’ಹ್’ ದ್ವನಿಯ ಕತೆ

Date: 13-08-2022

Location: ಬೆಂಗಳೂರು


“ಹ್ ದ್ವನಿಯ ಸರಿಯಾದ ಪಸರಿಕೆ ಕಾಣಿಸುವುದಿಲ್ಲ. ವ್ಯತ್ಯಯವಾಗಿ ಬಳಕೆಯಾಗುತ್ತದೆ. ಅಂದರೆ ಹ್ ದ್ವನಿ ಬರಬೇಕು ಎಂದು ಎಣಿಸುವ ಎಲ್ಲ ಪರಿಸರಗಳಲ್ಲಿ ಅದು ನಿಯತವಾಗಿ ಬಳಕೆಯಾಗುವುದಿಲ್ಲ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಕನ್ನಡದಲ್ಲಿನ ಹ್ ಧ್ವನಿಯ ಪ್ರಾಚೀನತೆಯನ್ನು ಚರ್ಚಿಸಿದ್ದಾರೆ.

ಹ್ ದ್ವನಿಯು ಕಿರುನಾಲಿಗೆಯ ಹತ್ತಿರ ಹುಟ್ಟುವ ಒಂದು ದ್ವನಿ. ಸಾಮಾನ್ಯವಾಗಿ ಹ್ ದ್ವನಿಯು ಕನ್ನಡದಲ್ಲಿ ಇತ್ತೀಚೆಗೆ ಬೆಳೆದಿದೆ ಎಂದು ಹೇಳಲಾಗುತ್ತದೆ. ಹಳಗನ್ನಡವು ನಡುಗನ್ನಡವಾಗಿ ಬದಲಾಗುವ ಸಮಯದಲ್ಲಿ ಅಂದರೆ ಸುಮಾರು ಹನ್ನೊಂದನೆ ಶತಮಾನದ ಹೊತ್ತಿಗೆ ಪ್ ದ್ವನಿಯು ಹ್ ದ್ವನಿಯಾಗಿ ಬದಲಾಗಿದೆ, ಈ ಪ್ರಕ್ರಿಯೆಯಲ್ಲಿ ಹ್ ದ್ವನಿಯು ಬೆಳೆದಿದೆ ಎಂದು ಹೇಳಲಾಗುತ್ತದೆ. ಇದಕ್ಕೆ ಹಲಕೆಲವು ಉದಾಹರಣೆಗಳನ್ನು ಕೊಟ್ಟಿದೆ. ಪಲ್ಲು>ಹಲ್ಲು, ಪಾಂಬು>ಹಾವು, ಪಿಂಗು>ಹಿಂಗು ಮೊ. ಈ ದ್ವನಿ ಬದಲಾವಣೆ ನಿರ್‍ದಿಶ್ಟ ಪರಿಸರದಲ್ಲಿ ನಡೆಯುತ್ತದೆ ಎಂಬುದನ್ನೂ ಹೇಳಲಾಗಿದೆ. ಆನಂತರ ಇದು ವ್ಯಾಪಕವಾದ ಬದಲಾವಣೆಗೆ ಒಳಗಾಗುತ್ತದೆ. ಹೀಗೆ ಹ್ ದ್ವನಿಯ ಕತೆಯನ್ನು ಹೇಳಲಾಗಿದೆ. ಆದರೆ ಹ್ ದ್ವನಿಯ ಚರಿತ್ರೆ ಅಶ್ಟು ಸುಲಬದ್ದಾಗಿಲ್ಲ. ಇದಕ್ಕೆ ಹಲವಾರು ಆಯಾಮಗಳು ಇವೆ. ಹ್ ದ್ವನಿಗೆ ಸಂಬಂದಿಸಿದ ಹಲವಾರು ವಿಚಾರಗಳನ್ನು ಇಲ್ಲಿ ಸ್ತೂಲವಾಗಿ ತುಸು ಮಾತಾಡಬಹುದು.

ಮೊದಲನೆಯದಾಗಿ ಪ್>ಹ್ ದ್ವನಿ ಬದಲಾವಣೆ ಪ್ರಕ್ರಿಯೆ ಬಗೆಗೆ ಎರಡು ಮಾತು. ಸುಮಾರು ಏಳೆಂಟನೆ ಶತಮಾನದಿಂದ ನಂತರದಲ್ಲಿ ಪದಗಳ ಕೆಲವು ನಿರ‍್ದಿಶ್ಟ ಪರಿಸರಗಳಲ್ಲಿನ ಪ್ ದ್ವನಿಯು ಹ್ ದ್ವನಿಯಾಗಿ ಬದಲಾಗಲು ಶುರುವಾಯಿತು. ಕ್ರಮೇಣ ಈ ಬದಲಾವಣೆ ಹದಿಮೂರು-ಹದಿನಾಲ್ಕನೆ ಶತಮಾನಕ್ಕೆ ಒಂದು ಹಂತಕ್ಕೆ ಬಂದಿತು. ಸಾಮಾನ್ಯವಾಗಿ ಬಾಶೆಯಲ್ಲಿ ಯಾವುದೆ ದ್ವನಿ ಬದಲಾವಣೆ ನಡೆಯುವುದಕ್ಕೆ ಕನಿಶ್ಟ ಮೂರ‍್ನಾಲ್ಕು ನೂರು ವರುಶಗಳು ಬೇಕು. ಪದದ ಮೊದಲಿಗೆ ಮತ್ತು ಪದದ ನಡುವೆ ಎರಡು ಸ್ವರಗಳ ನಡುವೆ ಇದ್ದ ಪ್ ದ್ವನಿಯು ಹ್ ದ್ವನಿಯಾಗಿ ಬದಲಾಗಿದೆ. ಕೆಳಗಿನ ಉದಾಹರಣೆ ಗಮನಿಸಿ,

ಪದದ ಮೊದಲು: ಪಾಲು>ಹಾಲು, ಪಲ್>ಹಲ್ಲು
ಪದದ ನಡುವೆ (ಎರಡು ಸ್ವರಗಳ ನಡುವೆ): ಕೆರಪು>ಕೆರಹು, ರೂಪು>ರೂಹು.

ಆದರೆ ಹೆಚ್ಚಾಗಿ ಪದಮೊದಲಿಗೆ ಈ ಬದಲಾವಣೆ ಕಾಣಿಸುತ್ತದೆ. ಈ ಬದಲಾವಣೆಯು ಪದದ ಎಲ್ಲ ಪರಿಸರಗಳಲ್ಲಿ ನಡೆದಿಲ್ಲ ಎಂಬುದನ್ನು ಗಮನಿಸಬೇಕು. ಒತ್ತಕ್ಶರ ಇದ್ದಲ್ಲಿ, ವ್ಯಂಜನ ಇದ್ದಲ್ಲಿ ಈ ಬದಲಾವಣೆ ಆಗಿಲ್ಲ.

ಒತ್ತಕ್ಶರ: ಕಪ್ಪು-ಕಪ್ಪು, ತಪ್ಪು-ತಪ್ಪು
ವ್ಯಂಜನದೊಂದಿಗೆ: ಇಂಪು-ಇಂಪು, ಕಂಪು-ಕಂಪು

ಅಂದರೆ ಪ್>ಹ್ ಬದಲಾವಣೆ ಎನ್ನುವುದು ಒಂದು ನಿಯಮಿತ ಪರಿಸರದಲ್ಲಿ ಆದ ಬದಲಾವಣೆ, ಪದದ ಎಲ್ಲ ಪರಿಸರಗಳಲ್ಲಿ ಆಗಿಲ್ಲ ಎಂಬುದು ಸ್ಪಶ್ಟವಾಗುತ್ತದೆ. ಹ್ ದ್ವನಿಯ ವಿಚಾರವಾಗಿ ಮೇಲೆ ಉಲ್ಲೇಕಿಸಿದ ಕಾಲಕ್ಕಿಂತ ಹಿಂದೆ ಇರುವ ಮತ್ತು ಆನಂತರದ ಕಾಲದಲ್ಲಿ ಆಗಿರುವ ಹಲವು ಬದಲಾವಣೆಗಳು ಇವೆ. ಅವುಗಳನ್ನು ಇಲ್ಲಿ ಗಮನಿಸಬಹುದು.

ಮೂಲಬೂತವಾಗಿ ದ್ರಾವಿಡ ಬಾಶಾವಿಗ್ನಾನದ ಬಹುದೊಡ್ಡ ವಿದ್ವಾಂಸರಾಗಿರುವ ಬದ್ರಿರಾಜು ಕ್ರಿಶ್ಣಮೂರ‍್ತಿ ಅವರು ಹ್ ದ್ವನಿಯನ್ನು ಮೂಲದ್ರಾವಿಡದಲ್ಲಿಯೆ ಇದ್ದಿತು ಎಂದು ತೋರಿಸಿದ್ದಾರೆ. ಮೂಲದ್ರಾವಿಡದಲ್ಲಿ ಇದ್ದ ಈ ಹ್ ದ್ವನಿಯು ಬಡದ್ರಾವಿಡದ ಹಲವು ಬಾಶೆಗಳಲ್ಲಿ ಇರುವುದನ್ನು ಅವರು ಗುರುತಿಸುತ್ತಾರೆ. ’ಉಣ್ಣು” ಎಂಬ ಇಂದಿನ ಕನ್ನಡದ ಮೂಲದ್ರಾವಿಡದ ರೂಪವು ’ಉಹ್ ಣ್” ಎಂದಾಗಿದ್ದಿತು ಎಂದು ಅವರು ವಾದಿಸುತ್ತಾರೆ, ಹಾಗಾಗಿ ಹ್ ದ್ವನಿಯು ಮೂಲದ್ರಾವಿಡದಲ್ಲಿಯೆ ಇದ್ದಿತು ಎಂದು ಹೇಳಲಾಗುತ್ತದೆ. ಹಾಗಾದರೆ, ಕನ್ನಡ ವಿದ್ವಾಂಸರು ಇದುವರೆಗೆ ಹೇಳಿರುವ

ಪ್>ಹ್ ಬದಲಾವಣೆಯಲ್ಲಿ ಬೆಳೆದ ಹ್ ದ್ವನಿ ಮತ್ತು ಮೂಲದ್ರಾವಿಡಕ್ಕೆ ಮತ್ತೆ ಕಟ್ಟಿದ ಹ್ ದ್ವನಿ ಇವುಗಳು ಒಂದೆಯೆ ಇಲ್ಲವೆ ಬೇರೆಯೆ ಎಂಬುದು ಸ್ಪಶ್ಟವಿಲ್ಲ. ಇದನ್ನು ಅದ್ಯಯನ ಮಾಡಬೇಕು.

ಇದರ ಹೊರತಾಗಿ ಹ್ ದ್ವನಿ ಈಗ ಹೇಳುತ್ತಿರುವಂತೆ ಹನ್ನೊಂದನೆ ಶತಮಾನದಲ್ಲಿ ಆದ ದ್ವನಿ ಬದಲಾವಣೆಯಲ್ಲಿ ಬೆಳೆದಿದೆ ಎನ್ನುವುದಕ್ಕೆ ವಿರುದ್ದವಾಗಿ ಅದಕ್ಕಿಂತ ಮೊದಲಲ್ಲಿ ಹ್ ದ್ವನಿ ಕನ್ನಡದಲ್ಲಿ ಬಳಕೆಯಲ್ಲಿದ್ದಿತು. ಹನ್ನೊಂದನೆ ಶತಮಾನಕ್ಕಿಂತ ಹಿಂದೆ ಹಲವು ಕಡೆ ಶಾಸನಗಳಲ್ಲಿ ಹ್ ದ್ವನಿಯ ಬಳಕೆಯನ್ನು ಕಾಣಬಹುದು.

ಉದಾ.: ಬಹುಮೂಲಿಕ ಪನ್ತಿಯೆ (ಗಂಗ ಅವಿನೀತನ ಶಾಸನ, ಕ್ರಿ.ಶ. ೪೬೬)
ವ್ಯವಹಾರದ್ (ಗಂಗ ಶ್ರೀಪುರುಶನ ಶಾಸನ, ಕ್ರಿ.ಶ. ೭೬೦)
ಸಾಹಿತ್ಯ ಕ್ರುತಿಗಳಲ್ಲಿಯೂ ಈ ಲಿಪಿ ಬಳಕೆ ಆಗಿದೆ.
ಒಂದು ಮಹಾಟವಿಯೋಳ್ (ದುರ‍್ಗಸಿಂಹನ ಕರ‍್ಣಾಟಕ ಪಂಚತಂತ್ರಂ, ೧೧ನೆ ಶ.).

ಕುತೂಹಲವೆಂದರೆ ಕವಿರಾಜಮಾರ‍್ಗ ಕ್ರುತಿಯಲ್ಲಿಯೆ ಈ ದ್ವನಿಯ ಬಳಕೆ ಇದೆ.
ಉದಾ.: ಪಿವದನಮಿದಲ್ತಂಬುರುಹಂ (೩.೨೪)
ಆದರೆ, ಈ ಪದಕ್ಕೆ ಸರಿಯಾದ ಅರ‍್ತವನ್ನು ಕೊಡುವುದಕ್ಕೆ ಇದುವರೆಗೆ ಆಗಿಲ್ಲ.

ಇನ್ನೂ ಕುತೂಹಲದ ವಿಚಾರವೆಂದರೆ ಕನ್ನಡದ ಅತಿ ಹಳೆಯ ಕಲ್ಬರಹವೆಂದು ಈಗ ನಂಬಿರುವ ಹಲ್ಮಿಡಿ ಶಾಸನದಲ್ಲಿಯೆ ಹ್ ದ್ವನಿಯ ಲಿಪಿಯ ಬಳಕೆ ಇರುವುದು ಗಮನ ಸೆಳೆಯುತ್ತದೆ. ಉದಾ. ಬಟಹರಪ್ಪೋರ್, ಬಹುಶತಹವನಾಹವನದುಳ್. ಕನ್ನಡಕ್ಕೆ ಸುಮಾರು ಎರಡು ಸಾವಿರ ವರುಶಗಳ ಹಿಂದೆ ಲಿಪಿಯನ್ನು ಅಳವಡಿಸಲಾಗಿದೆ. ಹೀಗೆ ಲಿಪಿಯನ್ನು ಅಳವಡಿಸುವಾಗ ಪ್ರತಿಯೊಂದು ದ್ವನಿಯ ಉಚ್ಚರಣೆ, ಉಚ್ಚರಣೆಯ ಜಾಗ ಮತ್ತು ರೀತಿಗಳನ್ನು ಸೂಕ್ಶ್ಮವಾಗಿ ಅವಲೋಕಿಸಿ ಗುರುತಿಸಲಾಗಿದ್ದಿತು. ಹಾಗಾದರೆ, ಪ್ರಶ್ನೆ ಬರುವುದೆಂದರೆ, ಹಳಗನ್ನಡ ಮತ್ತು ಅದಕ್ಕಿಂತ ಹಿಂದೆ ಹ್ ದ್ವನಿ ಇರಲಿಲ್ಲ ಎಂದಾದರೆ, ಆ ದ್ವನಿಗೆ ಒಂದು ಲಿಪಿಯನ್ನು ಕನ್ನಡದಲ್ಲಿ ಯಾಕೆ ಉಳಿಸಿಕೊಂಡಿದ್ದರು ಎಂಬುದು

ಪ್ರಶ್ನೆಯಾಗುತ್ತದೆ. ಹೀಗೆ ಕನ್ನಡದಲ್ಲಿ ಉಚ್ಚರಣೆಯಲ್ಲಿ ಇಲ್ಲದ ದ್ವನಿಗಳಿಗೆ ಪಾಲಿ ಬಾಶೆಯ ಲಿಪಿಯಲ್ಲಿ ಇದ್ದ ಲಿಪಿರೂಪಗಳನ್ನು ಕನ್ನಡದಲ್ಲಿ ಉಳಿಸಿಕೊಂಡಿಲ್ಲ. ಮಹಾಪ್ರಾಣ ದ್ವನಿಗಳು ಕೂಡ ಕನ್ನಡದಲ್ಲಿ ಇಲ್ಲ, ಆದರೆ ಅವುಗಳ ಲಿಪಿಗಳು ಕನ್ನಡದಲ್ಲಿ ಉಳಿದುಕೊಂಡಿವೆ ಎಂಬುದು ನಿಜ. ಆದರೆ, ಮಹಾಪ್ರಾಣದ ಬಗೆಗೆ ಮೊದಲಿನಿಂದ ಇಂದಿನವರೆಗೆ ಚರ‍್ಚೆ ಇದ್ದೆ ಇದೆ. ಹ್ ದ್ವನಿಯ ಮತ್ತು ಅದರ ಲಿಪಿಯ ಬಗೆಗಿನ ಚರ‍್ಚೆ ಪಾರಂಪರಿಕದಲ್ಲಿ ಎಲ್ಲಿಯೂ ಇಲ್ಲ. ಹದಿಮೂರನೆ

ಶತಮಾನದ ಮೊದಲರ‍್ದದಲ್ಲಿ ವ್ಯಾಕರಣ ಸಂಯೋಜಿಸಿದ ಕೇಶಿರಾಜ ಇದಕ್ಕೂ ಮುಕ್ಯವಾಗಿ ಹನ್ನೊಂದನೆ ಶತಮಾನದ ಮೊದಲ ದಶಕದಲ್ಲಿ ವ್ಯಾಕರಣ ಸಂಯೋಜಿಸಿದ ನಾಗವರ‍್ಮ ಹ್ ದ್ವನಿಯನ್ನು ಯಾವುದೆ ಚರ‍್ಚೆ ಇಲ್ಲದೆ ವಿವರಿಸುತ್ತಾರೆ. ಇದು ಹ್ ದ್ವನಿ ಇದ್ದಿತು ಎಂಬ ಅವರ ನಿಲುವನ್ನು ತೋರಿಸಿದಂತಾಗುತ್ತದೆ. ಹಾಗಾಗಿ ಹ್ ದ್ವನಿಯನ್ನು ಇತಿಹಾಸಿಕವಾಗಿ

ಅದ್ಯಯನ ಮಾಡಬೇಕಾದ ಅವಶ್ಯಕತೆ ಇದೆ. ಈಗ ದೊರೆತಿರುವ ಹನ್ನೊಂದನೆ ಶತಮಾನಕ್ಕಿಂತ ಮೊದಲಿನ ಹಲವು ಶಾಸನಗಳಲ್ಲಿ ಹ್ ಬಳಕೆಯಾಗಿದೆ, ಹಲವು ನೂರು ಶಾಸನಗಳಲ್ಲಿ, ಅತಿ ಹಳೆಯ ಎಂದು ಬಹುವಾಗಿ ನಂಬಿರುವ ಹಲ್ಮಿಡಿ ಕಲ್ಬರಹದಲ್ಲಿ ಈ ದ್ವನಿಗೆ ಒಂದು ಲಿಪಿ ಬಳಕೆಯಾಗಿದೆ. ಆದರೆ, ಈ ಕಲ್ಬರಹದಲ್ಲಿ ಹ್ ದ್ವನಿ ಇರುವ ಪದಗಳು ದೊರೆಯುವುದು ಬರಿಯ ಸಂಸ್ಕ್ರುತ ಪದಗಳು ಮಾತ್ರ ಎಂಬುದೂ ನಿಜ.

ಈ ದ್ವನಿಯ ಇನ್ನೊಂದು ಆಯಾಮವನ್ನೂ ನೋಡಬೇಕು. ಹ್ ದ್ವನಿ ದ್ರಾವಿಡ ಬಾಶೆಗಳಲ್ಲಿ ಬಡದ್ರಾವಿಡ ಬಾಶೆಗಳಲ್ಲಿ ಕಂಡುಬರುತ್ತದೆ. ಕೆಲವು ನಡುದ್ರಾವಿಡ ಬಾಶೆಗಳಲ್ಲಿಯೂ ಕಂಡುಬರುತ್ತದೆ. ತೆಂಕುದ್ರಾವಿಡ ಗುಂಪಿನಲ್ಲಿ ಕನ್ನಡದಲ್ಲಿ ಮಾತ್ರ ಕಂಡುಬರುತ್ತದೆ. ಹೀಗಾಗಿಯೆ ಹ್ ದ್ವನಿಯನ್ನು ಮೂಲದ್ರಾವಿಡಕ್ಕೆ ಕಟ್ಟಲು ಸಾದ್ಯವಾಗಿದೆ.

ಇನ್ನು, ಕನ್ನಡದ ಒಳಗೆ ಹ್ ದ್ವನಿಯ ಬಳಕೆಯ ಪಸರಿಕೆ ತುಂಬಾ ಕುತೂಹಲಕಾರಿಯಾಗಿದೆ. ಉತ್ತರ ಕರ‍್ನಾಟಕದಲ್ಲಿ ಬಳಕೆಯಲ್ಲಿರುವ ಬಡಗನ್ನಡದ ದಾರವಾಡ, ಬೆಳಗಾವಿ, ವಿಜಾಪುರ, ಕಲಬುರಗಿ, ಮಹಾರಾಶ್ಟ್ರದ ಕನ್ನಡಗಳು ಮೊದಲಾದವುಗಳಲ್ಲಿ ಹೆಚ್ಚು ಸಹಜವೆಂಬಂತೆ ಈ ದ್ವನಿ ಬಳಕೆಯಲ್ಲಿದೆ. ಮಸ್ಕಿ ಕನ್ನಡ, ಬಳ್ಳಾರಿ ಕನ್ನಡ ಮೊದಲಾದ ಕೆಲವು ಕನ್ನಡಗಳಲ್ಲಿ ಈ ದ್ವನಿಯ ಬಳಕೆ ಸಂಪೂರ‍್ಣವಾಗಿ ಇಲ್ಲ. ಹಾಗೆ ದಕ್ಶಿಣ ಕರ‍್ನಾಟಕ ಪರಿಸರದಲ್ಲಿನ ತೆಂಗನ್ನಡದ ಕನ್ನಡ ಒಳನುಡಿಗಳಲ್ಲಿ ಹ್ ದ್ವನಿ ಹೆಚ್ಚು ಸಹಜವಾಗಿ ಬಳಕೆಯಲ್ಲಿ ಇಲ್ಲ. ತುಮಕೂರು, ಕೋಲಾರ ಕನ್ನಡಗಳಲ್ಲಿಯೂ ಹ್ ದ್ವನಿಯ ಬಳಕೆ ಹೆಚ್ಚು ಕುಸಿದಿದೆ. ಆದರೆ, ಶಿಶ್ಟಕನ್ನಡದಲ್ಲಿ ಹ್ ದ್ವನಿಯ ಬಳಕೆಯಿಂದಾಗಿ ಈ ಕನ್ನಡಗಳಲ್ಲಿ ಹ್ ದ್ವನಿಗೆ ಶಿಶ್ಟತೆಯ ಬ್ರಮೆ ಒದಗಿದೆ. ಆದ್ದರಿಂದ ಎಲ್ಲೆಂದರಲ್ಲಿ, ಹ್ ದ್ವನಿಯು ಇಲ್ಲದ ಪದಗಳಲ್ಲಿ ಹ್ ದ್ವನಿಯನ್ನು ಬಳಸುವುದನ್ನು ಕಾಣಬಹುದು. ಇಂತದೊಂದು ಪ್ರಕ್ರಿಯೆ ಹಲವು ಬಾಶೆಗಳಲ್ಲಿ ಹಲವು ಕಾರಣಕ್ಕೆ ಕಂಡುಬರುತ್ತಿರುತ್ತದೆ.

ಇನ್ನೊಂದೆಡೆ ಶಾಸನ, ಹಸ್ತಪ್ರತಿಗಳಲ್ಲಿ ಹ್ ದ್ವನಿಯ ಬಳಕೆಯನ್ನು ಅದ್ಯಯನ ಮಾಡಿದಾಗಲೂ ಇಂತದೆ ಸಮಸ್ಯೆ ಕಂಡುಬರುತ್ತದೆ. ಹ್ ದ್ವನಿಯ ಸರಿಯಾದ ಪಸರಿಕೆ ಕಾಣಿಸುವುದಿಲ್ಲ. ವ್ಯತ್ಯಯವಾಗಿ ಬಳಕೆಯಾಗುತ್ತದೆ. ಅಂದರೆ ಹ್ ದ್ವನಿ ಬರಬೇಕು ಎಂದು ಎಣಿಸುವ ಎಲ್ಲ ಪರಿಸರಗಳಲ್ಲಿ ಅದು ನಿಯತವಾಗಿ ಬಳಕೆಯಾಗುವುದಿಲ್ಲ. ಹ್ ದ್ವನಿಯು ಇಶ್ಟೆಲ್ಲ ಸಂಕೀರ‍್ಣ ಬಳಕೆ ಪರಿಸರವನ್ನು ಹೊಂದಿ ಒಂದು ದೊಡ್ಡ ಅದ್ಯಯನಕ್ಕೆ ವಸ್ತುವನ್ನು ಒದಗಿಸುತ್ತದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...