ಕಮಲಾದಾಸ್ ಭಾರತೀಯ ಸಾಹಿತ್ಯ ಜಗತ್ತಿನಲ್ಲಿಯೇ ಖ್ಯಾತ ಹೆಸರು


'ನಿನಗೆ ನನ್ನ ಅನುಮತಿ ಬೇಕಾಗಿಲ್ಲ. ನೀನು ನನ್ನ ಯಾವ ಕತೆಯನ್ನಾದರೂ ಅನುವಾದಿಸಿ ಪತ್ರಿಕೆಗಳಿಗೆ ಕಳಿಸ್ಕೊ' ಎಂದು ’ಖಾಲಿ ಚೆಕ್' ಕೊಟ್ಟರು. ಅಂತೆಯೇ ನಾನು ಅವರ ಅನೇಕ ಕತೆಗಳನ್ನು ಕರ್ನಾಟಕದ ವಿವಿಧ ಪತ್ರಿಕೆಗಳಿಗೆ ಕಳುಹಿಸುತ್ತಾ ಬಂದೆ ಎನ್ನುತ್ತಾರೆ' ಕೆ.ಕೆ. ಗಂಗಾಧರನ್. ಅವರು ‘ಸಹೃದಯರು ಮತ್ತು ಇತರೆ ಕಥೆಗಳು’ ಕೃತಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.

ಕಮಲಾದಾಸ್ ಭಾರತೀಯ ಸಾಹಿತ್ಯ ಜಗತ್ತಿನಲ್ಲಿಯೇ ಖ್ಯಾತ ಹೆಸರು. ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ಬರೆಯುತ್ತಿದ್ದರು. ಅವರ ಬಹುತೇಕ ಕವನಗಳು ಇಂಗ್ಲಿಷಿನಲ್ಲಿ ಪ್ರಕಟವಾಗುತ್ತಿದ್ದವು. ಕೆಲವು ಸಾಹಿತ್ಯ ಮಿತ್ರರು ಅವರ ಇಂಗ್ಲಿಷ್ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಆದರೆ ಪುಸ್ತಕ ರೂಪದಲ್ಲಿ ಹೊರಬಂದಿಲ್ಲ.

1990ರಲ್ಲಿ ಕಮಲಾದಾಸ್‌ರವರ 'ಸ್ವಾತಂತ್ರ್ಯ ಹೋರಾಟಗಾರನ ಮಗಳು” ಎಂಬ ಕತೆಯನ್ನು ಅವರ ಅನುಮತಿಯೊಂದಿಗೆ ನಾನು ಅನುವಾದಿಸಿದ್ದೆ. ಅದು 'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಅದರ ನಂತರ ಅವರ ಕಿರುಕಾದಂಬರಿ 'ಚಂದನದ ಮರಗಳು'ನ್ನು ಅನುವಾದಿಸಿ ಅನುಮತಿಗಾಗಿ ಕೇಳಿಕೊಂಡಾಗ ಅವರ ಪತಿ ಮಾಧವದಾಸ್‌ರವರು ಒಂದು ಸುದೀರ್ಘ ಪತ್ರ ಬರೆದು 'ಸ್ವಾತಂತ್ರ್ಯ ಹೋರಾಟಗಾರನ ಮಗಳು' ಕತೆಯನ್ನು ಅನುಮತಿಯಿಲ್ಲದೆ ಪ್ರಕಟಿಸಿದ್ದೀನೆಂದು ಆಕ್ಷೇಪ ವ್ಯಕ್ತಪಡಿಸಿದರು. ಅಸಲಿಗೆ ಅನುಮತಿಗಾಗಿ ಪತ್ರ ಬರೆದಾಗ ಸ್ವವಿಳಾಸದ ಒಂದು ಲಕೋಟೆಯನ್ನು ಜೊತೆಗಿರಿಸುವುದು ನಾನು ರೂಢಿಸಿಕೊಂಡಿದ್ದೆ. ಮೂಲ ಲೇಖಕರು ಸಾಮಾನ್ಯವಾಗಿ ಪ್ರತ್ಯೇಕವಾಗಿ ಅನುಮತಿ ಪತ್ರ ಬರೆಯುತ್ತಿದ್ದರು. ಆದರೆ ಕಮಲಾದಾಸ್‌ರವರು ನಾನು ಬರೆದ ಪತ್ರದ ಮೇಲೆಯೇ Permission Granted ಎಂದು ಬರೆದು ಕಳುಹಿಸಿದ್ದರು. ನಾನು ಇಷ್ಟೆಲ್ಲಾ ಅವರ ಪತಿಗೆ ಪತ್ರ ಬರೆದು ತಿಳಿಸಿದರೂ ಅವರು ನಂಬಿದಂತೆ ತೋರಲಿಲ್ಲ.

ಅನಂತರ ಸ್ವತಃ ಕಮಲಾದಾಸ್‌ರವರು ಬೆಂಗಳೂರಿನ ಸೆನಟ್ ಹಾಲ್‌ನಲ್ಲಿ ಸರ್ವಭಾಷಾ ಸಾಹಿತಿಗಳ ಒಂದು ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಅಂದೇ ನಾನು ಅವರನ್ನು ಭೇಟಿ ಮಾಡಿ ಅವರ ಅನುಮತಿಯ ವಾಕ್ಯವನ್ನು ತೋರಿಸಲು ಹೋದೆ. ಆದರೆ ಕಮಲಾದಾಸ್ ಅದನ್ನು ಗಮನಿಸದೆ ಎರಡೂ ಭಾಷೆಗಳ ಪರಿಚಯವಿರುವ ನನ್ನನ್ನು ಹೊಗಳಿ ಆ ಸಭೆಗೆ ಬಂದಿದ್ದ ಕವಿ ರಾಮಚಂದ್ರ ಶರ್ಮ, ಕಾದಂಬರಿಕಾರ ಎಸ್.ಎಲ್. ಭೈರಪ್ಪನವರಿಗೆ My Translater ಎಂದು ಪರಿಚಯಿಸಿದರು. ಆತನಕ ನನ್ನ ಮನಸ್ಸಿನಲ್ಲಿ ಮಡುಗಟ್ಟಿದ್ದ ಆತಂಕಗಳೆಲ್ಲಾ ಒಮ್ಮೆಗೆ ಹೊರಗಾಗಿ ಮನಸ್ಸು ಹಗುರವಾಯಿತು.

ಅನಂತರ ಅವರು ನನ್ನತ್ತ ತಿರುಗಿ, “ನಿನಗೆ ನನ್ನ ಅನುಮತಿ ಬೇಕಾಗಿಲ್ಲ. ನೀನು ನನ್ನ ಯಾವ ಕತೆಯನ್ನಾದರೂ ಅನುವಾದಿಸಿ ಪತ್ರಿಕೆಗಳಿಗೆ ಕಳಿಸ್ಕೊ' ಎಂದು ’ಖಾಲಿ ಚೆಕ್' ಕೊಟ್ಟರು. ಅಂತೆಯೇ ನಾನು ಅವರ ಅನೇಕ ಕತೆಗಳನ್ನು ಕರ್ನಾಟಕದ ವಿವಿಧ ಪತ್ರಿಕೆಗಳಿಗೆ ಕಳುಹಿಸುತ್ತಾ ಬಂದೆ. ಸುಮಾರು ಹದಿನೈದು ವರ್ಷಗಳ ಹಿಂದೆ ಹೇಮಂತ ಸಾಹಿತ್ಯದ ವೆಂಕಟೇಶ್‌ರವರು ಕಮಲಾದಾಸ್‌ರವರ ಸಮಗ್ರ ಕತೆಗಳನ ಅನುವಾದಿಸುವಂತೆ ನನಗೆ ಒಪ್ಪಿಸಿದರು. ಅಂತೆಯೇ 101 ಕತೆಗಳ ಒಂದು ಕಥಾಸಂಗ್ರಹ ಹೇಮಂತ ಸಾಹಿತ್ಯದವರು ಪ್ರಕಟಿಸಿದರು. ಅದರ ನಂತರ ಅವರು ಕಮಲಾದಾಸ್‌ರವರ ಕತೆಗಳನ್ನು ಪ್ರಕಟಿಸಲು ಆಸಕ್ತಿ ತೋರಲಿಲ್ಲ. ಅವರ ನಂತರ ವಸಂತ ಪ್ರಕಾಶನದ ಮುರಳಿಯವರು 74 ಕತೆಗಳನ್ನು ಎರಡು ಪುಸ್ತಕಗಳಲ್ಲಿ ಅಚ್ಚು ಹಾಕಿಸಿದರು. ಅಷ್ಟರಲ್ಲಾಗಲೇ ಕಮಲಾದಾಸ್‌ರವರು ತೀರಿಕೊಂಡಿದ್ದರು. ಅವರ ಕೊನೆಯ ಮಗ ಪೂನಾ ನಿವಾಸಿ ಜೈಸೂರ್ಯದಾಸ್ ಅದಕ್ಕೆ ಅನುಮತಿಯನ್ನು ನೀಡಿದ್ದರು.

2023ರಲ್ಲಿ ಕಮಲಾದಾಸ್‌ರವರ 30 ಕತೆಗಳನ್ನು ಅಂಕಿತ ಪುಸ್ತಕದವರು ಪ್ರಕಟಿಸಿದರು. ಇದೀಗ ವಂಶಿ ಪ್ರಕಾಶನದವರು 30 ಕತೆಗಳನ್ನು ಪ್ರಕಟಿಸುತ್ತಿದ್ದಾರೆ. ಕಮಲಾದಾಸ್‌ರವರು ಬರೆದ ಒಟ್ಟು 243 ಕತೆಗಳ ಪೈಕಿ 235 ಕತೆಗಳನ್ನು ನಾನು ಕನ್ನಡಕ್ಕೆ ಅನುವಾದಿಸಿರುವೆ ಎಂದು ತಿಳಿಸಲು ಹೆಮ್ಮೆಯೆನಿಸುತ್ತದೆ.

ಕೃತಜ್ಞತೆಗಳು

1. ಡಿ.ಟಿ.ಪಿ. ಮಾಡಿದ ಶ್ರೀ ಎಸ್. ರಾಜು ಅವರಿಗೆ.

2. ಇಲ್ಲಿರುವ ಕೆಲವು ಕತೆಗಳನ್ನು ಸುಧಾ, ಮಯೂರ, ತರಂಗ, ಉದಯವಾಣಿ, ಕನ್ನಡಪ್ರಭ ಮುಂತಾದ ಕನ್ನಡ ಪತ್ರಿಕೆಗಳು ಪ್ರಕಟಿಸಿ ಪ್ರೋತ್ಸಾಹಿಸಿದ್ದಕ್ಕೆ.

3. ಮುಖ್ಯವಾಗಿ ಈ ಎಲ್ಲಾ ಕತೆಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಿದ ಪ್ರಕಾಶಕರಿಗೆ.

4. ಮುಖಪುಟವನ್ನು ರಚಿಸಿದ ಕಲಾವಿದರಿಗೆ.

5. ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಿಗೆ ಕಳುಹಿಸಲು ಡಿ.ಟಿ.ಪಿ. ಮಾಡಿಕೊಡುತ್ತಿದ್ದ ಗೆಳೆಯರಾದ ಕೆ. ಪ್ರಭಾಕರನ್‌ರವರಿಗೆ.

6. ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ನನ್ನ ಬರವಣಿಗೆಯನ್ನು ತಿದ್ದಿದ ಓದುಗ ಪ್ರಭುಗಳಿಗೆ.

-ಕೆ.ಕೆ. ಗಂಗಾಧರನ್

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...