ಅನುರಾಗದ ಮಧುರ ಆಲಾಪ Bandish Bandits (Indian Romantic Drama)

Date: 09-12-2021

Location: ಬೆಂಗಳೂರು


‘ಯಾರ ಬದುಕೂ ಎಂದಿಗೂ ಪರಿಪೂರ್ಣವಲ್ಲ. ಯಾವುದೋ ಒಂದು ಕೊರತೆ, ಮತ್ತೊಂದು ಹತಾಶೆ, ಇನ್ಯಾವುದೋ ಕೊರಗು ಎಲ್ಲವೂ ಇಲ್ಲಿ ಪಾತ್ರಗಳಾಗಿವೆ’ ಎನ್ನುತ್ತಾರೆ ಲೇಖಕಿ ಅಂಜನಾ ಹೆಗಡೆ. ಅವರು ತಮ್ಮ ‘ಬೆಳ್ಳಕ್ಕಿ ಸಾಲು’ ಅಂಕಣದಲ್ಲಿ Bandish Bandits ಎಂಬ ಹಿಂದಿ ವೆಬ್ ಸರಣಿಯ ಕುರಿತು ವಿಶ್ಲೇಷಿಸಿದ್ದಾರೆ.

ಪರಿಸ್ಥಿತಿಗಳಿಗೆ ತಲೆಬಾಗಿ ಹೇಗೆಂದರೆ ಹಾಗೆ ಹೊಂದಿಕೊಳ್ಳುವ ಯುವಕನೊಬ್ಬ ಎಂತಹ ಸನ್ನಿವೇಶದಲ್ಲಿಯೂ ಸೋಲನ್ನೊಪ್ಪಿಕೊಳ್ಳದೇ ಸವಾಲುಗಳನ್ನು ಆನಂದಿಸುವ ತರುಣಿಯನ್ನು ಇಷ್ಟಪಡಲಾರಂಭಿಸಿದರೆ ಆ ಸಂಬಂಧದ ಸ್ವರೂಪ ಹೇಗಿರಬಹುದು; ಏಳುಬೀಳುಗಳು, ಎಡವಟ್ಟುಗಳು, ಅಭಿಪ್ರಾಯ ಭೇದಗಳ ಜತೆಯಲ್ಲಿಯೇ ಪರಸ್ಪರರ ಒಳಿತನ್ನೇ ಬಯಸುವ ಮುಗ್ಧಪ್ರೀತಿ, ವಿರೋಧಾಭಾಸಗಳ ನಡುವೆಯೇ ಪ್ರೀತಿಯನ್ನು ಉಳಿಸಿಕೊಳ್ಳುವ ಹೋರಾಟ ಎಲ್ಲವೂ ಸೇರಿ ಆ ಸಂಬಂಧವನ್ನೊಂದು ಆಕರ್ಷಕವಾದ ಚೌಕಟ್ಟಿನಲ್ಲಿ ಬಂಧಿಸಿಡಬಹುದು! ಎಲ್ಲ ಸರಿ-ತಪ್ಪುಗಳು, ಸುಖ-ದುಃಖಗಳು, ರಾಗ-ದ್ವೇಷಗಳು ಸಹಜವಾಗಿ ಒಂದರೊಳಗೊಂದು ಬೆರೆತುಹೋಗಿ ಅಲ್ಲೊಂದು ಅಪರೂಪದ ಸಮೀಕರಣ ಕಾಣಸಿಗಬಹುದು. ಹೊರಗಿನಿಂದ ನೋಡುವವರಿಗೆ ಅದೊಂದು ಮಾದರಿಯಾಗಿಯೂ, ಅಂತಹ ವ್ಯತಿರಿಕ್ತ ಅಭಿರುಚಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವವರಿಗೆ ಅದೊಂದು ಸವಾಲಾಗಿಯೂ ಏಕಕಾಲಕ್ಕೆ ಭಿನ್ನರೂಪಗಳಲ್ಲಿ ಕಾಣಿಸಿಕೊಳ್ಳಬಹುದು. ಅಂತಹ ಎರಡು ಭಿನ್ನ ಸಿದ್ಧಾಂತಗಳ ನಡುವಿನ ಪ್ರೀತಿಯೇ Bandish Bandits.

ಮೂಲತಃ ಇದು ಸಂಗೀತವನ್ನು ಆಧರಿಸಿದ ಕಥಾಸರಣಿ. ಆಧುನಿಕವೂ, ಜನಪ್ರಿಯವೂ ಆದ ಪಾಪ್ ಸಂಗೀತ ಹಾಗೂ ಸಾಂಪ್ರದಾಯಿಕ ಶಾಸ್ತ್ರೀಯ ಸಂಗೀತ ಪ್ರಕಾರಗಳ ನಡುವಿನ ಸುಂದರವಾದ ಸಮನ್ವಯವನ್ನು ಸಾಧ್ಯವಾಗಿಸಿದ ಏಕೈಕ ಸರಣಿ ಇದು. ಶಾಸ್ತ್ರೀಯ ಸಂಗೀತವನ್ನು ಹೀಯಾಳಿಸುವ ಜನಪ್ರಿಯ ಪಾಪ್ ಗಾಯಕಿಯೊಬ್ಬಳು ಶಾಸ್ತ್ರೀಯ ಸಂಗೀತದ ಪ್ರೀತಿಯಲ್ಲಿ ಬೀಳುವುದು, ಜನಪ್ರಿಯ ಪ್ರಕಾರವನ್ನು ಸಂಗೀತವೇ ಅಲ್ಲವೆಂದು ಹೀಗಳೆಯುವ ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿಯೋರ್ವ ಪಾಪ್ ಸಂಗೀತದ ಸಹಯೋಗದೊಂದಿಗೆ ತನ್ನ ಮನೆತನದ ಮಾನ ಉಳಿಸಿಕೊಳ್ಳುವುದು, ಸಂಸಾರದ ಅಗತ್ಯಗಳಿಗಾಗಿ ಸಂಗೀತವನ್ನು ತ್ಯಾಗಮಾಡಿದ್ದ ತಾಯಿಯೋರ್ವಳು ಅನಿವಾರ್ಯ ಕಾರಣಗಳಿಂದಾಗಿ ಮಗನ ಸಂಗೀತದ ಗುರುವಾಗುವುದು, ಸಂಗೀತ ವಿದ್ಯಾಲಯದ ನಿರ್ಮಾಣಕ್ಕೆಂದು ಅಣ್ಣ ಮಾಡಿದ ಸಾಲವನ್ನು ತೀರಿಸಲೆಂದು ತನ್ನ ಸಂಗೀತ ವಾದ್ಯದ ಹಕ್ಕುಪತ್ರವನ್ನು ಮಾರಾಟ ಮಾಡುವ ತಮ್ಮ, ಅಪ್ಪ ತನ್ನಿಂದ ದೂರಮಾಡಿದ ಘರಾಣೆಯ ಉತ್ತರಾಧಿಕಾರವನ್ನು ಪಡೆದುಕೊಳ್ಳಲು ಶತಪ್ರಯತ್ನ ನಡೆಸುವ ಮಗ ಹೀಗೇ ಸಂಗೀತದ ಹಲವು ಮುಖಗಳನ್ನು ಬೇರೆಬೇರೆ ದೃಷ್ಟಿಕೋನಗಳಲ್ಲಿ ತೋರಿಸುವ ಪ್ರಯತ್ನ ಇಲ್ಲಿದೆ.

ಅದೊಂದು ರಾಜಸ್ಥಾನದ ಪುರಾತನ ಹವೇಲಿ; ಅಲ್ಲೊಂದು ಸಂಗೀತ ಪರಂಪರೆಯಿದೆ. ಅಲ್ಲಿ ನಡೆಸಲಾಗುವ ಸಂಗೀತಶಾಲೆ ಕೇವಲ ಶಾಸ್ತ್ರೀಯ ಸಂಗೀತದ ಸಾಧನೆಗಾಗಿ ಮೀಸಲಾಗಿದೆ. ಆ ಮನೆತನದ ಹಲವು ದುಃಖಭರಿತ ಕಥೆಗಳು ಹವೇಲಿಯ ಗೋಡೆಗಳ ನಡುವೆ ಸದ್ದಿಲ್ಲದೆ ಕುಳಿತು ಸಂಗೀತವನ್ನು ಆಲಿಸುತ್ತಿವೆ. ಆ ಕಥೆಗಳು ಕಣ್ಣೀರು ಸುರಿಸುವುದನ್ನು ನಿಷೇಧಿಸಲಾಗಿದೆ; ಅವುಗಳಿಗೆ ಧ್ವನಿಯಿಲ್ಲ. ತಮ್ಮತನವನ್ನೇ ಮರೆತು ಕೇವಲ ಸಂಗೀತಕ್ಕಾಗಿ, ಸಂಗೀತ ಪರಂಪರೆಯನ್ನು ಉಳಿಸುವುದಕ್ಕಾಗಿ ಬದುಕುತ್ತಿರುವವರ ಕಥೆಗಳು ಒಂದೊಂದಾಗಿ ಇನ್ನೂ ಇಪ್ಪತ್ತೆರಡರ ವಯಸ್ಸಿನಲ್ಲಿರುವ ಯುವಕನ ಬದುಕನ್ನು ಅಲ್ಲೋಲಕಲ್ಲೋಲಗೊಳಿಸತೊಡಗಿದರೆ ಹೇಗಿರಬೇಡ! ತನ್ನೆಲ್ಲ ವಯೋಸಹಜ ಆಸೆ-ಕನಸುಗಳನ್ನು ಬದಿಗೊತ್ತಿ ಮನೆ-ಮನೆತನಗಳ ಉಳಿವಿಗಾಗಿ ಹೋರಾಡುವ ಆ ಯುವಕನ ಹೃದಯದಲ್ಲೊಂದು ಪ್ರೀತಿ ಅಚಾನಕ್ಕಾಗಿ ಹುಟ್ಟಿಕೊಳ್ಳುತ್ತದೆ; ಅದೂ ಎಂಥವಳ ಮೇಲೆ! ಅವನ ಸಹಜ ಸ್ವಭಾವಗಳಿಗೆ, ಬದುಕಿನ ರೀತಿ-ನೀತಿಗಳಿಗೆ ವಿರುದ್ಧವಾದ ಜೀವನಶೈಲಿಯಿರುವ ಪಾಪ್ ಗಾಯಕಿಯ ಮೇಲೆ.
Bandish Bandits ವೆಬ್ ಸರಣಿಯ ಒಂದು ಹಾಡು: 

ಸಾಮಾಜಿಕ ಜಾಲತಾಣಗಳಲ್ಲಿ ಅಸಂಖ್ಯಾತ ಅನುಯಾಯಿಗಳನ್ನು ಹೊಂದಿರುವ ಆ ಗಾಯಕಿ ಜನಪ್ರಿಯತೆಯ ಉತ್ತುಂಗದಲ್ಲಿರುವವಳು; ತಾಯಿಯ ಸಂಕೀರ್ಣ ಪ್ರೀತಿಯನ್ನು ಅರ್ಥಮಾಡಿಕೊಳ್ಳಲಾಗದೇ, ತಂದೆಯ ಅತಿ ಪ್ರೀತಿಯನ್ನೇ ಆತ್ಮವಿಶ್ವಾಸವನ್ನಾಗಿಸಿಕೊಂಡು ಸಂಗೀತ ಸಾಧನೆಯ ಕನಸು ಕಾಣುತ್ತಿರುವವಳು. ಸಹಗಾಯಕನ ಹುಡುಕಾಟದಲ್ಲಿದ್ದವಳಿಗೆ ಆಕಸ್ಮಿಕವಾಗಿ ಕಣ್ಣಿಗೆ ಬೀಳುವ, ಶಾಸ್ತ್ರೀಯ ಸಂಗೀತದ ಸಾಧನೆಗಾಗಿ ಹಗಲುರಾತ್ರಿ ಕಷ್ಟಪಡುತ್ತಿರುವ ಯುವಕನನ್ನು ಹಠಕ್ಕೆ ಬಿದ್ದು ತನ್ನೊಂದಿಗೆ ಹಾಡಲು ಒಪ್ಪಿಸುವುದರೊಂದಿಗೆ ಇಬ್ಬರ ಬದುಕುಗಳೂ ಅನಿರೀಕ್ಷಿತವಾದ ತಿರುವನ್ನು ಪಡೆದುಕೊಳ್ಳುತ್ತವೆ. ಪ್ರೇಯಸಿಯ ಪ್ರೀತಿಯನ್ನೇ ಅನುಭವಿಸಿರದ ಹುಡುಗನೊಬ್ಬ, ಚುಂಬಿಸುವುದು ಅಂಥ ದೊಡ್ಡ ವಿಷಯವೇನಲ್ಲ ಎಂದು ಭಾವಿಸುವ ಆಧುನಿಕ ಮನಸ್ಥಿತಿಯ ಹುಡುಗಿಯೊಂದಿಗೆ ಪ್ರೀತಿಯ ಅನುಭವವನ್ನು ತನ್ನದಾಗಿಸಿಕೊಳ್ಳಲು ಹೆಣಗತೊಡಗುತ್ತಾನೆ. ಆ ಸಾಹಸದ ಮೊದಲನೆಯ ಹಂತವಾಗಿ ಪಾತ್ರಾಭಿನಯದ ಮೊರೆ ಹೋಗುತ್ತಾನೆ; ಅದರ ಪರಿಣಾಮವಾಗಿ ಹುಟ್ಟಿಕೊಳ್ಳುವ ಪ್ರೀತಿಯ ಹೊಸದೊಂದು ಪ್ರಪಂಚವನ್ನು ಅರಿವಿಲ್ಲದೇ ಪ್ರವೇಶಿಸುತ್ತಾನೆ.

ಪ್ರೀತಿಯೆನ್ನುವುದು ಹೇಗೆ ಬದುಕನ್ನು ರಚನಾತ್ಮಕವಾಗಿ ರೂಪಿಸಬಹುದು, ಪ್ರಾಮಾಣಿಕ ಉದ್ದೇಶವಿರುವ ಸಹಜ ಸಂಬಂಧವೊಂದು ಹೇಗೆ ಸಾಧನೆಯ ಹಾದಿಯನ್ನು ಸರಳಗೊಳಿಸಬಲ್ಲದು ಎನ್ನುವುದಕ್ಕೆ ಸ್ವರ, ಲಯ, ತಾಳಗಳು ಸಾಕ್ಷಿಯಾಗುತ್ತವೆ. ಮೂದಲಿಕೆ, ಅಹಂಭಾವಗಳೆಲ್ಲ ಮಾಯವಾಗಿ ಸಂಗೀತವೆನ್ನುವ ಸಂವೇದನೆ ಪ್ರೇಮವಾಗಿ, ಸಂವಹನವಾಗಿ ಇಬ್ಬರನ್ನೂ ಆವರಿಸಿಕೊಳ್ಳುತ್ತದೆ. ಮಾತುಗಳೇ ಬೇಕಿಲ್ಲದ, ಲೌಕಿಕತೆಯ ಹಂಗಿಲ್ಲದ ಜೀವನದೃಷ್ಟಿಯೊಂದು ವಿಫಲತೆಯ ಭಯವನ್ನು ದೂರಗೊಳಿಸುತ್ತದೆ. ತನ್ನ ಬದುಕಿನ ದಾರಿ ಇದಲ್ಲವೆನ್ನುವುದು ಅವನಿಗೂ ಗೊತ್ತು, ತನ್ನ ಕನಸಿನ ಪಯಣವಿನ್ನೂ ದೂರವಿದೆಯೆನ್ನುವುದು ಅವಳಿಗೂ ಗೊತ್ತು. ಸ್ಪಷ್ಟತೆಯ ಭಾವಗಳ ನೆರವಿನಿಂದ ಸೃಷ್ಟಿಯಾಗುವ ರಾಗಕ್ಕೂ, ಹಾಡಿಗೂ ಸಂಗೀತ ಮಾತ್ರ ಗೊತ್ತು; ಅನುರಾಗದ ಆಲಾಪ ಗೊತ್ತು. ಶಾಸ್ತ್ರಬದ್ಧವಾಗಿ ಸಂಗೀತವನ್ನು ಅಭ್ಯಾಸ ಮಾಡಿದವನಿಗೂ ಅಥವಾ ರಾಗ-ತಾಳಗಳ ಗಂಧಗಾಳಿಯೂ ಇಲ್ಲದೇ ಸಂಗೀತವನ್ನು ಆಸ್ವಾದಿಸುವವನಿಗೂ ಸಿಗುವ ಆನಂದದ ಅನುಭವದಲ್ಲಿ ವ್ಯತ್ಯಾಸಗಳಿಲ್ಲ; ತನ್ನನ್ನು ತಾನು ಪ್ರೀತಿಸಿಕೊಳ್ಳುವ, ಗೌರವಿಸಿಕೊಳ್ಳುವ ಪ್ರಯತ್ನದಲ್ಲಿ ಸಂಗೀತದಂಥ ಸಖ್ಯ ಇನ್ನೊಂದಿಲ್ಲ. ಕಲಿಕೆಯ ಮಾರ್ಗ-ಪ್ರಕಾರಗಳು ಯಾವುದೇ ಇರಲಿ ಅಥವಾ ಸಾಹಿತ್ಯ ಅರ್ಥವಾಗಲಿ, ಆಗದೇ ಇರಲಿ ನಮ್ಮನ್ನು ನಾವು ಮರೆಯಲು ಹಾಗೂ ಕಂಡುಕೊಳ್ಳಲು ಎರಡಕ್ಕೂ ಇರುವ ಮಾರ್ಗವೆಂದರೆ ಅದು ಸಂಗೀತ.

ಗಾಯಕ-ಗಾಯಕಿಯರ ಪ್ರೇಮವನ್ನಷ್ಟೇ ಅಲ್ಲದೇ ಅಪ್ಪ-ಮಗ, ಅಣ್ಣ-ತಮ್ಮ, ಗಂಡ-ಹೆಂಡತಿ, ಮಾವ-ಸೊಸೆ, ಗುರು-ಶಿಷ್ಯ, ಗೆಳೆತನ ಹೀಗೇ ಎಲ್ಲ ಸಂಬಂಧಗಳನ್ನು ಸಲಹುತ್ತ ಹೋಗುತ್ತದೆ ಸಂಗೀತ. ಹಳಸುತ್ತಿದ್ದ ಸಂಬಂಧಗಳೆಲ್ಲವೂ ಜೀವಂತಿಕೆಯನ್ನು ಪಡೆದುಕೊಂಡು ನಳನಳಿಸತೊಡಗುತ್ತವೆ. ಸಂಗೀತದ ವಾದ್ಯಗಳೆಲ್ಲ ಸಂಬಂಧಗಳನ್ನು ಉಳಿಸುವ ಸಾಧನಗಳಾಗಿ, ಜಡತೆಯನ್ನು ತೊಲಗಿಸುವ ರೂಪಕಗಳಾಗಿ ಹೊಸಧ್ವನಿಯನ್ನು ತಮ್ಮದಾಗಿಸಿಕೊಳ್ಳುತ್ತವೆ. ಇನ್ನೇನು ಎಲ್ಲವೂ ಮುಗಿದುಹೋಗಲಿವೆ ಎನ್ನುವ ಕ್ಷಣದಲ್ಲಿ ಸಂಗೀತವೇ ದೈವತ್ವದ ಸಂಕೇತವಾಗಿ ಕನಸುಗಳಿಗೊಂದು ಮರುಜನ್ಮವನ್ನು ಕರುಣಿಸುತ್ತದೆ. ಕೊನೆಗೂ ಮನುಷ್ಯ ಚೈತನ್ಯವನ್ನು ಕೈಹಿಡಿದು ನಡೆಸುವುದು ಕಲಾತ್ಮಕ ಒಡನಾಟವೇ ಹೊರತು ಅಧಿಕಾರ, ಅಂತಸ್ತು, ಜನಪ್ರಿಯತೆಗಳಲ್ಲ ಎನ್ನುವ ಸೂಕ್ಷ್ಮವೊಂದು ಕಣ್ಣೆದುರು ತೆರೆದುಕೊಳ್ಳುತ್ತ ವಾಸ್ತವದ ನಿರಾಶೆ-ತಲ್ಲಣಗಳನ್ನು ತಣ್ಣಗಾಗಿಸುತ್ತದೆ. ಯಾವ ಹಂಬಲವನ್ನು ಹೊತ್ತು ಬದುಕಿನುದ್ದಕ್ಕೂ ಹೋರಾಟ ನಡೆಸುತ್ತೇವೆಯೋ ಆ ಹೋರಾಟವೇ ನಿಜದಲ್ಲಿ ಅಸ್ತಿತ್ವದಲ್ಲಿಲ್ಲ, ಜೀವಂತವಾಗಿರುವ ಬಯಕೆಗಳ ನಿಜರೂಪ ಸುಲಭವಾಗಿ ಅರಿವಿಗೆ ಸಿಕ್ಕುವಂಥದ್ದಲ್ಲ ಎನ್ನುವ ಸತ್ಯ ಎದುರು ನಿಂತು ಮುಗುಳ್ನಕ್ಕಂತಾಗುತ್ತದೆ.

ಯಾರ ಬದುಕೂ ಎಂದಿಗೂ ಪರಿಪೂರ್ಣವಲ್ಲ. ಯಾವುದೋ ಒಂದು ಕೊರತೆ, ಮತ್ತೊಂದು ಹತಾಶೆ, ಇನ್ಯಾವುದೋ ಕೊರಗು ಎಲ್ಲವೂ ಇಲ್ಲಿ ಪಾತ್ರಗಳಾಗಿವೆ. ಅಪೂರ್ಣ ಭಾವಗಳು, ಪರಿಪೂರ್ಣವೆನ್ನಿಸದ ಸಂಗತಿಗಳು ಮನೆಮನೆಯ ಕಥೆಗಳಾಗಿ, ಬಚ್ಚಿಟ್ಟ ವ್ಯಥೆಗಳಾಗಿ ನಿಟ್ಟುಸಿರಿನಲ್ಲಿ ಪರ್ಯವಸಾನಗೊಳ್ಳುತ್ತವೆ. ಶ್ರವಣದೋಷವೊಂದು ಸಂಗೀತ ಸಾಮ್ರಾಟನ ಇಚ್ಛಾಶಕ್ತಿಯ ದುರಂತ ಸಾವಿನಂತೆ, ಮನೆಯ ಮೇಲಿನ ಸಾಲ ತಿಳಿದೂ ಮಾಡಿದ ತಪ್ಪಿನ ಪಶ್ಚಾತ್ತಾಪದಂತೆ, ತನ್ನದೇ ಸೃಷ್ಟಿಯಾದ ಸಂಗೀತ ವಾದ್ಯದ ಹಕ್ಕು ಬಿಟ್ಟುಕೊಡುವ ಅಸಹಾಯಕತೆ ಮುಗಿದುಹೋದ ಕನಸಿನಂತೆ, ಪಾಂಡಿತ್ಯವಿದ್ದೂ ಅನುಭವಿಸುವ ಸೋಲು ಮುರಿದುಬಿದ್ದ ಪ್ರೇಮದಂತೆ, ಜನಪ್ರಿಯತೆಯನ್ನು ತ್ಯಜಿಸಿ ಜ್ಞಾನಕ್ಕಾಗಿ ಹಂಬಲಿಸುವ ನಿರ್ಧಾರವೊಂದು ಮುಗಿಯದ ಪಯಣದಂತೆ ಭಾಸವಾಗಿ ಸಂತಾಪದ ಭಾವ ಆವರಿಸಿಕೊಳ್ಳುತ್ತದೆ. ತನ್ನದೇ ಒಳಿತಿಗಾಗಿಯೋ, ತನ್ನವರಿಗಾಗಿಯೋ ಈ ಕ್ಷಣದವರೆಗೂ ತನ್ನದೆಂದುಕೊಂಡಿದ್ದ ಯಾವುದೋ ಒಂದು ಸಂಗತಿಯನ್ನೋ ಅಥವಾ ಸಂತೋಷವನ್ನೋ ತ್ಯಾಗಮಾಡುವ ಸಂದರ್ಭವೇ ಮನುಷ್ಯನ ನಿಜವಾದ ಶಕ್ತಿ-ಸಾಮರ್ಥ್ಯಗಳನ್ನು ಅಳೆದು, ಭವಿಷ್ಯವನ್ನು ನಿರ್ಧರಿಸಿಬಿಡುವ ಹಣೆಬರಹದಂತೆ ಭಾಸವಾಗುವುದು ಕಹಿಯೆನ್ನಿಸುವ ಸತ್ಯ.

ಬದುಕೇ ಒಂದು ಮಧುರವಾದ ಸಂಗೀತದಂತೆ; ಗಾಯಕರೂ ನಾವೇ ಕೇಳುಗರೂ ನಾವೇ! ಆಸ್ವಾದಿಸುವ ಮನಸ್ಸಿದ್ದರೆ ಎಲ್ಲ ಸಣ್ಣಪುಟ್ಟ ಸಂಗತಿಗಳಲ್ಲೂ ಸ್ವರ, ಲಯ, ತಾಳಗಳನ್ನು ಹುಡುಕುತ್ತಲೇ ಸಾಗುವ ಅಗತ್ಯವಿದೆ; ಎಂತಹ ಪರಿಸ್ಥಿತಿಯಲ್ಲೂ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಯಿದೆ. ಆಗಲೇ ಹಾಡುವ ಪ್ರತಿ ಹಾಡಿಗೂ ಅದರದೇ ಆದ ಭಾವವೂ, ಭಾವಶುದ್ಧಿಯೂ ಲಭ್ಯವಾದೀತು! ಹೃದಯಗಳನ್ನು ಜೋಡಿಸುವುದು ಗಾಯಕನ ಧರ್ಮ. ಶುದ್ಧವಾದ ಸಂಗೀತವನ್ನು ಕಲಿಯುತ್ತ, ಹಾಡುತ್ತ, ಕಲಿಸುತ್ತ ಅವರವರ ಪಾಲಿನ ಗಾಯನವನ್ನು ನಿಭಾಯಿಸುತ್ತ ಸಾಗಿದಾಗಲೇ ಹೊಸಹೊಸ ರಾಗಗಳು ಹುಟ್ಟಿಕೊಳ್ಳಲು ಸಾಧ್ಯ. ಹುಟ್ಟುವ ಪ್ರತಿ ರಾಗಕ್ಕೂ ಅದರದೇ ಆದ ಮಾಧುರ್ಯವಿದೆ; ಆ ನಾದವೇ ಕಳವಳದ ಪಯಣಕ್ಕೊಂದು ಹೊಸಮಾರ್ಗವನ್ನು ತೋರುವ, ಭಯಭ್ರಾಂತ ಹೃದಯಗಳನ್ನು ಕಾಪಾಡುವ, ಪ್ರೀತಿ-ವಿಶ್ವಾಸಗಳ ನಂದಾದೀಪ ಬೆಳಗುವ, ಜೀವಂತಿಕೆಯನ್ನು ಪಸರಿಸುವ ಬೆಳಕಾಗಿ ಆವರಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ.

ಈ ಅಂಕಣದ ಹಿಂದಿನ ಬರಹಗಳು:
ಆಧುನಿಕ ಲೋಕದ ಆತ್ಮಾವಲೋಕನ MADE IN HEAVEN (INDIAN ROMANTIC DRAMA)
ನೋವು-ನಲಿವುಗಳ ಪಂಚಾಯಿತಿ PANCHAYAT (HINDI COMEDY-DRAMA)
ಬಿಡುಗಡೆಯ ಹಾದಿಯ ಪಿಸುಮಾತು IT'S OKAY TO NOT BE OKAY(KOREAN DRAMA)

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...