ನಾಟಕೀಯ ಅಂಶಗಳಿರುವ ಕಾವ್ಯಾತ್ಮಕ ಕತೆಗಳು


ಯಶಸ್ಸು ಕೇವಲ ಕತೆ ಹಾಗೂ ಲೇಖಕನ ಬರವಣಿಗೆಯಿಂದ ಮಾತ್ರ ಸಿದ್ಧವಾಗುವುದಿಲ್ಲ. ಓದುಗನ ಮನದಲ್ಲಿ ಬಿತ್ತುವ ಭಾವನೆ ಹಾಗೂ ಅಲ್ಲಿ ಅವು ಬೆಳೆಯುವ ರೀತಿಯನ್ನೂ ಗಮನಿಸಬೇಕು. ಈ ಸಂಕಲನದ ಕತೆಗಳು ನನಗೆ ಓದಿನ ಮುದ ನೀಡಿವೆ. ಹಾಗೆ ನೋಡಿದರೆ ಇಲ್ಲಿನ ಎಲ್ಲ ಕತೆಗಳನ್ನು ಒಂದೇ ಬಾರಿಗೆ ಓದಿಲ್ಲ. ಸರಿಸುಮಾರು ಎರಡುವರೆ ದಶಕಗಳ ಅವಧಿಯಲ್ಲಿ ಬೇರೆ ಬೇರೆ ಕಾಲ-ಮನಸ್ಥಿತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಕತೆಗಳು ಈಗ ಮತ್ತೊಮ್ಮೆ ಎದುರಾದಾಗ ಹಿಂದೆ ಸಿಕ್ಕ ಅನುಭವಕ್ಕಿಂತ ಭಿನ್ನವಾದ ರೀತಿಯ ಓದನ್ನು ಒದಗಿಸಿಕೊಟ್ಟಿವೆ. ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಅಗಮ್ಯ ’ ಕೃತಿಗೆ ಸಾಹಿತಿ ದೇವು ಪತ್ತಾರ ಅವರು ಬರೆದ ಮುನ್ನುಡಿ ನಿಮ್ಮ ಓದಿಗಾಗಿ..

ಡಾ. ಸಿದ್ಧಲಿಂಗ ಪಟ್ಟಣಶೆಟ್ಟರು ಮೂಲತಃ ಕವಿಗಳು. ತಮ್ಮ ಕವಿತೆಗಳ ಕಟ್ಟುವಿಕೆಯ ಮೂಲಕ ಗಮನ ಸೆಳೆದಿರುವ ಅವರು ಅಷ್ಟೇ ಸೊಗಸಾದ ಅನುವಾದಗಳಿಂದ ಚಿರಪರಿಚಿತರು. ‘ನೀನಾ'ದಿಂದ ಆರಂಭವಾದ ಅವರ ಕಾವ್ಯಯಾನ ‘ಚಿಂತಾಮಣಿ'ಯ ವರೆಗೂ ಮುಂದುವರೆದಿದೆ. ವಿಪ್ರಲಂಭ ಭಾವದಿಂದ ಹೊರಟ ಕವಿಯ ಪಯಣವು ಅಲ್ಲಿಗೇ ಸೀಮಿತವಾಗಿಲ್ಲ ಎನ್ನುವುದಕ್ಕೆ ನಂತರದ ನೂರಾರು ಪದ್ಯಗಳು, ಪರದೇಸಿ ಹಾಡುಗಳು, ಔರಂಗಜೇಬ, ಮತ್ತೆ ಬಂದಿದ್ದಾಳೆ, ಇಂದು ರಾತ್ರಿಯ ಹಾಗೆ, ‘ಕುಲಾಯಿ ಇರಲಿ ನನ್ನಲ್ಲಿಯೇ' ಸಂಕಲನಗಳಲ್ಲಿನ ವಿಸ್ತಾರ ಭಾವಲೋಕವೇ ಸಾಕ್ಷಿ. ಕವಿತೆ ಕಟ್ಟುವ ಕಸುಬುದಾರಿಕೆಯ ಬಗೆಗಿನ ಅವರ ಪ್ರೀತಿ-ಕಾಳಜಿ ಪ್ರತಿ ಸಾಲಿನಲ್ಲಿಯೂ ಕಾಣಿಸುತ್ತದೆ. ಕನ್ನಡದ ನವ್ಯ ಕವಿತೆಗಳನ್ನು ವಿಭಿನ್ನ ರೀತಿಯಲ್ಲಿ ವಿಸ್ತರಿಸಿದ ಪಟ್ಟಣಶೆಟ್ಟರ ಕವಿತೆಗಳು ತಮ್ಮ ಭಾಷಿಕ ಲಯ ಹಾಗೂ ಭಾವಗೀತಾತ್ಮಕ ಗುಣಗಳಿಂದ ಗಮನ ಸೆಳೆಯುತ್ತವೆ. ಪದಗಳ ಜೊತೆಗಿನ ಒಡನಾಟ, ಆಟವು ಕವಿತೆಯು ಕೇವಲ ಚಮತ್ಕಾರಕ್ಕೆ ಸೀಮಿತವಾಗುವುದಿಲ್ಲ. ಬದಲಿಗೆ ಅನುಭವದ ಅನಾವರಣ ಹಾಗೂ ಭಾವಸೃಷ್ಟಿಯ ಜೊತೆಯಲ್ಲಿ ಕವಿತೆಯ ಅರ್ಥ ವಿಸ್ತರಣೆಗೂ ಅನುವು ಮಾಡಿಕೊಡುತ್ತದೆ. ಪಟ್ಟಣಶೆಟ್ಟರ ಕವಿತೆಗಳಲ್ಲಿನ ಕಾವ್ಯಾತ್ಮಕ ಗುಣ ಅವರ ಗದ್ಯದಲ್ಲಿಯೂ ಮುಂದುವರೆದಿದೆ. ಹಾಗೆಂದರೆ ಅವರ ಗದ್ಯ ಬರವಣಿಗೆಯು ಕವಿತೆಯ ಮುಂದುವರಿಕೆಯೇನಲ್ಲ. ಸರಾಗವಾಗಿ ಓದಿಸಿಕೊಂಡು ಹೋಗುವ ಗುಣ, ಹೇಳಬೇಕಾದದ್ದನ್ನು ಸರಳವಾಗಿ-ನೇರವಾಗಿ ದಾಖಲಿಸುವ ಕಾರಣಕ್ಕಾಗಿ ಅವರ ಗದ್ಯವು ಪದ್ಯಕ್ಕಿಂತ ಭಿನ್ನ ಹಾಗೂ ಅನನ್ಯ.

ಅವರು ಅನುವಾದಿಸಿದ ನಾಟಕಗಳು ಕೂಡ ‘ಕಾವ್ಯಾತ್ಮಕ ಭಾಷೆ'ಯಿಂದ ಗಮನ ಸೆಳೆಯುತ್ತವೆ. ಪಟ್ಟಣಶೆಟ್ಟರಿಗೆ ಖ್ಯಾತ ಹಿಂದಿ ನಾಟಕಕಾರ ಮೋಹನ್ ರಾಕೇಶ್ ಅತ್ಯಂತ ಪ್ರಿಯ ಲೇಖಕ. ಕವಿ ಕಾಳಿದಾಸನ ಪ್ರೀತಿ-ಪ್ರೇಮ ಬದುಕನ್ನು ಸೊಗಸಾಗಿ ಕಟ್ಟಿಕೊಡುವ ಮೋಹನ್ ರಾಕೇಶ್ ಅವರ 'ಆಷಾಢದ ಒಂದು ದಿನ' ಅನುವಾದ ಅಥವಾ ಭಾಷಾಂತರ ಮಾತ್ರವಾಗಿರದೆ ‘ಅನುಸೃಷ್ಟಿ'ಯಾಗಿದೆ. ವಸ್ತು ಮತ್ತು ಭಾಷೆಯ ಬಳಕೆಯಲ್ಲಿ ಅನುವಾದಕನ ಮೂಲನಿಷ್ಠೆಯು ಎಷ್ಟೂ ಬದಲಾಗಿಲ್ಲ. ಹಾಗೆಯೇ ಅದು ಪುನರ್‌ಸೃಷ್ಟಿಯೂ ಅಲ್ಲ. ಮೂಲ ಕೃತಿಯೊಂದಿಗಿನ ಸೃಜನಶೀಲ ಅನುಸ್ಪಂದನ ಅನುವಾದವನ್ನು ಸಿರಿವಂತಗೊಳಿಸುವುದರ ಜೊತೆಗೇ ತನ್ನ ಅಸ್ತಿತ್ವವನ್ನೂ ಉಳಿಸಿಕೊಳ್ಳುವುದು ವಿಶೇಷ. ಈ ಮಾತು ಸಿ.ಪ. ಅವರು ಅನುವಾದಿಸಿದ ಮೋಹನ್ ರಾಕೇಶ್ ಅವರ ನಾಟಕಗಳೂ ಸೇರಿದಂತೆ ಬಹುತೇಕ ಎಲ್ಲ ನಾಟಕಗಳಿಗೂ ಅನ್ವಯವಾಗುತ್ತದೆ. ಈ ಅನುವಾದಿತ ನಾಟಕಗಳಲ್ಲಿನ ಕಾವ್ಯಾತ್ಮಕ ಭಾಷೆ ಗಮನ ಸೆಳೆಯದೇ ಇರದು. ಹಾಗೆಯೇ ಅದು ಕೃತಕವೂ ಆಗದಂತೆ ವಹಿಸಿರುವ ಎಚ್ಚರ ಕೂಡ ಗಮನಕ್ಕೆ ಬರುತ್ತದೆ.

ಕತೆಗಳ ಬಗ್ಗೆ ಬರೆಯಲು ಹೊರಡುವ ಮುನ್ನ ಇಷ್ಟು ಹೇಳಲೇ ಬೇಕಿತ್ತು. ಹಾಗೆ ನೋಡಿದರೆ ಲೇಖಕರೊಬ್ಬರ ಬರವಣಿಗೆಯನ್ನು ಸಾಹಿತ್ಯ ಪ್ರಕಾರಗಳಿಗೆ ಸೀಮಿತಗೊಳಿಸಿ ನೋಡಬೇಕಿಲ್ಲ. ಬದುಕಿನ ಬಗೆಗಿನ-ಸತ್ಯದ ಕುರಿತಾದ ಲೇಖಕನ ನೋಟ-ನಿಲುವು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆ ಪ್ರಕಾರಕ್ಕೆ ಅನುಗುಣವಾಗಿ ದಾಖಲಾಗಿರುತ್ತದೆ.

ಪತ್ರಕರ್ತ-ಲೇಖಕ ಪಾ.ವೆಂ. ಆಚರ‍್ಯ ಅವರ ಒತ್ತಾಸೆಯಿಂದ ಕತೆ ಬರೆಯಲು ಆರಂಭಿಸಿದ ಪಟ್ಟಣಶೆಟ್ಟಿ ಅವರ ಕತೆ ಮೊದಲು ಪ್ರಕಟವಾದದ್ದು ‘ಕಸ್ತೂರಿ' ಮಾಸಪತ್ರಿಕೆಯಲ್ಲಿ, 1970ರಲ್ಲಿ. ಮೊದಲ ಕತೆ ‘ಮಾವ'. ಇತ್ತೀಚಿಗೆ ಬರೆದು-ಪ್ರಕಟವಾದ ಕತೆ ‘ಒಂದು ಹಳೆಯ ಕತೆ' (ಸುಧಾ, 2019). ಕಳೆದ ಸರಿಸುಮಾರು ಐದು ದಶಕಗಳ ಅವಧಿಯಲ್ಲಿ ಬರೆದು- ಪ್ರಕಟವಾದ ಹದಿನಾಲ್ಕು ಕತೆಗಳು ಈ ಸಂಕಲನದಲ್ಲಿವೆ. ಬಿಡಿಬಿಡಿಯಾಗಿ ವಿವಿಧ ನಿಯತ-ಅನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದ ಇಲ್ಲಿನ ಕತೆಗಳು ‘ಮಾವ ಮತ್ತು ಇತರ ಕತೆಗಳು' ಹಾಗೂ ‘ಹಕ್ಕಿಗಳು' ಎಂಬ ಎರಡು ಸಂಕಲನಗಳಲ್ಲಿಯೂ ಪ್ರಕಟಗೊಂಡಿದ್ದವು. ಈ ಎರಡೂ ಸಂಕಲನದಲ್ಲಿ ಸೇರದ ಒಂದು ಕತೆಯೂ ಈ ಸಂಕಲನದಲ್ಲಿ ಸೇರಿದೆ. ಹಾಗೆಯೇ ಪಟ್ಟಣಶೆಟ್ಟರು ಅನ್ಯಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ 'ಚಿತ್ರಲೇಖಾ' ಸಂಕಲನದ ಕತೆಗಳನ್ನು ಇಲ್ಲಿ ಸೇರಿಸಿಲ್ಲ. ಸಂಖ್ಯೆಯ ದೃಷ್ಟಿಯಿಂದ ನೋಡಿದರೆ ಹುಲುಸಾದ ಬೆಳೆಯೇನಲ್ಲ. ಆದರೆ, ಸಂಖ್ಯೆಯೊAದೇ ಮಾನದಂಡವೂ ಅಲ್ಲ. ಆಗಬಾರದು ಕೂಡ. ಈ ಹದಿನಾಲ್ಕು ಕತೆಗಳು ವಿಭಿನ್ನ ಹಾಗೂ ವಿಶಿಷ್ಟ ಕತೆಗಳ ಓದಿನ ಖುಷಿ ನೀಡುತ್ತವೆ. ಕತೆ ಕಟ್ಟುವ- ಹೇಳುವ ಕ್ರಮ ಪ್ರಿಯವಾಗುವ ಹಾಗಿದೆ. ಹೀಗಾಗಿ ಇವುಗಳನ್ನು ಭಾರ ಹೇರದ ‘ಓದುಗಪ್ರಿಯ' ಕತೆಗಳೆನ್ನಬಹುದು. ಈ ಕತೆಗಳ ಲೋಕ ಒಂದಕ್ಕಿಂತ ಮತ್ತೊಂದು ಭಿನ್ನ. ಅಗಾಧ. ಅದಕ್ಕೆ ಅವರು ಬೇರೆ ಬೇರೆ ಕಾಲ ಘಟ್ಟದಲ್ಲಿ ರಚನೆಯಾದ ಕತೆಗಳು ಎನ್ನುವುದು ಮಾತ್ರ ಕಾರಣವಲ್ಲ. ಕತೆ ಹೇಳುವುದಕ್ಕೆ ಆರಿಸಿಕೊಂಡ ವಸ್ತು ಮತ್ತು ಅದನ್ನು ಕಟ್ಟುವ ಕ್ರಮ ಈ ವೈವಿಧ್ಯಕ್ಕೆ ಅನುವು ಮಾಡಿಕೊಟ್ಟಿವೆ. ಕವಿತೆಯ ಆರ್ದ್ರತೆ- ಭಾವುಕತೆಗಳು ಈ ಕತೆಗಳ ಸಾರ-ಸತ್ವವನ್ನ ಹೆಚ್ಚಿಸಿವೆ. ಗ್ರಾಮೀಣ ಪ್ರದೇಶದ ಕಳೆದುಹೋದ ಅಥವಾ ಈಗ ಇಲ್ಲವಾದ ಬದುಕನ್ನು ಕಟ್ಟಿಕೊಡುವ ಕತೆಗಳಿರುವ ಹಾಗೆಯೇ ನಗರ ಅನ್ನುವುದಕ್ಕಿಂತ ಹೆಚ್ಚಾಗಿ ಪಟ್ಟಣದ-ಆಧುನಿಕ ಬದುಕಿನ ಕತೆಗಳು ಇರುವುದು ವಿಶೇಷ. ಅಂದರೆ, ಇಲ್ಲಿನ ಕತೆಗಳು ಕೇವಲ ನಿನ್ನಿನ ಹಳಹಳಕೆಗಳು ಮಾತ್ರವಲ್ಲ. ಭೂತ-ಗತವನ್ನು ಕಟ್ಟಿಕೊಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಓದುಗನ ಭಾವಕೋಶ ಮಿಡಿಯುವಂತೆ ಮಾಡುವ ಸಂಗತಿಗಳನ್ನು ತಮ್ಮ ಒಡಲಿನಲ್ಲಿ ಇಟ್ಟುಕೊಂಡಿವೆ. ಈಗಾಗಲೇ ಪ್ರಸ್ತಾಪಿಸಿದಂತೆ ಹಾಗೂ ಸಹಜವಾಗಿಯೇ ಇಲ್ಲಿನ ಎಲ್ಲ ಕತೆಗಳೂ ಒಂದೇ ರೀತಿಯಲ್ಲಿಲ್ಲ. ಹಾಗೆಯೇ ಅವುಗಳು ‘ಕತೆ'ಯಾಗುವ -ಆದ ರೀತಿಯಲ್ಲಿ ಎಲ್ಲವೂ ‘ಯಶಸ್ವಿ'ಯೇನಲ್ಲ. ಹಾಗೆ ನೋಡಿದರೆ ಅವು ಯಶಸ್ಸಿನ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿರದ, ಹೇಳುವ ಸುಖಕ್ಕಾಗಿ ರೂಪುಗೊಂಡವುಗಳು.

ಯಶಸ್ಸು ಕೇವಲ ಕತೆ ಹಾಗೂ ಲೇಖಕನ ಬರವಣಿಗೆಯಿಂದ ಮಾತ್ರ ಸಿದ್ಧವಾಗುವುದಿಲ್ಲ. ಓದುಗನ ಮನದಲ್ಲಿ ಬಿತ್ತುವ ಭಾವನೆ ಹಾಗೂ ಅಲ್ಲಿ ಅವು ಬೆಳೆಯುವ ರೀತಿಯನ್ನೂ ಗಮನಿಸಬೇಕು. ಈ ಸಂಕಲನದ ಕತೆಗಳು ನನಗೆ ಓದಿನ ಮುದ ನೀಡಿವೆ. ಹಾಗೆ ನೋಡಿದರೆ ಇಲ್ಲಿನ ಎಲ್ಲ ಕತೆಗಳನ್ನು ಒಂದೇ ಬಾರಿಗೆ ಓದಿಲ್ಲ. ಸರಿಸುಮಾರು ಎರಡುವರೆ ದಶಕಗಳ ಅವಧಿಯಲ್ಲಿ ಬೇರೆ ಬೇರೆ ಕಾಲ-ಮನಸ್ಥಿತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಕತೆಗಳು ಈಗ ಮತ್ತೊಮ್ಮೆ ಎದುರಾದಾಗ ಹಿಂದೆ ಸಿಕ್ಕ ಅನುಭವಕ್ಕಿಂತ ಭಿನ್ನವಾದ ರೀತಿಯ ಓದನ್ನು ಒದಗಿಸಿಕೊಟ್ಟಿವೆ.

ಈ ಕತೆಗಳ ಪೈಕಿ ಇತ್ತೀಚಿನದಾದ ಮತ್ತು ಮೇಲ್ನೋಟಕ್ಕೆ ‘ಸಾಧಾರಣ' ಎನ್ನಿಸುವ ‘ಒಂದು ಹಳೆಯ ಕತೆ'ಯು ಹಳೆಯದೂ ಅಲ್ಲ, ಸಾಧಾರಣ ಕೂಡ. ಕುತೂಹಲ ಉಳಿಸಿಕೊಂಡು ಹೋಗುವ ಕತೆ ಹೇಳುವ ‘ತಂತ್ರ' ಗಣನೀಯವಾದರೂ ಅದಕ್ಕಿಂತ ಹೆಚ್ಚಾಗಿ ಕತೆ ಓದುಗನಲ್ಲಿ ಬೆಳೆಯುವ-ವಿಸ್ತರಿಸುವ ರೀತಿ ಗಮನ ಸೆಳೆಯದೇ ಇರದು. ಕತೆಯಲ್ಲಿ ಹೇಳಿದ್ದಕ್ಕಿಂತ ಹೇಳದೇ ಇರುವ ಅಂಶವೂ ಸೇರಿರುವುದು ಆಕಸ್ಮಿಕ ಅಲ್ಲ. ಕತೆ ಓದುಗನ ಕಲ್ಪನೆಯ ಮೂಸೆಯಲ್ಲಿ ವಿಸ್ತಾರಗೊಳ್ಳುತ್ತ ಕಟ್ಟಿಕೊಳ್ಳಲಿ ಎಂಬ ನಿರ್ದಿಷ್ಟ ಮತ್ತು ಖಚಿತ ಉದ್ದೇಶ ಕತೆಗಾರರಿಗಿದೆ. ಹಾಗೆಯೇ ಅದು ಕೃತಕವೂ ಆಗದ ಎಚ್ಚರ ಕೂಡ. ಕತೆಯನ್ನು ಅನುಭವಿಸಲು ಕೇವಲ ಕತೆಯೊಳಗಿನ ವಿವರಗಳು ಮಾತ್ರ ಸಾಕಾಗುವುದಿಲ್ಲ. ಪ್ರತಿಯೊಬ್ಬ ಓದುಗ ಪಾತ್ರವೂ ಆಗದೇ ತನಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳುವ ಸಾಧ್ಯತೆಯನ್ನು ತೆರೆದಿಟ್ಟಿದೆ.

ಕತೆಯ ಕೊನೆಯ ಘಟ್ಟದಲ್ಲಿ ಬರುವ ಈ ಪ್ಯಾರಾ ಗಮನಿಸಿ..
ತಲೆ ತುಂಬ ಅರಿವಿಗೆ ನಿಲುಕದ ಗತಿ, ಮನದಲ್ಲಿ ಮುಗ್ಧ ಮತಿ, ಬೆಳದಿಂಗಳಲ್ಲಿ ನೆಲ ನಭದ ತುಂಬ ಆವರಿಸಿದ ರತಿ! ಅವಳದು ಕಮಲ ಕ್ರಮಣ, ನನ್ನದು ಭೂತ ಗ್ರಹಣ. ಮೌನವಾಗಿ ಅನುಸರಿಸತೊಡಗಿದೆ.

ಇಡೀ ಕತೆಯು ಇದೇ ರೀತಿಯ ಭಾಷೆಯಲ್ಲಿದೆ ಎಂದು ಭಾವಿಸಬೇಕಿಲ್ಲ. ಇಂತಹ ಕಾವ್ಯಾತ್ಮಕ ರಸಘಟ್ಟಿಯು ನಿರ್ದಿಷ್ಟ ಸಂದರ್ಭಕ್ಕಾಗಿ ಕಾಪಿಟ್ಟುಕೊಂಡಂತಿದೆ. ಇದು ಕ್ಲೈಮ್ಯಾಕ್ಸ್ ಕಡೆಗೆ ಓದುಗನನ್ನು ಕರೆದೊಯ್ಯುವ ಕ್ರಮ. ಇದಕ್ಕಿಂತ ಮುಂಚೆ ಒಂದು ಎರಡಾಗುವ, ಎರಡು ಒಂದಾಗುವ ಸೂಚನೆಯನ್ನು ಕತೆಗಾರ ಕೊಟ್ಟಿರುತ್ತಾರೆ. ಓಪನ್ ಎಂಡ್ ಎನ್ನಿಸುವ ಹಾಗೆ ಕತೆಯನ್ನು ಮುಗಿಸುತ್ತಾರೆ. ಮತ್ತೆ ಕತೆಯ ಮೊದಲಿಗೆ ಮರಳುವಂತೆ ಮಾಡುತ್ತಾರೆ. ‘ನಿಜ'ವಾದ ಕತೆ ಏನು? ಹೇಗೆ? ಎಂಬುದು ಅವರವರ ಭಾವಕ್ಕೆ ಎಂದನ್ನಿಸಿದರೂ ಕತೆಯೊಳಗಿನ ಸೂಚನೆಗಳು ಹಾಗೆ ‘ದೂರ' ಹೋಗಲು ಬಿಡುವುದಿಲ್ಲ.

ತನ್ನ ಒಡಲಲ್ಲಿ ಹಲವು ಕತೆಗಳನ್ನು ಇಟ್ಟುಕೊಂಡಿರುವ ಕತೆ ‘ಹೆಣಗಳು ಸಾಯುವುದಿಲ್ಲ' ನೀಳ್ಗತೆ-ಕಾದಂಬರಿಯೂ ಆಗಬಹುದಿತ್ತು. ಆದರೆ, ಅದು ಪ್ರಬಂಧದ ಧಾಟಿಯಿಂದ ಬಿಡುಗಡೆ ಪಡೆಯುವುದೇ ಇಲ್ಲ. ಹೆಣಗಳ- ಸಾವಿನ ಸ್ವರೂಪದ ವೈವಿಧ್ಯವನ್ನು ಚಿತ್ರಿಸುವ ಕತೆಗಳು ಹಲವು ನೆಲೆಗಳಲ್ಲಿ ಬಿಚ್ಚಿಕೊಳ್ಳುತ್ತವೆ.

ಹುಕ್ಕೇರಿ ರಾಮರಾಯರ ದೇಶಸೇವೆಯೂ ಅವರು ಹೆಣವಾಗಿ ಹೋದ ಮೇಲೆ ಮಣ್ಣ ಪಾಲಾಗಬಹುದೆಂದು ಅವರ ಜೀವನ ಕಾಲದಲ್ಲಿ ಅನಿಸಿಯೇ ಇರಲಿಲ್ಲ. ಮೃತ್ಯುಂಜಯಪ್ಪನವರು ತಾವು ಹೆಣವಾದಾಗ ಹುಗಿಯುವ ಗದ್ದುಗೆಯನ್ನೂ ಮೊದಲೇ ಮಾಡಿಸಿಕೊಂಡಿದ್ದ ಮಹಿಮರು. ನೆಲದ ನಿಷ್ಠ ನಾಯಕರಾಗಿ ಹಲವರಿಗೆ ಗತಿಯಾಗಿ, ಪ್ರಶ್ನೆಗುತ್ತರವಾಗಿ, ಸಮಸ್ಯೆಗಳ ನಿಂತ ನೀರಿಗೆ ಪರಿಹಾರಗಳ ಕಾಲುವೆಯಾಗಿ, ಹೆಣವಾದ ನಂತರವೂ ತೆಂಗಿನ ಬನವಾಗಿ ಅರಿವಿನ ನೆರಳಾಗಿ ನೆಲೆ ನಿಂತವರು.

ಲಲಿತ ಪ್ರಬಂಧದ ಧಾಟಿಯ ಈ ಕತೆಯೊಂದನ್ನು ಹೊರತು ಪಡಿಸಿದರೆ ಈ ಸಂಕಲನದ ೧೩ ಕತೆಗಳು ತಮ್ಮ ವಿಶಿಷ್ಟ ಕಥನ ಕಲೆ-ಶೈಲಿ, ಬದುಕನ್ನು ನೋಡುವ-ದಾಖಲಿಸುವ ಕ್ರಮ, ನಾಟಕೀಯ ನಿರೂಪಣೆ ಹಾಗೂ ಕಾವ್ಯಾತ್ಮಕ ಭಾಷೆಯಿಂದ ಗಮನ ಸೆಳೆಯುತ್ತವೆ.

ಆತ್ಮಕಥನಾತ್ಮಕ ಮಾದರಿಯಲ್ಲಿರುವ ‘ನನ್ನ ಗಂಡನಿಗೆ ವಿಷ ಹಾಕಿದೆ' ಕತೆಯು ತನ್ನ ಭಾವತೀವ್ರತೆ ಹಾಗೂ ಅದನ್ನು ದಾಖಲಿಸುವ ಕಾರಣಕ್ಕಾಗಿ ಪ್ರಿಯವಾಗುತ್ತದೆ. ‘ನೈಜ' ಎನ್ನಿಸುವ ಹಾಗೆ ಕತೆಯೊಂದನ್ನ ಹೀಗೂ ಕಟ್ಟಬಹುದು ಎಂಬುದನ್ನು ಈ ಕತೆ ತೋರಿಸುತ್ತದೆ. ಕತೆಯ ಪ್ರಧಾನ ಪಾತ್ರ/ನಾಯಕಿ/ನಿರೂಪಕಿಯು ಹಾಕಿದ ವಿಷ ಕೇವಲ ಗಂಡನಿಗೆ ಮಾತ್ರ ಅಲ್ಲ.

ನನ್ನ ಗಂಡ ತನ್ನ ಸಹಜ ಉಸಿರಿನ ವಿಷದಿಂದ ಸತ್ತ. ನನ್ನ ಮನಸ್ಸಿನ ಗಂಡ ನನ್ನ ವಿಷದಿಂದ ಸತ್ತು. ಸತ್ತವರ ಸಮಾಧಿ ನಾನು. ಉಸಿರಿನ ವಿಷದಿಂದ ಬದುಕುತ್ತಿರುವ ನಿತ್ಯ ಪ್ರೇತ ನಾನು. ನಾನು ಯಾವುದಕ್ಕೂ ದುಃಖ ಪಟ್ಟಿಲ್ಲ. ಈ ಬದುಕಿನ ಪ್ರತಿಯೊಂದಕ್ಕೂ ನಾನು ಋಣಿಯಾಗಿದ್ದೇನೆ ಎನ್ನುತ್ತಾಳೆ ಮಾತ್ರವಲ್ಲ. ಸ್ವತಃ ತಾನೇ ವಿಷವಾಗಿದ್ದಾಳೆ.

‘ಮದುವೆ ಮರಣ' ಕತೆಯು ಕೂಡ ಅನುಭವ + ಅದನ್ನ ಕತೆಯಾಗಿಸುವ ಕ್ರಮ ಓದುಗನಿಗೆ ಒಂದು ಬಗೆಯ ಆಪ್ತತೆಯನ್ನು ಒದಗಿಸುತ್ತದೆ. ಸಂಭ್ರಮ - ಸಂಕಟಗಳನ್ನು ಮುಖಾಮುಖಿಯಾಗಿಸಿ ಅಜ್ಜನ ನೆಪದಲ್ಲಿ ಬದುಕನ್ನು ವಿಭಿನ್ನ ರೀತಿಯಲ್ಲಿ ದಾಖಲಿಸುವ ಕ್ರಮ ಈ ಕತೆಯಲ್ಲಿದೆ. ಬಾಲ್ಯದ ದಿನಗಳಲ್ಲಿ ಕಂಡ ಬದುಕು ಬೆಳೆದು ನಿಂತಾಗ ಕಾಣಿಸುವ ರೀತಿಯನ್ನು ಕತೆಯು ವಿವರಿಸುತ್ತದೆ. ಸಂಕಲನದ ಪ್ರಮುಖ ಕತೆಗಳಲ್ಲಿ ಒಂದಾಗಿರುವ ‘ಮಾವ' ಕತೆಯು ನಿರೂಪಣೆಯ ದಟ್ಟತೆ ಹಾಗೂ ಗ್ರಾಮೀಣ ಬದುಕಿನ ವಿವರಗಳನ್ನು ಕಟ್ಟಿಕೊಡುವ ಕಾರಣಕ್ಕಾಗಿ ಪ್ರಿಯವಾಗುತ್ತದೆ. ಇಷ್ಟು ಮಾತ್ರವಲ್ಲದೆ ಸಣ್ಣಕತೆಗಳಲ್ಲಿ ಸಹಜವಾಗಿದ್ದ ಕುತೂಹಲ ಹುಟ್ಟಿಸಿ, ಬೆಳೆಯುತ್ತ ಹೋಗುವ ಕತೆಯು ಅಚ್ಚರಿಯೊಂದಿಗೆ ಅಂತ್ಯ ಕಾಣಿಸುವ ಕ್ರಮ ಈ ಕತೆಯ ವಿಶೇಷ. ಈ ಕತೆಯೂ ಸೇರಿದಂತೆ ಈ ಸಂಕಲನದ ಬಹುತೇಕ ಕತೆಗಳು ಕಂಡು-ಕೇಳಿದ ಅನುಭವಗಳು ಕತೆಯಾಗಿ, ಅಲ್ಲಿನ ಪಾತ್ರಗಳಾಗಿ ಎದುರು ಕೂತು ಬರೆಸಿಕೊಂಡ ಹಾಗಿವೆ.

‘ಅಗಮ್ಯ’ ಸಂಕಲನದಲ್ಲಿ ಇರುವ ಒಟ್ಟು ಕತೆಗಳನ್ನು ಸ್ಥೂಲವಾಗಿ ಎರಡು ಬಗೆಯಲ್ಲಿ ವಿಂಗಡಿಸಬಹುದು. ಗ್ರಾಮೀಣ ಬದುಕು, ಬಾಲ್ಯದ ಬೆರಗು, ಹರಯದ ಕುತೂಹಲ, ಪ್ರೀತಿ-ಪ್ರೇಮ-ಪ್ರಣಯಗಳನ್ನು ಒಳಗೊಂಡ ವಸ್ತುವನ್ನು ಒಳಗೊಂಡ ಕತೆಗಳು. ಈ ಕತೆಗಳಲ್ಲಿ ಕತೆಗಾರ/ನಿರೂಪಕರ ‘ನೆನಪು-ಅನುಭವ' ಅಕ್ಷರಕ್ಕಿಳಿದು ಬರುತ್ತದೆ. ಹಾಗೆ ನೋಡಿದರೆ ಅವುಗಳನ್ನು ಕೇವಲ ಗ್ರಾಮೀಣ ಬದುಕಿನ ಕತೆಗಳು ಎಂಬ ಷರಾ ಬರೆದು ಬಿಡುವ ಹಾಗೇನಿಲ್ಲ. ಮಧ್ಯವಯಸ್ಕ ನಿರೂಪಕ ತನ್ನ ಆಧುನಿಕ/ಪಟ್ಟಣದ ಅನುಭವದ ಅರಿವಿನೊಂದಿಗೆ ಗತದ ನೆನಪುಗಳ ಆರ್ದ್ರತೆಗಳತ್ತ ಚಲಿಸುತ್ತಾನೆ. ಈ ಹಿಂಚಲನೆಯು ಕೇವಲ ಹಳಹಳಿಕೆ ಮಾತ್ರವಾಗಿಲ್ಲ. ಬದಲಿಗೆ ಬಾಲ್ಯದ ಬೆರಗು-ಹರೆಯದ ಕುತೂಹಲಗಳೆರಡೂ ಕಥನದಲ್ಲಿ ಹದವಾಗಿ ಬೆರೆಯುತ್ತವೆ. ತನ್ನ ಸಂಬAಧಿಗಳ ಸುತ್ತ ಹೆಣೆದಿರುವ ಪ್ರಥಮ ಪುರುಷ ನಿರೂಪಕ ಕತೆಗಳು ಬದುಕಿನ ನೈಜ ಘಟನೆಗಳನ್ನು ಕತೆಯ ನಿರೂಪಣೆಗೆ ಒಗ್ಗಿಸಿದಂತಿವೆ. ಹಾಗಂತ ಅವು ವರದಿಗಳಾಗಿ ಬಿಡುವ ಅಪಾಯದಿಂದ ಪಾರಾಗಿದ್ದು ಲೇಖಕರಿಗೆ ಭಾಷೆಯ ಮೇಲಿನ ಹಿಡಿತ ಮತ್ತು ಕತೆಯಾಗಿಸುವ ಕೌಶಲ್ಯದಿಂದಾಗಿ. ಕತೆಯನ್ನು ಓದುವಾಗ ಕವಿತೆ ಓದುತ್ತಿರುವಂತೆ ಭಾಸವನ್ನುಂಟು ಮಾಡುತ್ತವೆ. ಗದ್ಯ-ಪದ್ಯಗಳೆಂಬ ವಿಂಗಡಣೆಯನ್ನೂ ಮೀರಿ ವಿಸ್ತರಿಸುವ ಭಾಷೆಯು ಕತೆಯ ಸೊಬಗು ಹೆಚ್ಚಿಸಲು ಕಾರಣವಾಗುತ್ತದೆ. ಓದುಗನ ಓದುವ ಖುಷಿ-ಪ್ರೀತಿಯನ್ನು ಹೆಚ್ಚಿಸುವ ಕಾವ್ಯಾತ್ಮಕ ಟಚ್ ಇರುವ ಸಾಲುಗಳಿವೆ. ಒಂದು ಸಂಗತಿಯನ್ನು ಹೀಗೆ ಹಲವು ಅರ್ಥಗಳಲ್ಲಿ ಗ್ರಹಿಸಬಹುದಲ್ಲ ಎಂದು ಅಚ್ಚರಿ ಮೂಡಿಸುತ್ತವೆ. ಈ ತಂತ್ರವು ಪಟ್ಟಣಶೆಟ್ಟರ ಬಹುತೇಕ ಎಲ್ಲ ಕತೆಗಳಲ್ಲಿ ಎದ್ದು ಕಾಣುತ್ತವೆ. ಅದು ಅವರ ಶೈಲಿ ಎಂದು ಛಾಪು ಮೂಡಿಸುತ್ತವೆ.

ಪಟ್ಟಣದ ಎಂದು ಹೇಳಬಹುದಾದ ಅಥವಾ ಮಧ್ಯ ವಯಸ್ಕ ನಿರೂಪಕನಿರುವ ಕತೆಗಳ ಸ್ವರೂಪ ಮತ್ತೊಂದು ಬಗೆಯ ಓದನ್ನು ಒದಗಿಸುತ್ತವೆ. ಗಂಡು-ಹೆಣ್ಣಿನ ಸಂಬAಧ, ಅದರ ಸಂಕೀರ್ಣ ಸ್ವರೂಪ, ಪಡೆದುಕೊಳ್ಳುವ ತಿರುವುಗಳು, ಭಾವನಾತ್ಮಕ ಪ್ರತಿಕ್ರಿಯೆಗಳು ಬದುಕನ್ನು ಗ್ರಹಿಸುವ-ಗ್ರಹಿಸಿದ ವಿವಿಧ ಮಾದರಿಗಳನ್ನು ಕಟ್ಟಿಕೊಡುತ್ತವೆ. ಪ್ರೇಮ-ಕಾಮಕ್ಕೆ ಮಾತ್ರ ಸೀಮಿತವಾಗದೆ ಅಂದರೆ ಅವುಗಳ ಜೊತೆಯಲ್ಲಿಯೇ ‘ಸಂಬAಧ'ದ ಸ್ವರೂಪದ ಶೋಧ ಹುಡುಕುತ್ತವೆ.

ಓದುವಾಗ ಕತೆಗಳು ನಮ್ಮ ಕೈ ಹಿಡಿದು ನಡೆಸುತ್ತವೆ. ಘಟನೆಯ ವಿವರಗಳು ಅಗತ್ಯಕ್ಕಿಂತ ಹೆಚ್ಚೂ ಇಲ್ಲ. ಹಾಗೆಯೇ ಕೊರತೆಯೂ ಆಗಿಲ್ಲ. ಈ ಕತೆಗಳಲ್ಲಿ ಪಟ್ಟಣಶೆಟ್ಟರು ನಡೆಸಿದ ಪ್ರಯೋಗ, ಬಳಸಿದ ಭಾಷೆ- ತಂತ್ರಗಳು ಕಸುಬುದಾರ ಕವಿಯೊಬ್ಬ ತನ್ನ ಪ್ರಕಾರ ನಿಷ್ಠೆಯನ್ನು ಮೀರುವುದಕ್ಕಾಗಿ ನಡೆಸಿದ ಹಠದಂತೆ ಕಾಣಿಸುವುದಿಲ್ಲ. ಬದಲಿಗೆ ಸೊಗಸಾದ ಭಾಷೆ ಗೊತ್ತಿರುವ ಹಾಗೂ ತನ್ನ ಜೀವನಾನುಭವವನ್ನು ಅಕ್ಷರಕ್ಕೆ ಇಳಿಸುವ ಕ್ಷಮತೆ ಹೊಂದಿರುವ ಬರಹಗಾರ ಗದ್ಯ-ಪದ್ಯದ ಹಂಗಿಲ್ಲದೇ ದಾಖಲಿಸಿದ ಹಾಗಿವೆ.

ಮೈಸೂರಿನಲ್ಲಿ ಆರಂಭವಾಗುವ ‘ಉಲ್ಕಾಪಾತ'ದಲ್ಲಿನ ಪಯಣವು ಊಟಿಯ ಕಡೆಗೆ ಸಾಗುತ್ತದೆ. ದಾರಿಯುದ್ದಕ್ಕೂ ಕಾಣಸಿಗುವ ಸಂಗತಿಗಳನ್ನು ಕತೆಯ ಭಾಗವಾಗಿಸುವ ಚಿತ್ರಕಗುಣ ಪ್ರಿಯವಾಗದೇ ಇರದು. ಕುತೂಹಲ-ಆಸಕ್ತಿಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಬೆಳೆಯುತ್ತ ಹೋಗುವ ಗಾತ್ರದಲ್ಲಿ ಬಹುತೇಕ ನೀಳ್ಗತೆಯಷ್ಟಿರುವ ಈ ಕತೆಯು ಕಾದಂಬರಿಯ ವ್ಯಾಪಕತೆಯನ್ನು ಹೊಂದಿದೆ. ಸಂಬಂಧದ ಹುಡುಕಾಟ ಅದರ ಸಂಕೀರ್ಣತೆಯ ಆಯಾಮಗಳು ತೆರಕೊಳ್ಳುತ್ತ ಹೋಗುತ್ತವೆ. ಅಂತ್ಯ ತಲುಪಿದ್ದರೂ ಓದುಗನಿಗೆ ಗಮ್ಯ ನೆಲೆ ಸಿಗುವುದಿಲ್ಲ. ಎಲ್ಲವೂ ಅರ್ಥವಾಗಿದ್ದರೂ ಅರ್ಥೈಸಿಕೊಳ್ಳಲು ಹಿಂದೇಟು ಹಾಕುತ್ತದೆ. ಸರಳ ಪ್ರೇಮಕತೆಯನ್ನು ವಿಸ್ತರಿಸುತ್ತ, ಬೆಳೆಯುತ್ತ ಹೋಗುವ ಕತೆಯು ನಂತರ ಕ್ರೈಮ್- ಕುತೂಹಲದ ಸ್ವರೂಪ ಪಡೆಯುತ್ತದೆ.

ಈ ಸಂಕಲನದ ಮತ್ತೊಬ್ಬ ಉತ್ತಮ ಕತೆ ‘ಅಗಮ್ಯ'. ಸಿನಿಮೀಯ ವಿವರಗಳು, ನಾಟಕೀಯ ಬೆಳವಣಿಗೆಗಳು ಈ ಕತೆಯಲ್ಲಿವೆ. ಅವು ಕೇವಲ ತಂತ್ರ ಮಾತ್ರ ಆಗಿರದೇ ಇರುವುದು ವಿಶೇಷ. ಅನಿವಾರ್ಯ ಕಾರಣ-ಸಂದರ್ಭದಲ್ಲಿ ಊರು ಬಿಟ್ಟು ಹೋದ ‘ನಾಯಕ' ಹಲಕಾಲದ ನಂತರ ಮರಳುತ್ತಾನೆ. ಈ ಮರಳುವಿಕೆಗೆ ಗತದ ಹುಡುಕಾಟದ ಬಯಕೆಯೇನಿಲ್ಲ. ಬದಲಿಗೆ ಗತ-ವರ್ತಮಾನಗಳೆರಡೂ ಮುಖಾಮುಖಿಯಾಗುವ ಸ್ವರೂಪ ಮಾತ್ರ ಸೊಗಸಾಗಿದೆ.

‘ಹಕ್ಕಿಗಳು' ಕತೆಯು ತನ್ನ ವಿವರ ಹಾಗೂ ಅನನ್ಯ ಪಾತ್ರ ಚಿತ್ರಣದ ಮೂಲಕ ಗಮನ ಸೆಳೆಯುತ್ತದೆ. ನಿರೂಪಕ/ಕತೆಗಾರನಿಗೆ ಇರುವ ಸಂಬAಧದ ಸಂಕೀರ್ಣ ಸ್ವರೂಪದ ಬಗೆಗಿನ ಆಸಕ್ತಿ-ಕಾಳಜಿಗಳು ಘಟನೆ-ವಿವರ-ಪಾತ್ರಗಳನ್ನು ಕತೆಯಾಗಿಸುತ್ತವೆ. ಈ ಎಲ್ಲ ಕತೆಗಳ ಚಲನೆ ಬದುಕನ್ನ ಅರ್ಥ ಮಾಡಿಕೊಳ್ಳುವ ಹಾಗೂ ಓದುಗನಿಗೆ ಬದುಕಿನ ವಿವಿಧ ನೆಲೆಗಳನ್ನು ಒದಗಿಸುತ್ತವೆ. ‘ಅಗಮ್ಯ’ದ ಕತೆಗಳನ್ನು ಓದಿದಾದ ಕನ್ನಡದ ಅತ್ಯುತ್ತಮ ಕತೆಗಳಲ್ಲಿ ಸಾಲಿನಲ್ಲಿ ನಿಲ್ಲಬಹುದಾದ ಕತೆಗಳಿವು ಎನ್ನಿಸದೇ ಇರದು. ಹಾಗೆಯೇ ಅವು ತನ್ನದಲ್ಲದ ತಪ್ಪಿಗಾಗಿ ಅಥವಾ ವಿನಾಕಾರಣ ಶಾಪಗ್ರಸ್ಥವಾಗಿರುವುದು ಕೂಡ ಸೋಜಿಗದ ಸಂಗತಿ. ಸಾಹಿತ್ಯದ ಓದು ಪಠ್ಯ ಕೇಂದ್ರಿತವಾಗದೇ ವ್ಯಕ್ತಿ ಕೇಂದ್ರಿತ ಅಥವಾ ಬರೆಹಗಾರ/ಕವಿಯ ಇಮೇಜ್ ಕೇಂದ್ರಿತವಾಗಿರುವ ಪರಿ ಸಂಕಲನದ ಕತೆಗಳಿಗೆ ಅನ್ಯಾಯ ಉಂಟು ಮಾಡಿರಬಹುದೇ? ಎಂದು ಅನುಮಾನ ಮೂಡಿಸುತ್ತದೆ. ಕನ್ನಡದ ಪ್ರಮುಖ ಆಂಥಾಲಜಿಗಳಲ್ಲಿ ಸೇರಬಲ್ಲ, ಸೇರುವ ಶಕ್ತಿ-ಸಾಮರ್ಥ್ಯ-ಗುಣಮಟ್ಟ ಹೊಂದಿರುವ ಈ ಕತೆಗಳು ‘ಅವಗಣನೆ'ಗೆ ಒಳಗಾದದ್ದಕ್ಕೆ ಕತೆಗಳ ಲೋಪವೇನಿಲ್ಲ. ಸಂಪರ್ಕ ಕಲ್ಪಿಸುವ ಕೊಂಡಿ- ತಲುಪಿಸುವ ಮಾಧ್ಯಮಗಳ ಸ್ವರೂಪದ ಬಗ್ಗೆ ಅನುಮಾನ ಮೂಡದೇ ಇರದು. ರಾಜಕಾರಣ ಉಂಟು ಮಾಡುವ ‘ಅಪಾಯ' ಅದರಲ್ಲೂ ಓದುಗನ ಬರೆಹಗಾರನ ನಡುವೆ ಇರುವ ಮಧ್ಯವರ್ತಿ ಪ್ರಾಬಲ್ಯದ ಸಾಂಸ್ಕೃತಿಕ ರಾಜಕಾರಣದಿಂದ ಲೇಖಕನಿಗೆ ನಷ್ಟವಾಗುತ್ತದೆ. ನಿಜ. ಆದರೆ, ಅದು ಕೇವಲ ಲೇಖಕನನ್ನು ಅವಗಣನೆಗೆ ಮಾಡುವುದಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಅದರಿಂದ ಓದುಗ ವಂಚನೆಗೆ ಒಳಗಾಗುತ್ತಾನೆ. ಅದಕ್ಕಿಂತ ಹೆಚ್ಚಾಗಿ ಗುಣಮಟ್ಟ-ಮೌಲ್ಯ ಹೊಂದಿದ್ದರೂ ‘ಪಠ್ಯ' ವರ್ತಮಾನದ-ಸಮಕಾಲೀನ ಓದುಗನಿಗೆ ತಲುಪುದಿಲ್ಲ. ‘ಭವಿಷ್ಯದ ಓದುಗ'ನಿಗಾಗಿ ಕಾಯಬೇಕಾಗುತ್ತದೆ. ನಂತರ ದಿನಗಳಲ್ಲಿ ಓದುಗನಿಗೆ ದೊರೆತ ಪಠ್ಯವು ಸಾಂಸ್ಕೃತಿಕ ರಾಜಕಾರಣ ಉಂಟುಮಾಡಿದ ಅವಾಂತರವನ್ನು ಅರಿವಿಗೆ ತರದೇ ಇರುವುದಿಲ್ಲ. ಪಠ್ಯವು ತನ್ನ ಗುಣಮಟ್ಟದ ಕಾರಣದಿಂದಲೇ ಓದುಗನಿಗೆ ತಲುಪಿದ ಹತ್ತು ಹಲವು ಉದಾಹರಣೆಗಳಿವೆ. ಅದು ಕೇವಲ ಗತದಲ್ಲಿ ಮಾತ್ರವಲ್ಲ, ಇಂದು-ನಾಳೆಗೂ ನಿಜ.

ರಾಜಕಾರಣ ಏನೇ ಇರಲಿ. ಅದರ ಲಾಭ-ನಷ್ಟಗಳು ಇದ್ದೇ ಇರುತ್ತವೆ. ಅದರಾಚೆಗೂ ಒಂದು ಲೋಕ ಇದೆ. ಇರುತ್ತದೆ. ಈ ಎಲ್ಲ ಕತೆಗಳನ್ನು ಮತ್ತೆ ಮತ್ತೆ ಓದಿ ಖುಷಿ ಪಟ್ಟಿದ್ದೇನೆ. ಇವುಗಳ ಬಗ್ಗೆ ಬರೆಯುವ, ವಿಶ್ಲೇಷಿಸುವ ಕ್ಷಮತೆ-ಅರ್ಹತೆ ಇಲ್ಲವಾದರೂ ಪಟ್ಟಣಶೆಟ್ಟಿ ಸರ್ ಅವರ ಪ್ರೀತಿಯು ನನಗೆ ಈ ಗೌರವವನ್ನು ಒದಗಿಸಿದೆ. ಹಿಂದೆ ಓದಿದ್ದ ಕತೆಗಳನ್ನು ಮತ್ತೊಂದು ಓದಿನ ಖುಷಿಗೆ ಅನುವು ಮಾಡಿಕೊಟ್ಟದ್ದಕ್ಕಾಗಿ ಕೃತಜ್ಞನಾಗಿದ್ದೇನೆ.

‘ಅಗಮ್ಯ’ದ ಕತೆಗಳ ಪೈಕಿ ಕೊನೆಯಲ್ಲಿ ಇರುವ ‘ಕಳೆದು ಹೋದ ಕತೆ'ಯು ಪಟ್ಟಣಶೆಟ್ಟಿ ಸರ್ ಅವರ ಇಲ್ಲವಾದ-ಕಳೆದುಕೊಂಡ ಬೆಳದಿಂಗಳನ್ನು ನೆನಪಿಸುವ ಹಾಗಿದೆ. ಕಳೆದುಕೊಂಡ ಬೆಳದಿಂಗಳ ನಿಜವಾಗಿಯೂ ‘ಇಲ್ಲ'ವಾಗಿದೆಯೇ? ಹಾಗೆಯೇ ಕಳೆದಂತೆ-ಕಳೆದುಕೊಂಡಂತೆ ಭಾಸವಾದರೂ ಕತೆ ನಿಜವಾಗಿಯೂ ‘ಇಲ್ಲ'ವಾಗುತ್ತದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ. ಅದು ಅವರವರ ಹುಡುಕಾಟ, ನಿಂತ ನೆಲೆ-ನೆಲವನ್ನು ಆಧರಿಸಿರುತ್ತದೆ. ‘ಇಲ್ಲ'ವಾಗದಿದ್ದರೂ ಉಳಿದ-ಕಳೆದ ಕತೆ-ಬೆಳದಿಂಗಳ ಹುಡುಕಾಟ ನಿತ್ಯ ಮತ್ತು ನಿರಂತರ.

ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..

ಅಗಮ್ಯ ಕೃತಿಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...