ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್

Date: 12-03-2023

Location: ಬೆಂಗಳೂರು


''ಕಿನ್ನಾಳದ ಬೆಟ್ಟ ಗುಡ್ಡಗಳಲ್ಲಿ ಪೊಳಕಿಮರ ಸಿಗುತ್ತದೆ. ಈ ಮರದ ಕಟ್ಟಿಗೆ ಹಗುರವಾಗಿರುತ್ತದೆ ಇದನ್ನು ಆಟಿಕೆಗಳನ್ನು ತಯಾರಿಸಲು ಪ್ರಮುಖವಾಗಿ ಬಳಸುತ್ತಾರೆ. ಇಲ್ಲಿನ ಗ್ರಾಮದೇವತೆಯ ಮೇಲಿನ ನಂಬಿಕೆ ಹೆಚ್ಚು. ಪ್ರತೀ ಮನೆಯಲ್ಲೂ ಹುಣ್ಣಿಮೆ ಗೌರಿ, ಸೀಗೆ ಗೌರಿ ಅಂತ ಮಾಡುತ್ತಾರೆ. ಆಗ ಗೊಂಬೆಗಳನ್ನೆಲ್ಲ ಖರೀದಿಸಲು ಮನೆಯ ಗೃಹಿಣಿಯರು ಈ ಕಿನ್ನಾಳ ಕುಶಲಕರ್ಮಿಗಳನ್ನೇ ಆಶ್ರಯಿಸಿದ್ದಾರೆ,'' ಎನ್ನುತ್ತಾರೆ ಅಂಕಣಗಾರ್ತಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ''ಕಿನ್ನಾಳ'' ಕಲೆಯನ್ನು ಕಟ್ಟಿಕೊಟ್ಟಿದ್ದಾರೆ.

ನಮ್ಮ ಕರ್ನಾಟಕದ ಸಂಸ್ಕೃತಿಯ ಭವ್ಯ ಪರಂಪರೆಯಾಗಿರುವ ಕಿನ್ನಾಳ ಎಂಬ ಚಂದದ ಕಲೆಯ ಬಗ್ಗೆ ಹುಡುಕ ಹೊರಟಾಗ ಅದರೊಂದಿಗಿದ್ದ ಗತಕಾಲದ ಇತಿಹಾಸದ ನಂಟು ತಿಳಿಯಿತು. ಕೊಪ್ಪಳ ಜಿಲ್ಲೆ ಕೊಪ್ಪಳ ತಾಲ್ಲೂಕಿಗೆ ಸೇರಿರುವ ಕಿನ್ನಾಳ ಗ್ರಾಮವು ಕೊಪ್ಪಳದಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಕನ್ನಡ ನಾಡು ಕಂಡ ಅತ್ಯಂತ ವೈಭವದ ಕಾಲವಾದ ವಿಜಯನಗರದ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯನ ಕಾಲದಿಂದ ಕಿನ್ನಾಳ ಕಲೆ ನಡೆದುಕೊಂಡು ಬಂದಿದೆ. ವಿಜಯನಗರ ಸಾಮ್ರಾಜ್ಯ ಪತನವಾದ ಮೇಲೆ ಕಿನ್ನಾಳ ಕಲೆ ಮಾಡುವ ಕುಶಲಕರ್ಮಿಗಳು ಚದುರಿ ಹೋದರು. ಹಾಗೆ ಚದುರಿ ಹೋದ ಒಂದು ಭಾಗ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿರುವುದು. ಸಾತನವಾಡಿ ಎಂಬಲ್ಲಿ ಕೂಡ ಇದ್ದಾರೆ. ಅಲ್ಲಿಗಿಂತ ಹೆಚ್ಚು ಕಲಾವಿದರು ಕಿನ್ನಾಳ ಗ್ರಾಮದಲ್ಲಿ ಇದ್ದಾರೆ. ಕಿನ್ನಾಳದ ಕುಶಲಕರ್ಮಿಗಳನ್ನು ಚಿತ್ರಗಾರ್ ಎಂದು ಕರೆಯುತ್ತಾರೆ. ಅಂತಹ ಒಬ್ಬ ಕಲಾವಿದ ಅಶೋಕ್ ಚಿತ್ರಗಾರ್ ಅವರ ಪರಿಚಯ ಇಂದಿನ ನಿಮ್ಮ ಓದಿಗೆ... ತಂದೆ ಕೃಷ್ಣಪ್ಪ ತಾಯಿ ರುಕ್ಮಿಣಿ ಬಾಯಿ ಇವರ ಏಳು ಜನ ಮಕ್ಕಳಲ್ಲಿ ಅಶೋಕ್ ಕೂಡ ಒಬ್ಬರಾಗಿದ್ದಾರೆ. ಅವರ ಬದುಕಿನ ಕುರಿತ ಪಯಣವನ್ನು ಅವರ ಮಾತುಗಳನ್ನು ನಿಮ್ಮ ಓದಿಗೆ ತಂದಿದ್ದೇನೆ.

'ಕಿನ್ನಾಳ್ ಕಲೆ ನಮ್ಮ ಪೂರ್ವಜರಿಂದ ನಮಗೆ ಬಳುವಳಿಯಾಗಿ ಬಂದ ಕಸುಬು. ನಮ್ಮ ಕಿನ್ನಾಳದಲ್ಲಿ ಅರವತ್ತು ಕುಟುಂಬಗಳು ಈ ಕಲೆಯನ್ನ ಆಶ್ರಯಿಸಿ ಜೀವನವನ್ನು ನಡೆಸುತ್ತಿದ್ದರು. ಈ ಕಲೆಯಿಂದ ಬಂದ ಹಣ ಊಟ ಬಟ್ಟೆಗೆ ಸರಿ ಹೋಗುತ್ತದೆ. ಮೊದಲಿಗೆ ಎಲ್ಲರೂ ಇದನ್ನೇ ಮಾಡ್ತಾ ಇದ್ರು. ಈಗ 10-15 ಮನೆಯವರು ಮಾತ್ರ ಈ ಉದ್ಯೋಗವನ್ನು ಆಶ್ರಯಿಸಿದ್ದಾರೆ. ಹೊಸಬರು ಇದಕ್ಕೆಲ್ಲ ಆಸಕ್ತಿ ತೋರಿಸುವುದಿಲ್ಲ. ಟೀಮ್ ವರ್ಕ್ ಇಲ್ಲ. ಸರ್ಕಾರದಿಂದ ಹೆಚ್ಚಿನ ಸವಲತ್ತುಗಳಿಲ್ಲ. ನಾನು ಹೆಚ್ಚು ಓದಿಲ್ಲ. ಇಂಟರ್ನೆಟ್ ಹೇಗೆ ಉಪಯೋಗಿಸಬೇಕು ಎನ್ನುವ ತಿಳುವಳಿಕೆಯಿಲ್ಲ. ತಿಳುವಳಿಕೆ ಇದ್ದವರು ಮೊಬೈಲ್ ಮುಖಾಂತರವೇ ವ್ಯವಹಾರಗಳನ್ನು ಮಾಡುತ್ತಾರೆ. ನಮ್ಮ ತಂದೆ ತಾಯಿಯ ಏಳು ಮಕ್ಕಳಲ್ಲಿ ಐದು ಮಂದಿ ಹೆಣ್ಣುಮಕ್ಕಳು ಇಬ್ಬರು ಗಂಡು ಮಕ್ಕಳು. ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೊಟ್ಟಿದ್ದೇವೆ. ಅಣ್ಣ, ಅಪ್ಪ ಇತ್ತೀಚೆಗೆ ತೀರಿಕೊಂಡರು. ಈಗ ನಮ್ಮ ಮನೆಯಲ್ಲಿ ನಾನೊಬ್ಬನೇ ಈ ಕಲೆಯಲ್ಲಿ ತೊಡಗಿಕೊಂಡಿರುವುದು. ಆಗ ಅಪ್ಪ ಅಣ್ಣ ಎಲ್ಲರೂ ಸೇರಿ ಮಾಡುತ್ತಿದ್ದೆವು. ಆಗೆಲ್ಲ ತುಂಬ ಕಷ್ಟ. ಹಳ್ಳಿಯಲ್ಲಿ ಸುಣ್ಣ ತಯಾರಿ ಮಾಡುತ್ತಾರಲ್ಲ ಆ ಕಲ್ಲನ್ನು ತಂದು ಕೈಯಲ್ಲಿ ಕುಟ್ಟಿ ಪುಡಿಮಾಡಿ ಎರಡು ದಿನ ನೀರಲ್ಲಿ ನೆನೆಸುತ್ತಿದ್ದೆವು. ಹೊಂಡು ಮೇಲೆ ಬಂದು ತಿಳಿ ಕೆಳಗೆ ಉಳಿಯುತ್ತಿತ್ತು. ಕಾಟನ್ ಬಟ್ಟೆಯಲ್ಲಿ ಮತ್ತೆ ಅದನ್ನು ಸೋಸಿ ಬಳಸುತ್ತಿದ್ದೆವು. ಹುಣಸೆಬೀಜದಿಂದ ಗಮ್ ತಯಾರಿಸುತ್ತಿದ್ದೆವು. ಹಳ್ಳಿಗಳಲ್ಲಿ ಸಿಗುವ ಹುಣಸೆಬೀಜಗಳನ್ನು ಸಂಗ್ರಹಿಸಿ ತಂದು ತೊಳೆದು ಬಿಸಿಲಿನಲ್ಲಿ ಒಣಗಿಸಿ ಬೂದಿ ಹಚ್ಚಿ ಮತ್ತೆ ಎರಡು ಮೂರು ತಿಂಗಳು ಒಣಗಿಸಿ ಪೌಡರ್ ಮಾಡಿಕೊಂಡು ಎತ್ತಿಟ್ಟುಕೊಂಡರೆ ಸುಮಾರು ಐದು ವರ್ಷ ಅದು ಏನೂ ಆಗುತ್ತಿರಲಿಲ್ಲ. ನಂತರ ನಮಗೆ ಎಷ್ಟು ಬೇಕೋ ಅಷ್ಟನ್ನು ನೀರಿನಲ್ಲಿ ಕಲೆಸಿ ಒಲೆಯ ಮೇಲಿಟ್ಟು ಒಂದು ಹದಕ್ಕೆ ಬೇಯಿಸಿ ಅದರಿಂದ ಪೇಸ್ಟ್ ತಯಾರಿಸಿಕೊಳ್ಳುತ್ತೇವೆ. ಪಲ್ಲಕ್ಕಿ, ಛತ್ರಿ, ಚಾಮರ, ತೇರಿಗೆ ಕಟ್ಟುವ ಗೊಂಬೆಗಳು ಇತ್ಯಾದಿಗಳನ್ನು ಆರ್ಡರ್ ಕೊಟ್ಟರೆ ನಾವು ತಯಾರಿ ಮಾಡಿಕೊಡುತ್ತೇವೆ. ಇವುಗಳನ್ನು ತಯಾರಿಸಲು ಪಳಕಿನಮರ, ಹತ್ತಿಹಣ್ಣಿನಮರದ ಕಟ್ಟಿಗೆಗಳನ್ನು ಉಪಯೋಗಿಸುತ್ತೇವೆ'.

'ಆಗೆಲ್ಲ ಬಡತನ ಆದ್ದರಿಂದ ನನಗೆ ಓದು ಮುಂದುವರೆಸುವುದು ಸಾಧ್ಯವಾಗಲಿಲ್ಲ. ನಾನು ನನ್ನ ತಂದೆ ಜೊತೆಗೆ ಕೆಲಸಕ್ಕೆ ಹೋಗ್ತಾ ಇದ್ದೆ. ಸಿನಿಮಾ ನೋಡುವ ಹುಚ್ಚು ಬಹಳ ಇತ್ತು. ಇಂತಿಷ್ಟು ಕೆಲಸ ಅಂತ ಮಾಡಿ ಮುಗಿಸಿದ್ರೆ ಹತ್ತೋ, ಇಪ್ಪತ್ತೋ ಕೊಡ್ತಿದ್ರು. ಆ ದುಡ್ಡಿನಿಂದ ಸಿನಿಮಾ ನೋಡಬಹುದು ಎಂಬ ಆಸೆಯಿಂದ ಒಂದಿಷ್ಟು ಕೆಲಸ ಮಾಡಿದ್ರೆ ಇಷ್ಟು ಹಣ ಕೊಡ್ತಾರೆ ಪೂರ್ತಿ ಕೆಲಸ ನಾನೆ ಮಾಡಿದರೆ ಇನ್ನೂ ಹೆಚ್ಚು ಹಣ ಸಿಗತ್ತೆ ಅಂತ ನಾನು ಈ ಕೆಲಸದಲ್ಲಿ ಇನ್ನಷ್ಟು ಮಗ್ನನಾದೆ. 31 ವರ್ಷಕ್ಕೆ ಅಮೃತ ಎನ್ನುವವರ ಜೊತೆಗೆ ವಿವಾಹವಾಯಿತು. ನಮಗೆ ಇಬ್ಬರು ಮಕ್ಕಳು ಹುಟ್ಟಿದರು. ಈಗ ಅಂಕಿತ 10 ನೇ ತರಗತಿಯಲ್ಲಿ ವಸಂತ ಕೃಷ್ಣ 7 ನೇ ತರಗತಿಯಲ್ಲಿ ಓದುತ್ತಿದ್ದಾರೆ. ನಾನಂತೂ ಕಲಿಯಲಿಲ್ಲ ಮಕ್ಕಳಾದರೂ ಅವರು ಓದುವಷ್ಟು ಓದಲಿ ಎಂಬ ಮಹದಾಸೆಯಿದೆ ಸಾಧ್ಯವಾದಷ್ಟು ಓದಿಸುತ್ತೇನೆ. ಕಲಾವಿದರ ಜೀವನ ಹೊಗಳಿಕೆಗೆ ಮೀಸಲಾಗಿದೆ. ಅದರಿಂದ ನಮ್ಮ ಹೊಟ್ಟೆ ತುಂಬುವುದಿಲ್ಲ. ವಯಸ್ಸಿರುವಾಗ ದುಡಿಯುತ್ತೇವೆ. ಮುಪ್ಪಿನಕಾಲಕ್ಕೆ ನಮಗೆ ಆಧಾರವಿರುವುದಿಲ್ಲ. ಹಳ್ಳಿ ಜನರಿಗೆ ಮೂರ್ತಿಗಳನ್ನು ಮಾಡಿಕೊಟ್ಟರೆ ಚೌಕಾಸಿ ಮಾಡಿ ಅಷ್ಟೋ ಇಷ್ಟೋ ದುಡ್ಡು ಕೊಟ್ಟು ಕಾಳು ಕಡಿಗಳನ್ನು ಕೊಟ್ಟು ಸರಿದೂಗಿಸುತ್ತಾರೆ. ನಮ್ಮ ಕಲೆಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ನಮ್ಮ ಕಿನ್ನಾಳ ಕಲೆ ನಶಿಸಿ ಹೋಗಬಾರದು. ಆಧುನಿಕ ಜಗತ್ತಿಗೆ ಈ ಕಲೆ ಪರಿಚಯವಾಗಬೇಕು. ಇದು ನೈಸರ್ಗಿಕ ಕಲೆಯಾಗಿದ್ದು ನೈಸರ್ಗಿಕ ವಸ್ತುಗಳನ್ನು ಬಳಸಿ ಕಿನ್ನಾಳದ ಗೊಂಬೆಗಳನ್ನು ತಯಾರಿಸುವುದರಿಂದ ಹೆಚ್ಚು ಬಾಳಿಕೆ ಬರುತ್ತವೆ. ಕಲಾವಿದರನ್ನು ಉಳಿಸಲು ಬೆಳೆಸಲು ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು' ಎಂಬುದು ಇವರ ಬೇಡಿಕೆ.

ಕಿನ್ನಾಳದಲ್ಲಿ ಇಲ್ಲಿನ ಭೋಗೋಳಿಕ ವಾತಾವರಣ ಈ ಕಿನ್ನಾಳ ಕಲೆಗೆ ತುಂಬ ಸೂಕ್ತವಾಗಿದೆ. ಕಿನ್ನಾಳದ ಬೆಟ್ಟ ಗುಡ್ಡಗಳಲ್ಲಿ ಪೊಳಕಿಮರ ಸಿಗುತ್ತದೆ. ಈ ಮರದ ಕಟ್ಟಿಗೆ ಹಗುರವಾಗಿರುತ್ತದೆ ಇದನ್ನು ಆಟಿಕೆಗಳನ್ನು ತಯಾರಿಸಲು ಪ್ರಮುಖವಾಗಿ ಬಳಸುತ್ತಾರೆ. ಇಲ್ಲಿನ ಗ್ರಾಮದೇವತೆಯ ಮೇಲಿನ ನಂಬಿಕೆ ಹೆಚ್ಚು. ಪ್ರತೀ ಮನೆಯಲ್ಲೂ ಹುಣ್ಣಿಮೆ ಗೌರಿ, ಸೀಗೆ ಗೌರಿ ಅಂತ ಮಾಡುತ್ತಾರೆ. ಹೀಗೆ ವರ್ಷ ಪೂರ್ತಿ ಗೌರಿ ಪೂಜೆ ಮಾಡುತ್ತಾರೆ. ಆಗ ಗೊಂಬೆಗಳನ್ನೆಲ್ಲ ಖರೀದಿಸಲು ಮನೆಯ ಗೃಹಿಣಿಯರು ಈ ಕಿನ್ನಾಳ ಕುಶಲಕರ್ಮಿಗಳನ್ನೇ ಆಶ್ರಯಿಸಿದ್ದಾರೆ. ಪ್ರತೀ ಸಲವು ಬೇರೆ ಬೇರೆ ಆಸನ, ಭಂಗಿ ಇರುವ ಆಕರ್ಷಕ ಮೂರ್ತಿಗಳನ್ನು ಇವರು ತಯಾರಿ ಮಾಡುತ್ತಾರೆ. ಕಿನ್ನಾಳದ ಕಲಾವಿದರು ಕರಕುಶಲ ವಸ್ತುಗಳು, ಆಟಿಕೆಗಳು, ಬಣ್ಣ ಬಣ್ಣದ ಚಿತ್ತಾರದ ವರ್ಣಚಿತ್ರಗಳು, ಹಣ್ಣು ತರಕಾರಿಗಳ ಕಲಾಕೃತಿಗಳು, ವಿವಿಧ ಬಗೆಯ ಅನೇಕ ಪ್ರಾಣಿಗಳ ಗೊಂಬೆಗಳು, ಗ್ರಾಮದೇವತೆ, ದ್ಯಾಮವ್ವ, ಶಿವ, ಪಾರ್ವತಿ, ಲಕ್ಷ್ಮಿ, ಗಣಪತಿ, ನಂದಿ, ಆಂಜನೇಯ, ಹುಲಿ, ಸಿಂಹ, ಆಕಳು, ಒಂಟೆ ಹೀಗೆ ಎಲ್ಲಾ ಬಗೆಯ ಕಲಾಕೃತಿಗಳನ್ನು ಮಾಡುವಲ್ಲಿ ನೈಪುಣ್ಯತೆಯನ್ನು ಸಾಧಿಸಿದ್ದಾರೆ. ಈ ಕಿನ್ನಾಳದ ಗೊಂಬೆಗಳನ್ನು ನೋಡುತ್ತಿದ್ದರೆ ನಿಜವಾದವು ಎನ್ನುವಷ್ಟು ಆಶ್ಚರ್ಯವನ್ನು ಹುಟ್ಟಿಸುತ್ತವೆ. ಅಷ್ಟು ನೈಜತೆಯಿಂದ ಜೀವಂತಿಕೆಯಿಂದ ಕೂಡಿರುತ್ತವೆ. ಹೈದರಾಬಾದ್ ಮ್ಯೂಸಿಯಂನಲ್ಲಿ ಈ ಕಲೆ ನೋಡಲು ಸಿಗುತ್ತವೆ ಕಿನ್ನಾಳ ಕಲೆ ವಿದೇಶದಲ್ಲೂ ಪ್ರಸಿದ್ಧಿಯಾಗಿದೆ ಹಂಪೆಗೆ ಬಂದ ಎಷ್ಟೋ ವಿದೇಶಿಯರು ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಆಟಿಕೆಗಳನ್ನು ಕೊಂಡುಹೋಗುತ್ತಾರೆ. ಹೀಗಿದ್ದಾಗ್ಯೂ ಈ ಕಲೆಗೆ ಆಯಸ್ಸು ಕಡಿಮೆ ಆಗ್ತಾ ಇದೆ. ಆಗ ಜನರ ಬಳಿ ದುಡ್ಡು ಇರಲಿಲ್ಲ ಕೊಳ್ಳುವವರಿದ್ದರು ಈಗ ದುಡ್ಡಿದೆ ಕೊಳ್ಳುವವರಿಲ್ಲ. ಇವರ ಈ ಕಲಾಕೃತಿಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ೨೦೧೩ರಲ್ಲಿ ನಡೆದ ಗಣರಾಜ್ಯ ಉತ್ಸವದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಕಿನ್ನಾಳ ಆಟಿಕೆಗಳ ಪ್ರದರ್ಶನದ ಟ್ಯಾಬ್ಲೊವನ್ನು ತಯಾರಿಸಲಾಗಿತ್ತು. ಇತ್ತೀಚೆಗೆ ಇಂತಹ ಸ್ವದೇಶಿ ಕಲೆಗಳು ನಶಿಸುತ್ತಿವೆ. ಬಹುತೇಕ ಯುವಜನತೆಗೆ ಇಂತಹ ಕಲೆಗಳ ಪರಿಚಯವೇ ಇಲ್ಲ. ಇದು ಬರೀ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದ ಶ್ರೀಮಂತ ಪರಂಪರೆಯನ್ನು ಸಾಂಸ್ಕೃತಿಕ ಹಿರಿಮೆಯನ್ನು ಬಿಂಬಿಸುವ ಕಲಾಪ್ರಕಾರವಾಗಿದೆ. ಕೊಪ್ಪಳದ ಕಡೆ ಹೋದಾಗ ಅಥವಾ ವಿಶೇಷ ಸಂದರ್ಭಗಳಲ್ಲಿ ಯಾರಿಗಾದರೂ ಗಿಫ್ಟ್ ಕೊಡುವಾಗ ಇಂತಹ ಗೊಂಬೆಗಳನ್ನು ಕೊಟ್ಟರೆ ಕಲೆಗಾರರಿಗೂ ಸಹಾಯವಾಗುತ್ತದೆ ಮನೆಗೂ ಚೆಂದದ ವಸ್ತುಗಳಾಗುತ್ತವೆ. ಕಲೆಯನ್ನು, ಕಲೆಗಾರರನ್ನು ಉಳಿಸಿ ಬೆಳೆಸಿ ಬೆಳಕಿಗೆ ತಂದಂತಾಗುತ್ತದೆ.

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್ (ಪತ್ರಕರ್ತರು)

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...