'ಮರ ಬರೆದ ರಂಗೋಲಿಯ ರಂಗಿನೋಕುಳಿ'


'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವಿ ಬಾಶೋನ ಹೈಕುಗಳನ್ನ ತನ್ನ ಬೆಂಗಾಲಿ ಭಾಷೆಗೆ ಅನುವಾದಿಸುವ ಮೂಲಕ ಭಾರತಕ್ಕೆ ಹೈಕು ಪ್ರಕಾರವನ್ನ ತಂದರು. ಇಂದು ಕನ್ನಡ ಹೈಕು ಕ್ಷೇತ್ರ ವಿಶಾಲವಾದ ಕ್ಯಾನ್ವಾಸ್ ಹೊಂದಿದೆ' ಎನ್ನುತ್ತಾರೆ ಅನುಸೂಯ ಯತೀಶ್ ಅವರು ಎಚ್.ಎಸ್. ಸತ್ಯನಾರಾಯಣ ಅವರ ಮರ ಬರೆದ ರಂಗೋಲಿ ಹಾಯ್ಕುಗಳ ಸಂಕಲನಕ್ಕೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

"ಹೈಕುವಿನಲ್ಲಿ ಒಂದು ಪದವು ವ್ಯರ್ಥವಾಗಬಾರದು. ಹೈಕುವಿನ ಪ್ರತಿಯೊಂದು ಪದವು ಅದರ ಅನುಕ್ರಮದಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಸೂಚಿಸುತ್ತದೆ, ಸೂಚಿಸಬೇಕು. ಒಂದು ಸಂಘಟಿತ ಪರಿಣಾಮವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಒಂದು ಪದವನ್ನು ಅದರ ಸ್ಥಳದಿಂದ ತೆಗೆದು ಬೇರೆ ಇರಿಸುವುದು ಎಂದರೆ ಗ್ರಹಿಕೆ ಕಳೆದು ಹೋಗುವುದು ಎಂದರ್ಥ. ಹೈಕುವಿನ ಪ್ರತಿಯೊಂದು ಪದವು ಜೀವಂತ ಅನುಭವವಾಗಬೇಕು. ಹೈಕುವಿನ ಕೊನೆಯ ಪದವನ್ನು ತಲುಪಿದ ತಕ್ಷಣ ಸಂಪೂರ್ಣ ಚಿತ್ರ ಜೀವಂತವಾಗುತ್ತದೆ."

- ಪ್ರೊ. ಸತ್ಯ ಭೂಷಣ ವರ್ಮ

ಹೈಕು ಕುರಿತಾದ ಈ ಹೇಳಿಕೆಯು ನಮಗೆ ಹೈಕುವಿನ ಮಹತ್ತನ್ನು ಸಮಗ್ರವಾಗಿ ಕಟ್ಟಿಕೊಡುತ್ತದೆ. ಹದಿನಾರನೆಯ ಶತಮಾನಕ್ಕಿಂತಲೂ ಹಳೆಯದು ಎನ್ನಲಾಗುವ ಜಪಾನ್ ಮೂಲದ ಕಾವ್ಯ ಪ್ರಕಾರ ಹೈಕು. ಇದನ್ನು ಇಂದು ಕನ್ನಡದ ಬರಹಗಾರರು ಒಪ್ಪಿಕೊಂಡು ಅಪ್ಪಿಕೊಂಡು ಕನ್ನಡದಲ್ಲೂ ಹೈಕುಗಳನ್ನ ರಚಿಸುತ್ತಿದ್ದಾರೆ. ಹಾಗಾಗಿ ಹೈಕು ಜಪಾನಿನಿಂದ ಕನ್ನಡಕ್ಕೆ ಆಮದಾದ ಕಾವ್ಯ ಎನ್ನಬಹುದು. ಕಾವ್ಯ ಪರಂಪರೆಯಲ್ಲಿ ಪ್ರತಿಯೊಂದು ಭಾಷೆಗೂ ತನ್ನದೇ ಆದ ನಿಯಮ, ಲಯ ಹಾಗೂ ಗುಣ ಲಕ್ಷಣಗಳು ಇರುತ್ತವೆ. ಅದರಂತೆ ಜಪಾನಿನ ಛಂದಸ್ಸಿನಲ್ಲೂ ಪದವಿನ್ಯಾಸ ಮತ್ತು ಆಕೃತಿಯನ್ನು ಆದರಿಸಿ ಹೈಕುವನ್ನು 5,7,5 ಉಚ್ಚಾರಾಂಶ (ಸಿಲಬಲ್) ಗಳಲ್ಲಿ ರಚಿಸಲಾಗುತ್ತದೆ. ಅಂದರೆ ಪ್ರಥಮ ಮತ್ತು ತೃತೀಯ ಚರಣಗಳಲ್ಲಿ 5, 5 ಉಚ್ಚಾರಾಂಶಗಳು, ದ್ವಿತೀಯ ಚರಣದಲ್ಲಿ 7 , ಉಚ್ಚಾರಾಂಶಗಳು ಒಳಗೊಂಡಂತೆ ಮೂರು ಚರಣಗಳಲ್ಲಿ 17 ಉಚ್ಚಾರಾಂಶಗಳನ್ನು ಬಳಸಿಕೊಂಡು ಸ್ವರಬದ್ಧವಾಗಿ ಹೈಕು ರಚಿಸುತ್ತಾರೆ. ಕೊನೆಯ ಸಾಲು ಮಿಂಚಿನಂತಹ ಪಂಚು ಹೊಂದಿದ್ದು ಹೈಕುವಿನ ಸೊಬಗನ್ನು ಹೆಚ್ಚಿಸುತ್ತದೆ.

ಆದರೆ ಒಂದು ಭಾಷೆಯ ಛಂದಸ್ಸನ್ನು ಮತ್ತೊಂದು ಭಾಷೆಗೆ ಒಗ್ಗಿಸಿಕೊಳ್ಳುವುದು ಸುಲಭದ ಮಾತಲ್ಲ. ಅದರಿಂದ ಕನ್ನಡ ಹೈಕು ಬರಹಗಾರರು 5,7,5 ಅಕ್ಷರಗಳನ್ನು ಆಧರಿಸಿ ಕನ್ನಡ ಕಾವ್ಯದ ಜಾಯಮಾನಕ್ಕೆ ಒಗ್ಗಿಸಿಕೊಂಡು ಹೈಕು ರಚಿಸುತ್ತಿದ್ದಾರೆ. ಪ್ರಕೃತಿ ಮತ್ತು ಆಧ್ಯಾತ್ಮಿಕತೆ ಹೈಕುವಿನ ಬುನಾದಿ.

ಪ್ರಥಮ ಚರಣದಲ್ಲಿ ವಿಷಯ ವಸ್ತುವನ್ನು ಪ್ರಸ್ತಾಪಿಸಲಾಗುತ್ತದೆ. ದ್ವಿತೀಯ ಚರಣಕ್ಕೆ ಚಲಿಸಿ ಆ ವಸ್ತುವನ್ನು ವಿವರಿಸಲಾಗುತ್ತದೆ. ತೃತೀಯ ಚರಣದಲ್ಲಿ ಅರ್ಥಸಂಯೋಜನೆ ಯೊಂದಿಗೆ ಹೈಕು ಸಮಾಪ್ತಿಗೊಳಿಸಲಾಗುತ್ತದೆ. ಅರ್ಥ, ವಿಸ್ತಾರ, ಚಿಂತನೆಗಳೆಂಬ ತ್ರಿಕೋನ ಸಂಯೋಜನೆಯಲ್ಲಿ ಹೈಕುಗಳು ಒಡಮೂಡುತ್ತವೆ. ಹೈಕು ರಚನೆಯಲ್ಲಿ ಕೆಲವರು ಪ್ರಾಸಗಳಿಗೂ ಆದ್ಯತೆ ನೀಡುತ್ತಾರೆ. ಆದರೆ ಅದು ನಿಯಮದಡಿಯಲ್ಲಿ ಬರುವುದಿಲ್ಲ.

ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವಿ ಬಾಶೋನ ಹೈಕುಗಳನ್ನ ತನ್ನ ಬೆಂಗಾಲಿ ಭಾಷೆಗೆ ಅನುವಾದಿಸುವ ಮೂಲಕ ಭಾರತಕ್ಕೆ ಹೈಕು ಪ್ರಕಾರವನ್ನ ತಂದರು. ಇಂದು ಕನ್ನಡ ಹೈಕು ಕ್ಷೇತ್ರ ವಿಶಾಲವಾದ ಕ್ಯಾನ್ವಾಸ್ ಹೊಂದಿದೆ. ಡಾ. ಹೆಚ್ ಎಸ್ ಶಿವಪ್ರಕಾಶ್, ಡಾ. ಎ ಕೆ ರಾಮಾನುಜನ, ಚಂದ್ರಕಾಂತ ಕೂಸನೂರ, ಡಾ.ಕೆ ಬಿ ಬ್ಯಾಳಿ, ಡಾ.ಸರಜೂ ಕಾಟ್ಕರ್,ಸಿದ್ದರಾಮ ಕೂಡ್ಲಿಗಿ, ರಾಘವೇಂದ್ರ ಜೋಶಿ, ನವೀನ್ ಹಳೆಮನೆ, ಶಿವಶಂಕರ ಕಡದಿನ್ನಿ, ಅಕ್ಷತಾ ಅತ್ರೆ, ಕಿಗ್ಗಾಲು ಹರೀಶ್, ಡಾ. ಜಯದೇವಿ ಗಾಯಕವಾಡ, ಡಾ.ಗವಿಸಿದ್ದಪ್ಪ, ಎಚ್ ಪಾಟೀಲ, ಅರುಣ ನರೇಂದ್ರ, ವೀರ ಹನುಮಾನ, ಮಹಿಪಾಲ ರೆಡ್ಡಿ ಮನ್ಸೂರ್, ಸಿದ್ದಲಿಂಗಪ್ಪ ಬೀಳಗಿ, ಸಿದ್ದರಾಮ ಹೊನ್ಕಲ್, ಪ್ರೇಮ ಹೂಗಾರ, ಎ ಎಸ್ ಮಕಾನದಾರ, ಜಂಬಣ್ಣ ಅಮರಚಿಂತ, ರಂಜಾನ್ ಎಬಸೂರು, ಡಾ. ಮಲ್ಲಿನಾಥ ತಳವಾರ್, ಪ್ರಭಾವತಿ ದೇಸಾಯಿ, ಶಿವಲೀಲಾ ಡೇಂಗಿ, ಶಮಾ ಜಮಾದಾರ್ ಸೇರಿದಂತೆ ಅನೇಕರು ಈಗಾಗಲೇ ಹೈಕು ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ.

ರೂಬಾಯಿ, ತನಗ, ಚುಟುಕು, ಹನಿ, ತಂಕಾ, ಮುಕ್ತಕ, ಆಧುನಿಕ ವಚನ, ದೋಹೆ, ಚೌಪದಿ, ವಚನ, ತ್ರಿಪದಿ, ಸೇರಿದಂತೆ ಕಿರಿದಾದ ಆಕಾರ ಹೊಂದಿರುವ ಕಾವ್ಯ ಪ್ರಕಾರಗಳಲ್ಲಿ ಜಪಾನ್ ರಾಣಿ ಹೈಕು ಕೂಡ ಪ್ರಮುಳಾಗಿದ್ದಾಳೆ.

ಈ ಹೈಕುಗಳು ಪುಟ್ಟ ರಚನೆಗಳೇ ಆದರೂ ಅದರೊಳಗಡೆ ಅಡಗಿಸಿಕೊಂಡಿರುವ ಆಶಯ, ಗುರಿ, ಒಳನೋಟ, ಸಂವೇದನೆ, ಅರ್ಥ, ಭಾವ, ರೂಪಕಗಳು ಅಪರಿಮಿತವಾಗಿವೆ. ಈ ಕಾವ್ಯ ಕುರಿತಂತೆ ಇದರ ಮೂಲ ನೆಲೆಯಾದ ಜಪಾನಿನಲ್ಲಿ ಹೈಕು ಕವಿಗಳು ಒಟ್ಟಿಗೆ ಸೇರಿ ಆಶು ಕವಿತೆಗಳಂತೆ ಹೈಕು ರಚಿಸುವರು ಎಂಬ ಮಾಹಿತಿಯೊಂದನ್ನು ಓದಿದ ನೆನಪಿದೆ.

ಇದೀಗ 'ಮರ ಬರೆದ ರಂಗೋಲಿ' ಹೈಕು ಸಂಕಲನದ ಮೂಲಕ ನಾಡಿನ ವಿಮರ್ಶಕರಾದ ಡಾ. ಎಚ್ ಎಸ್ ಸತ್ಯನಾರಾಯಣ ಅವರು ಕೂಡ ಹೈಕು ಬರಹಗಾರರ ಸಾಲಿನಲ್ಲಿ ಸೇರಿದ್ದಾರೆ.

ಡಾ. ಎಚ್.ಎಸ್ ಸತ್ಯನಾರಾಯಣ ಸಮಕಾಲೀನ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿದ್ದಾರೆ. ಓದು, ಅಧ್ಯಯನ, ಉಪನ್ಯಾಸ, ಪುಸ್ತಕ ಪರಿಚಯ, ವಿಮರ್ಶೆ, ಪ್ರಬಂಧಗಳು ಸೇರಿದಂತೆ ವಿಭಿನ್ನ ರೀತಿಯಲ್ಲಿ ಕನ್ನಡ ಸಾಹಿತ್ಯದೊಂದಿಗೆ ಮುಖಾಮುಖಿಯಾಗಿ ಅಪಾರ ಸಾಹಿತ್ಯ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಬರಹಗಾರರು. ಸಾಹಿತ್ಯದಲ್ಲಿ ತಾನು ಬೆಳೆಯುತ್ತಾ ಇತರರನ್ನು ಪ್ರೋತ್ಸಾಹಿಸುತ್ತಾ ಸಾಗುವ ಪ್ರೀತಿಯ ಸಾಹಿತಿ. ಗದ್ಯ ಸಾಹಿತ್ಯದಲ್ಲಿ ಸತ್ವಯುತವಾದ ಕೃಷಿ ಮಾಡುತ್ತಿರುವ ಇವರು ಇದೀಗ ಜಪಾನಿನ ಕೂಸಾದ ಹೈಕುವನ್ನ ಎತ್ತಿ ಆಡಿಸುವ ಮೂಲಕ ಕವಿಯಾಗಿಯೂ ಕಾವ್ಯ ಲೋಕಕ್ಕೆ ಅಧಿಕೃತ ಪ್ರವೇಶ ಪಡೆದಿದ್ದಾರೆ. ತನ್ನ ಎದೆಯ ಭಾಷೆ ಯಾದ ಕನ್ನಡದಲ್ಲಿ ಕಾವ್ಯ ರಚಿಸುವುದಕ್ಕೂ ಮೊದಲೇ ಪರಭಾಷಾ ಕಾವ್ಯ ರಚನೆಯಲ್ಲಿ ತೊಡಗಿರುವುದು ಇವರ ಆಳವಾದ ಅಧ್ಯಯನವನ್ನು ಪರಿಚಯಿಸುತ್ತದೆ. ನಾನು ಹೈಕು ಸಂಕಲನಗಳ ವಿಮರ್ಶೆ ಮಾಡುವಾಗ ಅನೇಕ ಪುಸ್ತಕಗಳಲ್ಲಿ ಇವರ ಮುನ್ನುಡಿ ಬೆನ್ನುಡಿ ಇರುವುದನ್ನು ಗಮನಿಸಿರುವೆ. ಬಹುಶಃ ಆ ಓದಿನ ಗುಂಗು ಇವರನ್ನ ಹೈಕು‌ ರಚನೆಗೆ ಪ್ರೇರೇಪಿಸಿರಬಹುದು. ಹೊರಗಿನ ಒತ್ತಡ ಏನೇ ಇರಲಿ ಹೈಕು ಕಾವ್ಯ ಕನ್ನಡದ ಮತ್ತೊಬ್ಬ ಕವಿಯನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಂತೂ ಸತ್ಯ.

ಇಲ್ಲಿ ತೋಚಿದ್ದೆಲ್ಲಾ, ಗೀಚಿದ್ದೆಲ್ಲಾ ಹೈಕುವಾಗಲಾರದು ಎಂಬ ಅರಿವು ಕವಿಗಿದೆ. ಹಾಗಾಗಿ ಗಟ್ಟಿಯಾದ ಕಾಳುಗಳನ್ನು ಬೆಳೆಯಲು ವಿಚಾರ ಚಿಂತನೆಗೆ ಎದುರಾಗಿದ್ದಾರೆ. ಇಲ್ಲಿ ನೋಟದಿಂದ ಶಬ್ದಕ್ಕೆ, ಶಬ್ದದಿಂದ ನೋಟಕ್ಕೆ ವಿಭಿನ್ನ ರೂಪ ತಾಳುವ ಪ್ರತಿಮೆಗಳು ಸೂಜಿಗಲ್ಲಿನಂತೆ ಓದುಗರನ್ನು ಸೆಳೆಯುತ್ತವೆ. ಕವಿಯಾದವನು ಪದಗಳ ಬಳಕೆಯಲ್ಲಿ ಜಿಪುಣನಾಗಿ ಇರಬೇಕೆಂಬ ಮಾತೊಂದು ಇದೆ. ಪರಿಮಿತ ಶಬ್ದಗಳಲ್ಲಿ ಅಗಾಧತೆಯನ್ನು ಕಟ್ಟಿಕೊಡುವುದು ಆ ಮಾತಿನ ಹಿಂದಿರುವ ಆಶಯವಾಗಿದೆ. ಇದನ್ನು ಅರ್ಥ ಮಾಡಿಕೊಂಡಿರುವ ಸತ್ಯನಾರಾಯಣ ಅವರು ಈ ಸಂಕ್ಷಿಪ್ತ ಕಾವ್ಯ ಪ್ರಕಾರವನ್ನು ಧ್ಯಾನಿಸಿದ್ದಾರೆ.

ಹೈಕು ಪುಟ್ಟ ರಚನೆಯಾಗಿರುವುದರಿಂದ ಸತ್ಯನಾರಾಯಣ ಅವರು ಕಿರಿದರಲ್ಲಿ ಹಿರಿಯರ್ಥ ತುಂಬುವಲ್ಲಿ ಸೃಜನಶೀಲತೆ ಮೆರೆದಿದ್ದಾರೆ. ತಾನು ಆಯ್ಕೆ ಮಾಡಿಕೊಂಡಿರುವ ಕಾವ್ಯ ವಸ್ತುವಿನಲ್ಲಿ ತನ್ನೆಲ್ಲ ಮನೊಗತವನ್ನು ತುಂಬಲು ಹಾಗೂ ತನ್ನ ವಿಚಾರಧಾರೆಗಳನ್ನು ಓದುಗರೆದೆಗೆ ದಾಟಿಸುವಲ್ಲಿ ಕುಶಲತೆ ಮೆರೆದಿದ್ದಾರೆ. ಗಾತ್ರದಲ್ಲಿ ಪುಟ್ಟದಾಗಿದ್ದರೂ‌ ಹೆಚ್ಚಿನ ಸಾರ ಈ ಹೈಕುಗಳಲ್ಲಿ ಕಂಡುಬರುತ್ತದೆ.

ಡಾ. ಎಚ್ಎಸ್ ಸತ್ಯ ನಾರಾಯಣ ಅವರ ಹೊಸ ಹೊಸ ರೂಪಕಗಳು, ಉತ್ಕೃಷ್ಟ ಭಾವಲಹರಿ, ತೀವ್ರ ಸಂವೇದನೆಗಳು, ಸಹಜ ಅಭಿವ್ಯಕ್ತಿ, ಭಾಷಾ ಬಳಕೆಯಲ್ಲಿನ ಎಚ್ಚರಿಕೆ, ಧ್ಯಾನಸ್ಥ ಸ್ಥಿತಿ, ಸೌಂದರ್ಯ ಪ್ರಜ್ಞೆ, ಪರಿಸರ ಆರಾಧನೆ, ಅಂತರ ದೃಷ್ಟಿ, ಜೀವನ ದೃಷ್ಟಿ, ಸೂಕ್ಷ್ಮ ಪದ ಬಳಕೆ, ಆಧ್ಯಾತ್ಮಿಕತೆ ಮುಂತಾದವುಗಳು ಇವರ ಹೈಕುಗಳ ರಚನೆಯಲ್ಲಿ ಪ್ರಧಾನವಾಗಿ ಗೋಚರಿಸುತ್ತವೆ. ಹಾಗಾಗಿ ಇವುಗಳು ಓದುಗರಿಗೆ ಹೊಸ ಕಾವ್ಯ ವಸ್ತುವಿನೊಂದಿಗೆ ಆಸ್ವಾದಿಸಲು ನೆರವಾಗುತ್ತವೆ.

ಪ್ರೀತಿ, ಪ್ರೇಮ, ವಿರಹ, ಕಾವ್ಯ, ಚಂದ್ರ, ಸೂರ್ಯ, ನದಿ, ಆತ್ಮಸಖಿ, ನಿಟ್ಟುಸಿರು, ಆಗಸ, ಮಳೆ,ಬೆಳೆ, ಜಂಗಮ, ಸ್ಥಾವರ, ದೇವರು, ಆಧ್ಯಾತ್ಮಿಕತೆ, ಕತ್ತಲೆ, ಬೆಳಕು, ಶಿವ, ಶಕ್ತಿ, ತಾಯಿ, ಋತುಮಾನಗಳು, ನಂಬಿಕೆ, ಆಸ್ತಿಕತೆ, ಬಡತನ, ಯೌವ್ವನ, ವಿದೇಯತೆ, ಕ್ಷಮೆ, ಮಾತು, ಮೌನ, ಸಂಬಂಧಗಳು, ದುಂಬಿ, ಹೂ, ನಗು, ಗಿಡ, ಮರ, ಬಳ್ಳಿ, ಸತ್ಯಾನ್ವೇಷಣೆ, ಮನಸ್ಸು, ಸೂಜಿದಾರ, ಬಯಲು, ಸಾವು, ಗಾಂಧಿ, ಸ್ವಾರ್ಥ, ಬುದ್ಧ, ಸ್ವರ್ಗ, ನರಕ, ಬಿಸಿಲುಕೋಲು, ನಾದಲೋಕ, ತಾರೆ, ಹಸಿರು, ಕೂಸು, ಚಿತ್ರ, ಕಸಪೊರಕೆ, ಜಲ, ಮಳೆ, ಒಲವು ಇವೆ ಮುಂತಾದ ಆಕರಗಳನ್ನ ತಮ್ಮ ಹೈಕು ರಚನೆಗಾಗಿ ಬಳಸಿಕೊಂಡು ವಿಭಿನ್ನವಾದ ನೋಟಗಳನ್ನು, ವೈವಿಧ್ಯಮಯ ಚಿಂತನೆಗಳನ್ನು ರಸಸ್ವಾದವನ್ನು ಬಿತ್ತರಿಸಿದ್ದಾರೆ.

ಗಡಿಗಳಿರುವುದು
ಹೊರಗಲ್ಲ
ನಮ್ಮಿ ಎದೆಯಲ್ಲಿ

ಇದು ಮನುಷ್ಯನ ಮನದಲ್ಲಿರುವ ಜಾತಿ, ಮತ, ಧರ್ಮ, ಕುಲಭೇದಗಳು, ಮದ ಮತ್ಸರಗಳು, ದ್ವೇಷ, ಅಶಾಂತಿ, ಕ್ರೌರ್ಯಗಳ ಗಡಿಯ ಕುರಿತು ಮಾತನಾಡುತ್ತದೆ. ಅವೆಲ್ಲವೂ ನಮ್ಮೊಳಗೆ ಇರುವಾಗ ಭೌತಿಕವಾದ ಅರ್ಥ ಹೀನ ಗಡಿಗಳ ಬಗ್ಗೆ ನಾವು ಮಾತನಾಡುವುದು ಕವಿಗೆ ಹಾಸ್ಯಾಸ್ಪದವಾಗಿ ಕಂಡಿದೆ. ಹಾಗಾಗಿ ನಮ್ಮ ಎದೆಯಲ್ಲಿರುವ ಮಿತಿಗಳೆಂಬ ಗಡಿಗಳನ್ನ ದಾಟಿ ಸಮಷ್ಠಿಯೆಡೆಗೆ ಸಾಗಲು ಕರೆ ಕೊಡುತ್ತದೆ. ಇಂತಹ ಮನೋಭಾವ ಜನರಲ್ಲಿ ಮೂಡಿಸಲು ಇಚ್ಛಾ ಶಕ್ತಿ ಕವಿಗಿರುವುದು ಅವರ ಬರಹದ ಬದ್ಧತೆ ತೋರುತ್ತದೆ.

ಸೇಡು ತೀರಿಸಲು
ಕತ್ತಿ ತೆಗೆಯದೆ
ಕ್ಷಮಿಸು ಸಾಕು

ಇತರರಿಗೆ ಕೆಡುಕು ಮಾಡುವ ಜನಗಳ ಮೇಲೆ ಪ್ರತಿಕಾರಕ್ಕಿಳಿಯದಂತೆ ಈ ಹೈಕು ನಿರ್ದೇಶಿಸುತ್ತದೆ. ಎಲ್ಲದಕ್ಕೂ ರಕ್ತಪಾತವೇ ಉತ್ತರವಾಗಬಾರದು. ಅವರ ತಪ್ಪನ್ನು ಕ್ಷಮಿಸುವ ಮೂಲಕ ಅವರ ಅಂತರಂಗ ಹೊಕ್ಕು ಒಳಿತು ಕೆಡಕಿನ ಪರಾಮರ್ಶೆಯಲ್ಲಿ ಮುಳುಗಿಸಿ, ಸರಿಯಾದ ದಾರಿಯಲ್ಲಿ ನಡೆಸಲು ಹೈಕು ಬರಹಗಾರರಿಲ್ಲಿ ಆಶಿಸಿದ್ದಾರೆ. ಪಶ್ಚತ್ತಾಪಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ. ಪಶ್ಚಾತ್ತಾಪದಲ್ಲಿ ಬೆಂದು ಹದವಾದಾಗ ಸರಿಯಾಗಿ ತಟ್ಟಿ ಬೇಕಾದ ಆಕಾರ ಕೊಡಬೇಕೆಂದು ಮಾರ್ಮಿಕವಾಗಿ ಹೇಳುತ್ತದೆ.

ಗುಡಿಸಿದಷ್ಟು
ಸೇರುತ್ತಲೇ ಇದೆ
ಈ ಮನದ ಕಸ

ಈ ಹೈಕುವನ್ನು ಚರ್ಚಿಸ ಹೊರಟರೆ ಬಹುಶಃ ಮಹಾಕಾವ್ಯವಾದರೂ ಸಾಲದು ಎನಿಸುತ್ತದೆ. ಮನಸ್ಸು ಎಬುಂದು ಮಸಣಕ್ಕೆ ಕರೆದೊಯ್ಯುವ ದಾರಿಯಾಗಬಾರದು. ಅಥವಾ ಗುಡಿಸಿ ಬಿಸಾಕುವಂತ ಕಸವು ಆಗಬಾರದು ಎನ್ನುತ್ತಾರೆ. ಅದು ಶುದ್ಧ ಸ್ಪಟಿಕದಂತೆ ಪಾರದರ್ಶಕತೆಯನ್ನು ಹೊಂದಿರಬೇಕು. ಕವಿಯ ಪ್ರಕಾರ ಮನದ ಕಸಗಳು ಎಂದರೆ ಮನುಜನ ಲೋಲುಪತೆ, ವೈಭೋಗ, ಸಂಕುಚಿತ ಮನೋಭಾವ, ದುರಹಂಕಾರ, ದೌರ್ಜನ್ಯ, ಮತ ಭೇದಗಳ ಕೋಟೆ, ಸ್ವಾರ್ಥ, ವಂಚನೆ, ಮೋಸ, ಅಪ್ರಮಾಣಕತೆ ಮುಂತಾದವು ಕವಿಗಿಲ್ಲಿ ಕಸವಾಗಿ ಕಂಡಿವೆ. ಅವುಗಳನ್ನೆಲ್ಲ ಮನದಲ್ಲಿ ಇಟ್ಟುಕೊಂಡು ಕೊಳೆತು ನಾರುವ ತಿಪ್ಪೆಯಾಗಿ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುವ ಮೊದಲು ಇವುಗಳಿಂದ ಮುಕ್ತಿ ಪಡೆಯಲು ಸಲಹೆ ನೀಡುತ್ತಾರೆ.

ದೇವರ ಪ್ರಸಾದಕ್ಕೆ
ಹಸಿದೊಡಲ
ಬೇಗೆ ತಟ್ಟದು

ಈ ಹೈಕು ವಾಸ್ತವದ ಕಟು ಸತ್ಯವನ್ನ ಅರ್ಥ ಮಾಡಿಸುವ ಜೊತೆಗೆ ಹಸಿವಿನ ಆಹಾಕಾರವನ್ನು, ಹಸಿದವರ ಆರ್ತನಾದವನ್ನು ಪ್ರತಿನಿಧಿಸುತ್ತದೆ. ದೇವಾಲಯಗಳಲ್ಲಿ ಕೊಡುಗೈ ಧಾನಿಗಳು ಬಂದು ಭಕ್ತರಿಗಾಗಿ ರಾಶಿ ರಾಶಿ ಪ್ರಸಾದ ಮಾಡಿಸುತ್ತಾರೆ. ದೇವಾಲಯದ ಹೊರಗೆ ತುತ್ತು ಅನ್ನಕ್ಕಾಗಿ ಹಂಬಲಿಸುವ ಜೀವಗಳ ಹಸಿವು ಯಾರಿಗೂ ತಟ್ಟದು ಎಂಬ ವಿಷಾದ ಗಾಥೆಯಿದು. ಅವರ ನೆಮ್ಮದಿ ಉಸಿರಿನಲ್ಲಿ ದೇವರಿದ್ದಾನೆ ಎಂಬುದನ್ನ ಕವಿ ಈ ಮೂಲಕ ಹೇಳ ಹೊರಟಿದ್ದಾರೆ.

ಪರಿಶುದ್ಧ ಬಾಳು
ಕವಿತೆಯೇ
ಬರಿ ಪದಗಳಲ್ಲ

ಕವಿತೆ ಎಂದರೆ ಏನು ?ಬಹುಶಃ ಅದು ಯಾರ್ ಒಬ್ಬರಿಂದ ವ್ಯಾಖ್ಯಾನಿಸಲಾಗದ, ಅಕ್ಷರಗಳಲ್ಲಿ ಬಂಧಿಸಲಾಗದ, ಮಿತಿಗೊಳಿಸಲಾಗದ ಅನಂತ ಭಾವ ಕಡಲು. ಒಬ್ಬೊಬ್ಬರಿಗೆ ಕವಿತೆ ಒಂದೊಂದು ರೀತಿ ಎದುರಾಗುತ್ತದೆ. ಸತ್ಯನಾರಾಯಣ ಅವರಿಗೆ ಅದು ಪರಿಶುದ್ಧ ಬಾಳಿನ ರೂಪದಲ್ಲಿ ಕಂಡಿದೆ. ನಾವು ಬಾಳಿ ಬದುಕುವಲ್ಲಿ ಎಷ್ಟೆಲ್ಲ ಭಾವಗಳು ಎಡ ತಾಗುತ್ತವೆ. ಪ್ರೀತಿ, ಪ್ರೇಮ, ವಿರಹ, ನೋವು, ನಲಿವು, ಹತಾಶೆ, ಕನಸು, ನನಸು, ಸವಾಲು, ಸುಖ, ಅಸಹಾಯಕತೆ, ಭ್ರಾತೃತ್ವ, ವೈರತ್ವ ಇವೆಲ್ಲ ಕವಿತೆಯಲ್ಲಿವೆ. ಜೀವನ ಕಲಿಸಿದ ಪ್ರತಿ ಅನುಭವ ಪಾಠವು ಕವಿತೆಯೇ. ಇದನ್ನು ಕವಿ ಇಲ್ಲಿ ಸೂಚ್ಯವಾಗಿ ಹೇಳಿದ್ದಾರೆ.

ತಾಯಿ ಎದೆ ಹಾಲು
ಬರಿದಾದೀತು
ಪ್ರೀತಿ ರಸವಲ್ಲ

ತಾಯಿ ಮುಗಿಯದ ಕಥೆ, ಅಂತ್ಯಗೊಳಿಸಲಾಗದ ನೀಳ್ಗಾವ್ಯ, ಮುಂದುವರೆಯುತ್ತಲೇ ಇರುವ ಕಾದಂಬರಿ. ಒಟ್ಟಿನಲ್ಲಿ ಅಕ್ಷರ ಮತ್ತು ಭಾವಗಳ ಬಂಧಮುಕ್ತ ಮಹಾಕಾವ್ಯ. ಇಲ್ಲಿ ಪ್ರಸ್ತಾಪಿಸಲಾಗಿರುವ ಎರಡು ವಿಚಾರಗಳು ಗಹನವಾದವುಗಳಾಗಿವೆ. ತಾಯಿ ಎದೆ ಹಾಲು ಮತ್ತು ಅವಳು ಉಣಿಸುವ ಪ್ರೀತಿ. ಇವೆರಡು ಅಮೃತಪಾನಗಳು. ಅವುಗಳಿಗೆ ಬೆಲೆ ಕಟ್ಟಲಾಗದು. ತಾಯಿ ತನ್ನ ರಕ್ತವನ್ನು ಎದೆ ಹಾಲಾಗಿಸಿ ಅದನ್ನು ಉಣಿಸಿದ್ದಾರೆ. ಈ ಹೈಕು ತಾಯಿಯ ಪ್ರೀತಿಯನ್ನು ಕಡೆಗಣಿಸಿ ಅಮೂಲ್ಯವಾದದನ್ನು ಕಳೆದುಕೊಳ್ಳಬೇಡಿ ಎಂದು ಮಕ್ಕಳಿಗೂ ಬುದ್ಧಿವಾದ ಹೇಳುತ್ತದೆ.

ದೇವರು
ದ್ವೇಷವನೊಲ್ಲ
ಅವ ಸದಾ ಪ್ರೇಮದ ಪರ

ಆಧ್ಯಾತ್ಮಿಕ ಸ್ಪರ್ಶದ ಹೈಕು ಇದಾಗಿದೆ. ಇಲ್ಲಿ ಕವಿಗೆ ಪ್ರೇಮವೇ ದೇವರ ಸ್ವರೂಪದಲ್ಲಿ ಕಂಡಿದೆ. ದೇವರಿಗೆ ಕೆಡುಕಿನ ದರ್ಧಿಲ್ಲ. ಹಾಗಾಗಿ ಅವನು ದ್ವೇಷದ ವಿಷ ಬೀಜ ಬಿತ್ತಿ ಹಾನಿಕಾರಕವಾದ, ಅಪಾಯಕಾರಿ ಮುಳ್ಳುಗಳನ್ನ ಬೆಳೆಸಲಾರ ಎಂಬುದು ಕವಿಯ ಸಂಪೂರ್ಣ ವಿಶ್ವಾಸ. ಹಾಗಾಗಿ ದೇವರು ಪ್ರೀತಿಯ ಹೂಗಳನ್ನು ಬೆಳೆದು ಅದರ ಸುಗಂಧವನ್ನು ನಾಡಿನ ತುಂಬೆಲ್ಲ ಪಸರಿಸುವಂತೆ ಮಾಡುವನು ಎಂಬ ಮಹತ್ವಾಕಾಂಕ್ಷೆ ಸಕಾರಾತ್ಮಕ ನೆಲೆಯಲ್ಲಿ ನಿರೂಪಿತವಾಗಿದೆ. ಈ ದೃಷ್ಟಿಯಿಂದ ನೋಡಿದಾಗ ಜೀವ ಪರ ಕಾಳಜಿಯುಳ್ಳ, ಪ್ರೀತಿ ತೋರುವ, ಪ್ರತಿ ಮನುಜನು ದೇವರೇ ಅಲ್ಲವೇ? ಮನುಜ ದೇವರಾಗಲು ಜಡ ಶಿಲೆಯಾಗಬೇಕಿಲ್ಲ. ಅಂತಹ ಪ್ರೀತಿ, ಅಂತಕರಣವನ್ನ ಮೈಗೂಡಿಸಿಕೊಂಡು ಅದನ್ನ ಜಗಕೆಲ್ಲ ಹಂಚಿದರೆ ಸಾಕು ಎಂಬುದು ಕವಿಯ ವಾದ.

ದೂರ ದೂರನೇ
ಹಾರ ಬೇಡ ಬಂಧು
ಬಾವೊಲುಮೆ ಬೀರು

ಹಿಂದಿನ ದಿನಮಾನಗಳಲ್ಲಿ ಭಾಂದವ್ಯಗಳು ಮೌಲ್ಯ ಕಳೆದುಕೊಳ್ಳುತ್ತಿರುವುದು ಕವಿಯನ್ನ ಕಾಡಿದೆ. ಜೊತೆಗೆ ಒಂದಿಷ್ಟು ಆತಂಕ ಭಾವವು ಸೇರಿದೆ. ಅದಕ್ಕಾಗಿ ಪ್ರೀತಿಯ ಸೂಜಿದಾರ ಪೋಣಿಸಿ ಸಂಬಂಧವೆಂಬ ಬಟ್ಟೆಯನ್ನ ಹೊಲಿಯಲು ಬಯಸುತ್ತಾರೆ. ಹೈಕು ಎಂಬ ಪುಟ್ಟ ಬಂಧದಲ್ಲಿ ಸಂಬಂಧ ಎಂಬ ಅಪರಿಮಿತ ಅನಂತ ಬಂಧವನ್ನು ಬೆಸೆಯಲು ಕವಿ ಮನಸ್ಸು ಒಲುಮೆಯ ಅಮೃತದಾರೆಯನ್ನ ಹರಿಸಲು ಬಯಸುತ್ತದೆ. ವಿಪರ್ಯಾಸ ಎಂದರೆ ಸಂಬಂಧಗಳೊಳಗೆ ದ್ವೇಷ ಅಸೂಯೆಗಳು ಮೂಡುತ್ತಿರುವುದು ನಮ್ಮ ಕೌಟುಂಬಿಕ ನೆಲೆಯನ್ನು ಅಲುಗಾಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಇಂತಹ ಬರಹಗಳು ಕಿಂಚಿತ್ತಾದರೂ ಪ್ರಭಾವ ಬೀರಿ ಸಂಬಂಧಗಳ ಕೊಂಡಿಯನ್ನ ಗಟ್ಟಿಯಾಗಿ ಬೆಸೆಯಲಿ ಎಂಬ ಆಶಯವಿಲ್ಲ ವ್ಯಕ್ತವಾಗಿದೆ.

ಅಧಿಕಾರಕ್ಕೆ
ಮೆದುಳಿರುತ್ತದೆ
ಹೃದಯವಿರದು

ಈ ಹೈಕು ವ್ಯವಸ್ಥೆಯ ಜವಾಬ್ದಾರಿ ಕುರಿತು ಮಾತನಾಡುತ್ತದೆ. ಅಧಿಕಾರಿಗಳು ಬುದ್ಧಿವಂತಿಕೆಯಿಂದ ತಮ್ಮ ಪಾಲಿನ ಕೆಲಸಗಳನ್ನು ಮಾಡಲು ತೊಡಗುತ್ತಾರೆ. ಆದರೆ ಇಲ್ಲಿ ಕವಿ ಜನರ ನೋವು ಕಷ್ಟ ಸಮಸ್ಯೆಗಳಿಗೆ ಸ್ಪಂದಿಸುವಂತ ಅಂತಃಕರಣವು ಇರಬೇಕು ಎಂದು ಹಂಬಲಿಸುತ್ತಾರೆ. ಎಲ್ಲವನ್ನು ಅಧಿಕಾರದ ದೃಷ್ಟಿಯಿಂದ ನೋಡದೆ ಹೃದಯವಂತಿಕೆಯಿಂದ ನೋಡಿ ಜನರ ಕಣ್ಣೀರನ್ನು ಒರೆಸಿ ಮಾನವೀಯತೆ ಮರೆಯಬೇಕು. ಮನುಷ್ಯರಾಗಿ ಮನುಷ್ಯರನ್ನು ಮನುಷ್ಯರಂತೆ ಕಾಣಬೇಕು ಎಂಬುದು ಇದರ ಅರ್ಥ. ಅಧಿಕಾರ ಎಂದಿಗೂ ಶೋಷಕರನ್ನು ಸೃಷ್ಟಿಸಬಾರದು ಎಂಬ ಕಿವಿ ಮಾತನ್ನು ಹೊತ್ತು ತಂದಿದೆ.

ಜ್ಞಾನಿ ನಾನೆಂಬ
ಭ್ರಮೆಯು ನನ್ನ
ಬೆನ್ನಿಗಂಟಿದ ಶತ್ರು

ನಾನು ಎನ್ನುವುದು ಮನುಜನಿಂದ ದೂರ ಸರಿಯದ ಹೊರತು ಅವನ ಒಳಗಿನ ಅರಿವಿನ ಕಣಜ ತುಂಬದು. ಆದರೆ ನಾನುವನ್ನು ಗೆಲ್ಲುವುದು ಮನುಜನಿಗೆ ದೊಡ್ಡ ಸವಾಲಾಗಿದೆ. ಇದನ್ನು ಈ ಬರಹಗಾರರು ಗುರುತಿಸಿದ್ದಾರೆ. ಈ ಗ್ರಹಿಕೆ ಹಿಂದೆ ಅವರ ಲೋಕಾನುಭವ ಕಾಣುತ್ತದೆ. ಶತ್ರು‌ ಆದವನ್ನು ನಮ್ಮ ತುಂಬಾ ಬೆನ್ನಿಗೆ ಅಂಟಿಕೊಂಡು ನಮ್ಮ ಬೆಳವಣಿಗೆಗೆ ತಡೆಗೋಡೆಯಾಗುವನೋ ಹಾಗೆ ನಮ್ಮೊಳಗಿನ ನಾನು ಎಂಬುದು ಸೃಜನಶೀಲತೆಯನ್ನು ಹತ್ತಿಕ್ಕಿ ನಮ್ಮನ್ನು ನಿರುಪದ್ರವಿಗನ್ನಾಗಿ ಮಾಡುತ್ತದೆ. ಜ್ಞಾನವಿದೆ ಎಂಬ ಭ್ರಮೆ ಜಗದ ಮುಂದೆ ಬೆತ್ತಲಾಗಿ ನಿಲ್ಲಿಸುತ್ತದೆ. ಇದರ ಅರಿವಿರುವ ಸತ್ಯನಾರಾಯಣ ಅವರು ನಾನು ಎಂಬುದು ಕೇವಲ ಖಾಲಿ ಕೊಡ. ನಾವು ಎಂಬುದು ಜ್ಞಾನ ಕಣಜ. ಈ ನಾನು ನಾವಾಗಿ ಪರಿವರ್ತನೆ ಯಾಗಲೆಂದು ಬಯಸುತ್ತಾರೆ.

ಪರಮ ಸುಂದರರು
ಹೂಸು ಬಿಡುವುದು
ಸ್ವಾಭಾವಿಕ

ಲಲಿತ ಪ್ರಬಂಧಗಳಲ್ಲಿ ಪ್ರವೀಣರಾದ ಸತ್ಯನಾರಾಯಣ ಅವರ ಹಾಸ್ಯ ಪ್ರಜ್ಞೆ ಈ ಹೈಕುವಿನಲ್ಲಿ ಜೀವ ತಾಳಿದೆ. ಇದು ದೈಹಿಕ ಕ್ರಿಯೆಗಳ ಕುರಿತು ಮಾತನಾಡುತ್ತದೆ. ಹೂಸು ಕೂಡ ಮನುಜನ ದೇಹದಿಂದ ಹೊರ ಹೋಗುವ ಸಹಜ ತ್ಯಾಜ್ಯ. ಇದನ್ನು ನಿರ್ಬಂಧಿಸಿ ಕಟ್ಟಿ ಹಾಕುವುದು ಅಸಾಧ್ಯ. ಇದು ಸ್ವಾಭಾವಿಕ ಕ್ರಿಯೆ ಆಗಿ ನಮ್ಮ ನಿಯಂತ್ರಣ ತಪ್ಪಿ ಕೆಲವೊಮ್ಮೆ ಹಾಸ್ಯಾಸ್ಪದವನ್ನು ಉಂಟುಮಾಡುತ್ತದೆ. ಆದರೆ ಅದು ಯಾರನ್ನು ಬಿಟ್ಟಿಲ್ಲ. ಯಾರು ಯಾರನ್ನು ಅಣಕಿಸುವುದಿಲ್ಲ. ಸೌಂದರ್ಯ ಕುರೂಪಿಗಳನ್ನು ಆಧರಿಸಿ ಅದು ಬರುವುದೂ ಇಲ್ಲ. ಎಲ್ಲರೂ ಅದರ ಭಾಗಗಳೇ ಎನ್ನುತ್ತಾರೆ.

ಜಡ ಕಲ್ಲಿಗೆ
ಅರ್ಥವಾಗದು
ಮಣ್ಣ ಕನವರಿಕೆ

ಜಡ ಕಲ್ಲು ಸ್ಥಾವರ. ಮಣ್ಣು ಜಂಗಮವಾಗಿ ಕವಿಗೆ ಕಂಡಿದೆ. ಯಾವುದು ಜೀವಪರತೆಗೆ ಹಂಬಲಿಸುತ್ತದೋ, ಯಾವುದು ಮತ್ತೊಂದು ಜೀವಿಯನ್ನ ಬೆಳೆಸುತ್ತದೋ, ಉಳಿಸುತ್ತದೋ, ಮತ್ತೊಂದು ಜೀವಕ್ಕೆ ನೆಲೆಯಾಗುತ್ತದೋ ಅದರ ಭಾವ ಸ್ಪಂದನೆ ಕಲ್ಲಿಗೆ ಅರಿಯಲು ಆಗದು. ಅದನ್ನ ಕವಿಯಲ್ಲಿ ಕಲ್ಲು ಮತ್ತು ಮಣ್ಣು ರೂಪಕಗಳ ಮೂಲಕ ಕಟ್ಟಿದ್ದಾರೆ.

ಕಾಮದ
ಆತುರದಲ್ಲಿ
ಎದೆಯ ದನಿ
ಕೇಳಿಸದು

ಕಾಮ ಎಂಬುದು ಎಲ್ಲ ಜೀವಿಗಳಲ್ಲಿಯೂ ಇರುವ ಸಹಜ ಕ್ರಿಯೆ. ಸೃಷ್ಠಿಯ ಮುಂದುವರಿಕೆಗೆ ಅಗತ್ಯ ಕೂಡ. ಆದರೆ ಅದು ಹೇಗಿರಬೇಕು? ಎಂಬ ಕುರಿತು ಈ ಹೈಕು ಮಾತನಾಡುತ್ತದೆ. ಕಾಮ ಮೃದು ಮಧುರ ಅನುಭೂತಿ ನೀಡಬೇಕೆ ಹೊರತು, ವಿಕೃತಿಯ ರೂಪ ತಾಳಬಾರದು ಎಂಬ ಸದಾಶಯ ಇವರದು. ಕೇವಲ ದೈಹಿಕ ಆಸೆಗಳನ್ನು ಪೂರೈಸಿಕೊಳ್ಳದೆ ತಮ್ಮ ಸಂಗಾತಿಯ ಒಲುಮೆಯ ಪಿಸು ಮಾತುಗಳಿಗೆ ಕಿವಿಯಾಗಬೇಕೆಂದು ತಿಳಿ ಹೇಳುತ್ತದೆ. ದೇಹ ಮತ್ತು ಮನಸ್ಸುಗಳ ಸಮ್ಮಿಲನವಾದಗಲೇ ಅಲ್ಲಿ ನೈಜ ಪ್ರೀತಿ ಮೂಡುತ್ತದೆ ಎಂಬ ಅರಿವು ಇರಬೇಕು. ಇಂದು ಯಾರಿಗೂ ಆ ಸುಮಧುರತೆ ಬೇಕಿಲ್ಲ. ದೈಹಿಕ ಬಯಕೆಗಳೆ ಪ್ರಧಾನವಾಗಿವೆ. ಇದನ್ನೇ ಕವಿ ಈ ರೀತಿ ವ್ಯಕ್ತಪಡಿಸಿದ್ದಾರೆ.

ಕಸಪೊರಕೆಯು
ಹಿರಿಯ ಗುರು
ಈ ಬಾಳ ದಾರಿಗೆ

ಕವಿಯ ಬೋಧನೆಯ ಮಾರ್ಗ ಎಷ್ಟು ಚಂದವಿದೆ. ಕಸಪೊರಕೆ ರೂಪಕ ಅದ್ಭುತವಾಗಿ ಮೂಡಿಬಂದಿದೆ ಮಾತ್ರವಲ್ಲ, ವಿಭಿನ್ನ ಹೊಳಹುಗಳನ್ನು ಹೊಂದಿದೆ. ಇಲ್ಲಿ ಕಸ ಪೊರಕೆಯ ಕೆಲಸ ಬೇಡವಾದ ವಸ್ತುಗಳನ್ನು ಗುಡಿಸಿ ಹೊರಹಾಕುವುದು. ಆದರೆ ಸತ್ಯನಾರಾಯಣ ಹೇಳಿರುವ ಕಸಪೊರಕ್ಕೆ ಮನೆಯ ತ್ಯಾಜ್ಯ ಹೊರಹಾಕಲು ಹೇಳುತ್ತಿಲ್ಲ. ಮನದೊಳಗಿನ ನಿರುಪಯುಕ್ತ ವಿಚಾರಗಳು. ಇತರರಿಗೆ ಕೆಡುಕು ಬಯಸುವ ದುಷ್ಟತನ, ಹಿಂಸಿಸುವ ಕ್ರೂರತನ, ಭೇದ ಭಾವ ಮಾಡುವ ಸಂಕುಚಿತತೆ. ಇಂತಹ ದುಷ್ಕೃತ್ಯಗಳನ್ನ ಮನವೆಂಬ ಮನೆಯಿಂದ ನಮ್ಮ ಧ್ಯಾನದ ಪೊರಕೆಯಿಂದ ಗುಡಿಸಿ ಹೊರಹಾಕಬೇಕು ಎನ್ನುತ್ತಾರೆ. ಇದಕ್ಕಾಗಿ ಅವರು ಕಸಪೊರಕೆಯನ್ನು ಅಂದರೆ ಮನುಷ್ಯನ ಮೆದುಳನ್ನು ಚಿಂತನೆಗಚ್ಚಬೇಕೆಂದು ಬಯಸುತ್ತಾರೆ.

ಬಾಗುವುದ ಕಲಿಸು
ಚೇತನವೇ
ಬೀಗುವುದನ್ನಲ್ಲ

ಮನುಷ್ಯನ ಅನುಭವಗಳು ಮಾಗಬೇಕು. ಮಾಗಿದಂತೆಲ್ಲ ನಮ್ಮ ವ್ಯಕ್ತಿತ್ವದಲ್ಲಿ ಪಕ್ವತೆ ಬರುತ್ತದೆ. ನಾವು ಗಳಿಸಿದ ಜ್ಞಾನ ನಮ್ಮನ್ನು ನಿರ್ಗರ್ವಿಗಳನ್ನಾಗಿ ಮಾಡಬೇಕು‌ ಎಂಬುದು ಈ ಹೈಕುವಿನ ಸಾರವಾಗಿದೆ. ಅಂದರೆ ವಿನಯ ವಿಧೇಯತೆ ಗುಣ ಬೆಳೆಸಿಕೊಳ್ಳಬೇಕು. ಇತರರನ್ನ ಗೌರವಿಸುವ ಗುಣ ಕಲಿಯಬೇಕು. ಆಗ ಅವು ನಮ್ಮನ್ನು ಎತ್ತರದ ಸ್ಥಾನಕ್ಕೆ ಒಯ್ದು ಸಮಾಜದಲ್ಲಿ ಗೌರವ ಸಲ್ಲುವಂತೆ ಮಾಡುತ್ತವೆ. ಅದನ್ನು ಬಿಟ್ಟು ನಾನು, ನಾನೇ, ನನ್ನಿಂದಲೇ ಎಂಬ ಅಹಂ ತಾಕದಂತೆ ನೋಡಿಕೊಳ್ಳಲು ಕರೆ ಕೊಡುತ್ತದೆ. ಎಲ್ಲವೂ ಗೊತ್ತು ಎಂದು ಬೀಗುವುದರಿಂದ ವ್ಯಕ್ತಿತ್ವವು ಬಾಗುತ್ತದೆ ಎಂಬ ಸಾರವಿಲ್ಲಿ ಅಡಕವಾಗಿದೆ. ಸದ್ಗುಣಗಳನ್ನು ಕಲಿಸಲು ತನ್ನದೆಯ ಚೇತನಕ್ಕೆ ಕವಿ ಇಲ್ಲಿ ಮನವರಿಕೆ ಮಾಡಿಕೊಡುತ್ತಾರೆ.

ಸತ್ಯದ ದಾರಿ
ಎಂಬುದು ಒಂಟಿ
ನಡಿಗೆಯ ಪಯಣ

ಇದು ಸತ್ಯದ ದಾರಿಯಲ್ಲಿ ಚಲಿಸುವುದರ ಕುರಿತು ಹೇಳುತ್ತದೆ. ಈ ಮಾರ್ಗ ಸರಳ ಸುಗಮವಲ್ಲ. ಅದಕ್ಕೊಂದು ಇಚ್ಛಾಶಕ್ತಿ ಬೇಕು. ಹೊರಗಿನಿಂದ ಬರುವ ಒತ್ತಡಗಳನ್ನು ಮೆಟ್ಟಿನಿಂತು ಜಯಿಸುವ ತಾಕತ್ತು ಬೇಕು. ಸತ್ಯ ಹೇಳುವವರು ಒಂಟಿಯಾಗಿ ಹೋರಾಡಬೇಕಾಗುತ್ತದೆ. ಅವರೊಂದಿಗೆ ಕೈಜೋಡಿಸಲು, ಬೆಂಬಲಿಸಲು ಯಾರೋ ಸಿದ್ದರಿರುವುದಿಲ್ಲ. ಎಲ್ಲರಿಗೂ ಸುಳ್ಳಿನ ಲೇಪನ ಹಚ್ಚಿದ ಬದುಕೆ ಆಪ್ತವಾಗಿ ಬಿಟ್ಟಿದೆ ಎಂದು ಹೈಕು ವಿವರಿಸುತ್ತದೆ. ಕಾರಣ ಸತ್ಯ ಕೇಳಲು ಕಹಿಯಾಗಿರುತ್ತದೆ. ಪಾಲಿಸಲು ಕಠಿಣವಾಗಿರುತ್ತದೆ. ಅದಕ್ಕಾಗಿ ಎಲ್ಲರೂ ಸುಳ್ಳಿನ ಸುಲಭ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆತಂಕ ಕವಿಯದು.

ಹಕ್ಕಿ ಉದುರಿಸಿದ
ಬೀಜವೀಗ
ಹೆಮ್ಮರದಿ ಹಣ್ಣು

ಪಕ್ಷಿಯ ಬಾಯಿಂದ ಜಾರಿ ಬಿದ್ದ ಬೀಜವು ಮಣ್ಣೊಳಗೆ ಸೇರಿ, ತನಗೆ ಸಿಕ್ಕಷ್ಟನ್ನೆ ದಕ್ಕಿಸಿಕೊಂಡು ಹೆಮ್ಮರವಾಗಿ ಬೆಳೆದು ಖಗ ಮೃಗಗಳಿಗೆ ಹಣ್ಣು ನೀಡುವ ಪರಿ ಕವಿಗೆ ಸೋಜುಗವನ್ನುಂಟು ಮಾಡಿದೆ. ಬೀಜ ಒಂದರಲ್ಲಿ ಇಷ್ಟೆಲ್ಲಾ ಅಖಂಡ ಶಕ್ತಿ ಅಡಗಿದೆ ಎಂದು ಮೇಲೆ ಮನುಷ್ಯರಾದ ನಾವು ಯೋಚಿಸಬೇಕಾಗಿದೆ. ನಮ್ಮ ಎದೆಯೊಳಗೆ ಬಿದ್ದ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾ ಅವರಿಗೆ ಅದನ್ನು ಹಂಚಿ ಸಾರ್ಥಕತೆ ಪಡೆಯಬಹುದೆಂಬ ಗೂಡಾರ್ಥದಲ್ಲಿ ಇದನ್ನು ಅರ್ಥೈಸಲಾಗಿದೆ.

ಮಾತಿನ ಉತ್ತರ
ಕಲಹ ಜನಕ
ಮೌನವೇ ಶ್ರೇಷ್ಠ

'ಮಾತು ಮನೆ ಕೆಡಿಸಿತು' ಎಂಬ ನಮ್ಮ ಜನಪದರ ಮಾತಿನ ಹಿಂದಿನ ಮರ್ಮ ನಾವು ಅರಿಯಬೇಕಿದೆ. 'ಮಾತು ಬೆಳ್ಳಿ ಮೌನ ಬಂಗಾರ' ಎಂಬ ಗಾದೆಯೂ ಮಾತು ಮತ್ತು ಮೌನಗಳ ನಡುವೆ ಇರುವ ವ್ಯತ್ಯಾಸವನ್ನು ವ್ಯಕ್ತಪಡಿಸುತ್ತದೆ. ಇದು ಭಾವ ಮತ್ತು ನಿಶ್ಯಬ್ದತೆಯನ್ನು ಸಂಕೇತಿಸುತ್ತದೆ. ಕೆಲವೊಮ್ಮೆ ಮೌನವೂ ಮಾತಿನಿಂದ ಉಂಟಾಗಬಹುದಾದ ಅನೇಕ ಅಪಾಯಗಳನ್ನು, ಕಲಹಗಳನ್ನು ನಿಯಂತ್ರಿಸುವಲ್ಲಿ ವಾಹಿನಿಯಾಗಿ ಕೆಲಸ ಮಾಡುತ್ತದೆ ಎನ್ನುವ ಭಾವವನ್ನು ಬಿತ್ತಿ ಎಲ್ಲರನ್ನೂ ಮೌನಕ್ಕೆ ಜಾರಿಸುತ್ತದೆ.

ಮಧ್ಯ ವಯಸ್ಸೆಂದರೆ ಕಳೆದ ಯೌವನದ ಕನಸು. ಮನುಷ್ಯ ಬಾಲ್ಯ, ಯೌವನ, ವೃದ್ಧಾಪ್ಯಗಳ ಹಂತಗಳನ್ನು ದಾಟಲೇಬೇಕು. ಬದುಕಲೇಬೇಕು, ಬಾಳುತ್ತೇವೆ ಕೂಡ. ಮಧ್ಯ ವಯಸ್ಸು ಎಂಬುದು ಮನುಷ್ಯನಿಗೆ ಒಂದು ಅಭದ್ರತೆಯ ಕಾಲ. ಆ ಕಾಲದಲ್ಲಿ ಅಸಹಾಯಕತೆಗಳು ಇನ್ನಿಲ್ಲದಂತೆ ಕಾಡುತ್ತವೆ. ಅಂದುಕೊಂಡಿದ್ದನ್ನೆಲ್ಲ ಸಾಧಿಸುವ, ಬೇಕಾದುದ್ದನ್ನು ಪಡೆಯುವ, ಸುಖಗಳನ್ನು ದಂಡಿ ದಂಡಿಯಾಗಿ ಅನುಭವಿಸುವ ಯೌವ್ವನದ ಕಾಲಘಟ್ಟದಲ್ಲಿನ ಸವಿನೆನಪುಗಳು ಕಾಡುತ್ತವೆ. ಅಣಕಿಸುತ್ತವೆ. ಅದನ್ನೆ ಈ ಹೈಕು ಹೇಳುತ್ತದೆ.

ಮರಳಿ ಬರುವೆ
ಎಂಬುದು ಮನದ
ಬಿಸಿಲು ಕೋಲು

ಹೌದು ಇದು ಆಧ್ಯಾತ್ಮಿಕತೆ ಮತ್ತು ವಾಸ್ತವಿಕತೆಗಳೆರಡನ್ನು ಸಂಯೋಜಿಸಿಕೊಂಡ ಹೈಕು. ನಾವು ಹೊರಟ ಮೇಲೆ ನಾವು ಸಾಗುವ ದಾರಿ ಎತ್ತ ಕರೆದೊಯ್ಯುತ್ತದೋ ಎಂಬ ಚಿಂತನೆಯನ್ನು ತುಂಬುತ್ತದೆ. ಬಿಸಿಲು ಕೋಲು ನೋಡಲಷ್ಟೇ ಚೆಂದ. ಆದರೆ ಹಿಡಿಯಲು ಬಾರದು. ಹೋಗುತ್ತೇವೆ ಎಂಬುದು ಬಿಸಿಲು ಕೋಲಿನಷ್ಟೇ ಪ್ರಯಾಸಕರ ಎಂಬ ವಿಷಾದವನ್ನು ಇಲ್ಲಿ ಕವಿ ಹೇಳುತ್ತಾರೆ.

ಒಬ್ಬರೇ ನಗುವುದು
ಉಣ್ಣುವುದು
ಪರಮ ಸ್ವಾರ್ಥವೇ

ನಗು ಎಂಬುದು ಪ್ರೀತಿಯಷ್ಟೆ ಅಮೂಲ್ಯವಾದದ್ದು. ಎದುರಿಗಿರುವವರನ್ನು ಸೆಳೆಯಲು, ಅತಿಥಿಗಳನ್ನ ಸ್ವಾಗತಿಸಲು, ಬೀಳ್ಕೊಡಲು, ದ್ವೇಷಾಸೂಯೆಗಳನ್ನು ಮರೆಸಲು ಒಂದು ಕಿರುನಗೆ ಸಾಕು. ಆ ನಗುವಿಗೆ ಅದೆಷ್ಟು ಅದಮ್ಯ ಶಕ್ತಿ ಇದೆ ಎಂದರೆ ಅದೆಷ್ಟೋ ರೋಗಗಳಿಗೆ, ಮಾನವನ ನೋವುಗಳಿಗೆ ಮುಲಾಮಾಗುತ್ತದೆ. ಇದನ್ನು ಅರಿತ ಸತ್ಯನಾರಾಯಣ ಅವರು ಅದನ್ನ ತಾವೊಬ್ಬರೇ ಅನುಭವಿಸುವುದು ಸ್ವಾರ್ಥವಾಗುತ್ತದೆ. ಇತರರಿಗೂ ಅದನ್ನು ಹಂಚಿ ಎನ್ನುತ್ತಾರೆ.

ಒಟ್ಟಿನಲ್ಲಿ ಭಾವಪ್ರಧಾನ ಹೈಕುಗಳನ್ನು ರಚಿಸುವ ಮೂಲಕ ಸೊಗಸಾದ ಕಾವ್ಯಾಯಾನ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವರು ಸಿಲಬೆಲ್ ಮುಕ್ತವಾಗಿ ಹೈಕುಗಳನ್ನ ರಚಿಸುತ್ತಿರುವುದನ್ನು ನಾವು ಕಾಣಬಹುದು. ಅದೇ ದಾರಿಯಲ್ಲಿ ಸಾಗಿದ ಸತ್ಯನಾರಾಯಣ ಅವರು ಕೂಡ ತಮ್ಮ ಹೈಕುಗಳಲ್ಲಿ 5 7 5 ರ ಫಾರ್ಮೆಟ್ ಗೆ ಅಂಟಿಕೊಳ್ಳದೆ ಮುಕ್ತವಾಗಿ ಹೈಕುಗಳನ್ನು ರಚಿಸಿದ್ದಾರೆ. ಆದರೆ ಪ್ರತಿ ಹೈಕುವು 17 ಸಿಲಬೆಲ್‌ ಗಳನ್ನು ಮೀರಿದಂತೆ ಎಚ್ಚರವಹಿಸಿ ಹೈಕುವಿನ ಅರ್ಥ. ಭಾವಕ್ಕೆ ಧಕ್ಕೆ ಯಾಗದಂತೆ ಅವುಗಳನ್ನು ಹೊಂದಿಸಿಕೊಂಡು ಹೈಕು ವಿನ್ಯಾಸವನ್ನು ರಚಿಸಿದ್ದಾರೆ. ಈ ಹೈಕು ಕ್ಷೇತ್ರ ಸತ್ಯನಾರಾಯಣ ಅವರನ್ನು ಮತ್ತಷ್ಟು ಆವರಿಕೊಳ್ಳಲಿ.

-ಅನುಸೂಯ ಯತೀಶ್

 

MORE FEATURES

'ಲೈಫ್‌ನ ಸಕ್ಸೆಸ್ ಮಂತ್ರ' ನಮ್ಮ ಬಳಿಯೇ ಇದೆ

30-04-2024 ಬೆಂಗಳೂರು

'ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ' ಎನ್ನುವ ಗಾದೆ ಮಾತು ಎಷ್ಟು ಸತ್ಯವೋ ಅದೇ ರೀತಿ ಬದುಕಿನಲ್ಲಿ ಯಶಸ್ಸ ...

ಅಪರಿಚಿತ ದೇವಾಲಯಗಳ ಬಗ್ಗೆ ಅಪೂರ್ವ ಮಾಹಿತಿ

30-04-2024 ಬೆಂಗಳೂರು

‘ಇದು ಪುರಾತನ ದೇವಾಲಯಗಳ ಅಸಂಖ್ಯ ಸಾಗರದ ನಡುವಿನ ಚಿಕ್ಕ ಬಿಂದು ಮಾತ್ರ. ಜನಮಾನಸದಿಂದ ದೂರವಾದ ದೇವಾಲಯಗಳನ್ನು ಜನರ...

ಹವ್ಯಕ ಸಮಾಜದ ಸಮಾಜೊ-ಸಾಂಸ್ಕೃತಿಕ ಪಠ್ಯವಾಗಿ ಮಹತ್ವ ಪಡೆದಿರುವ ಕೃತಿ 'ಬಯಲ ಬೆಟ್ಟ'

30-04-2024 ಬೆಂಗಳೂರು

‘ಕನಸುಗಳನ್ನು ಕಂಡರಷ್ಟೆ ಸಾಲದು; ಅವುಗಳನ್ನು ನನಸುಗಳನ್ನಾಗಿ ಮಾಡಿಕೊಳ್ಳುವ ಛಲ, ಹಠ, ಮತ್ತು ನಿರಂತರ ಪರಿಶ್ರಮ , ...