ಇಸ್ಲಾಂನಲ್ಲಿ ಶಿವ ಪಾರ್ವತಿ!!

Date: 29-09-2020

Location: ಬೆಂಗಳೂರು


ಸದಾ ಕ್ಯಾಮರಾ ಹಿಂದೆ ನಿಂತು ಕಾರ್ಯ ನಿರ್ವಹಿಸುವ ಸತ್ಯಬೋಧ ಜೋಶಿ ಅವರು ಸಿನಿಮಾ, ಕಿರುತೆರೆ ಛಾಯಾಗ್ರಹಣದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸಾಹಿತ್ಯದ ಸಂವೇದನೆ- ಆಸಕ್ತಿ ಕಾಳಜಿ ಹೊಂದಿರುವ ಸತ್ಯಬೋಧ ಅವರು ಕ್ಯಾಮರಾ ಹಿಡಿದು ಓಡಾಡುವ ಕ್ಷಣಗಳಲ್ಲಿ ಕಂಡುಕೇಳಿದ ಸಂಗತಿಗಳನ್ನು ’ಬಯಲ ಪರದೆ’ ಅಂಕಣದಲ್ಲಿ ಬರೆಯುತ್ತಾರೆ.

ಕೆಲವು ವರ್ಷಗಳ ಹಿಂದೆ ಮೊಹರಂನ ಚಿತ್ರೀಕರಣಕ್ಕೆ ಅಂತ ಹೈದರಾಬಾದಿನ ಚಾರ್ ಮಿನಾರ್ ಸುತ್ತ ಮುತ್ತಲ ಭಾಗಗಳಿಗೆ ಹೋಗಿದ್ದ ನನಗೆ ಇಡೀ ಊರಿಗೆ ಊರೇ ಕಪ್ಪು ಬಟ್ಟೆಯ ತೊಟ್ಟು ನೋವಿನಲ್ಲಿ ತನ್ನನ್ನು ದಂಡಿಸಿಕೊಂಡು ಅಳುತ್ತಿದ್ದರೆ, ಹಸಿಕಪ್ಪು ಮೈಮೇಲೆ ಬಿರಿದ ಆಳ ಗಾಯಗಳಂತೆ ಕಂಡ ಆ ರೋದನ, ಕರ್ಬಲಾದಲ್ಲಿ ಘಟಿಸಿದ ಹ.ಇಮಾಮ್ ಹುಸೇನರ ಬರ್ಬರ ಹತ್ಯೆಯ ರೌದ್ರವವನ್ನ ಕಣ್ಮುಂದೆ ತಂದು ನಿಲ್ಲಿಸಿದಂತೆ ಅನಿಸುತ್ತಾ ಇತ್ತು. ಬರಿ ಬೆವರ ಮೈಯಿಂದ ಚಿಮ್ಮಿ ಹರಿಯುವ ರಕ್ತ, ಎದೆ ಹೊಡೆದು ಕೊಂಡು ಅಳುವ ಸಾವಿರಾರು ಜನರನ್ನು ನೋಡಿದಾಗ, ಹೊಟ್ಟೆ ಒಳಗಿನಿಂದ ಎದೆಯವರೆಗೂ ಉರುಮೆ ನುಡಿದಂತೆ ಹುಟ್ಟಿದ ನಡುಕದಲ್ಲಿ, ಹಿಂದೆಯಿಂದ ಯಾರೋ ಒಬ್ಬ "ಶುಮರ್" ಓಡಿ ಬಂದು ನನ್ನ ಕುತ್ತಿಗೆಗೂ ಖಡ್ಗವನ್ನ ಹಿಡಿದೇ ಬಿಡಬಹುದು ಅನ್ನುವ ಭಯ ಹುಟ್ಟುತ್ತ ಇತ್ತು. ಅದರಲ್ಲೂ ಮನೆ, ಸಮುದಾಯ ಭವನಗಳ ಒಳಗೇ ಕುಳಿತು ಅಳುತ್ತಿದ್ದ ತಾಯಂದಿರ ಜೊತೆ "ಅಮ್ಮಿ..ಅಮ್ಮಿ.." ಅಂತ ಅಮ್ಮನನ್ನ ಎಳೆದೆಳೆದು ಅಳುತ್ತಿದ್ದ ಹಸುಳೆಗಳನ್ನ ನೋಡಿದಾಗ, 1300 ವರುಷಗಳ ಹಿಂದೆ ಹಿಜರಿಸನ್ 61ರ ಮೊಹರಂ ತಿಂಗಳಿನ (ಕ್ರಿ.ಶ.680) ಆ ಐದು ದಿನಗಳಲ್ಲಿ, ತಮ್ಮ ಪರಿವಾರ ಮತ್ತು ಬಂಧು ಬಾಂಧವರೊಳಗೊಂಡ 72 ಜನರೊಂದಿಗೆ ಕರ್ಬಲಾಗೆ ಬರುವ ಹ.ಹುಸೇನರು ಯಜೀದ ಸೈನ್ಯದ ಕುತಂತ್ರದಿಂದ, ತನ್ನ ಪರಿವಾರದ ಕಾಸಿಮ್ ಅಲಿ, ಅಬ್ದುಲ್ಲಾ, ಅಬ್ಬಾಸ್ ಅಲಿ ಅವರನ್ನ ಕಳೆದುಕೊಂಡು ಕೊನೆಗೆ ತಮ್ಮ ಒಂದು ವರ್ಷದ ಹಸುಳೆ ಬಾಯಾರಿ ಬಳಲಿದ ಅಸ್ಗರ್ ಅಲಿ ನೀರು ಬೇಡುವಾಗ ಗಂಟಲಿಗೆ ಬಾಣ ಬಿಟ್ಟು ಹತ್ಯೆಗೈವ ಅಮಾನವೀಯ ಯಜೀದ ಸೈನ್ಯದ ಶುಮರ್ನಿಂದ ನಮಾಜ್ ಮಾಡುವಾಗಲೇ ಹತ್ಯೆಯಾಗುತ್ತಾರೆ.

ಅಂತಹ ದಾರುಣ ಕೃತ್ಯದ ನೆನಪಾಗಿ, ತಮ್ಮ ಆಹ್ವಾನದ ಕಾರಣದಿಂದ ಬರುತ್ತಿದ್ದ ಕಾರಣಕ್ಕೆ ಅವರು ಹತರಾದರು ಅನ್ನುವ ಅಂದಿನ ಕೂಫಾ ಜನರ ಅಪರಾಧಿ ಪ್ರಜ್ಞೆಯಾಗಿ, ಹುಸೇನರ ಜೊತೆ ಹೋಗಲಾಗದೇ ಹಿಂದೆಯೇ ಉಳಿದ ಕೆಲವು ಜನರ ಪ್ರಾಯಶ್ಚಿತ್ತವಾಗಿ ನಡೆದುಕೊಂಡು ಬರ್ತಾಯಿರುವ ಶೋಕಾಚಾರಣೆಯ ಪದ್ಧತಿ, ಒಮ್ಮೊಮ್ಮೆ ಆ ರೌದ್ರವ ಹತ್ಯೆಯನ್ನ ಉತ್ರ್ಪೇಕ್ಷಿಸುವ ಒಂದು ಆಚರಣೆ ಅಂತ ಅನ್ನಿಸಿದರೆ ಇನ್ನೊಮ್ಮೆ ಹಬ್ಬ, ಜಾತ್ರೆಗಳ ಆ ಸಂಭ್ರಮಗಳನ್ನೂ ಮೀರಿ ಒಬ್ಬ ಮಾನವ, ಕರುಣೆ, ಸತ್ಯದ ಮೇಲೇ ಇಟ್ಟ ನಂಬಿಕೆಗೆ ಇನ್ನೊಬ್ಬ ಮಾನವ ಬಗೆದ ದ್ರೋಹದ ಕುರುಹಾಗಿ ಈ ಮೊಹರಂ ಕಾಡುತ್ತಲೇ ಇರತ್ತೆ, ಹಾಗಾಗಿ ಅಂಥಹ ಪಾಪವನ್ನ ಶತ ಶತಮಾನಗಳ ಕಣ್ಣೀರಿನಿಂದಲೂ ಅಳಿಸಲಾಗದು ಅನ್ನುವ ಘೋರ ಪ್ರತಿಮೆಯಾಗಿ ಈ ಮೊಹರಂ ಸ್ಥಾಪಿತಗೊಳ್ಳುತ್ತಲೇ ಹೋಗತ್ತೆ,

ಹಾಗಾಗಿಯೇ ಅಂದು ಅಸಹಾಯಕರಂತೆ ಹತರಾದ ಹುಸೇನರು ತಮ್ಮ ಸಚ್ಯಾರಿತ್ರ್ಯ ದಿಂದಾಗಿ ಈ ಮೊಹರಂ ನೆನಪಿನಲ್ಲಿ ಕೋಟಿ ಕೋಟಿ ಬಾರಿ ಮತ್ತೆ ಮತ್ತೇ ಹೊಸ ಪೀಳಿಗೆಯಲ್ಲಿ ಹುಟ್ಟಿದರೆ, ಅಂದು ಹತ್ಯೆ ಗೈದು ಗೆದ್ದ ಯಜೀದ್ ಕೋಟಿ ಕೋಟಿ ಬಾರಿ ಹತನಾಗ್ತಾನೆ ಇದ್ದಾನೆ.

ಹೀಗೆ ಚಾರಮಿನಾರ್ ಸುತ್ತಲಿನ ಆ ಗಲ್ಲಿ, ಒಣಿಗಳಲ್ಲಿ ನಾನು ಚಿತ್ರೀಕರಿಸಿದ ಆ ದೃಶ್ಯಗಳು ಇನ್ನೂ ಎಷ್ಟೋ ವರ್ಷ ಹಸಿ ಹಸಿಯಾಗಿಯೇ ನನ್ನೊಳಗೆ ಇರುವಾಗ, ಉತ್ತರ ಕರ್ನಾಟಕ ಭಾಗದ ಒಂದು ಅಲಾವಿ ಕುಣಿತದ ಚಿತ್ರೀಕರಣಕ್ಕೆ ಅಂತ ಗದಗ ಜಿಲ್ಲೆಯ ಯಾವಗಲ್ ಊರಿಗೆ ಹೋಗುವ ಪ್ರಸಂಗ ಬಂತು, ಹಾಗಾಗಿ ಮೊಳೆ ಚುಚ್ಚಿಕೊಳ್ಳುತ್ತ ಚಾಬೂಕದಿಂದ ಮೈಗೆ ಹೊಡೆದುಕೊಂಡು , ಕೈಗೆತೊಟ್ಟ ಸರಪಳಿಯಿಂದ ತೊಟ್ಟಿಕ್ಕುವ ರಕ್ತ ಸಿಕ್ತ ಚಿತ್ರಣಗಳನ್ನು ಕಣ್ಮುಂದೆ ಇಟ್ಟುಕೊಂಡು ನಾನು ಡಾ. ದಸ್ತಗಿರ್ ಅಲ್ಲೀಭಾಯಿ ಅವರ ಮೊಹರಂ ಕುರಿತ 'ಹೆಜ್ಜೆ ಪದಗಳು' ಅನ್ನುವ ಕಿರುಹೊತ್ತಿಗೆಯನ್ನು ತೆಗೆದಾಗ, ಈ ಒಂದು ಶೋಕಾಚಾರಣೆಯಲ್ಲಿ ಕೆಲವು ಕಡೆ ಹೂವಿನ ಕೋಲು ಹಿಡಿದ ಕುಣಿತವು ಇರತ್ತೇ, ಅದಕ್ಕೆ ಹರಕೆ ತೀರಿಸುವ ಪದ್ಧತಿ ಬೇರೆ ಸೇರಿಕೊಂಡು ಈ ಹಬ್ಬ ಒಂದು ರೀತಿ ಸಂಭ್ರಮದ ಆಚರಣೆ ಆಗಿ ಹೋಗಿದೆ, ಜೊತೆಗೆ ಇರಾಕಿನ ಕರ್ಬಲಾದಲ್ಲಿ ನಡೆದ ಘಟನೆಗೆ ಅರಬಸ್ತಾನದ ಆ ಜನಾಂಗಗಳು ನಡೆಸುವ ಆಚರಣೆ, ಇಲ್ಲಿಯ ಜನಾಂಗದ ಭಾಗವಾಗಿ ಇಂದು ಹಿಂದೂ ಮತ್ತು ಇಸ್ಲಾಂ ಭಾವೈಕ್ಯತೆಯನ್ನು ಬಿಂಬಿಸುವ ಪ್ರತೀಕವಾಗಿದೆ ಅಂತ ತಿಳಿಯುತ್ತ ಹೋದಾಗ, ನಾನು ಬಾಲ್ಯದಲ್ಲಿ ಅರಿಯದೆಯೂ ಸಕ್ಕರೆ ಊದಿಸಿಕೊಂಡು (ಸಕ್ಕರೆ ಮುಂದಿಟ್ಟುಕೊಂಡು ಪ್ರಾರ್ಥನೆ ಓದಿಸುವುದು) ಬರುತ್ತಿದ್ದ ಆ ಪಂಜಾಗಳಿದ್ದ, ಅಳ್ಳಳ್ಳಿ ಬಾವಾಗಳ ಆಚರಣೆಯೇ ಮೊಹರಂ ಅಲ್ಲವಾ!! ಅನ್ನುವ ಚಿತ್ರಣಗಳು ಕಣ್ಮುಂದೇ ಬಂದವು. ಆದರೆ ಅನೇಕ ಸ್ಥಳೀಯ ಮತ್ತು ವಲಸೆ ಬಂದ ಇಂತಹ ಆಚರಣೆಗಳು ಭಾರತದಲ್ಲಿ ಕಂಡ ವಿಲಕ್ಷಣ ರೂಪಾಂತರವನ್ನ ಕಂಡಾಗ, ಅನಿವಾರ್ಯತೆಗೋ, ಅವಶ್ಯಕತೆಗೊ ಒಟ್ಟಾರೆ ಈ ಭಾರತವೆನ್ನುವ ಉಪಖಂಡ ತನ್ನ ಒಡಲಿಗೆ ಬರುವ ಎಲ್ಲವನ್ನೂ ತನ್ನಂತೆ ಬದಲಾಯಿಸಿಕೊಳ್ಳುವ, ಎಲ್ಲರನ್ನು ಪೋಷಿಸುವ, ಸಲಹುವ ತಾಯಿ ಹೃದಯದ ಇತಿಹಾಸ ನನ್ನ ಗ್ರಹಿಕೆಯ ಪುಟ್ಟ ಕಲ್ಪನೆಯ ಪರದೆಯ ಮೇಲೆ ಆ ನನ್ನ ಪ್ರಯಾಣದುದ್ದಕ್ಕೂ ಮೂಡಲಿಕ್ಕೆ ಶುರುವಾದವು,

"ಸವದತ್ತಿ ಎಲ್ಲಮ್ಮ `ಎಲ್ಲವ್ವ' ಅಲ್ಲಂತ ಅಕೀ ಲೊಕ್ಕಿ ಗಿಡದಾಗಿನ ಯಕ್ಷಿ ಪದ್ಮಾವತಿ ದೇವಿ ಅಂತ, ಹಂಗಂದ್ರ ನಾನು ಸಣ್ಣವನಿದ್ದಾಗ ಅಪ್ಪ ನನ್ನ ಜ್ವರ ಕಮ್ಮಿ ಆದ್ರ ಸೀರಿ ಕೊಡತೀನಿ ಅಂತ ಹರಕೀ ತೀರಿಸಿದ ಆ ಅವ್ವ ಜೈನರಕೀನಾ? ಹಂಗತನ್ನೊ ಐತಿಹ್ಯ ಅದ ಅಂತ ನನ್ನಪ್ಪನಿಗೆ ಗೊತ್ತಾಗಿದ್ರ ಅವಾ ಆ ಕೊಳ್ಳದ ಅವ್ವಗ ಹರಕೀ ಬೇಡಿ ಕೊಳ್ಳಗಿದ್ದನಾ?"

" ಎಕ್ಕಯ್ಯ, ಜೋಗಯ್ಯ ಅಂತ ಅನ್ನುತ್ತ ಜಗ ಹೊತ್ತು ಬರುತ್ತಿದ್ದ ಜೋಗತಿಯರನ್ನ ಗೊಂದಲ (ಲಕ್ಮೀ ದೇವಿಯನ್ನು ಪೂಜಿಸುವ ಒಂದು ಸಂಪ್ರದಾಯ) ಸಮಯದಲ್ಲಷ್ಟೇ ಮನೆ ಒಳಗೆ ಕರೆದು,ಉಡಿತುಂಬಿ ಊಟಕ್ಕೇ ಹಾಕುತ್ತಿದ್ದ ಮುತ್ತೈದೆಯರಿಗೆ, ಆ ಜೋಗತಿಯರು ಯಾವಾಗಲೂ ನೆನೆಯೊ ಆ ಎಕ್ಕಯ್ಯ, ಜೋಗಯ್ಯ ,ಎಲ್ಲಮ್ಮನನ್ನ ಕುಷ್ಟ ರೋಗದಿಂದ ಗುಣ ಪಡಿಸಿದ ನಾಥ ಪಂಥದ ಜೋಗಿಗಳು,ಅವರು ಪಾರ್ವತಿ ತನ್ನ ಮುಟ್ಟಿನ ರಕ್ತದಿಂದ ತಯಾರಿಸಿದ ಶಿವನ ಕತೆಯನ್ನ ಪವಿತ್ರ ಅಂತಾರ ಅಂತ ಗೊತ್ತಿತ್ತೇನು?"

ಇನ್ನು ಚಾಗದ ಬ್ರಹ್ಮದೇವರು, ಕೂಗೆ ಬ್ರಹ್ಮ, ಬ್ರಹ್ಮಲಿಂಗೇಶ್ವರ ಅಂತೆಲ್ಲ ಪೂಜೆಗೆ ಒಳಪಡುವ ಆ ದೈವ ,ವೈದಿಕ ಸಂಪ್ರದಾಯದ ಬ್ರಹ್ಮನಲ್ಲಾ. ಅವನು 10ನೇ ತೀರ್ಥಂಕರರಾದ ಶೀತಲನಾಥರ ಯಕ್ಷಬ್ರಹ್ಮ ಅಂತ. ಆದರೆ ಅವನ ಪೂಜೆಯಲ್ಲಿ ಕೈಮುಗಿದು ನಿಲ್ಲುವ ಜೈನೇತರ ಗ್ರಾಮಸ್ಥರಿಗೆ "ಈ ಬ್ರಹ್ಮ ಬೇರೆ ಅಲ್ಲವಾ!!" ಅಂತ ಕೇಳಬೇಕು ಅನ್ನುವ ಅವಶ್ಯಕತೆಯೇ ಬಂದಿಲ್ಲವೋ! ಅಥವಾ ಗೊತ್ತೇ ಇಲ್ಲವೋ! ಇಲ್ಲವೇ ಅವರು ನಮ್ಮ ಧರ್ಮದವರು ಅಲ್ಲದೇ ಇದ್ದರೂ, ನಮಗಿಂತ ಅಷ್ಟೇನೂ ಬೇರೇನೂ ಅಲ್ಲ!! ಅದೇ ಪೂಜೆ, ವ್ರತ ಅಂದುಕೊಂಡು ಒಪ್ಪಿದ್ದಾರೋ!! ಅಂದರೆ ಜೈನ, ಬೌದ್ಧ , ಲಿಂಗಾಯತ, ವೈದಿಕ ಅಂತ ಧರ್ಮಗಳು ಕಟ್ಟುನಿಟ್ಟಾಗಿ ಕಟ್ಟಿಕೊಡುವ ತಮ್ಮ ಶಾಸ್ತ್ರ, ಸಿದ್ಧಾಂತ, ತರ್ಕಗಳು ಮತ್ತು ಅವುಗಳ ಅರ್ಥ ಎಲ್ಲರಿಗೂ ತಿಳಿದಿಲ್ಲವೇ ಅಂತಾನೆ ಅರ್ಥ!
ಇನ್ನು ಆಯಾ ಧರ್ಮಗಳ ಸಂಪೂರ್ಣ ಸಿದ್ಧಾಂತಗಳನ್ನ ತಿಳಿದು ಕೊಂಡವರಷ್ಟೇ ಆಯಾ ಧರ್ಮದ ಅನುಯಾಯಿ ಅನ್ನುವುದಾದರೆ, ಅವೆಷ್ಟೋ ಬಹುಪಾಲು ನಾವೆಲ್ಲ, ನಮ್ಮ ನಮ್ಮ ಧರ್ಮದ ಅನುಯಾಯಿಗಳು ಅಲ್ಲವೆ ಅಂದ ಹಾಗಾಯಿತು!

ಹಾಗಾದರೆ ನಾವು ಅಂದುಕೊಂಡ ನಮ್ಮ ಧರ್ಮದಲ್ಲಿ ಇತರರ ಧರ್ಮವನ್ನೂ ಅಷ್ಟಷ್ಟು ಬೆರೆಸಿಕೊಂಡು ಕೆಲವು ಪೂರ್ವಗ್ರಹಗಳಲ್ಲೆ ನಾವು ಬದುಕುತ್ತ ಇದ್ದೇವೆ ಅಂದರೆ, ಧರ್ಮ ಹೇಳುವ ಆಚರಣೆಗಳಾದ ಹೋಮ, ಸಂಧ್ಯಾವಂದನೆ, ಶಿವಪೂಜೆ, ನಮಾಜುಗಳನ್ನ ಬಾಹ್ಯವಾಗಿ ಮಾಡುವ ಆದರೆ ಆಂತರ್ಯದಲ್ಲಿ ಹಿರಿಯರು ಪಾಲಿಸಿಕೊಂಡು ಬಂದ, ಐತಿಹಾಸಿಕವಾಗಿ ಅನಿವಾರ್ಯವಾಗಿ ಬೆರೆತ ಸಂಕರ ಸಂಸ್ಕೃತಿಯವರು ನಾವು ಅಂದಹಾಗಾಯಿತು! ಹಾಗಾದರೆ ಇದು ಬಹುಪಾಲು ಸಾಮಾನ್ಯರ ಹಾದಿಯೇ ಆಗಿರಬಹುದು! ಆದರೆ ಬದುಕನ್ನು ಕಟ್ಟಿಕೊಳ್ಳಲು ಎಷ್ಟು ಬೇಕೋ ಅಷ್ಟಷ್ಟೇ ರೀತಿಯಲ್ಲಿ ಧರ್ಮಗಳನ್ನು ಅರ್ಥಮಾಡಿಕೊಂಡು ಜ್ವರಕ್ಕೆ ಮಾರಮ್ಮ, ಮಕ್ಕಳ ಭಾಗ್ಯಕ್ಕೆ ಮಾಬುಸಾನಿ, ಕಷ್ಟಕ್ಕೆ ಕಲ್ಲುರ್ಟಿ, ಮುಡಿ ಕೊಡಲು ಮಂಜುನಾಥ ಅಂತ ಒಟ್ಟಾರೆಯಾಗಿ ಕಾಯುವವ ಎಲ್ಲಿದ್ದರೇನು! ಅನ್ನುವ ಸರಳ ನಂಬಿಕೆಯ ಆ ಬಾಳು ನಿಷ್ಠುರ ಶಿಷ್ಟರ ಕಟು ಹಾದಿಗಿಂತ ಎಷ್ಟೊ ಪಾಲು ಒಳ್ಳೆಯದು ಅಂತೇನೆ ಅಲ್ಲವಾ? ಯಾಕಂದ್ರೆ ಮನೆಯಲ್ಲಿ ಕಾಪಾಡುವ ದೇವರು ಹೊರಗೆ ನಮ್ಮನ್ನ ಕಾದಾಡುವಂತೆ ಮಾಡುವಾಗ (ಎಲ್ಲರದನ್ನು ತಮ್ಮದು ಅನ್ನಬಹುದಾದ, ಇತಿಹಾಸವನ್ನು ಬದಲಿಸಲಾಗದ ಬಹುಸಂಖ್ಯೆಯಲ್ಲಿ ಎಲ್ಲೆಲ್ಲೂ ಇರುವವರ ಪ್ರಜ್ಞೆ) ಚೀರಿ ಅಳುತ್ತಿರುವ ಮಗುವು ಮಡಿಲಲ್ಲಿ ಹಾಲುಂಡು ಮಲಗಿದರೆ ಸಾಕು ಯಾವ ಹರಕೆಗೂ ಸಿದ್ಧ ಅನ್ನುವ ಸಾಮಾನ್ಯ ತಾಯಿಯ ಅಂತಃಕರಣ, ಯುಗ ಸಹಸ್ರಗಳ ಈ ಭಾರತವೆನ್ನುವ ತಾಯಿಗೆ ಯಾಕೆ ಸಹಸ್ರಮಾನಗಳ ಹಿಂದೆಯೇ ಅನ್ನಿಸಿರಬಾರದು!!

ಹಾಗಾಗಿಯೇ ತನ್ನೊಡಲ ಸಂತಾನವನ್ನ ಕಾಪಿಡುವ ಮೋಹಕ್ಕೆ, ತನ್ನ ಪನ್ನತಿಕೆಯನ್ನ ಉಳಿಸಿಕೊಳ್ಳಬೇಕೆಂಬ ಅನಿವಾರ್ಯತೆಗೆ ಕಾಲಪ್ರವಾಹದಲ್ಲಿ ತನ್ನನ್ನ ಅಪ್ಪಿದ, ತನ್ನೊಂದಿಗೆ ಕಾದಾಡಿ ಗೆದ್ದ ಎಲ್ಲ ಸಂಸ್ಕೃತಿಗಳನ್ನೂ ತನ್ನದಾಗಿಸಿಕೊಂಡು, ತನ್ನಂತೆ ಬದಲಾಯಿಸಿಕೊಂಡು, ವೈದಿಕದಿಂದ ಹಿಡಿದು ಕರ್ಮಠ, ತರ್ಕ ಚೌಕಟ್ಟುಗಳನ್ನ, ಭಕ್ತಿಯಲ್ಲಿ ಸಮೀಕರಿಸಿಕೊಂಡಿದ್ದು, ಮಾತೃ ಸಂವೇದನೆಯಿಂದಾಗಿಯೇ ಅಲ್ಲವಾ!! ಇಲ್ಲವಾದರೆ ಆಯಾ ಯುಗ ಶತಮಾನಗಳ ಶ್ರೇಷ್ಠ ಮನಸುಗಳು ಶೋಧಿಸಿದ ತರ್ಕ ಸಿದ್ಧಾಂತಗಳ ವೈರುಧ್ಯಗಳನ್ನೂ ಕೆಲವೇ ಶತಮಾನಗಳ ಅಂತರದಲ್ಲಿ ಈ ನೆಲ ಹೇಗೆ ತಾನೇ ಪೋಷಿಸುತ್ತ ಬಂದಿರೋದು!! ಇಲ್ಲವಾದರೆ ಪ್ರಕೃತಿಯ ಹತ್ತಾರು ದೇವತೆಗಳಿಂದ (ಅಗ್ನಿ, ಇಂದ್ರ, ವಾಯು, ವರುಣ, ಉಷೆ..) ಏಕದೇವೋಪಾಸನೆ ಎಡೆಗೆ ನಡೆದ ಇದೆ ಖಂಡದಲ್ಲಿ ಪರಮಾತ್ಮನನ್ನು ನಂಬದ ಜೈನ ಧರ್ಮ ಹುಟ್ಟಿದರೆ, ಜೈನ ನಂಬುವ ಆತ್ಮವನ್ನೂ ನಿರಾಕರಿಸುವ ಬೌದ್ಧ ಧರ್ಮ ಹೇಗೆ ಹುಟ್ಟಲಿಕ್ಕೆ ಸಾಧ್ಯವಿತ್ತು!

ಹೀಗಂತನ್ನೊ ಚಿತ್ರಣಗಳಲ್ಲೆ ನಾನು ಗದಗನ್ನ ತಲುಪಿದಾಗ ನನ್ನ ಸಹೃದಯಿ, ಅಂತಃಕರಣದ ಸಹೋದ್ಯೋಗಿ ಅಮೃತ ಅಜ್ಜಿ, ಯಾವಗಲ್‌ನಲ್ಲಿ ನಮ್ಮ ಚಿತ್ರೀಕರಣಕ್ಕೆ ಅಂತ ಎಲ್ಲ ವ್ಯವಸ್ಥೆಯನ್ನ ಮಾಡಿದ್ದ, ನಮಗೆ ದಾರಿಯುದ್ದಕ್ಕೂ ಚಿತ್ರೀಕರಣ ಮಾಡಲಿಕ್ಕೆ ಅಂತ ಹೆಚ್ಚು ತೆರೆದಿರುವ ಟಂಟಂನ ವ್ಯವಸ್ಥೆಯನ್ನು ಮಾಡಿ ಯಾವಗಲ್‌ಗೆ ಕರೆದುಕೊಂಡು ಬಂದ. ಇತ್ತ ಅಮೃತ, ಅಲ್ಲಿಯ ಮುತ್ತಣ್ಣ ಅವರ ಜೊತೆ ಕೂಡಿ, ಇನ್ನು ಸ್ವಲ್ಪ ತಯಾರಿಯಲ್ಲಿ ತೊಡಗಿಕೊಂಡಾಗ ನಾನು ವಜೂ ಮಾಡುವುದನ್ನು ಕಲಿತುಕೊಂಡು ಸ್ವಲ್ಪ ಹೊತ್ತು ಜನಾಬ್ರನ್ನ ಮಾತನಾಡಿಕೊಂಡು ಬಂದರಾಯಿತು ಅಂತ ಮಸೀದೆ ಒಳಗೆ ಬಂದೆ ಅಷ್ಟೆ, ನಾನು ಕಮಾಲುದ್ದೀನ್ರಿಂದ ಈ ಶಿಯಾ, ಸುನ್ನಿ, ವಹಾಬಿ ಅನ್ನುವ ಪಂಗಡಗಳ ವ್ಯತ್ಯಾಸಗಳನ್ನ ಅರ್ಥ ಮಾಡಿಕೊಳ್ಳುತ್ತಿದ್ದೆ ಅಷ್ಟರಲ್ಲಿ ಹೊರಗೆ ಅಮೃತ ಮತ್ತು ಮುತ್ತಣ್ಣ ಒಂದು ಯಕ್ಷಲೋಕವನ್ನೇ ಸೃಷ್ಟಿಸಿ ಬಿಟ್ಟಿದ್ದರು. ಹಾಗಾಗಿ ಜನಾಬ್ರಿಗೆ ಸಲಾಂ ಹೇಳಿ ಮಸೀದಿಯಿಂದ ಹೊರಬಂದಾಗ ಮಸೀದಿಯ ಮುಂದಿನ ಅಂಗಳದಲ್ಲಿ, ಹಳದಿ ಬನಿಯನ್, ಬಿಳಿಧೋತ್ರ ಮತ್ತು ಕೈಯಲ್ಲಿ ಹಾಳೆಯ ಹೂವಿನ ಕೋಲನ್ನು ಹಿಡಿದ ಯುವಕರ ತಂಡ ಹೆಜ್ಜೆ ಕುಣಿತದ ತಾಲೀಮು ನಡೆಸಿತ್ತು ಪಕ್ಕದಲ್ಲಿ ನಿಂತಿದ್ದ ನಾಲ್ಕು ಹಿರಿಯರಲ್ಲಿ ಒಬ್ಬರು ತಾಳ ಹಿಡಿದು ಹಾಡ್ತಾ ಇದ್ರೆ, ಒಬ್ಬರು ಹಲಗೆ ನುಡಿಸುತ್ತಾ ಇದ್ದರು, ಉಳಿದಿಬ್ಬರು ಹಾಡಿಗೆ ಸಾಥ್ ಕೊಡ್ತಾಯಿದ್ದರು. ಆ ಮುಚ್ಚಿದ ಅಲಾವಿ (ಕೊಂಡ)ಸುತ್ತ ಚಂಡು ಹೂವು ತುಂಬಿ ಚಲ್ಲಿದಂತೆ ಕಾಣುತ್ತಿದ್ದ ಆ ತಾಲಿಮಿನಲ್ಲಿ, ಕುಣಿಯುತ್ತಿದ್ದವರು 2 ಹೆಜ್ಜೆ ಹಾಕ್ತಾ ಇದ್ದಾರೋ 3 ಹೆಜ್ಜೆಯೋ! ಅಂತ ನೋಡ್ತಾನೆ ಇದ್ದೆ.

ಅಷ್ಟರಲ್ಲೇ ಅವರು ಎತ್ತಿ ಹಿಡಿದು ತಿರುಗಿಸುತ್ತಿದ್ದ ಹೂವಿನಕೋಲಿನ ಕಡೆ ನನ್ನ ಲಕ್ಷ್ಯ ಹೋಯಿತು. ನಾನೂ ಕೂಡಲೇ ಕ್ಯಾಮರಾವನ್ನ zoom in ಮಾಡಿದೆ. ಮತ್ತೆ ಮತ್ತೇ ಹಾಗೆ ನೋಡುತ್ತಲೇ ಇದ್ದೆ. ಅಷ್ಟರಲ್ಲಿ ಯಾವುದಕ್ಕೂ ಅಲ್ಲಿಯ ಆ ಕುಣಿತಕ್ಕೆ ಸಹಾಯ ಮಾಡುತ್ತ ಹಿಂದೆ ನಿಂತಿದ್ದ ಹುಡುಗರಿಗೆ ಆ ಕೋಲಿನ ಮೇಲಿನ ಲಾಂಛನಗಳ ಕುರಿತು ಕೇಳಿದೆ. ಆಗ ನಾನು ಆ ಹುಡುಗರನ್ನು ಸೇರಿಸಿ ಕೈ ಮಾಡಿ ಕೇಳುತ್ತಿದ್ದೆ ಅನ್ನುವ ಕಾರಣದಿಂದ ಕುತೂಹಲಗೊಂಡ 5/6 ಜನ ಕೂಡ ಹತ್ತಿರ ಬಂದು 'ಏನ್ ಸರ..' ಅಂತ ಕೇಳಿದ್ರು,' ಅದ ಕೋಲಿನ ಮ್ಯಾಲೆ ಏನ ಅವ ಅವು' ಅಂತ ಕೇಳಿದೆ, ಅವರೊಳಗಿನ ಒಬ್ಬ 'ಅದೇನಲ್ಲರಿ ಕೆಳಗಿಂದು ಓಂ ರೀ ಅದ ನಾವು ಅಂತೀವಲ್ಲಾ ಅದು, ಮ್ಯಾಲಿಂದು ಚಂದ್ರರೀ ಮತ್ತೆನಿಲ್ಲಾ ..' ಅಂತ ಅಂದ, ಬಾಜುದಲ್ಲಿ ಇದ್ದವರೂ ಕೂಡಾ 'ಏ ಅಷ್ಟರೀ ಅದು.. ಇನ್ನೊಂದು ಆ ಕಡೆ ಅಲ್ಲೇ ನೋಡ್ರಿ ಅದ ಕೆಳಗ ತಿರುಶೂಲಾ ಮ್ಯಾಲೆ ಚಂದ್ರ ನಕ್ಷತ್ರ ' ಅಂತ ಅಂದ!! " ಅಲ್ಲಾ ಅದ ಏನು? ಏನು ಹಂಗಂದ್ರ ??" ಅಂತ ಕೇಳಬೇಕು ಅಂತಿದ್ದೆ, ಅಷ್ಟರಲ್ಲಿ "ತ್ರಿಶೂಲ ಓಂ ಬ್ಯಾರೆ, ಚಂದ್ರ ನಕ್ಷತ್ರ ಬ್ಯಾರೆ ಅವು ಕೂಡಿದ್ದು ಭಾಳ ವಿಶಿಷ್ಟ ಅನಸ್ತದ' ಅಂತ ಹೇಳಬೇಕು ಅಂತಿದ್ದೆ. ಆದ್ರೆ ಅವು " ಅಷ್ಟೇನು ಬ್ಯಾರೆ ಅಲ್ಲಾ" ಅಂತ ಅವರೇ ತಿಳಿದುಕೊಂಡಿರುವಾಗ " ನಾನ್ಯಾರು ಅದನ್ನ ಬ್ಯಾರೆ ಮಾಡಲಿಕ್ಕೆ" ಅಂತ ಕೇಳದೇ ನೋಡುತ್ತಲೇ ಇದ್ದೆ ಅಷ್ಟರಾಗ "ಸರ್ ನಾವು ಶುರು ಮಾಡೋಣ " ಅಂತ ಕೇಳಿದ ಆ ಹಾಡಿನ ಹಿರಿಯ ಕಣ್ಸನ್ನೆ ಮಾಡಿ ಶುರು ಮಾಡಿಯೇ ಬಿಟ್ರು. ಎರಡು ಹೆಜ್ಜೆ, ನಾಲ್ಕು ಹೆಜ್ಜೆ, ಒಂದು ಕೈ ಯಲ್ಲಿ ಹೂವಿನಕೋಲು ಇನ್ನು ಕೆಲವರು ಕರವಸ್ತ್ರ ಹಿಡಿದು, ತಮಟೆಯ ತಾಳಕ್ಕೆ ತಕ್ಕಂತೆ ಎದ್ದು, ಕುಳಿತು, ನೆಗೆದು ಹೋಳಿ ಹಬ್ಬದಲ್ಲಿ ಯಾರೋ ಹಳದಿ ಬಣ್ಣವನ್ನು ತೂರುತ್ತಿದ್ದಾರೋ ಏನೋ ಅಂತ ಅನ್ನಿಸಿದ ಆ ಕುಣಿತ. ಕ್ರಮೇಣ ಸಂಪೂರ್ಣ wide ನಲ್ಲೂ ಶೂಟ್ ಆಗ್ತಾಯಿದೆ. close movements ನಲ್ಲಿಯೂ ಎಲ್ಲವೂ ಸಂಪೂರ್ಣ ಬಿಟ್ಟು ಬಿಡದಂತೆ ಚಿತ್ರೀಕರಣವಾಗ್ತಾಯಿದೆ ಅನ್ನುವುದು ಖಚಿತವಾದ ಮೇಲೆ, ಹಾಡಿನ ಅರ್ಥವನ್ನ ಕೇಳಬೇಕು ಅಂತ Headphone ನ್ನ ಧರಿಸಿಕೊಂಡೆ

ಚಂದ್ರಮನಂತ ನನ
ಸುಂದರ ದೈವ ಕೇಳರೀ ಮಾತ..
ನಬೀ ಸಾಹೇಬರು ..
ಶಿಕಾರಿಗೆ ಹೋಗೋದು ತುರ್ತಾ,
ಏರಿ ಕುದರಿ ಮ್ಯಾಲ ಕುಂತಾ...
ಕೀಲೆಲೆಲೆ
ಕುದರಿ ಮ್ಯಾಲೆ ಕುಂತ, ಹೀಗನ್ನೋ ಹಾಡು ನನ್ನೊಳಗೆ ಇಳೀತಾ ಹೋಯ್ತು. .

ಹೀಗೆ ಕ್ರಮೇಣ ಸಂಜೆ ಆದಂತೆ ಇನ್ನೂ ಸೇರಿದ ಜನ ನಿಂತಲ್ಲೇ ಕುಣಿತವನ್ನೂ ನೋಡುತ್ತಾ ತಮಗೆ ತಿಳಿದಂತೆ ಹೆಜ್ಜೆ ಹಾಕ್ತಾ ಸಂಭ್ರಮಿಸೋ ಹೊತ್ತಿಗೆ ನಾವು 4ರಿಂದ 5 ರೀತಿಯ ಕುಣಿತಕ್ಕೆ ಸಾಕ್ಷಿಯಾಗಿದ್ದೆವು, ಆದರೆ ಇನ್ನೂ ನಾವು ಚಿತ್ರೀಕರಿಸಬೇಕು ಅಂತ ಇದ್ದರೂ ಕ್ರಮೇಣ ಸೂರ್ಯ ಆಸ್ತನಾಗಹೊರಟಿದ್ದ ಅದಕ್ಕೆ ಬೆಳಕು ಕಡಿಮೆಯಾಗಿ ಆ ಗದ್ದಲದಲ್ಲಿ ಮುಂದೆ ಮಾತಿನ ಚಿತ್ರೀಕರಣ ಸಾಧ್ಯವಾಗದು ಅಂತ, ಕಲಾವಿದರ ಹೆಸರು ಬರೆಯಿಸಿಕೊಂಡು ಮಸೀದಿಯ ಒಳಕ್ಕೆ ಹಾಡಿನ ಅರ್ಥದ ಚಿತ್ರೀಕರಣಕ್ಕೆ ಹೋಗೋಣ ಅಂತ ಹೆಸರನ್ನ ಬರೆಯುತ್ತ ಹೋದರೆ ಮೊಹರಂನ 9ನೇ ದಿನ ರಾತ್ರಿಯಿಂದ ಬೆಳೆಗ್ಗಿನವರಗೆ, ಮತ್ತು ಹೊರಡುವ ಅಲಾವಿ ದೇವರುಗಳ ಮುಂದೆ ಕುಣಿವ ಆ ಹುಡುಗರ ಅಡ್ಡ ಹೆಸರು ತಳವಾರ,ಮೆಣಸಿನಕಾಯಿ, ಸುಣಗಾರ್, ಹದ್ಲಿ, ಅಂತೇನೆ ಇದ್ದವು!! ಇನ್ನು ಆ ಹಾಡನ್ನ ಹಾಡುತ್ತಿದ್ದ ' ಮಾಬುಸಾಬ್' ಅನ್ನುವವರಿಗೆ ನೀವು ಹಾಡುತ್ತಿದ್ದ ಆ ಹಾಡಿನ ಆರ್ಥ ಎನು ಅಂತ ಕೇಳಿದಾಗ " ನೋಡ್ರಿ ಇದು ನಾವು ರೂಢಿಯಿಂದ ಹಾಡ್ತಾಯಿದ್ದದ್ದು ಆದ್ರ ನಾವು ಹಾಡಿದ ಹಾಡಿನಾಗ ನಬೀ ಸಾಹೇಬರು ಮರುಭೂಮ್ಯಾಗ ಪಾಪ ಭಾಳ ಉಪವಾಸ ಇರ್ತಾರ, ಆವಾಗ ಆಕಾಶದಾಗ ಶಿವ ಪಾರ್ವತಿ ಬರ್ತಾರ, ನೋಡ್ರಿ ಆಗ ಪಾರ್ವತಿಯ ಕರುಳು ಹಿಂಡಿದಂತಾಗಿ 'ನೀನು ಹಿಂಗ ಮಾಡಬಾರದು ಶಿವಾ ಅಂತಾಳ ' ಅಂತ ಏನೋ ಅಸ್ಪಷ್ಟವಾಗಿ ಹೇಳತಾನೇ ಇದ್ರು , ನಾನು ಒಳಗೊಳಗೇ "ನೀವು ಹೋಗಲಿ ಬಿಡ್ರಿ ಅದೆಷ್ಟೇ ಕಥಿ ಕಟ್ಟಿದರೂ ಅದಕ್ಕಿಂತ ಎಷ್ಟೋ ನಿಖರ ಕಥಿ, ಪುಸ್ತಕದಾಗ, ಸಂಶೋಧನಾ ಗ್ರಂಥದೊಳಗ ಸಿಕ್ಕೇ ಸಿಗತಾವ, ಆದರ ಯಾವ ನಿಮ್ಮ ಈ ಮುಗ್ಧನಂಬಿಕೆಯಿಂದ ಎರಡು ಖಂಡಗಳನ್ನೇ ಒಂದಾಗಿ ಮಾಡಿದಿರೋ ಆ ಬಾಂಧವ್ಯವನ್ನ ಯಾವ ಪಾಂಡಿತ್ಯ ಕಟ್ಟಿಕೊಡಲಿಕ್ಕೆ ಸಾಧ್ಯ ಹೇಳ್ರಿ " ಅಂತ ಒಳಒಳಗೆ ನಾನು ಅವರಿಗೆ ಶರಣಾಗ್ತಾ ಇದ್ದೆ, ಯಾಕಂದ್ರೆ.

ಎಲ್ಲಿಯ ಇಸ್ಲಾಂ! ಎಲ್ಲಿಯ ಶಿವ ಪಾರ್ವತಿ !! ಹೀಗಂತ ಗ್ರಂಥ, ಗಡಿ, ಸಿದ್ಧಾಂತಗಳು ನಮ್ಮನ್ನ ಬೇರೆ ಬೇರೆ ಮಾಡಿದರೂ, ಎದೆ ಆಳದಲ್ಲಿ ಹೀಗೆ ಉಳಿದದ್ದನ್ನ ಯಾರು ತಾನೇ ಬೇರೆ ಮಾಡಲಿಕ್ಕೆ ಸಾಧ್ಯ ಹೇಳಿ, ಯಾಕಂದ್ರೆ ಅಂತಃಕರಣ ನಮ್ಮನ್ನ ಹಚ್ಚಿಕೊಂಡಷ್ಟು ಬುದ್ದಿವಂತಿಕೆ ನಮ್ಮನ್ನ ಹಚ್ಚಿಕೊಳ್ಳಲ್ಲ, ಹಾಗಾಗಿಯೇ ಇಂಥವರ ಮನಸು, ಹೃದಯಗಳಲ್ಲಷ್ಟೇ, ಆ ದೇವರೂ ಕೂಡಾ ನಾವು ಕಟ್ಟಿದ ಗುಡಿ ಗೋಪುರವನ್ನ ಮೀರಿ ಹೀಗೆ ಒಂದಾಗೋದು, ಅದಕ್ಕೆ ಭಾರತೀಯ ಇತಿಹಾಸವನ್ನು ಮಾನವೀಯ ದೃಷ್ಟಿಯಿಂದ ಕೆದಕುತ್ತಾ ಹೋದರೆ, ಅದೇಷ್ಟೋ ಸೂಫಿ ಸಂತರ ಆಶಿರ್ವಾದ ಪಡೆದ ಕೆಲವು ಸುಲ್ತಾನರು ಭಾರತದ ಸಂಪತ್ತನ್ನು ಲೂಟಿ ಹೊಡೆದು, ದೇವಸ್ಥಾನಗಳನ್ನ ಕೆಡವಿ ಮಸೀದಿಗಳನ್ನ ಕಟ್ಟಿದರೋ ಆ ಶೆಹೆನಶಾಹ ಗಳು ಇಂದು ಇತಿಹಾಸದ ಅವಶೇಷಗಳಾಗಿ ನಶಿಸಿ ಹೋಗಿದ್ದರೆ, ಕಾಲಾಂತರದ ಆ ದೀರ್ಘ ರೂಪಾಂತರದಲ್ಲಿ ಅಂದಿನ ಆ ಸೂಫಿ ಸಂತರು ಇಂದು ಮುಸ್ಲಿಮೇತರ ಭಾರತೀಯರ ಗುರುಗಳೂ ಆಗಿ ಇನ್ನೂ ಜೀವಂತವಾಗಿದ್ದಾರೆ. (ಇದು ಭಾರತವನ್ನೋದು ಗಡಿ ಗುಡ್ಡ ಮಧ್ಯದಲ್ಲಿ ನಿಂತ ಸ್ತಬ್ಧ ಸರೋವರವಲ್ಲ, ಅದು ಯುಗ ಸಾಗರದ ಏರಿಳಿತಕ್ಕೇ ತನ್ನನ್ನ ಒಡ್ಡಿಕೊಂಡ ಜೀವಂತ ಇತಿಹಾಸ ಅಂತ ನಂಬುವವರಿಗೆ ಮಾತ್ರ ದಕ್ಕೀತು) ಆದರೆ ಅದು ಭಾರತೀಯ ನಂಬಿಕೆಯಂತೆ ಹೊರತೂ ಉಲ್ಮಾಗಳ ಕರ್ಮಠ ಚೌಕಟ್ಟಿನಲ್ಲಿ ಅಲ್ಲಾ! ಇಲ್ಲವಾದರೆ ಯಾವ ಹ. ಮಹಮ್ಮದ್ ಪೈಗಂಬರರ ಆಶಯದಂತೆ ಧರ್ಮ ಪ್ರಚಾರಕ್ಕೆ ಅವರು ಭಾರತಕ್ಕೆ ಬಂದರೊ, ಆ ಮಹಾಮಹಿಮ ಸತ್ಯಸಂಧರೇ 'ಲಾ ಇಲಾಹಾ ಇಲ್ಲಲ್ಲಾ' (ಅಲ್ಲಾಹ್ ನಲ್ಲದೆ ಇನ್ನೊಬ್ಬನ್ನಿಲ್ಲ..) ಅಂತ ಅಲ್ಲಾಹನ ಭಕ್ತಿಯಲ್ಲಿ ತಮ್ಮ ಗುರುತೂ ಇರದಂತೆ ತಮ್ಮನ್ನ ಅರ್ಪಿಸಿಕೊಂಡರೋ ಅವರಿಗೇ ಇರದ ಬಾಹ್ಯ ಗುರುತು ಅವರ ಶಾಗೀರ್ದ್ ರಿಗೆ ದೊಡ್ಡ ದರ್ಗಾ, ಗದ್ದುಗೆ ರೂಪದಲ್ಲಿ ಇರಲಿಕ್ಕೆ ಹೇಗೆ ಸಾಧ್ಯವಿತ್ತು ಹೇಳಿ, ಅಂದರೆ ಹ. ಮಹಮ್ಮದರು ಇವರ ಇಲ್ಲಿಯ ಬದಲಾವಣೆಯಿಂದ ಮುನಿಸಿಕೊಂಡದಿದ್ದಾರೆ ಅಂತ ಅರ್ಥನಾ? ಬಹುಶಃ ಒಂದು ವೇಳೆ ಹಾಗೇನಾದರೂ ಆಗಿದ್ದರೆ, ಭಾರತದ ಈ ಸಂತರ ದರ್ಗಾಗಳು ಇಂದು ಮುಸ್ಲಿಂ ಸಮುದಾಯದ ಮತ್ತು ಮುಸ್ಲಿಮೇತರರ ಶ್ರದ್ಧಾ ಕೇಂದ್ರಗಳಾಗಲಿಕ್ಕೆ ಸಾಧ್ಯವೇ ಇರಲಿಲ್ಲ.

 

ಹಾಗಾಗಿಯೇ ಭಾರತವೆನ್ನುವ ಈ ದೇಶದ ಆಂತರ್ಯದ ಹರವು ತುಂಬಾ ವಿಶಾಲವಾದದ್ದು. ಆದರೆ ತಮ್ಮದೇ ಸತ್ಯ ಅಂತ ನಮ್ಮೊಳಗಿನ ಬೇರೆ ನೆಲದ ಇನ್ನೊಬ್ಬ ಮನುಷ್ಯ ಒಮ್ಮೆ ಯಹೂದಿಯಾಗಿ, ಕ್ರೈಸ್ತ ನಾಗಿ, ಮುಸ್ಲಿಂನಾಗಿ ಜರುಸಲೆಮ್ನಲ್ಲಿ ರಕ್ತ ಹರಿಸುತ್ತಲೇ ಇದ್ದರೆ, ಆ ಜರುಸಲೇಮ್ ಮತ್ತು ವಿಶ್ವ ಕಂಡಕ್ಕಿಂತ ಅದೆಷ್ಟೋ ಸಿದ್ಧಾಂತ, ಧರ್ಮ, ಮತ ,ಜಾತಿಗಳ ವೈರುಧ್ಯಗಳನ್ನು ಎರಡೇ ಕಲ್ಲಿನಾಚೆಯ ಓಣಿ, ಸಂದಿಗೊಂದಿಗಳಲ್ಲಿ ಕಾಣುವ ಈ ದೇಶದಲ್ಲಿ, ಆ ಧರ್ಮಗಳ ವೈರುಧ್ಯಗಳು ಸಂಜೆ ಹೊಡೆಯೋ ಹರಟೆಗಳಲ್ಲಿ ಸಂಭ್ರಮಿಸುವ ಊರಹಬ್ಬ ,ಜಾತ್ರೆಗಳ ಲ್ಲಿ ಮರೆತೆ ಹೋಗತಾವೇ,ಹೋಗಲೇಬೇಕು, ಹಾಗಾಗಿಯೇ ವಿಶ್ವ ಸಾಗರದೊಂದಿಗೆ ಬೆರೆತ ಭಾರತ ತನ್ನಲ್ಲಿ ಹರಿದು ಬರುವ ಎಲ್ಲ ಸಾರವನ್ನು ತನ್ನಂತೆ ಬದಲಾಯಿಸಿಕೊಳ್ಳುವ ಮೂಲಕವೇ ಜೀವಂತ ವಾಗಿರಿಸಿದ್ದು, ಹಾಗೆ ಭಾರತೀಯ ದರ್ಶನಗಳು ( ಸ್ಥಳೀಯ ಮತ್ತು ವಲಸೆ) ತಮ್ಮ ಸತ್ಯಾನ್ವೇಷಣೆ ಯ ಔನ್ಯತ್ಯವನ್ನ ಭಕ್ತಿ ಪಂಥ ಗಳ ಅಂತಃಕರಣದಲ್ಲೇ ಸಮೀಕರಿಸಿಕೊಂಡಿದ್ದು, ಅಂತೆಯೇ " ಖಡ್ಗ ಚುಚ್ಚುವ ಆಳಕ್ಕಿಂತ ಅದೆಷ್ಟೊ ಆಳದ ಎದೆಯಲ್ಲಿ ಅಲ್ಲಾಹ ಇಳಿದಿದ್ದಕ್ಕೆ ಭಾರತದಲ್ಲಿ ಇಸ್ಲಾಂ ಉಳಿದದ್ದು ಇಲ್ಲವಾದರೇ ಮಹಾಯುದ್ಧಗಳ ಅತಿರಥ ಮಹಾರಥರನ್ನ , ಗುಂಡಿಗೆ ಎದೆ ಕೊಟ್ಟು ನಿಲ್ಲುವ ಸ್ವಾತಂತ್ರ್ಯ ಯೋಧರನ್ನ, ವಿಶ್ವಕ್ಕೆ ಗಾಂಧೀಜಿಯನ್ನ ಕೊಟ್ಟ ಈ ರಾಷ್ಟವನ್ನ, ಬರಿ ಶಸ್ತ್ರ ಗಳಿಂದ ಮಣಿಸಲು ಸಾಧ್ಯವೇ ಇರಲಿಲ್ಲ ,ಆದರೇ ಹಾಗೂ ಆಗಾಗ ಮಣಿಸಿದ್ದರೆ ಉಂಟಾದ ಗಾಯಗಳನ್ನೂ ಭಾರತ ಅಂತಃಕರಣ ದಿಂದ ತುಂಬಿಕೊಳ್ಳುತ್ತಲೇ ಬಂದಿದೆ, ಹಾಗಾಗಿ ಮೊಹರಂ ಮತ್ತು ತಾಜಿಯಾವನ್ನ ಭಾರತಕ್ಕೆ ತಂದ ತೈಮೂರ್ಲಂಗ್ನ್ನ ಭಾರತ ಅವನ ಕ್ರೌರ್ಯತೆಯ ಕಾರಣಕ್ಕೆ ಮರೆತೆ ಹೋದರೆ, ಅಕ್ಬರ್, ಬಹಮನಿ ಮತ್ತು ಆದಿಲ್ ಶಾಹಿಗಳಿಂದ ಪ್ರಚುರಗೊಂಡ ಮೊಹರಂ ಇಂದಿಗೂ ಎಷ್ಟೋ ಭಾರತೀಯರಲ್ಲಿ ರಕ್ತಗತವಾಗಿ ಹೋಗಿದೆ.

Well ಹೀಗನ್ನೋ ಇದೆ ಆಲೋಚನೆಯಲ್ಲೇ ನಾನು ಸಹೃದಯಿ ಅಮೃತನನ್ನು ಬೀಳ್ಕೊಟ್ಟು ತಂಡದೊಂದಿಗೆ ಯಾವಾಗಲ್ನ ಆ ನೆನಪಿನಲ್ಲೇ ಮರಳಿ ಹೊರಟಾಗ" ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ " ಅನ್ನುವ ಹಾಡನ್ನೇ ನಂಬಿ ಶುರು ಮಾಡಿದ ಪ್ರಯಾಣ ಸುಖಕರವಾಗಿ ಸಾಗಿದರೆ, ಟೀ ಸಲುವಾಗಿ ನಿಲ್ಲಿಸಿದ ಒಂದು ಧಾಬಾದ " ಹರ ದರ್ದ್ ಕಿ ದವಾ ಹೈ ಮೊಹಮ್ಮದ್ ಕಿ ಶಹರ ಮೇ' ಅನ್ನುವ ಹಾಡು ನಮ್ಮ ಮುಂದಿನ ಪಯಣ ಕ್ಕೆ ಅಭಯವನ್ನ ನೀಡ್ತಾಯಿತ್ತು.

ಇದನ್ನು ಓದಿ: ಬೆವರಿಗಂಟಿದ ಜನರ ಕವಲು ಹಾದಿಯ ದೈವ

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...