ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ


‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ್ನು ಹೇಳುವಂತೆ ತೋರಿದರೂ ಅದಕ್ಕೊಂದು ಸುಸಂಬದ್ಧವಾದ ಹೆಣಿಕೆ ಕಂಡುಬರುತ್ತದೆ ಎನ್ನುತ್ತಾರೆ’ ಪ್ರೊ. ಎಚ್. ಎಸ್. ಉಮೇಶ್. ಅವರು ಶಶಿಧರ ಡೋಂಗ್ರೆ ಅವರ ‘ಲೀಲಾವತೀ ಮತ್ತು ಇತರ ವಿಜ್ಞಾನ ನಾಟಕಗಳು’ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ.

ನಾಟಕಗಳ ಚರಿತ್ರೆಯನ್ನು ಗಮನಿಸಿದರೆ ಅದರಲ್ಲೊಂದು ವಿನ್ಯಾಸ ಕಾಣಿಸುತ್ತದೆ. ಇದು ಇನ್ನಿತರ ಪ್ರಮುಖ ಸಾಹಿತ್ಯ ಪ್ರಕಾರಗಳಾದ ಕಥೆ, ಕಾವ್ಯ, ಕಾದಂಬರಿಗಳಿಗೂ ಅನ್ವಯವಾಗುತ್ತದೆ ಎನಿಸುತ್ತದೆ. ದೈವವನ್ನು ದೇವರನ್ನು ಒಲಿಸುವ ಭಕ್ತಿಭಾವದ ಪ್ರಾಧಾನ್ಯತೆಯನ್ನು ಇವು ಹೊಂದಿರುತ್ತವೆ. ಅದರ ಸುತ್ತ ಹೆಣೆದಿರುವ ಕಾಲ್ಪನಿಕ ಚಿತ್ರಗಳೇ ಇವುಗಳಲ್ಲಿ ತುಂಬಿರುತ್ತವೆ. ಇಂಥಹ ಸ್ಥಿತಿಯಲ್ಲಿಯೇ ಪುರಾಣಗಳು ಜನ್ಮ ತಾಳುವುದು. ಆ ಪುರಾಣಕ್ಕೆ ಸ್ಥಳ ಮತ್ತು ಕಾಲದ ಹಂಗಿರುವುದಿಲ್ಲ. ಹಾಗಾಗಿ ವಾಸ್ತವತೆಯ ಚೌಕಟ್ಟನ್ನು ಅವು ಬಯಸುವುದಿಲ್ಲ. ಮನೋಲೋಕದಲ್ಲಿ ವಾಸ್ತವವೆನಿಸುವ ಗುಣವನ್ನು ಅವು ಹೊಂದಿದ್ದರೆ ಸಾಕು. ನಮ್ಮ ಚಿಂತನೆ ಮತ್ತು ವಾಸ್ತವತೆಯ ಅರಿವು ಹೆಚ್ಚಿದಂತೆಲ್ಲ ಪುರಾಣದಿಂದ ಇತಿಹಾಸದ ಕಡೆಗೆ ನಮ್ಮ ಚಿಂತನೆ ಹೊರಳಿಕೊಂಡಿತು. ಹಾಗಾಗಿಯೇ ನಮ್ಮ ಮೊದಲ ನಾಟಕಗಳಲ್ಲಿ ಬಹುಪಾಲು ನಾಟಕಗಳು ಪೌರಾಣಿಕವಾದವುಗಳೇ. ಇದಕ್ಕೆ ಗ್ರೀಕ್ ಮತ್ತು ಸಂಸ್ಕೃತ ನಾಟಕಗಳು ಪುರಾವೆ ಒದಗಿಸುತ್ತವೆ. ಸಂಸ್ಕೃತ ರಂಗಭೂಮಿಯಲ್ಲಿ ಮೃಚ್ಛಕಟಿಕಕ್ಕೆ ಮೊದಲು ಪ್ರತಿಮಾನಾಟಕ ಕಾಣಿಸಿಕೊಳ್ಳುವುದರ ಹಿನ್ನೆಲೆಯಲ್ಲಿ ಇದನ್ನು ವಿಸ್ತರಿಸಿಕೊಳ್ಳಬಹುದು. ಗ್ರೀಕ್ ನಾಟಕಗಳಲ್ಲಿಯೂ ನಾಟಕಕಾರ ಐತಿಹ್ಯದಿಂದ ಅಥವಾ ಹೋಮರನ ಕೃತಿಯಿಂದ ಹೊರಳುದಾರಿ ಹಿಡಿಯುವುದರಲ್ಲಿಯೂ ಇದನ್ನು ಗುರುತಿಸಬಹುದು.

ಇಂತಹ ಇತಿಹಾಸೀಕರಣ ಸಧ್ಯದ ಸಮಸ್ಯೆಗಳನ್ನು ವ್ಯಕ್ತಿತ್ವ ಮತ್ತು ಸನ್ನಿವೇಶಗಳನ್ನು ತನ್ನ ಸೃಜನಶೀಲ ಪ್ರತಿಕ್ರಿಯೆಗೆ ಬಳಸಿಕೊಳ್ಳುವ ಮತ್ತು ಒಡ್ಡುವ ಪ್ರಯತ್ನಗಳ ಸಾಕ್ಷಿಯಾಗಿ ಸಾಮಾಜಿಕ ನಾಟಕಗಳು ನಾಟಕರಂಗವನ್ನು ಆವರಿಸಿಕೊಂಡವು. ಸಮಾಜಶಾಸ್ತ್ರ, ಮನೋವಿಜ್ಜ್ಞಾನ, ರಾಜಕೀಯಶಾಸ್ತ್ರಗಳ ಬೆಳವಣಿಗೆಯ ಹಾದಿ ಕೂಡ ಇದನ್ನು ಸ್ಪಷ್ಟೀಕರಿಸುತ್ತವೆ. ಇಂಥಹ ಜ್ಞಾನಶಾಖೆಗಳ ನಂತರ ದೊಡ್ಡ ಪ್ರಮಾಣದಲ್ಲಿ ಮೂಲಭೂತವಾದ ಬದಲಾವಣೆಯಾಗುವುದು ವಿಜ್ಞಾನದ ಹುಟ್ಟಿನಿಂದ. ಜ್ಞಾನದ ಅನ್ವೇಷಣೆಯ ಮೊದಲ ಹೆಜ್ಜೆಯಿಂದಲೂ ವಿಜ್ಞಾ ಇದ್ದರೂ ಅದನ್ನು ವಿಜ್ಞಾನೇತರ ವಿಷಯಗಳ ನೆರಳಿನಲ್ಲಿ ಗ್ರಹಿಸಲಾಗುತ್ತಿತ್ತು ಮತ್ತು ಅದಕ್ಕೆ ವಸ್ತುನಿಷ್ಠತೆಯಾಗಲಿ ಪ್ರಯೋಗದಿಂದ ಸಾಧಿತಗೊಂಡ ಸತ್ಯಾನ್ವೇಷಣೆಯ ನಿಖರತೆಯಾಗಲಿ ಇರಲಿಲ್ಲ. ಆಧುನಿಕ ಯುಗದಲ್ಲಿ ವಿಜ್ಞಾನ ತನ್ನ ಸ್ಥಾನವನ್ನು ನಿರ್ದಿಷ್ಠಗೊಳಿಸಿಕೊಂಡ ಮೇಲೆ ವಿಜ್ಞಾನದ ವ್ಯಾಪ್ತಿ ಮತ್ತು ವ್ಯಾಖ್ಯಾನ ಒಳಗೊಂಡಿರಬಹುದಾದ ಪ್ರಯೋಗಾತೀತ ಅನುಭವಗಳ ಸಾಧ್ಯತೆ ಮತ್ತು ಸತ್ಯಗಳನ್ನು ಸಾಮಾನ್ಯ ವಿಜ್ಞಾನದ ವ್ಯಾಪ್ತಿಯಿಂದ ದೂರವಿಡಲಾಯಿತು. ಹೀಗೆ ಮಾಡಿದ್ದು, ವಿಜ್ಞಾನವನ್ನು ಸಾಮಾನ್ಯ ಶಿಕ್ಷಣದ ವ್ಯಾಪ್ತಿಗೆ ಒಗ್ಗಿಸಿಕೊಳ್ಳುವ ಮತ್ತು ಇತರ ವಿಷಯಗಳಿಂದ ಈ ಜ್ಞಾನ ಸ್ವರೂಪವನ್ನು ನಿರ್ದಿಷ್ಠಗೊಳಿಸಿಕೊಳ್ಳುವ ಕಾರಣದಿಂದ ಉಂಟಾಯಿತು. ಅಂದರೆ ವಿಜ್ಞಾನವನ್ನು ಸತ್ಯಶೋಧನೆಯ ವಿಧಾನವಾಗಿ ನೋಡಿದ್ದಕ್ಕಿಂತ ಹೆಚ್ಚಾಗಿ ಸ್ಥಾಪಿತ ಸತ್ಯವನ್ನಷ್ಟೇ ವಿಜ್ಞಾನ ಎಂದು ಅಂಗೀಕರಿಸುವ ಧೋರಣೆಯಿಂದ ಉಂಟಾಯಿತು. ಇದರ ಪರಿಣಾಮವಾಗಿ ವಿಜ್ಞಾನ ಮತ್ತು ಇತರ ಜ್ಞಾನಕ್ಷೇತ್ರಳ ಒಡನಾಟ ಹಾಗೂ ಸಂಘರ್ಷದ ಹಿನ್ನೆಲೆಯಲ್ಲಿನ ಶೋಧನೆಗಳು ನಿಧಾನಗತಿಯಲ್ಲಿ ನಡೆಯಿತು. ಇದು ಸಾಹಿತ್ಯ, ರಂಗಭೂಮಿ ಮತ್ತು ವಿಜ್ಞಾನದ ಸಂಬಂಧಕ್ಕೂ ಅನ್ವಯವಾಗುತ್ತದೆ.

ವಿಜ್ಞಾನಿಗಳ ಸಾಕಷ್ಟು ಜೀವನಚರಿತ್ರೆಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಮೇರಿ ಕ್ಯೂರಿ, ಸಿ.ವಿ.ರಾಮನ್ ಮುಂತಾದವರ ಜೀವನಚರಿತ್ರೆಗಳು ಸಾಮಾನ್ಯ ಓದುಗರನ್ನು ಗಮನದಲ್ಲಿಟ್ಟುಕೊಂಡಿರುತ್ತವೆ ಮತ್ತು ಅವರ ಸಾಧನೆಗಳನ್ನು ಪರಿಚಯಿಸುತ್ತವೆ. ಅವು ಆ ಸಾಧಕರ ಬದುಕಿನ ವಿಶ್ಲೇಷಣೆಯಂತೆ, ವಿಮರ್ಶೆಯಂತೆ ಕಂಡುಬರುವುದಿಲ್ಲ. ಸಾಹಿತ್ಯದ ಸಂದರ್ಭದಲ್ಲಿ, ಅದರಲ್ಲೂ ಕಥಾಕ್ಷೇತ್ರದಲ್ಲಿ – ಕಾದಂಬರಿ ಮತ್ತು ಸಣ್ಣಕತೆಗಳಲ್ಲಿ- ವಿಜ್ಞಾನವನ್ನು ಆಧರಿಸಿದ ಕೃತಿಗಳು ಸಾಕಷ್ಟು ಕಂಡುಬರುತ್ತವೆ. ಅದರಲ್ಲೂ ತೆಳುವಾಗಿ ವಿಜ್ಞಾನ ಸಂಬಂಧಿತ ವಿಷಯಗಳನ್ನು ಆಧರಿಸಿದ ಕೃತಿಗಳು ಹೆಚ್ಚಾಗಿವೆ. ವಿಜ್ಞಾನಿಯ ಜೀವನಚಿತ್ರಗಳನ್ನು ಕತೆಯಾಗಿಸುವ ಕಾದಂಬರಿಯಾಗಿಸುವ ಪ್ರಮುಖ ದಾರಿಯೊಂದು ತೆರೆದುಕೊಂಡಿದೆ. ಕನ್ನಡದಲ್ಲಿ ರಾಜಶೇಖರ ಭೂಸನೂರಮಠರಂತಹ ವಿಜ್ಞಾನ ವಸ್ತುವನ್ನು ಆಧರಿಸಿದ ಕಾದಂಬರಿಕಾರರು ಸಾಕಷ್ಟು ಕೆಲಸಮಾಡಿದ್ದರೂ ಅವರನ್ನು ಒರೆಗೆ ಹಚ್ಚುವ ಮತ್ತು ಹೆಚ್ಚು ಜನಪ್ರಿಯಗೊಳಿಸುವ ಕಾರ್ಯಗಳು ಅಷ್ಟಾಗಿ ನಡೆದಿಲ್ಲ. ಈ ಮಾತು ವಿಜ್ಞಾನ ಕಾವ್ಯ ಕ್ಷೇತ್ರಕ್ಕೂ ಅನ್ವಯಿಸುತ್ತದೆ; ವಿಜ್ಞಾನ ನಾಟಕ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಇಂಥಹ ಸಂದರ್ಭದಲ್ಲಿ ಶಶಿಧರ ಡೋಂಗ್ರೆಯವರ ಲೀಲಾವತೀ ಮತ್ತು ಇತರ ವಿಜ್ಞಾನ ನಾಟಕಗಳು ಹೊರಬರುತ್ತಿರುವುದು ತುಂಬಾ ಆಶಾದಾಯಕವಾದ ಸಂಗತಿಯಾಗಿದೆ. ಅದರಲ್ಲೂ ಇವು ನಾಟಕಗಳಾಗಿರುವುದು ಮತ್ತು ರಂಗಭೂಮಿಯಲ್ಲಿ ಯಶಸ್ವಿ ಪ್ರದರ್ಶನಗಳನ್ನು ಕಂಡಿರುವುದು ಇನ್ನಷ್ಟು ಸಂತಸದ ವಿಷಯವಾಗಿದೆ ಮತ್ತು ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿನ ಮಹತ್ವದ ಹೆಜ್ಜೆಗುರುತಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಸಂಕಲನದಲ್ಲಿ ಒಂದು ಕೃತಿ ಸ್ವತಂತ್ರ ಕೃತಿಯಾಗಿದ್ದರೆ ಉಳಿದೆರಡು ನಿರಂಜನ್.ಪಿ.ಚೌಧುರಿಯವರ ಇಂಗ್ಲೀಷ್ ಕೃತಿಗಳ ಕನ್ನಡ ಅವತರಣಿಕೆಗಳಾಗಿವೆ.

ನಿರಂಜನ್.ಪಿ.ಚೌಧುರಿಯವರದು ಪಕ್ವಗೊಂಡಿರುವ ಸೃಜನಶೀಲತೆ. ಕತೆಯನ್ನು ಹೇಳುವ ಕೌಶಲವನ್ನು ಕರಗತಮಾಡಿಕೊಂಡಿರುವ ನಿರಂಜನ್ ಅವರು ಸಂಘರ್ಷದ ನೆಲೆಯಲ್ಲಿ ಬಿಚ್ಚಿಕೊಳ್ಳುವ ನಾಟಕೀಯತೆಯ ಅಭಿವ್ಯಕ್ತಿಯನ್ನೂ ಕರಗತಮಾಡಿಕೊಂಡಿದ್ದಾರೆ. ಅವರ ಎರಡು ನಾಟಕಗಳು ಇಲ್ಲಿವೆ. ಒಂದು: ನೊಬೆಲ್ ಪುರಸ್ಕೃತ ಪಾಕಿಸ್ತಾನಿ ವಿಜ್ಞಾನಿಯದ್ದಾದರೆ ಮತ್ತೊಂದು ನೊಬೆಲ್ ಪುರಸ್ಕೃತ ಭಾರತೀಯ ವಿಜ್ಞಾನಿಯದ್ದು. ಎರಡರಲ್ಲೂ ವೈಯಕ್ತಿಕ ಬದುಕಿನ ಸಂಕಟಗಳು ಮೂಲಧಾತುವಾಗಿದೆ. ಅಬ್ದುಸ್ ಸಲಾಂ ಕುರಿತ ನಾಟಕದಲ್ಲಿ ಸಲಾಂ ಅವರ ಶ್ರದ್ಧೆ ಮತ್ತು ನಿಷ್ಠೆಯ ವಿಚಾರಣೆ ನಡೆಯುತ್ತದೆ. ತನ್ನ ಧರ್ಮ ಮತ್ತು ದೇಶದ ಬಗ್ಗೆ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರೂ ವ್ಯವಸ್ಥೆಯ ಕಣ್ಣಿನಲ್ಲಿ ಅಪರಾಧಿಯಾಗಿಯೇ ಇರಬೇಕಾದ ಅನಿವಾರ್ಯತೆ ಅವರನ್ನು ಕಾಡುತ್ತದೆ. ಅವರ ವೈಜ್ಞಾನಿಕ ಕೊಡುಗೆಯ ಮಹತ್ವದ ವಿಶ್ಲೇಷಣೆ ಇಲ್ಲಿ ಮುಖ್ಯವಾಗುವುದಿಲ್ಲ. ಅವರ ಸಾಧನೆಯ ಕತ್ತುಹಿಸುಕುವ ವಾತಾವರಣದ ಕಪಿಮುಷ್ಠಿಯಲ್ಲಿ ನಲುಗುವ ನಿಷ್ಠಾವಂತ ಶೋಧಕನ ಅಂತರಾಳವನ್ನು ನಾಟಕ ತೆರೆದಿಡುತ್ತದೆ. ವ್ಯಕ್ತಿಚಿತ್ರಣವೇ ಮುಖ್ಯವಾಗಿರುವ ಇನ್ನೊಂದು ನಾಟಕ ಕವಿತೆಯ ವರ್ಗಮೂಲ. ಹೆಸರೇ ನಾಟಕಕಾರರು ತಳೆದಿರುವ ಭಿನ್ನ ನೆಲೆಯನ್ನು ಹೇಳುತ್ತದೆ. ಸಲಾಂ ನಾಟಕದಲ್ಲಿನಂತೆ ಇಲ್ಲಿ ರಾಜಕೀಯ ಮುಖ್ಯನೆಲೆಯಲ್ಲ. ವೈಯುಕ್ತಿಕ ಬದುಕಿನ ಸಂಬಂಧಗಳು ಕತ್ತಲ ಮೂಲೆಗಳನ್ನು ಅನಾವರಣಗೊಳಿಸುತ್ತಲೇ ನಾಟಕ ಕಪ್ಪು ರಂಧ್ರದ ಇತಿಹಾಸವನ್ನು ನೋಡುಗರ ಮುಂದಿಡುತ್ತದೆ. ಕೌಟುಂಬಿಕ ನೆಲೆ ಮತ್ತು ವಿಜ್ಞಾನಿಗಳ ಸಂಬಂಧಗಳ ನೆಲೆಗಳು ನಾಟಕಕ್ಕೆ ಬೇಕಾದ ಸಂಘರ್ಷವನ್ನು ಒದಗಿಸಿಕೊಡುತ್ತವೆ. ವಿಜ್ಞಾನದ ಸಂಶೋಧನೆಯಲ್ಲಿ ಮುಳುಗಿಹೋಗುವುದು ಬೌದ್ಧಿಕ ರಾಜಕಾರಣದೊಳಗೆ ಸಿಲುಕುವ ಪರಿ ಹೇಗೋ ಹಾಗೇ ವೈಯಕ್ತಿಕ ಜೀವನದಲಲಿನ ತೊಳಲಾಟಕ್ಕೆ ಸಿಕ್ಕುಬೀಳುವುದೂ ಆಗಿರುತ್ತದೆ ಎಂಬುದನ್ನು ನಿರಂಜನ್ ಈ ನಾಟಕದಲ್ಲಿ ಕಾಣಿಸುತ್ತಾರೆ.

ಈಗಾಗಲೇ ಹಲವು ವಿಜ್ಞಾನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ರಂಗಭೂಮಿಯಲ್ಲಿ ವಿಜ್ಞಾನ ನಾಟಕಗಳ ಪ್ರಯೋಗಕ್ಕೆ ಶಕ್ತಿ ತುಂಬಿರುವ ಶಶಿಧರ ಅವರ ಇನ್ನಿತರ ವಿಜ್ಞಾನ ನಾಟಕಗಳೂ ಪುಸ್ತಕ ರೂಪದಲ್ಲಿ ಓದುಗರಿಗೆ ಮತ್ತು ಪ್ರದರ್ಶಕರಿಗೆ ಒದಗಿಬರಲಿ ಎಂದು ಹಾರೈಸುತ್ತೇನೆ.

ಅನುವಾದಗಳ ಮೂಲಕ ನಾಟಕ ರಚನೆಯ ಆಂತರ್ಯವನ್ನು ಅರ್ಥಮಾಡಿಕೊಂಡಿರುವ ಶಶಿಧರ ಡೋಂಗ್ರೆ ತಮ್ಮ ಓದು ಮತ್ತು ನಾಟಕರಚನಾ ಸಾಮರ್ಥ್ಯವನ್ನು ಲೀಲಾವತೀ ನಾಟಕದಲ್ಲಿ ಒರೆಗೆ ಹಚ್ಚಿಕೊಂಡು ಯಶಸ್ವಿಯಾಗಿದ್ದಾರೆ. ಭಾಸ್ಕರಾಚಾರ್ಯರ ಲೀಲಾವತೀಗೆ ಭಾರತೀಯ ಗಣಿತದಲ್ಲಿ ವಿಶಿಷ್ಠವಾದ ಸ್ಥಾನವಿದೆ. ಚರಿತ್ರೆಯ ನಡೆಯಲ್ಲಿ ಅದು ಮತ್ತೆ ಮತ್ತೆ ತನ್ನ ಹೆಗ್ಗುರುತುಗಳನ್ನು ದಾಖಲಿಸುತ್ತಲೇ ಬಂದಿದೆ. ಲೀಲಾವತೀ ಬರೆಯಲ್ಪಟ್ಟ ಕಾಲಘಟ್ಟದಲ್ಲಿ, ಅಂದರೆ ಹನ್ನೆರಡನೆ ಶತಮಾನದಲ್ಲಿ ಅದು ಗಣಿತ ವಿದ್ಯಾರ್ಥಿಗಳ ಕಲಿಕೆಯ ದಿಕ್ಸೂಚಿಯಾಗಿ ತನ್ನ ಸ್ಥಾನವನ್ನು ಸ್ಥಾಪಿಸಿಕೊಂಡಿತ್ತು. ಅನಂತರ ಕೆಲವು ಕಾಲ ಅಜ್ಞಾತವಾಸವನ್ನು ಅನುಭವಿಸಿದ ಕೃತಿ ಅಕ್ಬರನ ಕಾಲದಲ್ಲಿ ಕವಿ ಫೈಜಿಯಿಂದ ಪರ್ಶಿಯನ್ ಭಾಷೆಗೆ ಅನುವಾದಗೊಂಡಿತು. ಮತ್ತೆ ಕಾಲಗರ್ಭಕ್ಕೆ ಸೇರಿದ ಈ ಕೃತಿ ಆಂಗ್ಲರ ಆಡಳಿತದ ಕಾಲದಲ್ಲಿ ಕೋಲ್‌ಬ್ರೂಕ್‌ನಿಂದ ಇಂಗ್ಲೀಷ್ ಬಲ್ಲ ಎಲ್ಲರಿಗೂ ದಕ್ಕುವಂತಾಯಿತು. ಈ ಇತಿಹಾಸವೇ ಕುತೂಹಲಕಾರಿಯಾಗಿದೆ. ಲೀಲಾವತೀ ಕೃತಿಗೆ ಕಾರಣ ಎನ್ನಲಾಗಿರುವ ಭಾಸ್ಕರಾಚಾರ್ಯರ ಮಗಳು ಲೀಲಾವತಿಯ ವಿವಾಹ ಪ್ರಸಂಗವೂ ಈ ಗಣಿತ ಕೃತಿಯಷ್ಟೇ ರೋಚಕವಾಗಿದೆ. ಶಶಿಧರ ಅವರಿಗೆ ಮಗಳು ಲೀಲಾವತಿ ಕಥೆಗಿಂತ ಗಣಿತ ಕೃತಿ ಲೀಲಾವತಿ ನಮಗೆ ದಕ್ಕುವಂತೆ ಮಾಡಿದ ಅದರ ಅನುವಾದಕರ ಹಿನ್ನೆಲೆ ಮತ್ತು ಅಭಿಪ್ರಾಯಗಳಲ್ಲಿ ಹೆಚ್ಚು ಆಸಕ್ತಿ. ಹಾಗಾಗಿ ಇಲ್ಲಿ ಲೀಲಾವತಿ ಕೃತಿಯ ಆಂತರ್ಯವನ್ನು ಅನುವಾದಕರ ಗ್ರಹಿಕೆಯ ಹಿನ್ನೆಲೆಯಲ್ಲಿ ನಮ್ಮ ಮುಂದಿಡುತ್ತಾರೆ. ಆ ಕೃತಿಯಲ್ಲಿ ಉಕ್ತವಾಗಿರುವ ಕೆಲವು ಗಣಿತ ಸಮಸ್ಯೆಗಳನ್ನು ಅಲ್ಲಿರುವಂತೆ ಘಟನಾರೂಪದಲ್ಲಿ ಕಾವ್ಯಾತ್ಮಕವಾಗಿ ಹಿಡಿಯುವ ಪ್ರಯತ್ನಮಾಡಿದ್ದಾರೆ. ಹಾಗಾಗಿ ಶಶಿಧರ ಅವರು ಒಣಸಿದ್ಧಾಂತ ಅಥವಾ ಚರ್ಚೆಯನ್ನು ಪ್ರೇಕ್ಷಕರ ಮುಂದಿಡದೆ ಅದನ್ನು ನಾಟಕೀಯಗೊಳಿಸಿದ್ದಾರೆ. ಆ ಕಾರಣಕ್ಕೇ ದೇಶ ಕಾಲಗಳ ಸರಹದ್ದನ್ನು ಮುರಿದು ಎಲ್ಲವನ್ನೂ ನೋಡುಗನ ಕಕ್ಷೆಯಲ್ಲಿಡುತ್ತಾರೆ. ನಾಟಕದ ಮತ್ತೊಂದು ಇತ್ಯಾತ್ಮಕವಾದ ಅಂಶವೆಂದರೆ ನಾಟಕದ ನಾಯಕಿಯಾಗಿ ಸಂಶೋಧನಾ ವಿದ್ಯಾರ್ಥಿನಿ ಚಿನ್ಮಯಿ, ಗಣಿತ ಕೃತಿಗೆ ಪ್ರೇರಣೆ ನೀಡಿದ ಲೀಲಾವತೀಯರ ನಡುವೆ ಒಂದು ಬಗೆಯ ಸಾಂಗತ್ಯವನ್ನು ಸ್ಥಾಪಿಸಿಕೊಂಡಿರುವುದು. ಇವರಿಬ್ಬರ ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ್ನು ಹೇಳುವಂತೆ ತೋರಿದರೂ ಅದಕ್ಕೊಂದು ಸುಸಂಬದ್ಧವಾದ ಹೆಣಿಕೆ ಕಂಡುಬರುತ್ತದೆ. ನಾಟಕವನ್ನು ಸಂಕೀರ್ಣಗೊಳಿಸಬೇಕೆಂಬ ಹಠವಾಗಲಿ ಉದ್ದೇಶವಾಗಲಿ ನಾಟಕಕ್ಕಿಲ್ಲದಿರುವುದು ಅದರ ಗುಣವಾಗಿದೆ. ಇಂಥ ಕೃತಿಯನ್ನು ನೀಡಿರುವ ಶಶಿಧರ ಅವರಿಂದ ಇದಕ್ಕೂ ಮಿಗಿಲಾದ ಕೃತಿಯನ್ನು ನಾವು ಬಯಸಬಹುದು. ಅಂತಹ ನಮ್ಮ ಬಯಕೆಯನ್ನು ಅವರು ಈಡೇರಿಸಬಲ್ಲರು ಎಂದು ಭಾವಿಸಿದ್ದೇನೆ.

ಶಶಿಧರ ಡೋಂಗ್ರೆಯವರು ನನ್ನನು ತಮ್ಮ ಕೃತಿಗಳ ಮೊದಲ ಓದುಗನಾಗಿ ವಿಶ್ವಾಸವಿಟ್ಟಿರುವುದಕ್ಕೆ ನಾನು ಅವರಿಗೆ ಋಣಿಯಾಗಿದ್ದೇನೆ. ಅವರ ಇನ್ನಷ್ಟು ಕೃತಿಗಳನ್ನು ಓದುವ ಅವಕಾಶ ನನಗೆ ಒದಗುತ್ತದೆ ಎಂದು ಭಾವಿಸಿದ್ದೇನೆ. ಈ ಒಂದೆರಡು ಮೊದಲ ಮಾತುಗಳನ್ನು ಬರೆಯಲು ನನಗೆ ತುಂಬ ಖುಷಿಯಾಗಿದೆ. ಶಶಿಧರ ಅವರ ನಾಟಕ ಸಂಕಲನದ ಓದು ನಿಮಗೆ ಅದಕ್ಕಿಂತ ಹೆಚ್ಚಿನ ಖುಷಿಯನ್ನು ನೀಡುತ್ತದೆ ಎಂದು ಆಶಿಸಿದ್ದೇನೆ.

-ಎಚ್.ಎಸ್.ಉಮೇಶ್

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...