ಬಹುತ್ವದ ಅರ್ಥ-ಸುಳ್ಳು ಮತ್ತು ಸತ್ಯ

Date: 15-12-2020


ಆಫ್ರಿಕನ್ ಸಂಸ್ಕೃತಿ, ಅಸ್ಮಿತೆ, ರಾಜಕಾರಣ, ರಾಷ್ಟ್ರೀಯತೆ, ವಸಾಹತುಶಾಹಿ, ಜನಾಂಗೀಯ ತತ್ವಶಾಸ್ತ್ರ ಇಂತಹ ಪರಿಕಲ್ಪನೆಗಳನ್ನು‘ಸಾಂಸ್ಕೃತಿಕ ಬಹುತ್ವ’ದ ನೆಲೆಯಲ್ಲಿ ಹೇಗೆ ಗ್ರಹಿಸಬೇಕು ಎಂದು ವಿಶ್ವ ಖ್ಯಾತಿಯ ಚಿಂತಕ ಪಾಲಿನ್ ಹಾನ್ ಟಾನ್ ಜಿ ಅವರ ವಿಚಾರಗಳನ್ನು ವಿಶ್ಲೇಷಣಾತ್ಮಕವಾಗಿ ಮಂಡಿಸಿದ ‘ಬಹುತ್ವದ ಅರ್ಥ :ಸುಳ್ಳು ಮತ್ತು ಸತ್ಯ’ ಎಂಬ ಪ್ರಬಂಧದ ಸಾರವನ್ನು ಲೇಖಕ ಕೇಶವ ಮಳಗಿ ಅವರು ತಮ್ಮ ‘ಕತ್ತಲೊಳಗಣ ಬೆಳಕು; ಆಫ್ರಿಕನ್ ಸಂಕಥನ ಸರಣಿ ಬರಹದ ಈ ಅಂಕಣದಲ್ಲಿ ನೀಡಿದ್ದಾರೆ.

ಪಾಲಿನ್‌ ಹಾನ್‌ಟಾನ್‌ಜಿ: (Paulin Hountondji- 1942) ಆಫ್ರಿಕ ಖಂಡದ ಬೆನಿನೀಸ್‌ ಗಣರಾಜ್ಯದವರು. ಕಳೆದ ಐದು ದಶಕಗಳಿಂದ ಅವರು ಪ್ರಸ್ತುತಪಡಿಸುತ್ತಿರುವ-ಆಫ್ರಿಕನ್‌ ಸಂಸ್ಕೃತಿ, ಅಸ್ಮಿತೆ ಹಾಗೂ ವಸಾಹತುಶಾಹಿ ಜ್ಞಾನವನ್ನು ನೋಡುವ ವಿಧಾನಗಳು ಅತ್ಯಂತ ಸ್ವೋಪಜ್ಞ. ಮಾತ್ರವಲ್ಲ, ವಿಶ್ವಮಾನ್ಯ. ಪಾಲಿನ್‌ ಮಂಡಿಸಿದ ‘ಜನಾಂಗೀಯ ತತ್ತಶಾಸ್ತ್ರ’ ಚಿಂತನೆ ವಿವಾದಯುತ ಮತ್ತು ಬಹುಮಾನ್ಯ. ಆಫ್ರಿಕನ್‌ ಜನಾಂಗಗಳ ಸಂಘಟಿತ ಲೋಕದೃಷ್ಟಿಯೇ ಈ ತತ್ತ್ವಶಾಸ್ತ್ರದ ತಳಹದಿ. ಪ್ಯಾರಿಸ್‌ನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ ಪಾಲಿನ್‌ ಪಾಶ್ಚಾತ್ಯ ವಿದ್ವಾಂಸ ಪರಂಪರೆಯೊಂದಿಗೆ ಕೊಡುಕೊಳ್ಳು ಸಂಬಂಧವನ್ನು ಇರಿಸಿ ಕೊಳ್ಳಬಯಸುವವರು. ಅವರ ಪುಸ್ತಕಗಳು ವಿದ್ವಾಂಸರಿಗೆ, ವಿದ್ಯಾರ್ಥಿಗಳಿಗೆ, ಸಂಸ್ಕೃತಿ ಚಿಂತಕರಿಗೆ ಆಕರಕೃತಿಗಳು. ಅಂತೆಯೇ, ಅನೇಕ ಅಂತಾರಾಷ್ಟ್ರೀಯ ಪುರಸ್ಕಾರಕ್ಕೂ ಪಾತ್ರವಾದಂಥವು.

ಬಹುತ್ವದ ಅರ್ಥ: ಸುಳ್ಳು ಮತ್ತು ಸತ್ಯ

ಸಾಂಸ್ಕೃತಿಕ ಬಹುತ್ವ ಎಂದ ಕೂಡಲೇ ಸಾಮಾನ್ಯವಾಗಿ ಮೂರು ಅರ್ಥಗಳು ಕಣ್ಣೆದುರು ಸುಳಿಯುತ್ತವೆ: (1) ಬೇರೆ ಬೇರೆ ಪ್ರದೇಶಗಳಿಗೆ ಸೇರಿದ ವಿಭಿನ್ನ ಸಂಸ್ಕೃತಿಗಳು, ಕಡೆಯಪಕ್ಷ ತಾತ್ತ್ವಿಕವಾಗಿಯಾದರೂ ಒಂದೆಡೆ ಸೇರಿ ಸಹಬಾಳ್ವೆ ನಡೆಸುತ್ತವೆ ಎಂದು ಅರಿಯುವುದು (2) ಈ ವಾಸ್ತವವನ್ನು ಒಪ್ಪಿಕೊಳ್ಳುವುದು (3) ಈ ಬಹುತ್ವವನ್ನು ಸಮರ್ಥಿಸುತ್ತ, ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ, ಶಾಂತಿಯುತ ಸಂವಾದದ ಮೂಲಕ, ಒಬ್ಬರು ಇನ್ನೊಬ್ಬರನ್ನು ಆದುಕೊಳ್ಳುವ ಮೂಲಕ ನಮ್ಮ ಆಂತರಿಕ ಚೆಲುವು ಹೆಚ್ಚುತ್ತದೆ ಎಂದು ನಂಬಿ, ಸಾಂಸ್ಕೃತಿಕ ಬಹುತ್ವಕ್ಕೆ ಕಸುವು ತುಂಬುವ ಕೆಲಸ ಮಾಡುವುದು.

ಈ ಸ್ವರೂಪದ ಸಾಂಸ್ಕೃತಿಕ ಬಹುತ್ವವು ಪಶ್ಚಿಮದ ‘ಸಾಂಸ್ಕೃತಿಕ ಪ್ರತ್ಯೇಕತೆ’ಗೆ ಸಂವಾದಿಯಾಗಿ ಹುಟ್ಟಿರುವಂಥದ್ದು. ಇದು ಕೂಡ ಬರುತ್ತಿರುವುದು ಪಶ್ಚಿಮದಿಂದಲೇ. ಯುರೋಪ್‌ ಖಂಡವು ಲೂಸಿಯ ‘ಲೆವಿ ಬ್ರೂಲ್’ ಅವರನ್ನು ಸೃಷ್ಟಿಸಿದಂತೆಯೇ ಕ್ಲಾದ್‌ ಲೆವಿ ಸ್ಟ್ರಾಸ್‌ ಅವರನ್ನು ಕೂಡ ನೀಡಿದೆ. ಜನಾಂಗೀಯವಾದಿ ಅರ್ಥರ್‌ ಗೊಬಿನೊರಂತೆಯೇ, ಜಾನ್‌-ಪಾಲ್‌ ಸಾರ್ತ್ರ್ ಅವ‌ರನ್ನೂ ಕೊಟ್ಟಿದೆ. ಲೋಕಹಿತ ಚಿಂತಿಸಿದ ಕಾರ್ಲ್‌ ಮಾರ್ಕ್ಸ್‌‌ರಂತೆಯೇ, ಜನಾಂಗದ್ವೇಷಿ ಹಿಟ್ಲರ್‌ ಕೂಡ ಪಶ್ಚಿಮದ ಕೂಸೇ. ಅಂದರೆ, ಯುರೋಪ್‌ ಸಹ ಬಹುತ್ವ ಸಂಸ್ಕೃತಿಯನ್ನು ಹೊಂದಿರುವಂಥದ್ದೇ. ಪಶ್ಚಿಮದ ಸಮಾಜದಲ್ಲಿ ಏಕಕಾಲಕ್ಕೆ ವಿರುದ್ಧ ಚಿಂತನೆಗಳು ಅಸ್ತಿತ್ವದಲ್ಲಿದ್ದವು. ಹೀಗಾಗಿ, ನಾವು ಪಾಶ್ಚಿಮಾತ್ಯವೆಂದು ಹೇಳುವಾಗ ಪರಸ್ಪರ ವಿರುದ್ಧವಾಗಿರುವ ಚಿಂತನೆ ಹಾಗೂ ದ್ವೇಷಾಸೂಯೆಯ ಚಿಂತನೆಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು.

ಕಲ್ಪನೆಯೋ, ವಾಸ್ತವವೋ ಅಂತೂ ‘ಪಾಶ್ಚಿಮಾತ್ಯಲೋಕ’ವು ಏಕಸ್ವರೂಪ ಸಿದ್ಧಾಂತದ ಮೇಲೆ ಕಟ್ಟಲಾಗಿದ್ದು, ಉಳಿದ ಖಂಡಗಳ ನಾಗರಿಕತೆಗಳನ್ನು ಸಗಟಾಗಿ ತಿರಸ್ಕರಿಸುವ, ಅಪಮೌಲ್ಯಗೊಳಿಸುವ ಅಸ್ತ್ರವಾಗಿದೆ. ತನ್ನ ಹಿತಕ್ಕಾಗಿ ಇತರ ಸಮಾಜಗಳ ಸಾಂಸ್ಕೃತಿಕ ಸಾಧನೆಗಳನ್ನದು ನಾಶಪಡಿಸಿದೆ. ಇದನ್ನು ಜನಾಂಗ-ಕೇಂದ್ರಿತ ಮನೋಧರ್ಮವೆಂದು ಕರೆಯಬಹುದು. ಎರಡು ಶತಮಾನಗಳ ಹಿಂದೆ ಅದು ತನ್ನ ವೈಭವದ ದಿನಗಳ ಲೋಲುಪತೆಯಲ್ಲಿತ್ತು. ಐತಿಹಾಸಿಕವಾಗಿ ಹೇಳುವುದಾದರೆ, ಇದನ್ನು ಸಾಮ್ರಾಜ್ಯಶಾಹಿ ವಿಸ್ತರಣೆ ಕಾಲವೆಂದು ಗುರುತಿಸಬಹುದು.

ಪ್ರಗತಿಪರ’ ಮಾನವಶಾಸ್ತ್ರಜ್ಞರು ಮತ್ತು ಮೂರನೆಯ ಜಗತ್ತಿನ ರಾಷ್ಟ್ರೀಯವಾದಿಗಳು

ಸಮುದಾಯಗಳ ಸಂಬಂಧ ಮತ್ತು ಸ್ವಭಾವಗಳನ್ನು ಸಂಘಟಿಸುವಲ್ಲಿ ಹಲವಾರು ಧಾರೆಗಳಲ್ಲಿ ಯುರೋಪಿಯನ್‌ ಚಿಂತನಾ ವಿಧಾನ ಕೂಡ ಒಂದು. ದಶಕಗಳ ಹಿಂದೆ ಈ ಸಾಂಸ್ಕೃತಿಕ ವಸಾಹತುಶಾಹಿ ಮನೋಭಾವಕ್ಕೆ ಪ್ರತಿಯಾಗಿ ಸಾಂಸ್ಕೃತಿಕ ಬಹುತ್ವವೆಂದು ಗುರುತಿಸಲಾಗುವ ಸ್ಥಳೀಯ ಚಿಂತನಾ ವಿಧಾನಗಳು ಆರಂಭವಾದವು. ಆರ್ಥಿಕ-ತಾಂತ್ರಿಕ ಉನ್ನತಿಗಳು ಮಾತ್ರ ಸಾಮಾಜಿಕ-ನೈತಿಕ ಮೇಲರಿಮೆಯನ್ನು ನೀಡಬಲ್ಲವು ಎಂಬ ತಥಾಕಥಿತ ನಂಬಿಕೆಯನ್ನು ಸೈದ್ಧಾಂತಿಕವಾಗಿ ಪ್ರಶ್ನಿಸುವುದು ಆರಂಭವಾಯಿತು, ಕೆಲವರು ಈ ವಸಾಹತುಶಾಹಿ ಮೌಲ್ಯಗಳನ್ನು ಮಗುಚಿ ಹಾಕಿ, ತಂತ್ರಜ್ಞಾನ ರಹಿತ ಸಮಾಜಗಳು ಕೂಡ ಮಾನವ ಸಂಬಂಧಗಳನ್ನು ಉದಾತ್ತಗೊಳಿಸಿ, ಪಾರದರ್ಶಕತೆಯನ್ನು ತರಬಲ್ಲವು ಎಂಬುದನ್ನು ಎತ್ತಿ ತೋರಿಸತೊಡಗಿದರು.

"ಗೊತ್ತುಗುರಿಯಿಲ್ಲದ ಆಧುನಿಕ ತಂತ್ರಜ್ಞಾನ ಪ್ರಗತಿಯು ಹೇಗೆ ನಮ್ಮೆಲ್ಲ ಆಧ್ಯಾತ್ಮಿಕತೆ ಮತ್ತು ಕಲಾತ್ಮಕತೆಗೆ ಹಾನಿಕಾರಕವಾಗಿದೆಯೆಂದು ನಮ್ಮಲ್ಲಿ ಅನೇಕರು ಬಲ್ಲೆವು. ಈ ಯಾಂತ್ರಿಕ ಸೆರೆವಾಸದಿಂದ ಪಾರಾಗುವ ಒಂದು ಉಪಾಯವೆಂದರೆ, ವಿಶ್ವದ ಜನವಿದೂರ ಪ್ರದೇಶಗಳಲ್ಲಿ ಇನ್ನೂ ಜೀವಂತವಾಗಿರುವ ನಮ್ಮ ಆದಿಮ ಜೀವನ ಪದ್ಧತಿಯನ್ನು ಅರಿಯುವುದು. ಜನಾಂಗ ಅಧ್ಯಯನವು ನನ್ನ ಮಟ್ಟಿಗೆ ಈ ಉತ್ಪ್ರೇಕ್ಷಿತ-ಪ್ರಮಾಣೀಕೃತ ಸಂಸ್ಕೃತಿಯಿಂದ ತಪ್ಪಿಸಿಕೊಳ್ಳಲು ಒಂದು ಭಾವುಕ ಬಿಡುಗಡೆಯಾಗಿದೆ." - ಎಂದು 1930ರಷ್ಟು ಹಿಂದೆಯೇ ‘ಬ್ರಾನಿಸ್ಲಾ ಮಲಿನೋವಸ್ಕಿ’ ಗುರುತಿಸಿದ್ದರು.

ನಮ್ಮ ಕಾಲದ ಕುರಿತೇ ಹೇಳುವುದಾದರೆ, ಮಾನವಶಾಸ್ತ್ರಜ್ಞ ಕ್ಲಾದ್‌ ಲೆವಿ ಸ್ಟ್ರಾಸ್‌-‘ಆದಿಮ’ ಜನಾಂಗಗಳು, ನಾಗರಿಕ ಸಮಾಜಗಳಿಗಿಂತ ಹೆಚ್ಚು ಋಜುತ್ವ ಹೊಂದಿವೆ. ಅದಕ್ಕೆ ಕಾರಣ-ಅವು ಶೋಷಣೆಯಿಂದ ಮುಕ್ತವಾಗಿವೆ. ಅಲ್ಲಿನ ಸಂಬಂಧ ಮುಕ್ತ ಒಡನಾಟ ಹೊಂದಿದ್ದು, ವೈಯಕ್ತಿಕ ನೆಲೆಯ ಸಂಬಂಧಗಳಾಗಿವೆ; ಪ್ರತಿಯೊಬ್ಬರೂ ಪ್ರತಿಯೊಬ್ಬರನ್ನು ಅರಿತಿರಬಲ್ಲಷ್ಟು ಸಣ್ಣ ಗುಂಪುಗಳನ್ನು ಹೊಂದಿವೆ. ಒಗ್ಗಟ್ಟಾಗಿ ಪ್ರತಿಯೊಂದನ್ನು ಅನುಭವಿಸುತ್ತ ಪ್ರಮುಖ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಪಡೆದಿವೆ" ಎಂದು ಗುರುತಿಸುತ್ತಾರೆ.

ಈ ಅಂಶ ಮನನವಾದರೆ, ನಾವು ಸಾಮ್ರಾಜ್ಯಶಾಹಿ ಜನಾಂಗೀಯ ಸಂಸ್ಕೃತಿಗೆ ಅಪಥ್ಯದ ವಿಷಯವಾದ ‘ಸಾಂಸ್ಕೃತಿಕ ಬಹುತ್ವ’ದ ಮಹತ್ವವನ್ನು ಅರಿತುಕೊಳ್ಳುತ್ತಿದ್ದೇವೆಂದೇ ಅರ್ಥ. ಲೆವಿ ಬ್ರೂಲ್‌ರಂಥ ಜನಾಂಗೀಯವಾದಿಗಳು ಸಹಜ ವಿಕಾಸವಾದ ಸಿದ್ಧಾಂತವನ್ನು ತಿರಸ್ಕರಿಸುತ್ತಿದ್ದುದಕ್ಕೆ ಕಾರಣ-ಯುರೋಪಿಯನ್‌ ಸಂಸ್ಕೃತಿಗೆ ಹೊರತಾದ ಸಂಸ್ಕೃತಿಗಳು ಅಸ್ತಿತ್ವದಲ್ಲಿರಬಹುದು ಎಂಬ ಅಂಶವನ್ನೇ ಅವರು ನಿರಾಕರಿಸಿದಾದುದಾಗಿತ್ತು. ಆದಿಮ ಸಂಸ್ಕೃತಿಗಳನ್ನು ಕೂಡ ಆಧುನಿಕ ಯುರೋಪಿಯನ್‌ ಸಂಸ್ಕೃತಿಯೇ ಪ್ರತಿನಿಧಿಸುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಇಂದಿನ ಸ್ಥಿತಿ ಹಾಗಿಲ್ಲ. ಪಶ್ಚಿಮವು ಕೂಡ ಸಂಸ್ಕೃತಿ ಬಹುರೂಪಿ ಎಂದು ಒಪ್ಪಿಕೊಳ್ಳುತ್ತದೆ. ಮಾತ್ರವಲ್ಲ, ‘ಹೃದಯಕ್ಕೆ ಒತ್ತು ನೀಡುವ’ ಇಂಥ ಬಹುಸಂಸ್ಕೃತಿಗಳು ಪಾಶ್ಚಾತ್ಯಲೋಕ ಸೃಷ್ಟಿಸಿದ ಅತಿ ತಂತ್ರಜ್ಞಾನ, ಪ್ರಮಾಣೀಕೃತ ಸಮಾಜಗಳ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಸಾಮರ್ಥ್ಯವನ್ನೂ ಹೊಂದಿವೆ, ಎಂದು ನಂಬುತ್ತದೆ.

ಮೂರನೆಯ ಜಗತ್ತಿನ ರಾಷ್ಟ್ರೀಯವಾದಿಗಳು ಮಾನವಶಾಸ್ತ್ರದ ಹೊಸ ಚಿಂತನಾ ವಿಧಾನಕ್ಕೆ ಒಲಿದು ಅತ್ತ ಹೆಜ್ಜೆ ಹಾಕಿದ್ದು ಮಹತ್ವದ್ದಾಗಿದೆ. `ನಿಗ್ರಿಟ್ಯೂಡ್‌’ ಚಳವಳಿಯ ನೇತಾರರಲ್ಲೊಬ್ಬರಾಗಿದ್ದ, ಆ ಪದವನ್ನು ಟಂಕಿಸಿದ ಏಮೆ ಸೀಸರ್‌ (1913-2008) ಅಂಥ ಆರಂಭಿಕ ಕವಿ, ಮಾನವಶಾಸ್ತ್ರಜ್ಞರಾಗಿದ್ದರು. ಅವರ ಕಾವ್ಯ ತಲೆಮಾರುಗಳನ್ನು ಪ್ರೇರೇಪಿಸಿದೆ.

ಅವರು ಸಿಡಿಮದ್ದು, ದಿಕ್ಸೂಚಿಯನು ಆವಿಷ್ಕರಿಸಲಿಲ್ಲ

ಉಗಿಬಂಡಿಯ ಹಬೆ, ವಿದ್ಯುತ್ತಿನ ಸೆಳಕಿನ ಅರಿವು ಅವರಿಗಿರಲಿಲ್ಲ

ಅವರ್‍ಯಾವತ್ತೂ ನೆಲಮುಗಿಲುಗಳ ಅನ್ವೇಷಕರಾಗಿರಲಿಲ್ಲ

ಆದರೇನು, ಅವರಿಲ್ಲದೆ ಬುವಿ, ಭೂತಾಯಿಯಾಗುತಿರಲಿಲ್ಲ

ಮಣ್ಣು ಕರುಣಿಸಿದ ಗೂನಿನಂತೆ ಅವರು ಬದುಕಿದ್ದರು

ಕಳಿತ ಭೂಸಾರ ಹೀರುವ ಕೆರೆಯಂಗಳವಾಗಿದ್ದರು.

 

ನನ್ನ ಕಪ್ಪುಕಾಯ ಹಗಲೇ ಕಿರುಚಾಟವನ್ನು ಆಲಿಸುವ ಕಲ್ಲಲ್ಲ

ನನ್ನ ಕಪ್ಪುಕಾಯ ಸತ್ತ ಕಂಗಳು ದಿಟ್ಟಿಸುವ ನಿರ್ಜೀವ ಚಿತ್ರವಲ್ಲ

ನನ್ನ ಕಪ್ಪುಕಾಯ ದೇಗುಲದ ಕಂಬ-ಗೋಪುರವಲ್ಲ

ಅದು ಬುವಿಯಲಿ ಕರಗಿ ಹೋಗುವ ರಕ್ತಮಾಂಸ,

ಸುಡುವಾಗಸದಲಿ ಬೇಯುವ ದೇಹ

ಎಲ್ಲ ಸಂಕಟವ ಸಹನೆಯಲಿ ಸಹಿಸುವುದು.

 

ಓಹೋ! ದೇವದಾರು ಮರವೇ!

ಎಂದೂ ಏನನೂ ಅನ್ವೇಷಿಸಿದವರಿಗೆ ಜಯವಾಗಲಿ!

ಎಂದೂ ಏನನೂ ಆವಿಷ್ಕರಿಸದವರಿಗೆ ಜಯಕಾರವಿರಲಿ!

ಎಂದೂ ಏನನೂ ಪಳಗಿಸದವರಿಗೆ ಜಯವಾಗಲಿ!

 

ಇದ್ದರೇನು- ಅವರು ಬಿತ್ತಿ ಬೆಳೆದು ಸಕಲ ಸಾರಸಂಗ್ರಹ ಅರಗಿಸಿಕೊಂಡರು

ಹೊರಮೈ ಮಂದವಾದರೂ ಚರಾಚರಗಳ ಚಲನೆಯನು ಬಲ್ಲಿದರು

ಏನನೂ ಪಳಗಿಸದೆಯೂ ನುರಿತ ಹುದ್ದರಿಯವರು

ಅವರು ಲೋಕದ ನಿಜದ ಮೊದಲಾಳಿ

ಎಂದೂ ಬತ್ತದ ಜೀವಸೆಲೆ, ಜಗದ ಉಸಿರಿನ ನಾಡಿ,

ದಿವ್ಯಾಗ್ನಿಯ ಕಿಡಿ,

ಲೋಕದ ಸ್ವಯಂಚಲನೆಯ ಮಾಂಸಮಡ್ಡಿ.

ಐತಿಹಾಸಿಕ ಮಹತ್ವವಿರುವ ಈ ಸಾಲುಗಳು ಕಾವ್ಯಗುಣದಿಂದ ನಿಗಿನಿಗಿಯಾಗಿವೆ. ಮಾತ್ರವಲ್ಲ, ಕಲ್ಲೆದೆಯವರನ್ನೂ ಕರಗಿಸುತ್ತವೆ. ಇಷ್ಟೇ ಅಲ್ಲ. ಒಂದು ಅಗತ್ಯ ಸನ್ನಿವೇಶದಲ್ಲಿ ‘ಕಪ್ಪುಕಾಯ’ ಅಥವ ‘ನಿಗ್ರಿಟ್ಯೂಡ್‌’ ಎಂಬ ನುಡಿಗಟ್ಟಿಗೆ ಮಹತ್ತನ್ನು ತಂದು ನೀಡುವ ಸಾಮರ್ಥ್ಯವೂ ಈ ಸಾಲುಗಳಿಗಿದೆ. ಬಿಳಿಬಣ್ಣದವರು ಹುಟ್ಟು ಹಾಕಿದ ಬಣ್ಣ ತರತಮ ನೀತಿಗೆ ಇಲ್ಲಿನ ಕವಿ ಬಹಳ ಸರಳವಾಗಿ ಉತ್ತರ ನೀಡುತ್ತಿರುವುದೂ ಗಮನಾರ್ಹವಾಗಿದೆ. ಮನುಷ್ಯ ಸಹಜ ಸ್ವಭಾವದಲ್ಲಿ ಹುದುಗಿದ ಸೋದರತೆ, ಅನುಭವಗಳಿಗೆ ತೆರೆದ ಮನ ಮತ್ತು ನಿಸರ್ಗದಲ್ಲಿ ಆಳವಾಗಿ ಬೇರೂರುವುದನ್ನು ಪಶ್ಚಿಮದಿಂದ ಕಲಿಯಬೇಕಿಲ್ಲವೆಂದು ಕವಿ ಇಲ್ಲಿ ಅತ್ಯಂತ ಕಲಾತ್ಮಕವಾಗಿ ಹೇಳಿದ್ದಾರೆ.

ಕವಿ ಸೀಸರ್‌ಗೆ ಈ ವಿಷಯದ ಸಂಪೂರ್ಣ ಅರಿವಿದೆ. ತಮ್ಮ ಗೆಳೆಯ, ಕವಿ ಲೆಪೊಲ್ಡ್‌ ಸೇಡರ್‌ ಸೆಂಘಾರ್‌ರಂತೆಯೇ ಮಲಿನೊವಸ್ಕಿ ಮತ್ತು ಉಳಿದ ಕ್ರಿಯಾವಾದಿಗಳನ್ನು ಸ್ಮರಿಸುತ್ತಲೂ ಇದ್ದಾರೆ. ಈ ದೃಷ್ಟಿಯಿಂದ ವಸಾಹತುವಿನ ರಾಷ್ಟ್ರೀಯವಾದಿಗಳು ಸಂಪೂರ್ಣವಾಗಿ ವಸಾಹತು ಸಂಸ್ಕೃತಿಯನ್ನು ತಿರಸ್ಕರಿಸಲಿಲ್ಲ. ಮೂರನೆಯ ಜಗತ್ತಿಗೆ ಅನುಕೂಲಕರವಾದ ವಿಚಾರಗಳನ್ನು ಹೆಕ್ಕಿ ತೆಗೆದು ಅಳವಡಿಸಿಕೊಳ್ಳುವ ಮನೋಭಾವದವರಾಗಿದ್ದರು. ಈ ಅರ್ಥದಲ್ಲಿ, ಪಾಶ್ಚಾತ್ಯ ಪ್ರಗತಿಪರ ಮಾನವಶಾಸ್ತ್ರಜ್ಞರು ಮತ್ತು ಸ್ಥಳೀಯ ರಾಷ್ಟ್ರೀಯವಾದಿಗಳ ನಡುವೆ ಒಂದು ಬಗೆಯ ಸಂಕೀರ್ಣವಾದ ಸಂಬಂಧವನ್ನು ಕಾಣಬಹುದು. ವರ್ಷಗಳ ಕಾಲ ಈ ಕೊಡುಕೊಳ್ಳುವಿಕೆ ಹೀಗೆಯೇ ಇತ್ತು. ಸೀಸರ್‌ ಆ ಬಗೆಯ ಬುದ್ಧಿಜೀವಿ, ರಾಷ್ಟ್ರೀಯವಾದಿಯಾಗಿದ್ದರು.

ಸಂಸ್ಕೃತಿ ಮತ್ತು ರಾಜಕಾರಣ: ಸಂಸ್ಕೃತಿ ಸಿದ್ಧಾಂತ

ಸೀಸರ್‌ರನ್ನು ರಾಷ್ಟ್ರೀಯವಾದಿ ಎಂದು ಹೇಳಿದೆ. ಇವರಷ್ಟೇ ಇನ್ನೊಂದು ಅರ್ಹ ಹೆಸರು ಲೆಪೋಲ್ಡ್‌ ಸೇಡರ್‌ ಸೆಂಘಾರ್‌ರದು. ಅವರು ‘ಕಪ್ಪುಕಾಯ’ ಇಲ್ಲವೆ ‘ನಿಗ್ರಿಟ್ಯೂಡ್‌’ ಎಂಬ ಪರಿಕಲ್ಪನೆಯನ್ನು ಚರ್ಚೆಯ ಮುಂಚೂಣಿಗೆ ತರಲು ಪಟ್ಟ ಬೌದ್ಧಿಕ ಪರಿಶ್ರಮ ಅಪಾರವಾದುದು. ನಿಗ್ರಿಟ್ಯೂಡ್‌ ಕುರಿತು ಈ ಜೋರುದನಿಯ ವಿಶ್ಲೇಷಣೆ ಸರಳ. ಸೀಸರ್‌ರ ಪ್ರಕಾರ- ರಾಜಕೀಯ ಬಿಡುಗಡೆಗೆ ಕಪ್ಪುಕಾಯ ಭಾವುಕತೆಯು ಬೆಂಬಲ ಒದಗಿಸುವ ಪರಿಕರವಾಗಿದೆ. ಇದಕ್ಕೆ ಪ್ರತಿಯಾಗಿ, ರಾಜಕೀಯ ಸಮಸ್ಯೆಗಳಿಗೆ, ರಾಷ್ಟ್ರೀಯ ವಿಮೋಚನೆಗೆ ಕಪ್ಪುಕಾಯ ಸಿದ್ಧಾಂತವು ಬೇರಿನಂತೆ ಕೆಲಸ ಮಾಡುವುದೆಂದು ಸೆಂಘಾರ್‌ರ ಅಭಿಮತ. ರಾಷ್ಟ್ರೀಯವಾದದ ರಾಜಕಾರಣಕ್ಕೆ, ಸಾಂಸ್ಕೃತಿಕ ರಾಜಕಾರಣವು ಸುಪುಷ್ಟ ದೇಹದ ಹುರಿಗೊಂಡ ಮಾಂಸಲದಂತೆ (ಹೈಪರ್‌ಟ್ರೋಫಿ) ಬೆಂಬಲ ಒದಗಿಸುವುದು.

ಸೀಸರ್‌, ಬಹುಶಃ ಈ ಕಾರಣದಿಂದಲೇ ಸಂಸ್ಕೃತಿಯನ್ನು ಅತ್ಯಂತ ಸಂಯಮದಿಂದ ನಿಭಾಯಿಸಿ ಅದು ರಾಜಕೀಯ ವಿಮೋಚನೆಯಲ್ಲಿ ಎದುರಾಗುವ ಮೂಲಭೂತ ವಿಷಯಗಳಿಗೆ ಪುಷ್ಠಿಯೊದಗಿಸುವಂತೆ ಪೂರಕವಾಗಿರಬೇಕೆ ಹೊರತು, ಪ್ರಾಬಲ್ಯ ಸಾಧಿಸುವಂತಿರಬಾರದು ಎಂದು ಭಾವಿಸಿದ್ದರು. ಸೆಂಘಾರ್‌ ಅವರಾದರೂ ಆದರ್ಶವಾದಿ ಸಿದ್ಧಾಂತಗಳಿಂದ ಪ್ರೇರೇಪಿತರಾದವರು. ಕೃತಕ ಸಾಂಸ್ಕೃತಿಕ ಸಮಸ್ಯೆಗಳ ಬಗೆಗೆ ಚರ್ಚಿಸಿದವರು. ಕಪ್ಪುಕಾಯದವರಾಗಿ ಈ ಲೋಕದಲ್ಲಿ ಜೀವಿಸುವ ವಿಶಿಷ್ಟತೆಯನ್ನು ಎತ್ತಿ ಹಿಡಿಯುತ್ತ ಅದು ವಸಾಹತುಶಾಹಿ ವಿರುದ್ಧದ ವ್ಯವಸ್ಥಿತ ಹೋರಾಟದಲ್ಲಿ ತನ್ನ ಪಾತ್ರವನ್ನು ಹೇಗೆ ನಿಭಾಯಿಸಲಿದೆ ಎಂದು ವಿಸ್ತೃತವಾಗಿ ಚಿಂತಿಸಿದರು.

ರಾಷ್ಟ್ರೀಯವಾದ ಮತ್ತು ಜನಾಂಗಶಾಸ್ತ್ರದ ಮೇಲಿನೆರಡೂ ಚಿಂತನೆಗಳು ಸಾಂಸ್ಕೃತಿಕ ರಾಷ್ಟ್ರೀಯವಾದಿಗಳ ದೃಷ್ಟಿಕೋನದಿಂದ ಅನಾಹುತಕಾರಿ. ವಸಾಹತುಶಾಹಿಯ ವಿರುದ್ಧದ ಹೋರಾಟದಲ್ಲಿ, ಇಲ್ಲಿನ ರಾಷ್ಟ್ರೀಯವಾದಿಯು ಉಳಿದ ಮುಖ್ಯ ಆಯಾಮಗಳಾದ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳನ್ನು ಕಡೆಗಣಿಸಿ, ಸಾಂಸ್ಕೃತಿಕ ಅಂಶಗಳತ್ತ ಮಾತ್ರ ಗಮನಹರಿಸುತ್ತಾರೆ. ಮಾನವಶಾಸ್ತ್ರದ ಸ್ಪರ್ಶವಿಲ್ಲದ ಇದನ್ನು ನಾವು ಸಂಸ್ಕೃತಿ ಸಿದ್ಧಾಂತವೆಂದು ಗುರುತಿಸಬಹುದು. ಸಂಸ್ಕೃತಿಗೆ ಮಹತ್ವ ನೀಡುತ್ತ ಆರ್ಥಿಕ-ರಾಜಕೀಯ ಸಮಸ್ಯೆಗಳನ್ನು ನಗಣ್ಯವೆಂಬಂತೆ ನೋಡುವುದು ಈ ಸಿದ್ಧಾಂತದ ಲಕ್ಷಣ. ಇನ್ನೂ ಸಮಸ್ಯಾತ್ಮಕವಾದುವೆಂದರೆ ಅತ್ಯಂತ ಮೇಲ್ಪದರಿನದ್ದಾದ ‘ಜಾನಪದ’ವನ್ನೇ ಇದು ಸಂಸ್ಕೃತಿಯ ಸಾರವೆಂದು ಗ್ರಹಿಸುವುದು. ಜಾನಪದ ಅಥವ ಸಂಸ್ಕೃತಿಯ ಆಳಬೇರಿನ ಪರಿಶೀಲನೆ, ಒಳಗಿನ ತಾಕಲಾಟಗಳ ಅರಿವು ಮತ್ತು ತನ್ನ ಇತಿಹಾಸ-ವಿಕಾಸದೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತ ಅದು ಹೇಗೆ ಪುಟಿದೇಳುವುದು? ಎಂಬ ಸೂಕ್ಷ್ಮ ಅಂಶಗಳನ್ನಿದು ನಿರ್ಲಕ್ಷಿಸುವುದು. ಅದೊಂದು ಸಪಾಟಾದ, ಸರಳವಾದ, ಏಕಾರ್ಥವನ್ನು ನೀಡುವ ಚಿತ್ರವೆಂಬಂತೆ ಗ್ರಹಿಸುವುದು. ಹೋಲಿಕೆಗಷ್ಟೇ ಸೀಮಿತವಾದ ಭಾವೋದ್ರೇಕದ ವಿವರಣೆಯನ್ನು ನೀಡುವುದು.

ಏಕತ್ವದ ಕಪಟತೆ

ಈ ರೀತಿಯ ಸಾಂಪ್ರದಾಯಿಕ ದೃಷ್ಟಿಕೋನದಿಂದಲೇ ಆಫ್ರಿಕ ಮತ್ತು ಪಾಶ್ಚಾತ್ಯ ನಾಗರಿಕತೆಗಳನ್ನು ಅರ್ಥೈಸುವುದು. ಸಂಸ್ಕೃತಿಗಳಲ್ಲಿ ಯಾವುದೇ ರೀತಿಯ ವೈರುದ್ಧ್ಯವಾಗಲಿ, ಸಂಘರ್ಷವಾಗಲಿ ಇರಲೇ ಇಲ್ಲವೇನೊ ಎಂಬಂದೇ ಈ ದೃಷ್ಟಿಕೋನದ ನಿಲುವಾಗಿದೆ.

ನಾಗರಿಕತೆಯನ್ನು ಏಕರೂಪಿ ಎಂಬರ್ಥದಲ್ಲಿ ಬಳಸುವ ಪದವನ್ನು ನಿಷೇಧಿಸಬೇಕೆಂದು ನಾನು ಹೇಳುತ್ತಿಲ್ಲ. ಬದಲಿಗೆ, ಅದನ್ನು ಮರುವ್ಯಾಖ್ಯಾನಿಸಬೇಕೆಂದು ಒತ್ತಾಯಿಸುತ್ತಿರುವೆ. ಅದೊಂದು ಕಲ್ಪನಾಲೋಕದಲ್ಲಿರುವ ಮೌಲ್ಯಗಳ ಗುಚ್ಛವೆಂದು ಪರಿಗಣಿಸದೆ, ಒಂದು ವಾಸ್ತವಿಕ ಭೌಗೋಳಿಕ ಪರಿಸರದಲ್ಲಿ ಕಾಣಿಸಿಕೊಳ್ಳುವ ಸಂಚಯಿತ ರೂಪವೆಂದು ಒಪ್ಪಿಕೊಳ್ಳಬೇಕು. ಯುರೋಪಿಯನ್‌ ಸಂಸ್ಕೃತಿಯೆನ್ನುವುದೊಂದು ಮುಚ್ಚಿದ ಮೌಲ್ಯಗಳ ವ್ಯವಸ್ಥೆಯಲ್ಲ. ಪ್ರತಿಯಾಗಿ, ಪರಿವರ್ತಿಸಲು ಸಾಧ್ಯವಿಲ್ಲದ ಸಾಂಸ್ಕೃತಿಕ ವಸ್ತುವಾಗಿದೆ. ಈ ಸಾಂಸ್ಕೃತಿಕ ಪರಿಕರಗಳು ಒಂದೊಮ್ಮೆ ಯುರೋಪಿನ್ ಖಂಡದಲ್ಲಿ ಕಾಣಿಸಿಕೊಂಡಿದ್ದವು. ನಾಳೆ ಮತ್ತೊಮ್ಮೆ ತಮ್ಮೆಲ್ಲ ಕ್ರಿಯಾಶೀಲ ವೈರುದ್ಧ್ಯಗಳೊಂದಿಗೆ ಗೋಚರಿಸಬಹುದಾದ ಪರಿಕರಗಳಾಗಿವೆ.

ಸಾಂಪ್ರದಾಯಿಕ ದೃಷ್ಟಿಕೋನದ ಇತಿಹಾಸಕಾರರು ನಾಗರಿಕತೆ ಎಂಬ ಪದ ಬಳಕೆಯಂತೆಯೇ ಪಾರಂಪರಿಕ ಆಫ್ರಿಕನ್‌ ನಾಗರಿಕತೆ ಎಂಬ ಶಬ್ದವನ್ನೂ ಬಳಸುತ್ತಾರೆ. ಇವು ದಾರಿ ತಪ್ಪಿಸುವ ನುಡಿಗಟ್ಟುಗಳು. ಪಾರಂಪರಿಕ ಆಫ್ರಿಕನ್‌ ನಾಗರಿಕತೆ ಎಂದು ಹಳೆಯ ಅರ್ಥದಲ್ಲಿ ಬಳಸಿದೊಡನೆಯೇ ಅದು ‘ವಸಾಹತುಶಾಹಿಪೂರ್ವ ಆಫ್ರಿಕನ್‌ ನಾಗರಿಕತೆ’ ಎಂಬರ್ಥ ನೀಡಿ, ಅದಕ್ಕೊಂದು ಮೌಲ್ಯವನ್ನು ಆರೋಪಿಸಿ, ವಸಾಹತುಶಾಹಿ ಮತ್ತು ವಸಾಹತೋತ್ತರ ಆಫ್ರಿಕನ್‌ ಸಮಾಜವನ್ನು ‘ಆಧುನಿಕ’ ಎಂಬಂತೆ ಗ್ರಹಿಸಲು ಆರಂಭಿಸುತ್ತದೆ. ಅದರ ಇನ್ನೊಂದು ಮಗ್ಗುಲಿನ ಅರ್ಥ ‘ಪಾಶ್ಚಾತ್ಯಮಯಗೊಂಡ’ ಎಂದಂತಾಗುತ್ತದೆ. ಇನ್ನೂ ಒಡೆದು ಹೇಳುವುದಾದರೆ, ವಸಾಹತುಪೂರ್ವ ಸಮಾಜ, ವಸಾಹತುಗೊಂಡ ಸಮಾಜ ಎರಡೂ ವಿಭಿನ್ನ ಮೌಲ್ಯಗಳನ್ನು ಪ್ರತಿನಿಧಿಸುವ ಸಮಾಜಗಳು ಎನ್ನುವಂತೆ ವ್ಯಾಖ್ಯಾನಿಸುತ್ತದೆ. ನಾವು ಬಲುಬೇಗ ಆಫ್ರಿಕನ್‌ ಸಮಾಜಗಳು ಏಕರೂಪದ ಇಲ್ಲವೇ ಸಜಾತೀಯ ಸಮಾಜಗಳು ಎಂಬ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಇಲ್ಲಿ ಮರೆಯುವ ಅಂಶವೆಂದರೆ, ಸಾಂಸ್ಕೃತಿಕ ಪರಂಪರೆಗಳು ವೈರುದ್ಧ್ಯಗಳಿಂದ ತುಂಬಿವೆ. ಈಗಿರುವ ಸ್ಥಿತಿಯಲ್ಲಿ ಕಾಣಿಸಿಕೊಳ್ಳಲು ತಲೆಮಾರುಗಳ ಕಾಲ ಕಾದಿವೆ ಮತ್ತು ಅವು ಒಂದನ್ನು ಆಯ್ದುಕೊಂಡಾಗ ಉಳಿದೆಲ್ಲವನ್ನೂ ಬಿಟ್ಟುಕೊಡಬೇಕಾಗುತ್ತದೆ ಎಂಬ ಸಂಕೀರ್ಣತೆಯನ್ನು ಮರೆತು ಬಿಡುತ್ತೇವೆ. ‘ಪಾರಂಪರಿಕ’ ಎಂದಕೂಡಲೇ ಅದು ಸ್ಥಗಿತಗೊಂಡಿದ್ದು ವೈರುದ್ಧ್ಯತೆಗಳನ್ನು ಹೊರಗಿಟ್ಟಿದೆ ಎಂದರ್ಥವಲ್ಲ. ಬದಲಿಗೆ, ಸಾತತ್ಯವಿಲ್ಲದಿರುವಿಕೆ ಅದರ ಒಡಲಿನಲ್ಲಿಯೇ ಹುದುಗಿದೆ ಎಂದು ಅರ್ಥ.

* ಮೇಲೆ ಹೇಳಿದ ದೋಷಗಳು ಕಾಲ್ಪನಿಕವೊ, ವಾಸ್ತವವೊ ಅಂತೂ ಸದ್ಯದ ಸಂಸ್ಕೃತಿ ಸಿದ್ಧಾಂತದಲ್ಲಿ ಇವು ಅಡಗಿವೆ. ಜತೆಗೆ, ಅವು ಪರೋಕ್ಷವಾಗಿ ಒಂದು ವಿಸ್ತೃತ ರಾಜಕೀಯ ಸಿದ್ಧಾಂತದೊಂದಿಗೆ ಸಂಘಟಿತಗೊಂಡಿವೆ. ನಾನು ‘ಪರೋಕ್ಷವಾಗಿ ರಾಜಕೀಯ ಸಿದ್ಧಾಂತ’ವೆಂದು ಬಳಸಿರುವುದಕ್ಕೆ ಕಾರಣ, ಸಿದ್ಧಾಂತವು ರಾಜಕೀಯದಲ್ಲಿ ಕಪಟವೇಷದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಛದ್ಮವೇಷವು ಮೊದಲಿಗೆ ಪರಿಣಾಮಕಾರಿ ರಾಷ್ಟ್ರೀಯ ವಿಮೊಚನೆಗೆ ಸಂಬಂಧಿಸಿದ ಸವಾಲುಗಳನ್ನು ಮರೆಮಾಚುತ್ತದೆ. ಬಳಿಕ ವರ್ಗಸಂಘರ್ಷದ ಸಮಸ್ಯೆಗೆ ಗ್ರಹಣ ಹಿಡಿಸುತ್ತದೆ.

ಸಂಸ್ಕೃತಿ ಸಿದ್ಧಾಂತವು ಸಾಂಸ್ಕೃತಿಕ ರಾಷ್ಟ್ರೀಯವಾದದ ಮುಖವಾಡದಲ್ಲಿ ಸಂಸ್ಕೃತಿಯನ್ನು ಅತ್ಯಂತ ಸರಳ ವಿಧದಲ್ಲಿ ಗ್ರಹಿಸುತ್ತದೆ. ಸಂಸ್ಕೃತಿಯ ರೂಪರೇಷೆಯನ್ನು ವಸಾಹತುಶಾಹಿ ಸಂಸ್ಕೃತಿಗೆ ‘ಪ್ರತಿ’ ಎಂಬಂತೆ ಚಿತ್ರಿಸಿ, ಕಾಲ್ಪನಿಕ ವಿರೋಧ ಸೃಷ್ಟಿಸಿ, ನಿಜವಾದ ರಾಜಕೀಯ ಮತ್ತು ಆರ್ಥಿಕ ಸಂಘರ್ಷಗಳನ್ನು ಮರೆ ಮಾಚುತ್ತದೆ.

ಸ್ವತಂತ್ರಗೊಂಡ ರಾಷ್ಟ್ರಗಳಲ್ಲಿ, ಸಂಸ್ಕೃತಿ ಸಿದ್ಧಾಂತವು ಗತದ ಸಮೀಕ್ಷೆಯಲ್ಲಿ ತೊಡಗುತ್ತ, ಸಾಂಸ್ಕೃತಿಕ ರಾಷ್ಟ್ರೀಯವಾದ ಎಂಬ ಏಕಮುಖ ಗ್ರಹಿಕೆಗೆ ಇಳಿಸುತ್ತದೆ. ಆಗ ಸಂಸ್ಕೃತಿಯೊಳಗಿರುವ ಬಹುರೂಪ ಮತ್ತು ಆಳವನ್ನು ಬೇಕೆಂದೇ ಕಡೆಗಣಿಸುತ್ತದೆ. ಇದಕ್ಕೆ ಕಾರಣ, ಶೋಷಕ ಮತ್ತು ಶೋಷಿತ ಎಂದು ವರ್ಗಗಳಾಗಿ ಒಡೆದುಹೋಗಲು ನಿಮಿತ್ತವಾಗಿರುವ ಆರ್ಥಿಕ-ರಾಜಕೀಯ ವೈರುದ್ಧ್ಯಗಳನ್ನು ಮರೆಮಾಚುವುದು ಮತ್ತು ಸುಳ್ಳುಗಳ ಬಲೆಯಾದ ರಾಷ್ಟ್ರೀಯ ಸಂಸ್ಕೃತಿಯಲ್ಲಿ ಎರಡೂ ವರ್ಗಗಳು ಪಾಲ್ಗೊಳ್ಳುವಂತೆ ಮಾಡುವುದಾಗಿದೆ.

`ಸಂಸ್ಕೃತಿ ಏನಿದ್ದರೂ ರಾಜಕಾರಣಕ್ಕೆ ಆಶ್ರಿತವಾಗಿರುವುದು’ ಎಂದು ಸೀಸರ್‌ ಹೇಳುವುದಿಂದ ಮೇಲೆ ಸೂಚಿಸಿದಂಥ ಪ್ರಾತಿನಿಧಿಕ ಸಾಂಸ್ಕೃತಿಕ ರಾಷ್ಟ್ರೀಯವಾದಿಯಲ್ಲ. ಅವರು ಕಪ್ಪುಕಾಯ ಅಥವ ನಿಗ್ರಿಟ್ಯೂಡ್‌ ಎಂಬ ಪದವನ್ನು ಟಂಕಿಸಿ, ಅದರ ಸುತ್ತ ಸೈದ್ಧಾಂತಿಕ ಆವರಣವನ್ನು ರೂಪಿಸಿದರು. ದುರಂತವೆಂದರೆ, ಬಳಿಕ ಆ ಪದವನ್ನು ತಮಗೆ ಬೇಕಾದಂತೆ ತಿರುಚುವ ಸಿದ್ಧಾಂತವಾಗಿ ಬದಲಿಸಲಾಯಿತು. ಅದೇನೆ ಇರಲಿ, ನಿಗ್ರಿಟ್ಯೂಡ್‌ ಪದ ಸಾಂಸ್ಕೃತಿಕ ರಾಷ್ಟ್ರವಾದವನ್ನು ಪುರಸ್ಕರಿಸುವುದಿಲ್ಲವೆಂಬ ಮಾತೇ ಸತ್ಯ. ‘ಆಫ್ರಿಕನ್‌ ವ್ಯಕ್ತಿತ್ವದ ಮರುನಿರೂಪಣೆ’ ಅಥವ ‘ಅಧಿಕೃತತೆ’ ಎಂಬ ಪದಗಳ ಕುರಿತು ಕೂಡ ಇಲ್ಲಿಯೇ ಹೇಳಬೇಕಿದೆ. ಪರಿಕಲ್ಪನೆಗೆ ಒಟ್ಟಂದ ತರಬೇಕೆಂದರೆ, ಸ್ಥಳೀಯವಾದ ಈ ಬಗೆಯ ವಿಶ್ಲೇಷಣೆಗೆ ಅವಕಾಶ ನೀಡಬಾರದು. ಏಕೆಂದರೆ, ಇಂತಹ ನುಡಿಗಟ್ಟು ಸರಳಗೊಂಡ, ಭಾವೋದ್ವೇಗದ ಮತ್ತು ಕಾಲ್ಪನಿಕವಾದ ಸಾಂಸ್ಕೃತಿಕ ಪರಂಪರೆಗಳನ್ನು ಸಮರ್ಥಿಸುತ್ತದೆ. [. . .]

ನಿಜವಾದ ಬಹುರೂಪತೆ

ಈ ಕಾರಣವಾಗಿಯೇ, ಸಾಂಸ್ಕೃತಿಕ ಬಹುರೂಪತೆಯ ಸೈದ್ಧಾಂತಿಕ ಸಮರ್ಥನೆಯು, ಸಂಪ್ರದಾಯಶರಣ ಸಾಂಸ್ಕೃತಿಕ ಆಚರಣೆಗಳಿಗೆ ಸಂವಾದಿಯಂತೆ ಇರುತ್ತದೆ. ಇಂದು, ವಿಲಕ್ಷಣ ಹೊರ ಸಂಸ್ಕೃತಿಗಳು ಅಸ್ತಿತ್ವದಲ್ಲಿಲ್ಲವೆಂದು ರಾಷ್ಟ್ರೀಯವಾದಿಗಳು, ಸಮಾಜಶಾಸ್ತ್ರಜ್ಞರು ಬಲ್ಲರು. ಹೀಗಾಗಿ, ಹಳಹಳಿಕೆಯ ಯುರೋಪಿಯನ್ ಸಂಸ್ಕೃತಿಯನ್ನಾಗಲಿ, ಕ್ರಾಂತಿಕಾರಿ ರಾಷ್ಟ್ರೀಯವಾದವನ್ನಾಗಲಿ ಅವರು ಅಂತಿಮ ಪರ್ಯಾಯವೆಂಬಂತೆ ಸೂಚಿಸಲಾರರು. ವಿಶ್ವ ನಾಗರಿಕತೆಯಲ್ಲಿ ಹಿಂಚಲನೆ ಅಸಾಧ್ಯವಾದ ಸಂಗತಿಗಳು ಜರುಗುತ್ತಿವೆ ಎಂಬುದನ್ನು ಈ ಇಬ್ಬರೂ ಬಲ್ಲರು. ಆದ್ದರಿಂದಲೇ, ನಾವು ಅರಿಯಬೇಕಿರುವ ಸತ್ಯವೆಂದರೆ, ಬಹುತ್ವವನ್ನು ಯಾವುದೇ ಹೊರಗಿನ ಸಮಾಜದಿಂದ ಎರವಲು ಪಡೆಯಲು ಸಾಧ್ಯವಿಲ್ಲ. ಬದಲಿಗೆ, ಬಹುರೂಪತೆಯು ಆಯಾ ಸಮಾಜದಲ್ಲಿಯೇ ಅಂತರ್ಗತವಾಗಿರುವ ಒಳ ಕಸುವಾಗಿದೆ. ಯಾವುದೇ ನಾಗರಿಕತೆಯ ಸಾಂಸ್ಕೃತಿಕ ಮುಖಾಮುಖಿಯು ಹೊರಗಿನ ಶಕ್ತಿಯೊಂದಿಗಿರದೆ ತನ್ನೊಳಗಿನೊಂದಿಗಿದೆ. ವಸಾಹತುಶಾಹಿಗಳ ವಿಸ್ತರಣೆಯ ಮೂಲಕ ನಮ್ಮ ಖಂಡಕ್ಕೆ ಬಹುತ್ವದ ಆಗಮನವಾಗಲಿಲ್ಲ. ಅಂತಹ ಬಹುತ್ವವನ್ನು ಇಲ್ಲಿದ್ದ ನಾಗರಿಕತೆ ಒಮ್ಮತದಿಂದ ಒಪ್ಪಿಕೊಂಡೂ ಇಲ್ಲ. ಬಹುತ್ವವು ಏನಿದ್ದರೂ ತನ್ನೊಳಗಿನ ನಿರಂತರ ವೈರುದ್ಧ್ಯಗಳಿಂದ, ಇಲ್ಲಿರುವ ವಿವಿಧ ಜನಾಂಗಗಳ ನಡುವಿನ ಸಂಘರ್ಷದಿಂದ ಒಡಮೂಡಿರುವಂಥದ್ದು.

ಧ್ರುವೀಕರಣದ ಅಪಾಯ

ಬಹುತ್ವವು ವಸಾಹತುಶಾಹಿಗಳೊಂದಿಗೆ ಆಗಮಿಸಲಿಲ್ಲವೆಂಬುದೇ ಸತ್ಯ. ಇದ್ದರೂ, ಅದನ್ನು ಎರಡು ಕೃತಕ ಧ್ರುವಗಳ ನಡುವಿನ ಸಂಘರ್ಷವೆಂಬಂತೆ ಗ್ರಹಿಸಿ ಅದಕ್ಕೆ ಪ್ರಾಬಲ್ಯ ಹೊಂದಿದವರು, ದುರ್ಬಲರು ಎಂದು ಹಣೆಪಟ್ಟಿ ಕಟ್ಟಲಾಯಿತು. ನಮ್ಮ ಆಂತರಿಕ ಸಂವಾದಗಳನ್ನು ಸಂಘಟಿಸಿ, ನಮ್ಮದೇ ವಿಧಿ ವಿಧಾನಗಳನ್ನೊಡ್ಡಿ ಯುರೋಪಿಯನ್ ಸಂಸ್ಕೃತಿಗೆ ಪ್ರತಿಯಾಗಿ ಬಳಸಿದ್ದರೆ, ಈ ಗೊಂದಲಮಯ ವ್ಯಾಖ್ಯಾನವನ್ನು ನಾವು ಸಮೃದ್ಧಗೊಳ್ಳಬಹುದಾಗಿತ್ತು. ಉದಾಹರಣೆಗೆ, ಆಫ್ರಿಕನ್‌ ಕಲೆ ಎಂದು ಗುರುತಿಸುವ ಪ್ರಕಾರದಿಂದ ಯುರೋಪ್‌ ಮರುಜೀವ ಪಡೆಯಿತು ಎನ್ನುವ ಅಂಶ. ಇದಕ್ಕೆ ಬದಲಾಗಿ, ಹಿಂಸೆಯನ್ನು ಸೃಷ್ಟಿಸಿ, ಇಂತಹ ಪ್ರಾಮಾಣಿಕ ಕೊಡು-ಕೊಳ್ಳುವಿಕೆಯನ್ನು ನಾಶ ಮಾಡಲಾಯಿತು. ಈ ಮಾತಿನ ತಾತ್ಪರ್ಯವಿಷ್ಟೇ: ವಸಾಹತುಶಾಹಿಯು ಆಫ್ರಿಕನ್‌ ಸಮಾಜದ ಸಂಕೀರ್ಣತೆಯಿಂದ ಹುಟ್ಟಿದ ಆಂತರಿಕ ಬಹುತ್ವವನ್ನು ನಾಶ ಮಾಡಿ, ವೈಷಮ್ಯ ಹುಟ್ಟುಹಾಕಿ, ಬಲಹೀನಗೊಳಿಸಿತು. ರಾಜಕೀಯ ದ್ರೋಹದ ಮೂಲಕ ಸಾಂಸ್ಕೃತಿಕ ರಾಷ್ಟ್ರೀಯವಾದ ಎಂಬ ದಯನೀಯತೆಯ ಕಡೆ ಸಮಾಜವನ್ನು ನೂಕಿತು. ಸಾಂಸ್ಕೃತಿಕ ಪರಾಧೀನತೆಯನ್ನು ಸೃಷ್ಟಿಸಿತು.

ಈ ಧ್ರುವೀಕರಣವು ಘನಘೋರವಾದುದು; ವಿನಾಶಕ ಸನ್ನಿವೇಶವೇ ನಮ್ಮ ಸಾಂಸ್ಕೃತಿಕ ಪುನಾವ್ಯಾಖ್ಯಾನದ ಮುಂಬೆಳಗಿಗೆ ನಾಂದೀ ಪದವಾಗಿದೆ ಎಂಬುದನ್ನು ಅರಿಯಬೇಕಿದೆ. ಆಫ್ರಿಕನ್‌ ಸಂಸ್ಕೃತಿಯು ತನ್ನಡೆಗೆ, ತನ್ನ ಆಂತರಿಕ ಬಹುರೂಪತೆಯೆಡೆಗೆ, ತೆರೆದ ಮನಸ್ಸಿನೆಡೆಗೆ ಮತ್ತೆ ಹೆಜ್ಜೆ ಹಾಕಬೇಕಿದೆ. ನಮ್ಮ ಮನಸ್ಸಿನ ಪೂರ್ವಗ್ರಹಗಳಿಂದ ಬಿಡುಗಡೆಗೊಳ್ಳಬೇಕಿದೆ. ಆಫ್ರಿಕನ್‌ ಸಾಂಸ್ಕೃತಿಕ ಪರಂಪರೆಯನ್ನು ಉಳಿದ ಖಂಡಗಳ ಪರಂಪರೆಗಳೊಂದಿಗೆ ಮುಖಾಮುಖಿಯಾಗಿಸಬೇಕಿದೆ. ಈ ಪ್ರಕ್ರಿಯೆಯು, ಪಾಶ್ಚಾತ್ಯೀಕರಣವಾಗಲಿ, ಪ್ರಬಲ ಸಂಸ್ಕೃತಿಯೊಂದಿಗೆ ಸೇರಿಹೋಗುವುದಾಗಲಿ ಅಲ್ಲ. ಬದಲಿಗೆ, ಇದೊಂದು ಕ್ರಿಯಾಶೀಲ ಬಿಡುಗಡೆ. ಒಂದು ಮುಕ್ತ ಅವಕಾಶದೊಂದಿಗೆ ಆಫ್ರಿಕನ್‌ ಪರಂಪರೆಯನ್ನು ತೆರೆದಿಡುವುದಾಗಿದೆ. [. . .]

ಟಿಪ್ಪಣಿ:

ಲೂಸಿಯ ಲೆವಿ ಬ್ರೂಲ್‌: 1857-1939 (Lucien Lévy-Bruhl) ಫ್ರೆಂಚ್‌ ಮಾನವಶಾಸ್ತ್ರಜ್ಞ. ‘ಆದಿಮ’ ಮತ್ತು ‘ಆಧುನಿಕ’ ಮನೋವಿಕಾಸ ಬ್ರೂಲ್‌ ಅವರ ಬಹುಚರ್ಚಿತ, ವಿವಾದಾತ್ಮಕ ಪ್ರಮೇಯ. ಆದಿಮ ಮನಸ್ಥಿತಿಯು ವಾಸ್ತವ ಮತ್ತು ಅತೀಂದ್ರಿಯ ಅನುಭವಗಳನ್ನು ಪ್ರತ್ಯೇಕಗೊಳಿಸಿ ನೋಡುವುದಿಲ್ಲ. ಆದರೆ, ಲೋಕ ವ್ಯಾಖ್ಯಾನಕ್ಕೆ ‘ಅನುಭಾವಿ ಸಹಭಾಗಿತ್ವ’ದ ಮೊರೆ ಹೋಗುತ್ತದೆ. ಜತೆಗೆ, ಆದಿಮ ಪ್ರಜ್ಞೆ ವೈರುದ್ಧ್ಯಗಳನ್ನು ಪರಿಗಣಿಸುವುದಿಲ್ಲ, ಎಂಬುದು ಲೂಸಿಯ ಅವರ ವಾದ.

ಕ್ಲಾದ್‌ ಲೆವಿ ಸ್ಟ್ರಾಸ್‌: 1908-2009 (Claude Lévi-Strauss) ಆಧುನಿಕ ಮಾನವಶಾಸ್ತ್ರದ ಮೊದಲಾಳಿ, ರಾಚನಿಕಶಾಸ್ತ್ರದ ಆದ್ಯಪುರುಷ. ಕಲ್ಪಿತಕಥನ, ಭಾಷಾ ರಾಚನಿಕಶಾಸ್ತ್ರದ ಮೇಲಿನ ಅವರ ಕೆಲಸ ತಲೆಮಾರುಗಳನ್ನು ಪ್ರೇರೇಪಿಸಿದೆ. ಕಲ್ಪಿತ ಕಥನದಲ್ಲಿ ಅಡಗಿರುವ ಅರ್ಥಗಳೇ ನಿಸರ್ಗ ಹಾಗೂ ಸಂಸ್ಕೃತಿಯನು ಪ್ರತಿನಿಧಿಸುತ್ತವೆ ಎಂಬುದು ಸ್ಟ್ರಾಸ್‌ರ ಅಂಬೋಣ.

ಬ್ರಾನಿಸ್ಲಾ ಕಾಸ್ಪರ್‌ ಮಲಿನೊವಸ್ಕಿ: 1884-1942 (Bronislaw Malinowski) ಜನಾಂಗೀಯ ಅಧ್ಯಯನ, ಸಮಾಜಗಳ ಕುರಿತು ವ್ಯಾಪಕವಾಗಿ ಬರೆದ ಮಾನವಶಾಸ್ತ್ರಜ್ಞ. ಹುಟ್ಟಿದ್ದು ಪೊಲೆಂಡ್‌ನಲ್ಲಾದರೂ ಇಂಗ್ಲೆಂಡ್‌, ಅಮೆರಿಕದಲ್ಲಿ ಕೆಲವು ಕಾಲ ವಾಸ. ಇವರ ಜನಾಂಗೀಯ ಅಧ್ಯಯನಗಳು ತಲೆಮಾರುಗಳನ್ನು ಪ್ರಭಾವಿಸಿದವು.

ಲೆಪೊಲ್ಡ್‌ ಸೇಡರ್‌ ಸೆಂಘಾರ್‌: 1906-2001 (Léopold Sédar Senghor) ಸೆನೆಗಾಲ್‌ನ ಕವಿ, ರಾಜಕಾರಣಿ, ಸಾಂಸ್ಕೃತಿಕ ಸಿದ್ಧಾಂತಿ. ತಮ್ಮನ್ನು ತಾವು ಆಫ್ರಿಕನ್‌ ಸಮಾಜವಾದಿ ಎಂದು ಕರೆದುಕೊಂಡಿದ್ದ ಸೆಂಘಾರ್ ಸೆನೆಗಲ್‌ ಡೆಮಾಕ್ರಟಿಕ್‌ ಪಾರ್ಟಿ ಸ್ಥಾಪಕರು. ಎರಡು ದಶಕಗಳ ಕಾಲ ಸೆನೆಗಲ್‌ನ ಅಧ್ಯಕ್ಷರಾಗಿದ್ದರು.

ಈ ಹಿಂದಿನ ಬರಹಗಳು

ಗ್ರೀಕ್ ಮತ್ತು ಅರಬ್ ಸಾಹಿತ್ಯದ ಮಧ್ಯೆ ಕಂದಕ ಏಕೆ?: ಒಂದು ವಿಶ್ಲೇಷಣೆ

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...