ಖಂಡಕಾವ್ಯದ ಕಲಿ ಕೆ.ಬಿ.ಸಿದ್ಧಯ್ಯ ಅವರಿಗೆ ಕಾವ್ಯ ನಮನ

Date: 18-10-2019

Location: ಬೆಂಗಳೂರು


ಬಕಾಲದ ಕವಿಗೆ ಕಾವ್ಯ ನಮನ…

ಗಲ್ಲೇಬಾನಿಯ ನೀರು : ಬುದ್ಧ ಬೆಳೆಸಿದ ಪೈರು

ಬಯಲ ಬೇಸಾಯಕ್ಕೆ
ಆದಿ ಜಾಂಬವನು 
ಬುದ್ಧದೇವನು 
ಬಕಾಲದ ಮುನಿಯೂ 
ಆತ್ಮದೊಳಗಿನ ಅನಾತ್ಮದ ರಾಗ ವಿರಾಗಗಳ
ಹುಡುಕಿ ಕರುಣೆಯ ಜಲವನೆರೆದರು

ಬಯಲು ಬಯಲಾಗಿ 
ಒರಟು ಜಡವಾಗಿ ನಡೆವ ನಕಲಾಗಿ
ಬೋಳು ಬೋಳಾಗಿ ಬೆಳೆಯುತಿತ್ತು
ಇಹದ ಪೈರು
ಕತ್ತಲೆಯ ಬೆಳಗಲ್ಲಿ 
ಬೆಳಗು ಮಂಪರಿನಲ್ಲಿ 
ನಳನಳಿಸುವಾಗ 
ಬೇಸಾಯಗಾರರ ಮಾತು ಧ್ಯಾನಕ್ಕೆ ಕೂತಿತ್ತು.

ಕಾಲ ಪಕ್ಷಿಯ ಕೂಗಿ ಕರೆದ 
ಅಲ್ಲಿಗೊಬ್ಬ ಸಾಧು
ಈ ಜಡದ ಊರಿಂದ ದೂರಿಸಿಕೊಂಡು
ಧ್ಯಾನವನು ಹಡೆದವನು 
ಆದಿ ಜಾಂಬವನೆಂದು ಹೊರನೂಕಿದವರ
ಒಳಗಿಟ್ಟು ಧ್ಯಾನಿಸಿದ
ನೆಲದ ದನಿ ಮುನಿಯಾದ ಬೆಳೆಯಾದ

ಈ ಧ್ಯಾನದ ಕಸುವಿಗೆ 
ಈ ಸಂತರ ಒಲವಿಗೆ 
ಒರಟು ಒರಟಾದ ಬಯಲ ಬೇಗೆಗೆ
ಎಲ್ಲವನು ತನ್ನೊಳಗೆ ತರಿಸಿಕೊಂಡ
ಗಲ್ಲೆಬಾನಿಯ ನೀರಿನಿಂದಲೇ
ಹೊಸಪೈರು ಬೆಳೆದ 
ಬುದ್ಧನವತರಿಸಿರಲು ಅವ ಸಿದ್ಧನಾದ
ಜೀವಾಕರ್ಷಣದ ಹೊಂಬಾಳೆಯಾದ

ಬೆಳೆಯ ನೋಡಿದ ಕಾಲ
ಬಕಾಲವ ಕೊಟ್ಟು
ಕಡಿದವರ ಮನೆಗೆ ಕರೆಸಿ
ಗಲ್ಲೆಬಾನಿಯ ಆತ್ಮದ ಪಾಯಸವನುಣಿಸಿ
ಲೋಕಾಪವಾದವನು ಲೋಕಕ್ಕೆ ಬಿಟ್ಟು
ಈಗ ಹೊರಟಿರುವ ಕಾಲ ಇದು
ಮತ್ತೆ ಮುಂದಿನೂರಿಗೆ 
ಇಲ್ಲದವರೆದೆಗಳಲಿ ಇರುವಿಕೆಯ ಬೆಳೆಯಲು
ಒಗ್ಗೂಡುವ ಒಗಟ ಬಿಡಿಸಿ
ಒಳಗೊಳ್ಳಲು ಮರೆಯಾಗದ ಮೌನವ
ಬಡಿದೆಬ್ಬಿಸಲು....

ಹೊರಡುವುದೆಂದರೆ ಪಯಣ
ಬಿಟ್ಟ ಊರಿಗೆ ಕನಸುಗಳೇ ತೋರಣ
ದುಃಖದ ಕಣ್ಣಲ್ಲಿ ಮಹಾನವಮಿಯ ಜೀವದ ಹನಿ
ಬಯಲು ತಂಪಾಗುವ ಆಸೆಯೊಂದೇ ದನಿ...

- ಸತ್ಯಮಂಗಲ ಮಹಾದೇವ

.....................

ಮರೆಯದಲ್ಲೋ ಅಲ್ಲಮ.....

ಯಾರಿಗೆ ಹೇಳಲಿ
ದಕ್ಕಲು ನೋವು
ಯಾರಿಗೆ ಕೇಳಲಿ
ದುಃಖಕೆ ಕಾವು
ಮರೆಯಾದಲ್ಲೊ ಮುನಿ
ಮರೆಯದಲ್ಲೋ ಅಲ್ಲಮ

ಯಾರು ಅರೆಯದ
ಮೂರನೆ ಲೋಕಕೆ
ಬಾರದ ಕಾಲವನೊತ್ತು ನಡೆದೆ
ಅಕಲ ಸಕಲಗಳೆಲ್ಲವನೊತ್ತು
ಬಕಾಲನಾಗಿ ಬಾಳೆದೆಯಲ್ಲೋ

ತಿರುಗಿ ಕೊರಗಿ ಕೂತಲ್ಲಿಯೇ ಕೂತು
ಇಲ್ಲೇ ಇದ್ದೇ ಇಲ್ಲೇ ಬಿದ್ದೇ
ಇಲ್ಲೇ ಮುದ್ದೆ ಇಲ್ಲೇ ನಿದ್ದೇ
ಎದ್ದೆರೇ ಎದ್ದೇ ಬಿದ್ದರೇ ಬಿದ್ದೇ
ಸದ್ದು ಇಲ್ಲದ ಕಾವ್ಯದ ಗದ್ದೆ
ನಿದ್ದೆಯಲ್ಲಿಯು ಎದೆಗೆ ಒದ್ದೇ
ಸದ್ದು ಮಾಡದೆ ಎದ್ದು ನೆಡೆದೆ

ಏಳಿ ಏಳಿ ಕಾವ್ಯವು ಹೇಳಿ
ಇಲ್ಲೇ ಇದ್ದವರು ಇಲ್ಲೇ ಇರುವರು
ಕಳ್ಳರು ಕದೀಮರು ಮಳ್ಳಿಗರಾದರು
ಸುಳ್ಳು ಪೊಳ್ಳರು ಹಳ್ಳಕ್ಕೆ ಜಾರಿದರು

ಗಲ್ಲಿಗಲ್ಲಿಗೂ ಗಲ್ಲೇಬಾನಿ
ಎಲ್ಲವೂ ಹೊತ್ತು ತಿರುಗದ ಮುನಿ
ಮುಲ್ಲಾ ಮಸೀದಿ ಅಲ್ಲಾಸಾನಿ
ಮಂಟೆಯಂತೆ ಎಂಟೆದೆ ಹೊತ್ತು
ಬಂಟನಾದೆಯಲ್ಲೊ ಕೊನೆಗು
ಶೂನ್ಯ ಪೀಠಕೆ ದೊರೆಯಾದಲ್ಲೋ

ಕುಂಟ ಕುರುಡರನು ನೆಡಸೆದೆಯಲ್ಲೊ
ಉಂಟು ನಂಟು ನಿನಗು ಎನಗು
ಅರಟೆ ತರಾಟೆ ಎಲ್ಲವೂ ಮರೆತು
ಮನೆಯ ಮಂಟಪಕೆ ಕೊನೆಗೊ ಹೊರಟೆ
ಆ ಶೂನ್ಯ ಪೀಠಕೆ ಶರಣದಲ್ಲೋ....

-ಕರಿಯ ನಿಷಾದ ಪಾವಗಡ

..................

ಹೀಗೆ ಹೊರಟು ಬಿಡುವುದೇ..?

ಅಲ್ಲಮನ ಬಯಲಲ್ಲಿ
ಬಕಾಲನ ಬಳಿಯಲ್ಲಿ
ಗಲ್ಲೆಬಾನಿ ನೀರಿನಲ್ಲಿ
ದಕ್ಲಾದೇವಿ ಕತೆಯ ಹೇಳಿ
ಮರಳಿ ಬರದ ಮನೆಯ ಕಡೆಗೆ
ಹೀಗೆ ಹೊರಟು ಬಿಡುವುದೇ..?

ಬಯಲಲ್ಲಿ ಬಯಲಾಗಿ
ಬೆಳಕಲ್ಲಿ ಬೆಳಕಾಗಿ
ನೀರಲ್ಲಿ ನೀರಾಗಿ
ಹರಿದು ಹರಿದು ಕಾಲಬುಡಕೆ
ಇಳಿದು ಇಳಿದು ನೆಲದ ಎದೆಗೆ
ಹುಳಿರಂಪಿಗೆ ಚಮ್ಮಾಳಿಗೆಯ
ಕಣ್ಣತೇವ ಕಾಣುವಾಗ
ಹೀಗೆ ಹೊರಟು ಬಿಡುವುದೇ..?

ಈ ನಾಡ ಮಣ್ಣಿನ
ಕಣ್ಣೀರಿನ ಕತೆಯ ಹೇಳಿ
ಜಗದ ಕಣ್ಣು ತೆರೆಸಿದಾತ
ಸೋದರರ ಕಣ್ಣನು ತೆರೆಸಲಾಗಲಿಲ್ಲ
ಅಂತ ಕೊರಗಿದಾತ
ಅವರು ಕಣ್ಣು ಬಿಡುವ ಸಮಯದಲ್ಲೇ
ಹೀಗೆ ಹೊರಟು ಬಿಡುವುದೇ..?

-ಎಸ್ ಕೆ ಮಂಜುನಾಥ್

............

ನಿಮ್ಮನ್ನು ನೆಟ್ಟು ಬಂದಿದ್ದೇವೆ ಗುರುವೇ....

ಈ ಅಕಾಲದಲ್ಲಿ

ನಿಮ್ಮನ್ನು ನೆಟ್ಟು ಬಂದಿದ್ದೇವೆ 

ಗುರುವೇ....

 

ನಿಮ್ಮ ಗಲ್ಲೇಬಾನಿಯಿಂದ

ಜೀವ ಉಳಿಸಿಕೊಂಡವರೆಲ್ಲಾ

ನೀವು ಮೊಳೆಯಲು

ಆಕಾಶ ನೋಡುತ್ತಿದ್ದೇವೆ...

 

ಎದೆಯ ನೆತ್ತರ ಬಸಿದು

ಹೊಕ್ಕುಳ ನಂಟಿನ

ಬೆಳೆ ತೆಗೆದ ದಕ್ಕಲದೇವಿಯ

ಕತೆ ಹೇಳಿದಿರಲ್ಲಾ...

 

ಆ ನೆಪ್ಪುಗಳಿನ್ನೂ ನರಕ್ಕಿಳಿಯಬೇಕು

ಆರಿದ ನೆತ್ತರು ಕಾದು

ಕಣ್ಣ ತುಂಬಬೇಕು...

ಆ ಆಗ ಕಣ್ಣ ಕೊಡಗಳ ತುಂಬಾ

ತುಂತುಂಬಿ ಹುಯ್ದು

ನಿಮ್ಮನ್ನ ಹುಲುಸಾಗಿ ಬೆಳೆಸಿ

ಈ ಅನಾಥ ದಾರಿಗಳಿಗೆಲ್ಲಾ

ಹಬ್ಬಿಸಬೇಕು...

- ಹುಲಿಕುಂಟೆ ಮೂರ್ತಿ 

...........

ಇನ್ನಾರು ನಮಗೆ?

ಕೇಬಿ ಇದ್ದರದರ ತೂಕವೇ ತೂಕ
ಓಲಗ ಚಿಕ್ಕದಿರಲಿ ದೊಡ್ಡದಿರಲಿ
ಪಕ್ಕದಲ್ಲಿ ಕಾವಿಯೇ ಇರಲಿ, ಕಾದಿಯೇ ಬರಲಿ...

ಕಪ್ಪು ಕನ್ನಡಕ ಧರಿಸಿ
ಹುಲಿಯಂತೆ ನುಗ್ಗಿ
ಗಡ್ಡವ ನೀವುತ್ತ ಕುಳಿತಾನೊ ವಿರಾಜಮಾನಿ
ಆಗದವರ ಅಂಗಳಕು ನುಗ್ಗಿ
ಗುಡುಗಾಗಿ ಗುಡುಗಿ
ಕೆಂಡಾವ ಸುರಿಸಿ ಒಬ್ಬೊಂಟಿ ಸರದಾರ ಸಮಾಜಿಕ ನ್ಯಾಯದ ದ್ವಜ ನೆಟ್ಟಾನೊ...

ಕೇಬಿ ಇದ್ದೆಡೆಯಲ್ಲಿ
ಹುಡುಗಾರ ದಂಡು
ಪುಂಡು ಪೋಕರಿಗಳ ಹಿಂಡು
ವರ್ತಮಾನದವರಲ್ಲೂ ಬಿತ್ತಿದ
ಆದ್ಯಾತ್ಮದ ಚೆಂಡು
ಎಲ್ಲೆಲ್ಲೂ"ದರೈಸ್ತ್ರೀ"ಯದೆ ಮೊಂಡು.

ನೊರನೊರಾಂತ ಮೂಳೆ ಕಡಿದು
ಸೊರ ಸೊರಾಂತ ಸಾರ ಕುಡಿದು
ಅಲ್ಲಮ, ಬಕಾಲ, ಕುವುಂಪುನ
ಮಾರ್ನಾಮಿಗೆ ಕರ್ಕಂಡು ಬಂದು 
ಹಟ್ಟಿಯ ಅಂಗಳದಲ್ಲಾಕಿ
ಅಕ್ಷರಕ್ಕಂಟಿದ ಸೂತಕ ಬಿಡಿಸಿದ
ಬಿನ್ನಾಣಗಾರ 
ಕೇಬಿ ಇದ್ದೆಡೆಯಲ್ಲವರ ಮೋಡಿಯೋ ಮೋಡಿ

ದಿಕ್ಕಾರು ದೆಸೆಯಾರು
ಇನ್ನಾರು ನಮಗೆ
ಅಧ್ಯಕ್ಷತೆಯ ಪೀಠ ಏರುವರು
ಬಿಡುಗಡೆಯ ಬಾಗ್ಯ ಕಾಣಿಸುವರು
ಅಪ್ಪುಗೆಯ ಬಿಸುಪಲ್ಲಿ ಪೊರೆಯುವರು ಯಾರು?
ಈ ನಾಡ ಮಣ್ಣಿನಲ್ಲಿ
ಮಣ್ಣಾದ ನಿನ್ನ ಜನರ
ಕೈಹಿಡಿದು ಬುಜ ಸವರಿ
ನಡೆಸುವರು ಯಾರು?

ಬಕಾಲನಾಗಿ ಬಾಳಿ
ದಕ್ಲದೇವಿ ದಿಕ್ಕನು ತೋರಿ
ಗಲ್ಲೆಬಾನಿಯ ದ್ರವ್ಯವ ನಾಡೆಲ್ಲ 
ಹರಡಿ
ಅಂಕಾಳಿ ಆಲ
ಮಧ್ಯದಲ್ಲಿ ಅನಾತ್ಮ ನ
"ಅಆ ಮಂಟಪ"
ಬದುಕಲ್ಲು ಸಾವಲ್ಲು
ಕಾವ್ಯವನೆ ಬರೆದವರೆ
ಪರಂಪರೆಯನೆ ತಂದವರೆ
ನೀವಿಲ್ಲದ ನಾವು ಬರಿ ಬೋಳು

ಕೇಬಿ ಇರದ ನಾಡು
ಬೆಂಗಾಡ ಬೀಡು
ಗೆಳೆಯನಂಥ ತಂದೆ ಕಳಕೊಂಡ
ಮಕ್ಕಳ ಅನಾಥ ಹಾಡು..

   - ಗುರುಪ್ರಸಾದ್ ಕಂಟಲಗೆರೆ

............

ವಾಕಿಂಗ್ ಹೋಗಿದ್ದಾರೆ ಕೇಬಿ...

ಕ್ಷಮಿಸಿ 

ಕೇಬಿ ವಾಕಿಂಗ್ ಹೋಗಿದ್ದಾರೆ 

ಇನ್ನೇನು ಬರುತ್ತಾರೆ…

 

ಉದ್ದಕ್ಕೂ ಬಿದ್ದ 

ಉಪ್ಪಾರಳ್ಳಿ 

ರಸ್ತೆ 

ಬಿಕೋ ಅನ್ನಿಸುತ್ತದೆ 

ಕೇಬಿಯ 

ಕಾಯುತ್ತಿದೆ 

ವಾಪಸ್ 

ಬರುವವರೆಂದು 

ಸರ್ಕಲ್ ಹೋಟೆಲಲ್ಲಿ 

ಟೀ ಕುಡಿದು 

ಬನ್ ತಿಂತಿಯೇನೋ ..?

ಎಂದು 

ಕೇಳುವವರೆಂದು.

 

ವಾಕಿಂಗ್ ಹೋಗಿದ್ದಾರೆ 

ಕೇಬಿ 

ಇನ್ನೇನು ಬರುತ್ತಾರೆ

 

ಟೀಶರ್ಟ್ ಮೇಲೆ 

ಕಾಕಾ 

ಲುಂಗಿಗೆ ಇನ್ ಶರ್ಟ್ 

ಮಾಡಿ 

ದಪ್ಪ ದಂಡ ಹಿಡಿದು 

ಹೋಗಿದ್ದಾರೆ. 

ಕೇಬಿ 

ಇನ್ನೇನು ಬರುತ್ತಾರೆ 

 

ಈದಿನ 

ಸ್ವಲ್ಪ ಲೇಟಾಗಬಹುದು

ಅಷ್ಟೇ …

 

ಅಲ್ಲಮನ ಜೊತೆ ಹೋಗಿದ್ದರೆ 

ಮಾತ್ರ 

ತಡವಾಗುತ್ತದೆ

ಮುಂದಣ ಹೆಜ್ಜೆಗಳನ್ನು ಅರಿಯದೇ

ಅಲ್ಲಿಂದ ಬರಲಾರರು 

ಬರುವಾಗ 

ಬಕಾಲ ಮುನಿಯ 

ಕಂಡು

ಮಾತಾಡಿಸಿ ದಕ್ಲರ ಜೊತೆ 

ಹೋಗಿ 

ಗಲ್ಲೇಬಾನಿಯ ಆಳಕ್ಕಿಣುಕಿ 

ಅಲ್ಲೇ 

ನಿಂತುಬಿಟ್ಟರೋ 

ಏನೋ 

ಯಾರಾದರೂ ಎಚ್ಚರಿಸಿ 

ಕಳಿಸುವವರೆಗೆ 

ನಾವೂ ಕಾಯಬೇಕು..

 

ಇಲ್ಲಾ 

ಇಲ್ಲೇ ಎಲ್ಲೋ ತಿರುವಿನಲ್ಲಿ 

ಇದ್ದಾರೆ 

ಇನ್ನೇನು ಬರುತ್ತಾರೆ 

ವಾಕಿಂಗ್ 

ಇಂದ ಕೇಬಿ….

-ನಟರಾಜ್ ಹೊನ್ನವಳ್ಳಿ, ರಂಗಕರ್ಮಿ 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...