ಬೇಟೆಗಾರರೊಂದಿಗೆ ಒಂದು ರೋಚಕ ಸುತ್ತಾಟ 'ಸ್ವಾತಂತ್ಯ್ರಪೂರ್ವ ಶಿಕಾರಿ ಕತೆಗಳು'


ಖಂಡಿತ ಶಿಕಾರಿ ಕುರಿತು ಓದುವ ಓದುಗರಿಗೆ ಇಲ್ಲಿಯ ಕತೆಗಳು ನಿರಾಶೆ ಮಾಡುವುದಿಲ್ಲ. ಜಿಮ್ ಕಾರ್ಬೆಟ್, ಕೆನೆತ್ ಆಂಡರ್ಸನ್ ರ ಕೃತಿಗಳನ್ನು ಓದಿದಾಗ ದೊರಕುವ ತೃಪ್ತಿಯೇ ಇಲ್ಲಿಯ ಕತೆಗಳಲ್ಲೂ ಸಿಗುತ್ತದೆ. ನನಗನಿಸಿದಂತೆ ಗಿರೀಶ್ ತಾಳಿಕಟ್ಟೆಯವರಿಗೆ ತೇಜಸ್ವಿಯವರ ಗಾಢ ಪ್ರಭಾವವಿದೆ. ಹೀಗಾಗಿ ಈ ಕೃತಿಯನ್ನು ಅವರಿಗೇ ಅರ್ಪಿಸಲಾಗಿದೆ. ಭಾಷೆ, ಹೇಳುವ ಶೈಲಿ, ಶಬ್ದಗಳಲ್ಲಿ ಕಟ್ಟಿಕೊಡುವ ಚಿತ್ರಣ ಎಲ್ಲವೂ ತೇಜಸ್ವಿಯವರ ಅನುವಾದಿತ ಶಿಕಾರಿ ಕತೆಗಳನ್ನೇ ನೆನಪಿಸುತ್ತವೆ ಎನ್ನುತ್ತಾರೆ ಲೇಖಕ ಸಿದ್ಧರಾಮ ಕೂಡ್ಲಿಗಿ.

ಕೃತಿ : ಸ್ವಾತಂತ್ರ್ಯಪೂರ್ವ ಶಿಕಾರಿ ಕತೆಗಳು
ಸಂಗ್ರಹ-ಅನುವಾದ : ಗಿರೀಶ್ ತಾಳಿಕಟ್ಟೆ
ಪ್ರಕಾಶಕರು : ಕಾವ್ಯಕಲಾ ಪ್ರಕಾಶನ ಬೆಂಗಳೂರು
ಮೊದಲ ಮುದ್ರಣ : 2022
ಬೆಲೆ : ರೂ.200

’ಶಿಕಾರಿ’ ಒಂದು ಹವ್ಯಾಸ. ಒಂದು ಕಾಲದಲ್ಲಿ ರಾಜ ಮಹಾರಾಜರ ಬೇಸರ ನೀಗಿಸಿಕೊಳ್ಳುವ ಹಲವಾರು ಹವ್ಯಾಸಗಳಲ್ಲಿ ಇದೂ ಒಂದಾಗಿತ್ತು. ಆಗಿನ ಕಾಲದಲ್ಲಿ ಹೇರಳವಾದ ಅರಣ್ಯ ಅದಕ್ಕೆ ತಕ್ಕಂತೆ ಕಾಡುಪ್ರಾಣಿಗಳೂ ಇದ್ದವು. ರಾಜರುಗಳ, ಸಿರಿವಂತರ ಬೇಟೆಗೆ ಯಾರೂ ಅಡ್ಡಿಪಡಿಸುವಂಥ ಸ್ಥಿತಿಯೇ ಇರಲಿಲ್ಲ. ಹೀಗಾಗಿ ಶಿಕಾರಿಯೆಂಬ ಹೆಸರಿನಲ್ಲಿ ಹಲವಾರು ಪ್ರಾಣಿಗಳ ಹತ್ಯೆಯಾಗಿ ಪ್ರಾಣಿಗಳ ಸಂಖ್ಯೆ ಕ್ಷೀಣಿಸತೊಡಗಿತು.
-
ಮೇಲಿನ ವಿಷಯ ಯಾಕೆ ಹೇಳಿದೆನೆಂದರೆ ’ಬೇಸರ ನೀಗಿಸಿಕೊಳ್ಳಲು ಬೇಟೆಯಾಡುವುದು’ ಬೇರೆ, ’ಮನುಷ್ಯರಿಗೆ ಹಾಗೂ ಮನುಷ್ಯರ ಸಾಕು ಪ್ರಾಣಿಗಳಿಗೆ ಕಾಡುಪ್ರಾಣಿಗಳಿಂದ ತೊಂದರೆಯಾದಾಗ ಬೇಟೆಯಾಡುವುದು’ ಬೇರೆ. ಹುಲಿಯೋ, ಚಿರತೆಯೋ ನರಭಕ್ಷಕನಾದಾಗ ಅನಿವಾರ್ಯವಾಗಿ ಆ ಪ್ರಾಣಿಯನ್ನು ಕೊಲ್ಲಲೇಬೇಕಾಗುವುದು. ಅದು ಅನಿವಾರ್ಯವೂ ಹೌದು. ಒಂದು ಹುಲಿ, ಚಿರತೆ ನರಭಕ್ಷಕನಾದಾಗ ಕೊಲ್ಲಲೇಬೇಕು ಎಂದು ತೀರ್ಮಾನಿಸಿ ಕೊಲ್ಲುವುದಕ್ಕೂ, ಕೇವಲ ಖುಷಿಗಾಗಿ ವಿನಾಕಾರಣ ಅಮಾಯಕ ಹುಲಿ, ಚಿರತೆಗಳನ್ನು ಕೊಲ್ಲುವುದಕ್ಕೂ ವ್ಯತ್ಯಾಸವಿದೆ. ಮನುಷ್ಯನನ್ನು ತಿನ್ನುವ ಹುಲಿ, ಚಿರತೆಗಳನ್ನು ದುಷ್ಟ ಜಂತುಗಳೆಂದು ವೈಭವೀಕರಿಸಿ ಹೇಳುವ ನಾವು, ವಿನಾಕಾರಣ ಅವುಗಳನ್ನು ಅಟ್ಟಾಡಿಸಿ ಕೊಲ್ಲುವ ಮನುಷ್ಯನೆಂಬ ಪ್ರಾಣಿಯನ್ನು ಸಹ ಒಳ್ಳೆಯ ಬೇಟೆಗಾರ ಎಂದು ವೈಭವೀಕರಿಸಿ ಹೇಳುತ್ತೇವೆ. ಇಲ್ಲಿ ಯಾವುದು ನ್ಯಾಯಸಮ್ಮತ ಎಂಬ ವಿಮರ್ಶೆಗೆ ನಾನು ಹೋಗುವುದಿಲ್ಲ.
-
ಕೆನೆತ್ ಆಂಡರ್ಸನ್, ಜಿಮ್ ಕಾರ್ಬೆಟ್ ನಾವು ಕಂಡ ನುರಿತ ಬೇಟೆಗಾರರು. ಇವರು ಕೇವಲ ನರಭಕ್ಷಕ ಹುಲಿ, ಚಿರತೆಗಳು ಹಾಗೂ ಜನರಿಗೆ ಉಪದ್ರವ ಕೊಡುತ್ತಿದ್ದ ಪ್ರಾಣಿಗಳನ್ನು ಬೇಟೆಯಾಡಿ ಕೊಲ್ಲುತ್ತಿದ್ದರು. ಅದು ಜನಪರ ಕಾರ್ಯ. ಇವರೆಲ್ಲ ಕನ್ನಡಿಗರಿಗೆ ಪರಿಚಿತರಾದದ್ದೇ ಖ್ಯಾತ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ್ ಕೆಂಜಿಗೆ ಅವರಿಂದ. ನಂತರದಲ್ಲಿ ಬರಹಗಾರರಾದ ಟಿ.ಕೆ.ವಿವೇಕಾನಂದ, ಸಾಕ್ಷಿ ಇವರುಗಳ ಅನುವಾದಿತ ಬರಹಗಳೂ ಕನ್ನಡಿಗರಿಗೆ ಚಿರಪರಿಚಿತ. ತದನಂತರದಲ್ಲಿ ಆನ್ ಲೈನ್ ನಲ್ಲಿ ಥಟ್ಟನೆ ನನ್ನ ಗಮನ ಸೆಳೆದದ್ದು ಗಿರೀಶ್ ತಾಳಿಕಟ್ಟೆಯವರ ’ಸ್ವಾತಂತ್ರ್ಯಪೂರ್ವ ಶಿಕಾರಿ ಕತೆಗಳು’ ಕೃತಿ. ಈಗಾಗಲೇ ’ಆ 17 ದಿನಗಳು’ ಎಂಬ ಅನುವಾದಿತ ಕೃತಿಯಿಂದ ಓದುಗರ ಗಮನ ಸೆಳೆದಿರುವ ಗಿರೀಶ್ ತಾಳಿಕಟ್ಟೆಯವರ ಈ ಕೃತಿಯನ್ನು ನೋಡಿದ ತಕ್ಷಣ ಆನ್ ಲೈನ್ ಮೂಲಕ ತರಿಸಿದೆ.
-
ಅಷ್ಟರಲ್ಲಾಗಲೆ ಅವರ ಕೃತಿ ಪರಿಚಯದಿಂದ, ನನ್ನ ಸ್ನೇಹಿತರಾಗಿಬಿಟ್ಟ ಗಿರೀಶ್ ತಾಳಿಕಟ್ಟೆಯವರು ಈ ಮೇಲಿನ ಕೃತಿಯನ್ನು ಕಳಿಸುತ್ತೇನೆ ಎಂದು ಫೋನ್ ಮೂಲಕ ಹೇಳುವ ಮುಂಚೆಯೇ ನಾನಾಗಲೇ ಅದನ್ನು ಖರೀದಿಸಿಯಾಗಿತ್ತು. ಯಾಕೆಂದರೆ ಈ ಬೇಟೆಯ ಕತೆಗಳೆಂದರೆ ನನ್ನ ಓದುವ ಹುಚ್ಚುಗಳಲ್ಲಿ ಅದೂ ಒಂದು ವಿಷಯವಾಗಿದೆ. ತೇಜಸ್ವಿಯವರ ಅನುವಾದಿತ ಕೃತಿಗಳನ್ನು ಅದೆಷ್ಟು ಸಲ ಓದಿರುವೆನೋ ನನಗೇ ಗೊತ್ತಿಲ್ಲ.
-
ಇದೀಗ ನನ್ನ ’ಶಿಕಾರಿ’ ಕತೆಗಳನ್ನು ಓದುವ ಹುಚ್ಚಿಗೆ ಮತ್ತೊಂದು ಕೃತಿ ಸೇರ್ಪಡೆಗೊಂಡಿತು. ಈ ಮಾತನ್ನು ಯಾಕೆ ಹೇಳಿದೆನೆಂದರೆ ಈ ಕೃತಿಯನ್ನು ಓದಲೆಂದು ಕೈಗೆತ್ತಿಕೊಂಡವನಿಗೆ ಮುಗಿಸುವವರೆಗೂ ಸಮಾಧಾನವಾಗಲಿಲ್ಲ. ಮಧ್ಯೆ ಮಧ್ಯೆ ಈ ಊಟ, ತಿಂಡಿಗಳೆಗೆ ಯಾಕಾದರೂ ಕರೆಯುವರೋ ಎಂಬ ರೀತಿಯಲ್ಲಿ ಓದಿನ ಹಸಿವು. ಹೀಗೆ ಬೆಂಬಿಡದೆ ಓದಿದ ನಂತರ ಕೃತಿಯನ್ನು ಕುರಿತು ಬರೆಯಲೇಬೇಕೆಂಬ ಭಾವ ಮೂಡಿಬಿಟ್ಟಿತು.
-
ಖಂಡಿತ ಶಿಕಾರಿ ಕುರಿತು ಓದುವ ಓದುಗರಿಗೆ ಇಲ್ಲಿಯ ಕತೆಗಳು ನಿರಾಶೆ ಮಾಡುವುದಿಲ್ಲ. ಜಿಮ್ ಕಾರ್ಬೆಟ್, ಕೆನೆತ್ ಆಂಡರ್ಸನ್ ರ ಕೃತಿಗಳನ್ನು ಓದಿದಾಗ ದೊರಕುವ ತೃಪ್ತಿಯೇ ಇಲ್ಲಿಯ ಕತೆಗಳಲ್ಲೂ ಸಿಗುತ್ತದೆ. ನನಗನಿಸಿದಂತೆ ಗಿರೀಶ್ ತಾಳಿಕಟ್ಟೆಯವರಿಗೆ ತೇಜಸ್ವಿಯವರ ಗಾಢ ಪ್ರಭಾವವಿದೆ. ಹೀಗಾಗಿ ಈ ಕೃತಿಯನ್ನು ಅವರಿಗೇ ಅರ್ಪಿಸಲಾಗಿದೆ. ಭಾಷೆ, ಹೇಳುವ ಶೈಲಿ, ಶಬ್ದಗಳಲ್ಲಿ ಕಟ್ಟಿಕೊಡುವ ಚಿತ್ರಣ ಎಲ್ಲವೂ ತೇಜಸ್ವಿಯವರ ಅನುವಾದಿತ ಶಿಕಾರಿ ಕತೆಗಳನ್ನೇ ನೆನಪಿಸುತ್ತವೆ. ಹೀಗಾಗಿ ಎಲ್ಲಿಯೂ ನಮಗೆ ಈ ಕತೆಗಳನ್ನು ಓದುವಾಗ ಬೋರ್ ಅನಿಸುವುದಿಲ್ಲ. ಮುಂದೇನು ಎಂಬ ಕುತೂಹಲವನ್ನು ಉಳಿಸಿಕೊಂಡೇ ಸಾಗುತ್ತವೆ.
-
ಇಲ್ಲಿ ಒಟ್ಟು 10 ಕತೆಗಳಿವೆ. ಎಲ್ಲವೂ ಸ್ವಾತಂತ್ರ್ಯಪೂರ್ವದ ಪ್ರಖ್ಯಾತ ಬೇಟೆಗಾರರ ಬೇಟೆಯ ಅನುಭವದ ಕತೆಗಳು. ಕೆಲವರು ನುರಿತ ಶಿಕಾರಿದಾರರು, ಕೆಲವರು ಅಧಿಕಾರಿಗಳು ತಮ್ಮ ಬೇಟೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿನ ಕತೆಗಳ ವಿಶೇಷವೆಂದರೆ ಬೇಟೆಯ ಜೊತೆ ಜೊತೆಗೆ ಸ್ವಾತಂತ್ರ್ಯಪೂರ್ವದ ಜನಜೀವನದ ದೃಶ್ಯಗಳನ್ನೂ ಕಟ್ಟಿಕೊಡುವುದು. ಕೆಲವು ನರಭಕ್ಷಕ ಪ್ರಾಣಿಗಳನ್ನು ಕೊಲ್ಲುವ ರೋಚಕ ಕತೆಗಳಿದ್ದರೆ ಕೆಲವು ವಿನಾಕಾರಣ ಬೇಟೆಯ ಖುಷಿಗಾಗಿ ಪ್ರಾಣಿಗಳನ್ನು ಕೊಲ್ಲುವ ಕ್ರೂರತೆಗಳನ್ನೂ ಒಳಗೊಂಡಿವೆ. ಮಹಾರಾಜರ ಶಿಕಾರಿ ಎಂಬ ಕತೆ ಅಂತಹವುಗಳಲ್ಲೊಂದು. ರಾಜರುಗಳು ಹೇಗೆ ಬೇಟೆಯಾಡುತ್ತಿದ್ದರು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಇಲ್ಲಿ ವರ್ಣಿಸಲಾಗಿದೆ. ಆದರೆ ಇಲ್ಲಿ ಗಿರೀಶ್ ತಾಳಿಕಟ್ಟೆಯವರು ಶಿಕಾರಿಯ ಕತೆಗಳ ಜೊತೆಗೇ ರಾಜರುಗಳ ಇಂಥ ವಿಕೃತ ಹವ್ಯಾಸಗಳನ್ನೂ ಪರಿಚಯಿಸಿರುವುದು ಆಗಿನ ಕಾಲದ ಪರಿಚಯ ಓದುಗರಿಗಾಗಲಿ ಎಂದೇ ಇದನ್ನು ಇಲ್ಲಿ ತಂದಿರುವರೆಂದೆನಿಸುತ್ತದೆ. ಇದರಿಂದ ಓದುವ ಖುಷಿ ದೊರಕಿದರೂ ಅಮಾಯಕ ಪ್ರಾಣಿಗಳನ್ನು ಹೇಗೆಲ್ಲ ಅಟ್ಟಾಡಿಸಿ ಕೊಲ್ಲುವರೆಂಬುದನ್ನು ಓದಿದರೆ ಜಿಗುಪ್ಸೆ ಮೂಡಿಸುತ್ತದೆ. ಒಂದೇ ಸಲಕ್ಕೆ ನಾಲ್ಕೈದು ಹುಲಿಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಕೊಲ್ಲುವುದರಲ್ಲಿ ಯಾವ ಆನಂದ ರಾಜರುಗಳಿಗೆ ಸಿಗುತ್ತಿತ್ತೋ ಅನಿಸುತ್ತದೆ ಅಲ್ಲದೇ ಅಮಾಯಕ ಹುಲಿಗಳ ಸಾವಿನಿಂದ ಓದುಗನಿಗೆ ಅಯ್ಯೋ ಅನಿಸದೇ ಇರದು.
-
ಈ ಕೃತಿಯ ಮತ್ತೊಂದು ವಿಶೇಷವೆಂದರೆ ಪ್ರತಿ ಬೇಟೆಯ ಕತೆಯ ಜೊತೆಗೆ ಆರಂಭದಲ್ಲಿಯೇ ಆಯಾ ಬೇಟೆಗಾರರ ಸಂಕ್ಷಿಪ್ತವಾದ ವಿವರಗಳಿವೆ. ಬಹುತೇಕವಾಗಿ ಎಲ್ಲರೂ ಬ್ರಿಟಿಶ್ ಅಧಿಕಾರಿಗಳೇ. ಇವರಲ್ಲಿ ಬ್ರಿಟಿಶ್ ಮಹಿಳಾ ಶಿಕಾರಿದಾರರೂ ಒಬ್ಬರಿರುವುದೂ ಸಹ ವಿಶೇಷ.
-
ನಾನಾಗಲೇ ಹೇಳಿದಂತೆ ಶಿಕಾರಿ ಕತೆಗಳ ವಿಶಿಷ್ಟ ಶೈಲಿಯೆಂದರೆ ಓದುಗರನ್ನೂ ಅರಣ್ಯದಲ್ಲಿ ಸುತ್ತಾಡಿಸಿದ ಹಾಗೂ ಬೇಟೆಯ ಪ್ರತಿಯೊಂದು ವಿವರವನ್ನೂ ಕಣ್ಣಿಗೆ ಕಟ್ಟುವಂತಹ ಅನುಭವವನ್ನು ನೀಡುವುದು. ಅದಿಲ್ಲಿ ಯಶಸ್ವಿಯಾಗಿದೆ. ಶಿಕಾರಿದಾರರ ಜೊತೆ ನಾವೂ ಸಹ ಆ ಸನ್ನಿವೇಶದಲ್ಲಿರುವೆವೇನೋ ಎಂಬಂತೆ ಉಸಿರು ಬಿಗಿಹಿಡಿದು ಕೂತು ಓದುವ ಅನುಭವವನ್ನು ಈ ಕೃತಿ ನೀಡುತ್ತದೆ. ನರಭಕ್ಷಕ ಹುಲಿ ಹಾಗೂ ಚಿರತೆಗಳು ಎಷ್ಟೊಂದು ಅಪಾಯಕಾರಿಯಾಗಿರುತ್ತವೆ, ಅವುಗಳ ತಂತ್ರವೇನು, ಶಿಕಾರಿದಾರರು ಎಷ್ಟೊಂದು ಎಚ್ಚರಿಕೆಯಿಂದಿರಬೇಕು, ಒಂದೇ ಒಂದು ಕ್ಷಣದ ಅಲಕ್ಷ್ಯತನ ಕಾಡಿನಲ್ಲಿ ಹೇಗೆ ಪ್ರಾಣವನ್ನು ಬಲಿ ತೆಗೆದುಕೊಳ್ಳಬಹುದು ಎಲ್ಲವನ್ನೂ ಜಿಮ್ ಕಾರ್ಬೆಟ್ ಹಾಗೂ ಕೆನೆತ್ ಆಂಡರ್ಸನ್ ರ ಕತೆಗಳಲ್ಲಿ ಪರಿಚಿತ. ಅದೇ ಅನುಭವವನ್ನೇ ಇಲ್ಲಿಯ ಕತೆಗಳೂ ಅಕ್ಷರಶ: ನೀಡುತ್ತವೆ. ಮೈಯೆಲ್ಲ ಕಣ್ಣಾಗಿ, ಕಿವಿಯಾಗಿ ಮೆಲ್ಲಗೆ ಹೆಜ್ಜೆಯೂರುವ, ಶಿಕಾರಿಗಾಗಿ ಇಡೀ ರಾತ್ರಿ ಮಚಾನಿನಲ್ಲಿ ಗೊತ್ತು ಕೂರುವ, ಪೊದೆಗಳಲ್ಲಿ ಅಡಗಿರುವ ನರಭಕ್ಷಕನನ್ನು ಹೊರತಂದ ತಕ್ಷಣವೇ ಹೇಗೆ ಗುಂಡಿಟ್ಟು ಹೊಡೆಯಬೇಕೆನ್ನುವ, ಹುಲಿ, ಚಿರತೆಗಳ ಹೆಜ್ಜೆ ಜಾಡನ್ನು ಗುರುತಿಸಿ ಹೇಗೆ ಬೆಂಬತ್ತಬೇಕೆನ್ನುವ ಎಲ್ಲ ವಿವರಗಳೂ ಇಲ್ಲಿವೆ. ಜೊತೆಯಲ್ಲಿಯೇ ಆಗಿನ ಕಾಲದ ಜನಜೀವನ, ಸ್ಥಳೀಯರ ಆಚಾರ ವಿಚಾರಗಳೂ ಸಹ ಇಲ್ಲಿ ಮೂಡಿಬಂದಿವೆ. ಇಲ್ಲಿ ಕೇವಲ ಹುಲಿ, ಚಿರತೆಗಳಷ್ಟೇ ಅಲ್ಲದೆ ಆನೆ, ಕಾಡುಕೋಣದ ಶಿಕಾರಿಯ ಬಗ್ಗೆಯೂ ಕತೆಗಳಿವೆ.
-
ಪ್ರತಿಯೊಂದು ಕತೆಗೆ ಮೊದಲು ಹಾಗೂ ಅಲ್ಲಲ್ಲಿ ಶಿಕಾರಿಯ ಕುರಿತ ಚಿತ್ರಗಳನ್ನೂ ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸಲಾಗಿದೆ. ಮುಖಪುಟ ಹಾಗೂ ಒಳಗಿನ ಮುದ್ರಣ ಅಚ್ಚುಕಟ್ಟಾಗಿದೆ. ಸ್ವಾತಂತ್ರ್ಯಪೂರ್ವದ ಬೇಟೆಯ ವಿಭಿನ್ನ ಅನುಭವಗಳನ್ನು ಓದುವ ಮೂಲಕ ಪಡೆಯಬೇಕೆಂದಿದ್ದರೆ ಖಂಡಿತ ಈ ಕೃತಿಯನ್ನು ಓದಬಹುದು. ಕನ್ನಡದ ಶಿಕಾರಿ ಕತೆಗಳಿಗೆ ಒಂದು ವಿಶಿಷ್ಟ ಸೇರ್ಪಡೆ ಈ ಕೃತಿ.
-
ಕನ್ನಡಕ್ಕೆ ಸಂಗ್ರಹ ಹಾಗೂ ಅನುವಾದ ಮಾಡಿದ ಗಿರೀಶ್ ತಾಳಿಕಟ್ಟೆಯವರಿಗೆ ಅಭಿನಂದನೆಗಳು. ತಮ್ಮಿಂದ ಮತ್ತಷ್ಟು ಇಂತಹ ಅನುವಾದಿತ ಕೃತಿಗಳನ್ನು ನನ್ನಂತಹ ಕನ್ನಡಿಗರು ನಿರೀಕ್ಷಿಸುತ್ತಿದ್ದಾರೆ.

- ಸಿದ್ಧರಾಮ ಕೂಡ್ಲಿಗಿ

 

MORE FEATURES

ಅಪಾರ ಅನುಭವ ಮತ್ತು ಅಧ್ಯಯನದ ಸಂಗಮ ಈ ಕೃತಿ

07-05-2024 ಬೆಂಗಳೂರು

"ಅಪಾರ ಅನುಭವ ಮತ್ತು ಅಧ್ಯಯನದ ಸಂಗಮವಾದ ಈ ಕೃತಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಅದರಲ್ಲೂ ಪ್ರಮುಖವಾಗಿ...

ಕನ್ನಡ ಸಾಹಿತ್ಯ ಅಗೆದಷ್ಟೂ ಆಳವಾಗುತ್ತಲೇ ಹೋಗುತ್ತದೆ; ಕಮಲ ಹಂಪನಾ

07-05-2024 ಬೆಂಗಳೂರು

‘ಕನ್ನಡದ ಕಾಯಕಕ್ಕೆ ಕೈಹಾಕಿ ಕೈಲಾದಷ್ಟು ಸಾಹಿತ್ಯ ಕೃಷಿ ಮೊಗೆದು ಸಾರ್ಥಕತೆಯನ್ನು ಪಡೆದಿದ್ದಾರೆ. ಸಾಹಿತ್ಯ ಕೃಷಿಯ...

ಬಣ್ಣಗಳ ಮಧ್ಯೆ 'ಪ್ರೀತಿ' ಹುಡುಕುವ ಮನಸ್ಥಿತಿ: ಆಮಿರ್ ಬನ್ನೂರು ಅವರ ಬ್ಯಾರಿ ಭಾಷೆಯ ಕವಿತೆ

07-05-2024 ಬೆಂಗಳೂರು

"'ಕಪ್ಪು ವರ್ಣಿಯ' ಎನ್ನುವ ಕಾರಣಕ್ಕಾಗಿ, ಕೆಳ ಜಾತಿಯ ಎನ್ನುವ ಕಾರಣಕ್ಕಾಗಿ, ನಿಂದನೆ ಮಾಡುವ ಜನಾಂಗದ ಬಾಯ...