ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ


'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ ಎಂಬ ತೇಜಸ್ವಿ ಅವರ ಮಾತಿನಂತೆ ಮೊಗೆದಷ್ಟು ಬೊಗಸೆ ತುಂಬುವ ಅಕ್ಷಯ ಬದುಕಿನ ಅನುಭವಗಳು ನಮ್ಮ ಮುಂದಿದೆ' ಎನ್ನುತ್ತಾರೆ ಪತ್ರಕರ್ತ, ಲೇಖಕ ನಂದೀಶ್ ಬಂಕೇನಹಳ್ಳಿ ಅವರು ತಮ್ಮ ಅಂಕಣ ಬರಹಗಳ ಸಂಕಲನ 'ಕಣ್ಣ ಕನ್ನಡಿಯಲ್ಲಿ -1' ಕೃತಿಗೆ ಬರೆದ ಲೇಖಕರ ಮಾತು ಇಲ್ಲಿದೆ.

2020 ರ ಆಗಸ್ಟ್‌ನಲ್ಲಿ ಜನಮಿತ್ರ ಪತ್ರಿಕೆಯ ಜಿಲ್ಲಾ ವರದಿಗಾರರಾಗಿದ್ದ ಚೇತನ್ ಬೇಲೆನಹಳ್ಳಿ ಅವರು ಪತ್ರಿಕೆಗೆ ಅಂಕಣವನ್ನು ಬರೆಯಿರಿ ಎಂದರು. ಅವರ ಸ್ನೇಹದ ಮಾತಿಗೆ ಮಣಿದು ಪ್ರತಿ ವಾರ ಅಂಕಣ ಬರೆಯಲು ಒಪ್ಪಿದೆ. ಆದರೆ ಅಂಕಣ ಬರಹದ ರೂಪುರೇಷೆಯ ಕಲ್ಪನೆ ಆಗ ಮನದಲ್ಲಿರಲಿಲ್ಲ.

ಆಗಷ್ಟೆ ಹೆಜ್ಜೆ ಇಡಲು ಪ್ರಾರಂಭ ಮಾಡುವ ಪುಟ್ಟ ಕಂದಮ್ಮ, ಹಿರಿಯರ ಕೈ ಹಿಡಿದು ನಡೆಯಲು ಪ್ರಾರಂಭಿಸಿ ಹಾಗೆ ನಡೆಯುತ್ತಾ ಬಿದ್ದು ಎದ್ದು ನಿಧಾನಕ್ಕೆ ತಾನೇ ನಡೆಯಲು ಕಲಿಯುವಂತೆ ಅಂಕಣ ಬರಹ ಬರೆಯಲು ಪ್ರಾರಂಭಿಸುವ ಮುನ್ನ ವಿವಿಧ ಲೇಖಕರ ಅಂಕಣ ಬರಹಗಳ ಕೃತಿಯನ್ನು ಓದಲು ಪ್ರಾರಂಭಿಸಿದೆ. ಇಷ್ಟದ ಕವಿ, ಕತೆಗಾರರಾದ ಜಯಂತ್ ಕಾಯ್ಕಿಣಿ ಅವರ ಈ ಮುಂಚೆ ಹಲವು ಸಲ ಓದಿದ್ದ 'ಬೊಗಸೆಯಲ್ಲಿ ಮಳೆ' ಅಂಕಣ ಬರಹಗಳ ಕೃತಿಯನ್ನು ಮತ್ತೊಮ್ಮೆ ಓದಿದೆ. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಎರಡು ವರ್ಷಗಳ ಪ್ರಕಟಗೊಂಡ ಅಂಕಣ ಬರಹಗಳ ಸಂಗ್ರಹದ ಕೃತಿಯದು. ಬದುಕಿನ ನಿತ್ಯ ಘಟನೆಗಳನ್ನು ತಮ್ಮ ಎಂದಿನ ಚಂದದ ನಿರೂಪಣೆ ಶೈಲಿಯ ಮೂಲಕ ಅವು ನಮ್ಮ ಬದುಕಿನ ಅನುಭವವೂ ಕೂಡ ಎನಿಸುವಂತೆ ಬರೆದವರು ಜಯಂತ್ ಕಾಯ್ಕಿಣಿ ಅವರು.

ಗೋಕರ್ಣದ ರಥಬೀದಿಯ ಬಸ್ ಸ್ಟ್ಯಾಂಡಿನ ಬಗ್ಗೆ, ಟಾಕೀಸಿನ ಬಗ್ಗೆ, ಹಳೆಯ ಉಡುಪಿನ ಬಗ್ಗೆ, ಮುಂಬೈಯ ಬಗ್ಗೆ, ಗೋಕರ್ಣದ ಜಾತ್ರೆಯ ಬಗ್ಗೆ, ಕಂಡಕ್ಟರೇ ಇಲ್ಲದ ಜಾತ್ರಾ ಸ್ಪೆಷಲ್ ಬಸ್ಸುಗಳ ಬಗ್ಗೆ, ಹೀಗೆ ನಿತ್ಯ ಬದುಕಿನ ಸಣ್ಣ ಸಣ್ಣ ಘಟನೆಗಳಲ್ಲಿನ ನಾವ್ಯಾರೂ ಗಮನಿಸಿದ ಸಂಗತಿಗಳನ್ನು ತಮ್ಮ ವಿಶಿಷ್ಟ ದೃಷಿಕೋನದಿಂದ ದಿವ್ಯವಾಗಿಸಿ ನಮ್ಮ ಸುತ್ತಲ್ಲಾ ಜಗತ್ತನ್ನು ನೋಡಲು ಕಲಿಸಿದವರು ಜಯಂತ್ ಕಾಯ್ಕಿಣಿಯವರು.

ಖಾತಾ ಬೊಗಸೆಯಲ್ಲಿ ಮಳೆ ಅಂಕಣ ಬರಹ ಪ್ರಾರಂಭಿಸುವಾಗ ಜಯಂತ್ ಕಾಯ್ಕಿಣಿಯವರು 'ನಾನು' ಎಂಬ ಪದವನ್ನು ಅಂಕಣದಲ್ಲಿ ಎಲ್ಲಿಯೂ ಬಳಸದಿರಲು ನಿರ್ಧರಿಸುತ್ತಾರೆ. ಏಕೆಂದರೆ ಅವರೇ ಹೇಳುವಂತೆ, "ಅಂಕಣದಲ್ಲಿ ಬರುವ 'ನಾನು' ತುಸು ಬೇಜವಾಬ್ದಾರನಾದರೂ ಸಾಕು ಸುಳ್ಳುಗಳನ್ನು ಹೊಸೆಯುವ, ಸಾರ್ವತ್ರಿಕ ಅನುಭವಕ್ಕೆ ಸ್ವಂತದ ಮೊಹರು ಒತ್ತಿ ಲಪಟಾಯಿಸುವ ಸಾಧ್ಯತೆ ಇದೆ. ಎರಡು ವರುಷಗಟ್ಟಲೇ ಈ ವ್ರತವನ್ನು ಪಾಲಿಸಿಕೊಂಡು ಬರುವುದು ಕಷ್ಟವಾದರೂ ಕ್ರಮೇಣ ಅಭ್ಯಾಸವಾಯಿತು" ಎನ್ನುತ್ತಾರೆ ಜಯಂತ್ ಕಾಯ್ಕಿಣಿ ಅವರು.

ಬೊಗಸೆಯಲ್ಲಿ ಮಳೆ ಕೃತಿಯ ಜೊತೆಗೆ ಸುಧಾ ಆಡುಕಳ ಅವರ ಬಕುಲದ ಬಾಗಿಲಿನಿಂದ, ವಿನೋದಕುಮಾರ್ ಬಿ ನಾಯ್ ಅವರ ಜಂಗಲ್ ಡೈರಿ, ಮೇಘನಾ ಸುದೀಂದ್ರ ಅವರ ಜಯನಗರದ ಹುಡುಗಿ, ಶಶಿಧರ್ ಹೇರಿಕುದ್ರು ಅವರ ಕಾಡೇ ಕೂಗು ಇನ್ನು ಮುಂತಾದ ಅಂಕಣ ಬರಹಗಳ ಕೃತಿಯನ್ನು ಓದಿದೆ. ಈ ಓದಿನಿಂದ ಅಂಕಣ ಬರಹದ ವಸ್ತು ವೈವಿದ್ಯ, ನಿರೂಪಣ ಶೈಲಿ, ಆರಂಭ ಹಾಗೂ ಅಂತ್ಯ, ಅನಗತ್ಯ ಪದ ಅಥವಾ ವಾಕ್ಯಗಳಿಲ್ಲದೇ ಕಡಿಮೆ ಪದಗಳಲ್ಲಿ ವಿಷಯವನ್ನು ಹೇಳುವ ಬಗೆ, ಹೀಗೆ ಕೆಲವೊಂದು ವಿಷಯಗಳ ಬಗ್ಗೆ ಒಂದಷ್ಟು ಕಲ್ಪನೆ ಬಂತು. ಜೊತೆಗೆ ಯಾವುದರ ಬಗ್ಗೆ ಬರೆಯಬಾರದು ಮತ್ತು ಯಾವ ರೀತಿ ಬರೆಯಬಾರದು ಎನ್ನುವುದು ಕೂಡ ತಿಳಿಯಿತು.

ಜನಮಿತ್ರ ಪತ್ರಿಕೆಯಲ್ಲಿ ಅಂಕಣ ಬರಹವನ್ನು ಪ್ರಾರಂಭಿಸುವಾಗ ಅಂಕಣಕ್ಕೆ ಏನೆಂದು ಹೆಸರಿಡುವುದು ಎಂದು ಹೊಳೆಯಲಿಲ್ಲ. ಆ ಸಂದರ್ಭದಲ್ಲಿ ಕೆಲ ದಿನಗಳ ಹಿಂದೆಯಷ್ಟೆ ಜಯಂತ್ ಕಾಯ್ಕಿಣಿ ಅವರ ಕವಿತೆಯೊಂದನ್ನು ಓದಿದ್ದೆ. ಆ ಕವಿತೆಯಲ್ಲಿ ಇದ್ದ ಸಾಲು 'ಕಣ್ಣ ಕನ್ನಡಿಯಲ್ಲಿ'. ಕಣ್ಣ ಕನ್ನಡಿಯಲ್ಲಿ ಪದವನ್ನೆ ಅಂಕಣಕ್ಕೆ ಇಟ್ಟು ಜಯಂತ್ ಕಾಯ್ಕಿಣಿ ಸ‌ರ್ ಅವರಿಗೆ ಅಂಕಣಕ್ಕೆ ಅವರ ಕವಿತೆಯ ಪದವನ್ನೆ ಆಯ್ದು ಹೆಸರಿಟ್ಟಿರುವ ಬಗ್ಗೆ, ಮತ್ತು ಅವರ ಅಂಕಣ ಬರಹ ಹಾಗೂ ಇತರ ಲೇಖಕರ ಅಂಕಣ ಬರಹಗಳ ಕೃತಿಯನ್ನು ಓದಿ ಅಂಕಣ ಬರಹ ಬರೆಯುವ ಸಾಹಸಕ್ಕೆ ಕೈ ಹಾಕುತ್ತಿದ್ದೇನೆ ಎಂದು ವಾಟ್ಸ್ ಅಪ್ ನಲ್ಲಿ ಸಂದೇಶ ಕಳಿಸಿದ್ದೆ. ಅದಕ್ಕೆ ಜಯಂತ್ ಕಾಯ್ಕಿಣಿ ಅವರು, ನಾನು ನನ್ನ ಕಾಲದ ಸಾಹಿತಿಗಳ ಅಂಕಣ ಬರಹಗಾರರನ್ನು ಓದಿಕೊಂಡು, ಅಂಕಣ ಬರಹ ಬರೆಯಲು ಪ್ರಾರಂಭಿಸಿದ್ದು, ನೀನು ನನ್ನ ಅಂಕಣ ಬರಹ ಓದಿಕೊಂಡು ಅಂಕಣ ಬರೆಯಲು ಪ್ರಾರಂಭಿಸಿದ್ದೀಯಾ. ಈ ಪರಂಪರೆ ಮುಂದುವರಿಯಲಿ ಎಂದಿದ್ದರು. ಅದರ ಜೊತೆಗೆ ಪ್ರತಿವಾರವೂ ಬರೆಯಲೇ ಬೇಕು ಎನ್ನುವ ಅನಿವಾರ್ಯತೆ ಬರಹಗಾರನನ್ನು ಖಾಲಿ (ಡ್ರೈ) ಮಾಡಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದರು. ಆ ಎಚ್ಚರಿಕೆ ಮಾತುಗಳು ಎಷ್ಟು ಕಾಡಿತ್ತು ಎಂದರೆ ಅದನ್ನೆ ಯೋಚಿಸಿ ಅಂಕಣ ಬರಹ ಬರೆಯುವ ಯೋಚನೆಯನ್ನೆ ಕೈ ಬಿಡಲೆ ಎಂದು ಕೂಡ ಅನಿಸಿತ್ತು. ಕೊನೆಗೆ ಪ್ರತಿವಾರ ನನ್ನೊಳಗಿನ ಭಾವನೆಗಳನ್ನು, ಅನುಭವಗಳನ್ನು ಅಕ್ಷರವಾಗಿಸಲು ಹೊರಟಾಗ ಹಾಗೆ ಖಾಲಿಯಾಗುವ ಅಪಾಯವಿರುವುದರಿಂದ ಮತ್ತು ಪ್ರತಿವಾರ ಹಾಗೆ ಅನಿವಾರ್ಯವಾಗಿ ಬರೆಯಲೇ ಬೇಕು ಎಂದು ಹೊರಟಾಗ ಬರಹ ಸತ್ವಸಾರ ಎಲ್ಲವನ್ನೂ ಕಳೆದುಕೊಳ್ಳುವ ಕೇವಲ ಅಕ್ಷರವಾಗುವ ಅಪಾಯವಿರುವುದರಿಂದ ಬೇರೆಯವರ ಬದುಕಿನ ಅನುಭವಗಳನ್ನು ದಾಖಲಿಸುತ್ತಾ ಹೋದರೆ ಆ ಅಪಾಯ ಇರುವುದಿಲ್ಲ ಎನಿಸಿ ಮತ್ತು ಇತರರ ಅನುಭವಗಳಿಗೆ ಕಿವಿಯಾಗುವುದರಿಂದ ನಮ್ಮ ಭಾವಕೋಶವೂ ವಿಸ್ತರಿಸುವುದರಿಂದ ಆ ನಿಟ್ಟಿನಲ್ಲಿ ಅಂಕಣ ಬರಹ ಬರೆಯಲು ನಿರ್ದರಿಸಿದೆ.

ಹಾಗೇ ಬೇರೆ ಬೇರೆ ಕ್ಷೇತ್ರದ ಹಿರಿಕರನ್ನು ಮಾತನಾಡಿಸಿ ಅವರ ಅನುಭವಗಳನ್ನು ಬರಹ ರೂಪಕ್ಕಿಳಿಸಿದೆ. ವ್ಯಕ್ತಿ ಮೂಲವಾದ ಬರಹವನ್ನು ಬರೆಯಲು ಹೊರಟಾಗ ಆ ವ್ಯಕ್ತಿಯನ್ನು ವೈಭವಿಕರಿಸುವ, ಅಥವಾ ಇತರರಿಗೆ ಅಷ್ಟೆನೂ ಮುಖ್ಯವಲ್ಲದ ಆ ವ್ಯಕ್ತಿಯ ವೈಯಕ್ತಿಕ ಬದುಕು ತೆರೆದುಕೊಳ್ಳುವ ಸಾಧ್ಯತೆ ಇರುವುದರಿಂದ ವ್ಯಕ್ತಿಯ ಬಗ್ಗೆ ಹೇಳದೇ ವ್ಯಕ್ತಿಯ ಮೂಲಕ ಆ ಕ್ಷೇತ್ರದ ಅನುಭವವನ್ನು ಅಕ್ಷರವಾಗಿಸಲು ಮುಂದಾದೆ.

ಯಾವುದೇ ಪ್ರಚಾರವನ್ನು ಬಯಸದೇ ತಮ್ಮ ಪಾಡಿಗೆ ತಾವು ತಮ್ಮ ಕಾರ್ಯ ಮಾಡಿಕೊಂಡು ಬದುಕುವ ಜೀವಗಳನ್ನು ಮಾತನಾಡಿಸಿ ಅವರ ಬದುಕಿನ ಅನುಭವಗಳನ್ನು ದಾಖಲಿಸುವುದು ನನ್ನ ಉದ್ದೇಶವಾಗಿತ್ತು. ಹಾಗೇ ಮಾತನಾಡಿಸಿದ್ದರಿಂದ ಅದೆಷ್ಟೋ ಜನರ ಜೀವಾನುಭವಗಳ ಅದ್ಭುತ ಲೋಕದ ಪರಿಚಯ ನನಗಾಯಿತು. ದಶಕಗಳಿಂದ ಕುಂಬಾರಿಕೆ ಕೆಲಸ ಮಾಡುವ ಬೀರೂರಿನ ಮಂಜುನಾಥ್, ನೂರಾರು ಪೋಸ್ಟ್ ಮಾರ್ಟಂ ಮಾಡಿದ ಬಣಕಲ್‌ನ ನಜೀ‌ರ್, ಅದೆಷ್ಟೋ ಜನರ ಜೀವ ರಕ್ಷಿಸಿದ ಚಾರ್ಮಾಡಿ ಹಸನಬ್ಬ, 14 ವರ್ಷದಿಂದ ಏಕಾಂಗಿಯಾಗಿ ಸ್ಮಶಾನ ಕಾಯುವ ಭಾಗ್ಯಮ್ಮ, ಸಮಾಜದಿಂದಲೂ ಕುಟುಂಬದಿಂದಲೂ ತಿರಸ್ಕೃತಳಾಗಿ ಬದುಕುತ್ತಿರುವ ಮಂಗಳಮುಖಿ ಚಿಕ್ಕಮಗಳೂರಿನ ಸ್ಫೂರ್ತಿ, ಸಾಕುಪ್ರಾಣಿಗಳಿಗಾಗಿಯೆ ಕಾಡಿನ ನಡುವೆ ಏಕಾಂಗಿಯಾಗಿ ಬದುಕುವ ರೂಬನ್, ಕಲಾಯಿ ಮಾಡುವ ಮೂಡಿಗೆರೆಯ ಲೂಸಿ, ನದಿಗಳಲ್ಲಿ 80 ಕ್ಕೂ ಹೆಚ್ಚು ಮೃತದೇಹವನ್ನು ಹೊರ ತೆಗೆದ ತಲಗೋಡಿನ ಬಾಸ್ಕರ್, ಹೆತ್ತಮ್ಮನ ಹೆರಿಗೆ ಮಾಡುವ ಮೂಲಕ ಸೂಲಗಿತ್ತಿಯಾಗಿ ನೂರಾರು ಹೆರಿಗೆ ಮಾಡಿದ ನಿಡುವಾಳೆಯ ಕಮಲಮ್ಮ, ಕಂಬಳಿ ಮಾರುವ ತುಮಕೂರಿನ ಪರಶುರಾಮ್, ನಾಲ್ಕು ದಶಕದಿಂದ ಹೆತ್ತವರ ಹುಡುಕಾಟದಲ್ಲಿರುವ ಕೊಟ್ಟಿಗೆಹಾರದ ಅಬ್ಬಾಸ್, ತೇಜಸ್ವಿ ಕಥೆಯಲ್ಲಿ ಪಾತ್ರವಾದ ಮೂಡಿಗೆರೆಯಲ್ಲಿ ಪತ್ರಿಕೆ ಮಾರುವ ಮಹಮ್ಮದ್ ಜಾಹೀರ್, 5 ದಶಕಗಳಿಂದ ಪೋಟೊಗ್ರಫಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮೂಡಿಗೆರೆಯ ಹಿರಿಯ ಛಾಯಾಗ್ರಾಹಕ ವಸಂತ್ ಪೈ, ಹೀಗೆ ಅಂಕಣ ಬರಹದ ನೆಪದಲ್ಲಿ ಅದೆಷ್ಟೋ ಜನರ ಬದುಕಿನ ಅನುಭವಗಳು ನನ್ನ ಅರಿವನ್ನು ವಿಸ್ತರಿಸಿವೆ.

ಜನಮಿತ್ರ ಪತ್ರಿಕೆಯಲ್ಲಿ ಅಂಕಣ ಬರಹ ಬರೆಯಲು ಅವಕಾಶ ನೀಡಿದ ಪ್ರಧಾನ ಸಂಪಾದಕರಾದ ಎಚ್.ಬಿ ಮದನಗೌಡ, ಸಂಪಾದಕರಾದ ಸಿ.ಆರ್. ನವೀನ್, ಪತ್ರಕರ್ತ ಮಿತ್ರ ಚೇತನ್ ಬೇಲೇನಹಳ್ಳಿ, ಮುನ್ನುಡಿ ಬರೆದು ಬೆನ್ನು ತಟ್ಟಿದ ಖ್ಯಾತ ಲೇಖಕರಾದ ಡಾ.ಪ್ರದೀಪ್ ಕೆಂಜಿಗೆ, ಬೆನ್ನುಡಿ ಬರೆದು ಮೆಚ್ಚುಗೆಯ ಮಾತುಗಳನ್ನಾಡಿ ಪ್ರೋತ್ಸಾಹಿಸಿದ ಖ್ಯಾತ ವಿಮರ್ಶಕರು, ಲೇಖಕರಾದ ಡಾ.ಎಚ್.ಎಸ್.ಸತ್ಯನಾರಾಯಣ, ಸಲಹೆ ಸೂಚನೆಗಳನಿತ್ತ ಕವಿಮಿತ್ರರಾದ ಸಂಪತ್ ಬೆಟ್ಟಗೆರೆ, ನಾಗರಾಜರಾವ್ ಕಲ್ಕಟ್ಟೆ, ಮುಖಪುಟ ವಿನ್ಯಾಸ ಮಾಡಿದ ಸೌಮ್ಯ ಪ್ರಭು ಕಲ್ಯಾಣಕರ್, ಪುಸ್ತಕ ಪ್ರಕಟಿಸಿ ಪ್ರೋತ್ಸಾಹವಿತ್ತ ಬೆಂಗಳೂರಿನ ರಕ್ಷಣ್ ಪಬ್ಲಿಕೇಶನ್‌ನ ಮಂಜುನಾಥ, ಲೇಖಕಿ, ಕವಯತ್ರಿ ವತ್ಸಲ ಸುರೇಶ್, ಪುಟ ವಿನ್ಯಾಸ ಮಾಡಿದ ವಿಜಯಲಕ್ಷ್ಮಿ ಬೆನ್ನೂರ ಅವರಿಗೆ ಕೃತಜ್ಞತೆಗಳು.

ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ ಎಂಬ ತೇಜಸ್ವಿ ಅವರ ಮಾತಿನಂತೆ ಮೊಗೆದಷ್ಟು ಬೊಗಸೆ ತುಂಬುವ ಅಕ್ಷಯ ಬದುಕಿನ ಅನುಭವಗಳು ನಮ್ಮ ಮುಂದಿದೆ.

-ನಂದೀಶ್ ಬಂಕೇನಹಳ್ಳಿ

 

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...