ಕನಸಿನೊಳಗಿನ ನನಸು

Date: 02-01-2022

Location: ಬೆಂಗಳೂರು


‘ಅದು ಜಗದ ಕಾರುಣ್ಯವನ್ನು ಹರಳುಗಟ್ಟಿಸುವ ಇನ್ನೊಂದು ತುದಿ, ಅದನ್ನು ಪ್ರಾರ್ಥನೆಯ ಹಾಗೆ ಎದೆಯೊಳಗೆ ಇಳಿಸಿಕೊಳ್ಳಬೇಕು ಎನ್ನುವುದು ಮಾತ್ರ ನನಗೆ ಗೊತ್ತಾಗಲಿಲ್ಲ’ ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರ ‘ತೇಲುವ ಪಾದಗಳು’ ಅಂಕಣದಲ್ಲಿ ತಮ್ಮ ಬಾಲ್ಯಕಾಲದ ವಿಭಿನ್ನ ಅನುಭವಗಳನ್ನು ಕಥನಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ರಾತ್ರಿಯೆಲ್ಲಾ ಕನಸೋ ಕನಸು. ಅಂಥಾ ಕನಸುಗಳನ್ನು ನಾನು ಅದುವರೆಗೂ ಕಂಡೆ ಇರಲಿಲ್ಲ. ಬೆಳಕಿನ ಗೋಲಗಳು ನನ್ನ ಮುಂದೆ ಆಡುತ್ತಾ ಆಡುತ್ತಾ ನನ್ನನ್ನು ಆವರಿಸಿಕೊಂಡು ಕಣ್ಣುಗಳಿಗೆ ಶ್ರಮದಾಯಕವಾಗಿ ಮುಚ್ಚಿಕೊಂಡರೆ ಮತ್ತೆ ತೆರೆದರೆ ಅಲ್ಲಿ ಗೋಲ ಬೆಳಕೇ ಇಲ್ಲ. ಆದರೆ ಬೆಳಕು ಮಾತ್ರ ತಗ್ಗದೆ ಅದು ಬರುವ ಕಡೆಗೆ ನೋಡಿದರೆ ಅದು ನದಿಯಂತೆ ಹರಿಯುತ್ತಿತ್ತು. ನದಿಯಂತೆ ಹೇಗೆ ಹರಿಯುತ್ತಾ ಇದೆ ಎಂದು ಬಗ್ಗಿನೋಡಲು ಹೋದರೆ ಅದು ಆಕಾಶವೆಲ್ಲಾ ಎರಚಾಡಿ ನಗುತ್ತಿತ್ತು. ನನಗೆ ತುಂಬಾ ಕಷ್ಟವಾಗುತ್ತಿತ್ತು. ಬೆಳಕನ್ನು ನೋಡುವುದು ಅದು ಕ್ಷಣಕ್ಷಣಕ್ಕೂ ತನ್ನ ರೂಪವನ್ನು ಪರಿವರ್ತಿಸಿಕೊಂಡು ಆಟವಾಡಿಸುತ್ತಿದ್ದುದಕ್ಕೆ ನನಗೆ ಕೋಪ ಬರುತ್ತಿತ್ತು. ಈ ಬೆಳಕಿಗೇನಾಗಿದೆ? ನನ್ನ ಯಾಕೆ ಹೀಗೆ ಆಟ ಆಡಿಸುತ್ತಿದೆ ಎಂದು ರೋಸಿಯೂ ಹೋದೆ.

ನನ್ನೊಳಗಿನ ಕನಲಿಕೆ ಹೆಚ್ಚಾದಂತೆಲ್ಲಾ ಏನೂ ಗೊತ್ತಿಲ್ಲದ ನಾನು ಯಾವುದನ್ನೂ ಸಹಿಸಿಕೊಳ್ಳಲಾಗುತ್ತಿಲ್ಲ. ಪುಟ್ಟ ವಯಸ್ಸು ಇಂಥಾದ್ದನ್ನೆಲ್ಲಾ ಊಹೆಯೂ ಮಾಡಿಕೊಂಡಿರದೆ ಇದ್ದಿದ್ದರಿಂದ ಸುಸ್ತೂ ಆದೆ. ಸುತ್ತಾ ಯಾರೂ ಇಲ್ಲ ನನ್ನ ಕೈ ಹಿಡಿದಿದ್ದ ಮುತ್ತ ಕೂಡಾ. ಮುತ್ತಾ... ಮುತ್ತಾ...ಎಂದು ಅಳಲು ಶುರು ಮಾಡಿದೆ. ನನ್ನ ಅಳು ನನಗೆ ದೊಡ್ಡದಾಗಿ ಕೇಳಿ ಭಯ ಆಗಿಬಿಟ್ಟಿತ್ತು. ನನಗೆ ಬೇರೆ ದಾರಿ ಇರಲಿಲ್ಲ ಅಳುವನ್ನು ನಿಲ್ಲಿಸಿ ಕಣ್ಣನ್ನು ಬಿಗಿಯಾಗಿ ಮುಚ್ಚಿಕೊಂಡು ಒಂದೆಡೆ ಕುಳಿತೆ. ಕುಳಿತೇ ಇದ್ದೆ. ಕಣ್ಣು ಮುಚ್ಚಿದರೂ ಬೆಳಕೇನೂ ನನ್ನ ಬಿಟ್ಟಿರಲಿಲ್ಲ. ಕಣ್ಣು ಮುಚ್ಚಿಕೊಂಡಿದ್ದರೂ ಎಲ್ಲಿ ಸಣ್ಣದಾಗಿ ತೆರೆದರೆ ಸಾಕು ಒಳನುಗ್ಗಿಬರಲಿ ಎಂದು ಕಾಯುತ್ತಿತ್ತು. ಮುಚ್ಚಿದ್ದ ಕಣ್ಣೋಳಗಿನಿಂದ ಹನಿ ಮೂಡಿ ಕೆನ್ನೆಯ ಮೇಲೆ ಜಾರುವಾಗ ಆ ಹನಿಯಲ್ಲಿ ಫಲಿಸಿದ ಬೆಳಕೂ ಕೂಡಾ ನಕ್ಷತ್ರದ ಹಾಗೆ ಹೊಳೆದಿರಬೇಕು.

ನನ್ನ ಸುತ್ತಾ ಇದ್ದ ಬೆಳಕು ಹರಳುಗಟ್ಟಿದ ಹಾಗೆ ಮತ್ತಷ್ಟು ಮತ್ತಷ್ಟು ಪ್ರಖರವಾಗುವಾಗ ನಾನು ಚುಕ್ಕಿಯಷ್ಟು ಸಣ್ಣವಳಾಗುತ್ತಿದ್ದೇನೇನೋ ಅನ್ನಿಸಿತ್ತು. ಎಲ್ಲಾ ಒದ್ದಾಟಗಳನ್ನೂ ದಾಟಿ ಕಾಲ ದೀರ್ಘವಾಗುವಾಗ ಆ ಬೆಳಕಿಗೆ ನಾನು ಹೊಂದಿಕೊಂಡೆನೋ ಇಲ್ಲ ಬೆಳಕೇ ನನಗೆ ಹೊಂದಿಕೊಳ್ಳಲು ಶುರುವಾಯಿತೋ ಗೊತ್ತಾಗಲಿಲ್ಲ. ಇದ್ದಕ್ಕಿದ್ದ ಹಾಗೆ ಬೆಳಕು ನನ್ನನ್ನು ಇಲ್ಲವಾಗಿಸುತ್ತೆ ಎನ್ನುವ ಭಯ ನನ್ನನ್ನು ಬಿಟ್ಟುಹೋಯಿತು. ಮನಸ್ಸಿನ ವೇದನೆ ದೂರವಾಗಿ ಮುಚ್ಚಿದ್ದ ನನ್ನ ಕಣ್ಣುಗಳಲ್ಲಿ ಎಂಥಾದ್ದೊ ದೃಢತೆ ಸಿಕ್ಕುಬಿಟ್ಟಿತ್ತು. ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾತ್ ಮೃತ್ಯೋರ್ ಮುಕ್ಷಿಯ ಮಾಮೃತಾತ್ ಎನ್ನುವ ವಾಣಿ ಕೇಳಿ ಬರಲಾರಂಭಿಸಿತು. ಮುಚ್ಚಿದ ಕಣ್ಣೋಳಗಿನಿಂದ ಹಿಡಿತಕ್ಕೆ ಸಿಗದ ಬೆಳಕು ನಿಧಾನವಾಗಿ ತನ್ನ ತೀವ್ರತೆಯನ್ನು ಕಳಕೊಂಡು ಪ್ರಸನ್ನವಾಗತೊಡಗಿತು ಅನ್ನಿಸಲಿಕ್ಕೆ ಶುರುವಾಯಿತು. ಈಗ ಕಣ್ಣುಗಳನ್ನು ತೆರೆದು ನೋಡಬಹುದು ಎನ್ನುವ ಭಾವನೆ ನನ್ನ ಮನಸ್ಸಿನಲ್ಲಿ ಮೂಡತೊಡಗಿತು. ಕಣ್ಣುಗಳನ್ನು ತೆರೆದೆ ನಿಜ ಯಾವ ಬೆಳಕು ನನ್ನನ್ನು ಹೆದರಿಸಿ ಹೈರಾಣು ಮಾಡಿತ್ತೋ ಅದು ನನ್ನೆದುರು ಸುಮ್ಮನೆ ಕುಳಿತಿತ್ತು. ನಾನು ಕಣ್ಣು ಬಿಡುವುದನ್ನೇ ಕಾಯುತ್ತಿದ್ದಂತೆ ನನ್ನೊಳಗೆ ಪ್ರವೇಶಿಸಿದ ಹಾಗೆ ಅನ್ನಿಸತೊಡಗಿತು. ದೇಹ ಮತ್ತು ಮನಸ್ಸುಗಳೆಲ್ಲಾ ತಿಳಿಯದ ಭಾವದ ಜೊತೆ ಪಯಣಿಸ ತೊಡಗಿತ್ತು. ಆ ರಾತ್ರಿ ಸಂಕಟ ಮತ್ತು ಸುಖದ ಒಟ್ಟು ಮೊತ್ತವಾಗಿತ್ತು.

ನನಗೆ ಚೆನ್ನಾಗಿ ನೆನಪಿದೆ, ಅದು ಮಾತ್ರವಲ್ಲ ಅಲ್ಲಿಂದ ಏನೇನು ನಡೀತೋ ಯಾವುದನ್ನೂ ನಾನು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಓದಿನಲ್ಲೂ ತುಂಬಾ ಸಾಧಾರಣವಾಗಿದ್ದ ನನಗೆ ನೆನಪಿನ ಶಕ್ತಿ ತುಂಬಾ ಕಡಿಮೆಯಿತ್ತು. ಅದಕ್ಕಾಗಿ ನಾನು ಮನೆ ಮತ್ತು ಸ್ಕೂಲಲ್ಲಿ ಎಲ್ಲರ ಹತ್ತಿರ ಬೈಸಿಕೊಳ್ಳುತ್ತಿದ್ದೆ ಕೂಡಾ. ಇದೆಲ್ಲಾ ಆದ ಮೇಲೆ ಓದಿನಲ್ಲಿ ನಾನೇನೂ ಜಾಣೆಯಾಗಲಿಲ್ಲ. ಆದರೆ ಅಸಾಧ್ಯವಾದ ನೆನಪಿನ ಶಕ್ತಿ ಮಾತ್ರ ನನ್ನಲ್ಲಿ ಜಾಗೃತಗೊಂಡಿತ್ತು.

ಖಂಡಿತಾ ಮಾರನೆಯ ಬೆಳಗು ಎಲ್ಲಾ ಬೆಳಗಿನಂತಿರಲಿಲ್ಲ. ಚೆನ್ನಾಗಿ ನೆನಪಿದೆ; ಮೈಪೂರಾ ಸುಖ, ಕಣ್ಣುಗಳಲ್ಲಿ ಎಂಥಾದ್ದೋ ತಿಳಿತನ ಲೋಕವೆಲ್ಲಾ ನನಗೆ ಆ ವರೆವಿಗೂ ತಿಳಿಯದ ಆದರೆ ಹೊಸದೇ ಎನ್ನಿಸುವ ತಿಳಿಬೆಳಕನ್ನು ಹಚ್ಚಿಕೊಂಡಿದೆಯೇನೋ ಎನ್ನುವ ಹಾಗೆ ಅನ್ನಿಸಿತ್ತು. ನನ್ನ ಎಲ್ಲ ಅಂಗಾಂಗಗಳು ಸೂಕ್ಷ್ಮವಾಯಿತೋ ಅಥವಾ ಆ ವಾಸನೆ ತಾನೇ ತಾನಾಗೇ ಇತ್ತೋ ಗೊತ್ತಿಲ್ಲ, ಮೂಗಿಗೆ ಹಿಂದೆಂದೂ ನಾನು ಆಘ್ರಾಣಿಸದೇ ಇದ್ದ ವಾಸನೆ ತಾಕಿ ಮತ್ತೆ ಮತ್ತೆ ಉಸಿರನ್ನು ಒಳಗೆ ಎಳೆದುಕೊಂಡಿದ್ದೆ. ಅದು ನನ್ನನ್ನು ಮತ್ತೆ ಇನ್ಯಾವುದೋ ಲೋಕಕ್ಕೆ ನನ್ನ ಕರೆದೊಯ್ಯಲು ತಯಾರಿ ಮಾಡುತ್ತಿತ್ತು.

ಸಮಯ ಎಷ್ಟಾಗಿದೆ ಅಂದುಕೂಂಡಿದ್ದಿಯಾ? ಸೊಣಸೊಣ ಅಂದುಕೊಂಡು ಮಲಗೇ ಇದ್ದೀಯಲ್ಲಾ? ಹೀಗೇ ಆದರೆ ಕಷ್ಟ, ಮಕ್ಕಳು ಚುರುಕಾಗಿರಬೇಕು. ಶತಮೊದ್ದು ಎನ್ನುವ ಅಮ್ಮನ ಬೈಗುಳಕ್ಕೆ ಎದುರಾಗಿ ಮಲಗಿದ್ದ ಹಗ್ಗದ ಮಂಚದ ಮೇಲಿಂದಲೇ ಆಕಾಶ ನೋಡಿದೆ. ಸೂರ್ಯ ನಕ್ಕ ನಾನು ಆಗಲೇ ಬಂದು ತುಂಬ ಹೊತ್ತಾಗಿದೆ ಎಂದು. ಮುತ್ತಜ್ಜಿ ಇಷ್ಟು ಹೊತ್ತಿನತನಕ ಮಲಗಿರುವುದು ಸಾಧ್ಯವೇ ಇಲ್ಲ. ಗೊತ್ತಿದ್ದರಿಂದಲೋ ಏನೋ ಪಕ್ಕಕ್ಕೆ ತಡಕದೆ ಎದ್ದೆ. ನೆಲಕ್ಕೆ ಕಾಲಿಟ್ಟೆ ಎಲ್ಲವೂ ಮೃದು ಮೃದು. ಹತ್ತಿಯಷ್ಟು ನೆಲಕ್ಕೆ ತಾಕಿದ ಕಾಲು ಹೇಳುತ್ತಿತ್ತು ಭೂಮಿ ಹೂವಿನಷ್ಟು ಮೃದು ಎಂದು. ಮಂಚದಿಂದ ಇಳಿದು ನಡೆಯಲು ಹೋದರೆ, ಸಿನೆಮಾಗಳಲ್ಲಿ ಸ್ಲೋ ಮೋಷನ್‍ನಲ್ಲಿ ಹಾರಿ ಹಾರಿ ಬರುತ್ತಾರಲ್ಲಾ ಹಾಗೆಭೂಮಿಯ ಒಳಗಿನಿಂದ ನನ್ನನ್ನು ಏನೋ ತಳ್ಳುತ್ತಿದೆ ಎನ್ನಿಸಿ, ಎಲ್ಲ ನಿಜವೋ ಕನಸೋ ಎಂದು ಗೊತ್ತಾಗದಂತಾಯಿತು.

ಯಾರ ಹತ್ತಿರ ಹೇಳಲಿ? ಏನನ್ನಾದರೂ ಹೇಳೋಣ ಅಂತ ಅಮ್ಮನ ಹತ್ತಿರಕ್ಕೆ ಹೋದೆ. ಅಮ್ಮ ತಂಗಿಯ ಜಡೆಯನ್ನು ಬಿಗಿಯಾಗಿ ಹೆಣೆಯುತ್ತಿದ್ದಳು. ಅವಳು ಕೂದಲನ್ನು ಎಳೆದು ಹೆಣೆಯುವ ಹೊತ್ತಿಗೆ ತಂಗಿ ಅಯ್ಯೋ ಎಂದು ಚೀರುತ್ತಿದ್ದಳು. ಅಮ್ಮನ ಮನಸ್ಸು ಸರಿಯಿಲ್ಲ ಎನ್ನಿಸಿ ಹಿತ್ತಲಿಗೆ ಹೋಗಿ ಒಲೆಯ ಒಳಗಿಂದ ಎರಡು ಇಜ್ಜಲು ಚೂರನ್ನು ಎಳೆದು ಅದರ ಮೇಲೆ ನೀರನ್ನು ಹಾಕಿದೆ ಚುಯ್ ಎನ್ನುವ ಶಬ್ದದಿಂದ ಹೊಗೆಯನ್ನು ಬಿಡುತ್ತಾ ಕೆಂಪಿದ್ದದ್ದು ಕರ್ರಗಾಯಿತು. ಆಟ ಆಡುವ ಹುಕಿ ಒಳಗಿನಿಂದ ಹಿಟ್ಟಿಕೊಂಡು ಒಲೆಯ ಕೆಂಡವನ್ನೆಲ್ಲಾ ಕೆದಕಿ ನೀರನ್ನು ಹಾಕುತ್ತಾ ಕೆಂಪು ಕಪ್ಪಗಾಗುವ ವಿಸ್ಮಯಕ್ಕೆ ನನ್ನನ್ನೇ ನಾನು ತೆರೆದುಕೊಳ್ಳುತ್ತಿದ್ದೆ. ‘ಹಾಳು ಹುಡುಗಿ ಏನ್ ಮಾಡ್ಬೇಕೋ ಅದನ್ನ ಮಾಡದೆ ಹೀಗೆ ಕೆಲಸಕ್ಕೆ ಬಾರದ್ದನ್ನ ಮಾಡುತ್ತೆ’ ಎಂದು ಅಮ್ಮ ಬೈಯ್ಯ ಹತ್ತಿದಳು. ಅಮ್ಮನ ಬಾಯಿಗೆ ಸಿಕ್ಕರೆ ಜಾಲಾಡಿಸಿ ಬಿಡುತ್ತಾಳೆ. ತಡಮಾಡಿ ಎದ್ದಿರುವುದಕ್ಕೆ ಅವಳಿಗೆ ಕೋಪ ಬಂದಿರುತ್ತೆ. ಅದೂ ಅಲ್ಲದೆ ನಮ್ಮನ್ನೆಲ್ಲಾ ಕರೆದುಕೊಂಡು ಹೋಗಲು ಅಜ್ಜಿಯ ಮನೆಗೆ ಅಪ್ಪ ಬರುವವರಿದ್ದರು. ಅಪ್ಪನಿಗಾದರೂ ಈ ಅನುಭವಗಳನ್ನು ಹೇಳಿಕೊಳ್ಳಬಹುದೇ ಎಂದು ಯೋಚಿಸಿದೆ. ಅದು ಸಾಧ್ಯವಾಗದ ಮಾತು ಎನ್ನಿಸಿತು. ಈಗ ನನಗಿರುವ ದಾರಿ ಒಂದೇ ಮುತ್ತಜ್ಜಿಯನ್ನು ಕೇಳುವುದು; ಇದೆಲ್ಲ ಯಾಕೆ ಹೀಗಾಯಿತು ಎಂದು. ಯೋಚಿಸುತ್ತಲೇ ಇದ್ದಿಲು ಚೂರನ್ನು ತೆಗೆದುಕೊಂಡು ನೆಲಕ್ಕೆ ಒತ್ತಿ ಪುಡಿ ಮಾಡಿ ಅದರಿಂದ ಹಲ್ಲು ಉಜ್ಜತೊಡಗಿದೆ. ಕೈಗಳಿಗೂ ಯಾವುದೋ ಹಗುರತನ. ಗಾಳಿಯಲ್ಲಿ ತಿಕ್ಕಿದ ಹಾಗೆ ಅನ್ನಿಸತೊಡಗಿತು. ಕ್ಷಣ ಗಾಬರಿಗೊಂಡೆ ನನಗೆ ಹಲ್ಲುಗಳೆಲ್ಲಾ ಇದೆಯಾ ಅಥವಾ ಉದುರಿ ಹೋಗಿದೆಯಾ? ಎಂದು. ಹಾಗನ್ನಿಸಿದ್ದೇ ತಡ ಓಡಿ ಹೋಗಿ ಕನ್ನಡಿಯ ಮುಂದೆ ನಿಂತೆ ಎಲ್ಲ ಹಲ್ಲುಗಳೂ ಎಂದಿಗಿಂತ ಹೊಳಪನ್ನು ಸೂಚಿಸುತ್ತಾ ಇರುವ ಜಾಗದಲ್ಲೆ ಇದ್ದದ್ದು ಮಾತ್ರ ದೊಡ್ಡ ಸಮಾಧಾನ ತಂದಿತ್ತು.

ಅಷ್ಟು ಹೊತ್ತಿಗೆ ರಾಮುಡು ಅಂಗಳಕ್ಕೆಲ್ಲಾ ಸೆಗಣಿ ನೀರನ್ನು ಎರಚಲಿಕ್ಕೆ ಬಂದಿದ್ದ. ಜಗುಲಿಯಪಕ್ಕದಲ್ಲಿದ್ದ ಗಡಿಗೆಗೆ ಕೊಟ್ಟಿಗೆಯಿಂದ ಸೆಗಣಿ ತಂದು ಹಾಕಿ ಬಾವಿಯಿಂದ ನೀರನ್ನು ಸೇದಿ ಅದನ್ನು ತಂದು ಗಡಿಗೆಗೆ ಸುರಿದ. ತನ್ನ ನಡುಗುವ ಕೈಗಳಿಂದ ಅಲ್ಲೇ ಪಕ್ಕದಲ್ಲಿ ದಬ್ಬೆಯಂಥಾ ಕೋಲನ್ನು ತೆಗೆದು ಸೆಗಣಿ ನೀರನ್ನು ಬಗ್ಗಡ ಮಾಡಿದ. ರಾಮುಡುಗೇ ಏನಿಲ್ಲವೆಂದರೂ ಎಂಬತ್ತು ಇರಬೇಕು. ಮುತ್ತಜ್ಜಿಗೆ ತೊಂಬತ್ತು ದಾಟಿದೆ ಎಂದು ಹೇಳುತ್ತಿದ್ದುದನ್ನು ಕೇಳಿದ್ದೆ. ಅವನು ನಡುಗುವ ಕೈಗಳಿಂದ ಅಂಗಳದ ತುಂಬಾ ಸೆಗಣಿ ನೀರನ್ನು ಚೆಲ್ಲುತ್ತಿದ್ದರೆ, ಈ ತಾತ ಯಾಕೆ ಹೀಗೆ ಕೆಲಸ ಮಾಡಬೇಕು? ಎನ್ನಿಸುತ್ತಿತ್ತು. ರಾಮುಡು ಬಡವನಲ್ಲ, ಅವನಿಗೆ ಇಪ್ಪತ್ತು ಎಕರೆ ಜಮೀನಿತ್ತು. ಮೂವರು ಮಕ್ಕಳು ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಯಾವ ಕೊರತೆಯೂ ಅವನಿಗೆ ಇರಲಿಲ್ಲ. ಬೇಡವೆಂದರೂ ಬರುತ್ತಿದ್ದ. ಬಂದವ ಮುತ್ತಜ್ಜಿಯ ಹತ್ತಿರ ಮಾತಾಡುತ್ತಿದ್ದ ಎಲ್ಲ ಗುಸುಗುಸು ಪಿಸು ಪಿಸು. ಅವರಿಬ್ಬರಿಗೆ ಏನಿತ್ತೋ ಮಾತನಾಡಲಿಕ್ಕೆ? ನನ್ನನ್ನು ನೋಡಿದ ತಕ್ಷಣ ಪಾಪಾ ರಂಗೋಲಿ ಬಿಡು ಎಂದ. ನನಗೆ ಬರಲ್ಲ ಎಂದು ಒಳಗೆ ನಡೆದಿದ್ದೆ. `ಗೆರೆ ಒಳಗೆ ಹೊರಗೆ ಎರಡೂ ಕಡೆ ಸರಿಯಾಗಬೇಕು ಪಾಪ ಇಲ್ಲದಿದ್ದರೆ ನಿನಗಾಗಿದೆಯಲ್ಲಾ ಹೀಗೇ ಆಗುತ್ತೆ’ ಎಂದ. ನನಗೇನಾಗಿದೆ? ಏನಾಗಿದೆ ಎಂದು ಕೇಳಬೇಕು ಎಂದು ತಿರುಗಿದೆ. ಬೊಚ್ಚುಬಾಯಲ್ಲಿ ನಗು ತುಂಬಿಕೊಂಡಿದ್ದ. ಇಲ್ಲ ಇವನನ್ನು ಕೇಳುವುದು ಬೇಡ ನನ್ನ ನೋಡಿ ನಗ್ತಾ ಇದಾನೆ ಎಂದುಕೊಳ್ಳುತ್ತಾ ಉತ್ತರ ಕೊಡದೆ ಒಳಗೆ ನಡೆದೆ.

ಅಡುಗೆ ಮನೆಗೆ ಹೋಗುವಾಗಲೇ ಮುತ್ತಜ್ಜಿ ಬಿಸಿನೀರನ್ನು ಕಾಯಿಸಿ ಡಿಕಾಕ್ಷನ್ ಹಾಕ್ತಾ ಇದ್ದಳು. ಮುತ್ತಜ್ಜಿ ಮಡಿಯುಟ್ಟಿದ್ದರಿಂದ ಬಾರೇ ತಗೋ ಎನ್ನುತ್ತಾ ಕಾಫಿಯ ಲೋಟಕ್ಕೆ ಹೆಚ್ಚು ಹಾಲನ್ನು ಬೆರೆಸಿ ಮುಂದಕ್ಕೆ ತಳ್ಳಿದಳು. ಗೋಡೆಗೆ ಆನಿಸಿದ್ದ ಮಣೆಯನ್ನು ನೆಲಕ್ಕೆ ಹಾಕಿ ಕೂತು ಕೇಳಲೋ ಬೇಡವೋ ಎನ್ನುತ್ತಾ ಲೋಟವನ್ನು ಕೈಗೆ ಎತ್ತಿಕೊಂಡೆ.ಮುತ್ತಜ್ಜಿ ನನ್ನ ಗಮನಿಸುತ್ತಿಲ್ಲ ಅನ್ನಿಸಿತು. ಮುತ್ತೆ ಎಂದೆ. ಅವಳು ನನ್ನ ಮಾತಿಗೆ ಪ್ರತಿಕ್ರಿಯಿಸಲಿಲ್ಲ. ಬದಲಿಗೆ ತನ್ನ ಪಾಡಿಗೆ ತಾನು ಬೆಳಕು ಬರೋದು ಮುಖ್ಯವಲ್ಲ. ಬೆಳಕಿನ ಕಿಂಡಿಗಳನ್ನು ತೆರೆಯೋಕ್ಕೆ ಮಾತ್ರ ನನ್ನಿಂದ ಆಗುತ್ತೆ. ಅಲ್ಲಿಂದ ಮುಂದಕ್ಕೆ ಅವರವರೇ ಹೋಗಬೇಕು ಎಂದು ಗೊಣಗಿದ್ದಳು. ನನಗೆ ಅಳು ಬಂದಿತ್ತು ನನಗೇ ಯಾಕೆ ಹೀಗಾಗುತ್ತೆ ಅಂತ ಎಂದು. ನಾನು ಗೋಳಾಡುತ್ತಾ ಮುತ್ತೆ ಎಂದೆ. ಮುತ್ತಜ್ಜಿ ನನ್ನೇ ನೋಡುತ್ತಾ `ರಾತ್ರಿ ನೀಲಿ ನಕ್ಷತ್ರ ನೋಡಿದ್ಯಲ್ಲಾ ಅದಕ್ಕೆ ಇದೆಲ್ಲಾ ಆಗ್ತಾ ಇದೆ. ಹೆದ್ರುಕೋ ಬೇಡ ಎಲ್ಲಾ ಸರಿಯಾಗುತ್ತೆ’ ಎಂದಳು. ಅವಳ ಕಣ್ಣುಗಳಲ್ಲಿ ಮತ್ತೆ ನೀಲಿ ನಕ್ಷತ್ರ ಕಾಣುತ್ತಾ ಎಂದು ಎಂದು ನೋಡಿದೆ, ಕಾಣಲಿಲ್ಲ. ಮುತ್ತಜ್ಜಿ ನನ್ನ ನೋಡಿ ನಕ್ಕಳು. ಅಂದರೆ ನನಗೆ ಏನಾಗುತ್ತಿದೆ ಅದೆಲ್ಲಾ ಮುತ್ತಜ್ಜಿಗೆ ಗೊತ್ತಿದೆ, ಅಷ್ಟೇ ಅಲ್ಲ ಇದೆಕ್ಕೆಲ್ಲಾ ಇವಳೇ ಕಾರಣ ಎನ್ನಿಸಿ ಮತ್ತೆ ಪ್ರಶ್ನಿಸಲಿಕ್ಕೆ ಪ್ರಯತ್ನಿಸಿದೆ. ಆಗಲಿಲ್ಲ. ಲೋಟದಲ್ಲಿ ಕಾಫಿಯನ್ನು ಹಿಡಿದು ತಲಬಾಗಿಲ ಕಡೆಗೆ ಹೊರಟಳು. ತುಸುವೇ ಬಾಗಿದ್ದ ಅವಳ ಸೊಂಟ ಕಾಫಿಯನ್ನು ಹಿಡಿದಿದ್ದರಿಂದ ಇನ್ನೂ ಸ್ವಲ್ಪ ಬಾಗಿದೆಯೇನೋ ಎಂದೆನ್ನಿಸುತ್ತಿತ್ತು. ಕಾಫಿ ಲೋಟವನ್ನು ಹಿಡಿದು ನಾನೂ ಮುತ್ತಜ್ಜಿಯ ಹಿಂದೇ ಹೊರಟೆ.

ತಲಬಾಗಿಲನ್ನು ದಾಟಿ ಹೊರಗೆ ಬಂದ ಮುತ್ತಜ್ಜಿ ರಾಮುಡೂಗೆ ಕಾಫಿಯನ್ನು ಕೊಟ್ಟಳು. ಅವನು ಹೆಗಲ ಮೇಲಿನ ಬಟ್ಟೆಯಿಂದ ನೆಲದ ದೂಳನ್ನು ಝಾಡಿಸಿ ಕಟ್ಟೆಗೆ ಕೂತ. ಸೆಗಣಿಯ ಘಮಲು ಅಂಗಳವನ್ನು ಆವರಿಸಿತ್ತು. `ಅಮ್ಮಾ ಏನೋ ಆಗಿದೆ’ ಎಂದ ರಾಮುಡುವಿನ ಮುಖ ಅಲೌಕಿಕವಾಗುತ್ತಿತ್ತು. ಮುತ್ತಜ್ಜಿ `ಯಾರ ಹಣೆಯಲ್ಲಿ ಏನು ಬರೆದಿರುತ್ತೋ ಅದು ಆಗುತ್ತೆ. ಸಿಕ್ಕಿದ್ದೆಲ್ಲಾ ವಜ್ರವಾಗಲ್ಲ. ಜೀವವನ್ನು ಪಣಕ್ಕಿಟ್ಟು ವಜ್ರ ಮಾಡಿಕೊಳ್ಳಬೇಕು. ಅದು ಅವರವರ ಪುಣ್ಯ’ ಎಂದಳು.

ಮುತ್ತಜ್ಜಿ ಇದೇ ಮಾತುಗಳನ್ನು ಆಡಿದಳು ಎಂದಲ್ಲ. ಅಥವಾ ಅವಳು ಆಡಿದ ಎಲ್ಲಾ ಮಾತುಗಳೂ ನನಗೆ ಅರ್ಥ ಆಗಿದೇ ಎಂತಲೂ ಅಲ್ಲ ಅದರ ಭಾವ ಮಾತ್ರ ಹೀಗೆ ನನ್ನನ್ನು ತಲುಪಿತ್ತು. ನನಗೆ ಗೊತ್ತಾಗದೆ ನನ್ನೊಳಗೆ ಒಂದು ಪಯಣ ಶುರುವಾಗಿತ್ತು. ಅದು ಜಗದ ಕಾರುಣ್ಯವನ್ನು ಹರಳುಗಟ್ಟಿಸುವ ಇನ್ನೊಂದು ತುದಿ, ಅದನ್ನು ಪ್ರಾರ್ಥನೆಯ ಹಾಗೆ ಎದೆಯೊಳಗೆ ಇಳಿಸಿಕೊಳ್ಳಬೇಕು ಎನ್ನುವುದು ಮಾತ್ರ ನನಗೆ ಗೊತ್ತಾಗಲಿಲ್ಲ.

ಈ ಅಂಕಣದ ಹಿಂದಿನ ಬರೆಹಗಳು:
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು



MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...