ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ


'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು ಇದನ್ನು ಗಮನದಲ್ಲಿಟ್ಟುಕೊಂಡು ಕಥೆಯನ್ನು ಹೆಣೆಯಬೇಕು ಅಂತಹ ಕಾರ್ಯಕ್ಷಮತೆಯನ್ನು ಮೈಗೂಡಿಸಿಕೊಂಡು ಕಥೆ ಕಟ್ಟುವಿಕೆಯಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಸಿದ್ಧನಗೌಡ ಬಿಜ್ಜೂರವರ "ದೇವರಿಗೆ ಜ್ವರ ಬಂದಾಗ" ಮಕ್ಕಳ ಕಥಾ ಸಂಕಲನವೇ ಸಾಕ್ಷಿ' ಎನ್ನುತ್ತಾರೆ ಮೈಲಾರಪ್ಪ ಬೂದಿಹಾಳ ಅವರು ಸಿದ್ದನಗೌಡ ಬಿಜ್ಜೂರ ಅವರ ದೇವರಿಗೆ ಜ್ವರ ಬಂದಾಗ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಸಾಮಾನ್ಯವಾಗಿ ಕಥೆಯೆಂದ ಕೂಡಲೇ ನಮಗೆ ತಕ್ಷಣ ನೆನಪಿಗೆ ಬರುವುದು ಅಜ್ಜ-ಅಜ್ಜಿಯೆಂಬ ಕಥಾ ಕಣಜ, ಕಥೆಗಳು ನಮ್ಮ ಬಾಲ್ಯದ ಜೊತೆಗೆ ಇಡೀ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಧಾರೆ ಎರೆದಿವೆ. ಕಥೆಗಳನ್ನು ಕೇಳುವುದೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ ? ಅದರಲ್ಲೂ, ಕನ್ನಡ ಮಾತೃ ಭಾಷೆಯಲ್ಲಿ ಕೇಳುವುದು ಇನ್ನೂ ಸಂತಸದ ಸಂಗತಿ, ನಮ್ಮ ಮನಸಿನ ಅಂತರಾಳಕ್ಕೆ ಇಳಿದು ಸದಾ ಅಚ್ಚಾಗಿ ಉಳಿಯುತ್ತವೆ ಕಥೆಗಳಲ್ಲಿ ವಿವಿಧ ಬಗೆಗಳಿವೆ. ಹಾಸ್ಯ, ಪುರಾಣ, ಮೌಲಿಕ, ತಾತ್ವಿಕ, ಮಕ್ಕಳ ಅಭಿರುಚಿ ಹಾಗೂ ಮನಸ್ಥಿತಿಗೆ ತಕ್ಕಂತಹ ಕಥೆಗಳನ್ನು ಕಟ್ಟಿಕೊಡುವಲ್ಲಿ ಲೇಖಕರ ಶ್ರಮ ಅನನ್ಯವಾಗಿದ್ದು, ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು ಇದನ್ನು ಗಮನದಲ್ಲಿಟ್ಟುಕೊಂಡು ಕಥೆಯನ್ನು ಹೆಣೆಯಬೇಕು ಅಂತಹ ಕಾರ್ಯಕ್ಷಮತೆಯನ್ನು ಮೈಗೂಡಿಸಿಕೊಂಡು ಕಥೆ ಕಟ್ಟುವಿಕೆಯಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಸಿದ್ಧನಗೌಡ ಬಿಜ್ಜೂರವರ "ದೇವರಿಗೆ ಜ್ವರ ಬಂದಾಗ" ಮಕ್ಕಳ ಕಥಾ ಸಂಕಲನವೇ ಸಾಕ್ಷಿ.

ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಬರಹದ ಮೂಲಕ ಗುರುತಿಸಿಕೊಂಡಿರುವ ಸಿದ್ದನಗೌಡ ಬಿಜ್ಜೂರವರು ಶಿಕ್ಷಕರಾಗಿರುವುದರಿಂದ ಸಹಜವಾಗಿಯೇ ಮಕ್ಕಳ ಮತ್ತು ಪಾಲಕ-ಪೋಷಕರಲ್ಲಿನ ಒಡನಾಟದೊಂದಿಗೆ ಸಹ- ಹೃದಯತೆ ಬೆಳೆಸಿಕೊಂಡು ಮಾನವೀಯ, ನೈತಿಕ ಮೌಲ್ಯಗಳನ್ನು ಮಕ್ಕಳ ಕಥೆಗಳ ಮೂಲಕ ಬಿತ್ತಿ ಬೆಳೆಯುವುದರ ಮೂಲಕ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಮುನ್ನುಡಿಯಲ್ಲಿ ಹಿರಿಯ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರವರು ಹೇಳುವಂತೆ ಮಕ್ಕಳ ಸುತ್ತಲೇ ಕಥೆಗಳು. ಚಿತ್ರಿತವಾಗುತ್ತಾ ಸಮಾಜದ ವಾಸ್ತವಕ್ಕೆ ತೆರದುಕೊಂಡ ಕಥೆಗಳಾಗಿವೆ.

ಕೃತಿಯ ಮೊದಲ ಕಥೆಯೇ ವಿಶೇಷವಾಗಿ ಮಕ್ಕಳ ಮನಸಿನ ಕನಸಿನಲೋಕವಾಗಿ ತೆರೆದುಕೊಂಡಿದ್ದು ತಾಯಿ ಮತ್ತು ಮಗ ಗುಂಡನ ಸಂಭಾಷಣೆ, ಗುಂಡನ ಕನಸಿನಲ್ಲಿ ದೇವರು ಬಂದು ಆಡಲು ಕರೆದು, ದೇವರು ಅನುಭವವನ್ನು ಗುಂಡನಂತಹ ಮಕ್ಕಳ ದಾಟಿಯಲ್ಲಿ ಹೇಳುವುದಿದೆಯಲ್ಲ ಅದು ಕಥೆಯನ್ನು ಸಶಕ್ತವಾಗಿ ನಿಲ್ಲುವಂತೆ ಮಾಡುತ್ತದೆ, ಶ್ರಾವಣ ಮಾಸದಲ್ಲಿ ದೇವರಿಗೆ ಹಚ್ಚಿದ ದೀಪ ಮತ್ತು ಧೂಪದಿಂದಾಗಿ ಜ್ವರ ಬಂದಿದ್ದು ಭಕ್ತರು ತೆಂಗಿನ ಕಾಯಿ ತಾವೇ ಒಡೆದು ಹರಕೆ ತೀರಿಸಿ ನೀರು ತಾವೇ ಕುಡಿಯೋದಾದ್ರೆ ದೇವರಿಗೆ ಬಾಯಾರಿಕೆ ತೀರೋದ್ಹೆಂಗ್?

ದೇವರಿಗೆ ನೈವೇದ್ಯ ಮಾಡಿ ಪ್ರಸಾದ್ ರೂಪದಲ್ಲಿ ತಿಂದು ತೇಗೋದಾದ್ರ ದೇವರಿಗೆ ಹೊಟ್ಟೆ ತುಂಬೋದ್ ಹೇಂಗ್ ? ಎನ್ನುವುದು ಮಗುವಿನ ನಿಷ್ಕಲ್ಮಶ ಮನಸಿನ ಪ್ರಸಂಗ ಮತ್ತು ಪ್ರಶ್ನೆಯಾದರು ಗುಂಡನ ಕನಸಿನ ಮೂಲಕ ಭಕ್ತರ ಮೌಢ್ಯದ ಜಾಡು ತೆಗೆಯಲು ದೇವರಿಗೆ ಜ್ವರ ಬಂದಾಗ ಕಥೆಯಲ್ಲಿ ಪ್ರಯತ್ನಿಸಿದ್ದಾರೆ.

ದೀಪಾವಳಿ ಎಂದರೆ ಬೆಳಕಿನ ಹಬ್ಬ, ಪಟಾಕಿ ಸದ್ದು ಢಂ ಡಮಾರ್, ಮನೆಗಳಿಗೆ ಲೈಟ್ ಇಲ್ಲವೆ ದೀಪದ ಅಲಂಕಾರ ರಂಗವಲ್ಲಿ ಚಿತ್ತಾರ ಎಲ್ಲಾ ಮಾಮೂಲಿಯಾಗಿ ಕಂಡರು ಕೂಡ ಮಂಗೋಜಿಯ ಪಟಾಕಿ ಪ್ರಸಂಗದಲ್ಲಿ ಪೂಜೇರ್ ನಿಂಗಯ್ಯನ ಮಗ ಮಂಗೋಜಿಯ ಪಟಾಕಿಯ ಒಲವು ಒಂದು ಕಡೆಯಾದರೆ ಬಡತನ ಒಂದು ಕಡೆ ಉಳ್ಳವರ ಮನೆಯ ಮುಂದೆ ಹಬ್ಬ ಹರಿದಿನ ಸಂತೋಷ ಸಂಭ್ರಮಕ್ಕೆ ಹಚ್ಚುವ ಪಟಾಕಿಯನ್ನು ಚಡ್ಡಿಯ ಜೇಬಲ್ಲಿಟ್ಟುಕೊಂಡು ಬಂದು ತಮ್ಮ ಮನೆಯ ಮುಂದೆ ಸಂಭ್ರಮಿಸುವ ಪರಿ ಬಡತನ ಸೂಚಿಸಿದರು ಅದರ ಸಂಭ್ರಮ ಯಾವುದಕ್ಕೂ ಸಾಟಿಯಾಗಲಾರದು, ಮುಂಗೋಜಿ ಕಾಡಿ ಬೇಡಿದರು ಯಾರು ಪಟಾಕಿ ಕೊಡದಿದ್ದಾಗ ಮಾದೇಶ ಹಚ್ಚಿದ ಪಟಾಕಿ ಠುಸ್ಸ್ ಎಂದಿರಬೇಕೆಂದು ಭಾವಿಸಿ ತೆಗೆದುಕೊಳ್ಳಲು ಹೋಗಿ ಗಾಯಗೊಂಡಾಗ ಎಲ್ಲರೂ ಮರಗುತ್ತಾರೆ. ಕನಿಕರಪಟ್ಟು ಪರಿಸ್ಥಿತಿಯನ್ನು ನೆನೆದು ಮುಂಗೋಜಿ ಬೇಡಿದಾಗ ಪಟಾಕಿ ಕೊಟ್ಟಿದ್ರೇ ಈ ಘಟನೆ ಸಂಭವಿಸುತ್ತಿರಲ್ಲಿಲ್ಲವೆಂಬುದು ಎಲ್ಲರ ಅಳಲಾದರೂ, ತಾವು ಕೂಡಿಟ್ಟ ಹಣ ಮುಂಗೋಜಿಯ ಆಸ್ಪತ್ರೆಯ ಖರ್ಚುಗಾಗಿ ನೀಡಿ ಲೇಖಕರು ಮಾನವೀಯತೆ ಮಿಡಿಯುತ್ತಾರೆ.

ಶಿಕ್ಷಕರಾದವರು ಪ್ರತಿ ಹೆಜ್ಜೆ-ಹೆಜ್ಜೆಗೂ ಮಕ್ಕಳ ಕುರಿತಾಗಿಯೇ ಯೋಚಿಸುತ್ತಾರೆ ಎಂಬುದಕ್ಕೆ ಡೊಂಬರಾಟದ ಶಂಕ್ರ ಕಥೆಯು ಸಾಕ್ಷಿಯಾಗಿದೆ, ಅನಾಥವಾಗಿ ಸಿಕ್ಕ ಶಂಕ್ರನನ್ನು ದೊಂಬರಾಟ ಹಿರಿಯವ್ವ ಮತ್ತು ತೆಂಬವ್ವ ಸಾಕಿ ಸಲುಹಿ ತಮ್ಮ ವಂಶಪಾರಂಪರ್ಯ ಕಲಾ ಕಸುಬಿನಲ್ಲಿ ಶಂಕ್ರ ಪಳಗಿಸಿದ್ದರು ಶಂಕ್ರನ ಡೊಂಬರಾಟದ ಕಸರತ್ತುಗಳು ನೆರೆದವರ ಸಿಳ್ಳೆ, ಚಪ್ಪಾಳೆ ಗಿಟ್ಟಿಸುತ್ತಿದ್ದವು, ಊರು ಊರಿಗೂ ಅಲೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಪರಿವಾರ, ಉಳಿಯೂರಿಗೆ ಬಂದು ಶಾಲೆಯಲ್ಲಿ ಬೀಡು ಬಿಟ್ಟಿತ್ತು ಆಗ ಶಂಕ್ರನ ಆಟ, ಕಸರತ್ತಿಗೆ ಆಕರ್ಷಿತರಾದ ರಾಜು ಮತ್ತು ಊರಿನ ಯುವಕರು ಹೇಗಾದರು ಮಾಡಿ ಶಂಕ್ರನ ಸ್ನೇಹ ಸಂಪಾದಿಸಿ ತಾವು ಕಸರತ್ತು ಕಲಿಯುವ ಹಂಬಲ ಸ್ನೇಹಕ್ಕೆ ಹತ್ತಿರವಾದಾಗ ಅದರ ಕಷ್ಟ ಕಾರ್ಪಣ್ಯಗಳನ್ನು ಅರಿತು ವಾರಿಗೆ ಯುವಕರು ಶಂಕ್ರನಿಗೆ ಶಾಲೆಗೆ ಕರೆತಂದು ಒಳ್ಳೇಯ ಜಿಮ್ನಾಸ್ಟಿಕ್ಸ್ ಪಟು ಮಾಡಿ ಶಿಕ್ಷಕರ ಸಹಾಯದಿಂದ ಬದುಕು ರೂಪಿಸಿಕೊಟ್ಟ ಕೀರ್ತಿ ಸ್ನೇಹಿತರಿಗೆ ಸಲ್ಲುತ್ತದೆ.

ಕಲ್ಲು ಒಗೆದ ಹುಡುಗನಲ್ಲಿ ಅಗಾಧ ಜಾಣ್ಮೆ ಹಾಗೂ ತಾಳ್ಮೆಯನ್ನು ಕಲೆತುಕೊಳ್ಳುವುದಾದರೆ, ಶಿಕ್ಷಕನ ಕರ್ತವ್ಯ ಪ್ರಜ್ಞೆ ಸಕಾರಗೊಳ್ಳುತ್ತದೆ, ಆಪರೇಷನ್ ಬಸರಿಕಟ್ಟಿ ಕಥೆಯಲ್ಲಿ ಊರಿನ ಪುಂಡ ಪೋಕರಿಗಳ ಅಡ್ಡಾದಂತಿದ್ದ ಬಸರಿಕಟ್ಟೆಗೆ ಜೀವಕಳೆ ತಂದ ಮಕ್ಕಳ ಯುವ ಸೈನ್ಯದ ಮಾದರಿ ಕಾರ್ಯವಾಗುತ್ತದೆ.

ರಾಜವನ, ನಿಗೂಢ ಹಕ್ಕಿಯೊಂದರ ಆತ್ಮಕಥೆ ,ಮಗು ಕಲಿಸಿದ ಪಾಠದಲ್ಲಿ ಮಕ್ಕಳ ಮೂಲಕವೇ ದೊಡ್ಡವರು ಮಾಡುವ ತಪ್ಪುಗಳಿಗೆ ಮಕ್ಕಳಿಂದಲೇ ಕಥೆ ಹೇಳಿಸಿ ಅದಕ್ಕೆ ಉತ್ತರ ನೀಡಿದ ರೀತಿ ಕಥಾ ಓದುಗರಲ್ಲಿ ಆಸಕ್ತಿಯನ್ನು ಹೆಚ್ಚಿಸಿ ಕುತೂಹಲವನ್ನು ಹುಟ್ಟಿಸುತ್ತವೆ , ಮೈಲಿಗೆ ಮುಡಿಚಟ್ಟು ಕಥೆಯಲ್ಲಿ ಅಸ್ಪ್ರಶ್ಯತೆಯ ಬದುಕಿನ ಚಿತ್ರಣ ಜೊತೆಗೆ ದಲಿತನ ಬೆವರಿನ ಫಲ, ಧಾನ್ಯದ ಒಕ್ಕಣೆ ಪರಿ ತಿಳಿ ಹೇಳುವ ಮೂಲಕ ಬಂಗಾರಪುರದ ಬಲವಂತರಾಯ ದೇಸಾಯಿ ಗುಣದಲ್ಲಿ ಮೇಲಾಗಿ ಕಾಣುತ್ತಾರೆ. ಹೀಗೆ ಅಸ್ಪ್ರಶ್ಯತೆ, ಶೈಕ್ಷಣಿಕ, ಸಾಮಾಜಿಕ, ಕಳ ಕಳಿಯುಳ್ಳ ಹತ್ತು ಕಥೆಗಳುಳ್ಳ ಗುಚ್ಚ ದೇವರಿಗೆ ಜ್ವರ ಬಂದಾಗ, ಇದು ಮಕ್ಕಳಿಗೆ ಮಾತ್ರವಲ್ಲದೆ ಎತ್ತಿಕೊಂಡು ಓದಿದವರ ಕೂಸಾಗಬಲ್ಲ ಕಥಾ ಸಂಕಲನವಾಗಿದ್ದು, ಸಿದ್ದನಗೌಡ ಬಿಜ್ಜೂರವರು ಇನ್ನಷ್ಟು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಕೊಡುಗೆಯನ್ನು ನೀಡಲೆಂದು ಆಶಿಸೋಣ.

****
ಕಥಾ ಸಂಕಲನ : ದೇವರಿಗೆ ಜ್ವರ ಬಂದಾಗ
ಲೇಖಕರು : ಸಿದ್ದನಗೌಡ ಬಿಜ್ಜೂರ
ಪ್ರಕಾಶಕರು :ಶ್ರೀ ಸಾಯಿ ಸಾಹಿತ್ಯ ಪ್ರಕಾಶನ ಬೆಂಗಳೂರು
ಪ್ರಥಮ ಮುದ್ರಣ : 2023
ಬೆಲೆ :120/

 

 

MORE FEATURES

ಬದುಕನ್ನು ತಕ್ಕಡಿಯಲ್ಲಿಟ್ಟು ತೂಗಿ ನಿಖರ ವ್ಯತ್ಯಾಸ ಹೇಳುವ ಈ ಜ್ಞಾನಿ 'ಅವಿಜ್ಞಾನಿ'

01-05-2024 ಬೆಂಗಳೂರು

'ಬಂದೇ ಬರುತಾವ ಕಾಲ' ಎಂಬ ಸಾಲು ನಿಜವಾಗಿ ಕೆಲ ತಿಂಗಳ ಹಿಂದೆ 'ಈ ಹೊತ್ತಿಗೆ ಕಾವ್ಯ 'ಪ್ರಶಸ್ತಿಯು ಅದ್...

'ಲೈಫ್‌ನ ಸಕ್ಸೆಸ್ ಮಂತ್ರ' ನಮ್ಮ ಬಳಿಯೇ ಇದೆ

30-04-2024 ಬೆಂಗಳೂರು

'ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ' ಎನ್ನುವ ಗಾದೆ ಮಾತು ಎಷ್ಟು ಸತ್ಯವೋ ಅದೇ ರೀತಿ ಬದುಕಿನಲ್ಲಿ ಯಶಸ್ಸ ...

ಅಪರಿಚಿತ ದೇವಾಲಯಗಳ ಬಗ್ಗೆ ಅಪೂರ್ವ ಮಾಹಿತಿ

30-04-2024 ಬೆಂಗಳೂರು

‘ಇದು ಪುರಾತನ ದೇವಾಲಯಗಳ ಅಸಂಖ್ಯ ಸಾಗರದ ನಡುವಿನ ಚಿಕ್ಕ ಬಿಂದು ಮಾತ್ರ. ಜನಮಾನಸದಿಂದ ದೂರವಾದ ದೇವಾಲಯಗಳನ್ನು ಜನರ...