ಮಕ್ಕಳ ದುಡಿಮೆ ಮತ್ತು ಮಾನವ ಅಭಿವೃದ್ಧಿ

Date: 12-06-2022

Location: ಬೆಂಗಳೂರು


ಜೂನ್ 12, 2000ನೇ ವರ್ಷದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಮಕ್ಕಳನ್ನು 'ಮನೆ ಕೆಲಸ'ದಲ್ಲಿ ದುಡಿಸುವುದನ್ನು ಅತ್ಯಂತ ನಿಕೃಷ್ಟ ರೀತಿಯ ಬಾಲಕಾರ್ಮಿಕತೆಯೆಂದು ಘೋಷಿಸಿತ್ತು. ಅಂದಿನಿಂದಲೂ ಜೂನ್ 12ರಂದು ವಿಶ್ವದಾದ್ಯಂತ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕು ಮತ್ತು ಸಂರಕ್ಷಣೆಯ ತಜ್ಞ ಕೆ. ರಾಘವೇಂದ್ರ ಭಟ್ ಅವರು ಬುಕ್ ಬ್ರಹ್ಮಕ್ಕಾಗಿ ಬರೆವ 'ಮಕ್ಕಳ ಹಕ್ಕುಗಳು ಮತ್ತು ನಾವು' ಅಂಕಣದಲ್ಲಿ 'ಬಾಲಕಾರ್ಮಿಕತೆ'ಯ ಕುರಿತು ಅರ್ಥಪೂರ್ಣವಾಗಿ ಚರ್ಚಿಸಿದ್ದಾರೆ.
ರಾಷ್ಟ್ರದ ಕೆಲವು ಮಕ್ಕಳು ಪೂರ್ಣ ದುಡಿಮೆಗೆ ಬಿದ್ದರೆ, ರಾಜ್ಯದ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಾಲಕಾರ್ಮಿಕತೆಗೆ ಬಲಿಯಾದರೆ, ಜಿಲ್ಲೆಯ ಸಾವಿರಾರು ಮಕ್ಕಳು ಶಾಲೆ ಬಿಟ್ಟು ಜೀತ, ಕೂಲಿ, ಹೊಲ, ಗದ್ದೆ, ಕುರಿ, ಎಮ್ಮೆ, ದನ ಕಾಯೋಕೆ ಹೋದರೆ, ನಗರದ ನೂರಾರು ಮಕ್ಕಳು “ಶಿಕ್ಷಣ” ವಿಲ್ಲದೆ ಗ್ಯಾರೇಜ್, ಹೋಟೆಲ್, ಕಾರ್ಖಾನೆ, ಅಂಗಡಿಗಳ ಕೆಲಸದಲ್ಲಿ ತೊಡಗಿದರೆ, ತಾಲೂಕಿನ ನೂರಾರು ಮಕ್ಕಳು ಶಿಕ್ಷಣ ಲಭಿಸದೇ ಕೃಷಿ, ವ್ಯವಸಾಯ ಅಥವಾ ಜೀತ ಪದ್ಧತಿಗಳಿಗೆ ದೂಡಲ್ಪಟ್ಟರೆ, ಗ್ರಾಮ ಪಂಚಾಯತ್‍ನ ನೂರಾರು ಮಕ್ಕಳು ಶಾಲೆ ಮೆಟ್ಟಿಲು ತುಳಿಯದೇನೇ ದುಡಿಮೆಗೆ ತಳ್ಳಲ್ಪಟ್ಟರೆ, ಗ್ರಾಮ ಮತ್ತು ಹಳ್ಳಿಗಳ ಹತ್ತಾರು ಮಕ್ಕಳು ಬಾಲಕಾರ್ಮಿಕತೆ ಮತ್ತು ಕಿಶೋರ ಕಾರ್ಮಿಕತೆಗೆ ದೂಡಲ್ಪಟ್ಟು, ಶಾಲೆಗೆ ಬರದಿದ್ದರೆ, ಆ ರಾಷ್ಟ್ರ, ರಾಜ್ಯ, ಜಿಲ್ಲೆ, ನಗರ, ಗ್ರಾಮ ಪಂಚಾಯತ್ ಮತ್ತು ಗ್ರಾಮದ ಮಾನವ ಅಭಿವೃದ್ಧಿಯ ಮಟ್ಟ ಹೇಗಿರಬಹುದು ಯೋಚಿಸಿ? ಮಾನವನ ಇತಿಹಾಸದಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಶಾಲಾ ಶಿಕ್ಷಣ ನೀಡದೆ ದುಡಿಮೆಗೆ ತಳ್ಳಲ್ಪಟ್ಟು ಅವರು ಸಮಗ್ರವಾಗಿ ಅಭಿವೃದ್ಧಿಯಾಗಿರುವುದು ಇರಬಹುದೇ? ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನೊಳಗೊಂಡ ಕುಟುಂಬಗಳು ಮಾನವ ಅಭಿವೃದ್ಧಿಯ ವಿವಿಧ ಸೂಚ್ಯಂಕಗಳಿಗೆ ಕೊಡುಗೆ ನೀಡಲು ಸಾಧ್ಯವೇ? ಮಾನವ ಅಭಿವೃದ್ಧಿಯಲ್ಲಿ ಪ್ರತಿಯೊಂದು ಕುಟುಂಬದ “ಬದುಕು” ಒಳಗೊಂಡಿದೆ.

ಚಿಕ್ಕ ವಯಸ್ಸಿನಲ್ಲಿಯೇ ‘ಬಾಲಕಾರ್ಮಿಕತೆ’ಗೆ ತಳ್ಳಲ್ಪಟ್ಟ ಕುಟುಂಬಗಳನ್ನು ಮಾನವ ಅಭಿವೃದ್ಧಿಯ ಸೂಚ್ಯಂಕದ ಪ್ರಕಾರ ಮಾಹಿತಿಗೆ ಅಥವಾ ಸಮೀಕ್ಷೆಗೆ ಒಳಪಡಿಸಿದಾಗ ಅವರ ಅಂದರೆ ಆ ಕುಟುಂಬದಲ್ಲಿರುವ ಜನರ ಪೌಷ್ಠಿಕತೆ, ಶಾಲಾ ಶಿಕ್ಷಣ, ಕಬ್ಬಿಣಾಂಶ, ಜನನ ಪ್ರಮಾಣ ಪತ್ರ, ನೈರ್ಮಲ್ಯ ಕ್ರಮ, ಸ್ವಚ್ಛತೆ, ಆಹಾರ ಕ್ರಮ, ಆರೋಗ್ಯ ಸ್ಥಿತಿ, ಆರ್ಥಿಕ ಸ್ಥಿತಿ, ವಸತಿ, ಸರಕಾರಿ ಸೌಲಭ್ಯ ಪಡೆದದ್ದು, ಮನೆಯಲ್ಲಿ ತಾಯಂದಿರ ಸ್ಥಿತಿ, ಗರ್ಭಿಣಿತನ, ಬಾಣಂತನ, 1000 ದಿನಗಳ ಮಗುವಿನ ಆರೈಕೆ, ಮನೆಯಲ್ಲಿ ಸೌಲಭ್ಯಗಳು, ಚುಚ್ಚುಮದ್ದು, ಲಿಂಗ ಸೂಕ್ಮತೆ ಮತ್ತು ಸಂವೇದನೆ, ಹೆಣ್ಣು ಮಕ್ಕಳ ಶಿಕ್ಷಣ, ಬದುಕಿಗೆ ಬೇಕಾಗುವ ಗುರುತಿನ ಚೀಟಿಗಳು ಮತ್ತು ದಾಖಲೆಗಳು, ಮುಂತಾದ ಅಂಶಗಳು ತೀರಾ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ. ಇಂತಹ ಹತ್ತು ಕುಟುಂಬಗಳು ಒಂದು ಗ್ರಾಮದಲ್ಲಿ ಇದ್ದರೆ, ಬೇರೆ ಸೂಚ್ಯಂಕಗಳಾದ ಭೌತಿಕ ಸೌಲಭ್ಯ ಆ ಗ್ರಾಮಕ್ಕೆ ಎಷ್ಟೇ ನೀಡಿದರೂ ಈ ಅಂಶಗಳು ತೀರಾ ಕಳಪೆ ಆಗಿರುವುದರಿಂದ ಒಟ್ಟಾರೆಯಾಗಿ ಆ ಗ್ರಾಮದ “ಅಭಿವೃದ್ಧಿ” ಸಂಪೂರ್ಣವಾಗಿ ಕುಸಿದಿರುತ್ತದೆ. ಈ ರೀತಿ ಒಂದು ಗ್ರಾಮದಲ್ಲಿ 10 ಕುಟುಂಬಗಳು ಇದ್ದಲ್ಲಿ ಈ ಕುಟುಂಬಗಳು ಗ್ರಾಮದ ಅಭಿವೃದ್ಧಿಗೆ ದೊಡ್ಡ ಸವಾಲಾಗಿರುತ್ತಾರೆ. ಹಾಗಂತ ಮಕ್ಕಳಿಗೆ ಕೆಲಸವನ್ನು ವಿರೋಧಿಸುವ ಪ್ರಕ್ರಿಯೆ ಅಲ್ಲ. ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಘನತೆ ಇದೆ, ಅದನ್ನು ಮಕ್ಕಳಿಗೆ ತಿಳಿಸಬೇಕು. ಮಕ್ಕಳು ಅದನ್ನು ಕಲಿಯಬಹುದು, ಆದರೆ ಬಾಲ್ಯವಸ್ಥೆಯಲ್ಲಿ ‘ಶಿಕ್ಷಣ’ದಿಂದ ವಂಚಿತರಾಗಿ ಇತರ ಹಕ್ಕು ಆಧಾರಿತ ಅಂಶಗಳನ್ನು ಪೂರ್ಣ ಬಿಟ್ಟು “ದುಡಿಮೆ”ಗೆ ಪೂರ್ಣ ತಳಲ್ಪಟ್ಟರೆ ಆ ಕುಂಟುಂಬಗಳು ಮತ್ತು ಆ ಮಕ್ಕಳು, ಮುಂದೆ ಪ್ರಾಪ್ತ ವಯಸ್ಸಿನ ನಂತರ ಅವರ ಕುಟುಂಬಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಇರಲು ಸಾಧ್ಯವೇ ಇಲ್ಲ. ಮೂಲಭೂತ ಶಿಕ್ಷಣದೊಂದಿಗೆ ವೃತ್ತಿಯ ಕಲಿಕೆ ಕೂಡಾ ಒಪ್ಪಬಹುದಾದದ್ದೇ, ಆದರೆ ಮೂಲಭೂತ ಶಿಕ್ಷಣ ವಂಚಿಸಿ ಶೋಷಣೆಯ ದುಡಿಮೆಗೆ ಹೋದಾಗ ಅವರ ಬದುಕು ಸಂಪೂರ್ಣ ಮಾನವ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಒಳಗಾಗುತ್ತದೆ. ಅವರು ಅಭಿವೃದ್ಧಿಗೆ ಕೊಡುಗೆ ನೀಡಲು ಕಷ್ಟ ಸಾಧ್ಯ, ಇದರಿಂದ ದೇಶದ ಮತ್ತು ಮಾನವ ಅಭಿವೃದ್ಧಿ ಕುಂಠಿತವಾಗಬಹುದು. ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಮತ್ತು ಮಕ್ಕಳ ಅನೈತಿಕ ಕಳ್ಳ ಸಾಗಾಣಿಕೆ ಮತ್ತು ಮಾರಾಟ ಪದ್ಧತಿ ನಮ್ಮ ದೇಶದ ಮಾನವ ಅಭಿವೃದ್ಧಿಯನ್ನು ‘ಹಿಡಿದು’ ಅಭಿವೃದ್ಧಿಯಾಗದಂತೆ ಮಾಡುತ್ತಿರುವ ಈ ದೇಶದ ಬಹಳ ದೊಡ್ಡ ಅಭಿವೃದ್ಧಿ ಮಾರಕ ಸಮಸ್ಯೆ ಎಂದು ನಮಗೆ ಇನ್ನೂ ಅರಿವಾಗದಿರುವುದು ದೊಡ್ಡ ದುರಂತವೇ ಸರಿ. ಈ ಅಭಿವೃದ್ಧಿ ಮಾರಕ ಸಮಸ್ಯೆಗಳು “ಹಕ್ಕು ಆಧಾರಿತ ಅಭಿವೃದ್ಧಿಗೂ ಮಾರಕ”. ಅಭಿವೃದ್ಧಿಯ ಇನ್ನೊಂದು ಪರಿಭಾಷೆ ಏನೆಂದರೆ ಮನುಷ್ಯನಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವುದು, ಈ ಮಕ್ಕಳ ದುಡಿಮೆ ಇದಕ್ಕೂ ಮಾರಕವಾಗಿದೆ ಎಂಬ ಸತ್ಯದ ಅರಿವು ನಾಗರಿಕರಿಗೆ ಆಗುವ ಅಗತ್ಯವಿದೆ.

ಅದಕ್ಕೆ ಸಾಕ್ಷಿ ಏನೆಂದರೆ ಯಾವ ಜಿಲ್ಲೆ, ತಾಲೂಕು ಗ್ರಾಮಗಳಲ್ಲಿ ಬಾಲಕಾರ್ಮಿಕತೆ, ಕಿಶೋರ ಕಾರ್ಮಿಕತೆ, ಬಾಲ್ಯವಿವಾಹ ಹೆಚ್ಚಿನ ಪ್ರಮಾಣದಲ್ಲಿ ಇದೆಯೋ ಆ ಜಿಲ್ಲೆಯಲ್ಲಿ ಮಾನವ ಅಭಿವೃದ್ಧಿ ಅತ್ಯಂತ ಕೆಳಮಟ್ಟದಲ್ಲಿ ಇದೆ. ಆ ಜಿಲ್ಲೆಗಳಲ್ಲಿ ಶಿಕ್ಷಣದ ಫಲಿತಾಂಶ, ಒಟ್ಟಾರೆ ಅಭಿವೃದ್ಧಿ ತಳಮಟ್ಟದಲ್ಲಿರುವ ಅಂಕಿ-ಅಂಶಗಳು ನಿಮಗೆ ಗೊತ್ತಿದೆ.

ಈ ಸಂದರ್ಭದಲ್ಲಿ ಒಂದು ಘಟನೆ ನೆನಪಾಯಿತು, ಮೈಸೂರಿನ ನವರಾತ್ರಿ ಉತ್ಸವ ಮತ್ತು ಜಂಬೂ ಸವಾರಿ ಅಂದರೆ ನಮಗೆಲ್ಲರಿಗೂ ಹೆಮ್ಮೆ ಮತ್ತು ಗೌರವ. ವಿಶ್ವ ವಿಖ್ಯಾತ ಜಂಬೂ ಸವಾರಿ ಎಂದೇ ಪ್ರಸಿದ್ಧವಾಗಿರುವ ಕಾರ್ಯಕ್ರಮ. ಜಗತ್ತಿನ ಕೋಟಿ ಕೋಟಿ ಕಣ್ಣುಗಳು ಭಾರತವನ್ನು ಮತ್ತು ಜಂಬೂ ಸವಾರಿಯನ್ನು ನೋಡುತ್ತಿರುತ್ತದೆ. ಒಂದು ನಾಲ್ಕು ವರ್ಷ ಹಿಂದಿನ ಘಟನೆ ಇದು, ಜಂಬೂ ಸವಾರಿಯಲ್ಲಿ “ಸ್ತಬ್ಧ ಚಿತ್ರ ಮೆರವಣಿಗೆ” ಪ್ರಮುಖ ಆಕರ್ಷಣೆ, ರಾಜ್ಯದ ಹಿರಿಯ ಕಲಾವಿದರೊಬ್ಬರು ಜಂಬೂ ಸವಾರಿಯಲ್ಲಿ ಬಾಲಕಾರ್ಮಿಕ ಪದ್ಧತಿ ಕುರಿತು ಅತ್ಯಂತ ಉತ್ತಮವಾಗಿರುವ ಸ್ತಬ್ಧ ಚಿತ್ರ ತಯಾರಿಸಿ ಮುಂದಿಟ್ಟರು, ಆದರೆ ನಮ್ಮ ವ್ಯವಸ್ಥೆ ಅದನ್ನು ಒಪ್ಪಲಿಲ್ಲ, ಜಂಬೂ ಸವಾರಿಯನ್ನು ಜಗತ್ತು ನೋಡುತ್ತೆ, ನಮ್ಮಲ್ಲಿ ಬಾಲಕಾರ್ಮಿಕತೆ ಇದೆ ಎಂದು ನಾವೇ ತೋರಿಸಿದಂತಾಗುತ್ತದೆ. ಇದು ನಾಚಿಕೆ ವಿಷಯ, ಹಾಗಾಗಿ ಅಂತಹ ಯಾವುದೇ ಸ್ತಬ್ಧ ಚಿತ್ರ ಬೇಡ ಎಂದು ಆ ಸ್ತಬ್ಧ ಚಿತ್ರವನ್ನು ರದ್ದುಗೊಳಿಸಿದರು.

ಹೌದು, ನಾಚಿಕೆ, ಯಾಕೆಂದರೆ “ಮಕ್ಕಳ ದುಡಿಮೆ ರಾಷ್ಟ್ರ ಕಳಂಕ” ಎಂಬ ವಿಷಯ ನಮಗೆಲ್ಲರಿಗೂ ಗೊತ್ತು, ಆದರೆ ಅದನ್ನು ತಡೆಗಟ್ಟಲು ಆಡಳಿತಾತ್ಮಕ ಇಚ್ಛಾಶಕ್ತಿಯ ಅವಶ್ಯಕತೆ ಬೇಕಾಗಿದೆ ಹೊರತು, ಅದನ್ನು ನಾಚಿಕೆ ಎಂದು ಮುಚ್ಚಿ ಇಡಲು ಸಾಧ್ಯವೇ? ಬೇರೆಯವರಿಗೆ ಗೊತ್ತಾಗಬಾರದು ಎಂದು ಮುಚ್ಚಿಡುವ ಬದಲು, 75 ವರ್ಷದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತಡಗಟ್ಟಬಹುದಾಗಿತ್ತೇನೊ? ಅಲ್ವಾ?. ಆದರೆ ಆ ಪ್ರಯತ್ನ, ಇಚ್ಛಾಶಕ್ತಿ ಈ ವ್ಯವಸ್ಥೆಯಿಂದ ಆಗಿಲ್ಲ ಎಂಬ ಖೇದದ ಸಂಗತಿ ಅಷ್ಟೇ ನೋವನ್ನು ಕೂಡ ತರುತ್ತದೆ. ಇದರ ಪರಿಣಾಮವಾಗಿ ಸಾವಿರಾರು ಮಕ್ಕಳನ್ನು (ದೇವರಿಗೆ ಸಮಾನರಾದ! ಎಂದು ನಂಬಿದ ರಾಷ್ಟ್ರದಲ್ಲಿ) ನಾವು ಕಳಕೊಂಡೆವು. ಇನ್ನು ಅನೇಕ ಮಕ್ಕಳು ಆ ಪದ್ಧತಿಯಲ್ಲಿ ಆಶಾದಾಯಕ ಕನಸುಗಳನ್ನು ಕಾಣುತ್ತಾ! ಉತ್ತಮ ಬದುಕಿಗಾಗಿ ಕಾಯುತ್ತಿದ್ದಾರೆ.

ನಮ್ಮ ಸಂವಿಧಾನದ ಕಲಂ 24ರನ್ವಯ “ಹದಿನಾಲ್ಕು ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ (ಅಪಾಯಕಾರಿ) ಉದ್ದಿಮೆಗಳಲ್ಲಿ ದುಡಿಮೆಗೆ ನಿಯೋಜಿಸತಕ್ಕದ್ದಲ್ಲ ಹಾಗೂ ತೊಡಗಿಸಿಕೊಳ್ಳತಕ್ಕದ್ದಲ್ಲ ಎಂದು ಹೇಳಿದೆ. ಅದೇ ರೀತಿ 39(ಇ) ಪ್ರಕಾರ ಮಕ್ಕಳನ್ನು ಅವರ ಎಳೆಯ ವಯಸ್ಸಿನಲ್ಲಿ ದುಡಿಯಲು, ಕೆಲಸ ಮತ್ತು ಆರ್ಥಿಕ ಒತ್ತಡದಿಂದಾಗಿ ದುರುಪಯೋಗಪಡಿಸಿಕೊಳ್ಳುವುದರಿಂದ ರಕ್ಷಣೆ, 39 (ಎಫ್) ಪ್ರಕಾರ ಮಕ್ಕಳಿಗೆ ಆರೋಗ್ಯಕರವಾದ ರೀತಿಯಲ್ಲಿ ಮತ್ತು ಸ್ವತಂತ್ರ ಹಾಗೂ ಘನತೆಯ ವಾತಾವರಣದಲ್ಲಿ ಬೆಳವಣಿಗೆ ಹೊಂದಲು ಅನುಕೂಲತೆ ದೊರೆಯುವುದನ್ನು ಖಾತರಿಪಡಿಸುವುದು ಮತ್ತು ಮಕ್ಕಳಿಗೆ ಶೋಷಣೆಗಳ ವಿರುದ್ದ ಸಂರಕ್ಷಣೆಯನ್ನು ಒದಗಿಸುವುದನ್ನು ಸುನಿಶ್ಚಿತಗೊಳಿಸುವ ದಿಸೆಯಲ್ಲಿ ರಾಜ್ಯಗಳು ನೀತಿಯನ್ನು ನಿರ್ದೇಶಿಸತಕ್ಕದ್ದು ಎಂದು ಹೇಳಿದೆ. ಅಲ್ಲದೇ 21 ಬದುಕುವ ಹಕ್ಕು, 21(ಎ) ಶಿಕ್ಷಣದ ಮೂಲಭೂತ ಹಕ್ಕು. ಸಂವಿಧಾನದ ಕಲಂ 15(3) ತಾರತಮ್ಯದ ವಿರುದ್ಧ ರಕ್ಷಣೆ ಹಾಗೂ ಸಮಾನತೆಯ ಅವಕಾಶ, ಕಲಂ 19 ದುರುಪಯೋಗದಿಂದ ರಕ್ಷಣೆಯ ಹಕ್ಕು ಹೀಗೆ ಹಲವಾರು ಅಂಶಗಳನ್ನು ಮಕ್ಕಳ ಸಂರಕ್ಷಣೆಯ ಹಿನ್ನೆಲೆಯಲ್ಲಿ ಹೇಳಿದೆ, ಅದು ಸಂವಿಧಾನದ ಆಶಯವೂ ಹೌದು. ಅದರೆ ಇಂದು ನಮ್ಮ ದೇಶದಲ್ಲಿ ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿಯಲ್ಲಿ ಮಕ್ಕಳ ಸ್ಥಿತಿ ನೋಡಿದರೆ ಕಳೆದ 72 ವರ್ಷಗಳ ಅವಧಿಯಲ್ಲಿ ಸಂವಿಧಾನದ ಈ ಎಲ್ಲಾ ಆಶಯ ಈ ವ್ಯವಸ್ಥೆಗೆ ಅರ್ಥವಾಗಿಲ್ಲವೇ ಎಂಬ ಸಂಶಯ ಕಾಡುತ್ತದೆ. ಈ ಅಭಿವೃದ್ಧಿ ಮಾರಕ ಸಮಸ್ಯೆಯನ್ನು ಇನ್ನೂ ಒಂದು ಕಲ್ಯಾಣ ಸಮಸ್ಯೆ ಅಥವಾ ಕಲ್ಯಾಣ ಕಾರ್ಯಕ್ರಮವಾಗಿ ನೋಡಲಾಗಿದೆಯೋ ಎಂಬ ಆತಂಕ ಕಾಡುತ್ತಿದೆ. ಹಾಗೆ ನೋಡಿದರೆ, ಭಾರತದ ಮಾನವ ಅಭಿವೃದ್ಧಿಗೆ ಈ ಪದ್ಧತಿಯೇ ದೊಡ್ಡ ಮಾರಕವಾಗಿ ಮುಂದುವರಿಯಲಿದೆ ಎಂಬುದಕ್ಕೆ ಯಾವುದೇ ಸಂಶಯವಿಲ್ಲ.

1992 ಡಿಸೆಂಬರ 11, ರಂದು ಭಾರತವು 1989 ನವೆಂಬರ್ 20ರಂದು ವಿಶ್ವಸಂಸ್ಥೆಯು ಅಂಗೀಕರಿಸಿದ “ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ”ಗೆ ಸಹಿ ಮಾಡಿದೆ. ಅದರಲ್ಲಿರುವ ಮಕ್ಕಳಿಗೆ ಸಂಬಂಧಿಸಿದ 54 ಅಂಶಗಳನ್ನು ಭಾರತದಲ್ಲಿ ಅನುಷ್ಠಾನಕ್ಕೆ ತರಲು ಒಪ್ಪಿ ಸಹಿ ಮಾಡಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇಧ -32ರ ಪ್ರಕಾರ ಬಾಲಕಾರ್ಮಿಕ ಪದ್ಧತಿಯಿಂದ ಎಲ್ಲಾ ಮಕ್ಕಳ ರಕ್ಷಣೆ (ಮಕ್ಕಳು ಎಂದರೆ ಇಲ್ಲಿ 18 ವರ್ಷ) ಎಂದು ಹೇಳಲಾಗಿದೆ. ಆದರೆ ಭಾರತದಲ್ಲಿ ಈ ಆಶಯ ಈಡೇರಿಸುವಲ್ಲಿ ಕೂಡಾ ಪ್ರಗತಿ ಕಾಣುತ್ತಿಲ್ಲ. ಈ ಒಡಂಬಡಿಕೆಗೆ ಸಹಿ ಮಾಡಿದ್ದು ಕೇವಲ ವಿಶ್ವಸಂಸ್ಥೆಯಲ್ಲಿ ಗುರುತಿಸಿಕೊಳ್ಳಲಾ? ಅಥವಾ ದೇಶದ ಕೋರ್ಟ್‍ಗಳ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿಯೇ? ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಏಕೆಂದರೆ ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿಯ ನಿರ್ಮೂಲನೆ ಆಡಳಿತಶಾಹಿ ವರ್ಗದ, ಅಧಿಕಾರಿಗಳ, ಇಲಾಖೆಗಳ, ಇಚ್ಛಾಶಕ್ತಿಯ ಕೊರತೆ ಪ್ರಮುಖವಾಗಿ ಎದ್ದು ಕಾಣುತ್ತಿದೆ. ವರ್ಷಕ್ಕೊಮ್ಮೆ ನಿರ್ಮೂಲನಾ ಆಂದೋಲನ, ವರ್ಷಕ್ಕೆ ಕೆಲವೇ ಬಾರಿ ನಡೆಯುವ ದುಡಿಮೆಯಿಂದ ಮಕ್ಕಳ ಬಿಡುಗಡೆಯ ದಾಳಿ ಕಾರ್ಯಕ್ರಮ ಇಷ್ಟಕ್ಕೆ ಸೀಮಿತಗೊಳಿಸಿರುವುದು ಒಂದು ರೀತಿಯಲ್ಲಿ ತಲೆ ತಗ್ಗಿಸುವ ಸಂಗತಿಯೇ ಆಗಿದೆ.

2002ನೇ ಇಸವಿಯಲ್ಲಿ ಸಂವಿಧಾನದ ತಿದ್ದುಪಡಿಯ 93ನೇ ಬಿಲ್ಲ್‍ನ ಮುಖಾಂತರ 86ನೇ ತಿದ್ದುಪಡಿಯಾಗಿ ಮೂಲಭೂತ ಹಕ್ಕು (ಅಧ್ಯಾಯ-3) ಕಲಂ 21 ಬದುಕುವ ಹಕ್ಕಿನ ಜೊತೆಯಾಗಿ ಶಿಕ್ಷಣವನ್ನು ಈ ದೇಶದ ಎಲ್ಲಾ 06 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಮೂಲಭೂತ ಹಕ್ಕಾಗಿ ನೀಡುವ ಒಂದು ಬಧ್ಧತೆಯನ್ನು ನಮ್ಮ ಸಂವಿಧಾನ ಹೇಳಿದೆ. ಆದರೆ ಸಾರ್ವತ್ರಿಕವಾಗಿ, ಕಡ್ಡಾಯವಾಗಿ, “ಶಿಕ್ಷಣ”ದ ಕಲಿಕೆಯಲ್ಲಿ ಅಥವಾ ಶಾಲೆಯಲ್ಲಿ ನಮ್ಮ ಎಲ್ಲಾ ಮಕ್ಕಳು ಇದ್ದಾರೆಯೇ? ನೀವೇ ಯೋಚಿಸಿ. ಸಂವಿಧಾನ ತಿದ್ದುಪಡಿ 2002ರಲ್ಲಿ ಬಂದ ನಂತರ 2009ರಲ್ಲಿ “ಉಚಿತ ಮತ್ತು ಕಡ್ಡಾಯ ಮೂಲಭೂತ ಶಿಕ್ಷಣ ಹಕ್ಕಿನ” ಕಾಯ್ದೆ ಬಂತು, ಇಂದಿಗೆ ಈ ಕಾಯ್ದೆ ಬಂದು 13 ವರ್ಷ ಕಳೆದರೂ ಎಲ್ಲಾ ಮಕ್ಕಳನ್ನು 14 ವರ್ಷಗಳ ತನಕ ಶಾಲೆಗಳಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಮತ್ತು ಎಲ್ಲಾ ಮಕ್ಕಳು ಶಾಲೆಯ ಮೆಟ್ಟಿಲು ಹತ್ತುವಂತೆ ಮಾಡಲೂ ಸಾಧ್ಯವಾಗಿಲ್ಲ. ಕನಿಷ್ಠ 14 ವರ್ಷದೊಳಗಿನ ಮಕ್ಕಳನ್ನು ಶಾಲೆಗೆ/ಶಿಕ್ಷಣಕ್ಕೆ/ಕಲಿಕೆಗೆ ತರಲು ಸಾಧ್ಯವಾಗದಿದ್ದರೆ ಇನ್ನು ಉಳಿದ ಅಂಶಗಳನ್ನು ಸಾಧಿಸುತ್ತೇವೆ ಎಂಬ ಯಾವುದೇ ಅಂಶಗಳು ಮತ್ತು ಲಕ್ಷಣಗಳು ಕಾಣುತ್ತಿಲ್ಲ, ಸೂಚಕಗಳೂ ಕಾಣುತ್ತಿಲ್ಲ.

ಇನ್ನು ಕಾನೂನು, ನಿಯಮ ವಿಚಾರಕ್ಕೆ ಬರುವುದಾದರೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ನಮ್ಮಲ್ಲಿ ನೇರವಾಗಿ ಮಾತನಾಡುವ ಕಾನೂನು ಒಂದೇ ಇದೆ. ಅದು 1986ರ ಬಾಲಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ, ಆದರೆ 1986 ರಿಂದ 2016ರ ವರೆಗೆ ಸುಮಾರು 30 ವರ್ಷಗಳ ಅವಧಿಯಲ್ಲಿ ಈ ಕಾಯ್ದೆಗೇ ನಾಚಿಕೆ ಬರುವಂತಹ ಸಾಧನೆ ಆಗಿರುವುದು ನಮಗೆಲ್ಲರಿಗೂ ಗೊತ್ತಿರುವ ಸತ್ಯ. ಇದರಿಂದ ಸಾಧನೆ ಆಗಿಲ್ಲ ಎನ್ನುವ ಸತ್ಯದ ಅರಿವಿನೊಂದಿಗೆ, ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಿರುವ ಕಾರಣಕ್ಕಾಗಿ ಅನಿವಾರ್ಯದಿಂದಲೋ, ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಒತ್ತಡವನ್ನು ಸಮಾಧಾನಪಡಿಸಲೋ ಏನೋ! 2016ರಲ್ಲಿ ಈ ಕಾಯ್ದೆಗೆ ಸರಕಾರ ತಿದ್ದುಪಡಿ ತಂದಿತು. ಅದರ ಪ್ರಕಾರ ಒಂದಿಷ್ಟು ಕ್ರಮಗಳು ಬಂದರೂ ಅದರ ಅನುಷ್ಠಾನದ ಅಂತರ ತುಂಬಿಸಲು ವ್ಯವಸ್ಥೆಯ ಇಚ್ಚಾಶಕ್ತಿ ಕಾಣದಾಗಿದೆ. 2016ರಲ್ಲಿ ತಿದ್ದುಪಡಿಗೊಂಡ ಕಾಯ್ದೆ ಇದೀಗ, ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ-1986 (2016ರ ತಿದ್ದುಪಡಿಯಂತೆ) ಎಂದು ಶೀರ್ಷಿಕೆ ಪಡೆದಿದೆ. ಈ ಕಾಯ್ದೆಯ ಕಲಂ 2(2)ರ ಪ್ರಕಾರ ಮಗು ಎಂದರೆ 14 ವರ್ಷದೊಳಗಿನ ಎಲ್ಲಾ ಮಾನವ ಜೀವಿಗಳು. ಕಲಂ 3(1) ಪ್ರಕಾರ ಈ ದೇಶದಲ್ಲಿ 14 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕಾರಣಕ್ಕೂ, ಯಾವುದೇ ಕ್ಷೇತ್ರದಲ್ಲಿ ದುಡಿಸುವುದನ್ನು ಈ ಕಾಯ್ದೆ ಸಂಪೂರ್ಣವಾಗಿ ನಿಷೇಧಿಸಿದೆ. ಇದರ ಪ್ರಕಾರ ಪೋಷಕರು ಕೂಡ ಸ್ವಂತ ಮಕ್ಕಳನ್ನು ಅವರ ಯಾವುದೇ ಉದ್ದಿಮೆಗಳಲ್ಲಿ, ದುಡಿಮೆಗಳಿಗೆ ಅವರ ಮಕ್ಕಳನ್ನು ಕರೆದೊಯ್ಯುವುದು, ದುಡಿಸುವುದು, ನಿಯೋಜಿಸುವುದು ಸಂಪೂರ್ಣ ನಿಷೇಧ. ಕುಟುಂಬದಲ್ಲಿನ ಉದ್ದಿಮೆ, ವ್ಯವಸಾಯ, ಕೃಷಿಗಳಲ್ಲಿ ಮಕ್ಕಳ ಸಹಾಯ ಪಡೆಯುವುದಾದರೆ, ಕಾಯ್ದೆಯ ಷೆಡ್ಯೂಲ್‍ನಲ್ಲಿ ಭಾಗ-ಎ ಮತ್ತು ಭಾಗ-ಬಿ ಯಲ್ಲಿ ಹೇಳಿದ ಅಂಶಗಳನ್ನು ಹೊರತುಪಡಿಸಿ, ಅಪಾಯಕಾರಿ ಅಲ್ಲದ ಹಾಗೂ ಶಾಲೆಗಳಿಗೆ ರಜೆ ಇರುವ ಅವಧಿಯಲ್ಲಿ ಮಾತ್ರ, ಕುಟುಂಬಸ್ಥರು ಮಾತ್ರ ಮಕ್ಕಳ ಸಹಾಯ ಪಡೆಯಬಹುದು ಎಂದು ಹೇಳಿದೆ. ಒಂದು ವೇಳೆ ಯಾರೇ ದುಡಿಸಿದರೂ ಕಲಂ 14(1) ಪ್ರಕಾರ 06 ತಿಂಗಳಿಂದ 2 ವರ್ಷ ಜೈಲು ಶಿಕ್ಷೆ ಹಾಗೂ ರೂ. 20.000/-ದಿಂದ 50.000/- ತನಕ ದಂಡ ಇದೆ ಅಥವಾ ಎರಡನ್ನೂ ವಿಧಿಸಬಹುದು. ಒಬ್ಬನೇ ಮಾಲೀಕ ಒಂದೇ ತಪ್ಪನ್ನು 2 ಸಲ ಮಾಡಿದಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಕಾಯ್ದೆಯ ಇನ್ನೊಂದು ಮಹತ್ವ ಏನೆಂದರೆ ಸ್ವಂತ ತಂದೆ ತಾಯಿಗಳು/ಪೋಷಕರು ಒಂದು ವೇಳೆ ಮಕ್ಕಳನ್ನು ದುಡಿಸಿದಲ್ಲಿ ಅವರಿಗೂ ಕೂಡಾ ರೂ. 10.000/- ದಂಡ ವಿಧಿಸಲು ಅವಕಾಶವಿದೆ.

ಇನ್ನು 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಈ ಕಾಯ್ದೆಯಲ್ಲಿ ಹದಿಹರೆಯದವರು ಅಥವಾ ಕಿಶೋರಾವಸ್ಥೆಯವರು ಎಂದು ಹೇಳಲಾಗಿದೆ. 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಕಾನೂನಿನ ಶೆಡ್ಯೊಲ್‍ನ ಭಾಗ-1ರಲ್ಲಿ ಹೇಳಿರುವ ಎಲ್ಲಾ ಕ್ಷೇತ್ರ, ಅಂದರೆ ಅಪಾಯಕಾರಿ ಕ್ಷೇತ್ರಗಳಲ್ಲಿ ದುಡಿಸುವುದುನ್ನು ನಿಷೇಧಿಸಿದೆ. (ಕಲಂ 3(ಎ)) ಯಾರೇ ದುಡಿಸಿದ್ದಲ್ಲಿ 6 ತಿಂಗಳಿನಿಂದ 2 ವರ್ಷ ಜೈಲು ಶಿಕ್ಷೆ , ರೂ. 20.000/- ದಿಂದ ರೂ. 50.000/-ಗಳ ತನಕ ದಂಡ ಅಥವಾ ಎರಡನ್ನು ಸಹ ವಿಧಿಸಬಹುದಾಗಿದೆ. ಆದರೆ 2006ರ ನಂತರ ಕಳೆದ 6 ವರ್ಷಗಳಲ್ಲಿ ಈ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದು ಕೇವಲ ಬೆರಳೆಣಿಕೆಯಷ್ಟೇ ಎಂಬುದು ಖೇದದ ಸಂಗತಿ. ಪ್ರಕರಣ ದಾಖಲು ದೂರದ ಮಾತು ಅನ್ನಿಸುತ್ತಿದೆ, ಏಕೆಂದರೆ ತಿದ್ದುಪಡಿ ಬಂದ ನಂತರ ಅಧಿಕಾರಿಗಳಿಗೆ ಈ ತಿದ್ದುಪಡಿ ಕುರಿತು ಸಮಗ್ರ ತಿಳುವಳಿಕೆ, ಜ್ಞಾನ, ತರಬೇತಿಯೇ ಇನ್ನು ಆಗಿಲ್ಲ ಎನ್ನುವುದು ಅತಿ ಬೇಸರ ಸಂಗತಿ.

ಈ ಕಾಯ್ದೆಯ ಕಲಂ 17ರ ಪ್ರಕಾರ, ಈ ಕಾಯ್ದೆಯ ಅನುಷ್ಠಾನಕ್ಕಾಗಿ ಮತ್ತು ಪ್ರಕರಣ ದಾಖಲಿಸಲು ವಿವಿಧ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಿ ಅಧಿಕಾರ ನೀಡಲು ರಾಜ್ಯ ಸರಕಾರಕ್ಕೆ ಈ ಕಾಯ್ದೆಯಲ್ಲಿ ಅವಕಾಶ ನೀಡಿದೆ. ಅದರಂತೆ ಕರ್ನಾಟಕ ರಾಜ್ಯ ಸರಕಾರವು, ರಾಜ್ಯದ 11 ಇಲಾಖೆಯ ವಿವಿಧ ಇಲಾಖಾ ಅಧಿಕಾರಿಗಳಿಗೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಯ ನಿರ್ಮೂಲನೆಯ ಜವಾಬ್ದಾರಿ ನೀಡಿದೆ. ಆದರೆ ಸರಕಾರಿ ಅಧಿಕಾರಿಗಳ ಮನಸ್ಸಿನಲ್ಲಿ ಬೇರೂರಿರುವ ಅಂಶ ಏನೆಂದರೆ ಬಾಲ ಮತ್ತು ಕಿಶೋರ ಕಾರ್ಮಿಕರು ಕಂಡಲ್ಲಿ ಕಾರ್ಮಿಕ ಇಲಾಖೆ ಮಾತ್ರ ಜವಾಬ್ದಾರರು ಎಂಬುದು. ಅದು ಶುದ್ಧ ತಪ್ಪು. ರಾಜ್ಯದ 11 ಇಲಾಖೆಯ ವಿವಿಧ ಹಂತದ ಅಧಿಕಾರಿಗಳಿಗೆ ಕಾರ್ಮಿಕ ನಿರೀಕ್ಷಕರ ಅಂದರೆ ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿಷೇಧಾಧಿಕಾರಿಗಳ ಅಧಿಕಾರವನ್ನು ನೀಡಿದೆ. ಆ ಇಲಾಖೆಗಳು ಯವುವೆಂದರೆ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಕಾರ್ಖಾನೆ ಮತ್ತು ಬಾಯ್ಲರ್‌ಗಳು, ನಗರಾಭಿವೃದ್ಧಿ, ರೇಷ್ಮೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗಳು ಹೀಗೆ 11 ಇಲಾಖೆಗಳಿಗೂ ಕೆಲಸ ನಿರ್ವಹಿಸಲು ಅಧಿಕಾರ ನೀಡಿದ್ದಾರೆ. ಹಾಂ! ಇಲ್ಲಿ ಪೊಲೀಸ್ ಮತ್ತು ಕಾರ್ಮಿಕ ಇಲಾಖೆ ಕಾಣುತ್ತಿಲ್ಲ ಅಲ್ಲವೇ? ಹೌದು ಕಲಂ 16ರ ಪ್ರಕಾರ ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆ ಕಡ್ಡಾಯವಾಗಿ ಕ್ರಮ ಕೈಗೊಳ್ಳಲೇಬೇಕು ಎಂದು ಪ್ರತ್ಯೇಕವಾಗಿ ಸೂಚಿಸಿದೆ. ಅದರಂತೆ ಗ್ರಾಮ ಪಂಚಾಯತ್‍ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಾಲೂಕು ಹಂತದಲ್ಲಿ ಕಂದಾಯ ನಿರೀಕ್ಷಕರುಗಳು, ಹೋಬಳಿ ನಿರೀಕ್ಷಕರು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ನಗರಸಭೆ ಮಟ್ಟದಲ್ಲಿ ನಗರಸಭೆ ಆಯುಕ್ತರುಗಳು, ಮುಖ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರುಗಳು ಇತ್ಯಾದಿ ಇವರೆಲ್ಲರಿಗೂ ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿಷೇಧಾಧಿಕಾರಿಗಳನ್ನಾಗಿ ನೇಮಿಸಿ ಕಾನೂನು ಮತ್ತು ಸರಕಾರ ಜವಾಬ್ದಾರಿ ನೀಡಿದೆ. ಆದರೆ ಇವರು ಪ್ರಕರಣ ದಾಖಲಿಸಿದ್ದು ಎಲ್ಲಿಯಾದರೂ ಇದೆಯಾ ಎಂದು ಹುಡುಕಿ, ಸಿಕ್ಕಿದರೆ ವಿಸ್ಮಯವೇ ಸರಿ. ಹಾಗಾಗಿ ನಾವು ಬಾಲಕಾರ್ಮಿಕರು ಕಂಡಲ್ಲಿ ಇವರಿಗೆನೇ ದೂರು ನೀಡಬೇಕು. ಇದರೊಂದಿಗೆ ನಿಮ್ಮ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ, ಕಾರ್ಮಿಕ ಇಲಾಖೆಗೆ, ಪೊಲೀಸ್ ಠಾಣೆಗೆ, ಜಿಲ್ಲಾಡಳಿತಕ್ಕೆ ದೂರು ನೀಡಬಹುದು. ಪ್ರಮುಖವಾಗಿ ಚೈಲ್ಡ್ ಲೈನ್‍ಗೆ (1098- ಹತ್ತು, ಒಂಬತ್ತು, ಎಂಟಕ್ಕೆ) ಕರೆ ಮಾಡಬೇಕು.

ಬಾಲ ಮತ್ತು ಹದಿಹರೆಯದ (ಕಿಶೋರ) ಮಕ್ಕಳ ದುಡಿಮೆಯ ಪರಿಣಾಮ ನೋಡುವುದಾದರೆ ಈಗಾಗಲೇ ಲೇಖನದ ಪ್ರಾರಂಭದಲ್ಲಿ ಚರ್ಚಿಸಿದಂತೆ ಮಾನವ ಅಭಿವೃದ್ಧಿ ಸಂಪೂರ್ಣವಾಗಿ ಕುಸಿದು ಬೀಳುತ್ತೆ. ಮಕ್ಕಳು ಎಲ್ಲಾ ರೀತಿಯ ‘ಹಕ್ಕು’ಗಳ ಉಲ್ಲಂಘನೆಗೆ ಒಳಗಾಗಿ ಸಂತ್ರಸ್ತರಾಗಿಯೇ ಬದುಕಬೇಕಾಗುತ್ತದೆ. ಮಕ್ಕಳ ಸಾರ್ಮಥ್ರ್ಯ ಬೆಳವಣಿಗೆಗೆ ದೊಡ್ಡ ಆಘಾತವಾಗಿ ಸಾಮರ್ಥ್ಯಾಭಿವೃದ್ಧಿಯಾಗದೆ ಶೋಷಣೆಯನ್ನು ಅನುಭವಿಸಿದ ಕುಟುಂಬಗಳು ಸೃಷ್ಠಿಯಾಗುತ್ತವೆ. ಇದಲ್ಲದೇ ಬಹಳ ಪ್ರಮುಖವಾಗಿ ಸಮಾಜದಲ್ಲಿ ಬಡತನ, ಅನಕ್ಷರತೆ, ನಿರುದ್ಯೋಗ, ಜನಸಂಖ್ಯೆಯು ಹೆಚ್ಚುವ ಸಾಧ್ಯತೆಗಳೇ ಹೆಚ್ಚು.

ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿಗೆ ಬಲಿಯಾಗಿ ಬಂದ ಮಕ್ಕಳು ಮತ್ತು ಕುಟುಂಬಗಳು ಹೆಚ್ಚಾಗಿ ಅತ್ಯಂತ ಹೀನಾಯ ರೀತಿಯ ತಾರತಮ್ಯಕ್ಕೆ, ನಿರ್ಲಕ್ಷ್ಯಕ್ಕೆ ಒಳಗಾಗಿ ಹಲವಾರು ಸೌಲಭ್ಯವಂಚಿತ ಕುಟುಂಬಗಳಾಗಿ ಸಮಾಜದಲ್ಲಿ ದುರ್ಬಲವರ್ಗದವರಾಗಿಯೇ ಬದುಕುವ ಸ್ಥಿತಿ ನಿರ್ಮಾಣವಾಗಿರುವುದು ಕಳೆದ 30 ವರ್ಷದಲ್ಲಿ ನಾವು ಕಂಡಿದ್ದೇವೆ. ಅದಲ್ಲದೇ ಇನ್ನು ಅನೇಕ ರೀತಿಯ ಮಾನಸಿಕ, ದೈಹಿಕ, ಲೈಂಗಿಕ ಶೋಷಣೆಗಳಲ್ಲದೆ ದುಡಿಸುವ ವರ್ಗದವರಿಂದ ದುರುಪಯೋಗಪಡಿಸಿಕೊಂಡು ಮಾಲೀಕರುಗಳ “ಸ್ವಾರ್ಥ”ಗಳಿಗೆ ಬಲಿಯಾಗುತ್ತಿರುವ ಸಂಗತಿ ಈಗ ಸಾರ್ವತ್ರಿಕ ಸತ್ಯವಾಗಿದೆ. ಈ ಕೆಟ್ಟ ಪದ್ಧತಿಯ ಪರಿಣಾಮದ ಇನ್ನೊಂದು ಮುಖ ಏನೆಂದರೆ, ಮಕ್ಕಳು ಮುಂದೆ ದೊಡ್ಡವರಾದ ಮೇಲೆ ಕೌಶಲ್ಯ ರಹಿತ ಕಾರ್ಮಿಕರಾದಾಗ ಕಡಿಮೆ ಸಂಪಾದನೆಯಿಂದ ಜೀವನ ಕಷ್ಟಮಯವಾಗಿರುವುದು, ಆರೋಗ್ಯ ಸಮಸ್ಯೆ, ಬೆಳವಣಿಗೆಯಲ್ಲಿ ಕುಂಠಿತ, ದುರಭ್ಯಾಸಗಳಿಗೆ ಬಲಿ, ಅಪಾಯಕಾರಿ ಕೆಲಸದಲ್ಲಿ ತೊಡಗಿ ಅಂಗವಿಕಲತೆ, ಮಾನಸಿಕ ಒತ್ತಡ, ಖಿನ್ನತೆಯಿಂದ ಜೀವನಕ್ಕೆ ತುತ್ತಾಗುವುದು, ಹೀಗೆ ಹಲವಾರು ಅಭಿವೃದ್ಧಿ ಮಾರಕ ಸಮಸ್ಯೆಗಳಿಗೆ ಬೀಳುವ ಸಾಧ್ಯತೆಗಳೇ ಹೆಚ್ಚು. ಇದರಿಂದ ಕುಟುಂಬ, ಸಮಾಜ, ರಾಜ್ಯ, ರಾಷ್ಟ್ರದ ಅಭಿವೃದ್ಧಿ ಕುಂಠಿತವಾಗುತ್ತದೆ.

ಬಾಲಕಾರ್ಮಿಕ ಪದ್ಧತಿಯಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವ ಮಾಲೀಕರು ಹೆಚ್ಚಿನವರು ಸ್ವಾರ್ಥಿಗಳಾಗಿರುತ್ತಾರೆ. ಅವರಿಗೆ ಅವರ ಸ್ವಾರ್ಥ “ಲಾಭ”ದ ಉದ್ದೇಶವೇ ಪ್ರಮುಖವಾಗಿರುತ್ತದೆ. ಅವರಿಗೆ ಕಡಿಮೆ ಕೂಲಿಯಲ್ಲಿ ಯಾವುದನ್ನೂ, ಏನನ್ನೂ ಪ್ರಶ್ನಿಸದೇ ಇರುವ ಮಕ್ಕಳ ನಿರಂತರ ದುಡಿಮೆಯಿಂದ ಬರುವ ‘ಲಾಭ’ವೇ ಪ್ರಮುಖವಾಗಿರುತ್ತದೆ. ಅದರೆ ಅವರು, ಅವರ ಮಕ್ಕಳನ್ನು ಮಾತ್ರ ಲಕ್ಷಾಂತರ ರೂಪಾಯಿ ಶುಲ್ಕ ನೀಡಿ ಶಾಲೆಗಳಿಗೆ ದಾಖಲಿಸುತ್ತಾರೆ. ಬಡವರ, ದುರ್ಬಲ ವರ್ಗದವರ, ಹಿಂದುಳಿದವರ ಮಕ್ಕಳು ಅವರ ಸೇವೆಗೆ ಇರುವವರು, ಅವರಿಗೆ ಶಿಕ್ಷಣ ಬೇಕಿಲ್ಲ ಎಂಬ ಮನೋಸ್ಥಿತಿ ವಿಕೃತ ಈ ಮಾಲೀಕರದ್ದು. ನಾನು ನನ್ನ ವೃತ್ತಿ ಜೀವನದ ಅನುಭವದಲ್ಲಿ ಹಲವಾರು ಬಾರಿ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೆ ಹೋದಾಗ ಮಾಲೀಕರ ಪ್ರಶ್ನೆ ಏನೆಂದರೆ, ಅವರು ಬಡವರು ನಾನು ಅವರುಗಳಿಗೆ ಕೆಲಸವನ್ನು ಕೊಡುವ ಮುಖಾಂತರ ಸಹಾಯ ಮಾಡುತ್ತೇವೆ. ನಾವು ಅವರಿಗೆ ಊಟ (ಹಳೆಯದು) ತಿಂಡಿ (ನಿನ್ನೆಯದ್ದು ಅಥವಾ ಅವರು ತಿಂದು ಉಳಿದದ್ದು) ಬಟ್ಟೆ (ಹಳೆಯದ್ದು ಅವರಿಗೆ ಆಗದ್ದು) ಕೊಡುತ್ತೇವೆ. ನೀವು ಕೊಡುತ್ತೀರಾ? ಶಾಲೆಗೆ ಹೋದರೆ ಅವರಿಗೆ ಊಟನೇ ಇರುವುದಿಲ್ಲ ಎಂದು, ಮಕ್ಕಳ ಉದ್ಧಾರಕ್ಕೆ ಇವರ ಮನೆಯಲ್ಲಿ ಕೆಲಸಕ್ಕೆ (ಎಂಜಲು ಬಾಚಲು) ಇಟ್ಟುಕೊಂಡಿದ್ದೇವೆ ಎಂಬ ಅರ್ಥದಲ್ಲಿ ಮಾತನಾಡುತ್ತಾರೆ. ಇಂತಹ ‘ಸ್ವಾರ್ಥಿ’ ಮಾಲೀಕರುಗಳಿಗೆ ನಮ್ಮ ಪ್ರಶ್ನೆ ಏನೆಂದರೆ, ಬಡವರ ಮನೆಯ ಬಡತನ ನಿರ್ಮೂಲನೆ ಜವಾಬ್ದಾರಿ ನಿಮಗೆ ಯಾರು ಕೊಟ್ಟರು? ನಿಮ್ಮ ಮನೆಯಲ್ಲಿ, ಅಂಗಡಿಯಲ್ಲಿ ಕಡಿಮೆ ಕೂಲಿಗೆ ಶೋಷಣೆಯಿಂದ ದುಡಿಸಿದರೆ ಅವರ ಬಡತನ ನಿರ್ಮೂಲನೆ ಆಗುತ್ತದೆಯೇ? ನಿಮಗೆ ನಿಜವಾಗಿಯೂ ಅವರ ಬಡತನದ ಬಗ್ಗೆ ಕಾಳಜಿ ಇದ್ದರೆ ಅಂತಹ ಮಕ್ಕಳನ್ನು ಶಾಲೆಗೆ ಸೇರಿಸಬೇಕಿತ್ತು ಅಲ್ವೆ? ಚಿಕ್ಕ ಮಕ್ಕಳನ್ನು ಕಡಿಮೆ ಕೂಲಿಗೆ ದುಡಿಸಿ ನಿಮ್ಮ ಸ್ವಾರ್ಥ ತೀರಿಸಿಕೊಳ್ಳುತ್ತಾ ಅವರ ಮನೆಯ ಬಡತನದ ಬಗ್ಗೆ ಕಾಳಜಿ ನಿಮಗೆ ಯಾಕೆ? ನಿಮ್ಮ ಮಕ್ಕಳನ್ನೇ ನಿಮ್ಮ ಮನೆಯಲ್ಲಿ ದುಡಿಸಿ ನೋಡೋಣ ಎಂದರೆ ಅವರು ಮೌನ ತಾಳುತ್ತಾರೆ ಅಥವಾ ಕಾನೂನಿನ ಚೌಕಟ್ಟಿಗೆ ಬಿದ್ದಿರುವುದರಂದ ಆಕ್ರೋಶಗೊಳ್ಳುತ್ತಾರೆ. ಇನ್ನು ಕೆಲವರು ನನ್ನಲ್ಲಿ ಕೇಳಿದುಂಟು ಏನೆಂದರೆ, ನಿಮ್ಮ ಭಾಗದಲ್ಲಿ ಯಾರಾದರೂ ಬಡ ಹೆಣ್ಣು ಮಕ್ಕಳು ಮನೆ ಕೆಲಸಕ್ಕೆ ಸಿಗುತ್ತಾರಾ? ಯಾಕೆ ಎಂದು ಕೇಳಿದರೆ ನಮಗೆ ಮಗುವಾಗಿದೆ ಮನೆ ಕೆಲಸಕ್ಕೆ ಬೇಕು ಎಂದು. ನಾನು ಸಂಬಳ ಎಷ್ಟು ಕೊಡುತ್ತೀರಿ? ಎಂದು ಕೇಳಿದಾಗ ಪ್ರಾಮಾಣಿಕರು ಬೇಕು, ನಂಬಿಕಸ್ಥರು ಆಗಬೇಕು, ಕ್ಲೀನ್ ಇರಬೇಕು ಎಂದು ಪಟ್ಟಿ ಹೇಳಿದರು. ಓಕೆ ಸಂಬಳ ಎಷ್ಟು ಕೊಡುತ್ತೀರಿ? ಮತ್ತೆ ಕೇಳಿದಾಗ, ತಿಂಗಳಿಗೆ 5 ರಿಂದ 6 ಸಾವಿರ ಎಂದರು. ಅಂದರೆ ಇವರಿಗೆಲ್ಲಾ ಬಡತನ, ಶಾಲೆ ಬಿಟ್ಟ ಮಕ್ಕಳು ಎಲ್ಲಾ ಸಮಾಜದಲ್ಲಿ ಇರಬೇಕು ಎಂದಾಯಿತು. ಆಗ ನಾನು ಅವರ ಮುಖಕ್ಕೆ ಮಂಗಳಾರತಿ ಮಾಡಿ ಬಾಲಕಾರ್ಮಿಕ ಪದ್ಧತಿ ಬಗ್ಗೆ ತಿಳಿಸಿದೆ. ಅದಕ್ಕೆ ಅವರು ಯಾವುದೇ ನಾಚಿಕೆ ಇಲ್ಲದೆ, ಬಡವರು ದೊಡ್ಡವರೂ ಆಗಬಹುದು, ವಿಧವೆ ಇದ್ದರೂ ಆಗಬಹುದು ಎಂದರು. ನೋಡಿ ಇಂತಹವರಿಗೆ ಬಡವರು, ವಿಧವೆಯರು, ನೊಂದವರು, ಕಷ್ಟದಲ್ಲಿರುವವರು, ಶೋಷಿತರು ಎಲ್ಲಾ ಬೇಕು. ಎಂತಹ ಸಮಾಜ ನೋಡಿ! ಆಗ ನನ್ನ ತಾಳ್ಮೆ ಕಟ್ಟೆ ಒಡೆದು ಅವರಿಗೆ ಎಚ್ಚರಿಕೆ ನೀಡಿ ಬಯ್ಯುವ ಸ್ಥಿತಿ ಬಂತು. ಇಂತಹ ಮನೋಸ್ಥಿತಿ ಬದಲಾಗಬೇಕಿದೆ. ಮನೆ ಕೆಲಸಕ್ಕೆ ಹೋದ ಹೆಚ್ಚಿನ ಹೆಣ್ಣು ಮಕ್ಕಳು ಒಂದಲ್ಲ ಒಂದು ರೀತಿಯ ಲೈಂಗಿಕ ಶೋಷಣೆಗೆ ಒಳಗಾಗಿರುವ ಸತ್ಯ ಇಂದು ಬಹಿರಂಗವಾಗಿದೆ. ಇಂತವರಿಗೆ ಕಠಿಣ ಕಾನೂನಿನ ಶಿಕ್ಷೆ ಆಗಬೇಕು.

ಎಲ್ಲಾ ಮಕ್ಕಳಿಗೆ ಶಿಕ್ಷಣದೊಂದಿಗೆ ಜೀವನ ಮತ್ತು ವೃತ್ತಿ ಕೌಶಲ್ಯದ ಕಲಿಕೆ ಬೇಕು. ಎಲ್ಲಾ ಕೆಲಸವನ್ನು ಗೌರವದಿಂದ “ಘನತೆಯಿಂದ” ಕಾಣಬೇಕು ನಿಜ. ಆದರೆ ಶಾಲೆ, ಶಿಕ್ಷಣ ಬಿಟ್ಟು ದುಡಿಮೆ, ಶೋಷಣೆ, ದೌರ್ಜನ್ಯ ತಾರತಮ್ಯವೇ ಜೀವನವೇ ಆಗಬಾರದು ಅಲ್ವೇ? ಇಂತಹ ಸ್ಥಿತಿಯಲ್ಲಿ ಎಲ್ಲಾ ನಾಗರಿಕರು ಅರ್ಥೈಸಿಕೊಳ್ಳಬೇಕಾದ ಒಂದು ಸಂಗತಿ ಏನೆಂದರೆ ಮಕ್ಕಳನ್ನು ಕೆಲಸಕ್ಕೆ, ದುಡಿಮೆಗೆ ನೇಮಿಸಿಕೊಳ್ಳುವ, ತೊಡಗಿಸಿಕೊಳ್ಳುವ, ದುಡಿಮೆಗೆ ಹಚ್ಚುವ, ನೇಮಕಾತಿ ಮಾಡುವ ಪದ್ಧತಿ ನಿಲ್ಲಬೇಕು, ಅಂದರೆ “ಮಕ್ಕಳ ದುಡಿಮೆಯ ಬೇಡಿಕೆ ನಿಲ್ಲಬೇಕು, ಆಗ ಮಕ್ಕಳನ್ನು ದುಡಿಮೆಗೆ ಪೂರೈಕೆ ಮಾಡುವುದು ನಿಲ್ಲುತ್ತದೆ. ಬೇಡಿಕೆ ಇದ್ದಷ್ಟು ಪೂರೈಕೆ ಜಾಸ್ತಿಯಾಗುತ್ತದೆ. ಬೇಡಿಕೆ ಸಂಪೂರ್ಣ ನಿಂತಾಗ ಪೂರೈಕೆ ನಿಂತು ಆ ದಾರಿ ಶಾಲೆಯ ಕಡೆಗೆ, ಶಿಕ್ಷಣದ ಕಡೆಗೆ ಸಾಗುತ್ತದೆ”. ಯಾಕೆಂದರೆ ನಮ್ಮ ದೇಶದಲ್ಲಿ ಆರ್ಥಿಕತೆ ಮತ್ತು ಭೂಮಿಯ ಹಂಚಿಕೆಯಲ್ಲಿ ಅಸಮಾನತೆ ಇರುವ ಕಾರಣ ಹಾಗೂ 70% ಹೆಚ್ಚು ಕೃಷಿ ಆಧಾರಿತ ನೆಲದಲ್ಲಿ ಮಕ್ಕಳನ್ನು ದುಡಿಮೆಗೆ ಪೂರೈಸುವುದನ್ನು ನಿಲ್ಲಿಸುವುದು ಕಷ್ಟ. ಪ್ರಜ್ಞಾವಂತ, ವಿದ್ಯಾವಂತ, ನಾಗರಿಕರು ಅರಿತು, ಮಕ್ಕಳನ್ನು ಕೆಲಸಕ್ಕೆ ಮತ್ತು ದುಡಿಮೆಗೆ ಬೇಡಿಕೆ ಕೇಳುವುದನ್ನು, ನೇಮಿಸುವುದನ್ನೇ ನಿಲ್ಲಿಸಿ ಆ ಮಕ್ಕಳು ಶಾಲೆ ಕಡೆ ಮತ್ತೆ ತಿರುಗುವಂತೆ ವ್ಯವಸ್ಥೆ ಮಾಡಬೇಕು, ಅದು ನಾಗರಿಕತೆಯ ಲಕ್ಷಣ.

ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಗೆ ಕಾರಣಗಳೇನು? ಎಂದು ಪ್ರಶ್ನೆ ಕೇಳುವ ಮೊದಲೇ ನಮ್ಮೆಲ್ಲರಿಗೂ ಬರುವ ಉತ್ತರ ಬಡತನ, ಅನಕ್ಷರತೆ, ನಿರುದ್ಯೋಗ ಮತ್ತು ಜನಸಂಖ್ಯೆಯ ಹೆಚ್ಚಳ, ಇವು ನಾಲ್ಕು ಬಿಟ್ಟು ಬೇರೆ ಅಂಶಗಳ ಕಡೆ ನಮ್ಮ ಗಮನ ಹೋಗುವುದು ಕಡಿಮೆ. ಆದರೆ ಸತ್ಯ ಬೇರೆಯೇ ಇದೆ. ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಇರುವುದರಿಂದ ಬಡತನ, ಅನಕ್ಷರತೆ, ನಿರುದ್ಯೋಗ ಮತ್ತು ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬುದರ ಅರಿವು ನಮಗಾಗಬೇಕಿದೆ. ಹೇಗೆಂದರೆ ಇಂದಿನ ಹೆಚ್ಚಿನ (20% ಬಿಟ್ಟು) ಬಡವರು ಅವರ ಚಿಕ್ಕ ವಯಸ್ಸಿನಲ್ಲಿ ಬಾಲಕಾರ್ಮಿಕರಾಗಿ, ಬಾಲ್ಯವಿವಾಹಕ್ಕೆ ಒಳಗಾಗಿ ಅಥವಾ ಸಾಗಾಣಿಕೆಗೆ ಒಳಗಾಗಿರುವುದರಿಂದ ಇಂದು ಅವರುಗಳು “ಬಡತನ”ಕ್ಕೆ ಬಂದಿದ್ದಾರೆ. ಅದೇ ರೀತಿ ಇಂದು ದುಡಿಯುತ್ತಿರುವ ಎಲ್ಲಾ ಮಕ್ಕಳು (20% ಬಿಟ್ಟ್ಟು) 20 ವರ್ಷ ದಾಟಿದ ನಂತರ, ಅಂದರೆ ದೊಡ್ಡವರಾದ ಮೇಲೆ ಈ ಸಮಾಜಕ್ಕೆ ಬಡವರಾಗಿಯೇ ಬರುತ್ತಾರೆ. ಅದೇ ರೀತಿ ಇಂದು ನಮ್ಮ ಬಡವರಿಗೆ ದುಶ್ಚಟಗಳಿಗೆ, ಜಾತ್ರೆ, ಹಬ್ಬ ಹರಿದಿನ, ಸರಾಯಿ, ಕುಡಿತ, ಬೀಡಿ, ಸಿಗರೇಟು, ಎಲೆ ಅಡಿಕೆ, ಕಡ್ಡಿಪುಡಿ ಇತ್ಯಾದಿ ಇವೆಲ್ಲಕ್ಕೂ ಖರ್ಚು ಮಾಡಲು ದುಡ್ಡಿದೆ. ಮಾಡಲಿ ಬಿಡಿ ಅದು ವೈಯಕ್ತಿಕ ಅನ್ನೋಣ, ಆದರೆ ಮಕ್ಕಳನ್ನು ಶಾಲೆಗೆ ಸೇರಿಸಲು ಮಾತ್ರ ದುಡ್ಡಿಲ್ಲ, ಶಿಕ್ಷಣಕ್ಕೆ ಮಾತ್ರ ಬಡತನವೇ? ಅದು ಹೇಗೆ ಸಾಧ್ಯ?. ಅಂದರೆ ಶಿಕ್ಷಣದ ಮಹತ್ವದ ಅರಿವಿನ ಕೊರತೆ ಇಂದು ಸಮಾಜದಲ್ಲಿ ಮತ್ತು ಪೋಷಕರಲ್ಲಿ ಕಾಣುತ್ತದೆ. ಶಿಕ್ಷಣವು ಬದುಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂಬ ಅಂಶವನ್ನು ಪೋಷಕರಲ್ಲಿ ನಂಬಿಸುವಲ್ಲಿ ನಮ್ಮ ವ್ಯವಸ್ಥೆ ವಿಫಲವಾಗಿದೆ. ಶಿಕ್ಷಣ ಅಥವಾ ಮಕ್ಕಳನ್ನು ಶಾಲೆಗೆ ಸೇರಿಸುವುದು ಕೇವಲ ಸರಕಾರಿ ಕೆಲಸ ಪಡೆಯಲು ಅಥವಾ ಉದ್ಯೋಗ ಪಡೆಯಲು ಅಥವಾ ದುಡ್ಡು ಮಾಡಲು ಎಂಬ ಆಲೋಚನೆ ಪೋಷಕರಲ್ಲಿ ಇರುವ ಕಾರಣ ಬಾಲ್ಯದಲ್ಲಿಯೇ ಕೆಲಸಕ್ಕೆ ಸೇರಿಸಿ, ದುಡ್ಡು ಮಾಡಿದರಾಯಿತು ಎಂದು ಅಂದುಕೊಂಡಿದ್ದಾರೆ. ಹಾಗಾಗಿ ಶಿಕ್ಷಣದ ಮಹತ್ವದ ಬಗ್ಗೆ ಅರಿವಿನ ಅಂತರ ದೊಡ್ಡ ಮಟ್ಟದಲ್ಲಿ ಕಾಣುತ್ತಿದೆ. ಸಂವಿಧಾನ ಖಾತ್ರಿಪಡಿಸಿದ “ಶಿಕ್ಷಣ ಬದುಕು ಕಟ್ಟಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು” ಎಂಬುದರ ಅರಿವು ಪೊಷಕರಲ್ಲಿ ತುಂಬಿಸುವ ಅಗತ್ಯವಿದೆ. ಹಾಗೂ ಅನ್ಯಾಯ ಶೋಷಣೆ, ಹಿಂಸೆ, ದೌರ್ಜನ್ಯ, ನಿರ್ಲಕ್ಷ್ಯ, ತಾರತಮ್ಯ, ದುರಪಯೋಗ ಹಾಗೂ ದುರ್ಬಲತೆಯಿಂದ ಹೊರಬಂದು ಸ್ವಾಭಿಮಾನದಿಂದ ಘನತೆಯಲ್ಲಿ ಅಭಿವೃದ್ಧಿ ಹೊಂದಿ ಬದುಕು ಸಾಗಿಸಲು ಶಿಕ್ಷಣ ಬೇಕು ಎಂಬುದರ ಅರಿವು ನಮಗಾಗಬೇಕಿದೆ. 8 ರಿಂದ 10ನೇ ತರಗತಿ ತನಕ ಶಾಲೆಗೆ ಹೋಗಿರುವ ಯಾವ ದಂಪತಿಗಳು ತಮ್ಮ ಮಕ್ಕಳನ್ನು ಇನ್ನೊಬ್ಬರ ಮನೆಗೆ ದುಡಿಮೆಗೆ ಅಥವಾ ಎಂಜಲು ಬಾಚಲು ಕಳುಹಿಸುತ್ತಾರೆ? ಹೇಳಿ? ಅದೇ ರೀತಿ ಇಂದು ನಮ್ಮ ಸಮಾಜದಲ್ಲಿರುವ ಎಲ್ಲಾ ಬಾಲಕಾರ್ಮಿಕರು ಮುಂದೆ ಈ ಸಮಾಜಕ್ಕೆ ಬಡವರಾಗಿ ಮತ್ತು ದುರ್ಬಲ ವರ್ಗದವರಾಗಿ ಈ ಸಮಾಜಕ್ಕೆ ಬರುತ್ತಾರೆ. ಹಾಗಾದರೆ ನೀವೇ ಹೇಳಿ ಬಡತನ ಬಾಲಕಾರ್ಮಿಕ ಪದ್ಧತಿಗೆ ಕಾರಣವೇ?

ಅದೇ ರೀತಿ ಅನಕ್ಷರತೆಯಿಂದ ಬಾಲಕಾರ್ಮಿಕತೆ ಇದೆ ಎಂದು ‘ಗಿಳಿ ಪಾಠ’ ಮಾಡುವ ನಾವೆಲ್ಲರೂ ಅರ್ಥೈಸಬೇಕಾದ ಅಂಶ ಏನೆಂದರೆ ಅನಕ್ಷರತೆಗೆ ಮೂಲ ಬಾಲ್ಯಾವಸ್ಥೆಯಲ್ಲಿ ಅಥವಾ ಮಕ್ಕಳಾಗಿದ್ದಾಗ ಮಕ್ಕಳು ಶಾಲೆಗೆ ದಾಖಲಾಗದಿರುವುದು, ಶಾಲೆ ಬಿಟ್ಟಿರುವುದು ಮತ್ತು ಶಾಲೆಗೆ ಹೋಗದಿರುವುದರಿಂದ ಅವರಿಂದು ಅನಕ್ಷರಸ್ಥರಾಗಿ ಸಮಾಜದಲ್ಲಿ ಉಳಿದಿದ್ದಾರೆ. ಶಾಲೆಗೆ ಹೋಗಲಿಲ್ಲ ಅಂದ ಮೇಲೆ ಅವರೆಲ್ಲರೂ ಬಾಲಕಾರ್ಮಿಕರಾಗಿಯೇ ಇದ್ದರು ಎಂದು ಅರ್ಥ ಅಲ್ಲವೇ? ಅಂದರೆ “ಇಂದಿನ ಅನಕ್ಷರಸ್ಥರು: ಹಿಂದಿನ ಬಾಲಕಾರ್ಮಿಕರು. ಇಂದಿನ ಬಾಲ ಕಾರ್ಮಿಕರು: ಮುಂದಿನ ಬಡವರು ಮತ್ತು ಅನಕ್ಷರಸ್ಥರು”. ಅನಕ್ಷರಸ್ಥರಾಗಿ ಬಂದ ತಕ್ಷಣ ಮತ್ತೆ ನಾವು ಪುನಃ ಸಾಕ್ಷರತೆ ಕಾರ್ಯಕ್ರಮ ಮಾಡಬೇಕಲ್ಲವೇ? ಹೀಗೆ ಎರಡು ಸ್ಥಿತಿಗೆ ಬಂದ ಯುವಜನರು ಇಂದು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂದರೆ ಬಾಲಕಾರ್ಮಿಕ ಪದ್ಧತಿಯಿಂದ, ಬಡತನಕ್ಕೆ ಬಂದು, ಅದರಿಂದ ಅನಕ್ಷರಸ್ಥರಾಗಿ, ತನ್ಮೂಲಕ ನಿರುದ್ಯೋಗಿಗಳಾಗಿ, ಜ್ಞಾನ ಮತ್ತು ತಿಳುವಳಿಕೆಯ ಕೊರತೆಯಿಂದ ಅಭಿವೃದ್ಧಿಯ ಚೌಕಟ್ಟಿಗೆ ಬಾರದೇ ಜನಸಂಖ್ಯಾ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ. ಬಾಲಕಾರ್ಮಿಕ ಪದ್ಧತಿಗೆ ಬಲಿಯಾದ ಮಕ್ಕಳು ತಮ್ಮ ಮುಂದಿನ ಜೀವನದಲ್ಲಿ ಕೌಶಲ್ಯಗಳ ಮತ್ತು ಸೃಜನಾತ್ಮಕತೆಯ ಕೊರತೆಯಿಂದಾಗಿ ಸರಿಯಾದ ಉದ್ಯೋಗ ದೂರಕದೆ ನಿರುದ್ಯೋಗಿಗಳಾಗಿ ಸಮಾಜದಲ್ಲಿ ಉಳಿದುಕೊಂಡಿದ್ದಾರೆ. ಹಾಗಾದರೆ ನಿರುದ್ಯೋಗದಿಂದ ಬಾಲಕಾರ್ಮಿಕತೆ ಅಲ್ಲ, ಬಾಲಕಾರ್ಮಿಕ ಪದ್ಧತಿಯಿಂದ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುತ್ತಿದೆ ಎಂಬ ಅರಿವು ನಮಗಾಗಬೇಕಿದೆ.

ಇನ್ನು ಜನಸಂಖ್ಯಾ ಹೆಚ್ಚಳ, 8 ಅಥವಾ 10ನೇ ತರಗತಿ ಓದಿದ ದಂಪತಿಗಳಿಗೆ 6,8,10 ಮಕ್ಕಳು ಇರಬಹುದೇ? ಇರಲಿಕ್ಕಿಲ್ಲ. ಅವರಿಗೆ ಕನಿಷ್ಠ 2, ಹೆಚ್ಚೆಂದರೆ 4 ಮಕ್ಕಳಿರಬಹುದು. ಇದು ಹೇಗೆ ಸಾಧ್ಯವಾಯಿತು, ಅಂದರೆ ದಂಪತಿಗಳಿಬ್ಬರೂ ಮೂಲಭೂತ ಶಿಕ್ಷಣದ ವ್ಯಾಪ್ತಿಗೊಳಪಟ್ಟಿದ್ದರು. ಅಂದರೆ ಬಾಲ್ಯಾವಸ್ಥೆಯಲ್ಲಿ ಮೂಲಭೂತ ಶಿಕ್ಷಣ, ಜ್ಞಾನ ಮತ್ತು ಕಲಿಕೆಯ ಹಕ್ಕಿನ ಪ್ರಕ್ರಿಯೆಯಲ್ಲಿ ತೊಡಗಿದಾಗ ಅವರಾರು ನಾವು ಇಂದು ಹೇಳುತ್ತಿರುವ ಬಡತನ, ಅನಕ್ಷರತೆ, ನಿರುದ್ಯೋಗ, ಜನಸಂಖ್ಯಾ ಸ್ಪೋಟದ ಸಮಸ್ಯೆಗಳ ವ್ಯಾಪ್ತಿಗೆ ಬರುವುದಿಲ್ಲ. ಇದರಿಂದ ಈ ಸಮಸ್ಯೆಗಳು ಕಡಿಮೆಯಾಗುತ್ತಾ ಹೋಗಲು ಸಾಧ್ಯವಿದೆ. ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಯಿಂದಲೇ ಬಡತನ, ಅನಕ್ಷರತೆ, ನಿರುದ್ಯೋಗ ಮತ್ತು ಜನಸಂಖ್ಯೆ ಜಾಸ್ತಿಯಾಗುತ್ತಿದೆಯೇ ಹೊರತು, ಈ ಸಮಸ್ಯೆಗಳು ಬಾಲಕಾರ್ಮಿಕ ಪದ್ಧತಿಗೆ ಮೂಲಕಾರಣವಾಗಿಲ್ಲ. ಹಾಗಂತ ಈ ಸಮಸ್ಯೆಗಳೇ ಇಲ್ಲವೆಂಬ ಅರ್ಥವಲ್ಲ. ಈ ಸಮಸ್ಯೆಗಳೇ ನೇರ ಬಾಲಕಾರ್ಮಿಕ ಪದ್ಧತಿಗೆ ಕಾರಣ ಅಲ್ಲ ಎಂಬುದಷ್ಟೇ ಈ ಚರ್ಚೆಯ ಉದ್ದೇಶ. ಹಾಗಾದರೆ ಬಾಲಕಾರ್ಮಿಕ ಪದ್ಧತಿಗೆ ಕಾರಣಗಳು ಯಾವುವು ಎಂದು ನೋಡುವುದಾದರೆ, ಅದಕ್ಕೆ ನಿಜವಾದ ಕಾರಣಗಳು ಬೇರೆಯೇ ಇವೆ. ನಮ್ಮ ಬುದ್ದಿವಂತ ಸಮಾಜ ಮತ್ತು ವ್ಯವಸ್ಥೆ ನಿಜವಾದ ಕಾರಣಗಳನ್ನು ಮರೆ ಮಾಚಿ, ಬಡತನ, ಅನಕ್ಷರತೆ, ನಿರುದ್ಯೋಗ ಮತ್ತು ಜನಸಂಖ್ಯೆ ಹೆಚ್ಚಳವನ್ನೇ ನಮ್ಮ ಮುಂದೆ ಇಡುತ್ತಾ ಬಂದಿದೆ. ಅದು ಹೇಗೆಂದರೆ ಈ ನಾಲ್ಕು ಸಮಸ್ಯೆಗಳು ಈ ದೇಶದ ಎಲ್ಲಾ ಸಮಸ್ಯೆಗಳಿಗೆ ಕಾರಣಗಳಾಗಿವೆ ಎಂಬುದನ್ನು ಹೇಳಲು ನಾವು ಅಭ್ಯಾಸ ಮಾಡಿಕೊಂಡಿದ್ದೇವೆ. ಉದಾಹರಣೆಗೆ: ದೇಶ ಇನ್ನು ಕೂಡಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿಯೇ ಉಳಿದಿದೆ ಯಾಕೆ?. ಮಹಿಳೆಯರು ಇನ್ನು ಅಭಿವೃಧ್ಧಿಯಾಗಿಲ್ಲ ಯಾಕೆ? 100% ಸಾಕ್ಷರತೆ ಇನ್ನೂ ಆಗಿಲ್ಲ ಯಾಕೆ? ಯುವಜನರ ಅಭಿವೃದ್ಧಿ ಇನ್ನೂ ಆಗಿಲ್ಲ ಯಾಕೆ? ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ವರ್ಗಗಳ ಅಭಿವೃದ್ಧಿಯಾಗಿಲ್ಲ ಯಾಕೆ? ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿಯಾಗುತ್ತಿಲ್ಲ ಯಾಕೆ? ಹೀಗೆ ಏನೇ ಕೇಳಿದರೂ ಮೊದಲ ಉತ್ತರಗಳೇ ಬಡತನ, ಅನಕ್ಷರತೆ, ನಿರುದ್ಯೋಗ ಮತ್ತು ಜನಸಂಖ್ಯಾ ಸ್ಪೋಟ. ಯಾಕೆ ಹೇಳಿ? ಯಾಕೆಂದರೆ ಇದನ್ನು ನಾವು ಶಾಲಾ ಶಿಕ್ಷಣದಲ್ಲಿ, ಪಠ್ಯ ಪುಸ್ತಕದಲ್ಲಿ ಮುದ್ರಿಸಿ, ಪಾಠ ಮಾಡಿ, ನೋಟ್‍ಗಳಲ್ಲಿ ಬರೆಯಿಸಿ, ಪರೀಕ್ಷೆಯಲ್ಲಿ ಬರೆಯಿಸಿ ಅಭ್ಯಾಸ ಮಾಡಿಸಿದ್ದೇವೆ. ಹೇಗೆ ಎಂದರೆ ಭಾರತದ ಸಾಮಾಜಿಕ ಸಮಸ್ಯೆಗಳು ಯಾವುವು? ಎಂದರೆ, ಅದೇ ಉತ್ತರ ಬಡತನ, ಅನಕ್ಷರತೆ, ನಿರುದ್ಯೋಗ ಮತ್ತು ಜನಸಂಖ್ಯಾ ಸ್ಪೋಟ. ನಾವುಗಳೆಲ್ಲರೂ ಮಕ್ಕಳಾಗಿದ್ದಾಗ ನಮಗೂ ಕೂಡಾ ಅದನ್ನೇ ಹೇಳಿ ನಮ್ಮ ತೆಲೆಗೆ ತುರಿಕಿಯಾಗಿದೆ. ಈಗ ನಾವು ಯಾವುದೇ ಸಮಸ್ಯೆಗೆ ಕಾರಣಗಳು ಏನು ಅಂತ ಕೇಳಿದರೆ, ನಿರಂತರವಾಗಿ ಅದನ್ನೇ ಪಠಿಸುತ್ತಿದ್ದೇವೆ. ನಿಜವಾಗಿಯೂ ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿಗೆ ನಮ್ಮ ವ್ಯವಸ್ಥೆಗಳು ಮತ್ತು ಅದರ ಲೋಪ ದೋಷಗಳಿಂದ ಕೂಡಿದ ಆಡಳಿತಾತ್ಮಕ ಕ್ರಮಗಳಿಂದಾಗಿ ಬೇರೆಯೇ ಸಮಸ್ಯೆಗಳು ಇವೆ. ಅವುಗಳನ್ನು ಮುಚ್ಚಿಡುವ ಸಲುವಾಗಿಯೋ ಗೊತ್ತಿಲ್ಲ, ಅದರೆ ನಿಜವಾದ ಸಮಸ್ಯೆಗಳು ನಮಗಿಂದು ನೆನಪಾಗುತ್ತಿಲ್ಲ, ಅವುಗಳು ಯಾವುವು ಎಂದರೆ,

  • ಮುಕ್ತ ಆರ್ಥಿಕ ನೀತಿ, ಮುಕ್ತ ಮಾರುಕಟ್ಟೆ, ಕೈಗಾರಿಕೀಕರಣ, ಖಾಸಗೀಕರಣ ಮತ್ತು ಉದಾರೀಕರಣ.
  • ವ್ಯವಸ್ಥಿತ ರೀತಿಯಲ್ಲಿ ಶಿಕ್ಷಣ ಜಾರಿಗೆ ಬಾರದೇ ಇರುವುದು.
  • ಭೂ ಸುಧಾರಣೆ ಕಾಯ್ದೆ ಜಾರಿಗೆ ಬಾರದೇ ಇರುವುದು.
  • ಅಂತರ ರಾಷ್ಟ್ರೀಯ ನೀತಿಗಳು.
  • ಬಂಡವಾಳ ಶಾಹಿಗಳ ಮತ್ತು ಶ್ರೀಮಂತ ಸ್ವಾರ್ಥ.
  • ಸುವ್ಯವಸ್ಥಿತ ಶಿಕ್ಷಣಕಕ್ಕೆ ಅಸಹಕಾರ.
  • ಅಭಿವೃದ್ಧಿ ಕಾರ್ಯಕ್ರಮಗಳು ದೋಷಪೂರಿತವಾಗಿ ಜಾರಿಗೆ ಬರುತ್ತಿರುವುದು.
  • ಶಿಕ್ಷಣದ ಬಗ್ಗೆ, ಅದರ ಗುರಿ ಮತ್ತು ಮಹತ್ವದ ಕುರಿತು ಸ್ಪಷ್ಟತೆ ಇಲ್ಲದಿರುವುದು.
  • ಬಾಲ ಕಾರ್ಮಿಕ ಪದ್ಧತಿ ಕಲ್ಯಾಣ ಕಾರ್ಯಕ್ರಮ ಎಂದು ಪರಿಗಣಿಸಿರುವುದು.
  • ಆರ್ಥಿಕ ಅಸಮಾನತೆ, ಜನರ ಆರ್ಥಿಕ ಸ್ಥಿತಿ ಕುಗ್ಗುವಿಕೆ (ಕೃಷಿ ಆಧಾರಿತ ವಲಯದಲ್ಲಿ)
  • ದುಂದುವೆಚ್ಚ, ದುಶ್ಚಟಗಳು, ಕಡಿಮೆ ಕೂಲಿಯ ಕೆಲಸ, ಪೋಷಕರ ಉದಾಸೀನತೆ.
  • ಸಾರ್ವಜನಿಕ ಜಡತ್ವ ಮತ್ತು ಮಕ್ಕಳ ಕಾನೂನುಗಳು ಜಾರಿಯಾಗದೇ ಇರುವುದು.
  • ಕನಿಷ್ಠ ಕೂಲಿ ವೇತನ ಜಾರಿಯಾಗದೇ ಇರುವುದು, ಹಣದ ದುರುಪಯೋಗ ಮತ್ತು ಮಾಹಿತಿಯ ಕೊರತೆ.
  • ಸರಕಾರಿ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆ ಮತ್ತು ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ.
  • ಸಾಮಾಜಿಕ ಭದ್ರತೆ ಮತ್ತು ಬಡತನ ನಿರ್ಮೂಲನಾ ಯೋಜನೆಗಳ ಅಸಮರ್ಪಕ ಜಾರಿ.
  • ವಿವಿಧ ಇಲಾಖೆಗಳ ಸಹಭಾಗಿತ್ವ, ಸಮನ್ವಯತೆ, ಸಹಕಾರ, ಸಂಯೋಜನೆ ಮತ್ತು ಭಾಗವಹಿಸುವಿಕೆಯ ಕೊರತೆ.
  • ನಾಗರಿಕ ಮತ್ತು ಸಮುದಾಯ ಆಧಾರಿತ ಸಂಘ ಸಂಸ್ಥೆಗಳಲ್ಲಿ ಸಹಭಾಗಿತ್ವ, ಸಮನ್ವಯತೆ, ಸಹಕಾರ, ಸಂಯೋಜನೆ ಮತ್ತು ಭಾಗವಹಿಸುವಿಕೆಯ ಕೊರತೆ

ಹೀಗೆ ಹತ್ತು ಹಲವಾರು ಕಾರಣಗಳು ನಮ್ಮ ಸಮಾಜದಲ್ಲಿ ಬೇರೂರಿಕೊಳ್ಳುವ ಹಾಗೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ, ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿಯಂತಹ ಅಭಿವೃದ್ಧಿ ಮಾರಕ ಸಮಸ್ಯೆಗಳನ್ನು ಹೋಗಲಾಡಿಸಲು, ಹೀಗೆ ಬೇರೂರಿರುವ ನಿಜವಾದ ಸಮಸ್ಯೆಗಳ ಬೇರನ್ನು ಕಿತ್ತು ಹೂಸ ಜೀವ ನೀಡಬೇಕಾಗಿದೆ. ಮಕ್ಕಳು ಅದರಲ್ಲಿಯೂ ಹೆಣ್ಣು ಮಕ್ಕಳಿಗೆ 12ನೇ ತರಗತಿಯವರೆಗಿನ ಸಾರ್ವತ್ರಿಕ ಮತ್ತು ಉಚಿತ ಕಡ್ಡಾಯ ಶಿಕ್ಷಣವನ್ನು ನೀಡುವ ಮೂಲಕ ಮಾತ್ರ ಇದಕ್ಕೆ ಉತ್ತರಿಸಲು ಸಾಧ್ಯ. ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಗೆ ಪರಿಹಾರ ಒಂದೇ, ಅದು ಸಾರ್ವತ್ರಿಕ ಶಿಕ್ಷಣ. ಅದೇ ಬಾಲಕಾರ್ಮಿಕ ಪದ್ಧತಿ ವಿರುದ್ಧದ ನಿಜವಾದ ಅಸ್ತ್ರ, ಎರಡನೇಯ ಅಸ್ತ್ರ ಯಾವುದೆಂದರೆ ಸರಕಾರಿ ಇಲಾಖೆ ಮತ್ತು ಅಧಿಕಾರಿಗಳ ಇಚ್ಛಾ ಶಕ್ತಿ. ಸಮಾಜದ ಪ್ರತಿಯೊಂದು ಕುಟುಂಬಗಳ ಸಾಮಾಜಿಕ, ಆರ್ಥಿಕ ಮತ್ತು ಕೌಟುಂಬಿಕ ಭದ್ರತೆಯನ್ನು ಗಟ್ಟಿಮಾಡಬೇಕಾಗಿದೆ. ಹಾಗೂ ಮೇಲೆ ತಿಳಿಸಿದ ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿಗೆ ಕಾರಣವಾದ ನಿಜ ಅಂಶಗಳನ್ನು ಪರಿವರ್ತಿಸಿ ಹಕ್ಕು ಆಧಾರಿತ ಅಭಿವೃದ್ಧಿ ಪೂರಕ ಯೋಜನೆಗಳನ್ನಾಗಿ ಅನುಷ್ಟಾನಕ್ಕೆ ತಂದಾಗ ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯ.

ಜೂನ್ 12, 2000ನೇ ವರ್ಷದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಮಕ್ಕಳನ್ನು “ಮನೆ ಕೆಲಸ”ದಲ್ಲಿ ದುಡಿಸುವುದನ್ನು ಅತ್ಯಂತ ನಿಕೃಷ್ಟ ರೀತಿಯ ಬಾಲಕಾರ್ಮಿಕತೆಯೆಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜೂನ್ 12ರಂದು ವಿಶ್ವದಾದ್ಯಂತ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನಾಗಿ ನೋಡಲಾಗುತ್ತಿದೆ. ಈ ದಿನವನ್ನು ಬಾಲಕಾರ್ಮಿಕ ಪದ್ಧತಿ ಕುರಿತು ಸಾರ್ವಜನಿಕರಲ್ಲಿ ಎಚ್ಚರಿಸುವ ಮತ್ತು ಜಾಗೃತಿ ಮೂಡಿಸುವ ದಿನವನ್ನಾಗಿ ನೋಡಲಾಗುತ್ತಿದೆ. ಒಂದು ರಾಷ್ಟ್ರದ ಮಕ್ಕಳ ಸ್ಥಿತಿಯು ರಾಷ್ಟ್ರದ ಒಟ್ಟಾರೆ ಸ್ಥಿತಿಯನ್ನು ಬಿಂಬಿಸುತ್ತದೆ. ಮಕ್ಕಳ ಅಭಿವೃದ್ಧಿ ದೇಶದ ಅಭಿವೃದ್ಧಿಯನ್ನು ಸೂಚಿಸುತ್ತದೆ. ಮಕ್ಕಳನ್ನು ದುಡಿಸುವ ಪದ್ಧತಿ ರಾಷ್ಟ್ರ ಕಳಂಕವಾಗಿದೆ. ಮಕ್ಕಳ ದುಡಿಮೆ ಮಾನವ ಅಭಿವೃದ್ಧಿಗೆ ಮಾರಕ. ಆದ್ದರಿಂದ ಮಕ್ಕಳು ಬಾಲಕಾರ್ಮಿಕತೆಯಿಂದ ಶಿಕ್ಷಣದಿಂದ ವಂಚಿತರಾಗಿರುವ ಶೋಷಣೆಯ ದುಡಿಮೆಯಿಂದ ಹೊರಬಂದಲ್ಲಿ ಮಾತ್ರ ಮಾನವ ಅಭಿವೃದ್ಧಿಗೆ ಅಡಿಪಾಯವಾಗಲಿದೆ. ಶಿಕ್ಷಣವು ಮಕ್ಕಳ ಅಭಿವೃದ್ಧಿಗೆ ಅಸ್ತ್ರವಾಗಿದೆ. ತನ್ಮೂಲಕ ಅದು ದೇಶ ಮತ್ತು ಮಾನವ ಅಭಿವೃದ್ಧಿಗೆ ಕಾರಣವಾಗಲಿದೆ. ಜೂನ್ 12 ಕೇವಲ ಒಂದು ದಿನದ ಕಾರ್ಯಕ್ರಮವಾಗದೇ ಒಂದು ಗ್ರಾಮ, ತಾಲೂಕು, ಜಿಲ್ಲೆ ಮತ್ತು ರಾಜ್ಯದ ಎಲ್ಲಾ ಮಕ್ಕಳು ಶಿಕ್ಷಣಕ್ಕೆ ಬರುವತನಕದ ಗುರಿಯ ಕ್ರಿಯೆಗೆ ಮತ್ತು ನಿರಂತರವಾದ ಕ್ರಮಕ್ಕೆ ನಾಂದಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.

-ಕೆ. ರಾಘವೇಂದ್ರ ಭಟ್
ಮಕ್ಕಳ ಹಕ್ಕು ಮತ್ತು ಸಂರಕ್ಷಣೆಯ ತಜ್ಞರು
9845699735

ಈ ಅಂಕಣದ ಹಿಂದಿನ ಬರೆಹಗಳು:
ಜೀವನದಲ್ಲಿ ಒಮ್ಮೆಯಾದರೂ ಈ ನಂಬರ್‍ಗೆ ಕರೆ ಮಾಡಿ
ಬಾಲಾಪರಾಧಿ ಶಬ್ದ ಬಳಕೆ ಸಲ್ಲ, ರಿಮಾಂಡ್ ಹೋಂ ನಮ್ಮಲಿಲ್ಲ..
“ಮಕ್ಕಳ ಸಂರಕ್ಷಣೆ”ಯಲ್ಲಿ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು
“ಮಕ್ಕಳ ಹಕ್ಕುಗಳ ಗ್ರಾಮಸಭೆ” ಸಾಗುತ್ತಿರುವ ದಾರಿಯನ್ನೊಮ್ಮೆ ತಿರುಗಿ ನೋಡೋಣ
ಏನಿದು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ?
“ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳು”
“ಹಕ್ಕಿನ” ಪರಿಭಾಷೆ ಮತ್ತು ಮಕ್ಕಳು
ಇಂದಿನ ಮಕ್ಕಳು: ಇಂದಿನ ಪ್ರಜೆಗಳು:

MORE NEWS

ಮೊದಲ ನಾಟಕದ ಮೊದಲ ಟೀಮ್ ಸ್ಪಿರಿಟ್

08-12-2025 ಬೆಂಗಳೂರು

"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...

ಪುರುಷವತಾರ- ದೇಹ ಮೀಮಾಂಸೆಯ ಕಥನ 

05-12-2025 ಬೆಂಗಳೂರು

"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...

DAILY COLUMN: ಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆ

04-12-2025 ಬೆಂಗಳೂರು

"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...