ಸಾಮಾಜಿಕ ವಿವೇಕ ಮತ್ತು ತಿರುಕರ ಪಿಡುಗು


ಶ್ರೀಮಂತರ ಹೃದಯ ದಾರಿದ್ರ್ಯ ಮತ್ತು ನಿರ್ಗತಿಕರ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಬೇಕಾದ ಸೂಚನೆಗಳನ್ನು ಆಶಯವಾಗಿಟ್ಟುಕೊಂಡು ವರಕವಿ ದ.ರಾ.ಬೇಂದ್ರೆ ಅವರು ರಚಿಸಿರುವ ಮಹತ್ವದ ನಾಟಕ ‘ತಿರುಕರ ಪಿಡುಗು’.  ಈ ನಾಟಕದ ಕುರಿತು ಡಾ.ಬೇಲೂರು ರಘುನಂದನ ಅವರು ತಮ್ಮ ‘ಬೇಂದ್ರೆ ನಾಟಕಗಳ ರಂಗ ಪ್ರವೇಶ’ ವಿಶೇಷ ಸರಣಿಯಲ್ಲಿ ವಿಶ್ಲೇಷಿಸಿದ್ದಾರೆ.

ರಂಗಭೂಮಿ ಎನ್ನುವುದು ಇದ್ದಲ್ಲಿಯೇ ದೇವಲೋಕವನ್ನು, ಪಾತಾಳ ಲೋಕವನ್ನು ಅಥವಾ ಇನ್ನಾವುದೇ ಬಗೆಯ ಪ್ರಪಂಚವನ್ನು ದೇಹ ಮತ್ತು ವಾಚಿಕ ಭಾಷೆಗಳ ಮೂಲಕ ಸೃಷ್ಟಿಸಬಲ್ಲದು. ಯಕ್ಷಗಾನದಲ್ಲಿ ಇಂದ್ರಲೋಕದ ಸೆಟ್ ಇಲ್ಲದಿದ್ದರೂ ರಂಗಸ್ಥಳವೇ  ಇಂದ್ರಲೋಕವಾಗುತ್ತದೆ. ನಾಟಕದಲ್ಲೂ ಕಡಲು, ಕಾಡು ಇದೆಲ್ಲವೂ ಆಹಾರ್ಯದ ಮೂಲಕ ಸಶಕ್ತವಾಗಿ ಕಟ್ಟಿಕೊಡಬಹುದು. ಬೇಂದ್ರೆಯವರ ‘ತಿರುಕರ ಪಿಡುಗು' ನಾಟಕದ ಮೇಲೆ ಬರೆಯಲಾದ ಉಲ್ಲೇಖ ರಂಗ ದೃಶ್ಯಾವಳಿಯಲ್ಲಿ ಇರಬೇಕಾದ ವಸ್ತುಗಳನ್ನು ಕುರಿತು ಲೇಖಕರು ಹೀಗೆ ಬರೆಯುತ್ತಾರೆ. "ಒಂದು ಬಂಗಲೆಯಲ್ಲಿಯ ಕೋಣೆ, ಒಂದು ಮಗ್ಗುಲಿಗೆ ಒಂದೆರಡು ಕುರ್ಚಿ; ಮೇಜಿನ ಮೇಲೆ ಟೀ-ಕಪ್ಪು-ಬಸಿ; ಒಂದು ಗಡಿಯಾರ, ಅದರೊತ್ತಿಗೆ ಹಜಾಮತೀ ಸಾಮಾನು. ಇದುರಿಗೆ ಒಂದು ಕನ್ನಡಿ; ಆಕಡೆ ಒಂದು ಫೆನೋ. ಬದಿಯಲ್ಲಿ ಒಂದು ನಾಲ್ಕು ಪುಸ್ತಕ. ಈ ಕಡೆ ಒಂದು ಶೆಲ್ಪು; ಅದರಲ್ಲಿ ಕಿಟ್ಲಿ, ಸ್ಟೋ, ಸೋಸಕ, ಸಾಬಾಣದ ಡಬ್ಬಿ! ರದಫೇನ್ ಡೆಂಟಲ್ ಕ್ರೀಮು; ಕುಂತಲ ರಂಜಿತ ತೈಲ; ಹಿಮಾನಿಯಾ ಸ್ನೋ, ಹೇರ್ ಪೆಮ್ಯಡೋದ ಡಬ್ಬಿ ಮೊದಲಾದವುಗಳು. ಬದಿಯಲ್ಲಿ ಒಂದು ಹಾರ್ಮೋನಿಯಂ; ಇತ್ತ ಬಾಗಿಲ ಬದಿಯಲ್ಲಿ ಒಂದೆರಡು ಜೋಡಿ ಕಾಲ್ಮರಿ; ಒಂದು ಜೋಡು ಸ್ಲಿಪ್ಪರು; ಒಂದು ಜೋಡಿ ಶೂ, ಇನ್ನೊಂದು ಜೋಡಿ ಕೆಡ್ಸ ಕಾನ್ ವ್ಹಾಸ್ ಶೂ, ಗೋಡೆಗೆ ಬ್ಯಾಡ್ಡಿಂಟನ್ ರಾಕೆಟ್ಟು ಟೇನಿಸ್ ರಾಕೆಟ್ಟೂ ಇವೆ. ನೆಲದ ಮೇಲೆ ಒಂದೆರಡು ಚೆಂಡುಗಳು ಉರುಳಾಡುತ್ತಿವೆ. ಇತ್ತಕಡೆ ಒಂದು ಆಮ್ಚೇರು".(ಪುಟ 8, ತಿರುಕರ ಪಿಡುಗು, ದರಾ ಬೇಂದ್ರೆ, ಶ್ರೀಮತ ಪ್ರಕಾಶನ, ಧಾರವಾಡ 2008)  ಈ ಕ್ರಮದಲ್ಲಿ ನಾಟಕದ ದೃಶ್ಯದ ಆರಂಭದಲ್ಲಿ ರಂಗಸಜ್ಜಿಕೆಯಲ್ಲಿ ಇರಬೇಕಾದ ವಿವರಗಳನ್ನು ನಾಟಕಕಾರರು ನೀಡುತ್ತಾರೆ. ಕುತೂಹಲವೆನಿಸುವುದು ರದಫೇನ್ ಡೆಂಟಲ್ ಕ್ರೀಮು, ಕುಂತಲ ರಂಜಿತ ತೈಲ ಮತ್ತು ಹಿಮಾನಿಯಾ ಸ್ನೋ ಇತ್ಯಾದಿ ಮೇಕಪ್ ಸಾಮಾಗ್ರಿಗಳು ಇರಬೇಕೆಂದು ನಾಟಕಕಾರರ ಸೂಚನೆ ಎರಡನೇ ದೃಶ್ಯದ ಆರಂಭಿಕ ಬ್ರಾಕೇಟಿನಲ್ಲಿದೆ. ಈ ಅಂಶವನ್ನು ಯಾಕೆ ಪ್ರಧಾನವಾಗಿ ಗಮನಿಸಬೇಕು ಎಂದರೆ ರಂಗಸ್ಥಳದಲ್ಲಿ ಇವು ಕಾಣುತ್ತವೆಯೇ ಎನ್ನುವ ಪ್ರಮುಖ ಪ್ರಶ್ನೆಯ ಮೂಲಕ ನಾಟಕವನ್ನು ಅಭ್ಯಾಸ ಮಾಡಿದರೆ ರಂಗಭಾಷೆಯ ಆಯಾಮಗಳು ದಕ್ಕುತ್ತವೆ. ಅನುಕೂಲಕ್ಕೆ ನಾಟಕಕಾರರು ಬರೆದಿರಬಹುದು ಎಂದು ಮೇಲ್ನೋಟದಲ್ಲಿ ಗಮನಿಸುವಂತಿಲ್ಲ. ರಂಗ ಸೂಕ್ಷ್ಮಗಳು ನಾಟಕಕಾರನ ಸೂಕ್ಷ್ಮಗಳೂ ಆಗಿರುವಾಗ ನಾಟಕ ಅಭಿವ್ಯಕ್ತಿಯಲ್ಲಿ ರಸೋತ್ಪತ್ತಿಗೆ ಅವಕಾಶವಾಗುತ್ತದೆ ಎಂಬುದೂ ಕೂಡ ಸತ್ಯ. 

‘ತಿರುಕರ ಪಿಡುಗು' ಎನ್ನುವ ನಾಟಕದಲ್ಲಿ  ಭಿಕ್ಷೆ ಬೇಡುವವರನ್ನಾ ಸಮಾಜದಿಂದ ಉಚ್ಚಾಟಿಸಬೇಕು ಎಂಬ ನಿಲುವನ್ನು ತಳೆದ ಮಿಸ್ಟರ್ ನಾಯಕನ ಪಾತ್ರ ಭಿಕ್ಷೆ ಬೇಡುವವರ ಸಾಮಾಜಿಕ ಸ್ಥಿತಿಯನ್ನು ನಿರಾಕರಿಸಿ ಆದರ್ಶಪ್ರಾಯವಾದ ಸ್ಥಿತಿಯಲ್ಲಿ ನೋಡಲು ಬಯಸುತ್ತದೆ. ಆದರೆ ಹೀಗೆ ಬೇಡುವವರ ಅಭದ್ರತೆಗೆ ಪ್ರಮುಖ ಕಾರಣ ಯಾರು? ಮತ್ತು ಯಾಕೆ? ಎನ್ನುವ ಪ್ರಶ್ನೆಗಳು  ನಾಟಕದಲ್ಲಿ ರೂಪಕಾತ್ಮಕವಾಗಿದೆ. ಬೇಡುವುದನ್ನು ಬಿಟ್ಟು ಉದ್ಯೋಗಸ್ಥರಾಗಬೇಕೆನ್ನುವ ನಾಟಕದ ನಿಲುವು ಆದರ್ಶವಾಗಿ ಕಾಣುತ್ತದೆ. ನಾಟಕದ ನಾಯಕ ಭಿಕ್ಷೋಚ್ಚಾಟನ ಸಂಘವನ್ನು ಸ್ಥಾಪಿಸಬೇಕು ಎನ್ನುವುದು ದೊಡ್ಡ ಅಣಕದಂತೆ ಕಾಣುತ್ತದೆ. ಶ್ರೀಮಂತರ ಹೃದಯ ದಾರಿದ್ರ್ಯ ಮತ್ತು ನಿರ್ಗತಿಕರ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಬೇಕಾದ ಸೂಚನೆಗಳು ನಾಟಕದ ಆಶಯದಲ್ಲಿ ಕಾಣುತ್ತವೆ. ಆದರೆ ಅವು ನಾಟಕದಲ್ಲಿ ಗೋಚರಿಸುವುದಿಲ್ಲ. 

‘ತಿರುಕರ ಪಿಡುಗು' ನಾಟಕವನ್ನು ಹಲವು ಬಗೆಯ ಭಿಕ್ಷುಕರ ಏಕಪಾತ್ರಾಭಿನಯವೆನ್ನಬಹುದು. ಇಲ್ಲಿ ಸಂವಹನಕ್ಕೆ ಒಳಗಾಗುವುದು ವಿಚಾರವೇ ಹೊರತು ನಾಟಕೀಯತೆಯಲ್ಲ. ನಾಟ್ಯಶಾಸ್ತ್ರದಲ್ಲಿ ಹೇಳುವಂತೆ "ಮನುಷ್ಯರ ಕಥೆಗಳಿದ್ದ ನಾಟಕಗಳನ್ನು ಸುಕುಮಾರ ಪ್ರಯೋಗ"ಎನ್ನಬಹುದು. ಈ ಅರ್ಥದಲ್ಲಿ ತಿರುಕರ ಪಿಡುಗು ನಾಟಕ ಹಲವು ಮನುಷ್ಯ ಪಾತ್ರಗಳ ಪ್ರಹಸನ. ನಾಟಕದೊಳಗೆ ವಸ್ತುವಿಗೆ ಪೂರ್ವಕವಾಗಿ ಪ್ರಹಸನಗಳು ದುಡಿದರೆ ನಾಟಕ ಕಳೆಗಟ್ಟುತ್ತದೆ. ಆದರೆ ಇಲ್ಲಿ ಪ್ರಹಸನಗಳೆ ನಾಟಕ ವಾಗಲು ಪ್ರಯತ್ನ ಪಟ್ಟಂತೆ ತೋರುತ್ತದೆ. ಈ ಸಾಧ್ಯತೆಯನ್ನು ನಾಟಕ ಸಾಹಿತ್ಯ ಮತ್ತು ರಂಗದಲ್ಲಿ ಒಂದು ಪ್ರಯೋಗವೆಂದು ಪರಿಗಣಿಸಬಹುದು. 

ನಾಟಕದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಸೂತ್ರಧಾರನ ಪ್ರವೇಶವಿದೆ. ಈ ಸೂತ್ರದಾರ ಮುಂಡಾಸಿಲ್ಲದೆ ಪ್ರವೇಶವನ್ನು ಪಡೆಯುತ್ತಾನೆ. ಸಿದ್ಧಮಾದರಿಯ ಸೂತ್ರದಾರನಿಗಿಂತ ಭಿನ್ನವಾಗಿ ರಂಗದ ಮೇಲೆ ಕಾಣಿಸಿಕೊಳ್ಳುತ್ತಾನೆ. ಸೂತ್ರದಾರ 'ನಾನು ಡ್ರಾಮ್ಯಾಟಿಕ್ ಸೆಕ್ರೆಟರಿ-ಗ್ಯಾದರಿಂಗ್ ದೊಳಗಿನ ನಾಟಕ ಡಿಪಾರ್ಟಮೆಂಟಿನ್ಯಾಗ ಸೂತ್ರದಾರ ಇದ್ಹಾಂಗ' ಎಂದು ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಾನೆ. ಈ ನಾಟಕದ ಮಿಸ್ಟರ್ ನಾಯಕ ಎನ್ನುವ ಪಾತ್ರದಾರಿ ತನ್ನ ಜೀವನವನ್ನು ಒಂದು ವೇಳಾಪಟ್ಟಿಗೆ ನಿಯೋಜಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ. ಅವನ ದಿನಚರಿ ಸಂಪೂರ್ಣ ಕರಾರುವಕ್ಕು. ಎಲ್ಲವೂ ಕಾಲಕಾಲಕ್ಕೆ ನಡೆಯಬೇಕು ಎಂದು ತೀರ್ಮಾನಿಸಿರುವ ನಾಯಕನ ವೇಳಾಪಟ್ಟಿಯನ್ನು ಬ್ರಾಹ್ಮಣ ವಿಧವೆ, ದಾಸ, ವಾರದ ಹುಡುಗ, ದೇಶ ಸೇವಕ, ಬುಡಬುಡುಕೆ, ಜಂಗಮ ಮುಂತಾದ ಭಿಕ್ಷುಕರು ಬಂದು ಅಸ್ತವ್ಯಸ್ತ ಮಾಡುತ್ತಾರೆ. ಇದರಿಂದ ಬೇಸತ್ತ ನಾಯಕ ಭಿಕ್ಷೋಚ್ಚಾಟನ ಸಂಘವನ್ನು ಸ್ಥಾಪಿಸಬೇಕೆಂದು ತೀರ್ಮಾನಿಸುತ್ತಾನೆ. ಮಿಸ್ಟರ್ ನಾಯಕ ಮತ್ತು ಭಿಕ್ಷುಕರ ನಡುವೆ ನಡೆಯುವ ಮಾತುಗಳು ಅಸಮಾನತೆಯ ಅನೇಕ ಸಾಮಾಜಿಕ ಸಂಘರ್ಷಗಳನ್ನು ಮೌನವಾಗಿ ನಮ್ಮ ಮುಂದೆ ನಾಟಕದ ಮೂಲಕ ಇಡುತ್ತದೆ. ಅಲ್ಲಲ್ಲಿ ನಗೆಯ ಬುಗ್ಗೆಗಳು ಕಂಡರು ನಾಟಕದ ಅಂತರಂಗದಲ್ಲಿ ವಿವೇಕ ಮಡುಗಟ್ಟುತ್ತದೆ. 

ನಾಟಕದ ಕಥಾವಸ್ತುವಿನಲ್ಲಿ ಪ್ಲೇಗಿನಿಂದ ಬೇಸತ್ತ ಜನರು ಊರು ಬಿಡುವ ಮತ್ತು ಹಸಿವು ಬಾಯಾರಿಕೆಗಳಿಂದ ಭಿಕ್ಷೆ ಬೇಡುವ ಸ್ಥಿತಿ ಎದುರಾಗುವುದನ್ನು ನಾಟಕಕಾರರು ಸೂಚ್ಯವಾಗಿ ಹೇಳಲು ಪ್ರಯತ್ನಿಸಿದ್ದಾರೆ. 'ಲಕ್ಷ್ಮೀ ವೆಂಕಟೇಶಾಯ ನಮಃ' ಎಂದು ಆಚಾರ್ಯನೊಬ್ಬ ಪ್ರವೇಶಿಸಿದಾಗ ನಾಯಕನ ಪಾತ್ರದಾರಿ ಹಜಾಮತಿಯನ್ನು ಮಾಡಿಕೊಳ್ಳುತ್ತಿರುತ್ತಾನೆ. ಆಚಾರ್ಯನ ಆಗಮನವಾದ ಕೂಡಲೆ 'ನಿಮಗಾಗಿ ಭತ್ತ ಕುಟ್ಟಿ, ಅಕ್ಕಿ ಬೇರೆ ಮಾಡಿ'ತೆಗೆದು ಇಟ್ಟಿದ್ದೇನೆ ಬರಬೇಕು ಎಂದು ಮಿಸ್ಟರ್ ನಾಯಕ ಪ್ರತಿಕ್ರಿಯಿಸುತ್ತಾನೆ. ನಂತರ ಬರುವ ಬ್ರಾಹ್ಮಣ ವಿದವೆ ಗೋಪಾಳ ಹಾಕಿ ಎಂದು ಬೇಡಿದಾಗ "ಈ ಶುಕ್ಲೂತಿ ಬೇಡೋದರಕ್ಕಿಂತ, ಸರಕಾರದ ಮ್ಯಾಲೆ ಪೇಟಗಿ ದಾವೆ ಮಾಡ್ರಿ; ದಾವೇ ಇಲ್ದಿದ್ರ, ಸತೀ ಹೋಗಲಿಕ್ಕೆ ಪರವಾನಿಗಿ ಕೊಡ್ರಿ ಅಂತ ಅನ್ರಿ. ಧಮಾ ಕಮಾ ಅಂತ ನಾವು ಭಿಕ್ಷಾ ಹಾಕೋದು! ಹಿಂದುಸ್ತಾನದಾಗ ಎಲ್ಲಾ ಛಲೋ ಅದs. ಬಡ್ತನಾ, ಭಿಕ್ಷುಕರ ಭವಣಿ! ಏನಿಲ್ಲಾ ಅಂತ ಸರಕಾರ ತಿಳಕೊಂಬೋದು!!"ಎಂಬ ನಾಯಕನ ಮಾತು ಉಳ್ಳವರ ಮಾತಿನ ದರ್ಪವನ್ನು ದಾಖಲಿಸುತ್ತದೆ. ವಿವೇಕವೆನ್ನುವುದು ಎಷ್ಟು ಅಮೂಲ್ಯವೆಂದು ಅರಿವಿಗೆ ಬರುತ್ತದೆ. ಬ್ರಾಹ್ಮಣ ವಿಧುವೆಯ ನಂತರ ಗೋವಿಂದ... ಗೋವಿಂದಾ... ಎಂದು ಬಂದ ದಾಸಯ್ಯನನ್ನು ಕುರಿತು 'ಸುಣ್ಣ ಹಚ್ಚಿಕೊಂಡು ಬಂದ ಕೂಡ್ಲೆ, ದೊಡ್ಡ ದಾಸನಾಗಿ ಬಿಟ್ಟೇನು? ನಿಮ್ಮ ಗುರು ಕನಕದಾಸಾನಾ'ಎಂದು ಕೇಳುವಾಗ ಪಾತ್ರದ ಅಸೂಕ್ಷ್ಮತೆ ಎದ್ದು ಕಾಣುತ್ತದೆ. ನಂತರ ಬರುವ ಜೋಗಮ್ಮ ನನ್ನು ಕುರಿತು, ಅವಳ ವೇಷಭೂಷಣವನ್ನು ಕುರಿತು ಮಿಸ್ಟರ್ ನಾಯಕನ ಪಾತ್ರ ಲಘುವಾಗಿ ಟೀಕಿಸುತ್ತದೆ. ಹಾಡಿಕೊಂಡು ಬರುವ ದಾಸರ ವಿಚಾರ ಬಂದಾಗ ಪುರಂದರದಾಸರ ಉಲ್ಲೇಖವನ್ನು ತಂದು ನಾಯಕನ ಪಾತ್ರ ವ್ಯಂಗ್ಯವಾಡುತ್ತದೆ. "ಇಂಗ್ರೇಜೀ ಸರಕಾರದವರು, ನೀರೊಳಗೆ ಹಾದಿ ಮಾಡ್ಯಾರ; ನೆಲದ ಮ್ಯಾಲ ಮಾಡ್ಯರ!ಗಾಳೀ ಮ್ಯಾಲ ಮಾಡ್ಯಾರ!! ವೈಕುಂಠ ಕೊಂದು ಹಾದೀ ಮಾಡಬಾರ್ದ ಪುಣ್ಯವಂತರು!!! ಹಾಂಗಾದ್ರ ಹಿಂದುಸ್ತಾನದಾಗ ಬಡತನ ಏನೂ ಉಳೀಲಿಕ್ಕಿಲ್ಲಾ..."ಎಂದು ಸರ್ಕಾರವನ್ನು ಮತ್ತು ವ್ಯವಸ್ಥೆಯನ್ನು ಟೀಕಿಸುವ ಮಿಸ್ಟರ್ ಪಾತ್ರಧಾರಿಯ ಸಾಮಾಜಿಕ ಕಣ್ಣು ನಾಟಕ ಓದುಗರಿಗೆ ಮತ್ತು ನೋಡುಗರಿಗೆ ಅರಿವಿಗೆ ಬರುತ್ತದೆ. 

ಹಾರ್ಮೋನಿಯಮ್ ಹಿಡಿದು ಬರುವ ಜಂಗಮ, ವಾರದೂಟಕ್ಕೆ ಬಂದಿರುವ ವಾರನ್ನದ ಹುಡುಗ ಬೇಡುತ್ತಾ ಬರುವ ಮಧುಕರಿ ಹುಡುಗನನ್ನು ಕುರಿತೂ ಕೂಡ ಮಿಸ್ಟರ್ ನಾಯಕ ತುಂಬಾ ಲಘುವಾಗಿ ಚುಚ್ಚು ಮಾತುಗಳನ್ನಾಡುತ್ತಾನೆ. ಮುಂದೆ ದೇಶ ಸೇವಕನೊಬ್ಬ ರಾಷ್ಟ್ರೀಯ ಫಂಡಿಗಾಗಿ ಸೈಕಲ್ ಹತ್ತಿಕೊಂಡು ಬಂದಾಗ ಮಿಸ್ಟರ್ ನಾಯಕನ ಪಾತ್ರದ ಮೂಲಕ ನಾಟಕಕಾರರು ಆಡಿಸುವ ಮಾತುಗಳಂತು ಮೇಲ್ನೋಟಕ್ಕೆ ಲಘು ವಿನೋದದಂತೆ ಕಂಡರೂ ದೇಶಭಕ್ತಿ, ದೇಶಸೇವೆ, ಹಾಗೂ ರಾಷ್ಟ್ರದ ಕಟ್ಟುವಿಕೆ ಎಂದು ಮೇಲ್ವರ್ಗಗಳು ಮಾಡುತ್ತಿರುವ ಮತ್ತು ಮಾಡಿದ ಹುನ್ನಾರಗಳನ್ನು ನಾಟಕಕಾರರು ತುಂಬಾ ಸೂಕ್ಷ್ಮವಾಗಿ ಬಯಲಿಗೆಳದಿದ್ದಾರೆ. ನಂತರ ಮರಾಠಿ ಹಾಡನ್ನು ಹಾಡಿಕೊಂಡು ಬರುವ ಜೋಷಿಗನನ್ನು ಕುರಿತು 'ಮಹಾರಾಷ್ಟ್ರವನ್ನು ಏಕೆ ಬಿಟ್ಟೆ ನೀನು' ಎಂದು ಕೇಳುವ ಪ್ರಶ್ನೆ ನಾಟಕಕಾರರು ಸ್ಥಾಪಿಸಲು ಹೊರಟಿರುವ ಭಾಷಾಭಿಮಾನವನ್ನು ಮತ್ತು ನಾಡಿನ ಬಗೆಗಿನ ಅಭಿಮಾನ, ಗೌರವಗಳನ್ನು ದಾಖಲಿಸುತ್ತದೆ. ನಾಟಕದ ಕಡೆಗೆ ಬೇಡುತ್ತಾ ಬರುವ ಗೊಲ್ಲರಾಕೆಯನ್ನು ಕುರಿತು ಕೂಡ ಮಿಸ್ಟರ್ ನಾಯಕ ಲಘುವಾದ ಧೋರಣೆಗಳ ಮೂಲಕ ಚುಚ್ಚು ಮಾತುಗಳನ್ನಾಡುತ್ತಾನೆ. ಇಡೀ ನಾಟಕದಲ್ಲಿ ಬರುವ ಯಾವ ಭಿಕ್ಷುಕ ಪಾತ್ರಗಳೂ ಕೂಡ ಮಾತನಾಡದೆ ಕೇವಲ ತಮ್ಮ ವೇಷಭೂಷಣ, ಆಂಗಿಕ ಹಾಗೂ ಆಹಾರ್ಯ ವಾಚಿಕಗಳಿಂದ ಪ್ರಕಟಗೊಳ್ಳುತ್ತಾರೆ. ತಿರುಕರ ಆಗಮನವನ್ನು ಕಂಡ ಮಿಸ್ಟರ್ ನಾಯಕ ತನ್ನ ಅಸಹನೆಯನ್ನು ಹಲವೆಡೆ ಲಘುವಾದ ಮಾತುಗಳಿಂದ ಒಬ್ಬನೇ ಮಾತನಾಡುತ್ತಾನೆ. ಇದು ಮಾತನಾಡುವವರ, ಮಾತನಾಡದವರ ಹಾಗೂ ಮಾತನ್ನೇ ಬಂಡವಾಳವನ್ನಾಗಿ ಮಾಡಿಕೊಂಡವರ ಮನಸ್ಥಿತಿಗಳ ಹಲವು ಆಯಾಮಗಳನ್ನು ತೆರೆದು ತೋರುತ್ತದೆ. 

 "1924 ರಲ್ಲಿ ಬೇಂದ್ರೆಯವರು ರಚಿಸಿದ ನಾಟಕವಿದು ಆ ಹೊತ್ತಿನಲ್ಲಿ ಕಾಂಗ್ರೆಸ್ ಚಟುವಟಿಕೆಗಳಿಗಾಗಿ ಫಂಡ್ ಎತ್ತುವುದು ಭರದಿಂದ ನಡೆದದ್ದು ನೋಡಿ, ಸ್ಫುರಿಸಿದ ನಾಟಕ ಇದು. (ಪುಟ 27-28, ತಿರುಕರ ಪಿಡುಗು, ದರಾ ಬೇಂದ್ರೆ, ಶ್ರೀಮಾತಾ ಪ್ರಕಾಶನ, ಧಾರವಾಡ 2008) ಎಂಬ ಮಾತು ಈ ಕಾಲಕ್ಕೂ ಮತ್ತೊಂದು ಬಗೆಯಲ್ಲಿ ಮುಖಾಮುಖಿಯಾಗುತ್ತಿದೆ. ಹಾಸ್ಯದ ಶೈಲಿಯಲ್ಲಿ ಬಳಕೆಯಾಗಿರುವ ಆಡುಭಾಷೆ ಪರಿಣಾಮಕಾರಿಯಾಗಿದೆ. ಉಳ್ಳವರು ಮತ್ತು ಇಲ್ಲದವರ ಪಾತ್ರಗಳ ವೇಷವನ್ನು ಕುರಿತ ತೀಕ್ಷ್ಣ ಟೀಕೆಯೂ ಆಗಿದೆ. ಇಲ್ಲಿ ಹಾಸ್ಯ ಮಾಡುವವನೇ ನಗೆಪಾಟಲಿಗೆ ಗುರಿಯಾಗುತ್ತಾನೆ. ಕೊಡದವನ ಹೃದಯ ದಾರಿದ್ರ್ಯತೆ ನಾಟಕ ಕನ್ನಡಿಯಾಗಿದೆ. ಈ ನಾಟಕ ಕೇವಲ ತಿರುಕರ ಪಿಡುಗು ಮಾತ್ರವಲ್ಲ ಧನಿಕರ ಪಿಡುಗೂ ಎಂಬುದನ್ನು ಕಥಾವಸ್ತು ಹಿನ್ನಲೆಯಲ್ಲಿ ಪ್ರಸ್ತಾಪಿಸುತ್ತದೆ. 

ಬೇಂದ್ರೆಯವರು ದಾಖಲಿಸುವಂತೆ ಧಾರವಾಡದ ಕರ್ನಾಟಕ ಕಾಲೇಜಿಗೆ ಆಗಮಿಸಿದ 'ಬಿ.ಎಂ.ಶ್ರೀ' ಅವರ ಎದುರು ನಾಟಕವನ್ನು ವಾಚಿಸುತ್ತಾರೆ. ನಂತರ ಬಿ.ಎಂ.ಶ್ರೀ ಅವರ ಭಾಷಣ ಕೇಳಲಿಕ್ಕೆ ಯಾರೂ ಉಳಿಯಲಿಲ್ಲ. ಎನ್ನುವ ಪ್ರಸ್ತಾಪ ಹಾಗೂ ತಿರುಕರ ಪಿಡುಗು ಎಂಬ ಹುಚ್ಚಾಟ ನೋಡಿ ಅನೇಕಾನೇಕ ಸಾಮಾಜಿಕರು ಹೊಟ್ಟೆ ತುಂಬಿ ನಕ್ಕಿದ್ದಾರೆ ಎನ್ನುವ  ವಿವರ ತಿರುಕರ ಪಿಡುಗು ನಾಟಕ ನಿಂತಿರುವ ಕೇಂದ್ರ ಆಶಯವನ್ನು ಪ್ರಸ್ತಾಪಿಸುತ್ತದೆ. ಒಂದು ಕಡೆ ತಿರುಕರ ಪಿಡುಗಿನ ವಿರುದ್ಧವಾಗಿ ಆಟ ಹೂಡದಿದ್ದರೆ ತಿರುಕರ ಕಾಯಕಕ್ಕೆ ಸಂಚಕಾರ ಬರುವುದೆಂಬ ಭೀತಿಯಿಂದ ತಿರುಕರ ಸಂಘದವರು "ತಿರುಕರ ಪಿಡುಗು"ಆಡಿಸಿದರು". ಎನ್ನುವ ಮತ್ತೊಂದು ಪ್ರಸ್ತಾಪ ನಾಟಕದ ವಸ್ತು ನಿರೂಪಣೆ ಅಭಿವ್ಯಕ್ತಿ ಮತ್ತು ಸಾಮಾಜಿಕ ಪ್ರಭಾವವನ್ನು ವಿವಿಧ ಆಯಾಮಗಳಲ್ಲಿ ಪ್ರವೇಶಿಸುವಂತೆ ನಾಟಕ ಅಪೇಕ್ಷಿಸುತ್ತದೆ. 

ಈ ನಾಟಕ ರಚನೆಯಾದ ಕಾಲ ಹಲವು ಸಾಮಾಜಿಕ ಪಿಡುಗುಗಳ ಕಾಲ. ಕುಟುಂಬ ಮತ್ತು ವ್ಯವಸ್ಥೆ ಆಯ ತಪ್ಪಿ ನಡೆಯುತ್ತಿರುವಾಗ ನಾಟಕದ ಮೂಲಕ ಉಪಮೆ ರೂಪಕಗಳ ಹೇರಿಕೆಯಿಲ್ಲದೇ ಸರಳ ಮತ್ತು ಸಹಜ ನಿರೂಪಣೆಗಳ ಮೂಲಕ ಬೇಂದ್ರೆಯವರು ತಮ್ಮೆಲ್ಲಾ ನಾಟಕಗಳನ್ನು ರಚಿಸಿದ್ದಾರೆ. `ತಿರುಕರ ಪಿಡುಗು' ನಾಟಕ  ಸಾಮಾಜಿಕ ಅಸಮಾನತೆಯ ವೇಷಗಳನ್ನು ತೊಟ್ಟ ಹಲವರ ಸಂಕಟಗಳನ್ನು ತೋರುತ್ತಲೇ ಸಾಮಾಜಿಕ ವಿವೇಕವನ್ನು ಕಟ್ಟಿಕೊಡುತ್ತದೆ. ತಿರುಕರ ಪಿಡುಗು ರಂಗಭಾಷೆಯ ದೃಷ್ಟಿಯಿಂದ ಪ್ರಯೋಗಗಳಿಗೆ ಹೆಚ್ಚು ಅವಕಾಶವಿರದೇ ಇದ್ದರೂ ಸಾಮಾಜಿಕ ಕಳಕಳಿಯನ್ನು ದಾಖಲಿಸುವ ನಾಟಕ ಇದಾಗಿದೆ.  

***
ಈ ಸರಣಿಯ ಹಿಂದಿನ ಬರೆಹಗಳು: 
ರೋಗ ಮತ್ತು ಅಧಿಕಾರ : ಬೇಂದ್ರೆಯವರ ಜಾತ್ರೆ ನಾಟಕ ಸಮಕಾಲೀನ ಅಸಂಗತ ಅಭಿವ್ಯಕ್ತಿ
ಬೇಂದ್ರೆ ನಾಟಕಗಳ ರಂಗ ಪ್ರವೇಶಕ್ಕೆ ಇದು ಸಕಾಲ

 

 

 

 

 

MORE FEATURES

ಗಜಲ್ ಕನ್ನಡ ಸಾಹಿತ್ಯದಲ್ಲಿ ಮಹತ್ತರವಾದ ಕಾವ್ಯ ಶಕ್ತಿಯಾಗಿ ಬೆಳೆಯುತ್ತಿದೆ

27-04-2024 ಬೆಂಗಳೂರು

"ಗಜಲ್ ನ ಕಾವ್ಯ ಬೀಜ ಮೊಳಕೆಯೊಡೆಯಲು ಆರಂಭಿಸಿದಾಗ ಶಾಂತರಸರ ಮಗಳಾದ ಶ್ರೀಮತಿ ಮುಕ್ತಾಯಕ್ಕನವರು ನೀರೆರೆದು ಪೋಷಿಸಿ ...

ಒಂದೆಲೆ ಮೇಲೆ ಕಾಡನ್ನು ನೋಡುವ ಮುನ್ನ

20-04-2024 ಬೆಂಗಳೂರು

"ಸುಳ್ಳು ಸುಳ್ಳು ಪುಸ್ತಕಗಳ ಕಾಲ ಅಂತಲೂ ಮುಂದೊಮ್ಮೆ ಈ ಕಾಲವನ್ನು ನೆನಪಿಸಿಕೊಳ್ಳುವ ಪ್ರಕಾಶನ ಕ್ಷೇತ್ರದಲ್ಲಿ ಹಾಡ್...

ಕಾಡಿನೊಳಗಿನ ಪ್ರಾಣಿ ಬದುಕಿನಲ್ಲಿ ಕಂಡು ಕೇಳರಿಯದ ಅಚ್ಚರಿಗಳಿವೆ

27-04-2024 ಬೆಂಗಳೂರು

'ಉಳಿವಿಗಾಗಿ ಓಡು, ಇಲ್ಲವೇ ಹೋರಾಡು' ಎನ್ನುವುದು ಸಸ್ಯಾಹಾರಿಗಳ ಪಾಡಾದರೆ 'ಹೋರಾಡಿ ಕೊಂದು ಹೊಟ್ಟೆ ತುಂಬಿಸ...