ಮಲೆನಾಡಿನ ಮಹಿಳೆಯರ ಬದುಕು-ಬವಣೆಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಕಾದಂಬರಿ ಅಂತಃಪುರ


"ಮಲೆನಾಡಿನ ಒಂದು ಕಾಲದ ಜೀವನ ಚಿತ್ರಣವನ್ನು, ಅದರಲ್ಲೂ ಸ್ತ್ರೀ ಸಮುದಾಯದ ಬದುಕು, ಬವಣೆಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಆಶಯದಿಂದ ರಚಿತವಾದ ಕಾದಂಬರಿ ‘ಅಂತಃಪುರ’ " ಎನ್ನುತ್ತಾರೆ ಲೇಖಕಿ ವಸುಮತಿ ಉಡುಪ. ಅವರ ‘ಅಂತಃಪುರ’ ಸಾಮಾಜಿಕ ಕಾದಂಬರಿಯ ಆಯ್ದ ಭಾಗ ನಿಮ್ಮ ಓದಿಗಾಗಿ...

2021ನೇ ಇಸವಿ ಫೆಬ್ರವರಿ ತಿಂಗಳ ಕೊನೆಯ ವಾರದ ಒಂದು ದಿನ. ನಿಖರವಾಗಿ ಹೇಳಬೇಕೆಂದರೆ ಇಪ್ಪತ್ತಾರನೆಯ ತಾರೀಖು. ಮನೆಯಲ್ಲಿ ಊಟದ ಅಕ್ಕಿ ಖರ್ಚಾಗಿರದಿದ್ದರೆ ಶಿವರಾಮಯ್ಯ ಹೊರಗೆ ಅಂಗಡಿಗೆ ಹೋಗುವ ಪ್ರಮೇಯ ಬರುತ್ತಿರಲಿಲ್ಲ. ಸತ್ಯವಾದ ವಿಷಯ ಅಂದರೆ ಅಕ್ಕಿಯ ಸ್ಟಾಕು ಮಧ್ಯಾಹ್ನದ ಊಟಕ್ಕೆ ಸಾಕೂಸಾಲದಷ್ಟಿತ್ತು. ಹಿಂದಿನ ದಿನ ಹೇಳಬೇಕಾದ್ದು ಪದ್ಧತಿ. ಮರೆತುಹೋಗಿತ್ತು ಸೀತಮ್ಮನಿಗೆ. ಅವರಿಗೂ ವಯಸ್ಸಾಗಿದೆ. ಕಳೆದ ಸಂಕ್ರಾಂತಿಗೆ ಎಪ್ಪತ್ತು ತುಂಬಿ ಎಪ್ಪತ್ತೊಂದು. ವಯಸ್ಸಾಯ್ತು ಎಂದು ‘ರಾಮಾ.., ಕೃಷ್ಣಾ..’ ಎಂದು ದೇವರ ಸ್ಮರಣೆ ಮಾಡುತ್ತಾ ಹಗೂರಕ್ಕೆ ಕಾಲ ಕಳೆಯುವಂತಿಲ್ಲ. ಹೊತ್ತಿಗೆ ಸರಿಯಾಗಿ ತಿಂಡಿ ಆಗಬೇಕು, ಅಡುಗೆ ಆಗಬೇಕು, ಮನೆಗೆಲಸ ಮುಗಿಸಬೇಕು. ಶಿವರಾಮಯ್ಯನಿಗೆ ಹತ್ತು ಹದಿನೈದು ವರ್ಷಗಳಿಂದ ಸಕ್ಕರೆ ಖಾಯಿಲೆ ಬೆನ್ನು ಬಿದ್ದಿದೆ. ಜೊತೆಗೆ ಬಿ.ಪಿ. ಕೂಡಾ ಇದೆ. ‘ಅದಿದ್ದಲ್ಲಿ ಇದು ಇರಲೇಬೇಕು. ಅವಳಿ ಜವಳಿ’ ಎಂದು ಡಾಕ್ಟರು ತಮಾಷೆಯಾಗಿ ಹೇಳಿದ್ದರು. ಆವಾಗಿಂದ ಮಾತ್ರೆ ತಿಂದುಕೊಂಡು ಕಾಲ ಹಾಕುತ್ತಿದ್ದಾರೆ ಶಿವರಾಮಯ್ಯ. ಪಥ್ಯಪಾನ ನೋಡಿಕೊಳ್ಳಬೇಕಾದ ಜವಾಬ್ದಾರಿ ಸೀತಮ್ಮನಿಗೆ. ಅಷ್ಟು ಮಾತ್ರವಲ್ಲ, ಮಾತ್ರೆ ತಿನ್ನಬೇಕಾದ್ದನ್ನು ಹೊತ್ತುಹೊತ್ತಿಗೆ ನೆನಪಿಸಬೇಕಾದ ಜವಾಬ್ದಾರಿ ಕೂಡಾ. ಇಲ್ಲದಿದ್ದರೆ ಮರೆತೇಬಿಡುವ ಗಿರಾಕಿ ಶಿವರಾಮಯ್ಯ. ಎಷ್ಟೋ ಸಲ ಸೀತಮ್ಮನಿಗೆ ಅನಿಸುತ್ತದೆ, ತಮ್ಮ ಕೆಲಸ ತಾವು ನೋಡಿಕೊಳ್ಳುವಷ್ಟಾದರೂ ಮನುಷ್ಯನಿಗೆ ವಿವೇಕ ಇರಬೇಕಿತ್ತು. ‘ಇದಾಳೆ ಹೆಂಡತಿ, ನೋಡಿಕೊಳ್ಳುತ್ತಾಳೆ. ಅದು ಅವಳ ಕರ್ತವ್ಯ’ ಎನ್ನುವಂತಾ ಧೋರಣೆ. ಮನೆಕೆಲಸದ ಜನ ಆದರೂ ಎಷ್ಟೋ ವಾಸಿ. ಮಾಡುವ ಕೆಲಸಕ್ಕೆ ಸಿಕ್ಕುತ್ತದೆ ಸಂಬಳ. ಹೆಂಡತಿಗೆ? ಬರೀ ಗೊರಟು. ಕೊನೆಗೆ ಬಾಯಿಮಾತಿನ ಕೃತಜ್ಞತೆ ಕೂಡಾ ಇಲ್ಲ. ಹೊಟ್ಟೆಗೆ ಅನ್ನ, ವರ್ಷಕ್ಕೆರಡು ಜಡ್ಡು ಸೀರೆ ಕೊಡಿಸಿದರೆ ‘ಮಹಾ ಉಪಕಾರವಾಯ್ತು’ ಎನ್ನುವಂತಾ ವರ್ತನೆ. ಅಡುಗೆ ಚೆನ್ನಾಗಿದ್ದರೆ ‘ಇವತ್ತು ಮ್ಯಾಲಾಗ್ರ ಲಾಯ್ಖುಂಟು ಕಣೇ..’ ಎನ್ನುವ ಒಂದು ಒಳ್ಳೆಯ ಮಾತಿಲ್ಲ. ಅದೇ ಚೆನ್ನಾಗಿಲ್ಲದಿದ್ದರೆ ‘ಚೆನ್ನಾಗಿಲ್ಲ’ ಎನ್ನುವುದಕ್ಕೆ ಮುಲಾಜೇ ಇಲ್ಲ. ಒಂದೊಂದು ಸಲ ಚೂರು ಉಪ್ಪು ಮುಂದಾಗುತ್ತದೆ. ಒಂದೊಂದು ಸಲ ಖಾರ. ಎಂಭತ್ತರ ಹತ್ತಿರ ಬಂತು ಗಂಡನಿಗೆ. ನಾಲಿಗೆ ರುಚಿ ಕೂಡಾ ಕಮ್ಮಿಯಾಗುವುದು ಸಹಜ. ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಹದ ಹೇಳಲು ಶುರುಮಾಡಿಬಿಡುತ್ತಾರೆ. ‘ಅಕ್ಕಿ ಬುಡ ಹತ್ತ ಖರ್ಚಾಗಿದೆ’ ಎಂದು ಗಂಡನ ಹತ್ತಿರ ಹೇಳುವುದಕ್ಕೂ ದಿಗಿಲು ಸೀತಮ್ಮನಿಗೆ.

``ನಿನ್ನೇನೇ ಹೇಳೋಕೆ ಏನಾಗಿತ್ತು ಧಾಡಿ? ಅನ್ನದ ಚರಿಗೆ ಒಲೇ ಮೇಲೆ ಇಟ್ಗಂಡು ಅಕ್ಕಿ ಇಲ್ಲ ಅಂತ ತಾರಮ್ಮಯ್ಯ ಮಾಡಿದ್ರೆ ಮುಗೀತು ನಿನ್ನ ಕೆಲಸ. ಈ ಉರಿಬಿಸ್ಲಲ್ಲಿ ಅಕ್ಕಿ ಹೊತ್ಗಂಡು ಬರೋ ಅಷ್ಟ್ರಲ್ಲಿ ನನ್ನ ಹೆಣ ಬೀಳುತ್ತೆ..'' ಇಂತಾದ್ದೇ ಅಪಶಕುನದ ಮಾತು. ಅವರು ಬಾಯಿ ಬಿಡುವುದಕ್ಕೆ ಮುಂಚೆಯೇ ಇಂತಿಂತಾ ಮಾತಾಡಿಬಿಡುತ್ತಾರೆ ಎಂದು ಕರಾರುವಾಕ್ಕಾಗಿ ಹೇಳಿಬಿಡುತ್ತಾರೆ ಸೀತಮ್ಮ. ಈ ವಾಕ್ಯ ಆದಮೇಲೆ ಅದು ಅಂತಲೂ. ಇಬ್ಬರಿರುವಂತಾ ಮನೆಗೆ ಮೂಟೆಗಟ್ಟಲೆ ಅಕ್ಕಿ ತರುವಂತಾ ಪ್ರಮೇಯ ಏನಿಲ್ಲ. ೫ಕೆ.ಜಿ. ತಂದರೆ ಹದಿನೈದು ದಿನ ಕಳೆಯುತ್ತದೆ. ಉರಿಬಿಸಿಲು ಇರುವುದೂ ಅಷ್ಟರಲ್ಲೇ ಇದೆ. ಎಳ್ಳಮಾವಾಸ್ಯೆ ಜಾತ್ರೆ ಕಳೆದು ಎರಡು ತಿಂಗಳಾಗಿದೆ ಅಷ್ಟೇ. ಇನ್ನೂ ಚಳಿ ಹಲ್ಲು ಕಟಗುಟ್ಟಿಸುವಂತಿದೆ. ಶಿವರಾಮಯ್ಯ ಯಾರ ಹತ್ತಿರವಾದರೂ ಮಾತಾಡಲು ನಿಂತರೆಂದರೆ ಇದೇ ಪುರಾಣ.

‘ಎಂತಾ ಚಳಿ ಮಾರಾಯ್ರಾ ಈ ವರ್ಷ. ನನ್ನ ಜನ್ಮದಲ್ಲಿ ಈ ನಮೂನಿ ಚಳಿ ಕಂಡಿರ್ಲಿಲ್ಲ..’ ಅಂತಲೇ ಶುರುವಾಗುತ್ತದೆ ಮಾತು. ಚಳಿ, ಮಳೆ, ಬಿಸಿಲು ಎಲ್ಲದಕ್ಕೂ ಹೀಗೇ. ‘ಜನ್ಮದಲ್ಲಿ ಕಂಡಿರ್ಲಿಲ್ಲ..’ ಅಂತಲೇ. ಸೀತಮ್ಮ ಒಲೆಯ ಮೇಲೆ ಅನ್ನದ ಚರಿಗೆ ಇಡಬೇಕಾದ ಪ್ರಮೇಯ ಈಗೇನಿಲ್ಲ. ಮಗ ಹದಿನೈದು ವರ್ಷದ ಹಿಂದೆಯೇ ಕುಕ್ಕರ್ ತಂದುಕೊಟ್ಟಿದ್ದಾನೆ. ಅದರ ರಬ್ಬರು ಸವೆದಾಗ ಹೊಸದನ್ನು ತರಿಸುವುದಕ್ಕೆ ಸೀತಮ್ಮ ಹತ್ತು ಮಾತು ಕೇಳಬೇಕು. ‘ಮೊನ್ನೆ ಮೊನ್ನೆ ತಂದ್ಕೊಟ್ಟದ್ದು, ಆಗ್ಲೇ ಸಮೆದು ಹೋಯ್ತಾ? ಅದು ಬೇಗ ಸಮೀಲಿ ಅಂತ್ಲೇ ಹಂಗೆ ಮಾಡಿಟ್ಟಿರ್ತಾರೆ. ಹೊಸ್ತು ಖರ್ಚಾಗ್ಬೇಕಲ್ಲ? ಇಲ್ದಿದ್ರೆ ಅವರು ಉಪ್ಪರಿಗೆ ಮೇಲೆ ಉಪ್ಪರಿಗೆ ಕಟ್ಸೋದು ಹೆಂಗೆ?’ ಏನು ಖರ್ಚಾದರೂ ಹೀಗೊಂದು ಮಾತು ಒಗಾಯಿಸುತ್ತಾರೆ ಶಿವರಾಮಯ್ಯ. ಅದು ಅವರಿಗೆ ಮೈಯುಂಡು ಹೋಗಿದೆ. ಮನೆಯಲ್ಲಿನ ಸಾಮಗ್ರಿಗಳು ಖರ್ಚಾದಾಗಲೂ ಅಷ್ಟೇ, ಮುಖ ಮುರಿಯುವ ಒಂದು ಮಾತಾಡಬೇಕು. ಆಗಲೇ ಅವರಿಗೆ ಸಮಾಧಾನ. ‘ಅಷ್ಟು ಬೇಗ ಗ್ಯಾಸು ಖರ್ಚಾಯ್ತಾ? ಅಷ್ಟು ಬೇಗ ಬೇಳೆ ಮುಗೀತಾ? ಅಷ್ಟು ಬೇಗ ಸೋಪು ತಿಕ್ಕಿ ಖರ್ಚು ಮಾಡಿಬಿಟ್ಯಾ?’

‘ಕೂತ್ಗಂಡು ತಿಂದೆ ಕಣ್ರೀ..’ ಅನ್ನಬೇಕೆಂದು ಎಷ್ಟೋ ಸಲ ನಾಲಿಗೆ ತುರಿಸಿದ್ದಿದೆ ಸೀತಮ್ಮನಿಗೆ. ಅದೆಲ್ಲಾ ಮನಸ್ಸಿನೊಳಗೆ ಮಾತ್ರಾ. ಹೊರಗೆ ಬಾಯಿ ಬಿಟ್ಟು ಪಿಟ್ಟೆಂದು ದನಿ ಒಡೆಯುವುದಿಲ್ಲ ಸೀತಮ್ಮ. ಹೆದರಿಕೆ ಮತ್ಯಾತ್ತಕ್ಕಲ್ಲ, ‘ಅದು ಹಾಗಲ್ಲ, ಹೀಗೆ..’ ಎಂದು ಪ್ರತಿರೋಧದ ಮಾತಾಡಿದರೆ ಗಂಡನಿಗೆ ಸೈಸುವುದಿಲ್ಲ. ನಖಶಿಖಾಂತ ಏರುತ್ತದೆ ಸಿಟ್ಟು. ‘ನಾನು ಹೇಳುವುದೆಲ್ಲಾ ಸರಿ, ನಾನು ಮಾಡುವುದೆಲ್ಲಾ ಸರಿ, ನಾನು ಹೇಳಿದ್ದೇ ಪರಮಸತ್ಯ’ ಎಂದು ನಂಬಿಕೊಂಡು ಬಿಟ್ಟಿದ್ದಾರೆ ಮನುಷ್ಯ.ಮತ್ಯಾರು ಅವರ ಮಾತು ಕೇಳುತ್ತಾರೆ? ಕೇಳಿಸಿಕೊಂಡು ಬಾಯಿಗೆ ಕಡುಬು ತುಂಬಿಕೊಂಡು ತೆಪ್ಪಗಿರುತ್ತಾರೆ? ಅಂದಿದ್ದು ಅನ್ನಿಸಿಕೊಳ್ಳಲು ಪುಗಸಟ್ಟೆ ಸಿಗುವುದು ತಾಳಿ ಕಟ್ಟಿ ಕರೆದುಕೊಂಡು ಬಂದ ಹೆಂಡತಿ ಒಬ್ಬಳೇ. ಎಲ್ಲಾ ತಮ್ಮ ಹಾಗಿರುವುದಿಲ್ಲ ಎಂದು ಗೊತ್ತಿದೆ ಸೀತಮ್ಮನಿಗೆ. ದೇವರ ನ್ಯಾಯವೇ ಇಂತಾದ್ದೇನೋ. ಇಜ್ಜೋಡಿ ಮಾಡಿ ಚಂದ ನೋಡುವುದು ಅವನಿಗೆ ಆಟ ಇರಬಹುದು. ಹೆಂಡತಿ ಬಜಾರಿಯಾಗಿದ್ದರೆ ಗಂಡ ಮೆದುಗಸ್ಥ. ಗಂಡ ವೀರಭಧ್ರ ಆಗಿದ್ದರೆ ಹೆಂಡತಿ ಪಾಪದವಳು. ಮುಗ್ಧೆ. ಆ ಕಾಲವೇ ಹಾಗಿತ್ತು. ಈಗ ಯಾರಾದರೂ ಹೆಂಡತಿಗೆ ಜಬರ್ದಸ್ತು ಮಾಡಲಿ ನೋಡೋಣ, ‘ನೀನೂ ಬೇಡ, ನಿನ್ನ ಸಾವಾಸವೂ ಬೇಡ’ ಎಂದು ಋಣ ಕಡಿದುಕೊಂಡುಬಿಡುತ್ತಾರೆ. ಗಂಡನ ಕಡೆಯಿಂದ ಲಕ್ಷಗಟ್ಟಲೆ ಪರಿಹಾರದ ಹಣ ಪಡೆದು ಬಿಡುಗಡೆಯಾದವರ ಕತೆ ಕೇಳಿದರೆ ಸೀತಮ್ಮನಿಗೆ ಮೂಗಿನ ಮೇಲೆ ಬೆರಳಿಡುವಷ್ಟು ಬೆರಗು. ‘ಪುಣ್ಯಾತ್ಗಿತ್ತಿ’ ಎನ್ನುವ ಮಾತು ಅಂತರಂಗ ದಲ್ಲೆಲ್ಲೋ ಅನುರಣಿಸಿತೇ? ಸೀತಮ್ಮನಂತಾ ಹಿರಿ ಮುತ್ತೆಂದೆಗೆ ಹೀಗೆ ಯೋಚಿಸುವುದೂ ಕೂಡಾ ಮಹಾಪಾಪ ಅನಿಸಿಬಿಡುತ್ತದೆ. ‘ಋಣಾನುಬಂಧ’ ಎನ್ನುವುದಿಲ್ಲದಿದ್ದರೆ ಗಂಡ ಹೆಂಡಿರಾಗುವುದು ಅಸಾಧ್ಯ ಎಂದು ಅವರ ನಂಬಿಕೆ.

ಸೀತಮ್ಮ ಅಡುಗೆಮನೆಯಿಂದ ಹೊರಗೆ ಹಣಿಕಿದರು. ಗಂಡ ಕುರ್ಚಿಯ ಮೇಲೆ ಕೂತು ಜೂಗರಿಸುತ್ತಿರುವುದು ಕಣ್ಣಿಗೆ ಬಿತ್ತು. ಸಕ್ಕರೆ ಖಾಯಿಲೆಯಿಂದ ಇರಬೇಕು, ಬೆಳಿಗ್ಗೆ ತಿಂಡಿ ತಿಂದಕೂಡಲೆ ಅವರಿಗೆ ಕಣ್ಣು ಎಳೆಯುತ್ತದೆ. ಎಬ್ಬಿಸುವುದೋ, ಬೇಡವೋ ಎನ್ನುವ ದ್ವಂದ್ವ. ಎಬ್ಬಿಸದಿದ್ದರೆ ಪಥ ನಡೆಯಬೇಕಲ್ಲ? ಏನಿದ್ದರೂ ಸ್ನಾನಕ್ಕೆ ಮುಂಚೆ ಅಂಗಡಿಗೆ ಹೋಗಿ ಬಂದರೆ ವಾಸಿ. ಆಮೇಲೆ ಸ್ನಾನ ಮಾಡುವುದು ಸಾವಿರಪಾಲು ಒಳ್ಳೆಯದು. ಹೊರಗಡೆ ಹೋಗುವುದಾದರೂ ಸಲೀಸಾ? ಮೂಗು, ಬಾಯಿ ಮುಚ್ಚುವಂತೆ ಬಟ್ಟೆ

ಕಟ್ಟಿಕೊಂಡು ಹೋಗಬೇಕು. ಎಲ್ಲಿಂದ ವಕ್ಕರಿಸಿತೋ ಹಾಳು ಖಾಯಿಲೆ? ಹೆಸರೇ ಕೇಳಿರಲಿಲ್ಲಪ್ಪಾ. ‘ಕೊರೊನಾ’ ಅಂತೆ. ಟೀವಿ ಹಾಕಿದರೆ ಹೆದರಿಕೆ ಹುಟ್ಟಿಸುವಂತೆ ಅದದೇ ಸುದ್ದಿ. ‘ಇವತ್ತು ಇಷ್ಟು ಜನಕ್ಕೆ ಸೋಂಕು ತಗುಲಿಕೊಂಡಿದೆ’, ‘ನಿನ್ನೆ ಇಷ್ಟು ಜನ ಸತ್ತರು’. ಇಂತಿಷ್ಟು ದೂರದಲ್ಲಿ ನಿಲ್ಲಬೇಕು ಎಂದು ಅಂಗಡಿ ಎದುರು ಪೈಂಟಿನಿಂದ ಚೌಕ ಹಾಕಿಟ್ಟಿದ್ದಾರಂತೆ. ಖಾಯಿಲೆ ಬಂದವರ ಉಸಿರು ತಗುಲಿದರೂ ಸಾಕು, ಅಂಟಿ ಬಿಡುತ್ತಂತೆ ಖಾಯಿಲೆ. ಮತ್ತೆ ಲಕ್ಷಗಟ್ಟಲೆ ಹುಡಿ ಹಾರುತ್ತದೆ. ಅಷ್ಟು ಕೊಡುತ್ತೇವೆಂದವರಿಗೂ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಎಲ್ಲೆಲ್ಲಿಗೋ ಜಾಗ ಹುಡುಕಿಕೊಂಡು ಅಲೆದಾಡಬೇಕಾದ ಪರಿಸ್ಥಿತಿ. ಸಾಯುತ್ತಾರೋ, ಉಳಿಯುತ್ತಾರೋ ದೈವೇಚ್ಛೆ. ಸತ್ತವರ ಮುಖ ಸೈತಾ ತೋರಿಸದೆ ಮಣ್ಣು ಮಾಡಿಬಿಡುತ್ತಾರಂತೆ. ಮೈಯಲ್ಲಿ ಚಳಿ ಹೊಕ್ಕವರಂತೆ ಕಂಪಿಸಿದರು ಸೀತಮ್ಮ. ವಿಧಿಯಿಲ್ಲ. ಮನೆಗೆ ಏನು ಬೇಕಾದರೂ ಗಂಡನನ್ನು ಅಟ್ಟಬೇಕು. ಕೆಲಸದವರನ್ನು ಮನೆ ಹೊಗಿಸಿಕೊಂಡಿಲ್ಲ. ಹೊಗಿಸಿಕೊಳ್ಳುವಷ್ಟು ದೊಡ್ಡಸ್ತಿಕೆಯೂ ಇಲ್ಲ. ಕೆಲಸದವರನ್ನು ಇಟ್ಟುಕೊಂಡವರೂ ಅವರನ್ನು ಬಿಡಿಸಿ ತಮ್ಮ ಮನೆ ಕೆಲಸ ತಾವೇ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ಪೇಟೆ ಸೇರಿಕೊಂಡವರು ಗಂಟುಮೂಟೆ ಕಟ್ಟಿಕೊಂಡು ಸಂಸಾರಸಮೇತ ಬಂದಿಳಿಯುತ್ತಿದ್ದಾರಂತೆ. ಕೆಲಸ ಕಳೆದುಕೊಂಡು ಕಂಗಾಲಾದವರು ಎಷ್ಟೋ ಜನ. ‘ಮನೆಯಲ್ಲೇ ಆಫೀಸಿನ ಕೆಲಸ ಮಾಡುವುದು’ ಎಂದು ಊರು ಸೇರಿಕೊಂಡವರು ಮತ್ತಷ್ಟು ಜನ. ಯಾರ ಜೊತೆಗಾದರೂ ನಿಂತು ಕಷ್ಟ ಸುಖದ ಎರಡು ಮಾತಾಡು ವಂತಿದೆಯಾ? ಯಾರೂ ಯಾರನ್ನೂ ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಯಾರೂ ಯಾರ ಮನೆಗೂ ಹೋಗುವುದಿಲ್ಲ. ಚೌಲ, ಮದುವೆ, ಮುಂಜಿ ಜನ ಸೇರುವಂತಾ ಯಾವ ಹೆಚ್ಚುಕಟ್ಲೆಯೂ ಇಲ್ಲ. ತಮ್ಮ ಸುತ್ತಾ ತಾವೇ ಕೋಟೆ ಕಟ್ಟಿಕೊಂಡು, ಛೇ, ಇಂತಾದ್ದೊಂದು ಕಾಲ ಬರುತ್ತದೆ ಎಂದು ಕನಸಿನಲ್ಲಾದರೂ ಎಣಿಸಿದ್ದಿತ್ತಾ? ಹುಳಗಳಂತೆ ಸಾಯುತ್ತಿದ್ದಾರೆ ಜನ. ಪರಮಾತ್ಮಾ, ಹೋಗುವುದಾದರೆ ಫಟ್ ಎಂದು ಹೋಗಿಬಿಡಬೇಕು. ಉಸಿರಾಡುವುದಕ್ಕೂ ಸಾಧ್ಯವಿಲ್ಲದೆ ಮೂಗಿಗೆ ಕೊಳವೆ ಸಿಕ್ಕಿಸಿಕೊಂಡು ನರಳಬೇಕಾದ ಸ್ಥಿತಿ ಶತ್ರುವಿಗೂ ಬೇಡ...

ಸೀತಮ್ಮ ಕೈಚೀಲ ಹಿಡಿದು ಗಂಡನ ಎದುರು ನಿಂತರು. ಊಹೂಂ. ಶಿವರಾಮಯ್ಯ ನಿಗೆ ಮಂಪರು ಹರಿಯಲಿಲ್ಲ. ಸಣ್ಣಗೆ ಕೆಮ್ಮಿದರು ಸೀತಮ್ಮ. ಇಲ್ಲ. ಇನ್ನು ಬಾಯಿ ಬಿಡದೆ ಬೇರೆ ದಾರಿ ಇಲ್ಲ. ``ಅಕ್ಕಿ ತರ್ಬೇಕಾಗಿತ್ತು'' ತಮಗೆ ತಾವೇ ಹೇಳಿಕೊಳ್ಳುವವರಂತೆ ಕುಂಯ್ಗುಟ್ಟಿದರು ಸೀತಮ್ಮ. ಶಿವರಾಮಯ್ಯ ಕಣ್ಣು ತೆರೆದು ಹೆಂಡತಿಯ ಕಡೆ ನೋಡಿದರು. ಹಾಗಿದ್ದರೆ ಇವರಿಗೆ ನಿದ್ದೆ ಹತ್ತಿದ್ದು ಸುಳ್ಳಾ? ಕಣ್ಣು ಮುಚ್ಚಿಕೊಂಡು ಜೂಗರಿಸುವುದು ಒಂದು ಅಭ್ಯಾಸ ಆಗಿದೆಯಾ? ಹೆಂಡತಿಯ ಕೈಲಿ ಚೀಲ ನೋಡಿ ‘ಏನೋ ಬೇಕಾಗಿದೆ’ ಎಂದು ಅಂದಾಜಾಯ್ತು ಶಿವರಾಮಯ್ಯನಿಗೆ. ಹುಬ್ಬು ತನ್ನಷ್ಟಕ್ಕೆ ಗಂಟಾಯ್ತು. ``ಅಕ್ಕಿ.'' ಅಂದರು ಸೀತಮ್ಮ ತಮ್ಮಷ್ಟಕ್ಕೆ ಮತ್ತೊಮ್ಮೆ. ``ಲಾಕ್ ಡೌನ್ ಅಂತ ಗೊತ್ತಿದೆಯೇನೇ? ಇನ್ನರ್ಧ ಗಂಟೇಲಿ ಅಂಗಡಿ ಮುಚ್ತಾರೆ. ಮತ್ತೆ ನಾಳೆ ಬೆಳಿಗ್ಗೇನೇ ತೆಗೆಯೋದು..''

ಬೆವರಿಬಿಟ್ಟರು ಸೀತಮ್ಮ. ಅಕ್ಕಿ, ಉಪ್ಪು ಎರಡಿದ್ದರೆ ಗಂಜಿ ಬೇಯಿಸಿಕೊಂಡಾದರೂ ತಿನ್ನಬಹುದು. ಅದೂ ಇಲ್ಲದಿದ್ದರೆ? ಗಂಡ ಮೂರು ಮೂರು ತಿಂಗಳಿಗೊಮ್ಮೆ ರಕ್ತಪರೀಕ್ಷೆ ಮಾಡಿಸಿಕೊಂಡು ಬರುತ್ತಿದ್ದ ಪದ್ಧತಿ ಯಾವತ್ತೋ ಕೈದಾಗಿದೆ. ಜನ ಸೇರಿದಲ್ಲಿಗೆ ವೃಥಾ ಹೋಗಬಾರದು ಎನ್ನುವ ಎಚ್ಚರಿಕೆ. ಅದರಲ್ಲೂ ಅನಿವಾರ್ಯವಲ್ಲದಿದ್ದರೆ ಆಸ್ಪತ್ರೆಯ ದಿಕ್ಕಿಗೆ ತಲೆ ಹಾಕಿ ಮಲಗಬಾರದು. ದೂರದರ್ಶನದಲ್ಲಿ ಕೇಳಿ ಕೇಳಿ ಕೇಳಿ ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಹೇಗಿರಬೇಕು, ಹೇಗಿರಬಾರದು ಎನ್ನುವುದು ಬಾಯಿಪಾಠವಾಗಿಬಿಟ್ಟಿದೆ. ‘ದುಡ್ಡು ಉಳೀತು’ ಎಂದು ಒಳಗಿಂದೊಳಗೆ ಸಂತೋಷಪಟ್ಟು ಕೊಂಡಿದ್ದರು ಶಿವರಾಮಯ್ಯ...

MORE FEATURES

ಅಪಾರ ಅನುಭವ ಮತ್ತು ಅಧ್ಯಯನದ ಸಂಗಮ ಈ ಕೃತಿ

07-05-2024 ಬೆಂಗಳೂರು

"ಅಪಾರ ಅನುಭವ ಮತ್ತು ಅಧ್ಯಯನದ ಸಂಗಮವಾದ ಈ ಕೃತಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಅದರಲ್ಲೂ ಪ್ರಮುಖವಾಗಿ...

ಕನ್ನಡ ಸಾಹಿತ್ಯ ಅಗೆದಷ್ಟೂ ಆಳವಾಗುತ್ತಲೇ ಹೋಗುತ್ತದೆ; ಕಮಲ ಹಂಪನಾ

07-05-2024 ಬೆಂಗಳೂರು

‘ಕನ್ನಡದ ಕಾಯಕಕ್ಕೆ ಕೈಹಾಕಿ ಕೈಲಾದಷ್ಟು ಸಾಹಿತ್ಯ ಕೃಷಿ ಮೊಗೆದು ಸಾರ್ಥಕತೆಯನ್ನು ಪಡೆದಿದ್ದಾರೆ. ಸಾಹಿತ್ಯ ಕೃಷಿಯ...

ಬಣ್ಣಗಳ ಮಧ್ಯೆ 'ಪ್ರೀತಿ' ಹುಡುಕುವ ಮನಸ್ಥಿತಿ: ಆಮಿರ್ ಬನ್ನೂರು ಅವರ ಬ್ಯಾರಿ ಭಾಷೆಯ ಕವಿತೆ

07-05-2024 ಬೆಂಗಳೂರು

"'ಕಪ್ಪು ವರ್ಣಿಯ' ಎನ್ನುವ ಕಾರಣಕ್ಕಾಗಿ, ಕೆಳ ಜಾತಿಯ ಎನ್ನುವ ಕಾರಣಕ್ಕಾಗಿ, ನಿಂದನೆ ಮಾಡುವ ಜನಾಂಗದ ಬಾಯ...