ಆತ್ಮಕಥೆಯ ವಿಭಿನ್ನ ರೂಪ ‘ವೈದ್ಯ ಅರಿತ ಬದುಕಿನ ಸತ್ಯಗಳು’ 

Date: 23-09-2021

Location: ಬೆಂಗಳೂರು


ಸರಳ ಇಲ್ಲವೇ ವಿಶೇಷ ಎನ್ನಿ, ಬದುಕಿನಲ್ಲಿ ಕಂಡು ಅನುಭವಿಸಿದ್ದನ್ನು ಹೇಳುವ ಪ್ರಾಮಾಣಿಕ ಮನಸ್ಸಿನ ಅಭಿವ್ಯಕ್ತಿಯಾಗಿ, ಆತ್ಮಕಥೆಯೊಂದರ ವಿಭಿನ್ನ ರೂಪವಾಗಿ ಮೂಡಿರುವ ಡಾ. ಟಿ.ವಿ. ಚಂದ್ರಶೇಖರ ಅವರ ‘ವೈದ್ಯ ಅರಿತ ಬದುಕಿನ ಸತ್ಯಗಳು’ ಕೃತಿಯು, ಅನುಭವಗಳ ಒಳನೋಟಗಳನ್ನು ತೋರುವ ಸೂಕ್ಷ್ಮದರ್ಶಕದಂತಿದೆ ಎಂದು ಅಭಿಪ್ರಾಯಪಟ್ಟ ಪತ್ರಕರ್ತ ವೆಂಕಟೇಶ ಮಾನು ಅವರು ವಿಶ್ಲೇಷಿಸಿದ ಬರಹವಿದು.

ವ್ಯಕ್ತಿ-ಘಟನೆ-ನೋವು-ನಲಿವು ಹೀಗೆ...ಬದುಕಿನ ಅನುಭವ ಭಂಡಾರದಿಂದ ಎಳೆದೆಳೆದು ತಂದ ನೆನಪುಗಳಿಗೆ ಅಕ್ಷರ ರೂಪ ನೀಡುವುದು ‘ಆತ್ಮಕಥೆ’. ಈ ಎಲ್ಲ ಅನುಭವಗಳ ಆಳಕ್ಕಿಳಿದು ಪಡೆದ ‘ಅನುಭಾವ’ಗಳ ಒಟ್ಟು ಮೊತ್ತದ ದಾಖಲೆಯೂ ಆತ್ಮಕಥೆಯೇ! ಅದು, ಕುದಿಸಿದ ಹಾಲಿನ ಕೆನೆಯಂತೆ ಪ್ರಮಾಣದಲ್ಲಿ ಸ್ವಲ್ಪವಿದ್ದರೂ ಹಾಲಿಗಿಂತ ರುಚಿಯಾಗಿರುತ್ತದೆ. ಅಂತಹ ಕೆನೆ ರೂಪದ ‘ಆತ್ಮಕಥೆ-‘ವೈದ್ಯ ಅರಿತ ಬದುಕಿನ ಸತ್ಯಗಳು’. ಈ ಕೃತಿಯು ಲೇಖಕರ ಅನುಭವಗಳ ಒಳನೋಟಗಳನ್ನು ತೋರುವ ಸೂಕ್ಷ್ಮದರ್ಶಕದಂತಿದೆ.

ಲೇಖಕ ಡಾ. ಟಿ.ವಿ. ಚಂದ್ರಶೇಖರ ಬೆಂಗಳೂರಿನವರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಇವರಿಗೆ ತಾಯಿ ಚಿಕ್ಕಯಲ್ಲಮ್ಮಳೇ ಅವರ ಬದುಕಿನ ಪ್ರೀತಿ. ಅದೇ ಪ್ರತಿಯೊಬ್ಬರ ಭವಿಷ್ಯದ ‘ಉಸಿರು’ ಆಗಬೇಕು ಎಂಬ ಆಶಯದ ಪ್ರತೀಕವಾಗಿ ತಾಯಿಯೂ ಒಳಗೊಂಡು ತಮ್ಮ ಮೊಮ್ಮಗ ಕು. ಆಕ್ಸೆಲ್ ಚಂದ್ರನಿಗೆ ಕೃತಿ ಅರ್ಪಿಸಿದ್ದು, ಅವರ ಬರಹ ಹಿಂದಿನ ಮೂಲ ಪ್ರೇರಣೆ. ಲೇಖಕರೇ ಹೇಳುವಂತೆ ‘ನನ್ನ ತಾಯಿ ಹೇಳಿಕೊಟ್ಟ ಬದುಕಿನ ಮಾತುಗಳನ್ನು ನಂಬಿಯೇ ಬದುಕಿದ್ದೇನೆ. ಕೃತಿಯ ಮೂಲಕ ನನ್ನ ತಾಯಿ ಹೇಳಿಕೊಟ್ಟ ಅನೇಕ ಸತ್ಯಗಳನ್ನು ದಾಖಲಿಸಿದ್ದೇನೆ’ ತಾಯಿಯ ಅನುಭವದ ಅರಿವಿನ ಮೂಲಕ ಪಡೆದ ಅನುಭಾವದ ಮಾತುಗಳನ್ನು ತಮ್ಮ ಬದುಕಿನದ್ದಕ್ಕೂ ಅನ್ವಯಿಸಿ, ಅವುಗಳ ‘ಸತ್ಯ’ತೆ ಯನ್ನು ಒರೆಗೆ ಹಚ್ಚಿ, ಅಂತಿಮವಾಗಿ ಕಂಡುಕೊಂಡ ‘ಸತ್ಯ’ವನ್ನು ದಾಖಲಿಸಿದ್ದಾರೆ. ಹೀಗಾಗಿ, ಇಲ್ಲಿಯ ಎಲ್ಲ ವಿಚಾರದ ಕೇಂದ್ರ ತಾಯಿ. ಅವಳ ವಿಚಾರ ವ್ಯಾಪ್ತಿಯೇ ಲೇಖಕರ ಕಾಣ್ಕೆಯ ಪರಿಧಿ. ಚಿಕ್ಕ ಚಿಕ್ಕ ಸಂದೇಶಗಳ ಮೂಲಕ ಆತ್ಮಕಥೆಯನ್ನು ಚೊಕ್ಕವಾಗಿ ನಿವೇದಿಸಿರುವ ಲೇಖಕರು, ಬೀಜರೂಪದಲ್ಲಿ ಬದುಕಿನ ಅಗಾಧತೆಯನ್ನು ತೋರಿದ ಕೃತಿ ‘ವೈದ್ಯ ಅರಿತ ಬದುಕಿನ ಸತ್ಯಗಳು’. ಇಲ್ಲಿ ಸಂಸಾರ, ಸುತ್ತಲಿನ ಸಮಾಜ, ರಾಜಕಾರಣ, ನ್ಯಾಯಾಂಗ ಹೀಗೆ ಲೌಕಿಕತೆ ಹಾಗೂ ವ್ಯಕ್ತಿಯ ಅಲೌಕಿಕತೆಯ ಒಳನೋಟಗಳಿವೆ. ಸಾಂದರ್ಭಿಕ ವಿವರಣೆಗಳಿಲ್ಲ. ಅವುಗಳ ವಿಸ್ರರಣೆಯ ಗೋಜು ಇಲ್ಲ. ತಂತ್ರ-ಶೈಲಿ, ವಸ್ತು, ವರ್ಣನೆ ಹೀಗೆ ಅನಗತ್ಯ ಸಂಗತಿಗಳ ಅಬ್ಬರವಿಲ್ಲ. ಲೇಖಕರೇ ಹೇಳುವಂತೆ ‘ಬದುಕು ಕಲಿಸಿದ್ದನ್ನು ನನಗೆ ತೋಚಿದ ರೀತಿಯಲ್ಲಿ ದಾಖಲಿಸಿದ್ದೇನೆ’ ಎಂಬುದು.

ಜೀವನವನ್ನು ಅರಿತು ಬಾಳು: ಇಂಗ್ಲೆಂಡ್ ಹಾಗೂ ಸೌದಿ ಅರೇಬಿಯಾದಲ್ಲಿ ಸುಮಾರು 30 ವರ್ಷ ಕಾಲ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸಿದ್ದ ಲೇಖಕರ ಬದುಕಿನ ಕಾಣ್ಕೆಯ ಬೇರುಗಳು ತಾಯಿಯ ಸಂಸ್ಕಾರದ ಪ್ರತೀಕವಾಗಿವೆ. ‘ಜೀವನವನ್ನು ಅರಿತು ಬಾಳು’ ಎಂಬ ಹಿರಿಯರ ಮಾತು ಅವರ ಬದುಕಿನ ದಾರಿಯುದ್ದಕ್ಕೂ ಚೆಲ್ಲಿದ ಬೆಳಕು.ಪ್ರತಿ ಹೆಜ್ಜೆಗೂ ಅನುಭವಿಸಿದ್ದನ್ನೇ ಜೀವನ ಸಂದೇಶಗಳಾಗಿ ಪಡಿಮೂಡಿವೆ. ಸುಭಾಷಿತಗಳು, ಗಾದೆಗಳು, ಮಹಾತ್ಮರ ಚಿಂತನೆಗಳು, ಮಹನೀಯರ ಜೀವನ ಚರಿತ್ರೆಗಳ ಮೂಲಕ ಪಡೆದ ಜ್ಞಾನಕೋಶಗಳಾಗಿ ಲೇಖಕರ ಕಾಣ್ಕೆಗಳು ಸಹ ಇವೆ. ಆದರೆ, ಶಾಶ್ವತವಾಗಿ ಸ್ಥಾಪಿತ ಸತ್ಯಗಳಿಗೆ ಅವರು ತಮ್ಮ ಅನುಭವದ ಅರಿವಿನ ಸ್ಪರ್ಶ ನೀಡಿದ್ದು, ಈ ಸಂದೇಶಗಳು ಹೊಸತನ ಪಡೆದಿದೆ. ಉದಾ: 1. ಅತಿಯಾದ ಜಿಪುಣತನ ಕೆಟ್ಟ ಗುಣ, ಅದು ಕಡು ಬಡತನದ ಕುರುಹು ಅಲ್ಲ; ನಮ್ಮ ದೌರ್ಬಲ್ಯವೇ ಸರಿ. 2. ಜೀವನದಲ್ಲಿ ಎಷ್ಟು ದುಡಿಯುತ್ತಿರುವೆ ಎನ್ನುವುದಕ್ಕಿಂತ ಎಷ್ಟು ಉಳಿಸಿದೆ ಎನ್ನುವುದೇ ಮುಖ್ಯ. ಹಣ ಮತ್ತು ಅದರ ಸದ್ಬಳಕೆಯಲ್ಲಿ ಜಾಣ್ಮೆ ಇರಲಿ, 3. ಗೆಲುವಿಗೆ ನೂರು ಯಶಸ್ವಿ ಸೂತ್ರಗಳಿವೆ ಇವುಗಳಲ್ಲಿ ನಿಮ್ಮ ಸಾಧನೆಯ ಸೂತ್ರವನ್ನು ನೀವೇ ಕಂಡುಕೊಳ್ಳಬೇಕು. 4. ವಿನಯ, ವಿಧೆಯತೆ ಇಲ್ಲದ ರೂಪ, ಧನ, ಪಾಂಡಿತ್ಯದ ಸಮ್ಮಿಶ್ರಣ ಅತ್ಯಂತ ಅಪಾಯಕಾರಿ ….ಇತ್ಯಾದಿ

ಸಂಸಾರಿಕ 1. ಸುಂದರ ರೂಪ ಲಾವಣ್ಯದ ಸುಂದರ ಸ್ತ್ರೀಯಳ ಮನದಾಳದಲ್ಲಿ ಅಸೂಹೆ ಅಡಗಿರುತ್ತದೆ. 2. ಜಾಹೀರಾತಿನಲ್ಲಿ ಕಂಡ ಸುಂದರ ಚಲುವೆಯನ್ನು ಆತುರದಲ್ಲಿ ಪ್ರೀತಿಸಿ ವಿವಾಹವಾದರೆ ಬಾಳು ಕಂಗೆಡುತ್ತದೆ. 3. ಮಗುವನ್ನು ದುಷ್ಟನನ್ನಾಗಿ ಮಾಡುವುದು ಕಷ್ಟವಲ್ಲ; ಅದನ್ನು ಅತೀಯಾಗಿ ಪ್ರೀತಿಸಿ ಇತ್ಯಾದಿ

ವೃತ್ತಿ ಸಂಬಂಧಿ ಒಳನೋಟಗಳು: ದೇವರ ನಂತರದ ಸ್ಥಾನವನ್ನು ವೈದ್ಯರಿಗೆ ನೀಡುವುದು ನಮ್ಮ ಪ್ರಾಚೀನ ನಂಬಿಕೆ. ಹೀಗಾಗಿ, ವೈದ್ಯರೊಬ್ಬರು ಬದುಕಿನ ಕುರಿತು ಹೇಳುತ್ತಿದ್ದರೆ ಅದು ಸತ್ಯವಲ್ಲದೇ ಬೇರೆ ಇರಲಿಕ್ಕಿಲ್ಲ ಎಂಬುದೇ ಹೆಚ್ಚು. ಅದಕ್ಕೆ, ಒಂದಿನಿತೂ ಚ್ಯುತಿ ಬರದ ಹಾಗೆ ತಮ್ಮ ಅನುಭವಗಳನ್ನು ದಾಖಲಿಸುವ ಮೂಲಕ ಬದುಕಿನ ವಿಪರ್ಯಾಸಗಳನ್ನು ತೋರಿದ್ದಾರೆ. ಉದಾ: 1. ನೋವು , ರೋಗಿಗೆ ಎಚ್ಚರದ ಗಂಟೆ, ವೈದ್ಯನಿಗೆ ಅದು ಅಪಾಯದ ಸೂಚನೆ. 2. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಈ ಲೋಕದಲ್ಲೇ ನರಕ ತೋರುವ ಕ್ಷೇತ್ರಗಳು. 3. ವೈದ್ಯ ಪುಣ್ಯಕೋಟಿ ಕತೆಯ ಹಸುವಾದರೂ, ಆತನ ಮೇವಿಗೆ ಬೇಕು ಕೋಟಿ ಕೋಟಿ ಹಣ. ಹಾಲು ಅಮೃತವಾದರೂ, ಅದು ಉಳ್ಳವರಿಗೆ ಮಾತ್ರ ಮೀಸಲು. 4. ರೋಗಿಯು ದುಶ್ಚಟಗಳಿಂದ ದೂರ ಇರುವಂತೆ ಉಪದೇಶಿಸುವ ಮೊದಲು ವೈದ್ಯರು ಧೂಮಪಾನ, ಮದ್ಯಸೇವನೆಯಿಂದ ದೂರ ಇರಬೇಕು.5. ಒಬ್ಬ ನಿಷ್ಠ ವೈದ್ಯನಿಗೆ ಪ್ರತಿಯೊಬ್ಬ ಹೊಸ ರೋಗಿಯು ಕಲಿಕೆಯ ಪಾಠವಾಗುತ್ತಾನೆ. 6. ಬಂಜೆತನ ನಿವಾರಣೆಗೆ ವೈದ್ಯಲೋಕದಲ್ಲಿ ಅನ್ವೇಷಣೆಗಳುಂಟು. ಆದರೆ, ಹಣವಿದ್ದರೆ ಎಂತಹವರಾದರೂ ವಂಶೋದ್ಧಾರಕರನ್ನು ಪಡೆಯಬಹುದು. 7.ನಿರ್ಲಕ್ಷ್ಯವು ರೋಗಿಯ ಜೀವಕ್ಕೆ ಅಪಾಯವಾದರೆ ಅದು ವೈದ್ಯನ ವೃತ್ತಿಗೆ ದ್ರೋಹವಾಗುತ್ತದೆ... ಇತ್ಯಾದಿ

ರಾಜಕಾರಣ, ನ್ಯಾಯಾಂಗ: 1.ಎರೆಹುಳುವೇ ರೈತನ ನೈಜ ಸ್ನೇಹಿತ. ರೈತರ ಮಿತ್ರರೆಂದು ಹೇಳುವ ರಾಜಕಾರಣಿಗಳು ಅವರ ನೆಲದ ಮಣ್ಣನ್ನೇ ಸ್ವಾರ್ಥಕ್ಕಾಗಿ ಚಿನ್ನದ ಬೆಲೆಗೆ ಮಾರುತ್ತಾರೆ. 2. ಕಾನೂನು ತನ್ನ ಪರ ಎಂದು ವಾದಿ-ಪ್ರತಿವಾದಿಗಳು ಹೇಳಿಕೊಳ್ಳುತ್ತಾರೆ. ಬೇರೆ ಬೇರೆ ನ್ಯಾಯಾಧೀಶರ ಸಮ್ಮುಖದಲ್ಲಿ ತೀರ್ಪುಗಳು ಬೇರೆ ಬೇರೆಯೇ ಆಗಿರುತ್ತವೆ. ಸತ್ಯ ಹುಡುಕಾಟ ನಡೆದೇ ಇದೆ. 3. ಶಾಸಕಾಂಗ, ರಾಜ್ಯಾಂಗ, ನ್ಯಾಯಾಂಗದ ಮನೆಗಳು ಈಗ ರೆಸಾರ್ಟ್ ಗಳಾಗಿ ಪರಿವರ್ತನೆಗೊಂಡಿವೆ...ಇತ್ಯಾದಿ

ಮನೋವಿಜ್ಙಾನ 1. ಮನಸ್ಸಿನಲ್ಲಿ ಕಾಡುವ ಪ್ರತಿ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ಪ್ರಯೋಜನವಿಲ್ಲ. ಅದು ನೆಮ್ಮದಿ ಹಾಳು ಮಾಡುತ್ತದೆ. ಆದ್ದರಿಂದ, ಕೆಲವು ಪ್ರಶ್ನೆಗಳನ್ನು ಹಾಗೆಯೇ ಉಳಿಸುವುದು ಉತ್ತಮ. 2. ಅರೆ ಮನಸ್ಸಿನ ಒಪ್ಪಿಗೆ ಯಾವತ್ತೂ ಸಮ್ಮತವಲ್ಲ; ಅದು ಬರೀ ಪ್ರಶ್ನೆಗಳಿಂದ ಕೂಡಿರುತ್ತದೆ. 3. ನಾಲಿಗೆ ಮೌನಕ್ಕೆ ಜಾರಿದರೆ ಕಣ್ಣು ಪ್ರಬಲವಾಗಿ ಮಾತನಾಡುತ್ತದೆ. 4. ಮನೋವೇದನೆಯು ಆಡುವ ಮಾತಿಗಿಂತ ಮುಖದ ಭಾವದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾಣುತ್ತದೆ...ಇತ್ಯಾದಿ.

ಅಲೌಕಿಕ: 1 ಸಕಲ ಅವಗಡಗಳಿಗೆ ಶನೀಶ್ವರನೆಂದಿಗೂ ಕಾರಣನಲ್ಲ 2. ತನುವು ಬಾಹ್ಯ ಸೌಂದರ್ಯಕ್ಕೆ ಹಂಬಲಿಸಿದರೆ ಮನವು ಆತ್ಮ ಸೌಂದರ್ಯಕ್ಕಾಗಿ ಮರುಗುತ್ತದೆ. 3. ಮೃತ್ಯುವಿಗೆ ಅಂಜಿದರೆ ಬದುಕು ಶೂನ್ಯ; ಸಾವಿನ ಭಯವು ವಿವೇಚನೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. 4. ಇತರರ ಒಳಿತಿಗಾಗಿ ನಿಮ್ಮ ಪ್ರಾರ್ಥನೆ, ಅಂತಃಕರಣ ಮಿಡಿಯುತ್ತಿದ್ದರೆ ಅದೇ ಋಣ ಸಂದಾಯವಾಗಬಹುದು..ಇತ್ಯಾದಿ

ವ್ಯಕ್ತಿಯ ಅನುಭವಗಳು ಜೀವನ ಸಂದೇಶಗಳಾಗಿ ಇಲ್ಲಿಯ ಪಡಿಮೂಡಿವೆ. ಈ ವಿಚಾರಗಳು ಹೊಸತಲ್ಲ ಎನಿಸಿದರೂ ಅವು ಯಾರದೋ ಪಡಿಯಚ್ಚಿನಂತಿರದೇ, ಲೇಖಕರು ತಮ್ಮ ಅನುಭವದ ಬೆಳಕಿನಲ್ಲಿ ತಮ್ಮದೇ ನುಡಿಗಟ್ಟುಗಳ ಮೂಲಕ ಹೇಳುವ ಉತ್ಸಾಹ, ಓದುಗರಿಗೆ ಆಪ್ತವೆನಿಸುತ್ತವೆ. ಹೀಗಾಗಿ, ‘ಮಾಡದ ತಪ್ಪುಗಳಿಂದ ಪಾಠ ಕಲಿಯುವುದಕ್ಕಿಂತ ತಪ್ಪುಗಳನ್ನು ಮಾಡಿ ಪಾಠ ಕಲಿತವರಿಂದ ಮಾರ್ಗದರ್ಶನ ಪಡೆದರೆ ಒಳ್ಳೆಯದು’ ಎಂಬ ಲೇಖಕರ ವಿಚಾರಗಳೊಂದಿಗೆ ಓದುಗ ಹೆಜ್ಜೆ ಹಾಕುತ್ತಾನೆ. ಕೆಲವು ಅನುಭವಗಳು ಮನೋವೈಜ್ಞಾನಿಕ ಸಿದ್ಧಾಂತಗಳಿಗೆ ಉತ್ತಮ ನಿರೂಪಣೆಗಳೂ ಆಗಿವೆ. ಪ್ರಸ್ತುತ ಸಾಮಾಜಿಕ-ರಾಜಕಾರಣದ ಸನ್ನಿವೇಶ ಕುರಿತ ಅವರ ಅನುಭವಗಳ ಹಿಂದೆ ಅಸಮಾಧಾನ, ಆಕ್ರೋಶ ಇರುವುದೂ ಸಹ ಅವರ ಸಾಮಾಜಿಕ ಹೊಣೆಗಾರಿಕೆಗೆ ದ್ಯೋತಕ. ದೇಹದ ಅಗತ್ಯಗಳ ಸುತ್ತವೇ ಸುಳಿಯದ ಈ ವೈದ್ಯ (ಡಾ. ಟಿ.ವಿ. ಚಂದ್ರಶೇಖರ) ಲೇಖಕರು, ಸಮಾಜ, ಪ್ರಕೃತಿ, ಪರಿಸರ ಹಾಗೂ ಮಾನಸಿಕ ನೆಲೆಯಲ್ಲಿ ಬದುಕನ್ನು ಗ್ರಹಿಸಲು ಯತ್ನಿಸಿ, ಧನಾತ್ಮಕ ಅಂಶಗಳಿಗೆ ಸ್ಪಂದಿಸುವ-ಋಣಾತ್ಮಕ ಅಂಶಗಳಿಗೆ ಪ್ರತಿಕ್ರಿಯಿಸುವ ಎಚ್ಚರವನ್ನು ತೋರಿದ್ದು ಹಾಗೂ ಅದರ ಪಾಲನೆಯ ಆಶಯವನ್ನು ಒಳಗೊಂಡಿರುವ ಕೃತಿ ‘ವೈದ್ಯ ಅರಿತ ಬದುಕಿನ ಸತ್ಯಗಳು’. ಕಂಡಿದ್ದನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸಿದ್ದೇ ಇದರ ಸೌಂದರ್ಯ.

(ಪುಟ: 120, ಬೆಲೆ: 130 ರೂ, ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ -2021)

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...