ಡ್ರೀಮ್ಸ್: ಅಕಿರ ಕುರೋಸಾವನ ಭಗ್ನ ಹಾಗೂ ಸುಂದರ ಕನಸುಗಳ ಜಗತ್ತು

Date: 10-09-2020

Location: ಬೆಂಗಳೂರು


ಜಪಾನ್‌‌ ನ ನಿರ್ದೇಶಕ ಅಕಿರ ಕುರಸೋವಾ ಚಿತ್ರಿಸಿದ ಸಿನಿಮಾಗಳು ಬೆಳ್ಳಿತೆರೆಯಲ್ಲಿ ದೃಶ್ಯ ಕಾವ್ಯ ಸೃಷ್ಟಿಸಿವೆ. ಕುರಸೋವ ಅತ್ಯಂತ ಮೆಚ್ಚುಗೆಗೆ ಪಾತ್ರವಾದ ’ಡ್ರೀಮ್ಸ್‌’ ಚಿತ್ರದ ಬಗ್ಗೆ ಲೇಖಕ- ಪ್ರಾಧ್ಯಾಪಕ ಡಾ. ಸುಭಾಷ ರಾಜಮಾನೆ ಅವರು ನವಿಲನೋಟ ಅಂಕಣದಲ್ಲಿ ಚರ್ಚಿಸಿದ್ದಾರೆ.

ಆಶೆಯೆಂಬ ತಳವೊಡೆದ ದೋಣಿಯಲಿ
ದೂರತೀರಯಾನ;
ಯಾರ ಲೀಲೆಗೋ ಯಾರೊ ಏನೊ ಗುರಿ-
ಯಿರದೆ ಬಿಟ್ಟ ಬಾಣ !
ಇದು ಬಾಳು ನೋಡು; ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ;
ಹಲವುತನದ ಮೈಮರೆಸುವಾಟವಿದು;
ನಿಜವು ತೋರದಲ್ಲ !

-ಎಂ. ಗೋಪಾಲಕೃಷ್ಣ ಅಡಿಗ (ಇದು ಬಾಳು ಕವಿತೆಯಿಂದ)

ಚಲನಚಿತ್ರ ಜಗತ್ತಿನ ಮಹಾನ್ ನಿರ್ದೇಶಕರಲ್ಲಿ ಒಬ್ಬನಾದ ಜಪಾನಿನ ಅಕಿರ ಕುರೋಸಾವ ತನ್ನ ಎಂಬತ್ತನೆಯ ಇಳಿವಯಸ್ಸಿನಲ್ಲಿ ತನ್ನನ್ನು ಕಾಡಿದ ಕನಸುಗಳಿಗೆ ರೂಪ ಕೊಟ್ಟ ಅಸಾಧಾರಣ ಕನಸುಗಾರ. 1990ರಲ್ಲಿ ತೆರೆಕಂಡ ಡ್ರೀಮ್ಸ್ ಚಲನಚಿತ್ರದಲ್ಲಿ ಬಿಡಿ ಬಿಡಿಯಾದ ಎಂಟು ಘಟನೆಗಳನ್ನು ಆಧರಿಸಿದ ಕತೆಗಳಿವೆ. ಇವೆಲ್ಲ ಒಬ್ಬನೇ ವ್ಯಕ್ತಿ ತಾನು ಚಿಕ್ಕ ಹುಡುಗನಾಗಿದ್ದಾಗ, ಹದಿಹರೆಯದಲ್ಲಿದ್ದಾಗ ಹಾಗೂ ತಾರುಣ್ಯದಲ್ಲಿದ್ದಾಗ ಕಂಡ ಕನಸುಗಳೇ. ಕುರೋಸಾವ ಸಂಪೂರ್ಣವಾಗಿ ತಾನೇ ಚಿತ್ರಕತೆಯನ್ನು ರಚಿಸಿದ ಏಕೈಕ ಸಿನಿಮಾ ಇದಾಗಿದೆ. ಕುರೋಸಾವನ ಜಗತ್ಪ್ರಸಿದ್ಧ ಚಲನಚಿತ್ರಗಳಾದ ರಶೋಮೊನ್, ಇಕಿರು, ಸೆವೆನ್ ಸಮುರಾಯ್, ದಿ ಥ್ರೋನ್ ಆಫ್ ಬ್ಲಡ್, ರ್‍ಯಾನ್ ಮೊದಲಾದವುಗಳ ಚಿತ್ರಕತೆಯನ್ನು ಆತ ತನ್ನ ಸಹಾಯಕ ನಿರ್ದೇಶಕರೊಂದಿಗೆ ಸೇರಿಕೊಂಡು ಬರೆದಿರುವುದು.

’ಡ್ರೀಮ್ಸ” ಸಿನಿಮಾದಲ್ಲಿ ಮೊದಲಿಗೆ ಬರುವ ಕನಸಿನಲ್ಲಿ ಬಿಸಿಲಲ್ಲೇ ಮಳೆ ಸುರಿಯುತ್ತಿರುವ ಪ್ರಸಂಗವಿದೆ. ತಾಯಿ ತನ್ನ ಮಗನಿಗೆ ಮನೆಯಿಂದ ಹೊರಗೆ ಹೋಗಬಾರದೆಂದು ಗದರಿಸುತ್ತಾಳೆ. ಯಾಕೆಂದರೆ ಬಿಸಿಸಲಲ್ಲಿ ಮಳೆ ಸುರಿಯುವ ಹೊತ್ತಿನಲ್ಲಿ ನರಿಗಳು ಮದುವೆಯಾಗಿ ದಿಬ್ಬಣ ಹೊರಡುವ ಸಮಯವಂತೆ. ಯಾವುದೇ ಮನುಷ್ಯರು ಅದನ್ನು ನೋಡಬಾರದೆಂಬ ನಂಬಿಕೆಯಿದೆ. ಹುಡುಗ ತಾಯಿಯ ಕಟ್ಟಾಜ್ಞೆಯನ್ನು ಮೀರಿ ನರಿಗಳ ಮೆರವಣಿಗೆಯನ್ನು ಕಂಡು ಮನೆಗೆ ಬರುತ್ತಾನೆ. ಆತನಿಲ್ಲದಾಗ ನರಿಗಳು ಬಂದು ಚಾಕುವನ್ನು ಕೊಟ್ಟು ಹೋಗಿವೆ; ಆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತಾಯಿ ಸೂಚಿಸುತ್ತಾಳೆ. ಅದಾಗದಿದ್ದರೆ ಆ ನರಿಗಳಲ್ಲಿಗೆ ಹೋಗಿ ಕ್ಷಮೆಯನ್ನು ಯಾಚಿಸಬೇಕೆಂದು ಹೇಳುತ್ತಾಳೆ. ಅವು ಎಲ್ಲಿ ಸಿಗುತ್ತವೆ ಎಂದು ಹುಡುಗ ಅಚ್ಚರಿಯಿಂದ ಕೇಳುತ್ತಾನೆ. ಅವು ಕಾಮನಬಿಲ್ಲಿನ ಕೆಳಗೆ ವಾಸಿಸುತ್ತವೆ ಎಂದು ತಾಯಿ ಹೇಳಿದಾಗ ಹುಡುಗ ಅದನ್ನು ಹುಡುಕಿಕೊಂಡು ಹೋಗುತ್ತಾನೆ. ಹೂದೋಟದ ಮೇಲೆ ಆಗಸದಲ್ಲಿ ಕೃತಕವಾಗಿ ನಿರ್ಮಿಸಲಾದ ಕಾಮನಬಿಲ್ಲು ಅದ್ಭುತವಾಗಿ ಕಾಣುತ್ತದೆ. ಹಲವು ಬಣ್ಣಗಳಿಂದ ಕೂಡಿದ ಕಾಮನಬಿಲ್ಲಿನಂತೆಯೇ ಡ್ರೀಮ್ಸ್ ಚಿತ್ರವು ಸಹಜವಾಗಿ ಅರಳಿನಿಂತಿರುವ ಅನುಭವವನ್ನು ನೀಡುತ್ತದೆ. ಬಿಸಿಲು ಮಳೆ ಹೆಸರಿನ ಈ ಕನಸು ಜಪಾನಿನ ಹಳ್ಳಿಗಾಡು ಪ್ರದೇಶದ ಜನರು ನಂಬಿರುವ ಜನಪದ ಕತೆಯಾಗಿದೆ.

ಮೊದಲ ಕನಸಿನ ಈ ಘಟನೆಯಲ್ಲಿ ಕಾಣುವ ಮನೆಯ ಗೇಟಿನ ಮೇಲೆ ಕುರೋಸಾವ ಎಂದು ಬರೆಯಲಾಗಿದೆ. ಚಲನಚಿತ್ರದಲ್ಲಿರುವ ಮನೆಯನ್ನು ಮೂಲದಲ್ಲಿ ಕುರೋಸಾವನ ಮನೆಯಂತೆಯೇ ಸೆಟ್ ಹಾಕಲಾಗಿದೆ. ಆದ್ದರಿಂದ ಚಿತ್ರದಲ್ಲಿ ಬರುವ ಕನಸಿನ ಸನ್ನಿವೇಶಗಳೆಲ್ಲ ಸ್ವತಃ ನಿರ್ದೇಶಕ ಕುರೋಸಾವನ ಖಾಸಗಿ ಜೀವನವನ್ನೇ ಆಧರಿಸಿದವು ಎಂದು ಹೇಳಲಾಗುತ್ತದೆ. ಇದಕ್ಕೆ ಇನ್ನಷ್ಟು ಪುರಾವೆಗಳು ಕಾಗೆಗಳು ಎನ್ನುವ ಶೀರ್ಷಿಕೆಯಲ್ಲಿ ಬರುವ ಕನಸಿನ ಭಾಗದಲ್ಲಿ ಸಿಗುತ್ತವೆ. ತರುಣ ಕಲಾವಿದನೊಬ್ಬ ಗೋಡೆ ಮೇಲಿನ ಭಾವಚಿತ್ರವನ್ನು ವೀಕ್ಷಿಸುತ್ತಿರುತ್ತಾನೆ. ಅದು ಜಗತ್ತು ಕಂಡ ಅಪ್ರತಿಮ ಕಲಾವಿದನಾದ ವಿನ್ಸೆಂಟ್ ವ್ಯಾನ್‌ಗೋನ ಸ್ವಭಾವಚಿತ್ರವಾಗಿರುತ್ತದೆ. ಕುರೋಸಾವನಂತೆ ಟೋಪಿಯನ್ನು ಧರಿಸಿರುವ ಆ ತರುಣ ಕಲಾವಿದ ವ್ಯಾನ್‌ಗೋನನ್ನು ಹುಡುಕಿಕೊಂಡು ಹೊರಡುತ್ತಾನೆ. ಗೋಧಿಯ ತೋಟದಲ್ಲಿ ವ್ಯಾನ್‌ಗೋ ಸೂರ್ಯನಿಗೆ ಎದುರಾಗಿ ಚಿತ್ರವನ್ನು ಬಿಡಿಸುತ್ತ ನಿಂತಿರುತ್ತಾನೆ. ಅವನ ಸಮೀಪಕ್ಕೆ ಹೋಗಿ ನಿಲ್ಲುವ ತರುಣನಿಗೆ ವ್ಯಾನ್‌ಗೋ (ಮಾರ್ಟಿನ್ ಸ್ಕೋರ್‍ಸೆಸೆ) ತನ್ನ ಅನುಭವವನ್ನು ತೋಡಿಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ವ್ಯಾನ್‌ಗೋ ಪೇಂಟಿಂಗ್‌ನಂತೆ ಕಾಣುವುದೆಲ್ಲ ನಿಜವಾಗಿಯೂ ಪೇಂಟಿಂಗ್ ಆಗಿರುವುದಿಲ್ಲ. ನಿಸರ್ಗಕ್ಕೆ ತನ್ನದೇಯಾದ ಸೌಂದರ್ಯ ಇರುವುದರಿಂದ ಅದನ್ನೆಲ್ಲ ತುಂಬ ಸಮೀಪದಿಂದ ನೋಡಲು ಸಾಕಷ್ಟು ಸಮಯ ಬೇಕಾಗುತ್ತದೆ; ಎಲ್ಲಿ ಸಹಜವಾದ ಚೆಲುವು ಇರುತ್ತದೋ ನಾನಲ್ಲಿ ಮುಳುಗಿಹೋಗುತ್ತೇನೆ. ಅದರ ಚಿತ್ರಗಳು ಕನಸಿನಲ್ಲೂ ಕಾಣುತ್ತವೆ. ಆ ನೈಸರ್ಗಿಕ ಚೆಲುವನ್ನು ಸಂಪೂರ್ಣವಾಗಿ ಅನುಭವಿಸುತ್ತೇನೆ; ಆಗ ನನ್ನ ಕುಂಚದಲ್ಲಿ ಅದು ಮೂಡಿ ಪೂರ್ಣತೆಯನ್ನು ಪಡೆಯುತ್ತದೆ; ಆದರೆ ಅದರ ಒಳಹೊಕ್ಕು ಚಿತ್ರಿಸುವುದು ತುಂಬ ಕಷ್ಟಕರವಾದದ್ದು. ಅದಕ್ಕಾಗಿಯೇ ನಾನು ಹಗಲಿರುಳು ಶ್ರಮಿಸುತ್ತೇನೆ ಎಂದಾಗ ಆ ತರುಣ ಕಲಾವಿದ ದಂಗಾಗಿ ಹೋಗುತ್ತಾನೆ.

ಆ ತರುಣ ಕಲಾವಿದ ಫ್ರೆಂಚ್‌ನಲ್ಲಿ ಕೇಳಿದ ಪ್ರಶ್ನೆಗೆ ವ್ಯಾನ್‌ಗೋ ಇಂಗ್ಲಿಷ್‌ನಲ್ಲಿ ಉತ್ತರಿಸುತ್ತಾನೆ. ವ್ಯಾನ್‌ಗೋ ತನ್ನ ಕಿವಿಗೆ ಕಟ್ಟಿಕೊಂಡಿರುವ ಬ್ಯಾಂಡೇಜನ್ನು ಗಮನಿಸುವ ತರುಣ ಏನು ಗಾಯವಾಗಿದೆ ಎಂದು ಅಳುಕುತ್ತಲೇ ಕೇಳುತ್ತಾನೆ. ನನ್ನ ಸ್ವಭಾವಚಿತ್ರವನ್ನು ಕುಂಚದಿಂದ ನಾನೇ ಬಿಡಿಸಲು ನೋಡಿದೆ; ಯಾಕೋ ನನ್ನ ಕಿವಿ ಸರಿಯಾಗಿ ತೋರಲಿಲ್ಲ. ಆದ್ಧರಿಂದ ನನ್ನ ಬಲ ಕಿವಿಯನ್ನೇ ಕತ್ತರಿಸಿಕೊಂಡೆ ಎಂದು ಹೇಳಿದ ವ್ಯಾನ್‌ಗೋ ಅಲ್ಲಿಂದ ಏನೋ ಚಡಪಡಿಕೊಂದಿಗೆ ಹೊರಟೇ ಹೋಗುತ್ತಾನೆ. ಅದೇ ಹೊತ್ತಿಗೆ ಆ ತರುಣ ವ್ಯಾನ್‌ಗೋನ ಪೇಂಟಿಂಗ್ಸ್‌ಗಳೊಳಗೇ ನಡೆದುಕೊಂಡು ಹೋಗುವ ಚಿತ್ರಿಕೆಗಳು ಅದ್ಬುತವಾಗಿವೆ; ಅಷ್ಟೇ ಅರ್ಥಪೂರ್ಣವೂ ಆಗಿವೆ. ಗೋಧಿಯ ಹೊಲದಲ್ಲಿ ಮರೆಯಾಗುವ ವ್ಯಾನ್‌ಗೋ ಹಾಗೂ ಯದ್ವಾತದ್ವಾ ಕೂಗುವ ಕಾಗೆಗಳ ದೃಶ್ಯವು ಸಹ ಅಷ್ಟೇ ಕಲಾತ್ಮಕವಾಗಿ ಮೂಡಿ ಬಂದಿದೆ. ತರುಣ ಕಲಾವಿದ ಅದನ್ನು ಕಂಡು ಕಂಗಾಲಾಗುವ ಚಿತ್ರಿಕೆಯಂತು ಇನ್ನೂ ಹೃದಯವಿದ್ರಾವಕವಾಗಿದೆ. ಅದು ವ್ಯಾನ್‌ಗೋನ ಅತ್ಯಂತ ಪ್ರಸಿದ್ಧ ಚಿತ್ರಗಳಲ್ಲಿ ಒಂದಾಗಿದೆ. ಕಲೆಯ ಜಗತ್ತಿನೊಳಗೆ ಏಕಾಂಗಿಯಾಗಿ ಪ್ರವೇಶಿಸದೆ ಅದನ್ನು ಅರಿಯಲಾಗದು; ಆಸ್ವಾದಿಸಲು ಕೂಡ ಸಾಧ್ಯವಾಗದು. ಕಲಾಜಗತ್ತನ್ನು ಅರಿಯುವುದೆಂದರೆ ಪರಕಾಯ ಪ್ರವೇಶ ಮಾಡುವುದೇ ಅನಿವಾರ್ಯ. ಕುರೋಸಾವ ಡ್ರೀಮ್ಸ್ ಮೂಲಕ ಹೊಸ ಕನಸಿನ ಲೋಕವನ್ನೇ ಕಟ್ಟಿದ್ದಾನೆ.

ಕುರೋಸಾವ ತಾನು ಕೂಡ ವ್ಯಾನ್‌ಗೋನಂತೆ ಪೇಂಟರ್ ಆಗಬೇಕೆಂದುಕೊಂಡಿದ್ದ. ಆದರೆ ಅಚಾನಕ್ಕಾಗಿ ಸಿನಿಮಾ ಎನ್ನುವ ಕಲಾಜಗತ್ತಿಗೆ ಬಂದುಬಿಟ್ಟ. ವ್ಯಾನ್‌ಗೋನಂತೆ ವಿಕ್ಷಿಪ್ತ ಮನಸ್ಥಿತಿಯ ಕುರೋಸಾವ 1971ರಲ್ಲಿ ತನ್ನ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ. ಕುರೋಸಾವ, ವ್ಯಾನ್‌ಗೋನ ಪೇಂಟಿಂಗ್ಸ್‌ಗಳಿಂದ ತುಂಬ ಪ್ರಭಾವಿತನಾಗಿದ್ದ. ಕುರೋಸಾವ ತನ್ನ ಆತ್ಮಕತೆಯಲ್ಲಿ ನಾನು ವ್ಯಾನ್‌ಗೋನ ಚಿತ್ರಗಳ ಪುಸ್ತಕವನ್ನು ನೋಡಿದಾಗ ವಾಸ್ತವ ಲೋಕವನ್ನು ನೋಡುವ ನನ್ನ ದೃಷ್ಟಿಕೋನವನ್ನೇ ಬದಲಿಸಿತು. ಸಾಮಾನ್ಯವಾಗಿ ನನ್ನ ಕಣ್ಣುಗಳಿಂದ ನೋಡುತ್ತಿದ್ದ ಜಗತ್ತು ಅಂದಿನಿಂದ ಸಂಪೂರ್ಣವಾಗಿ ಭಿನ್ನವಾಗಿ ಕಾಣಲಾರಂಭಿಸಿತು ಎಂದು ಹೇಳಿಕೊಂಡಿದ್ದಾನೆ. ಕುರೋಸಾವ ಪಶ್ಚಿಮದ ಲೇಖಕರಾದ ಶೇಕ್ಸ್‌ಪಿಯರ್, ಟಾಲ್‌ಸ್ಟಾಯ್, ಟರ್ಗನೀಫ್, ದೊಸ್ತೋವೊಸ್ಕಿ ಮುಂತಾದವರಿಂದ ಪ್ರಭಾವಿತನಾಗಿದ್ದಾನೆ. ದೊಸ್ತೋವೊಸ್ಕಿಯಂತು ಆತನ ಅತ್ಯಂತ ಮೆಚ್ಚಿನ ಲೇಖಕ. ಆತನ ಈಡಿಯಟ್ ಕಾದಂಬರಿಯನ್ನು ಆಧರಸಿ ಅದೇ ಹೆಸರಿನಲ್ಲಿ ಚಲನಚಿತ್ರವನ್ನೂ ಮಾಡಿದ್ದಾನೆ.

ನಿರ್ದೇಶಕ ಚಿತ್ರ ನಿರ್ಮಾಣ ಮಾಡುವುದು ನಿಜವಾಗಿಯೂ ತನಗೋಸ್ಕರವಾಗಿಯೇ. ಜನರು ಆತನ ಚಿತ್ರವನ್ನು ಮೆಚ್ಚಿಕೊಂಡರೆ ಅದು ಜನರಿಗಾಗಿಯೇ ಮಾಡಿದ್ದು ಎನ್ನುವಂತೆ ಕಂಡರೆ, ಅದಕ್ಕೆ ಕಾರಣ, ನಿರ್ದೇಶಕನ ಅನುಭವಗಳಿಗೆ ಅವರ ಅನುಭವಗಳು ಸಮಾನವಾಗಿವೆ ಎನ್ನುವುದು; ನಿರ್ದೇಶಕ ಅವರ ಅನುಭವಗಳನ್ನು ನಿರೂಪಿಸಿದ್ದಾನೆ ಎನ್ನುವುದಲ್ಲ. ನಿರ್ದೇಶಕನೊಬ್ಬ ತನ್ನದಲ್ಲದ ಭಾವನೆ, ಚಿಂತನೆ, ಅನುಭವಗಳನ್ನು ಬಳಸಿಕೊಂಡು ಚಿತ್ರ ನಿರ್ಮಿಸಲಾರ; ಎಂದರೆ, ಪ್ರಾಮಾಣಿಕವಾಗಿ ಚಿತ್ರಸೃಷ್ಟಿ ಮಾಡಲಾರ. ತನ್ನದೇ ಮಟ್ಟಕ್ಕಿಂತ ಕೆಳಗಿನ ಮಟ್ಟದ ಚಿತ್ರವನ್ನು ಆತ ತಯಾರಿಸಲಾರ; ಜನರ ಅಭಿರುಚಿಗೆ ತಕ್ಕಂತಹ ಚಿತ್ರ ತಯಾರಿಸಲಾರ. ಚಿತ್ರ ಯಾವ ಮಟ್ಟದ್ದೋ ಅದೇ ನಿಜವಾಗಿ ನಿರ್ದೇಶಕನ ಸ್ವಂತದ ತಾತ್ವಿಕ, ಬೌದ್ಧಿಕ, ಭಾವನಾತ್ಮಕ ಮಟ್ಟವಾಗಿರುತ್ತದೆ ಎಂದು ಹೇಳಿಕೊಂಡಿರುವ ಕುರೋಸಾವ ಜಗತ್ತು ಕಂಡ ಅತ್ಯಂತ ಪ್ರಾಮಾಣಿಕ ನಿರ್ದೇಶಕನಾಗಿದ್ದಾನೆ. ಕುರೋಸಾವನ ಈ ಮಾತುಗಳು ಡ್ರೀಮ್ಸ್ ಚಿತ್ರಕ್ಕಂತು ಸಂಪೂರ್ಣವಾಗಿ ಅನ್ವಯವಾಗುತ್ತವೆ.

ಸುಂಟರಗಾಳಿ ಎಂದು ಕರೆದಿರುವ ಹಿಮಪರ್ವತವನ್ನು ಹತ್ತುತ್ತಿರುವ ತರುಣರ ಕನಸಿನ ಸನ್ನಿವೇಶವನ್ನು ಕ್ಯಾಮೆರಾದಲ್ಲಿ ತುಂಬ ಸುಂದರವಾಗಿ ಸೆರೆಹಿಡಿಯಲಾಗಿದೆ. ಹಿಮ ಸುರಿಯುತ್ತಿರುವ ಪರ್ವತದಲ್ಲಿ ಪರ್ವತಾರೋಹಿಗಳು ಪ್ರಯಾಸದಿಂದ ಎತ್ತಿಡುವ ಒಂದೊಂದು ಹೆಜ್ಜೆಗಳು ಹಾಗೂ ಅವರ ಏದುಸಿರು-ನಿಟ್ಟುಸಿರು ಕೇಳಿಸುತ್ತದೆ. ರಭಸವಾಗಿ ಬೀಸುತ್ತಿರುವ ಗಾಳಿಯ ಸದ್ದು ಕಿವಿಯನ್ನು ತುಂಬುತ್ತದೆ; ಅಲ್ಲೊಬ್ಬ ಸುಂದರ ಯಕ್ಷಿಣಿಯೂ ಕಾಣಿಸಿಕೊಂಡು ಒಬ್ಬ ತರುಣನ ಕತ್ತು ಹಿಸುಕುತ್ತಿರುವುದನ್ನು ಕೂಡ ನೋಡುತ್ತೇವೆ. ಇದ್ದಕ್ಕಿದ್ದಂತೆ ಆಕೆ ಮಾಯವಾದಾಗ ಆ ತರುಣನ ತಂಗುದಾಣ ಅಲ್ಲೇ ಕಾಣಿಸುತ್ತದೆ. ಸಾವಿನ ಅಂಚಿನಲ್ಲಿದ್ದವನಿಗೆ ಮರುಜೀವ ಬಂದಂತಾಗುತ್ತದೆ. ಕುರೋಸಾವನಿಗೆ ಮನುಷ್ಯನ ವ್ಯರ್ಥ ಕಸರತ್ತುಗಳು ನಿರರ್ಥಕವೆಂದೇ ಕಂಡಿರಬಹುದು. ಸಾವಿನ ಎದುರಿನಲ್ಲಿ ಮನುಷ್ಯನ ವಿಚಿತ್ರವಾದ ಚಡಪಡಿಕೆಯನ್ನು ತೋರಿಸಿರುವ ವಿಧಾನ ವಿಶಿಷ್ಟವಾಗಿದೆ.

ಟನ್ನೆಲ್ ಎಂಬ ಕನಸಿನ ಸನ್ನಿವೇಶದಲ್ಲಿ ಯುದ್ಧಭೂಮಿಯಿಂದ ಒಂಟಿಯಾಗಿ ಅಧಿಕಾರಿಯೊಬ್ಬ ಮನೆಗೆ ಮರಳುತ್ತಿದ್ದಾನೆ. ಅಲ್ಲೊಂದು ಸುರಂಗದ ಒಳಗಿನಿಂದ ನಾಯಿಯೊಂದು ಅಧಿಕಾರಿಯ ಕಡೆಗೇ ಬೊಗಳುತ್ತ ಬಂದಾಗ ಆತ ಬೆದರಿದಂತೆ ಕಾಣುತ್ತಾನೆ. ನಾಯಿಯಿಂದ ತಪ್ಪಿಸಿಕೊಂಡು ಕತ್ತಲು ಕವಿದ ಸುರಂಗವನ್ನು ಬಳಸಿಕೊಂಡು ಹೋಗುತ್ತಾನೆ. ಆಚೆ ಬದಿಗೆ ಹೋಗುವಷ್ಟರಲ್ಲಿ ಆತನನ್ನು ಯಾರೋ ಹಿಂಬಾಲಿಸುವ ಹೆಜ್ಜೆಗಳ ಸಪ್ಪಳ ಕೇಳಿಸುತ್ತದೆ. ಯುದ್ಧದಲ್ಲಿ ಸತ್ತುಹೋಗಿದ್ದ ಸೈನಿಕರು ಶಿಸ್ತುಬದ್ಧವಾಗಿ ಸಾಲಾಗಿ ನಿಂತಿರುತ್ತಾರೆ. ನೀವೆಲ್ಲ ಸತ್ತಿದ್ದೀರಿ ಎಂದು ಅಧಿಕಾರಿ ಹೇಳಿದಾಗ ಅವರೆಲ್ಲ ಹೋಗುತ್ತಾರೆ. ಇದರಲ್ಲಿ ಕುರೋಸಾವನ ಯುದ್ಧ ವಿರೋಧಿ ನಿಲುವು ವ್ಯಕ್ತವಾಗುತ್ತದೆ. ಯುದ್ಧದಲ್ಲಿ ನಡೆಯುವ ಮನುಷ್ಯ ಹತ್ಯೆಗಳು ಅವು ಮನುಕುಲವನ್ನು ಬೆಂಬಿಡದೆ ಕಾಡುವುದನ್ನು ಕಂಡಿದ್ದೇವೆ.

ಕೆಂಪು ಫುಜಿ ಪರ್ವತ ಎನ್ನುವ ಕನಸಿರುವ ಭಾಗದಲ್ಲಿ ಬೆಂಕಿ ಕಾರುತ್ತಿರುವ ಪರ್ವತವನ್ನು ನೋಡುತ್ತೇವೆ; ನ್ಯೂಕ್ಲಿಯರ್ ರಿಯಾಕ್ಟರ್‌ಗಳನ್ನು ಸ್ಪೋಟಿಸಿದ್ದರಿಂದ ಬೆಂಕಿಯ ಜ್ವಾಲೆ ಹಾಗೂ ಹೊಗೆಯು ಆಕಾಶವೆಲ್ಲ ತುಂಬಿಕೊಳ್ಳುತ್ತದೆ. ಜನರೆಲ್ಲ ಜೀವಭೀತಿಯಿಂದ ತಮ್ಮ ಸಾಮಾನುಗಳೊಂದಿಗೆ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗುತ್ತಿದ್ದಾರೆ. ಒಬ್ಬ ತಾಯಿ ತನ್ನೆರಡು ಪುಟ್ಟ ಮಕ್ಕಳನ್ನು ಕೆಂಪು ಧೂಳಿನಿಂದ ರಕ್ಷಿಸಲು ಹೆಣಗಾಡುತ್ತಾಳೆ; ಒಬ್ಬ ತರುಣ ಆ ಧೂಳನ್ನು ತಪ್ಪಿಸಲು ಪರದಾಡುತ್ತಾನೆ. ಆ ತರುಣನೇ ಕುರೋಸಾವ ಮತ್ತು ಆ ಹೆಂಗಸು ಆತನ ತಾಯಿ ಎಂದೇ ಹೇಳಲಾಗುತ್ತದೆ. ಸಮುದ್ರ ತೀರದ ಬಳಿ ಅವರು ನ್ಯೂಕ್ಲಿಯರ್‌ಗಳು ಸುರಕ್ಷಿತ ಎನ್ನುತ್ತಾರಲ್ಲ ಅದು ಸುಳ್ಳಾಗಿದೆ ಎಂದು ಪರಸ್ಪರ ಚರ್ಚಿಸುತ್ತಾರೆ.

ಮನುಷ್ಯ ಲೋಕದ ಸಕಲ ದುರಂತಗಳಿಗೆ ಪರಿಹಾರವನ್ನು ಸೂಚಿಸುವಂತೆ ನೀರೆತ್ತುವ ಚಕ್ರಗಳ ಹಳ್ಳಿ ಎಂಬ ಕೊನೆಯ ಕನಸಿದೆ. ಅದೇ ತರುಣ ಎಲ್ಲೆಲ್ಲೂ ಹಸಿರು ಹುಲ್ಲು, ಮರ ಹಾಗೂ ಹರಿಯುವ ನೀರಿರುವ ಹಳ್ಳಿಗೆ ಬರುತ್ತಾನೆ. ಇಲ್ಲಿಯ ಜನರೆಲ್ಲ ನಿಸರ್ಗದೊಂದಿಗೆ ಒಂದಾಗಿ ಬದುಕುತ್ತಿದ್ದಾರೆ. ಇಲ್ಲಿಯ ಮಕ್ಕಳು ಪರಿಶುದ್ಧರು ಹಾಗೂ ಜನರೆಲ್ಲ ನಾಗರಿಕ ಪ್ರಜ್ಞೆಯುಳ್ಳವರು. ಇಂತಹ ಹಳ್ಳಿಯಲ್ಲಿ ನೂರು ವರ್ಷದ ಅತ್ಯಂತ ಹಿರಿಯ ಮುದುಕ ಆ ತರುಣನಿಗೆ ಎಲ್ಲವನ್ನು ವಿವರಿಸುತ್ತಾನೆ. ಮನುಷ್ಯ ತನ್ನ ಅನುಕೂಲಕ್ಕಾಗಿ ನಿಸರ್ಗದ ಆಕ್ರಮಣ ಮಾಡುತ್ತಿರುವುದು ಒಳ್ಳೆಯದಲ್ಲ ಎನ್ನುತ್ತಾನೆ. ಅಷ್ಟರಲ್ಲಿ ರಸ್ತೆ ಬದಿಯಲ್ಲಿ ಹಾಡು ಹಾಗೂ ಕುಣಿತದೊಂದಿಗೆ ಜನರು ಸಾಗುತ್ತಿರುವುದು ಕಾಣುತ್ತದೆ. ಆ ಹಳ್ಳಿಯ ಮುದುಕಿಯೊಬ್ಬಳ ಶವ ಸಂಸ್ಕಾರದ ಮೆರವಣಿಗೆಯಲ್ಲಿ ಅಲ್ಲಿಯ ಜನರು ಸಂತಸದಿಂದ ಭಾಗಿಯಾಗುತ್ತಿದ್ದಾರೆ. ನನ್ನ ಎಲ್ಲಾ ಚಿತ್ರಗಳಲ್ಲೂ ಇರುವ ವಸ್ತು ಒಂದೇ ಎಂದು ನನ್ನ ಭಾವನೆ. ಅದೇನೆಂದು ಯೋಚಿಸುವಾಗ ನನಗನ್ನಿಸುತ್ತದೆ, ಅದೊಂದು ಪ್ರಶ್ನೆ ಎಂದು. ಮನುಷ್ಯರು ಯಾಕೆ ಕೂಡಿಕೊಂಡು ಸುಖವಾಗಿ ಬಾಳುವುದಿಲ್ಲ? ಎಂಬ ಪ್ರಶ್ನೆಯೇ ನನ್ನ ಎಲ್ಲ ಚಿತ್ರಗಳ ಏಕೈಕ ವಸ್ತು ಎನ್ನುತ್ತಾನೆ ಕುರೋಸಾವ. ಇದಕ್ಕೆ ಉತ್ತರ ಹಾಗೂ ಪರಿಹಾರ ಎನ್ನುವಂತೆ ಡ್ರೀಮ್ಸ್ ಚಿತ್ರದ ಕೊನೆಯ ಕನಸಿನ ಸನ್ನಿವೇಶವಿದೆ. ಇದು ವಾಸ್ತವವಾಗಿ ಘಟಿಸಬೇಕಿರುವ ಒಂದು ಆದರ್ಶ ಕನಸು.

ಅಕಿರ ಕುರೋಸಾವನ ಡ್ರೀಮ್ಸ್ ಚಲನಚಿತ್ರವು ಅಡಿಗರ ಕವಿತೆಯ ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ ಎಂಬ ಸಾಲಿನಂತೆ ಭಾಸವಾಗುತ್ತದೆ. ಆದರೆ ಹಲವು ಭಗ್ನ ಕನಸುಗಳ ಲೋಕದಲ್ಲಿಯೂ ಕುರೋಸಾವ ಸೌಂದರ್ಯ ಹಾಗೂ ಕಲಾತ್ಮಕ ಜಿಗಿತವನ್ನು ಸಾಧಿಸಿದ್ದಾನೆ. ಮಾನವ ಕುಲದ ಗಂಭೀರ ಅಪಾಯಗಳನ್ನು ತೆರೆದು ತೋರಿಸುತ್ತಲೇ ಅವುಗಳಿಂದ ಪಾರಾಗುವ ಬಗೆಯನ್ನೂ ಕಾಣಿಸಿದ್ದಾನೆ. ಇಂತಹದೊಂದು ಸಿನಿಮಾವನ್ನು ಮಾಡಬಹುದೆಂಬ ಕನಸನ್ನು ಕಂಡು ಅದನ್ನು ಸಾಕಾರಗೊಳಿಸಿದ ಕುರೋಸಾವ ನಿಜವಾಗಿಯೂ ಮೇರು ಕಲಾವಿದನೇ ಆಗಿದ್ದಾನೆ. ಸಿನಿಮಾ ಪ್ರೇಮಿಗಳು ನೋಡಲೇಬೇಕಾದ ಅಪರೂಪದ ಚಿತ್ರವಿದು.

*

ಈ ಅಂಕಣದ ಹಿಂದಿನ ಬರೆಹಗಳು

ಮಸಾನ್: ’ಸ್ಥಾಪಿತ ಮೌಲ್ಯಗಳ ದಾಟುವಿಕೆ’

ಟೇಸ್ಟ್ ಆಫ್ ಚೆರಿ: ‘ಮನುಷ್ಯನ ಒಂಟಿತನ ಮತ್ತು ದ್ವಂದ್ವಗಳ ತಾಕಲಾಟ’

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...