ಕನ್ನಡ ಸಾಹಿತ್ಯದಲ್ಲಿ ‘ಬುದ್ಧ’ ಪ್ರವೇಶಿಸಿದ್ದು ತುಂಬಾ ತಡವಾಗಿ….!

Date: 07-05-2020

Location: ಬೆಂಗಳೂರು


ಇಂದು ಬುದ್ಧ ಪೂರ್ಣಿಮೆ. ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷದಷ್ಟು ಪ್ರಾಚೀನ ಇತಿಹಾಸವಿದೆ. ಕನಿಷ್ಟ ಒಂದು ಸಾವಿರ ವರ್ಷದ ಅವಧಿಯಲ್ಲಾದರೂ ಬುದ್ಧನು ಕನ್ನಡ ಸಾಹಿತ್ಯದಲ್ಲಿ ವಿಜೃಂಭಿಸಬೇಕಿತ್ತು. ಆದರೆ, ಹಾಗಾಗಲಿಲ್ಲ, ಏಕೆ? ಎಂಬುದು ಇಲ್ಲಿಯ ಜಿಜ್ಞಾಸೆ.  

1ನೇ ಶತಮಾನದಲ್ಲಿ ಆಶ್ವಘೋಷ ಎಂಬಾತ ಬುದ್ಧನ ಮೌಲ್ಯಯುತ ಜೀವನ ವೃತ್ತಾಂತ ಕುರಿತು ಸಂಸ್ಕೃತದಲ್ಲಿ ಅಭಿಯಾನ ಎಂಬಂತೆ ಸಾಹಿತ್ಯ ರಚನೆ ಮಾಡಿದ್ದ. 12ನೇ ಶತಮಾನದವರೆಗೂ ಬೌದ್ಧ ಧರ್ಮವು ಚಕ್ರವರ್ತಿ ಆಶೋಕನ ಅಧಿಪತ್ಯದ ಪ್ರಭಾವದಿಂದ ಕರ್ನಾಟಕದಲ್ಲಿ ಉಳಿದು ಬಂದಿತ್ತಾದರೂ, ಕನ್ನಡ ಸಾಹಿತ್ಯ ಪ್ರವೇಶಿಸಿದ್ದು ತೀರಾ ವಿಳಂಬವಾಗಿ! 

ಸಾಮಾಜಿಕ ಅನಿಷ್ಟ-ಮೌಢ್ಯಗಳ ನಿವಾರಣೆಗೆ ಕನ್ನಡ ಸಾಹಿತ್ಯದಲ್ಲಿ ಬಸವಣ್ಣನಂತಹ ಸುಧಾರಣವಾದಿಗಳ ಪ್ರವೇಶವನ್ನು ಕಾಣಬಹುದು. ಆದರೆ, ಬುದ್ಧನಂತಹ ಮಾನವತಾವಾದವು ಕನ್ನಡ ಸಾಹಿತ್ಯ ಪ್ರವೇಶಕ್ಕೆ ಏಕೆ ವಿಳಂಬವಾಯಿತು ಎಂಬುದು ಅಧ್ಯಯನದ ವಸ್ತು.

ಅತ್ಯಂತ ಪ್ರಾಚೀನವಾದ ಯಾವುದೇ ಜೀವ ಪರ ಸಾಹಿತ್ಯದ ಪ್ರಕಾರವಿದ್ದರೂ ಸಂಸ್ಕೃತ ಸಾಹಿತ್ಯ ನಿರ್ಮಾಪಕರು, ತತ್ವಜ್ಞಾನಿಗಳು ಹೊರತುಪಡಿಸಿದರೆ ಬುದ್ಧನ ಬೋಧೆಗಳೇ ಮೊದಲು ಎನ್ನುವಷ್ಟು ಪ್ರಭಾವಿಯಾಗಿವೆ. ಸಂಸ್ಕೃತ ಪ್ರಾಬಲ್ಯದ ಅಂದಿನ ದಿನಗಳಲ್ಲಿರುವ ಧರ್ಮ ಪ್ರಚಾರ-ಪ್ರಸಾರ ಕಾರ್ಯಕ್ಕೆ ಪರ್ಯಾಯವಾಗಿ ಬುದ್ಧನ ಬೋಧೆಗಳಿಗೆ ವೇಗ ಸಿಗಲಿಲ್ಲವೇಕೆ? ಇಡೀ ದೇಶದ ಸಾಹಿತ್ಯ ಚರಿತ್ರೆಯಲ್ಲಿ ಬೌದ್ಧ ಧರ್ಮ ಮತ್ತು ಗೌತಮ ಬುದ್ಧ ಇರಲೇ ಇಲ್ಲ ಎಂಬ ಶೂನ್ಯ ನಿರ್ಮಾಣವಾಗಿದ್ದು ಹೇಗೆ, ಯಾರು ಕಾರಣರು ಮತ್ತು ಯಾವ ರೀತಿ ಒಂದು ಧರ್ಮದ ಪರಿಶುದ್ಧವಾದ ಬೋಧೆಗಳ ಧ್ವನಿ ಅಡಗಿಸಲಾಯಿತು ಎಂಬುದು ಪ್ರಶ್ನೆ. 

10 ರಿಂದ 12ನೇ ಶತಮಾನವು ಹಳಗನ್ನಡ ಸಾಹಿತ್ಯ ಅವಧಿ ಎಂದು ಗುರುತಿಸುತ್ತೇವೆ.ಇಲ್ಲಿಯೂ ಬುದ್ಧನ ಬೋಧೆ ಶಾಸನದಲ್ಲಿ ಇಲ್ಲವೇ ಗರಿಗಳಲ್ಲಾಗಲಿ ಕಾಣದು. ಕನ್ನಡ ಸಾಹಿತ್ಯ ಪ್ರವೇಶದ ವಿಷಯದಲ್ಲಿ ವಿಳಂಬವಾಗಿದ್ದೇಕೆ ಎಂಬುದು ಅಧ್ಯಯನ ಯೋಗ್ಯ ವಿಷಯವೇ ಆಗಿದೆ. 

ಬುದ್ಧನ ಪೂರ್ವಜನ್ಮಕ್ಕೆ ಸಂಬಂಧಿಸಿವೆ ಎನ್ನಲಾದ  ಬುದ್ಧನ ಬಗೆಗಿರುವ ಜಾತಕ ಕಥೆಗಳನ್ನು ಕನ್ನಡಕ್ಕೆ ಮೊದಲು ತಂದವರೇ-ಜಿ.ಪಿ. ರಾಜರತ್ನಂ. (ಪಾಳಿ ಭಾಷೆಯ ಮೂಲ ಪಠ್ಯವನ್ನು ಡೆನ್ಮಾರ್ಕಿನ ಫಾಜಬೋಲ್ ಎಂಬಾತ ರೋಮನ್ ಭಾಷೆಯಲ್ಲಿ ಪ್ರಕಟಿಸಿದ್ದು ನಂತರ ಇಂಗ್ಲಿಷಿಗೆ ಅನುವಾದಗೊಂಡಿದ್ದವು). ಬುದ್ಧನ ಜಾತಕಗಳು, ಧರ್ಮದಾನಿ ಬುದ್ಧ, ಚೀನಾ ದೇಶದ ಬೌದ್ಧ ಯಾತ್ರಿಕರು, ಬುದ್ಧ ವಚನ ಪರಿಚಯ, ಬುದ್ಧನ ವರ್ಣವಾದ, ಧರ್ಮಪದ, ಬುದ್ಧನ ಕತೆಗಳು, ಬೌದ್ಧ ಧರ್ಮದ ಇತಿಹಾಸ  ಎಂಬ ಕೃತಿಗಳ ಮೂಲಕ ಬೌದ್ಧ ಧರ್ಮದ ವಿರಾಟ ಸ್ವರೂಪವನ್ನು ಕನ್ನಡಿಗರಿಗೆ ತೋರಿದರು. 

ಹಾಗೆ ನೋಡಿದರೆ, 1907 ರಿಂದ ಕನ್ನಡ ಸಾಹಿತ್ಯದಲ್ಲಿ ಬುದ್ಧನ ಪ್ರವೇಶವಾಗಿದೆ. ಬಿದರೆ ಅಶ್ವತ್ಥ ನಾರಾಯಣರು ಬುದ್ಧ ಗೀತೆ, ಬೌದ್ಧಾವತಾರ, ಧಮ್ಮಪದ ಇತ್ಯಾದಿ, ಸೌಂದರಾನಂದ ಹಾಗೂ ಬುದ್ಧನ ಚರಿತೆಗಳು ಶೀರ್ಷಿಕೆಯಡಿ ಎಸ್.ವಿ.ಪರಮಶ್ವರ ಭಟ್ಟ, ಕಡವ ಶಂಭು ಶರ್ಮಾ, ಎಲ್. ಬಸವರಾಜು ಅವರ ಪ್ರತ್ಯೇಕ ಕೃತಿಗಳು, ಗೋವಿಂದ ಪೈ ಅವರ ವೈಶಾಖಿ ಅಥವಾ ಬುದ್ಧನ ಕೊನೆಯ ದಿನ (ಖಂಡಕಾವ್ಯ) ಪ್ರಕಟಗೊಂಡಿವೆ.  

ಕುವೆಂಪು ಅವರ ‘ಮಹಾರಾತ್ರಿ’ ನಾಟಕದಲ್ಲಿ ರಾಜ್ಯ ತ್ಯಾಗದ ಚಿತ್ರಣವಿದೆ. ಅವರು ಕನ್ನಡ ಸಾಹಿತ್ಯ ನೀಡಿರುವ ಪಂಚಮಂತ್ರಗಳು, ವಿಶ್ವ ಮಾನವ ಸಂದೇಶದ ತತ್ವಗಳು ಬಹುಪಾಲು ಬುದ್ಧನ ಬೋಧನೆಯನ್ನು ಅವಲಂಬಿಸಿವೆ. ಕಾನೂರು ಹೆಗ್ಗಡತಿ (1936) ಕಾದಂಬರಿಯ ನಾಯಕ ಹೂವಯ್ಯ ಬುದ್ಧನ ವಿಚಾರದ ಪ್ರತೀಕವಾಗುತ್ತಾನೆ.

ದ.,ರಾ.ಬೇಂದ್ರೆ ಅವರಂತೂ ತಮ್ಮ ಕಾವ್ಯದಲ್ಲಿ ‘ಬುದ್ಧ ಬುದ್ಧ, ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ…’ ಎನ್ನುವ ಮೂಲಕ ಯಾವ ಹಗಲು-ರಾತ್ರಿಗಳು, ಬುದ್ಧನ ಬಗ್ಗೆ ಸಾಹಿತ್ಯಾಸಕ್ತರ ಮನೋಜಗತ್ತಿನ ವಿಗ್ರಹದ ಮೇಲೆ ದುಷ್ಪರಿಣಾಮ ಬೀರದ ಹಾಗೆ ಕಟೆದು ನಿಲ್ಲಿಸಿದ್ದಾರೆ. ಯಶೋಧರಾ-(1933) ಎಂಬುದು ಬುದ್ಧನ ಜೀವನ-ಬೋಧನೆ ಕುರಿತ ಮಾಸ್ತಿ ಅವರ ನಾಟಕ. ಸಿ.ಎಚ್. ರಾಜಶೇಖರ ಅವರು ಬುದ್ಧನ ಕುರಿತೇ ಬರೆದ 18 ಸಂಪುಟಗಳು, ಬುದ್ಧನ ಜೀವನ-ಬೋಧೆ ಅರಿಯುವ ಹಾದಿಯಲ್ಲಿ ದಾರಿದೀಪವಾಗಿ ಬೆಳಗುತ್ತಿವೆ. 

ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ-ಎಂಬುದು ಲಂಕೇಶರ ಕೃತಿ. ಡಿ.ಆರ್. ನಾಗರಾಜ್ ಅವರ ‘ಬುದ್ಧನೋ? ಕಾರ್ಲ್‌ಮಾಕ್ಸ್? , ಬಿ.ಆರ್. ಜಯಚಾಮರಾಜೇ ಅರಸ್ ಅವರ (ಮೂಲ: ಥಿಯೋಡೋರ್ ಷೆರ್ಬಾಸ್ಕಿ) ಬೌದ್ಧ ಧರ್ಮದ ಪರಿಕಲ್ಪನೆ, ಎಸ್. ನಟರಾಜ್ ಬೂದಾಳು ಅವರ ನಾಗಾರ್ಜುನನ ‘ಮೂಲ ಮದ್ಯಮಕ ಕಾರಿಕಾ’, ಪ್ರಭುಶಂಕರ ಅವರ -ಅಂಗುಲಿ ಮಾಲಾ, ಪ್ರೇಮಭಿಕ್ಷೆ ಹಾಗೂ ಆಮ್ರಪಾಲಿ,  ಚೆನ್ನಣ್ಣ ವಾಲೀಕಾರರ  ‘ಮ್ಯೋಮಾ ವೋಮ’ ಕಾದಂಬರಿ, ಕೆ.ಎಸ್. ಭಗವಾನ್ ಅವರ ಬುದ್ಧ ಮತ್ತು ಕಾರ್ಲ್‌ಮಾರ್ಕ್ಸ್, ಯಶೋಧರೆ ಮಲಗಲಿಲ್ಲ-ಎಂ.ಎಸ್. ಮೂರ್ತಿ (2007)ಅವರ ಕೇವಲ ನಾಲ್ಕು ದೃಶ್ಯದ ಕಿರು ನಾಟಕ. ಗೌತಮ ಬುದ್ಧ-ಸು.ರುದ್ರಮೂರ್ತಿ ಅವರ (2017) ಕಾದಂಬರಿ, ಕೆ.ಎನ್. ಗಣೇಶಯ್ಯ ಅವರ ‘ಚಿತಾದಂತ’ ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬುದ್ಧ ತನ್ನ ಜೀವನ -ಬೋಧನೆಗಳೊಂದಿಗೆ ಕಂಗೊಳಿಸುತ್ತಿದ್ದಾನೆ. ಕನ್ನಡ ಸಾಹಿತ್ಯದಲ್ಲಂತೂ ಬುದ್ಧ-ಬೋಧೆಯ ವಿವಿಧ ಮಗ್ಗಲುಗಳಲ್ಲಿ ಅಧ್ಯಯನದ ಕ್ಷ-ಕಿರಣಗಳು ಬೀರುತ್ತಿವೆ. ಮಾತ್ರವಲ್ಲ; ಈತನ ಬೋಧೆಯು ವೈಜ್ಞಾನಿಕವಾಗಿದ್ದು, ವಿವಿಧ ವೇದಿಕೆಗಳಲ್ಲಿ ಚಿಂತನ-ಮಂಥನ ನಡೆಸಿದಷ್ಟು ಪ್ರಖರಗೊಳ್ಳುತ್ತಿವೆ-ಭವಿಷ್ಯದ ಜಗತ್ತಿಗೆ ಬುದ್ಧಬೋಧೆ ಒಂದೇ ಬೆಳಕಿನ ಮೂಲ ಎಂಬಂತೆ. 

-ವೆಂಕಟೇಶ ಮಾನು

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...