮ್ಮ ಬಾಲ್ಯ ನಮ್ಮ ಮಕ್ಕಳ ಬಾಲ್ಯಕ್ಕಿಂತಲೂ ಸೊಗಸಾಗಿತ್ತು ಎನಿಸುತ್ತದೆ.

ನಾವು ಮೂವರೂ ಮಕ್ಕಳಿಗೆ ಒಂದು ದೇಹ ಪ್ರಜ್ಞೆ, ಆಹಾರ ವಿಜ್ಞಾನ, ಪರಿಸರ ಪ್ರೀತಿ ಮತ್ತು ಕೃತಜ್ಞತಾ ಭಾವ ಬಾಲ್ಯದ ನಮ್ಮ ವಾತಾವರಣದಿಂದ ಬಂದಿರಬಹುದು. ಇಷ್ಟು ಸುದೀರ್ಘವಾದ ಪೀಠಿಕೆ ಯಾಕೆ? ಇದರಿಂದಾಗಿ ಏನು ಹೇಳಬಯಸ್ತಿದ್ದೇನೆ? ಹೀಗೊಂದು ಮನೆಯ ವಾತವರಣ ಸಿಕ್ಕದೇ ಇದ್ದವರಿಗೆ ಹಾಗಿದ್ರೆ ದೇಹ ಪ್ರಜ್ಞೆ ಇರುವುದಿಲ್ಲವಾ?

ನಾಲ್ಕಾರು ವರ್ಷಗಳ ಹಿಂದೆ
ಶಾಲೆಯಲ್ಲಿ ಸೂರ್ಯನಮಸ್ಕಾರ ಕಡ್ಡಾಯ ಮಾಡುವುದಕ್ಕೆ ಸರ್ಕಾರ ಒಂದು ನಿಯಮ ರೂಪಿಸುವ‌ ಕುರಿತು ಯೋಜನೆ ತಯಾರಿಸಿತ್ತು. ಆದರೆ ಈ‌ ಸೂರ್ಯ ನಮಸ್ಕಾರ ವಿವಿಧ ಧರ್ಮಗಳ ಮಕ್ಕಳ ಮೇಲೆ ವೃಥಾ ಹೇರಿಕೆಯ ಜೊತೆಗೆ ಮತ್ತೇನೋ ಹುನ್ನಾರ ಎನ್ನುವ ಸಂಗತಿಯನ್ನು ಪ್ರಜ್ಞಾಪೂರ್ವಕವಾಗಿ ಸುದ್ದಿ ಮಾಡಿ ಅಷ್ಟು ಅಗತ್ಯವೂ ಅನಿವಾರ್ಯವೂ ಆದ ಯೋಜನೆಗೆ ಎಳ್ಳುನೀರು ಬಿಡಲಾಯಿತು.. ಕೆಲವು ಧರ್ಮಗಳ ಪ್ರಾರ್ಥನಾ ಸ್ಥಳಗಳಲ್ಲಿ ಈ‌ ಕುರಿತು ಚಿಂತನಮಂಥನಗಳು ನಡೆದು ಇದನ್ನು ಬಿಲ್ಕುಲ್ ಒಪ್ಪಿಕೊಳ್ಳಬಾರದೆನ್ನುವ ನಿರ್ಣಯಗಳು ಆದವು.

ಪಠ್ಯದಲ್ಲಿ ಯೋಗವನ್ನು ಅಳವಡಿಸಬೇಕು ಎನ್ನುವ ಪ್ರಾಜ್ಞರ ಮಾತನ್ನು ವಿಚಿತ್ರ ದೃಷ್ಟಿಯಿಂದ ನೋಡುವ ಜನರು ಹೆಚ್ಚಾಗ್ತಿದಾರೆ. ಶಾಲಾಕಲಿಕೆಯ ಹಂತದಲ್ಲೇ ಸೂರ್ಯನಮಸ್ಕಾರ ಕಡ್ಡಾಯ ಮಾಡುತ್ತೇವೆ ಎನ್ನುವ ಹೇಳಿಕೆ ಬಂದ ಕೂಡಲೇ ಧರ್ಮ ಮುನ್ನೆಲೆಗೆ ಬಂದು‌ ಮಾತಾನಾಡುತ್ತದೆ. ಬಹಳ ಅಪರೂಪಕ್ಕೆ ಜನಪ್ರತಿನಿಧಿಗಳು ತೆಗೆದುಕೊಂಡ ಉತ್ತಮ ನಿರ್ಧಾರವೊಂದು ಹೀಗೆ ನೆನೆಗುದಿಗೆ ಬೀಳುತ್ತಿದೆ.

ನಮ್ಮ ಬಾಲ್ಯದ ಏಕೋಪಾಧ್ಯಾಯ ಶಾಲೆಗಳಲ್ಲಿ ಡ್ರಿಲ್ ಕಲಿಸುತ್ತಿದ್ದರಾದರೂ ಅದರ ಉಪಯೋಗದ ಕುರಿತು ಆಸಕ್ತಿದಾಯಕವಾದ ತಿಳುವಳಿಕೆ ಮೂಡಿಸಿರಲಿಲ್ಲ. ಅಥವಾ ಆಗಿನ ಸೀಮಿತ ಅನುಕೂಲತೆಯಲ್ಲಿ ಅದೇ ಹೆಚ್ಚಿರಬಹುದು. ನಂತರದಲ್ಲಿ ಕಲಿತ ಬೇರೆಬೇರೆ ಶಾಲೆಗಳಲ್ಲಿ ವ್ಯಾಯಾಮ ಇತ್ತು. ಬಯಾಲಾಜಿಯಲ್ಲಿ ಕಲಿತ ಸಂಗತಿಗಳ ಹೊರತು ವ್ಯಾಯಮದಿಂದಾಗುವ ಉಪಯೋಗಗಳ ಆಕರ್ಷಣೆ ಹುಟ್ಟುವಂತೆ ಬೋಧನೆ ಮಾಡಿದ್ದು ನೆನಪಿಲ್ಲ.

ಆದರೆ ನಮಗೆ ನಮ್ಮ ಬಾಲ್ಯ ಪ್ರಭಾವ ಬೀರಿಯಾಗಿತ್ತು. ವ್ಯಾಯಾಮ ಮತ್ತು ಆಹಾರ ವಿಜ್ಞಾನ ದಲ್ಲಿ ಆಸಕ್ತಿ ಮುಂದುವರೆಯುವಂತೆಯೂ ಪ್ರೇರೆಪಿಸುತ್ತಿತ್ತು. ನಂತರದಲ್ಲಿ ಮದುವೆಯಾಗಿ ಬಂದ ಕುಟುಂಬದ ಸಂಗತಿಗಳು ಒಂದು ಹೆಣ್ಣಿನ ಜೀವನವನ್ನು ಸಾಕಷ್ಟು ಪ್ರಭಾವಿಸುತ್ತವೆ.
ಈ ಮನೆಯಲ್ಲಿ ಆಹಾರ ವ್ಯಾಯಾಮ ನೀರು ನೆಲ ಗಾಳಿ ಎನ್ನುವ ಸಂಗತಿಗಳು ಬಹಳ ಮುಖ್ಯವಾಗಿದ್ದವು ಅಂತ ಎಂದೂ ಅನಿಸಲೇ ಇಲ್ಲ. ಆ ಕಾಲಕ್ಕೆ ನನ್ನ ಆಸಕ್ತಿಗಳು ಕೆಲ ಕಾಲ ಕ್ಷೀಣಿಸಿದ್ದವು.

ನಂತರದ ನನ್ನದೇ ಸಂಸಾರಕ್ಕೆ ಬಂದಮೇಲೆ ಮತ್ತೆ ಹಳೆಯ ನಾನು ನನಗೆ ಸಿಕ್ಕಿದೆ. ಮಕ್ಕಳಿಗೆ ನನ್ನ ಅಪ್ಪ ಅಮ್ಮ ಹೇಳಿಕೊಟ್ಟಂತ ಸಂಗತಿಗಳನ್ನು ನಾನೂ ಹೇಳುತ್ತಿದ್ದೆ. ನಿತ್ಯವೂ ವ್ಯಾಯಾಮ ಮಾಡುವುದು ನನ್ನಿಷ್ಟದ ಸಂಗತಿಯಾಗಿತ್ತು. ಅಷ್ಟರಲ್ಲಿ ವ್ಯಾಯಾಮ ಕ್ರಮಬದ್ಧವಾದ ಉಸಿರಾಟದೊಂದಿಗೆ ಮಾಡುವಾಗ ಯೋಗ ಎನಿಸಿಕೊಳ್ತದೆ ಅಂತಲೂ ಅದರಿಂದ ದೇಹದ ರೋಗನೀರೋಧಕ ಶಕ್ತಿ ಹೆಚ್ಚುತ್ತದೆ, ಸೌಷ್ಟವ ಕೂಡ ಉತ್ತಮವಾಗುತ್ತದೆ, ಏಕಾಗ್ರತೆ ಉತ್ತಮವಾಗುತ್ತದೆ ಎನ್ನುವುದನ್ನು ರಾಮ್ದೇವ್ ಬಾಬಾ ತಮ್ಮ ಆಸ್ಥಾ ಚ್ಯಾನಲ್‌ ಮೂಲಕ ಪ್ರತಿದಿನವೂ ಹೇಳತೊಡಗಿದ್ದರು. ನಾನೂ ಒಂದೆರಡು ಯೋಗಸಂಬಂಧಿ ಪುಸ್ತಕ ಖರೀದಿಸಿ ಅದನ್ನು ಓದಿ ಟಿವಿ ನೋಡಿ ಉತ್ತಮವಾಗಿ ಆಸನ ಹಾಕುವುದು, ಪ್ರಾಣಾಯಾಮ ಮಾಡುವುದನ್ನು ಕಲಿತಿದ್ದೆ. ವ್ಯಕ್ತಿಯ ಕುರಿತು ಭಿನ್ನ ಅಭಿಪ್ರಾಯಗಳೇನೇ ಇರಲಿ, ಈಗೆರಡು ದಶಕಗಳ ಹಿಂದೆ ರಾಮದೇವ್ ಬಾಬಾ ಲಕ್ಷಾಂತರ ಜನರ ದಿನಚರಿಯಲ್ಲಿ ಯೋಗವನ್ನು ಅಳವಡಿಸಿದ್ದು ಒಂದು ದಾಖಲೆಯೇ ಸರಿ.

ಅದೇ ಕಾಲಘಟ್ಟದಲ್ಲಿ ಯೋಗವನ್ನು ಗುರುಮುಖೇನ ಕಲಿತ ವ್ಯಕ್ತಿಗಳು ಯೋಗಗುರುಗಳೆಂಬ ಹೆಸರಿನಲ್ಲಿ ಪ್ರತಿ ಸಣ್ಣಪಟ್ಟಣಗಳಲ್ಲಿ ಕೂಡ ಯೋಗ ಶಿಬಿರಗಳನ್ನು ನಡೆಸಲಾರಂಬಿಸಿದರು. ಹೀಗೆ ಯೋಗಗುರುಗಳು ನಡೆಸಿದ ಶಿಬಿರದಲ್ಲಿ ಕಲಿತ ನಂತರ ನನ್ನ ಅಭ್ಯಾಸದಲ್ಲಿ ಇದ್ದಂತಹ ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿಕೊಂಡು ಯೋಗ ಮುಂದುವರೆಸಿದೆ.

ಯೋಗದ ಅಭ್ಯಾಸದಿಂದ ಆರೋಗ್ಯದ ಜೊತೆಗೆ ಆಗುವ ಮತ್ತೊಂದು ಉಪಯೋಗವೆಂದರೆ ಅದು ನಮ್ಮ ಅಂತಃಶಕ್ತಿಯನ್ನು, ಧೀಃಶಕ್ತಿಯನ್ನು ಉದ್ದೀಪಿಸುವುದಾಗಿದೆ.
ಪ್ರತಿ ವ್ಯಕ್ತಿಯ ಒಳಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ಬೇಕಾದ ಆತ್ಮವಿಶ್ವಾಸವನ್ನು ಯೋಗ ನಿಸ್ಸಂಶಯವಾಗಿ ಕೊಡುತ್ತದೆ. (ಯೋಗ ನನ್ನ ದಿನಚರಿಯಾದ ನಂತರವೇ ನಾನು ಮೊದಲ ಬಾರಿಗೆ ವೇದಿಕೆಯಲ್ಲಿ ನಿಂತು ಸುದೀರ್ಘವಾಗಿ ‌ಮಾತನಾಡಿದ್ದು. ನನ್ನೊಳಗೆ ಹೇಳಲೇ ಬೇಕಿದ್ದ ಸಂಗತಿಗಳಿಗೆ ಅಕ್ಷರ ರೂಪ ಕೊಟ್ಟಿದ್ದೂ ಯೋಗದ ನೆರವಿನಿಂದಲೇ.ಅತ್ಯಂತ ಕಡಿಮೆ ವಿದ್ಯಾಭ್ಯಾಸ ಇದ್ದರೂ ಕಲಿತವರೊಂದಿಗೆ ಕುಳಿತು ವಿನಯದಿಂದ ಆಲಿಸುವ ಗುಣ ಬಂದಿದ್ದು ಕೂಡ ಯೋಗದಿಂದಲೇ ಎನ್ನುವುದು ನನ್ನ ಪಾಲಿಗೆ ಹೆಮ್ಮೆ)

ಬೆಂಗಳೂರು ಮೈಸೂರು ಹುಬ್ಬಳ್ಳಿಗಳಂತಹ ಮಹಾನಗರಗಳಲ್ಲಿ ಪ್ರತಿ ಮತ್ತೊಂದು ಬೀದಿಗೆ ಯೋಗಕೇಂದ್ರಗಳಿವೆ. ಶಿಬಿರಾರ್ಥಿಗಳಾಗಿ ಬಂದವರಿಗೆ ಸೋಹಂ ಕ್ರಿಯಾ ಸುದರ್ಶನ ಕ್ರಿಯೆಗಳನ್ನು ಮುಫ್ಪತ್ತಾಗಿ ಹೇಳಿಕೊಡುವ ಮೂಲಕ ಇಡೀ ದೇಹವೇ ಹಗುರಾಗುವ ಒಂದು ಅಲೌಕಿಕ ಅನುಭವ ಯೋಗಾಸಕ್ತರಿಗೆ ದಕ್ಕಿತು.

ಹೀಗೆ ಎರಡು ದಶಕದ ಹಿಂದೆ ಆರಂಭವಾದ ಈ ಯೋಗಕಾಲದ ಸಾಕ್ಷಿ ಪ್ರಜ್ಞೆಯಲ್ಲಿ ಧರ್ಮ ಎಂದೂ ಮುನ್ನೆಲೆಗೆ ಬಂದಿರಲೇ ಇಲ್ಲ. ಹಿಂದೂ ಮುಸ್ಲಿಂ ಕ್ರೈಸ್ತರು ಒಟ್ಟಿಗೆ ಒಂದೇ ಶಿಬಿರದಲ್ಲಿ ಯೋಗ ಕಲಿಯುತ್ತಿದ್ದೆವು. ಸೂರ್ಯನಮಸ್ಕಾರ ಮಾಡುವಾಗ ನಮ್ಮೆಲ್ಲರ ಪೂರ್ಣ ಗಮನ ಗುರುಗಳು ಹೇಳುತ್ತಿದ್ದ ಉಸಿರಾಟದ ಕ್ರಮದ ಕಡೆಗೆ ಇರುತ್ತಿತ್ತು ಹೊರತಾಗಿ ಅನ್ಯಧರ್ಮದ ದೇವರಿಗೆ ನಾವು ವಂದಿಸುತ್ತಿದ್ದೇವೆ ಎಂಬ ಭಾವ ಬಂದಿದ್ದು ನಮಗೆ ಎಂದೂ ಕಾಣಲಿಲ್ಲ. ಪ್ರತಿಯಾಗಿ ಪ್ರತಿ ತರಗತಿ ಮುಗಿದ ನಂತರವೂ ಎಷ್ಟು ಸ್ಪೆಷಲ್ ಆಗಿತ್ತು ಇವತ್ತಿನ ಅನುಭವ ಎನ್ನುವುದನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದೆವು. ಪ್ರತಿಯೊಬ್ಬರ ಧ್ಯೇಯ ಉತ್ತಮ ಆರೋಗ್ಯ, ರೋಗನಿರೋಧಕ ಶಕ್ತಿ, ಅನಗತ್ಯ ಕೊಬ್ಬಿನ ನಿವಾರಣೆಯ ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದಷ್ಟೇ ಆಗಿತ್ತು. ಮತ್ತು ಅದರಲ್ಲಿ ಬಹುತೇಕ ಭಾಗವಹಿಸಿದವರೆಲ್ಲರೂ ಯಶಸ್ವಿಯೂ ಆಗಿದ್ದೆವು.

ಹಾಗಂತ ಯೋಗದ ಅಭ್ಯಾಸದಿಂದ ಯಾವ ಆರೋಗ್ಯ ಸಂಬಂಧಿ ಸಮಸ್ಯೆಗಳು ಬರುವುದೇ ಇಲ್ಲವೆಂದಲ್ಲ.
ಬಂದರೂ ಅದನ್ನು ಎದುರಿಸುವ ಸಾಮರ್ಥ್ಯ ದೇಹಕ್ಕೆ ಉತ್ತಮವಾಗಿರುತ್ತದೆ ಎನ್ನುವುದನ್ನು ಗುರುಗಳು ಆಗಾಗ ಮನದಟ್ಟು ಮಾಡಿಕೊಡುತ್ತಿದ್ದರು.
ಜೊತೆಗೆ ಯೋಗವೆಂದರೆ ಭಗವಂತನ ಜೊತೆಗೆ ಸಂಭಾಷಿಸುವ ಒಂದು ಅನೂಹ್ಯ ಬಗೆ ಎನ್ನುವುದನ್ನೂ, ಯೋಗ ಪದದ ಮೂಲ ಅರ್ಥವೇ ಭಗವಂತನ ಜೊತೆಗೆ ಒಂದಾಗು ಎನ್ನುವುದನ್ನೂ, ಯೋಗದ ಮೂಲಧ್ಯೇಯ ವಿನಾಧೈನ್ಯೇನ ಜೀವಿತಂ ಅನಾಯಾಸಂ ಮರಣಂ ಅಂದರೆ ಜೀವ ಇರುವವರೆಗೂ ಶಕ್ತಿಯುತವಾದ ಬಾಳುವೆ ನಡೆಸುವುದು ಮತ್ತು ಆಯಾಸವಿಲ್ಲದ ಮರಣ ಪ್ರಾಪ್ತಿಯಾಗುವುದೇ ಆಗಿದೆ ಎನ್ನುವುದನ್ನು ಮತ್ತಮತ್ತೆ ತಿಳಿಸಲಾಗುತ್ತಿತ್ತು.

ಮತ್ತೆ ಹಿಂದಕ್ಕೆ ಬರುತ್ತೇನೆ.
ಒಬ್ಬ ವ್ಯಕ್ತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿ ಬಾಳಬೇಕೆಂದರೆ ಬಾಲ್ಯದಿಂದಲೇ ದೇಹದ ಅರಿವು, ಆಹಾರ ವಿಜ್ಞಾನ ಮತ್ತು ಪರಿಸರ ಪ್ರೀತಿಯ ಕುರಿತು ಸಣ್ಣದಾಗಿಯಾದರೂ ತಿಳುವಳಿಕೆ ಹೊಂದಿರಬೇಕು. ಬಾಲ್ಯದ ಯಾವುದೇ ತಿಳುವಳಿಕೆಯೂ ತನ್ನ ಜೀವಿತಕಾಲದಲ್ಲಿ ಪೂರ್ತಿಯಾಗಿ ಜಾಗ್ರತವಾಗಿರುತ್ತದೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಆದರೆ...ನಮ್ಮ ಸಮಾಜದ ಎಲ್ಲ ಕುಟುಂಬಗಳೂ ಹೀಗೊಂದು ತಿಳುವಳಿಕೆ ಮೂಡಿಸಲು ಸಮರ್ಥವಿದೆಯೆ?

ಗ್ರಾಮೀಣ ಕುಟುಂಬಗಳ ಅರ್ಥಿಕ ಸಮಸ್ಯೆಗಳು ಈ ಸಂಗತಿಗಳ ಕಡೆಗೆ ಯೋಚಿಸಲು ಅನುವು ಮಾಡಿಕೊಡಬಹುದೇ?
ನಗರದ ಆಮಿಷದ ಜಗತ್ತು, ದುರಾಭ್ಯಾಸಗಳು, ವಿಪರೀತ ದುಡಿಮೆ, ಕುಟುಂಬದೊಡನೆ ಕಳೆಯಲು ಸಮಯವಿಲ್ಲದೇ ಇರುವುದು ಮಕ್ಕಳಿಗೆ ಮೂಲಭೂತವಾದ ಮೇಲಿನ ತಿಳುವಳಿಕೆ ಕೊಡಲು ಸಮರ್ಥವಿದ್ದಾರೆಯೇ? ಖಂಡಿತವಾಗಿಯೂ ಇಲ್ಲ.
ಹಾಗಿದ್ದ ಮೇಲೆ ಶಾಲೆಯ ಈ ಕಡ್ಡಾಯ ಯೋಗ ಶಿಕ್ಷಣಕ್ಕೆ ಧರ್ಮದ ಹೆಸರಿನಲ್ಲಿ ಅಡ್ಡಗಾಲು ಹಾಕಿದ್ದು ಯಾವ ಪುರುಷಾರ್ಥಕ್ಕೆ?

ಸೂರ್ಯನಮಸ್ಕಾರವೇ ಕಡ್ಡಾಯ ಶಿಕ್ಷಣದಲ್ಲಿ ಯಾಕೆ ಅಳವಡಿಸಲ್ಪಟ್ಟಿದೆ ಎಂದರೆ ಇದು ದೇಹದ ಸಮಸ್ತ ಅಂಗಾಂಗಳಿಗೂ ಪೂರ್ಣ ಚುರುಕತನವನ್ನು ಕೊಡುವ, ಉಸಿರಾಟದ ಕ್ರಮಬದ್ದತೆಯಿಂದಾಗಿ ಪ್ರಾಣಾಯಾಮದ ಲಾಭವೂ ಇದರಲ್ಲಿಯೇ ಸಿಗುವುದರಿಂದ ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನಗಳ ಗುಚ್ಛ ಎನಿಸಿಕೊಂಡಿದೆ.
ನೂರೆಂಟು ಬಗೆಯ ಆಸನಗಳನ್ನು ಕಲಿಸಲು ಹೋಗಿ ಮಕ್ಕಳ ಆಸಕ್ತಿ ಕುಂದಿಸುವುದಕ್ಕಿಂತ ಇಂತಹ ಪರಿಪೂರ್ಣ ಆಸನವನ್ನು ದಿನಚರಿಯಾಗಿಸುವುದು ಆ ಮೂಲಕ ಮಕ್ಕಳ ಸರ್ವಾಂಗೀಣ ಆರೋಗ್ಯವನ್ನು ಉನ್ನತೀಕರಿಸುವುದು ಗುರಿಯಾಗಿತ್ತು.

ಸದ್ಯದ ಕಾಲಘಟ್ಟದಲ್ಲಿ ಪ್ರತಿ ಕುಟುಂಬವೂ ಬೇರೆಬೇರೆ ಬಗೆಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದಾಯದ ಇಂತಿಷ್ಟು ಭಾಗ ಆಸ್ಪತ್ರೆ ಸೇರುತ್ತಿರುವ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಮಗುವಿನ ಆರೋಗ್ಯ ಉತ್ತಮವಾಗಿರುವಲ್ಲಿ ಆಹಾರ ಮುಖ್ಯ ಸಂಗತಿಯೆನಿಸಿದರೂ ಕಲಬೆರಕೆಯಿಲ್ಲದ ವಿಷ ಮುಕ್ತ ಆಹಾರ ಪ್ರಸ್ತುತ ಕನಸಿನ ಮಾತು. ಇದ್ದುದರಲ್ಲಿ ಉತ್ತಮ ಆಹಾರ ಸೇವಿಸುವ ಅಭ್ಯಾಸ ಪೋಷಕರು ಮಾಡಿಸಿದರೂ ಜಂಕ್ಫುಡ್ ಮಕ್ಕಳನ್ನು ಸೆಳೆಯುತ್ತಿದೆ. ಹೀಗಿದ್ದಾಗ ಆರೋಗ್ಯಕ್ಕಾಗಿ ಮತ್ತೇನಾದರೂ ಮಾಡಲೇಬೇಕಾದ ಅನಿವಾರ್ಯತೆ ನಮ್ಮದಾಗಿದೆ.
ಯೋಗ ಸುಲಭದಲ್ಲಿ ಸಿಗುವಾಗ, ಪಶ್ಚಿಮ ದೇಶಗಳು ಅದರ ಒಳಿತಿಗೆ ಮಾರುಹೋಗಿರುವಾಗ ನಮ್ಮದೇ ದೇಶದ ವಿದ್ಯೆಗೆ ಧರ್ಮದ ಗೋಡೆ ಕಟ್ಟಿ ಮುಂದಿನ ಪೀಳಿಗೆಯನ್ನು ಅನಾರೋಗ್ಯದ ಮಡುವಿನಲ್ಲಿ ಬಿಡುವುದು ಸಮ್ಮತವೇ?
ಮುಂದಿನ ಶೈಕ್ಷಣಿಕ ವರ್ಷದಲ್ಲಿಯಾದರೂ‌ ಯೋಗ‌ ಶಿಕ್ಷಣವನ್ನು ಶಾಲೆಗಳಲ್ಲಿ ಕಡ್ಡಾಯ ಗೊಳಿಸುವ ಕುರಿತು ಶಿಕ್ಷಣ ತಜ್ಞರು ಯೋಜನೆಗಳನ್ನು ರೂಪಿಸಬಹುದೇ?

- ನಂದಿನಿ ಹೆದ್ದುರ್ಗ

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...