ರಂಗಾಯಣ ಆವರಣದಲ್ಲಿ ’ಬಸವರಾಜ ಕಟ್ಟೀಮನಿ’ ಜನ್ಮ ಶತಮಾನೋತ್ಸವ

Date: 08-11-2019

Location: ಧಾರವಾಡ


“ಮನೆಯಲ್ಲಿ ಕಡು ಬಡತನ, ಹೊರ ಜಗತ್ತಿನ ಅರಿವಿಲ್ಲದ ಗ್ರಾಮೀಣ ಪರಿಸರದ ಜೊತೆಗೆ ದೈಹಿಕ ವೈಕಲ್ಯವೂ ಇದ್ದವು. ಆದರೆ, ಇಂತಹ ಕೊರತೆಗಳ ಬಗ್ಗೆ ಕೀಳರಿಮೆ ಇರಲಿಲ್ಲ. ಬೇಸರಿಸಿಕೊಳ್ಳದೇ ಛಲದಿಂದ ಮುನ್ನುಗ್ಗುವ ಮನೋಭಾವನೆಯಿತ್ತು. ಧರ್ಮನಿರಪೇಕ್ಷತೆ ಸ್ವಭಾವದ ಅವರು, ಅನ್ಯಾಯವಾದರೆ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ಹಿಂಜರಿಯುತ್ತಿರಲಿಲ್ಲ’

ೀಹೀಗೆಂದು ಖ್ಯಾತ ಕಾದಂಬರಿಕಾರ ಬಸವರಾಜ ಕಟ್ಟಿಮನಿ ಅವರ ಬಗ್ಗೆ ಅಭಿಪ್ರಾಯ ಪಟ್ಟದ್ದು ’ಹೊಸತು’ ಮಾಸಪತ್ರಿಕೆಯ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ.

ಸ್ಥಳ: ಧಾರವಾಡದ ರಂಗಾಯಣ. ಸಂದರ್ಭ: ಬಸವರಾಜ ಕಟ್ಟಿಮನಿ ಶತಮಾನೋತ್ಸವ.

ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಿರಲಿಲ್ಲ ಎಂಬುದಕ್ಕೆ ಕಟ್ಟಿಮನಿ ಅವರು ಬರೆದ ’ಜರತಾರಿ ಜಗದ್ಗುರು’ ಕಾದಂಬರಿ ಅತ್ಯುತ್ತಮ ನಿದರ್ಶನ. ಹಳ್ಳಿಯಿಂದ ಬಂದ ಅವರು ನಗರದಲ್ಲಿನ ಸಾಹಿತಿಗಳಿಗೆ ಯಾವುದೇ ರೀತಿಯ ಕಡಿಮೆ ಇಲ್ಲದಂತೆ ಸಾಹಿತ್ಯ ಕೃಷಿ ಮಾಡಿದರು. ತಮ್ಮ ಬರವಣಿಗೆಯಲ್ಲಿನ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿಯೂ ಅಳವಡಿಸಿಕೊಂಡಿದ್ದರು ಎಂದರು ಪಾಟೀಲರು

ಕಟ್ಟಿಮನಿ ಅವರು ಸಾಹಿತ್ಯಿಕವಾಗಿ ಮತ್ತು ವೈಚಾರಿಕವಾಗಿ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಪ್ರಾಮಾಣಿಕತೆಯ ಮೇಲು ಸ್ತರದಲ್ಲಿದ್ದ ಕಟ್ಟೀಮನಿ ಅವರು ಇಂದಿನ ಸಾಹಿತಿ ಮತ್ತು ಪತ್ರಕರ್ತರಿಗೆ ಮಾದರಿಯಾಗಿದ್ದರು. ಗೋಕಾಕ ವರದಿ ಜಾರಿಗೆ ಬರುವಂತೆ ಆಗ್ರಹಿಸಿ ಹೇಳಿಕೆ ನೀಡಿದವರಲ್ಲಿ ವಿದ್ವಾಂಸ ಶಂ.ಬಾ.ಜೋಶಿ ಮೊದಲಿಗರು. ಅದೇ ಹೊತ್ತಿಗೆ ಕಟ್ಟೀಮನಿ ಅವರು ಆಮರಣ ಉಪವಾಸ ಕೈಕೊಂಡ ರು. ಅದರ ಪರಿಣಾಮ ಗೋಕಾಕ ಚಳುವಳಿ ಕಾವು ಪಡೆದುಕೊಂಡಿತು ಎಂದು ನೆನಪಿಸಿಕೊಂಡರು.

ಧಾರವಾಡ ರಂಗಾಯಣ ಅವರಣದಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಚಯಲ್ಲಿ ಹೊಂಬೆಳಕು ಫೌಂಡೇಷನ್ ಮತ್ತು ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಬಸವರಾಜ ಕಟ್ಟೀಮನಿ  ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಉದ್ಘಾಟಿಸಿದರು.
ಹೊಂಬೆಳಕು ಫೌಂಡೇಷನ್ ಮತ್ತು ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಕಟ್ಟಿಮನಿ ಅವರ ಸ್ಮರಣೆಯಲ್ಲಿ ಪ್ರತಿವರ್ಷ ಸಾಹಿತ್ಯ ಶ್ರೀ ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿದರು.

ಬೆಂಗಳೂರು ಆಕಾಶವಾಣಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಬಸವರಾಜ ಸಾದರ ಅವರು ಬಸವರಾಜ ಕಟ್ಟೀಮನಿಯವರ ಸಾಹಿತ್ಯಿಕ ಕ್ರಾಂತಿ ಕಾರ್ಯ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಪತ್ರಕರ್ತ ಟಿ.ಎಸ್.ಗೊರವರ ಮತ್ತು ಸಾಹಿತಿ ಮಾಲತಿ ಮುದಕವಿ ಅವರಿಗೆ ’ಸಾಹಿತ್ಯ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಸಿ.ಬಿರಾದಾರ, ಮಂಜುಳಾ ಕಟ್ಟೀಮನಿ, ಮಂಜುಳಾ ಬಿರಾದಾರ, ನೀಲಾ ಕಟ್ಟೀಮನಿ ವೇದಿಕೆಯಲ್ಲಿದ್ದರು. 

ಕಾಲೇಜಿನ ಪ್ರಾಂಶುಪಾಲ ಪ್ರೊ.ನಾಗರಾಜ ಶಿರೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೌನೇಶ್ವರ ಬಡಿಗೇರ ನಿರೂಪಿಸಿದರು. ಎಸ್.ಎನ್.ತಾರಿಹಾಳ ವಂದಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ಕಟ್ಟೀಮನಿ ಅವರ ಅಭಿಮಾನಿಗಳು, ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...