ಅಗಮ್ಯ

Author : ಪೂರ್ಣಿಮಾ ಮಾಳಗಿಮನಿ

Pages 130




Year of Publication: 2022
Published by: ಸಪ್ನ ಬುಕ್ ಹೌಸ್

Synopsys

ಪೂರ್ಣಿಮಾ ಮಾಳಗಿಮನಿ ಅವರ ಕಾದಂಬರಿ ಅಗಮ್ಯ. ಕೃತಿಯಲ್ಲಿ ಅಜಿತ್ ಹರೀಶಿ ಅವರ ಮುನ್ನುಡಿಯ ಮಾತುಗಳಿವೆ. ಅವರು ಹೇಳುವಂತೆ, 'ಗಮ್ಯ' ಎಂದರೆ ತಲುಪಬೇಕಾದ ನೆಲೆ. 'ಅಗಮ್ಯ' ಅಂದರೆ ಹೋಗಿ ಸೇರಲಾಗದ್ದು, ಮುಟ್ಟಲಸಾಧ್ಯವಾದದ್ದು. ಈ ಕಾದಂಬರಿ ಒಂದಲ್ಲ ಒಂದು ರೀತಿಯ ಗಮ್ಯವನ್ನು ಹುಡುಕುತ್ತ ಹೊರಟವರ ಪಯಣವನ್ನು ಚಿತ್ರಿಸುತ್ತದೆ. ಗಮ್ಯದ ಕಲ್ಪನೆ ಸ್ಪಷ್ಟವೂ ಇರಬಹುದು, ಅಸ್ಪಷ್ಟವೂ ಇರಬಹುದು. ಅಥವಾ ಪಯಣದ ಯಾವುದೋ ಒಂದು ಬಿಂದುವನ್ನು ತಲುಪಿದಾಗ ಇದೇ ಕೊನೆಯ ಗಮ್ಯ ಎನಿಸಿಬಿಡಬಹುದು. ಈ ಕಾದಂಬರಿಯಲ್ಲಿ ಗೊಂದಲ, ತಳಮಳಗಳ ಜೊತೆಗೇ ಪಯಣ ಹೊರಟ ಜನಾರ್ದನರಿಗೆ ಅವರು ಹುಡುಕುತ್ತಿದ್ದಿದ್ದುದೇನೆಂದು ಸ್ಪಷ್ಟವಾಗಿದ್ದು ಅದು ದೊರೆತಾಗಲೇ. ಬಹುಶಃ ಎಲ್ಲರ ಬದುಕಿನಲ್ಲೂ ಹಾಗೇ, ಪೂರ್ವನಿಶ್ಚಿತ ಗಮ್ಯವು ದಾರಿಯ ಮಧ್ಯದಲ್ಲೆಲ್ಲೋ  ಬದಲಾಗಿಬಿಟ್ಟಿರುತ್ತದೆ. ಈ ಕೃತಿ ವಾಸ್ತವಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಹುಟ್ಟಿ, ಕೆಲವು ಕಾಲ್ಪನಿಕ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತದೆ. ಆರ್ಥಿಕವಾಗಿ ಮೇಲ್ವರ್ಗದವರಾಗಿರುವ, ಕೆಲಸದಿಂದ ನಿವೃತ್ತರಾದ ಜನಾರ್ದನ್ ಸೇರಿದಂತೆ ಅದೇ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರೆಲ್ಲರ ಸಮಸ್ಯೆಯೂ ಒಂದೇ. ಮಕ್ಕಳ ವರ್ತನೆಯಿಂದ ಬೇಸರಗೊಂಡಿದ್ದ ಈ ಹಿರಿಯರಿಗೆ ಪರಿಚಯವಾದ ಆಯುಷ್ ಎಂಬ ಹುಡುಗ ಅವರಿಗೊಂದು ಹೊಸ ಗಮ್ಯದ ಪರಿಕಲ್ಪನೆ ಕೊಡುತ್ತಾನೆ. ತಮ್ಮದೇ ಸ್ವತಂತ್ರ ಬದುಕು ನಡೆಸಲು ಹೊಸ ದಾರಿಯೊಂದು ಸಿಕ್ಕಿದ ಉತ್ಸಾಹದಲ್ಲಿ ಅವರೆಲ್ಲ ಹೊಸ ಗಮ್ಯದೆಡೆಗೆ ಪಯಣ ಹೊರಡುತ್ತಾರೆ. ಹಿರಿಯರ ಈ ಹುಮ್ಮಸ್ಸು ಕಾದಂಬರಿಗೂ ಒಂದು ಹೊಸ ಹುಮ್ಮಸ್ಸು ತುಂಬುತ್ತದೆ. ಇನ್ನೊಂದೆಡೆ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುತ್ತಿರುವ ಸ್ವಾಭಿಮಾನಿ ಹೆಣ್ಣು ಬೃಂದಾ ಇವರೆಲ್ಲರ ಗಮ್ಯಕ್ಕೆ ಅಡ್ಡವಾಗಿ ನಿಂತವಳು. ಕೊನೆಗೆ ವಿವಿಧ ತಿರುವುಗಳೊಂದಿಗೆ ಅವಳೂ ಈ ಹಿರಿಯರ ದಾರಿಗೇ ಸೇರಿಕೊಳ್ಳುವುದು ಜೀವನದ ಅನಿಶ್ಚಿತತೆಗೊಂದು ಉದಾಹರಣೆ. ಬೃಂದಾ ತನ್ನ ಅಣ್ಣನೊಂದಿಗಿನ ಮನಸ್ತಾಪದಿಂದಾಗಿ ಪಿತ್ರಾರ್ಜಿತವಾಗಿ ಬಂದ ಮನೆಯನ್ನು ಮಾರಲು ಒಪ್ಪದಿದ್ದಾಗ, ಅದನ್ನು ಕೊಳ್ಳಲು ತಯಾರಿ ನಡೆಸಿದ ಆಯುಷ್ ಜೊತೆ ಜನಾರ್ದನ ಮತ್ತು ಸ್ನೇಹಿತರು ಕಾಲೇಜಿನ ಬಳಿ ಹೋಗಿ ಧರಣಿ ಮಾಡಿದ್ದು ಒಂದು ಕಡೆ ಅಸಹಜ ನಡೆ, ವಾಸ್ತವಕ್ಕೆ ಹತ್ತಿರವಿಲ್ಲದ್ದು ಎಂದು ಅನಿಸಿದರೂ, ಇನ್ನೊಂದೆಡೆಯಲ್ಲಿ ಮನುಷ್ಯನ ಪ್ರಯತ್ನ ತಾನು ಹಂಬಲಿಸುತ್ತಿರುವ ಗಮ್ಯವನ್ನು ಪಡೆಯಲು ಎಂಥ ಅತಿರೇಕವನ್ನಾದರೂ ತಲುಪಬಹುದು ಎಂಬುದನ್ನು ನಿರೂಪಿಸುವಂತಿದೆ ಎಂದಿದ್ದಾರೆ.

About the Author

ಪೂರ್ಣಿಮಾ ಮಾಳಗಿಮನಿ

ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹನುಮಂತಪುರದವರು. ಮಂಡ್ಯ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿ, ಚಿತ್ರದುರ್ಗದ ಎಸ್.ಜೆ.ಎಂ.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಪದವೀಧರೆ.  'ಎನಿ ವನ್ ಬಟ್ ದಿ ಸ್ಪೌಸ್' ಎನ್ನುವ ಇಂಗ್ಲೀಷ್ ಕಿರುಗತೆಗಳ (2017) ಸಂಕಲನ ಪ್ರಕಟಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಹಲವಾರು ತಾಂತ್ರಿಕ ಹಾಗೂ ಸಾಹಿತ್ಯಕ  ವಿಷಯ ಕುರಿತ ಲೇಖನಗಳು ಪ್ರಕಟವಾಗಿವೆ. ಪ್ರತಿಷ್ಠಿತ ಭಾರತೀಯ ವಾಯುಸೇನೆಯಲ್ಲಿ ಏರೊನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಧಿಕಾರಿಯಾಗಿ ಆರು ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಜಂಟಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.   ಕೃತಿಗಳು: Anyone but the ...

READ MORE

Related Books