ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

Date: 06-12-2023

Location: ಬೆಂಗಳೂರು


ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್ರಕಾಶನ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ ಪ್ರೊ. ಎಚ್.ಟಿ. ಪೋತೆ ಅವರ ನಾಲ್ಕು ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮವು 2023 ಡಿಸೆಂಬರ್ 06 ಬುಧವಾರದಂದು ನಡೆಯಿತು.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ. ನಟರಾಜ ಬೂದಾಳು, “ರಾಜ್ಯಾಂಗ ಕೇಂದ್ರಿತ ಸಂವಿಧಾನದ ಜತೆಗೆ ಸಾಂಸ್ಕೃತಿಕ ಸಂವಿಧಾನದ ಅರಿವು ಮೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಪ್ರಸ್ತುತ ಕಾಲಮಾನಕ್ಕಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಪುಸ್ತಕಗಳ ಮೂಲಕವೇ ಅವರಿಗೆ ನಮನಗಳನ್ನು ಸಲ್ಲಿಸುತ್ತಿರುವುದು ಅಭಿನಂದನೀಯ. ಆಲೋಚನಾ ಕ್ರಮ ಮತ್ತು ಚಿಂತನೆಗಳಿಂದ ಮಾತ್ರ ಅಂಬೇಡ್ಕರ್ ಉಳಿಯ ಬಲ್ಲರು. ಆರಾಧನಾ ಕ್ರಮದಿಂದ ಅಂಬೇಡ್ಕರ್ ಅವರನ್ನು ಮರೆಯುತ್ತಾರೆ. ಹಾಗಾಗದಂತೆ ಎಚ್ಚರಿಕೆಯಿಂದ ಇರುವುದು ನಮ್ಮೆಲ್ಲರ ಜವಾಬ್ದಾರಿ. ಪ್ರತಿಯೊಬ್ಬರೂ ಅಸಹಜ ಜೀವನ ಕ್ರಮವನ್ನು ಅಳವಡಿಸಿಕೊಂಡಿದ್ದಾರೆ. ಕಾಲ್ಪನಿಕ ಸಮಸ್ಯೆಗಳಿಗೆ ವಾಸ್ತವದ ಪರಿಹಾರ ಸೂಚಿಸಲು ಸಾಧ್ಯವಿಲ್ಲ,” ಎಂದರು.

“ಕಾಲ್ಪನಿಕ ಸಮಸ್ಯೆಗಳಿಂದ ಮುಕ್ತಿ ಅಗತ್ಯ. ವರ್ಣಾಶ್ರಮಗಳಲ್ಲಿ ಈಗ ಎರಡೇ ಉಳಿದಿವೆ. ಬ್ರಾಹ್ಮಣ ಮತ್ತು ಶೂದ್ರ ಈ ಎರಡು ವರ್ಣಗಳಲ್ಲಿ ಶೂದ್ರರಿಗೆ ಸಾಂಸ್ಕೃತಿಕ ಯಜಮಾನ್ಯ ಸಿಕ್ಕಾಗ ಮಾತ್ರ ದೇಶದ ಎಲ್ಲರಿಗೂ ಉತ್ತಮ ಜೀವನ ಕ್ರಮ ಸಿಗಲು ಸಾಧ್ಯ,” ಎಂದು ತಿಳಿಸಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಹಾಗೂ ಭಾಷಾ ನಿಕಾಯದ ಡೀನ್ ಪ್ರೊ. ವಿಕ್ರಮ ವಿಸಾಜಿ ಅವರು ಪ್ರೊ. ಪೋತೆಯವರು ರಚಿಸಿದ ಬಾಬಾ ಸಾಹೇಬರ ಲಂಡನ್ ಮನೆಯಲ್ಲಿ (ಪ್ರವಾಸ ಕಥನ), ಎಲ್ಲರ ಅಂಬೇಡ್ಕರ್, ಮಲ್ಲಿಕಾರ್ಜುನ ಖರ್ಗೆ ಜೀವನ ಕಥನ ಹಾಗೂ ಎ ಮೆಮೈರ್ ಆಫ್ ಮಲ್ಲಿಕಾರ್ಜುನ ಖರ್ಗೆ ಎಂಬ ನಾಲ್ಕು ಪುಸ್ತಕಗಳ ಒಡಲಾಳವನ್ನು ಪರಿಚಯಿಸಿದರು.

ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಬಸವರಾಜ ಕೊನೇಕ ಮಾತನಾಡಿ, “ಪ್ರೊ. ಪೋತೆಯವರು ತಪಸ್ಸಿನೋಪಾದಿಯಲ್ಲಿ ಪುಸ್ತಕಗಳನ್ನು ರಚಿಸುತ್ತಾ ಜ್ಞಾನ ಕ್ಷಿತಿಜವನ್ನು ವಿಸ್ತರಿಸುತ್ತಿರುವುದು ಸಂತಸದ ಸಂಗತಿ,” ಎಂದರು.

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬಾಬಾ ಸಾಹೇಬ ಅಂಬೇಡ್ಕರ್ ಅವರು ಇಡೀ ದೇಶದ ಸಂಪತ್ತು. ಬುದ್ಧ, ಬಸವ, ಡಾ.ಅಂಬೇಡ್ಕರ್ ಚಿಂತನೆಗಳು ಇಡೀ ದೇಶದ ಜನರು ಮನಸ್ಸಿನಲ್ಲಿ ಮೂಡಿಸಿಕೊಂಡಾಗ ಆ ದಾರ್ಶನಿಕರ ಆಶಯಗಳು ಅರ್ಥವಾಗುತ್ತದೆ, ಈ ನಿಟ್ಟಿನಲ್ಲಿ ಯುವಕರು, ವಿದ್ಯಾರ್ಥಿಗಳು ಓದಿನೆಡೆಗೆ ತೊಡಗಿಸಿಕೊಳ್ಳಬೇಕೆಂದರು. ಇಂದಿನ ರಾಜಕೀಯದಲ್ಲಿ ದಾರ್ಶನಿಕರ ತತ್ವ, ಸಿದ್ಧಾಂತ, ಬದ್ಧತೆಯನ್ನು ಮೈಗೂಡಿಸಿಕೊಂಡ ರಾಜಕೀಯ ಮುತ್ಸದ್ದಿ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು. ಸಮ ಸಮಾಜದ ನಿರ್ಮಾಣ, ಸಂವಿಧಾನದ ಆಶಯಗಳ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ ಎಂದರು.

ಮಾಧ್ಯಮ ಸಂಸ್ಥೆಯ ಮುಖ್ಯಸ್ಥ ಶಂಕರ ಕೋಡ್ಲಾ, ಬಿ.ಎಚ್. ನಿರಗುಡಿ, ಡಾ. ಗವಿಸಿದ್ದಪ್ಪ ಪಾಟೀಲ, ಎಸ್.ಎಂ. ಪಟ್ಟಣಕರ್, ಮಹಿಪಾಲರೆಡ್ಡಿ ಮುನ್ನೂರು, ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ, ಡಾ. ಜಯದೇವಿ ಗಾಯಕವಾಡ ಉಪಸ್ಥಿತರಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ರಾಜಧರ್ಮ ಎನ್ನುವುದು ಪ್ರಜಾಧರ್ಮಕ್ಕಿಂತ ಭಿನ್ನವಾದುದು : ನಿತಿನ್ ಪೈ

02-12-2023 ಬೆಂಗಳೂರು

ಬೆಂಗಳೂರು: 12ನೇ ಬೆಂಗಳೂರು ಸಾಹಿತ್ಯ ಉತ್ಸವವು ಲಲಿತ್ ಅಶೋಕ ಹೋಟೆಲ್ ನ ಆವರಣದಲ್ಲಿ ಭರದಿಂದ ನಡೆಯುತ್ತಿದ್ದು , ಮೊದಲ ದಿ...