ಸಾಹಿತ್ಯ ಪ್ರಯೋಗಗಳಿಗೆ ವೇದಿಕೆ ಕಲ್ಪಿಸಿದ ‘ಮನೋಹರ ಗ್ರಂಥಮಾಲಾ’

Date: 06-04-2020

Location: ಬೆಂಗಳೂರು


ಕನ್ನಡ ಪುಸ್ತಕ ಪ್ರಕಟಣೆಯ ಇತಿಹಾಸ ಅರಿಯುವ ಪುಟ್ಟ ಪ್ರಯತ್ನದ ಭಾಗವಾಗಿ ಕನ್ನಡದ ಪ್ರಮುಖ ಪ್ರಕಾಶನ ಸಂಸ್ಥೆಗಳನ್ನು ಪರಿಚಯಿಸುವ ಸರಣಿಯನ್ನು ಬುಕ್‌ ಬ್ರಹ್ಮ ಆರಂಭಿಸುತ್ತಿದೆ. ಈ ಬರಹಗಳ ಪ್ರಕಾಶನ ಸಂಸ್ಥೆಯ ಪರಿಚಯದಂತೆ ಇದ್ದರೂ ಒಟ್ಟಾಗಿ ನೋಡಿದಾಗ ಅವು ಕನ್ನಡ ಪುಸ್ತಕ ಪ್ರಪಂಚ ಪ್ರಕಟಣೆಯ ಸ್ವರೂಪವನ್ನೂ ವಿವರಿಸುತ್ತವೆ. ಈ ಸರಣಿಯ ಮೊದಲ ಬರಹ ಧಾರವಾಡದ ಮನೋಹರ ಗ್ರಂಥಮಾಲೆಯನ್ನು ಕುರಿತಾದದ್ದು.

 

ಧಾರವಾಡದ ‘ಗೆಳೆಯರ ಗುಂಪು’ ಕನ್ನಡ ಸಾಹಿತ್ಯ ಲೋಕಕ್ಕೆ ಮರೆಯಲಾರದ ಕೊಡುಗೆ. ‘ಗೆಳೆಯರ ಗುಂಪು’ ಎಂಬ ಬೇರಿನಿಂದ ಚಿಗುರೊಡೆದ ‘ಮನೋಹರ ಗ್ರಂಥಮಾಲೆ’ ಇಂದು ಕನ್ನಡದ ಸತ್ವಶಾಲಿ ಪ್ರಕಾಶನ ಸಂಸ್ಥೆಯಾಗಿ ಬೆಳೆದು ನಿಂತಿದೆ. ಕನ್ನಡದ ಅತ್ಯಂತ ಹಳೆಯ ಪ್ರಕಾಶನ ಸಂಸ್ಥೆಗಳಲ್ಲೊಂದಾದ ಈ ಗ್ರಂಥಮಾಲೆ ಕನ್ನಡ ಸಾಹಿತ್ಯದ ಪಸರಣ ಮತ್ತು ಜ್ಞಾನದ ಹೊನಲನ್ನು ನಾಡಿನ ಜನತೆಗೆ ತಲುಪಿಸಬೇಕೆಂಬ ಸಾತ್ವಿಕ ಮೂಲೋದ್ದೇಶದಿಂದ ಅಧಿಕೃತವಾಗಿ ಚಾಲನೆಗೆ ಬಂದದ್ದು 1933 ಆಗಸ್ಟ್ 15ರಂದು. ಕತೆಗಾರ, ನಾಟಕಕಾರ ಜಿ. ಬಿ. ಜೋಶಿ ಅವರ ಅಧ್ಯಕ್ಷತೆಯಲ್ಲಿ ವರ್ಷಕ್ಕೆ ಆರು ಪುಸ್ತಕಗಳ ಪ್ರಕಟಣೆ ಹಾಗೂ ವಾರ್ಷಿಕ ಚಂದಾ ಹಣ ಮೂರುವರೆ ರೂಪಾಯಿಯಗಳ ಅಲ್ಪ ಹಣದಲ್ಲಿ ಪ್ರಾರಂಭಗೊಂಡದ್ದು ಈಗಲೂ ಸಹ ತನ್ನದೇ ಅಭಿಮಾನಿ ಬಳಗ, ಬೇಡಿಕೆಯನ್ನು ಉಳಿಸಿಕೊಂಡಿದೆ. ಉತ್ತಮ ಕೃತಿಗಳನ್ನು, ಓದುನಿಗೆ ಹೊರೆಯಾಗದಂತೆ ನಿಗದಿತ ಬೆಲೆಯನ್ನು ಇಡುವುದರ ಮೂಲಕ ತನ್ನದೇ ಓದುಗ ಬಳಗವನ್ನು ಕಾಪಿಟ್ಟುಕೊಂಡಿರುವು ಒಂದು ವಿಶೇಷತೆಯಾದರೆ, ಈ ಚಂದದಾರ ಹಣದಿಂದ ಎಂಟು ದಶಕಗಳನ್ನ ಪೂರೈಸಿ ಒಂಬತ್ತನೆ ದಶಕದತ್ತ ಹೆಜ್ಜೆ ಹಾಕಿದ ಏಕೈಕ ಪ್ರಕಾಶನ ‘ಮನೋಹರ ಗ್ರಂಥಮಾಲಾ’. ಇಂದಿಗೂ ಸಹ ಅಂದಿನ ಸುಮಾರು ನೂರೈವತ್ತು ಆಜೀವ ಚಂದಾದಾರರು ಗ್ರಂಥಮಾಲೆಯ ಪುಸ್ತಕಗಳನ್ನು ಪಡೆಯುತ್ತಿದ್ದಾರೆ ಎಂದರೆ ಗ್ರಂಥಮಾಲೆಯ ಉತ್ತಮ ಗುಣಮಟ್ಟದ, ಮೌಲ್ಯಯುತ ಬೆಲೆಯ ಪುಸ್ತಕ ಪ್ರಕಟಣೆಗೆ  ಸಾಕ್ಷಿ. ಜಿ. ಬಿ. ಜೋಶಿ ಅವರಿಗೆ ಸಾಹಿತ್ಯದ ಉತ್ಕಟತೆ ಎಷ್ಟಿತ್ತೆಂದರೆ ಸಾಹಿತ್ಯ ಕೃತಿಗಳನ್ನು ಜನರಿಗೆ ತಲುಪಿಸಲು ಸುಮಾರು ಐವತ್ತೈದು ವರ್ಷಗಳ ಕಾಲ ಮನೆಯಿಂದ ಮನೆಗೆ, ಊರಿಂದ ಊರಿಗೆ ತಿರುಗಿದ್ದಾರೆ. ಇದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಿಸುವಂತಹ ಸಂಗತಿ ಎಂದರೆ ತಪ್ಪಾಗಲಾರದು. 1993ರಲ್ಲಿ ಜಿ.ಬಿ. ಜೋಶಿ ಅವರ ನಿಧನದ ನಂತರ ‘ಮನೋಹರ ಗ್ರಂಥಮಾಲೆ’ಯ ಸಂಪೂರ್ಣ ಜವಾಬ್ದಾರಿಯನ್ನು ರಮಾಕಾಂತ ಜೋಶಿ ತದನಂತರ ಸಮೀರ್‌ ಜೋಶಿ ಅವರು ಸಶಕ್ತವಾಗಿ ನಿರ್ವಹಿಸುತ್ತಿದ್ದಾರೆ.

ಗ್ರಂಥಮಾಲೆಯ ಸಾಹಿತ್ಯ ಪ್ರಯೋಗಗಳು

ಕಥೆ, ಕವಿತೆ, ಕಾದಂಬರಿ, ನಾಟಕ, ಜೀವನಚರಿತ್ರೆ, ವಿಮರ್ಶೆ, ವೈಚಾರಿಕ ಬರಹ, ಪ್ರವಾಸ, ಆಧ್ಯಾತ್ಮ, ಹಾಸ್ಯ, ಮಕ್ಕಳ ಸಾಹಿತ್ಯ ಹೀಗೆ ಎಲ್ಲಾ ಪ್ರಕಾರಗಳಿಗು ಸಮಾನ ಆದ್ಯತೆ ನೀಡುವ ಈ ಗ್ರಂಥಮಾಲೆ ಪ್ರಕಟಿಸದ ಸಾಹಿತ್ಯ ಪ್ರಕಾರಗಳಿಲ್ಲ. ಕೇವಲ ಪುಸ್ತಕವನ್ನು ಪ್ರಕಟಿಸುವುದು ಮಾತ್ರವಲ್ಲ ಸಾಹಿತ್ಯ ರಂಗದಲ್ಲಿ ಹಲವಾರು ಪ್ರಯೋಗಗಳಿಗೆ ತನ್ನನ್ನು ತಾನು ಒಡ್ಡಿಕೊಂಡಿದೆ. ಅದರಲ್ಲಿ ‘ಖೋ’ ಕಾದಂಬರಿ ಮಹತ್ವದ್ದು. ಆರು ದಶಕಗಳ ಹಿಂದೆಯೆ ಹನ್ನೊಂದು ಸಾಹಿತಿಗಳು ಪಾಲ್ಗೊಂಡ ಬರವಣಿಗೆಯ ಈ ಆಟದಲ್ಲಿ ಹನ್ನೊಂದು ಅಧ್ಯಾಯಗಳಿವೆ. ‘ಖೋ’ ಕಾದಂಬರಿಯ ಒಂದು ಅಧ್ಯಾಯವನ್ನು ಒಬ್ಬರು ಬರೆದರೆ ಎರಡನೇ ಅಧ್ಯಾಯವನ್ನು ಇನ್ನೊಬ್ಬರಿಗೆ ವರ್ಗಾಯಿಸಿದಾಗ ಅವರನ್ನು ಮುಂದುವರೆಸುತ್ತಾ ಹೀಗೆ ಹನ್ನೊಂದು ಅಧ್ಯಾಯಗಳು ಸೇರಿ ಒಂದು ಕಾದಂಬರಿಯಾಗಿದೆ. ಅಷ್ಟು ಮಾತ್ರವಲ್ಲ ಸಾಹಿತ್ಯೋತ್ಸವ, ಶಾರದೋತ್ಸವ, ವಸಂತೋತ್ಸವ ಮೊದಲಾದ ಉಪನ್ಯಾಸಗಳನ್ನು ಮನೋಹರ ಗ್ರಂಥ ಮಾಲೆ ಕಾಲ-ಕಾಲಕ್ಕೆ ಹಮ್ಮಿಕೊಂಡು ಸಾಹಿತ್ಯಾಸಕ್ತರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಶ್ರಮಿಸುತ್ತಿದೆ. ಜ್ಞಾನಪೀಠ ಪುರಸ್ಕೃತರ ಹಲವು ಮೇರು ಕೃತಿಗಳನ್ನು ಪ್ರಕಟಿಸಿದ ಕೀರ್ತಿ ಮನೋಹರ ಗ್ರಂಥಮಾಲೆಗೆ ಸಲ್ಲುತ್ತದೆ.

ಮೇರು ಕೃತಿಗಳ ಪ್ರಕಟಣೆ

ಜ್ಞಾನಪೀಠ ಪುರಸ್ಕೃತ ಎಂಟು ಜನರ ಕೃತಿಗಳು ಹಾಗೂ ಈವರೆಗೆ ಬಂದ ಎಲ್ಲಾ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ ವಿಜೇತ ಲೇಖಕ/ಕಿಯರ ಕೃತಿಗಳನ್ನು ಗ್ರಂಥಮಾಲೆ ಪ್ರಕಟಿಸಿದೆ. 

ವಿಶ್ವಾಮಿತ್ರ ಸೃಷ್ಟಿ (ಶ್ರೀರಂಗ), ಮರಳಿ ಮಣ್ಣಿಗೆ (ಶಿವರಾಮ ಕಾರಂತರ), ಸಮರಸವೇ ಜೀವನ (ವಿನಾಯಕ), ನಿಸರ್ಗ (ಮಿರ್ಜಿ ಅಣ್ಣಾರಾಯ), ಸಂಧ್ಯಾರಾಗ, ಮಂಗಳಸೂತ್ರ (ಅ.ನ.ಕೃ), ಗಂಗವ್ವ ಮತ್ತು ಗಂಗಾಮಾಯಿ(ಶಂಕರ ಮೊಕಾಶಿ ಪುಣೇಕರ), ಸಂಸ್ಕಾರ(ಯು.ಆರ್.ಅನಂತಮೂರ್ತಿ), ಕಾಡು (ಶ್ರೀಕೃಷ್ಣ ಆಲನಹಳ್ಳಿ) ಮೊದಲಾದ ಉತ್ತಮ ಕಾದಂಬರಿಗಳು, ದ.ರಾ. ಬೇಂದ್ರೆಯವರ ನಾಟಕ ‘ಹೊಸ ಸಂಸಾರ’, ಕೀರ್ತಿನಾಥ ಕುರ್ತಕೋಟಿಯವರ ‘ಆ ಮನಿ’, ಗಿರೀಶ ಕಾರ್ನಾಡರ ‘ಯಯಾತಿ, ತುಘಲಕ್, ಹಯವದನ’, ಚಂದ್ರಶೇಖರ ಕಂಬಾರರ ‘ಋಷ್ಯ ಶೃಂಗ’ ಮೊದಲಾದ ನಾಟಕಗಳು, ದ.ರಾ. ಬೇಂದ್ರೆ, ವಿನಾಯಕ, ರಂ.ಶ್ರೀ. ಮುಗಳಿ, ಏ.ಕೆ. ರಾಮಾನುಜನ್‌ರ ಕವನ ಸಂಕಲನಗಳನ್ನೂ,  ಮಿರ್ಜಿ ಅಣ್ಣಾರಾಯ, ದ.ರಾ.ಬೇಂದ್ರೆ ಮೊದಲಾದವರ ವಿಮರ್ಶಾ ಗ್ರಂಥಗಳು ಇಲ್ಲಿ ಲಭ್ಯವಿದೆ. ಇಂದು ಈ ಸಂಸ್ಥೆಯಿಂದ ಪ್ರಕಟವಾದ ಕೃತಿಗಳು ಐದುನೂರಕ್ಕು ಹೆಚ್ಚು ಅಂಕಿಯನ್ನು ದಾಟುತ್ತವೆ.

ಧಾರವಾಡದ ಈ ‘ಮನೋಹರ ಗ್ರಂಥಮಾಲಾ’ ಕನ್ನಡ ಪುಸ್ತಕ ಸಂಸ್ಕೃತಿ ಬೆಳೆದು ಬಂದ ದಾರಿಗೆ ಪ್ರತ್ಯಕ್ಷತೆಯಾಗಿ, ಕನ್ನಡ ಓದುಗರ ಪ್ರಜ್ಞಾವಂತಿಕೆಯ ಪ್ರತೀಕವಾಗಿ, ಕನ್ನಡ ನುಡಿ-ಸಂಸ್ಕೃತಿಯನ್ನು ಉನ್ನತೀಕರಿಸುವ ಸಲುವಾಗಿ ತನ್ನನ್ನು ಬದಲಾವಣೆಗೆ ತೆರೆದುಕೊಂಡಿದೆ. ಕನ್ನಡ ಸಾಹಿತ್ಯ ಓದುಗರ ಅಭಿಲಾಶೆ ಡಿಜಿಟೆಲ್‌ನಲ್ಲಿ ಮಾರ್ಪಾಟುಗೊಂಡಂತೆ ಗ್ರಂಥಮಾಲೆಯು ಸಹ ಓದುಗರಿಗೆ ತಕ್ಕಂತೆ ಆನ್‌ಲೈನ್‌ ಪುಸ್ತಕ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ಓದುಗರ ಹೊರೆ ಕಡಿಮೆ ಮಾಡಲು ಪ್ರತಿ ಪುಸ್ತಕಕ್ಕು ಹತ್ತು ಪರ್ಸೆಂಟ್‌ ಡಿಸ್ಕೌಂಟ್‌ ಲಭ್ಯವಿದೆ.

- ಪಲ್ಲವಿ ಎಡೆಯೂರು

MORE NEWS

ಯುಟ್ಯೂಬ್: ಕನ್ನಡ ಸಾಹಿತಿಗಳ ಸಂದರ್...

23-05-2020 ಬೆಂಗಳೂರು

ಬೆಂಗಳೂರು ಆಕಾಶವಾಣಿ ಕೇಂದ್ರವು ಕನ್ನಡ ಸಾಹಿತಿಗಳ ಹಲವು  ಮಹತ್ವದ ಹಾಗೂ ಮೌಲಿಕ ವಿಚಾರ ಒಳಗೊಂಡಿರುವ ಸಂದರ್ಶನಗಳ ಧ್...

ವೈಫ್ ಆಫ್ ಪೋಯಟ್ ಅಲ್ಲ, ಲೈಫ್ ಆಫ್ ...

23-05-2020 ಧಾರವಾಡ

ಇತ್ತಿಚೆಗೆ ನಮ್ಮನ್ನಗಲಿದ ಲೇಖಕಿ, ಸಾಹಿತಿ ಶಾಂತಾದೇವಿ ಅವರಿಗೆ ಕವಿ ರಾಜಕುಮಾರ‌ ಮಡಿವಾಳರ‌ ಒಂದು ನೆನಪ...

ಖ್ಯಾತ ಲೇಖಕಿ, ಸಾಹಿತಿ ಶಾಂತಾದೇವಿ ...

22-05-2020 ಬೆಳಗಾವಿ

ಖ್ಯಾತ ಲೇಖಕಿ, ಸಾಹಿತಿ ಶಾಂತಾದೇವಿ ಕಣವಿ ಅವರು ಇಂದು ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಲ್ಲಿ ನಿಧನರಾದರು. ಅ...

Comments

Magazine
With us

Top News
Exclusive
Top Events