ಹಸಿವು ತಣಿಸುವ ತಾಯಿ

Date: 27-01-2021

Location: .


ಗ್ರಾಮೀಣ ಸಂವೇದನೆ ಹಾಗೂ ದುಡಿಯುವ ವರ್ಗದ ಜನರ ಬದುಕನ್ನು ತಮ್ಮ ಕಲಾಕೃತಿಯಲ್ಲಿ ಮೂಡಿಸಿದ ಕಲಾವಿದ ಜೀನ್ ಫ್ರಾಂಕೋಯಿಸ್ ಮಿಲ್ಲೆಟ್’. ಇವರ ಬಹುಖ್ಯಾತಿಯ ‘ವುಮನ್ ಬೇಕಿಂಗ್ ಬ್ರೇಡ್ಕಲಾಕೃತಿಯ ಕುರಿತು ಲೇಖಕ ಲಕ್ಷ್ಮಣ ಬಾದಾಮಿ ಅವರು ತಮ್ಮ ವರ್ಣಯಾತ್ರೆ ಅಂಕಣದಲ್ಲಿ ವಿಶ್ಲೇಷಿಸಿದ ಬರಹವಿದು.

ಕಲಾಕೃತಿ: ವುಮನ್ ಬೇಕಿಂಗ್ ಬ್ರೇಡ್
ಕಲಾವಿದ: ಜೀನ್ ಫ್ರಾಂಕೋಯಿಸ್ ಮಿಲ್ಲೆಟ್
ಸ್ಥಳ: ನಾರ್ಮಂಡಿ, ಫ್ರಾನ್ಸ್
ಕಾಲ: 1814 - 1875
ಕಲಾಪಂಥ: ರಿಯಲಿಸಂ

‘ಹಸಿವು’ ಮನುಷ್ಯನ ಎಲ್ಲ ಕ್ರಿಯೆಗಳ ಮೂಲ ಧಾತು. ಮನುಷ್ಯನ ಹಸಿವಿಗೆ ಆಹಾರವನ್ನು ಸಂಪಾದಿಸುವುದರಲ್ಲಿ ಕುಟುಂಬದ ಎಲ್ಲ ಸದಸ್ಯರ ಪಾಲು ಇರಬಹುದು. ಆದರೆ ಅಂತಿಮವಾಗಿ ಆಹಾರವನ್ನು ‘ಅನ್ನ’ವಾಗಿ ತಯಾರಿಸಿ ಕೊಡುವವಳು ‘ತಾಯಿ’ಯೇ ಆಗಿರುತ್ತಾಳೆ. ಅಂದರೆ ಅನ್ನ ತಯಾರಿಸುವ ಹೆಣ್ಣುಮಗಳು ಸಂಬಂಧದಲ್ಲಿ ಹೆಂಡತಿ, ಅಕ್ಕ, ತಂಗಿ ಏನೇ ಆಗಿರಬಹುದು. ಆದರೆ ‘ಅನ್ನ’ ಮಾಡುವುದರಲ್ಲಿ ತಾಯ್ತನ ಅನ್ನೋದು ಇರುತ್ತದೆ ಅಂತ. ನಮ್ಮಲ್ಲಿ ರೊಟ್ಟಿ ಇರಬಹುದು, ಇನ್ನೊಂದು ಕಡೆ ಬ್ರೆಡ್ ಇರಬಹುದು ಆಹಾರ ಯಾವುದಾದರೇನು.. ಒಲೆಯ ಮುಂದಿರುವ ತಾಯಿಯ ತಳಮಳ ಒಂದೇ. ಹಸಿವು ನೀಗಿಸಬೇಕು ಎಂದು. ಇಲ್ಲಿ ತಾಯಿಯೊಬ್ಬಳು ಬ್ರೆಡ್ ಬೇಯಿಸುವುದರಲ್ಲಿ ನಿರತಳಾಗಿದ್ದಾಳೆ.

ಬೇಯಿಸುವ ಕೆಲಸವೆಂದರೆ ಬೆಂಕಿಯ ಕುಲುಮೆಯ ಮುಂದೆ ನಿಂತ ಅನುಭವವೇ. ತಾಪದ ಹದವರಿತು ಇಲ್ಲಿ ಕೆಲಸ ಮಾಡಬೇಕು. ತಾಪ ಹೆಚ್ಚಾದರೆ ಎಲ್ಲ ಸುಟ್ಟು ಕರಕಲಾಗುತ್ತದೆ. ಹಾಗಾಗಿ ಈ ಕೆಲಸದಲ್ಲಿ ಒಂದು ಧಾವಂತ, ಎಚ್ಚರ ಇರುತ್ತದೆ. ಅಂಥದೇ ಧಾವಂತ ಇಲ್ಲಿ ಬ್ರೇಡ್ ಬೇಯಿಸುತ್ತಿರುವ ತಾಯಿಯಲ್ಲಿ ಕಾಣುತ್ತಿದೆ. ಆಕೆ ಬೇಯಿಸುತ್ತಿರುವುದು ತನಗಾಗಿ, ತನ್ನ ಕುಟುಂಬಕ್ಕೆ ಮಾತ್ರವಲ್ಲ; ಜಗದೆಲ್ಲ ಒಡಲುಗಳ ಹಸಿವನ್ನು ತಣಿಸುವ ಹೊಣೆಯು ತನ್ನ ಮೇಲಿದೆ ಎನ್ನುವಷ್ಟರ ಮಟ್ಟಿಗೆ ಆಕೆ ತಲ್ಲಣದಲ್ಲಿದ್ದಾಳೆ!! ಈ ಕಾರಣಕ್ಕಾಗಿ ಇವಳು ಜಗತ್ತಿನ ಎಲ್ಲ ತಾಯಿಯಂದಿರ ಪ್ರತಿರೂಪವಾಗಿ ಕಾಣುತ್ತಿದ್ದಾಳೆ.

ಬ್ರೇಡ್ ತಯಾರಿಕಾ ಕೇಂದ್ರ(ಭಟ್ಟಿ)ದಲ್ಲಿ ಅವಳೊಬ್ಬಳೆ ಇದ್ದಾಳೆ. ಬೆಂಕಿಗಿಂಡಿಯಲ್ಲಿ ಬ್ರೆಡ್ ಬೇಯಿಸಲು ಉದ್ದನೆಯ ಸಲಾಕೆಯನ್ನು ಎರಡು ಕೈಗಳಿಂದ ಹಿಡಿದು ಹದವಾದ ಕ್ಷಣಕ್ಕೆ ಕಾಯ್ದು ನಂತರ ತಕ್ಷಣ ಹಿಟ್ಟಿನ ಮುದ್ದೆಯನ್ನು ಬೆಂಕಿಗಿಂಡಿಯಲ್ಲಿ ತೂರಿಸುತ್ತಾಳೆ. ಅವಳ ಸಂಪೂರ್ಣ ಲಕ್ಷ್ಯವೆಲ್ಲವು ಹಿಟ್ಟಿನ ಮುದ್ದೆ, ಬೆಂಕಿಗಿಂಡಿಯಲ್ಲಿಯೇ ನೆಟ್ಟಿದೆ. ಆ ಭಟ್ಟಿಯಲ್ಲಿ ಹೆಚ್ಚು ಬೆಳಕಿಲ್ಲ. ಇವಳ ಮೇಲೆ ಹಿಂದಿನಿಂದ ಒಂದಷ್ಟು ಬೆಳಕು ಬೀರಿದೆ. ಬೆಂಕಿಗಿಂಡಿಯು ಇವಳ ಎಡ ಮುಂಗೈ ಮತ್ತು ಮುಖದ ಮೇಲಿಷ್ಟು ಕೆಂಬೆಳಕನ್ನು ಸವರಿದೆ. ದೃಢಕಾಯದ ಗಟ್ಟಿಗಿತ್ತಿಯಾದ ಇವಳು ಯಾವ ಕೆಲಸಕ್ಕೂ ಜಪ್ಪೆನ್ನದವಳು ಅಂತನ್ನಿಸುತ್ತಿದ್ದಾಳೆ. ಇವಳು ಕೆಲಸದಲ್ಲಿ ಎಷ್ಟರಮಟ್ಟಿಗೆ ತೊಡಗಿಕೊಂಡಿದ್ದಾಳೆ ಎನ್ನುವುದಕ್ಕೆ ಅವಳು ನಿಂತ ಭಂಗಿಯೇ ಹೇಳುತ್ತದೆ. ಈ ಹೆಂಗಸು ವರ್ಮೀರನ ‘ಗೌಳಿಗಿತ್ತಿ’ಯನ್ನು ನೆನಪಿಸುತ್ತಾಳೆ.

ಚಿತ್ರದ ನಡುಮಧ್ಯೆದಲ್ಲಿ ತನ್ನನ್ನು ತಾನೇ ಒಟ್ಟುಗೂಡಿಸಿಕೊಂಡು ನಿಂತಿರುವ ಅವಳು ನೋಡುಗನ ನೋಟವನ್ನು ಇಡಿಯಾಗಿ ಮೊದಲು ಭುಂಜಿಸುತ್ತಾಳೆ. ಆಮೇಲೆ ಅವಳು ಕೈಯಲ್ಲಿರುವ ಸಲಾಕೆ, ಅದರ ತುದಿಯಲ್ಲಿರುವ ಹಿಟ್ಟಿನ ಮುದ್ದೆ ಮತ್ತು ಎದುರಿನ ಕಟ್ಟೆಯ ಮೇಲಿರುವ ಒಂದೆರಡು ಬಿದಿರಿನ ಬುಟ್ಟಿಗಳು ಕಾಣುತ್ತವೆ. ಅವಳ ತಲೆ, ಭುಜ, ಬೆನ್ನಿನ ಮೇಲೆ ಹೆಚ್ಚಿನ ಬೆಳಕು ಬಿದ್ದಿದೆ. ಕೆಳಗಡೆ ನೆರಳು ಕವಿಯುತ್ತ ಬಂದಿದೆ. ಇಡೀ ಹಿನ್ನೆಲೆ ಹೆಚ್ಚೂ ಕಡಿಮೆ ಕಂದುಗಪ್ಪಿನಲ್ಲೇ ಮುಗಿದಿದೆ. ಹಿನ್ನೆಲೆ Monochromatic ರೀತಿ ಆಗಿರುವುದರಿಂದಲೋ ಏನೋ ಮಹಿಳೆ ತೊಟ್ಟಿರುವ ಉಡುಪಿನಲ್ಲಿ ಹಲವು ಬಣ್ಣಗಳ ವೈಖರಿ ಕಲಾವಿದ ಕಾಣಿಸಿರಬೇಕು. ಈ ವಸ್ತ್ರ ವಿನ್ಯಾಸವು ಚಿತ್ರದಲ್ಲಿ ಇನ್ನೊಂದು ಕಲಾಕೃತಿಯಾಗಿ ಗೋಚರಿಸುತ್ತಿದೆ. ತಲೆಗೆ ಸುತ್ತಿರುವ ಹಳದಿ ವಸ್ತ್ರ, ತೋಳುಗಳ ಮೂಲಕ ಚಾಚಿರುವ ಶರಟಿನ ಬಿಳಿ, ಬೆನ್ನಿಗಂಟಿರುವ ನೀಲಿ ಜಾಕೆಟ್, ಮೇಲೆತ್ತಿ ಕಟ್ಟಿದ್ದರೂ ಟೊಂಕದಿಂದ ಕೆಳಗೆ ನೇತಾಡುತ್ತಿರುವ ನಸುಹಳದಿ ಬಣ್ಣದ ಗೌನ್. ಅದರ ಕೆಳಗಿನಿಂದ ಕಾಣುತ್ತಿರುವ ಕಂದುಗಪ್ಪಿನ ಲಂಗ ಮತ್ತು ನಡಕ್ಕೆ ಬಿಗಿದಿರುವ ಕೆಂಪುವಸ್ತ್ರ, ಅದರ ಒಂದು ತುದಿಯು ಹಿಂದೆ ನೇತುಬಿದ್ದಿರುವ ರೀತಿ.. ಇದೆಲ್ಲವೂ ಪಕ್ಕಾ ಕಾರ್ಯತತ್ಪರ ವ್ಯಕ್ತಿಗಳ ‘ವಸ್ತ್ರಸಂಹಿತೆ’ಯಾಗಿದೆ.

ಜೀನ್ ಫ್ರಾಂಕೋಯಿಸ್ ಮಿಲ್ಲೆಟ್‌ನಿಗೆ ತನ್ನ ಚಿತ್ರಗಳಲ್ಲಿ ತೀರಾ ಸಾಮಾನ್ಯರ, ಕೂಲಿ ಕಾರ್ಮಿಕರ ವಾಸ್ತವ ಬದುಕನ್ನು ಕಾಣಿಸಬೇಕಿತ್ತು. ಇವನೊಬ್ಬ Realism (ವಾಸ್ತವವಾದಿ) ಕಲಾವಿದನಾಗಿದ್ದನು. ಉನ್ನತ ವರ್ಗದವರ ಠೀವಿಯ Pose ಇವನಿಗೆ ಬೇಕಾಗಿರಲಿಲ್ಲ. ‘ಹೊಲದಲ್ಲಿ ಧಾನ್ಯ ಸಂಗ್ರಹಿಸುವವರು’, ‘ಸಸಿ ನೆಡುವವರು’, ‘ಸುಗ್ಗಿ ಕೆಲಸಗಾರರು’ ಮತ್ತು ‘ದನ ಕಾಯುವವರು’ ಇಂಥವರನ್ನು ಚಿತ್ರಿಸುವದೇ ಮಿಲ್ಲೆಟ್‌ನ ಪರಮ ಧ್ಯೇಯವಾಗಿತ್ತು. ರೋಮ್ಯಾಂಟಿಕ್ ಶೈಲಿಯ ಕಲಾವಿದರು ಕಲ್ಪನೆಯ ಲೋಕದಲ್ಲಿ ವಿಹರಿಸುತ್ತ ರಮ್ಯ ಚಿತ್ರಗಳನ್ನು ರಚಿಸುತ್ತಿರುವುದು ವಾಸ್ತವವಾದಿ ಕಲಾವಿದರಿಗೆ ಇಷ್ಟವಾಗಲಿಲ್ಲ. ನಿಜ ಜೀವನದ ನೈಜ ಘಟನೆಗಳನ್ನು ರಚಿಸಬೇಕಲ್ಲದೆ ಕಲ್ಪನೆಯಿಂದ, ಕಾಣದ ಲೋಕವನ್ನು ಚಿತ್ರಿಸುವುದು ಈ ಪಂಥದ ಕಲಾವಿದರಿಗೆ ಇಷ್ಟವಾಗಲಿಲ್ಲ. Gustave Courbet, Edourd Manet, James Whisteler,singer sergeant, Thomas Eakins ಮೊದಲಾದವರು ಈ ಪಂಥದಲ್ಲಿ ಕೃತಿಗಳನ್ನು ರಚಿಸಿದ್ದಾರೆ.

ವಾಸ್ತವವಾದಿ ಕಲಾವಿದರಲ್ಲೇ ಮಿಲ್ಲೆಟ್ ಬಹಳ ಭಿನ್ನವಾಗಿ ಕಾಣಿಸುತ್ತಾನೆ. ಈ ಪಂಥದ ಉಳಿದ ಕಲಾವಿದರ ಚಿತ್ರಣಗಳಲ್ಲಿ ಉನ್ನತವರ್ಗ ಇಲ್ಲವೆ ಮಧ್ಯಮವರ್ಗದವರು ಚಿತ್ರಿತವಾಗಿದ್ದಾರೆ. ಮಿಲ್ಲೆಟ್‌ನ ಕೃತಿಗಳ ತುಂಬ.. ದುಡಿಯುವ ವರ್ಗವೇ ತುಂಬಿಕೊಂಡಿದೆ. ಈ ವರ್ಗವೆಲ್ಲ ಬಿಸಿಲಿನಲ್ಲಿ, ಬಯಲಲ್ಲಿ ಇರುತ್ತಾರೆ. ಇವರನ್ನು ನೋಡುವ ದೃಷ್ಟಿಕೇಂದ್ರ ಚಿತ್ರದಲ್ಲಿ ಬೆಳಕಿಗೆ ಎದಿರಾಗಿರುತ್ತದೆ. ಹಾಗಾಗಿ ಇಲ್ಲಿಯ ಪಾತ್ರಗಳ ಮೈಮೇಲೆಲ್ಲ ನೆರಳು ಇಲ್ಲವೆ ಬಹುತೇಕ ಕತ್ತಲು ಆವರಿಸಿಕೊಂಡಿರುತ್ತದೆ. ಮಿಲ್ಲೆಟ್ ಈ ಕತ್ತಲನ್ನು ತನ್ನ ಪಾತ್ರಗಳ ಮೇಲೆ ಎರಡು ಕಾರಣಕ್ಕೆ ಚೆಲ್ಲಿರಬೇಕೆನಿಸುತ್ತದೆ. ಒಂದು: ದುಡಿಯುವ ವರ್ಗ ಕತ್ತಲಲ್ಲಿದೆ ಎನ್ನುವ ರೂಪಕ. ಇನ್ನೊಂದು: ಈ ಪಾತ್ರಗಳ ರೂಪಾಕಾರಗಳು ಬೆಳಕಿಗೆ ಸ್ಪಷ್ಟವಾಗಿ ಕಾಣಿಸಿದರೆ ಪಾತ್ರಗಳು ಕೇವಲ ಆಯಾ ಪಾತ್ರಗಳಾಗಿ ಮಾತ್ರ ಉಳಿಯುತ್ತವೆ. ಈಗ ನೆರಳನ್ನಾವರಿಸಿಕೊಂಡು ಅಸ್ಪಷ್ಟವಾಗಿರುವುದರಿಂದ ಇವು ಇಡೀ ದುಡಿಯುವ ವರ್ಗವನ್ನು ಪ್ರತಿನಿಧಿಸುತ್ತವೆ ಎಂದು.

ಮಿಲ್ಲೆಟ್‌ನದು ಕೃಷಿ ಕುಟುಂಬ. ಅದಕ್ಕೂ ಮಿಗಿಲಾಗಿ ಮೊದಮೊದಲು ಅವನೂ ಕೂಡಾ ಈ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡವನು. ಹೀಗಾಗಿ ಕೃಷಿ ಬದುಕು ಅವನ ಚಿತ್ರಗಳಲ್ಲಿ ಹೆಚ್ಚು ಸ್ಥಾನ ಪಡೆದಿದೆ. ಅದಕ್ಕೆ ಅವನು ಹೇಳುತ್ತಾನೆ- ‘ನಾನು ಹುಟ್ಟಿದಾಗಿನಿಂದ ಹೊಲಗಳನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಈ ತನಕ ಕಂಡಿಲ್ಲ. ನಾನು ಕೆಲಸ ಮಾಡುತ್ತಿದ್ದಾಗ ಕಂಡದ್ದನ್ನು, ಅನುಭವಿಸಿದ್ದನ್ನು ನನಗೆ ಸಾಧ್ಯವಾದಷ್ಟು ಮಟ್ಟಿಗೆ ಉತ್ತಮವಾಗಿ ಹೇಳಲು ಪ್ರಯತ್ನಿಸಿದ್ದೇನೆ’ ಎಂದು. ಅಂತೆಯೇ ಅವರ ಪ್ರತಿ ಕೃತಿಯಲ್ಲೂ ಗ್ರಾಮೀಣ ಸಂವೇದನೆ ಚಲ್ಲುವರಿದಿದೆ. ಈ ಮೂಲಕ ದುಡಿಯುವ ವರ್ಗದತ್ತಲೂ ಕಲಾವಿದರಾದಿಯಾಗಿ ಎಲ್ಲರೂ ಕಣ್ತೆರೆದು ನೋಡುವಂತೆ ಮಾಡಿದ್ದಾನೆ. ಶ್ರಮಿಕ ವರ್ಗಕ್ಕೆ ಒಂದು ಗೌರವವನ್ನು ನೀಡಿದ್ದಾನೆ. ಇವನ ಚಿತ್ರಗಳ ಗಮನವೆಲ್ಲವೂ ವಾಸ್ತವ ಬದುಕಿನ ಕಡೆಗೇ ಇರುವುದರಿಂದ ಎಲ್ಲಿಯೂ ನಾಟಕೀಯತೆ ಕಾಣಿಸುವುದಿಲ್ಲ. ಯಾವುದನ್ನೂ ಸಂಕೀರ್ಣಗೊಳಿಸದೇ ಸರಳವಾಗಿ, ಸಹಜವಾಗಿ ವಸ್ತುಗಳನ್ನು ಅವು ಇರುವಂತೆಯೇ ಇರಗೊಡಲು ಬಿಟ್ಟಿದ್ದಾನೆ.

 

 

 

 

 

 

 

 

 

 

 

 

 

 

 

 

 

 

 

 

 

 

 

ಈ ಹಿಂದಿನ ಅಂಕಣ ಬರಹಗಳು

ಹೆಣ್ಣಿನ ಆತ್ಮಚರಿತ್ರಾತ್ಮಕ ಚಹರೆಗಳು

ಗೌಳಿಗಿತ್ತಿಯ ಮೌನ ಜಾಗರಣೆ!

ಲಿಯೋನಾರ್ಡೋ ಡ ವಿಂಚಿ-ತಾಯ್ತನದ ತಾದ್ಯಾತ್ಮತೆ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...