ಎನಗಿಂತ ಕಿರಿಯರಿಲ್ಲ ಎಂಬ ಸದ್ವಿನಯದ ಹಿರಿಯರು ಪ್ರೊ.ಜಿ.ಎಂ.ಹೆಗಡೆ


“ಸಾಹಿತ್ಯ ಸುರಭಿ, ಮಾಸ್ತಿ ಕೃತಿ ಚಿಂತನ, ವಿಮರ್ಶಾ ವಿವೇಕ, ಜನಪ್ರಿಯ ಕನ್ನಡ ಛಂದಸ್ಸು ಹೀಗೆ 25 ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದಲ್ಲದೆ 31 ಸಂಗ್ರಹಯೋಗ್ಯವಾದ ಅಮೂಲ್ಯವಾದ ಗ್ರಂಥಗಳನ್ನು ಸಂಪಾದಿಸಿ ಕನ್ನಡ ಸಾಹಿತ್ಯದ ಕಣಜಕ್ಕೆ ಕಾಳು ತುಂಬಿದವರು, ಎನಗಿಂತ ಕಿರಿಯರಿಲ್ಲ ಎಂಬ ಸದ್ವಿನಯದ ಹಿರಿಯ ಸಾಹಿತಿ ಜಿ.ಎಂ.ಹೆಗಡೆ” ಎನ್ನುತ್ತಾರೆ ಕವಿ ಡಾ.ಶ್ರೀಪಾದ ಶೆಟ್ಟಿ. ಅವರು ಜಿ.ಎಂ.ಹೆಗಡೆಯವರಿಗೆ ವಿ.ಕೃ.ಗೋಕಾಕ ಪ್ರಶಸ್ತಿ ಬಂದಿರುವ ಸಂದರ್ಭದಲ್ಲಿ ಅವರನ್ನು ಅಭಿನಂದಿಸುತ್ತ ಕೆಲವು ವಿಚಾರಗಳನ್ನು ದಾಖಲಿಸಿದ್ದಾರೆ ಇಲ್ಲಿ.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಧಾರವಾಡವನ್ನು ಕರೆಯಲಾಗುತ್ತದೆ. ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ವಿಶ್ವವಿದ್ಯಾಲಯದ ಆವರಣ, ವರಕವಿ ದ.ರಾ.ಬೇಂದ್ರೆ ಇವೆಲ್ಲವೂ ಧಾರವಾಡದ ಅಸ್ಮಿತೆಯನ್ನು ಶ್ರುತಪಡಿಸುವ ಸಂಗತಿಗಳು.

ಧಾರವಾಡದಲ್ಲಿ ಒಂದು ಕಲ್ಲನ್ನು ಎಸೆದರೆ ಅದು ಕವಿಗಳ ಮನೆಯ ಮೇಲೆ ಬೀಳುತ್ತದೆ ಅದು ತಪ್ಪಿದರೆ ಎಮ್ಮೆಯ ಮೈಮೇಲೆ ಬೀಳುತ್ತದೆ ಎಂದು ಬಾಲ್ಯದಲ್ಲಿ ನಾನು ಕೇಳಿದ ಮಾತು. ಧಾರವಾಡ ಪೇಡೆ ಹಿಂದಿನಿಂದಲೂ ಹೆಸರುವಾಸಿ. ಧಾರವಾಡದ ಮಳೆಯನ್ನು ನಂಬಬಾರದು ಎಂಬ ಮಾತು ಪ್ರಚಲಿತದಲ್ಲಿದೆ. ಧಾರವಾಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಸರವನ್ನು ತಮ್ಮ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಹಸಿರಾಗಿಸಿದವರು ಡಾ.ಜಿ.ಎಂ.ಹೆಗಡೆಯವರು. ಧಾರವಾಡದ ಸಾಹಿತ್ಯ ವೇದಿಕೆಯ ಒಡ್ಡೋಲಗದಲ್ಲಿ ವಿಜೃಂಭಿಸಿದ ಕಿರೀಟದ ವೇಷಧಾರಿಯಲ್ಲ ಅವರು. ಆದರೆ ಇಡೀ ಪ್ರಸಂಗದ ಯಶಸ್ಸಿಗೆ ಹಿನ್ನೆಲೆಯಾಗಿ ನಿಂತವರು ಹೆಗಡೆಯವರು. "ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಹೇ ದೇವಾ" ಎಂಬ ಡಿ.ವಿ.ಜಿ.ಯವರ ಕವನದ ಸಾಲಿನಂತೆ ಅವರ ಕಾರ್ಯದ ರೀತಿ.

ಸಿರಸಿ ತಾಲೂಕಿನ ಆಲ್ಮನೆಯಲ್ಲಿ ಮಹಾಬಲೇಶ್ವರ ಹೆಗಡೆ ಹಾಗೂ ವರಮಹಾಲಕ್ಷ್ಮಿ ದಂಪತಿಯ ಮಗನಾಗಿ 12-12-1952ರಂದು ಜನಿಸಿದ ಗುರುಪಾದರು, ಕಾಗೋಡು ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು, ಯಡಳ್ಳಿ ಹೈಸ್ಕೂಲಿನಲ್ಲಿ ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿ ಸಿರಸಿಯ ಎಂ.ಇ.ಎಸ್. ಮಹಾವಿದ್ಯಾಲಯದಲ್ಲಿ ಬಿ.ಎ.ಪದವಿಯನ್ನು 1972ರಲ್ಲಿ ಮುಗಿಸಿದರು. ಧಾರವಾಡದ ಕ.ವಿ.ವಿ.ಯ ಕನ್ನಡ ಆಧ್ಯಯನ ಪೀಠದಲ್ಲಿ ತಮ್ಮ ಎಂ.ಎ.ಪದವಿಯನ್ನು 1974ರಲ್ಲಿ ಮುಗಿಸಿದರು. 1974ರಿಂದ ಧಾರವಾಡದ ಕಿಟೆಲ್ ಆರ್ಟ್ಸ್‌ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಸ್ನಾತಕೋತ್ತರ ಕನ್ನಡ ವಿಭಾಗದ ಸಂಚಾಲಕರಾಗಿ ನಿರಂತರ ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರೂ ಸಾಹಿತ್ಯ ಕಾರ್ಯದಲ್ಲಿ ಪ್ರವೃತ್ತರಾಗಿದ್ದಾರೆ.

" ಮಾಸ್ತಿಯವರ ವಿಮರ್ಶೆ ಒಂದು ಅಧ್ಯಯನ" ಎಂಬ ಮಹಾಪ್ರಬಂಧವನ್ನು ಕ.ವಿ.ವಿ.ಗೆ ಮಂಡಿಸಿ ಅವರು ಪಿಎಚ್,ಡಿ.ಪದವಿಯನ್ನು ಪಡೆದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಹತ್ತು ಜನ ವಿದ್ಯಾರ್ಥಿಗಳು ಪಿಎಚ್,ಡಿ. ಪದವಿಯನ್ನು ಪಡೆದಿರುತ್ತಾರೆ.

ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಅಂಕಣಕಾರರಾಗಿ ಹತ್ತು ವರ್ಷಗಳ ಕಾಲ ಪುಸ್ತಕ ವಿಮರ್ಶೆಯನ್ನು ಮಾಡಿದ ಹಿರಿಮೆ ಅವರದು. ಆರುನೂರಕ್ಕಿಂತ ಹೆಚ್ಚು ಕೃತಿಗಳ ವಿಮರ್ಶೆಯನ್ನು ಮಾಡಿದ ಪುಸ್ತಕ ಪ್ರೀತಿಯ ವಿಮರ್ಶಕರು ಡಾ.ಜಿ.ಎಂ.ಹೆಗಡೆ ಅವರು.

ಪಾಟೀಲ ಪುಟ್ಟಪ್ಪ, ನಾಡೋಜ ಚನ್ನವೀರ ಕಣವಿ, ಡಾ.ಜಿ.ಎಸ್.ಆಮೂರ, ಡಾ.ಎಂ.ಎಂ.ಕಲಬುರ್ಗಿ, ಮಾಸ್ತಿಯವರ ಸಾಹಿತ್ಯ, ವಿಮರ್ಶೆ, ಸಾಹಿತ್ಯಕೃತಿ ಸಂಚಯ, ಸಾಹಿತ್ಯ ಸುರಭಿ, ಮಾಸ್ತಿ ಕೃತಿ ಚಿಂತನ, ವಿಮರ್ಶಾ ವಿವೇಕ, ಜನಪ್ರಿಯ ಕನ್ನಡ ಛಂದಸ್ಸು ಹೀಗೆ ೨೫ ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದಲ್ಲದೆ ೩೧ ಸಂಗ್ರಹ ಯೋಗ್ಯವಾದ ಅಮೂಲ್ಯವಾದ ಗ್ರಂಥಗಳನ್ನು ಸಂಪಾದಿಸಿ ಕನ್ನಡ ಸಾಹಿತ್ಯದ ಕಣಜಕ್ಕೆ ಕಾಳು ತುಂಬಿದ ಎನಗಿಂತ ಕಿರಿಯರಿಲ್ಲ ಎಂಬ ಸದ್ವಿನಯದ ಹಿರಿಯ ಸಾಹಿತಿ ಜಿ.ಎಂ.ಹೆಗಡೆ ಅವರು.

ಕನ್ನಡದ ಉಳಿವಿಗಾಗಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಹೋರಾಟದಲ್ಲಿ ತೊಡಗಿಕೊಂಡವರು ಅವರು. ಕ.ವಿ.ವಿ.ಯ ಕನ್ನಡ ಅಧ್ಯಾಪಕರ ಪರಿಷತ್ತನ್ನು ಸ್ಥಾಪಿಸಿ ೧೪ ವರ್ಷಗಳ ಕಾಲ ಅದರ ಕಾರ್ಯಾಧ್ಯಕ್ಷರಾಗಿ ದುಡಿದ ಅವರು, ಕನ್ನಡ ವಿಷಯದ ಕಾರ್ಯಭಾರ ವಿಶ್ವವಿದ್ಯಾಲಯದ ಪಠ್ಯ ಪುಸ್ತಕದಲ್ಲಿ ಹೆಚ್ಚು ಕಡಿಮೆಯಾಗದೆ ಸತತ ಹೋರಾಟದಿಂದ ಅದು ಸರಿಯಾಗಿ ಇರುವಂತೆ ಕಾಳಜಿ ವಹಿಸಿದವರು ಪ್ರೊ.ಜಿ.ಎಂ.ಹೆಗೆಡೆ ಅವರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪದ ಸಲಹೆಗಾರರಾಗಿದ್ದಾಗ ಅವರ ಜೊತೆ ನಾನು, ಗೆಳೆಯ ಸಿದ್ದಲಿಂಗ ದೇಸಾಯಿ, ಚಂಪಾ, ಬುದ್ದಣ್ಣ ಹಿಂಗಮಿರೆ ಎಲ್ಲರೂ ಸೇರಿ ಸಮಾಲೋಚನೆ ಮಾಡುತ್ತಿದ್ದ ಆ ದಿನಗಳು ಈಗ ಸವಿನೆನಪು. ಹೀಗೆ ಹಲವು ಹತ್ತು ಸಾಹಿತ್ಯ ಸಂಘಟನೆಯಲ್ಲಿ ದಣಿವರಿಯದೆ ದುಡಿದ, ದುಡಿಯುತ್ತಿರುವ ಸನ್ಮಾನ, ಪ್ರಶಸ್ತಿ ಮತ್ತು ಪ್ರಚಾರದಿಂದ ದೂರ ಉಳಿದ ಸುಮನಸರು ಪ್ರೊ.ಜಿ.ಎಂ.ಹೆಗಡೆ.

ರಂಜನಾ, ರಶ್ಮಿ ಅವರ ಕುವರಿಯರು. ಶ್ರೀಗಣೇಶ ಮತ್ತು ಹರ್ಷವರ್ಧನ ಅವರ ಅಳಿಯಂದಿರು. ಇಬ್ಬರು ಮುದ್ದಿನ ಮೊಮ್ಮಕ್ಕಳ ಪ್ರೀತಿಯ ಅಜ್ಜ ಅವರು‌. ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಲವಾಗಿ ಬೆಂಬಲವಾಗಿ ನಿಂತವರು ಅವರ ಪತ್ನಿ ಶ್ರೀಮತಿ ಸರಸ್ವತಿ. ಹೆಗಡೆಯವರಿಗೆ ಸಾಹಿತ್ಯ ಸರಸ್ವತಿ ಮತ್ತು ಗೃಹ ಸರಸ್ವತಿಯ ಜೊತೆಗೆ ಅನ್ಯೋನ್ಯ ಸಖ್ಯ ಮತ್ತು ಸಹಚರ್ಯ. ಇದು ಭಾಗ್ಯ.

Better late than never ಎಂಬ ನುಡಿಯಂತೆ ಈ ಸಲ ವಿನಾಯಕ ವಾಙ್ಮಯ ಟ್ರಸ್ಟ್ ಅವರ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅಭಿಮಾನದ ಮತ್ತು ಅಭಿನಂದನೀಯ ಸಂಗತಿ.

ಕವಿ ದಿನಕರ ದೇಸಾಯಿಯವರು ಚೀನಿ ಕವಿತೆಯೊಂದನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ಅದರ ಅರ್ಥ ಗಟ್ಟಿಯಾದ ಹಲ್ಲು ಬೇಗನೆ ಉದುರಿ ಹೋಗುತ್ತದೆ. ಆದರೆ ಮೆತ್ತಗಿರುವ ನಾಲಿಗೆ ( ರಸನೆ) ಹೆಚ್ಚುಕಾಲ ಬಾಳುತ್ತದೆ. ಈ ಮಾತು ಡಾ.ಜಿ.ಎಂ.ಹೆಗಡೆಯವರಿಗೆ ವಿಶೇಷವಾಗಿ ಅನ್ವಯಿಸುತ್ತದೆ.

ಬಹಳಷ್ಟು ಸಾಹಿತಿಗಳ ಬಗ್ಗೆ ಅಭಿನಂದನ ಗ್ರಂಥ ತಂದಿರುವ ಡಾ.ಹೆಗಡೆಯವರಿಗೆ ಒಂದು ಅಭಿನಂದನ ಗ್ರಂಥ ಸಮರ್ಪಣೆ ಮಾಡಬೇಕಾದ ಹೊಣೆ ನಮ್ಮೆಲ್ಲರದೂ ಹೌದು. ತಮ್ಮ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಅವರ ಕಿರೀಟಕ್ಕೆ ವಿನಾಯಕ ವಾಙ್ಮಯ ಟ್ರಸ್ಟಿನ ಪ್ರಶಸ್ತಿ ಒಂದು ಗರಿಯೇ ಸರಿ. ಬಹುಶ್ರುತರು, ಸದ್ಗುಣ ಸಂಪನ್ನರು, ಗುಣಪಕ್ಷಪಾತಿಗಳು, ಮಿದುಮಾತಿನ ಹೃದಯವಂತ ಡಾ.ಜಿ.ಎಂ.ಹೆಗಡೆ ಅವರಿಗೆ ನನ್ನ ಮನದಾಳದ ಹಾರ್ದಿಕ ಅಭಿನಂದನೆಗಳು.

-ಡಾ.ಶ್ರೀಪಾದ ಶೆಟ್ಟಿ

MORE FEATURES

'ಲೈಫ್‌ನ ಸಕ್ಸೆಸ್ ಮಂತ್ರ' ನಮ್ಮ ಬಳಿಯೇ ಇದೆ

30-04-2024 ಬೆಂಗಳೂರು

'ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ' ಎನ್ನುವ ಗಾದೆ ಮಾತು ಎಷ್ಟು ಸತ್ಯವೋ ಅದೇ ರೀತಿ ಬದುಕಿನಲ್ಲಿ ಯಶಸ್ಸ ...

ಅಪರಿಚಿತ ದೇವಾಲಯಗಳ ಬಗ್ಗೆ ಅಪೂರ್ವ ಮಾಹಿತಿ

30-04-2024 ಬೆಂಗಳೂರು

‘ಇದು ಪುರಾತನ ದೇವಾಲಯಗಳ ಅಸಂಖ್ಯ ಸಾಗರದ ನಡುವಿನ ಚಿಕ್ಕ ಬಿಂದು ಮಾತ್ರ. ಜನಮಾನಸದಿಂದ ದೂರವಾದ ದೇವಾಲಯಗಳನ್ನು ಜನರ...

ಹವ್ಯಕ ಸಮಾಜದ ಸಮಾಜೊ-ಸಾಂಸ್ಕೃತಿಕ ಪಠ್ಯವಾಗಿ ಮಹತ್ವ ಪಡೆದಿರುವ ಕೃತಿ 'ಬಯಲ ಬೆಟ್ಟ'

30-04-2024 ಬೆಂಗಳೂರು

‘ಕನಸುಗಳನ್ನು ಕಂಡರಷ್ಟೆ ಸಾಲದು; ಅವುಗಳನ್ನು ನನಸುಗಳನ್ನಾಗಿ ಮಾಡಿಕೊಳ್ಳುವ ಛಲ, ಹಠ, ಮತ್ತು ನಿರಂತರ ಪರಿಶ್ರಮ , ...