ಭಾರತೀಯ ಕೌಟುಂಬಿಕ ವ್ಯವಸ್ಥೆ ಮತ್ತು ಹೊಸ ಸಂಸಾರ ನಾಟಕ ಸಮುಚ್ಚಯ


‘ವರಕವಿ ಬೇಂದ್ರೆ ಅವರ ನಾಟಕಗಳ ರಂಗ ಪ್ರವೇಶಕ್ಕೆ ಇದು ಸಕಾಲ’ ಎನ್ನುತ್ತಾರೆ ರಂಗಕರ್ಮಿ, ಲೇಖಕ ಡಾ. ಬೇಲೂರು ರಘುನಂದನ.ಈ ಹಿನ್ನೆಲೆಯಲ್ಲಿ ‘ಬೇಂದ್ರೆ ನಾಟಕಗಳ ರಂಗ ಪ್ರವೇಶ’ ಎಂಬ ವಿಶೇಷ ಸರಣಿ ಆರಂಭಿಸಿದ್ದು, ಈ ಸರಣಿಯಲ್ಲಿ ಈ ಬಾರಿ ಸಂಸಾರಿಕ ಜೀವನದ ಕುರಿತು ಬೇಂದ್ರೆಯವರು ಬರೆದ ಮೂರು ವಿಶೇಷ ನಾಟಕಗಳ ಕುರಿತು ವಿಶ್ಲೇಷಿಸಿದ್ದಾರೆ.

'ಮಂದೀ ಮದಿವಿ', 'ಮಂದೀ ಮಕ್ಕಳು' ಮತ್ತು 'ಮಂದೀ ಮನಿ' ಮೂರು ಬೇರೆ ಬೇರೆ ಏಕಾಂಕಗಳಾಗಿ ಪ್ರಕಟಗೊಂಡ ನಾಟಕಗಳು. ಈ ಮೂರು ನಾಟಕಗಳು ಸೇರಿ 'ಹೊಸ ಸಂಸಾರ' ಎಂಬ ಮೂರು ಅಂಕದ ನಾಟಕ. ಈ ನಾಟಕದ ಪ್ರತಿಯೊಂದು ಅಂಕವನ್ನು ಬೇರೆಬೇರೆಯಾಗಿ ಅಭಿನಯಿಸಬಹುದು ಇಲ್ಲವೇ ಸಮಗ್ರವಾಗಿ ಮೂರು ಅಂಕಗಳನ್ನು ಸೇರಿಸಿ ರಂಗದ ಮೇಲೆ ತರಬಹುದು. ಹೊಸ ಸಂಸಾರ ನಾಟಕದಲ್ಲಿ ತಲೆಮಾರುಗಳ (ಅಜ್ಜ, ತಂದೆ ಮತ್ತು ಮಗಳು) ಸಂಘರ್ಷವಿದೆ. ನಾಟಕದ ಶೀರ್ಷಿಕೆಯೇ ಹೇಳುವಂತೆ ಹೊಸ ಸಂಸಾರವೆಂದರೆ ಕುಟುಂಬದ ಸಿದ್ಧ ಮಾದರಿಗಳು ಅಗತ್ಯಕ್ಕನುಸಾರವಾಗಿ ಹೊಸತನವನ್ನು ಪಡೆದುಕೊಂಡು ಜನಾನುರಾಗದ ಆಶಯ ಎಂಬ ಕಣ್ಣೋಟ ನಾಟಕದ ಮೂಲಭಿತ್ತಿಯಾಗಿದೆ. ಜೀವನಶೈಲಿಯ ನಿರೂಪಣೆ ನಾಟಕದ ಒಟ್ಟು ವ್ಯಾಪ್ತಿ ಮತ್ತು ಆಶಯದಂತೆ ಕಾಣುತ್ತದೆ.

ಸ್ವತಂತ್ರ ಭಾರತದ ಕುಟುಂಬ ಚಿತ್ರಣ 'ಮಂದೀ ಮದಿವಿ' ನಾಟಕದಲ್ಲಿ ಔಚಿತ್ಯ ಪೂರ್ಣವಾಗಿ ಕಾಣುತ್ತದೆ. ವಿವಾಹವೆನ್ನುವ ಸಂಸ್ಥೆ ಆಯ್ಕೆಗಳಿಗೆ ಮುಕ್ತವಾಗಿರಬೇಕು ಎಂಬ ಧೋರಣೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೊಸತುಗಳಿಗೆ ತೆರೆದುಕೊಂಡಂತೆ ನಾಟಕ ಕಾಣುತ್ತದೆ. ಯುವಕರು ವಿವಾಹಕ್ಕಾಗಿ ತಮ್ಮ ಸಂಗಾತಿಗಳ ಆಯ್ಕೆಯನ್ನು ನಿರ್ಣಯಿಸಬೇಕಾದ ಅಗತ್ಯ ಮತ್ತು ಪ್ರಾಮುಖ್ಯತೆಯನ್ನು 'ಮಂದೀ ಮದಿವಿ' ನಾಟಕದಲ್ಲಿ ಅರ್ಥಪೂರ್ಣವಾಗಿ ಪ್ರಸ್ತಾಪಿಸುತ್ತದೆ. ಮನೆಯ ಹಿರೀಕರು ಯುವಕರ ನಿರ್ಣಯಕ್ಕೆ ಪ್ರೋತ್ಸಾಹ ನೀಡಬೇಕು ಎಂಬ ನಿಲುವೂ ಕೂಡ ಸ್ವಾತಂತ್ರ್ಯನಂತರದ ಸಮಾಜ ಮತ್ತು ಕುಟುಂಬದ ಆಶಯವೆಂಬಂತೆ ನಾಟಕ ರಚಿಸಲ್ಪಟ್ಟಿದೆ.

'ಗೋಲ್' ನಾಟಕದಲ್ಲಿ ಕೇವಲ ಪುರುಷ ಪಾತ್ರಗಳ ಮೂಲಕ ನಾಟಕ ರಚಿಸಿದ ಬೇಂದ್ರೆಯವರು ನಂತರ ಹವ್ಯಾಸಿ ರಂಗಭೂಮಿ ಹೊಸ ರೂಪತಳೆಯುತ್ತಾ ಹೋದಂತೆಲ್ಲ ತಮ್ಮ ನಾಟಕಗಳ ವಸ್ತು, ವಿನ್ಯಾಸ ಮತ್ತು ಪಾತ್ರಪೋಷಣೆಯ ದಿಕ್ಕುಗಳನ್ನು ಬದಲಿಸುತ್ತಾರೆ. 'ಮಂದೀ ಮದಿವಿ' ಏಕಾಂತದಲ್ಲಿ ಪ್ರಧಾನ ಪಾತ್ರಧಾರಿಯಾದ ಮಂದಾರ ಮಾಲ ಮಂದೀ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಾಳೆ. ಇವಳು ಬಂಡಪ್ಪನ ಮಗಳು. ಬಂಡಪ್ಪನ ತಂದೆ ಗುಂಡಪ್ಪ. ಡಾಕ್ಟರ್ ರಂಗಣ್ಣ ಮಂದಾರ ಮಾಲಾಳನ್ನು ಮದುವೆಯಾಗಲು ಬರುವ ಗಂಡು. ಅಂಬಕ್ಕ ಒಬ್ಬ ಅನಾಥ ಹೆಣ್ಣು ಮಗಳು. ಫಕೀರ ಮತ್ತು ಫಕೀರಿ ಮನೆಯ ಕೆಲಸದವರು. ಇವಿಷ್ಟೇ ಅಲ್ಲದೇ ಹಮಾಲ ಮುತ್ತೈದೆ ಹಾಗೂ ವ್ಯಾಪಾರಿಯ ಪಾತ್ರಗಳು 'ಮಂದೀ ಮದಿವಿ' ನಾಟಕದಲ್ಲಿವೇ.

"ಬಿಚ್ಚು ಮಾತು ಆಡತೇನಂತ
ಕಚ್ಚಬೇಡರಿ ಹಲ್ಲು ತುಟಿ
ಮುಚ್ಚಿ ಇಟ್ಟರ ಏನು ಬಂತು ಹುಚ್ಚಪ್ಪಗಳಿರಾ?
ಸ್ವಚ್ಛ ಮನಸು ಮಾಡಿಕೊಂಡು
ಹೆಚ್ಚಿನ ನೆಲಿ ನೋಡಿಕೊಂಡು
ನೆಚ್ಚಿ ಮೆಚ್ಚಿ ಕಟ್ಟಬೇಕು ಅಚ್ಚ ಸಂಸಾರಾ"

ಎಂಬ ಹಾಡಿನ ಮೂಲಕ ಶುರುವಾಗುವ ನಾಟಕ ಸಂಸಾರ ಕಟ್ಟಲು ಬೇಕಾದ ಮನಸ್ಥಿತಿಯನ್ನು ಒದಗಿಸಿಕೊಡುತ್ತದೆ. ಮಧ್ಯಮವರ್ಗದ ಸುಶಿಕ್ಷಿತ ಕುಟುಂಬದ ಚಿತ್ರಣವನ್ನು ನಾಟಕ ಸಮರ್ಥವಾಗಿ ಕಾಣಿಸುತ್ತದೆ. ಹೆಣ್ಣಿಗೆ ಸಂಗಾತಿಯ ಆಯ್ಕೆಯ ಸ್ವಾತಂತ್ರ್ಯ ಮತ್ತು ಕುಟುಂಬ ಮತ್ತು ವಿವಾಹದ ಬಗೆಗಿನ ಸರಿಯಾದ ದೃಷ್ಟಿ ಮಂದಾರ ಮಾಲಾ ಪಾತ್ರದ ಮೂಲಕ ನಿರೂಪಣೆ ಗೊಂಡಿದೆ. ಹಾಗೆಯೇ, ಡಾಕ್ಟರ್ ರಂಗಣ್ಣ ಶಿಕ್ಷಿತ ಯುವಕನಾಗಿ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಪ್ರಕಟಪಡಿಸುವ ನೆಲೆಯೂ ಕೂಡ ಮುಖ್ಯವಾಗಿದೆ. ಮಂದಾರ ಮಾಲಾ ಮತ್ತು ಡಾಕ್ಟರ್ ರಂಗಣ್ಣ ಇಬ್ಬರ ನಡುವೆ ಮೂಡುವ ನವಿರು ಪ್ರೇಮ ನಾಟಕದಲ್ಲಿ ಖುಷಿಯ ಮತ್ತು ಸಂಗಾತಿಯ ಆಯ್ಕೆಯ ಸ್ವತಂತ್ರವನ್ನು ಸುಂದರವಾಗಿ ನಿರ್ವಹಿಸಿದೆ. ಯಾತ್ರೆ ಮುಗಿಸಿಕೊಂಡು ಬಂದ ಗುಂಡಪ್ಪನಿಗೆ ಕಾಣುವ ಬದಲಾದ ಮನೆಯ ಸ್ವರೂಪ ಒಟ್ಟು ಸಾಮಾಜಿಕ, ಕೌಟುಂಬಿಕ ಬದಲಾವಣೆಯ ರೂಪಕದಂತೆ ನಾಟಕದಲ್ಲಿ ಕಾಣಬಹುದು. 'ಮಂದೀ ಮದಿವಿ' ಎಂಬುದು ಒಂದು ಪ್ರತಿಮೆಯಂತೆ ಕಾಣುವ ನಾಟಕದ ಕಥಾವಸ್ತುವೇ ಮುಖ್ಯ ಪಾತ್ರವೆಂಬಂತೆ ಗೋಚರಿಸುತ್ತದೆ.

ಪುಣೆಯ ಭಾನು ವಿಲಾಸ ನಾಟ್ಯ ಮಂದಿರದಲ್ಲಿ, ಧಾರವಾಡದ ಕಲೋಪಾಸಕ ರಂಗತಂಡ 15/10/1950 ರಂದು ಈ ನಾಟಕದ ಮೊದಲ ರಂಗಪ್ರಯೋಗ ಮಾಡಿತ್ತು. ನಾಟಕ ಪ್ರಯೋಗಗೊಂಡ ಕಾಲಕ್ಕೆ ಮಂದೀ ಮದಿವಿ ಕಥಾವಸ್ತು ನಿಜಕ್ಕೂ ಹೊಸತು. ವಿವಾಹ ವಿಚಾರದಲ್ಲಿ ಎಲ್ಲ ಕಾಲದಲ್ಲೂ ಆಯ್ಕೆಯ ಸ್ವತಂತ್ರದ ವಿಚಾರ ಬಂದಾಗ ತಕರಾರುಗಳು ಇದ್ದೇ ಇರುತ್ತವೆ. ಇಷ್ಟಿದ್ದೂ 'ಮಂದೀ ಮದಿವಿ' ಸ್ವಸ್ಥ ಕುಟುಂಬ ಕಲ್ಪನೆಗೆ ಪೂರಕವಾದ ಸಾಮಾಜಿಕ ಬದ್ಧತೆಯ ನಾಟಕವಾಗಿ ರಚನೆಯಾಗಿದೆ. ಅಷ್ಟೇ ಅಲ್ಲದೇ ವಿವಾಹ, ಕುಟುಂಬ ಮತ್ತು ಸಮಾಜದಲ್ಲಿ ಇರುವ ಎಲ್ಲರೂ ನಾಟಕದ ಪಾತ್ರಧಾರಿಗಳೇ ಮತ್ತು ಸಕಲವೂ ನಾಟಕವೆ ಎಂಬ ತಾತ್ವಿಕ ನಿಲುವು ಮಂದೀ ಮದಿವಿಯ ಸಶಕ್ತವಾದ ಸಾಧ್ಯತೆಯಾಗಿದೆ.

'ಮಂದೀ ಮಕ್ಕಳು' ಹೊಸ ಸಂಸಾರ ನಾಟಕದ ಎರಡನೇ ಅಂಕ ಮತ್ತು ಪ್ರತ್ಯೇಕವಾಗಿ ನಿಲ್ಲುವ ನಾಟಕ ಕೂಡ ಹೌದು. ಸಂಸಾರದಲ್ಲಿ ಉಂಟಾಗುವ ಅನುಮಾನ ಮತ್ತು ಇತರೆ ಸಂಘರ್ಷಗಳನ್ನು ನಾಟಕಕಾರರು ಹಿಡಿದಿಡುವ ಪ್ರಯತ್ನವನ್ನು ಮಾಡಿದ್ದಾರೆ. ಕುಟುಂಬ ಮೌಲ್ಯಮಾಪನಗೊಳ್ಳಬೇಕಾದರೆ ಸಂಸಾರದೊಳಗೆ ತಲ್ಲಣಗಳು ಉಂಟಾಗಿ ಅದು ತಣಿಯಬೇಕು. ಆಗ ಕುಟುಂಬದೊಳಗಿನ ಸಂಬಂಧಗಳ ಮಹತ್ವ ಮುನ್ನೆಲೆಗೆ ಬರುತ್ತದೆ ಎಂಬ ವಿಚಾರವನ್ನು 'ಮಂದೀ ಮಕ್ಕಳು' ನಾಟಕ ಮುಂದಿಡುತ್ತದೆ. 'ಮಂದೀ ಮದಿವಿ'ನಾಟಕದ ಪಾತ್ರಗಳೇ ಈ ನಾಟಕದಲ್ಲೂ ಮುಂದುವರೆಯುತ್ತದೆ. ಫೋಟೋಗ್ರಾಫರ್ ಎಂಬ ಹೊಸ ಪಾತ್ರ ನಾಟಕದಲ್ಲಿ ಸಾಪೇಕ್ಷವಾಗಿ ಬಂದು ಹೋಗುತ್ತದೆ.

ಈ ಅಂಕದ ಆರಂಭ ಫಕೀರ ಮತ್ತು ಫಕೀರಿಯರ ನಡುವಿನ ಸಂಭಾಷಣೆಯಿಂದ ಆರಂಭಗೊಳ್ಳುತ್ತದೆ. ದವಾಖಾನೆ ಮತ್ತು ಡಾಕ್ಟರ್ ರಂಗಣ್ಣ ಮನೆಯನ್ನು ಹುಡುಕಿಕೊಂಡು ಬರುವ ಫಕೀರಿಯ ಉದ್ದೇಶ ಮಂದಾರ ಮಾಲಾಳ ಮನೆಯ ಕೆಲಸಕ್ಕೆ ಸೇರುವ ಉದ್ದೇಶವಿರುತ್ತದೆ. ಈ ನಡುವೆ ಈ ವಿಚಾರವಾಗಿ ಫಕೀರ ಫಕೀರಿಯ ಆಗಮನವನ್ನು ಲಘು ಹಾಸ್ಯ ಲೇಪಿತ ಮಾತುಗಳಿಂದ ಪ್ರಶ್ನಿಸುತ್ತಾನೆ. ಫಕೀರಿ ಮನೆಗೆ ಬಂದಾಗ ಡಾಕ್ಟರ್ ರಂಗಣ್ಣ ಮತ್ತು ಮಂದಾರ ಮಾಲಾ ಹೊರಗೆ ಹೋಗಿರುತ್ತಾರೆ. ಮಂದಾರ ಮಾಲಾ ಹೊರಗಿನಿಂದ ಮನೆಗೆ ಬರುವುದರೊಳಗೆ ಫಕೀರಿ ಮಗುವನ್ನು ಎತ್ತಿಕೊಂಡು ಆಡಿಸುತ್ತಿರುತ್ತಾಳೆ. ಆ ವೇಳೆಗಾಗಲೇ ಗುಂಡಪ್ಪನ ಪ್ರವೇಶವು ಆಗಿರುತ್ತದೆ. ಮಗುವನ್ನು ಫಕೀರಿಯ ಕೈಯಲ್ಲಿ ನೋಡಿದ ಮಂದಾರ ಮಾಲಾ ಸಿಡಿಮಿಡಿಗೊಳ್ಳುತ್ತಾಳೆ. ನಂತರ ಗುಂಡಪ್ಪ ಹಾಗೂ ಈಗಾಗಲೇ ಇದ್ದ ಫಕೀರನ ಮಾತುಗಳಿಂದ ಮಂದಾರ ಮಾಲಾ ಸುಮ್ಮನಾಗುತ್ತಾಳೆ. ಈ ಎಲ್ಲಾ ಘಟನೆಗಳ ನಂತರ ತಂದೆ ಗುಂಡಪ್ಪನೊಂದಿಗೆ ಮಂದೀ ಮಾತನಾಡುತ್ತಾ ಕುಳಿತಾಗ ತನ್ನೊಳಗೆ ಅಂಬಕ್ಕಳ ವಿಚಾರವಾಗಿ ನಡೆಯುತ್ತಿರುವ ಸಂಘರ್ಷಗಳನ್ನು ಪ್ರಕಟಪಡಿಸುತ್ತಾಳೆ.

"ಹೌದೇನು ಹೌದು? ಆಕಿಗಿ ಹೇಳಬೇಕ್ಯಾರು? ಅದನ್ನ ಕೇಳಬೇಕ್ಯಾರು? ನಾನು ಆಡಿದರ, ಒಂದು ಕೆಟ್ಟೀತು, ಆಡದಿದ್ದರ, ಮತ್ತೊಂದು ಕೆಟ್ಟೀತು. ಇತ್ತ, ಮನೀ ಮಾನಾ ಕಾಯಬೇಕು; ಅತ್ತ, ಮನಿಯವರ ಮಾನಾ ಕಾಯಬೇಕು. ಹೊಟ್ಟೀದರದೂ, ನೋಡಿಕೊಳ್ಳಬೇಕು. ಬಸಿರಂಬೋದು ಬರೆ ಹೆಸರಾಗಿ, ಬಯಕಿ ಅಂಬೋದು ಬರೆ ಕನಸಾಗಿ, ಕಾಲಾ ಕಳದೇನಿ. 'ನಿನಗೇನಾಗತದ?' ಅಂತ ಕೇಳವರಿಲ್ಲ, 'ಯಾಕ ಆಗತದ?'ಅಂತ ಕೇಳವರಿಲ್ಲ. ಏನಾರ ಹೇಳ್ತ್ಯ, ಹೇಳಿದ್ದಕ್ಕ ಔಷದ್ಯ ಕೊಡೋದು; ಇಲ್ಲs ತಾವs ಯಾವದಾರ ಗುಳಿಗಿ ಕೊಡೋದು. 'ನುಂಗಿದಿರಾ?' ಅಂತ ಕೇಳೋ ಹಾಂಗಿಲ್ಲ, ಹೇಳಿ ಮಾಡಿಸಿಕೊಂಡ ವಸ್ತ, ಹೊಸದರಾಗ ಚುಚ್ಚತದ ಅಂದರ, ಕೇಳುವ‌ರಾರು? ಮತ್ತ ನನ್ನ ಮನಿ ನಿಗ್ರ, ನಿಮಗ್ಯಾಕ ಅಂತ, ನಾನೂ ಸುಮ್ಮನಿದ್ದರ; ತಂದೀ, ಮಗ, ನೀವಿಬ್ಬರೂ, ಏನೂ ಹೇಳೋಕೇಳೋದೇ ಇಲ್ಲs?" (ಪುಟ 22, ದರಾ ಬೇಂದ್ರೆ, ಮಂದೀ ಮಕ್ಕಳು, ಶ್ರೀಮಾತಾ ಪ್ರಕಾಶನ, ಧಾರವಾಡ 2008) ಎಂಬ ಮಂದಾರ ಮಾಲಾಳ ಮಾತುಗಳು ಸಂಶಯವನ್ನು, ಸಾಂಸಾರಿಕ ಅಭದ್ರತೆಯನ್ನು ಹೇಳುತ್ತದೆ.

ಸಹಜವಾಗಿ ಗೃಹಿಣಿಯೊಬ್ಬಳಿಗೆ ಪತಿಯ ಬಗ್ಗೆ ಸಂಶಯದ ಭಾವನೆಯನ್ನು ನಾಟಕಕಾರರು ತನ್ನ ಕಾಲದ ಸೂಕ್ಷ್ಮ ನೆಲೆಯಲ್ಲಿ ಸಾಮಾಜಿಕ ಚಿತ್ರಣವೆಂಬಂತೆ ಕಟ್ಟಿಕೊಟ್ಟಿದ್ದಾರೆ. ಮಗಳ ಸಂಕಟಕ್ಕೆ ಪ್ರತಿಕ್ರಿಯಿಸುವ ಗುಂಡಪ್ಪ ಮಂದಾರ ಮಾಲಾಳನ್ನು ತವರಿಗೆ ಕರೆಯುತ್ತಾನೆ. ಬಂಡೆಪ್ಪನ ಪ್ರವೇಶ ಈ ಸಂದರ್ಭಕ್ಕೆ ಹೊಸ ತಿರುವು ನೀಡುತ್ತದೆ. ಮುಂದಿನ ಡಾಕ್ಟರ್ ಕ್ಯಾಂಪ್ ಅನ್ನು ತಮ್ಮ ಊರಿನಲ್ಲೇ ನಡೆಸಬೇಕೆಂದು ಅಂಬಕ್ಕಳಿಗೆ ತಿಳಿಸಿ ಡಾಕ್ಟರ್ ಮತ್ತು ಅಂಬಕ್ಕಳ ಸಂಬಂಧವನ್ನು ಮುರಿಯುವ ಅಥವಾ ಪತ್ತೆಹಚ್ಚುವ ಯೋಜನೆಯೊಂದನ್ನು ರೂಪಿಸುತ್ತಾರೆ. ಡಾಕ್ಟರ್ ರಂಗಣ್ಣನ ಪ್ರವೇಶವಾದ ನಂತರ ಮನೆಯಲ್ಲಿ ಈ ಯಾವ ಘಟನೆಗಳು ನಡೆದೇ ಇಲ್ಲವೆಂಬಂತೆ ಎಲ್ಲರೂ ಅಭಿನಯಿಸುತ್ತಾರೆ. ನಂತರ ಸಂಶಯದ ಚರ್ಚೆ ಮುನ್ನೆಲೆಗೆ ಬಂದು ಡಾಕ್ಟರ್ ರಂಗಣ್ಣ ಮತ್ತು ಅಂಬಕ್ಕನ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲವೆನ್ನುವ ಅರಿವಾಗುತ್ತದೆ.

ಭಯ ಮತ್ತು ಆತಂಕಕ್ಕೊಳಗಾದ ಮಂದಾರ ತನ್ನ ಸಂಸಾರವನ್ನು ಸಂಶಯದಿಂದ ಪಾರು ಮಾಡಿಕೊಳ್ಳುತ್ತಾಳೆ. ಇದಕ್ಕೆ ತಂದೆ ಗುಂಡಪ್ಪ ಮತ್ತು ಅಜ್ಜ ಬಂಡೆಪ್ಪ ಇಬ್ಬರೂ ಮಂದಾರ ಮಾಲಾಳ ಮನಃಪರಿವರ್ತನೆಗೆ ಪೂರ್ವಕವಾಗಿ ವಾತಾವರಣವೊಂದನ್ನು ಸೃಷ್ಟಿಸುತ್ತಾರೆ. ಮನೆಯ ಕೆಲಸಗಾರರು ಕೂಡ ಮನೆಯವರೆ ಎಂಬ ಭಾವನೆಯನ್ನು ಮೂಡಿಸಲು ಇಬ್ಬರೂ ಹಿರಿಯರು ಎಲ್ಲರಿಗೂ ಅರ್ಥ ಮಾಡಿಸುತ್ತಾರೆ. ಈ ಭಾವನೆ ಮಂದಾರ ಮಾಲಾ ಮತ್ತು ಡಾಕ್ಟರ್ ರಂಗಣ್ಣ ಇಬ್ಬರ ಅರಿವಿಗೂ ಬರುತ್ತದೆ. ಅಂಬಕ್ಕ ಮತ್ತು ಡಾಕ್ಟರ್ ರಂಗಣ್ಣ ಇಬ್ಬರೂ ವಿವೇಕಿಗಳಾಗಿ ನಾಟಕದಲ್ಲಿ ಕಾಣಲ್ಪಡುತ್ತಾರೆ. ಸಂಸಾರವೆಂದರೆ ಗೋಜಲು ಗೋಜಲುಗಳನ್ನು ಬಿಡಿಸಿಕೊಂಡು ಸಹಜ ಸ್ಥಿತಿಯಲ್ಲಿ ಇರಬೇಕು ಎನ್ನುವ ಪ್ರಧಾನ ಆಶಯ ನಾಟಕದಲ್ಲಿ ಕಾಣುತ್ತದೆ. ಎಲ್ಲಾ ಸಂಶಯಗಳು ತೀರಿದ ಬಳಿಕ ಎಲ್ಲರನ್ನೂ ಒಳಗೊಂಡ ಒಂದು ಕೌಟುಂಬಿಕ ಛಾಯಾಚಿತ್ರವನ್ನು ತೆಗೆಯುವ ಫೋಟೋಗ್ರಾಫರ್ ಹೊಸ ಸಂಸಾರವನ್ನು ಸೆರೆಹಿಡಿಯುವ ರೂಪಕದಂತೆ ನಾಟಕ ಮುಕ್ತಾಯವಾಗುತ್ತದೆ. (ಪುಣೆಯ ಭಾನು ವಿಲಾಸ ನಾಟ್ಯ ಮಂದಿರದಲ್ಲಿ ಧಾರವಾಡದ ಕಲೋಪಾಸಕ ರಂಗತಂಡ 15/10/1950 ರಲ್ಲಿ ಈ ನಾಟಕದ ಮೊದಲ ಪ್ರಯೋಗವನ್ನು ಮಾಡಿದೆ).

ಹೊಸ ಸಂಸಾರ ನಾಟಕದ ಮೂರನೇ ಅಂಕ 'ಮಂದೀ ಮನಿ'. ಸಂಸಾರವೆನ್ನುವುದು ಒಂದು ಆದರ್ಶ ವೆಂಬ ಸಮಗ್ರ ಚಿತ್ರಣವನ್ನು ನಾಟಕಕಾರರು ಈ ಅಂಕದಲ್ಲಿ ಹೆಣೆಯುವ ಪ್ರಯತ್ನವನ್ನು ಮಾಡಿದ್ದಾರೆ. ಈ ಅಂಕದ ಆರಂಭದಲ್ಲಿ ಬರುವ ಬಂಡೆಪ್ಪ ಸಾಕು ಮಕ್ಕಳಾದ ಚನ್ನಾ ಚನ್ನಿ ಹಾಡಿಕೊಂಡು ನರ್ತಿಸುವ ದೃಶ್ಯ ಬಂಡೆಪ್ಪನ ಒಟ್ಟು ಕುಟುಂಬದ ಚಿತ್ರಣವನ್ನು ಅರ್ಥ ಮಾಡಿಸುತ್ತದೆ.

"ನಿನ್ನ ಆಟ ಕಂಠಪಾಠ
ಬೇರೆ ಗುರು ಅದೇಕೆ?
ಧಿಕ್ ತೈ ತೋಂ|ಧಿಕ್ ತಿಟ್ ತಾ
ಧಿಗು ಧಿಕ್ ಸಂಸಾರಾ
ನಗುನಗುತಲೇ ಎದೆ ಹೊಗುವುದೇ
ಜೀವನದಾಧಾರಾ||ಕುಣಿಸಿ ಕುಣಿ ..."

(ಪುಟ 3, ದರಾ ಬೇಂದ್ರೆ, ಶ್ರೀಮಾತಾ ಪ್ರಕಾಶನ, ಧಾರವಾಡ 2008)
ಜೀವನಾಧಾರ ಮತ್ತು ಸಂಸಾರವನ್ನು ಬಹಳ ತಾತ್ವಿಕವಾಗಿ ಹೇಳುವ 'ಮಂದೀ ಮನಿ' ನಾಟಕದ ಆರಂಭಿಕ ಗೀತೆ ಒಟ್ಟು ಮೂರು ಅಂಕಗಳನ್ನು ಒಳಗೊಂಡ ಹೊಸ ಸಂಸಾರದ ಸಮಗ್ರ ಆಶಯವೆಂಬಂತೆಯೂ ತೋರುತ್ತದೆ. ಫಕೀರ ಮತ್ತು ಫಕೀರಿಯ ವಿವಾಹವನ್ನು ನಿಶ್ಚಯ ಮಾಡುವ ಬಂಡೆಪ್ಪ ತನ್ನ ಜವಾಬ್ದಾರಿಯನ್ನು ಪ್ರಕಟಿಸುತ್ತಾನೆ. ಮಂದಾರ ಮಾಲಾಳ ಮಕ್ಕಳ ಜವಾಬ್ದಾರಿಗೆ ದಾರಿ ಸೂಚಿಸುತ್ತಾನೆ. ಅನಾಥ ಹೆಣ್ಣು ಮಗಳಾದ ಅಂಬಕ್ಕಳನ್ನು ಬಂಡೆಪ್ಪ ವಿವಾಹವಾಗುತ್ತಾನೆ. ಮಂದಾರ ಮಾಲಾ ಮತ್ತು ಇಡೀ ಕುಟುಂಬದ ಸಹಮತವಿರುತ್ತದೆ. ಬಂಡೆಪ್ಪನ ಈ ನಿಲುವು ಸಮಾಜದಲ್ಲಿ ಅನೇಕ ತಕರಾರುಗಳನ್ನು ಮೈಮೇಲೆ ಎಳೆದುಕೊಳ್ಳುತ್ತದೆ ಎನ್ನುವುದಾದರೂ ಒಂದು ದಿಟ್ಟ ಹೆಜ್ಜೆ ಎಂಬಂತೆ ನಾಟಕ ಸಾಮಾಜಿಕವಾಗುತ್ತದೆ. ನಾಟಕದಲ್ಲಿ ಹಿರಿಯನಾಗಿ ಮತ್ತು ನಾಟಕಕಾರ ಒಬ್ಬ ನಿರೂಪಕರಾಗಿಯೂ ಕೂಡ ಕಾಣುವ ತಂತ್ರ ವಿಶೇಷವಾಗಿದೆ. ಆಶಾವಾದ ಮತ್ತು ಆದರ್ಶವನ್ನು ಹೊತ್ತು ಸಾಗಿಸುವ ಜವಾಬ್ದಾರಿ ಎಂಬಂತೆ ನಾಟಕ ಕಾಣುತ್ತದೆ. 'ಮಂದೀ ಮದಿವಿ' ಮತ್ತು 'ಮಂದೀ ಮಕ್ಕಳು'ಈ ಎರಡು ಅಂಕಗಳ ಅಥವಾ ಭಿನ್ನಭಿನ್ನ ನಾಟಕಗಳ ಫಲಶ್ರುತಿ ಎಂಬಂತೆ 'ಮಂದೀ ಮನಿ' ನಾಟಕವು ಕಾಣುತ್ತದೆ. ಮಂದೀ ಎನ್ನುವುದು ಈ ಮೂರು ನಾಟಕಗಳಲ್ಲೂ ಮಂದಾರ ಮಾಲಾಳ ಹೆಸರನ್ನು ಸೂಚಿಸುತ್ತದೆಯಾದರೂ 'ಮಂದೀ' ಜನ, ಸಂಸಾರ ಎನ್ನುವ ಅರ್ಥದ ಮೂಲಕವು ನೋಡಲು ಹಲವು ಸಾಧ್ಯತೆಗಳಿವೆ.

ಹೊಸ ಸಂಸಾರವೆಂದರೆ ಹಳತನ್ನು ಬಿಡುವುದಾದರೆ ಯಾವುದನ್ನು ಬಿಡಬೇಕು. ಸಂಸಾರಕ್ಕೆ ಹೊಸತುಗಳನ್ನು ಸೇರಿಸಿ ಕೊಳ್ಳುವುದಾದರೆ ಯಾವುದನ್ನು ಸರಿಯಾಗಿ ಸೇರಿಸಿಕೊಳ್ಳಬೇಕು ಎನ್ನುವ ಸಮರ್ಥ ನಿರೂಪಣೆ ಈ ನಾಟಕದಲ್ಲಿದೆ. ಹೊಸ ಸಂಸಾರ ನಾಟಕದಲ್ಲಿ ಅಭಿವ್ಯಕ್ತಿಯಾಗುವ ಆದರ್ಶದ ಕಲ್ಪನೆ ವ್ಯಕ್ತಿ ಕೇಂದ್ರದಲ್ಲ. ಇದು ಸಮುದಾಯ ಮತ್ತು ಕುಟುಂಬ ಎರಡೂ ರಕ್ತಸಂಬಂಧಗಳಾಚೆಗೆ ಹೇಗೆ ಬೆಸೆದುಕೊಳ್ಳಬೇಕು ಎಂಬ ಆದರ್ಶದ ಕಲ್ಪನೆಯನ್ನು ಹೊಸ ಸಂಸಾರ ನಾಟಕ ಅರ್ಥ ಮಾಡಿಸುತ್ತದೆ. ಕುಟುಂಬ ರೂಢಿಗತವಾದ ಸಿದ್ಧಮಾದರಿಗಳನ್ನು ಒಪ್ಪಿಕೊಂಡು ತನ್ನ ಕೆಲಸವನ್ನು ನಿರ್ವಹಿಸುತ್ತದೆಯಾದರೂ ಕೆಲವೊಮ್ಮೆ ಇದೇ ರೂಢಿಗಳು ಬಹುತೇಕ ಸಂದರ್ಭಗಳಲ್ಲಿ ಸಾಂಸಾರಿಕ ನೆಮ್ಮದಿಗಳನ್ನು ಹಾಳು ಮಾಡಿರುತ್ತದೆ ಕೂಡ. ಹಾಗಾಗಿ ಸಂಸಾರದಲ್ಲಿ ಬಿರುಕುಗಳು, ಮನೋ ಸಂಘರ್ಷಗಳು ಏರ್ಪಟ್ಟು ಕೌಟುಂಬಿಕ ಸಂಘರ್ಷಗಳಿಗೆ ಕಾರಣವಾಗುತ್ತವೆ. ಈ ಸೂಕ್ಷ್ಮತೆಗಳನ್ನೆಲ್ಲ ದಾಟಿಕೊಂಡು ಹೊಸ ಸಂಸಾರ ನಾಟಕ ಪ್ರತಿಯೊಬ್ಬರೂ ತಮ್ಮ ಸಂಸಾರಗಳನ್ನು ಅನುಮಾನ ಮತ್ತು ಸಂಶಯಗಳಿಂದ ಮುಕ್ತ ಮಾಡಿಕೊಂಡು ಬಾಳಬೇಕಾದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಭಾರತೀಯ ಕೌಟುಂಬಿಕ ವ್ಯವಸ್ಥೆ ಮೀರಬೇಕಾದ ಮತ್ತು ನಿಜಾರ್ಥದಲ್ಲಿ ಒಳಗೊಳ್ಳಬೇಕಾದ ಹಲವು ಅಂಶಗಳನ್ನು ನಾಟಕ ಪ್ರಗತಿಪರವಾಗಿ ಅರ್ಥ ಮಾಡಿಸುತ್ತದೆ. ಮನೆ, ಮದುವೆ, ಮಕ್ಕಳು ಈ ಕೌಟುಂಬಿಕ ಪರಿಭಾಷೆಗಳ ವ್ಯಾಖ್ಯಾನವನ್ನು ಹೊಸಸಂಸಾರ ನಾಟಕವು ಹೊಸದಾಗಿಯೆ ನಿರ್ವಹಿಸುತ್ತದೆ.

1949 ರಲ್ಲಿ ರಚನೆಯಾದ 'ಮಂದೀ ಮದಿವಿ' , 1950 ರಲ್ಲಿ ರಚನೆಯಾದ 'ಮಂದೀ ಮಕ್ಕಳು' ಹಾಗೂ 1980 ರಲ್ಲಿ ರಚನೆಯಾದ 'ಮಂದೀ ಮನಿ' ನಾಟಕಗಳು ಹೊಸ ಸಂಸಾರ ಎಂಬ ಮೂರು ಅಂಕಗಳ ನಾಟಕಗಳಾಗಿ 2008ರಲ್ಲಿ ಮುದ್ರಣಗೊಂಡಿದೆ. ಮೊದಲೆರಡು ನಾಟಕಗಳು ಧಾರವಾಡದ ಕಲೋಪಾಸಕ ರಂಗತಂಡ 1950 ರಲ್ಲಿ ಪುಣೆಯಲ್ಲಿ ನಾಟಕ ಪ್ರಯೋಗಿಸಿದೆ. 'ಮಂದೀ ಮನಿ' ನಾಟಕ 1986 ರಲ್ಲಿ ಧಾರವಾಡದ ಅಂಬಿಕಾತನಯದತ್ತ ವೇದಿಕೆ ಹಮ್ಮಿಕೊಂಡ ರಂಗಾವಳಿ ಶಿಬಿರದಲ್ಲಿ ಕವಿ ಮನೆಯ ಮುಂದೆ ಪ್ರಯೋಗಗೊಂಡಿದೆ. ನಾಟಕ ರಚನೆ ಮತ್ತು ರಂಗಪ್ರಯೋಗ ಈ ಎರಡೂ ಸಾಧ್ಯತೆಗಳಲ್ಲು ಕಾಲದ ದೃಷ್ಟಿಯಿಂದ ಅಂತರವಿದ್ದರೂ ನಾಟಕಕಾರರಾಗಿ ವಸ್ತುವನ್ನು ಮತ್ತು ಅದರ ಅಭಿವ್ಯಕ್ತಿಯನ್ನು ಬೆಳೆಸಿರುವ ರೀತಿಗೆ ಚಲನೆ ಇದೆ. ಕಾಲ ಬದಲಾದಂತೆ ವಸ್ತು ಮತ್ತು ಅದರ ಅಭಿವ್ಯಕ್ತಿಯ ಬದಲಾವಣೆಯ ಸೂಕ್ಷ್ಮತೆಗಳೂ ಕೂಡ ನಾಟಕದಲ್ಲಿ ಕಾಣುತ್ತದೆ. 'ಮಂದೀ ಮದಿವಿ' ನಾಟಕದಲ್ಲಿ ಕುಟುಂಬದ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಸಂಭಾಷಣೆಗಳು ತುಂಬಾ ಲಘುವಾಗಿ ಕಂಡುಬಂದರೆ 'ಮಂದೀ ಮಕ್ಕಳು' ನಾಟಕದಲ್ಲಿ ಒಂದಿಷ್ಟು ವಿಶಾಲವಾಗುತ್ತದೆ. 'ಮಂದೀ ಮನಿ' ನಾಟಕಕ್ಕೆ ಬರುವ ಹೊತ್ತಿಗೆ ನಾಟಕಕಾರರ ಅಂತರಂಗ ದರ್ಶನ ಸಾಮಾಜಿಕ ದರ್ಶನವಾಗುವ ವರೆಗೆ ಚಲಿಸಿದೆ. ಕನ್ನಡ ರಂಗಭೂಮಿಯಲ್ಲಿ ದಶಕಗಳ ಅಂತರದಲ್ಲಿ ಹೀಗೆ ಬೇರೆ ಬೇರೆ ನಾಟಕಗಳು ಒಂದೇ ವಸ್ತುವನ್ನ ಒಳಗೊಂಡಂತೆ ರಚನೆಯಾಗಿದ್ದು ಮತ್ತು ರಂಗ ರೂಪ ಪಡೆದಿದ್ದು ತುಂಬಾ ವಿರಳ. ಈ ಅರ್ಥದಲ್ಲಿ ಹೊಸ ಸಂಸಾರ ಎನ್ನುವ ಮೂರು ನಾಟಕಗಳ ಸಮುಚ್ಚಯ ವಿಶಿಷ್ಟ ಅರ್ಥವನ್ನು ಪಡೆದುಕೊಂಡ ಪ್ರಯೋಗವೆನ್ನಬಹುದಾಗಿದೆ. ದುಬಾರಿ ರಂಗಪರಿಕರಗಳನೇನೂ ಬಯಸದ ಒಂದು ಮನೆಯ ರಂಗಸಜ್ಜಿಕೆಯಲ್ಲಿ ಮಾಡಬಹುದಾದ ನಾಟಕ. ಸರಳವಾದ ಮತ್ತು ಧಾರವಾಡದ ದೇಸಿ ಭಾಷಾ ಸೌಂದರ್ಯವನ್ನು ಹಿಡಿದಿಟ್ಟುಕೊಂಡಿದೆ. ಕೆಲವು ಕಡೆ ಘಟನೆಗಳು ನಾಟಕೀಯಗೊಳ್ಳದೆ ಕಥೆಯನ್ನು ಮಾತ್ರ ಹೇಳಿ ಮುಗಿಸಿಬಿಡುತ್ತವೆ. ಹೊಸ ಸಂಸಾರ ನಾಟಕ ಮಾತು ಪ್ರಧಾನವಾದ ನಾಟಕವಾಗಿ ಮಾತ್ರ ಕಾಣುತ್ತವೆ. ಈ ಮೂರು ನಾಟಕದಲ್ಲಿ ಬಳಸಿರುವ ಕವಿತೆಗಳು ನಾಟಕದ ಆಶಯಕ್ಕೆ ದುಡಿಯುತ್ತವೆ.

ಈ ಸರಣಿಯ ಹಿಂದಿನ ಬರೆಹಗಳು:
ಸಾಮಾಜಿಕ ವಿವೇಕ ಮತ್ತು ತಿರುಕರ ಪಿಡುಗು
ರೋಗ ಮತ್ತು ಅಧಿಕಾರ : ಬೇಂದ್ರೆಯವರ ಜಾತ್ರೆ ನಾಟಕ ಸಮಕಾಲೀನ ಅಸಂಗತ ಅಭಿವ್ಯಕ್ತಿ
ಬೇಂದ್ರೆ ನಾಟಕಗಳ ರಂಗ ಪ್ರವೇಶಕ್ಕೆ ಇದು ಸಕಾಲ

 

MORE FEATURES

ಗಜಲ್ ಕನ್ನಡ ಸಾಹಿತ್ಯದಲ್ಲಿ ಮಹತ್ತರವಾದ ಕಾವ್ಯ ಶಕ್ತಿಯಾಗಿ ಬೆಳೆಯುತ್ತಿದೆ

27-04-2024 ಬೆಂಗಳೂರು

"ಗಜಲ್ ನ ಕಾವ್ಯ ಬೀಜ ಮೊಳಕೆಯೊಡೆಯಲು ಆರಂಭಿಸಿದಾಗ ಶಾಂತರಸರ ಮಗಳಾದ ಶ್ರೀಮತಿ ಮುಕ್ತಾಯಕ್ಕನವರು ನೀರೆರೆದು ಪೋಷಿಸಿ ...

ಒಂದೆಲೆ ಮೇಲೆ ಕಾಡನ್ನು ನೋಡುವ ಮುನ್ನ

20-04-2024 ಬೆಂಗಳೂರು

"ಸುಳ್ಳು ಸುಳ್ಳು ಪುಸ್ತಕಗಳ ಕಾಲ ಅಂತಲೂ ಮುಂದೊಮ್ಮೆ ಈ ಕಾಲವನ್ನು ನೆನಪಿಸಿಕೊಳ್ಳುವ ಪ್ರಕಾಶನ ಕ್ಷೇತ್ರದಲ್ಲಿ ಹಾಡ್...

ಕಾಡಿನೊಳಗಿನ ಪ್ರಾಣಿ ಬದುಕಿನಲ್ಲಿ ಕಂಡು ಕೇಳರಿಯದ ಅಚ್ಚರಿಗಳಿವೆ

27-04-2024 ಬೆಂಗಳೂರು

'ಉಳಿವಿಗಾಗಿ ಓಡು, ಇಲ್ಲವೇ ಹೋರಾಡು' ಎನ್ನುವುದು ಸಸ್ಯಾಹಾರಿಗಳ ಪಾಡಾದರೆ 'ಹೋರಾಡಿ ಕೊಂದು ಹೊಟ್ಟೆ ತುಂಬಿಸ...