ವಾಸ್ತವ–ವಿಕಾಸಗಳ ನಡುವಿನ ಜೀಕುವಿಕೆ: ತೇಜಸ್ವಿಯವರ ಕರ್ವಾಲೊ

Date: 31-08-2021

Location: ಬೆಂಗಳೂರು


‘ತೇಜಸ್ವಿಯವರು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ವಿಶಿಷ್ಟ ಲೇಖಕ. ತಮ್ಮ ಬಹುಮುಖೀ ಆಸಕ್ತಿಗಳಿಂದ ಕನ್ನಡ ಜನಸಮುದಾಯವನ್ನು ಅಚ್ಚರಿಗೊಳಿಸಿದವರು’ ಎನ್ನುತ್ತಾರೆ ಲೇಖಕ ಶ್ರೀಧರ ಹೆಗಡೆ ಭದ್ರನ್. ಅವರು ತಮ್ಮ ಬದುಕಿನ ಬುತ್ತಿ ಅಂಕಣದಲ್ಲಿ ತೇಜಸ್ವಿಯವರ ಪ್ರಸಿದ್ಧ ಕಾದಂಬರಿಯಾದ ಕರ್ವಾಲೊ ಕುರಿತು ವಿಶ್ಲೇಷಿಸಿದ್ದಾರೆ.  

“ಸಾಹಿತ್ಯದಲ್ಲೂ ನಾವು ಯಾಂತ್ರಿಕ ಸಾಂಕೇತಿಕತೆಯೊಂದನ್ನು ಸಂಪ್ರದಾಯ ಮಾಡಿಕೊಂಡು ಸಹೃದಯ ಸ್ತೋಮವನ್ನು ಸೀಮಿತಗೊಳಿಸಿಕೊಳ್ಳುವುದೇ ಸಾಹಿತ್ಯ ರಚನೆಯ ಉದ್ದೇಶಗಳಲ್ಲಿ ಒಂದನ್ನಾಗಿ ಮಾಡಿಕೊಂಡರೆ ಅದು ರೋಗಗ್ರಸ್ತ ನಾಗರಿಕತೆಯ ಪರಾಕಾಷ್ಠೆ ಎಂದಷ್ಟೇ ಹೇಳಬಹುದು” ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮುನ್ನುಡಿಯಲ್ಲಿ ತೇಜಸ್ವಿಯವರು ಬರೆದ ಈ ಮಾತಿನಲ್ಲಿ ಸಾಂಕೇತಿಕತೆಯನ್ನೇ ಉದ್ದೇಶವನ್ನಾಗಿಸಿಕೊಂಡ ಒತ್ತಾಯಪೂರ್ವಕ ಸಾಹಿತ್ಯದ ನಿರಾಕರಣೆ ಹಾಗೂ ‘ಸಹೃದಯ ಸ್ತೋಮ’ವನ್ನು ಆಪ್ತವಾಗಿ ಒಳಗೊಳ್ಳಬೇಕೆಂಬ ಜೀವಪರ ದೃಷ್ಟಿಕೋನಗಳು ಎದ್ದು ಕಾಣುತ್ತವೆ. ತಮ್ಮ ಸಾಹಿತ್ಯ ರಚನೆಯ ಉದ್ದಕ್ಕೂ ಈ ಬದ್ಧತೆಯನ್ನು ಉಳಿಸಿಕೊಂಡ ಬರೆಹಗಾರ ಕೆ. ಪಿ. ಪೂರ್ಣಚಂದ್ರ ತೇಜಸ್ವಿ.

ತೇಜಸ್ವಿಯವರು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ವಿಶಿಷ್ಟ ಲೇಖಕ. ತಮ್ಮ ಬಹುಮುಖೀ ಆಸಕ್ತಿಗಳಿಂದ ಕನ್ನಡ ಜನಸಮುದಾಯವನ್ನು ಅಚ್ಚರಿಗೊಳಿಸಿದವರು. ಬರೆವಣಿಗೆ, ಕೃಷಿ, ಫೋಟೋಗ್ರಫಿ, ತಂತ್ರಜ್ಞಾನ, ಚಿತ್ರಕಲೆ, ಮೀನು ಹಿಡಿಯುವುದು ಹೀಗೆ ಅವರ ಆಸಕ್ತಿ ವೈವಿಧ್ಯಮಯವಾದುದು. ಕಳೆದ ಶತಮಾನದ ಎಂಬತ್ತರ ದಶಕದ ಆರಂಭದಲ್ಲಿ ಪ್ರಕಟವಾದ ‘ಕರ್ವಾಲೊ’ ಇದುವರೆಗೆ ಹತ್ತಿರ ಹತ್ತಿರ ಐವತ್ತು ಮುದ್ರಣಗಳನ್ನು ಕಂಡಿರುವ ಕಾದಂಬರಿ. ಆ ಮೊದಲು ಹುಲಿಯೂರಿನ ಸರಹದ್ದು ಹಾಗೂ ಅಬಚೂರಿನ ಪೋಸ್ಟಾಫೀಸು ಎಂಬ ಕಥಾ ಸಂಕಲನಗಳು ಮತ್ತು ಸ್ವರೂಪ ಹಾಗೂ ನಿಗೂಢ ಮನುಷ್ಯರು ಎಂಬೆರಡು ಕಿರು ಕಾದಂಬರಿಗಳನ್ನು ಬರೆದು ಸಾಹಿತ್ಯ ಪ್ರಪಂಚದಲ್ಲಿ ತಮ್ಮ ಛಾಪನ್ನು ಒತ್ತಿದ್ದ ತೇಜಸ್ವಿಯವರ ಬರೆವಣಿಗೆಯನ್ನು ಹೊಸ ಮಗ್ಗುಲಿಗೆ ಕೊಂಡೊಯ್ದ ಕೃತಿ; ಕರ್ವಾಲೊ. ಸಾಂಪ್ರದಾಯಿಕ ನಿರೂಪಣಾ ವಿಧಾನವನ್ನೆ ಅನುಸರಿಸಿರುವ ಕಾದಂಬರಿಯಲ್ಲಿ ನಿರೂಪಕನೂ ಒಂದು ಪಾತ್ರವಾಗಿ ಕಾದಂಬರಿಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾ ಸಾಗುತ್ತಾನೆ. ಮಲೆನಾಡಿನ ಮೂಡಿಗೆರೆಯ ಪ್ರಾಕೃತಿಕ  ಪರಿಸರದಲ್ಲಿ ನಡೆಯುವ ಕಥನ ಹಾರುವ ಓತಿಯನ್ನು ಕಂಡುಹಿಡಿಯುವ ಉದ್ದೇಶಕ್ಕೆ ಬದ್ಧನಾದ ಕೀಟ ಶಾಸ್ತ್ರಜ್ಞ, ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ ಕರ್ವಾಲೊನ ಕಥೆಯೊಡನೆ ತಳುಕು ಹಾಕಿಕೊಂಡಿದೆ. ಇದರೊಂದಿಗೆ ಇನ್ನಿತರ ಪಾತ್ರಗಳಾದ ಮಂದಣ್ಣ, ಪ್ರಭಾಕರ, ಎಂಗ್ಟ, ಕರಿಯಪ್ಪ, ಪ್ಯಾರ, ನಿರೂಪಕ ಇವರೆಲ್ಲರ ಜೀವನದ ವಿವರಗಳು, ಸಮಸ್ಯೆಗಳು, ಹಂಬಲಗಳು ಸೇರಿಕೊಂಡು ಕಾದಂಬರಿಯ ಪರಿಸರ ಸೃಷ್ಟಿಯಾಗಿದೆ. 

ಮೈಸೂರಿನಲ್ಲಿರುವ ತಮ್ಮ ತಂದೆಯವರಿಗೆ ಜೇನುತುಪ್ಪ ಬೇಕೆಂದು ನಿರೂಪಕರು ಮೂಡಿಗೆರೆಯ ಜೇನು ಪೋಷಕರ ಸಹಕಾರಿ ಸಂಘಕ್ಕೆ ಬರುವುದರೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಆ ವರ್ಷ ನಿಸರ್ಗದ ವೈಚಿತ್ರ್ಯ ಕಾರಣವಾಗಿ ಜೇನುತುಪ್ಪದ ಉತ್ಪಾದನೆ ಅಧಿಕವಾಗಿದೆ. ಸೀಮೆ ಎಣ್ನೆ ತುಂಬುವಂತಹ ಟಿನ್ ಗಳಲ್ಲಿ ತುಂಬಿಡುವಷ್ಟು ಹೇರಳ ಉತ್ಪಾದನೆಯಿದೆ. ಜೇನುತುಪ್ಪವೆಂದರೆ ತುಂಬಾ ಅಮೂಲ್ಯವಾದುದು ಎಂಬ ತಿಳಿವಳಿಕೆಯಿಂದ ಹೋಗಿದ್ದ ನಿರೂಪಕರು ಕಕ್ಕಾಬಿಕ್ಕಿಯಾಗುತ್ತಾರೆ. ಆಗ ಅಲ್ಲಿ ಹಂಗಾಮಿ ‘ಬೀಕೀಪರ್’ ಆಗಿದ್ದ ಮಂದಣ್ಣನ ಪರಿಚಯವಾಗುತ್ತದೆ. ಈ ಮಂದಣ್ಣ ಒಬ್ಬ ಉತ್ತಮ ಪ್ರಕೃತಿ ತಜ್ಞ. ಆದರೆ ಅವನಲ್ಲಿ ಶೈಕ್ಷಣಿಕ ಶಿಸ್ತಿಲ್ಲ. ಆದರೆ ಸ್ಥಳೀಯ ಪರಿಸರದ ನಿಗೂಢಗಳು ಅವನಿಗೆ ತಿಳಿದಿವೆ. ಆದರೆ ಅವನ ಜೀವನದ ಏಕಮಾತ್ರ ಉದ್ದೇಶವೆಂದರೆ ನಾರ್ವೆ ರಾಮಯ್ಯನ ಮಗಳನ್ನು ಮದುವೆಯಾಗುವುದು.

ಏಲಕ್ಕಿ ತೋಟಕ್ಕೆ ಹುಳಬಿದ್ದು ಬೇಸತ್ತು ಹೋದ ನಾರ್ವೆ ರಾಮಯ್ಯ ಅದರ ಸಹವಾಸ ಬಿಟ್ಟು ಮೂಡಿಗೆರೆಗೆ ಬಂದು ನೆಲೆಸಿರುತ್ತಾನೆ. ಅವನ ಮಗಳು ರಾಮಿಯನ್ನು ಮದುವೆಯಾಗುವುದು ಮಂದಣ್ಣನ ಜೀವಮಾನದ ಕನಸು. ಆದರೆ ರಾಮಯ್ಯನಿಗೆ ಇದು ಇಷ್ಟವಿಲ್ಲ. ಸಂಶೋದನ ಕೇಂದ್ರದಲ್ಲಿ ಫೋಟೋಗ್ರಾಫರ್ ಆಗಿರುವ ಪ್ರಭಾಕರನಿಗೆ ರಾಮಯ್ಯ ಹೇಳುತ್ತಾನೆ; “ನಾನು ಹುಟ್ಟಿದಾಗಿನಿಂದ ಮಂದಣ್ಣನ್ನ ನೋಡಿದ್ದೀನಿ. ಅವನವ್ವ ಅವನ್ನ ಮುಂದೆ ತರಬೇಕು ಅಂತ ಭಾಳ ಪಾಡುಪಟ್ಟಳು. ಈ ಮುಂಡೇಮಗ ಹುಟ್ಟಿನಿಂದ್ಲೂ ಹೀಂಗೇ. ಕಾಡುಕುರುಬನ ಹಂಗೆ ಹಕ್ಕಿಪಿಕ್ಕಿ, ಹುಳಹುಪ್ಪಟೆ, ಚಾಟರಬಿಲ್ಲು ಶಿಕಾರಿ ತಿರುಗೋದೇ. ಒಂದು ಸಾರಿ ಮನೇಲಿ ಜಗಳಾಡಿ ಮನೆಬಿಟ್ಟು ಹಾವುಗೊಲ್ಲರ ಜೊತೆ ಹೊಂಟೋಗಿದ್ದ” ಎನ್ನುತ್ತಾನೆ. ರೇಡಿಯೋ ಮೆಕ್ಯಾನಿಕ್ ಆಗಿದ್ದ ಪ್ರಭಾಕರ; “ನಾನೂ ಸರ್ಕಸ್ ಕಂಪನಿ ಜೊತೆ ಓಡೋಗಿದ್ದೆ. ಹಾಗಂತ ನಾನು ಹಾಳಾಗಿ ಹೋದೆನೋ ಹ್ಯಾಗೆ ಹೇಳು. ಕರ್ವಾಲೊ ಸಾಹೇಬ್ರು ಹಂಗೆಲ್ಲಾ ಒಬ್ರನ್ನ ಹಾಳು ಮಾಡೋ ಅಂತೋರಲ್ಲ” ಎನ್ನುತ್ತಾನೆ. ಮಲೆನಾಡು-ಕರಾವಳಿಗಳಲ್ಲಿ ಆ ಕಾಲದಲ್ಲಿ ಹೀಗೆ ಮಕ್ಕಳು ಮನೆಬಿಟ್ಟು ಹೋಡಿಹೋಗುವ ಚಾಳಿ ಒಂದು ಸಾಮಾನ್ಯ ಸಾಮಾಜಿಕ ಪಿಡುಗಾಗಿದ್ದುದನ್ನೂ ಇಲ್ಲಿ ಸ್ಮರಿಸಬಹುದು. ಪ್ರಭಾಕರ ಅಂತೂ ನಾರ್ವೆ ರಾಮಯ್ಯನಿಗೆ ಸಮಾಧಾನ ಹೇಲಿ ಒಪ್ಪಿಸಿ ಮಂದಣ್ಣನ ಮದುವೆ ಮಾಡಿಸುತ್ತಾನೆ. ಮುಂದೆ ಮಂದಣ್ಣ ರಾಮಯ್ಯನ ಮನೆಯಲ್ಲಿ ನಡೆಯುವ ವಿಚಿತ್ರ ಘಟನೆಗಳಿಗೆ ಸಿಕ್ಕುಹಾಕಿಕೊಂಡು ಪೊಲೀಸರು, ಕೋರ್ಟ್ ತಿರುಗುವ ಹಂತ ತಲಪುತ್ತಾನೆ. ಕರ್ವಾಲೊ ಮತ್ತು ನಿರೂಪಕರು ಅವನ ಬಿಡುಗಡೆಗೆ ಪ್ರಯತ್ನಿಸುವುದು ಅನಿವಾರ್ಯವಾಗುತ್ತದೆ. ಏಕೆಂದರೆ ಕರ್ವಾಲೊಗೆ ಮಂದಣ್ಣನಿಲ್ಲದೇ ತನ್ನ ಸಂಶೋಧನೆ ಗುರಿಮುಟ್ಟುವುದಿಲ್ಲ ಎಂಬ ಅರಿವಿದೆ.

ಕಾದಂಬರಿಯ ಇನ್ನೊಂದು ಮುಖ್ಯ ಪಾತ್ರ ಕರ್ವಾಲೊ. ಇವರೊಬ್ಬ ವಿಜ್ಞಾನಿ. ಮೂಡಿಗೆರೆಯಲ್ಲಿರುವ ಭತ್ತದ ಸಂಶೋಧನ ಕೇಂದ್ರದಲ್ಲಿ ಭತ್ತಕ್ಕೆ ಕೀಟಗಳಿಂದ ತಗಲುವ ರೋಗಗಳಿಗೆ ಪರಿಹಾರ ಕಂಡುಹಿಡಿಯಲು ಬಂದವರು. ಇವರಿಗೆ ಮಂದಣ್ಣ ತೋರಿಸುವ ಅದ್ಭುತ ಜಗತ್ತು ಕಾದಂಬರಿಯುದ್ದಕ್ಕೂ ವ್ಯಾಪಿಸಿಕೊಂಡು ಅರ್ಥಪೂರ್ಣ ಸತ್ಯದ ಅನ್ವೇಷಣೆಗೆ ಪ್ರೇರಿಸುತ್ತದೆ. ಇವರಿಬ್ಬರ ಮಧ್ಯೆ ನಿರೂಪಕರು ಮತ್ತು ಹಾರುವ ಓತಿಯಿದೆ. ಖ್ಯಾತ ವಿಜ್ಞಾನಿ ಕರ್ವಾಲೊ ಮಂದಣ್ಣನ ಬಗ್ಗೆ ಯಾವ ಮಟ್ಟದ ಗೌರವವಿತ್ತು ಎಂಬುದು ಒಂದು ಸಂದರ್ಭದ ಮಾತಿನಲ್ಲಿ ಅನಾವರಣವಾಗುತ್ತದೆ. ಮಂದಣ್ಣ ಜೀವನೋಪಾಯಕ್ಕಾಗಿ ಕರ್ವಾಲೊ ಬಳಿ ಬಂದು ಪ್ಯೂನ್ ಕೆಲಸ ಯಾಚಿಸುತ್ತಾನೆ. ಆಗ ಅವರು; “ಇಲ್ಲ, ಇಲ್ಲ ಈ ಒಂದು ವಿಷಯದಲ್ಲಿ ಮಂದಣ್ಣನ್ನ ಮೀರಿಸುವವರು ಯಾರೂ ಇಲ್ಲ. ಅಷ್ಟೊಂದು ಚೆನ್ನಾಗಿ ಗ್ರಹಿಸುತ್ತಾನೆ. ಅವನೊಬ್ಬ ಹುಟ್ಟಾ ನ್ಯಾಚುರಲಿಸ್ಟ್. ಹೆಚ್ಚು ಕಡಿಮೆ ಈವರೆಗೂ ಅವನು ಹೇಳಿರೋದು ಒಂದೊಂದೂ ಕೂಡ ಅದರ ವಿವರಗಳಲ್ಲಿ ಸುಳ್ಳಾಗಿಲ್ಲ. ಅಷ್ಟೊಂದು ಸೂಕ್ಷ್ಮವಾಗಿ ಗ್ರಹಿಸುತ್ತಾನೆ. ಅದ್ಭುತ ಪ್ರಕೃತಿ ಶಾಸ್ತ್ರಜ್ಞ ಅವನು. ಅಂಥೋನು ನನ್ನ ಹತ್ತಿರ ಬಂದು ಪ್ಯೂನ್ ಕೆಲಸ ಕೊಡಿ ಅಂದರೆ ನನಗೆ ಸಿಟ್ಟು ಬರೋದಿಲ್ವೇ, ರ್ಯಾಸ್ಕಲ್” ಎಂದು ನಿರೂಪಕರ ಮುಂದೆ ಹೇಳುತ್ತಾರೆ. ಹಳ್ಳಿಗಾಡಿನಲ್ಲಿ ಮಂದಣ್ಣನಂತಹ ತಜ್ಞರು ನೂರಾರಿರುತ್ತಾರೆ. ಆದರೆ ಅವರನ್ನು ಗುರುತಿಸುವವರೇ ಇರುವುದಿಲ್ಲ. ಇಲ್ಲಿ ಪುಣ್ಯಕ್ಕೆ ಕರ್ವಾಲೊ ಗುರುತಿಸಿದ್ದಾರೆ. ಅಕೆಡೆಮಿಕ್ ಜಗತ್ತಿನ ಥಳುಕಿನ ಎದುರು ಮಂದಣ್ಣನಂತಹ ಗ್ರಾಮೀಣ ಪ್ರತಿಭೆಗಳು ಮೂಲೆಗುಂಪಾಗುವ ಸೂಕ್ಷ್ಮ ವಾಸ್ತವ ಚಿತ್ರಣ ಇಲ್ಲಿದೆ. ನಿರೂಪಕರಿಗೂ ಮಂದಣ್ಣನ ತಜ್ಞತೆಯ ಬಗ್ಗೆ ಅನುಮಾನವಿದೆ. ಕರ್ವಾಲೊ ಮತ್ತು ಮಂದಣ್ಣನ ನಡುವಿನ ಸ್ನೇಹದ ಕುರಿತು ನಿರೂಪಕನ ಅನುಮಾನ ಹೀಗೆ ವ್ಯಕ್ತವಾಗಿದೆ; “ಅರೆ ಬೆಳ್ಳಗಾಗಿದ್ದ ಗಡ್ಡ ಮೀಸೆ. ಹದ್ದಿನ ಕೊಕ್ಕಿನಂಥ ಮೂಗು. ತೀರ ಗಂಭೀರವಾದ ಕಣ್ಣುಗಳು ಮುಂತಾದವುಗಳಿಂದ ಕರ್ವಾಲೊ ಬಹಳ ಗಂಭೀರವಾಗಿ ಕಾಣುತ್ತಿದ್ದರು. ಸುಮಾರು ಐವತ್ತು ವರ್ಷದವರಿರಬಹುದು. ಮಂಗಳೂರು ಕಡೆಯ ಕ್ರಿಶ್ಚಿಯನ್ನರಂತೆ ಕಂಡರು. ಕನ್ನಡವನ್ನು ಅವರಂತೆಯೇ ಬಹಳ ಗ್ರಾಂಥಿಕವಾಗಿ ಆಡುತ್ತಿದ್ದರು. ಆದರೆ ಮಂದಣ್ಣ ಅವರ ಶಿಷ್ಯನಾಗುವ ಯಾವುದೇ ಸಾಧ್ಯತೆ ನನಗೆ ಕಾಣಲಿಲ್ಲ. ಡೋಂಗಿ ಹೊಡೆದಿದ್ದಾನೆಂದುಕೊಂಡೆ”. ನಿರೂಪಕರು ಮಾತ್ರವಲ್ಲ, ಊರಿನ ಜನರೂ ಮಂದಣ್ಣ-ಕರ್ವಾಲೊ ಗೆಳೆತನವನ್ನು ಅಪಹಾಸ್ಯಮಾಡುವಂತಿತ್ತು; “ಸಾವಿರದೈನೂರು ರೂಪಾಯಿ ಸಂಬಳದ ವಿಜ್ಞಾನಿ ಹಳ್ಳಿ ಹುಡುಗ ಮಂದಣ್ಣನೊಡನೆ ಬಹಿರಂಗವಾಗಿ ಅಡ್ಡಾಡುತ್ತ ಇರುವುದು ನಮ್ಮಲ್ಲಿನ ಅನೇಕ ದೊಡ್ಡ ಮನುಷ್ಯರಿಗೆ ಅಸಮಾಧಾನದ ಸಂಗತಿಯಾಗಿತ್ತು. ಮೊದಮೊದಲು ಕರ್ವಾಲೋ ಮೇಧಾವಿ ಎಲ್ಲಾ ಸರಿ ಆದರೆ ವಿಪರೀತ ಓದಿ ತಲೆಕೆಟ್ಟಿದೆ ಎಂದು ಮಾತನಾಡಿಕೊಳ್ಳುತ್ತಿದ್ದರು”. ವರ್ಗಪ್ರಜ್ಞೆಯನ್ನು ಮೀರಿದ ಮಾನವೀಯ ಸಂಬಂಧದ ಸ್ವರೂಪವನ್ನು ಕೃತಿ ಹೇಳುತ್ತಿದೆ. ಆದರೂ ಮಂದಣ್ಣ-ಕರ್ವಾಲೊ ಸಂಬಂಧದ ಬಗ್ಗೆ “ಎಲ್ಲಾ ತಲೆಗೊಂದೊಂದು ಥರ ಮಾತಾಡ್ತಾರೆ”.

ನಿರೂಪಕ ಒಬ್ಬ ರೈತ. ವ್ಯವಸಾಯದಲ್ಲಿನ ವೈಫಲ್ಯದಿಂದಾಗಿ ತಾನು ನೆಚ್ಚಿಕೊಂಡಿರುವ ಜಮೀನು, ತೋಟಗಳನ್ನು ಮಾರಿ ಪಟ್ಟಣಕ್ಕೆ ಹೋಗಬೇಕೆಂದು ಹಲವು ಬಾರಿ ಯೋಚಿಸಿದವನು. ಮಲಗಿಬಿಡುವ ಎತ್ತುಗಳನ್ನು ಸಂಭಾಳಿಸಿ ಹೇಗೋ ನಾಟಿ ಮುಗಿಸಿದ್ದರೆ ಭತ್ತಕ್ಕೆ ಹುಳುಗಳ ಕಾಟ. ಯಾವ ಔಷಧಿ ಹೊಡೆದರೂ ಪರಿಣಾಮವಾಗಿಲ್ಲ. ಜನರು ಅದು ದೆಯ್ಯದ ಕಾಟ’ ಎಂದು ಹೇಳುತ್ತಾರಾದರೂ ನಿರೂಪಕನಿಗೆ ಅದರಲ್ಲಿ ನಂಬುಗೆಯಿಲ್ಲ. ಕೊನೆಗೆ ಕರ್ವಾಲೊರನ್ನು ಒಮ್ಮೆ ಭೇಟಿಯಾಗಲು ನಿರ್ಧರಿಸುತ್ತಾನೆ. ಕರ್ವಾಲೊ ರಿಸರ್ಚ್ ಸೆಂಟರಿನಲ್ಲಿ ಫೈಲುಗಳ ನಡುವೆ ಏನನ್ನೋ ಬರೆಯುತ್ತಾ ಕುಳಿತಿದ್ದಾರೆ. ಪಕ್ಕದಲ್ಲಿ ಒಂದು ಮೈಕ್ರೊಸ್ಕೊಪ್ ಇದೆ. ನಿರೂಪಕ ಹೋಗಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಾನೆ. ಸಮಾಧಾನವಾಗಿ ಎಲ್ಲವನ್ನೂ ಕೇಳಿಸಿಕೊಂಡ ಕರ್ವಾಲೊ; “ನಾನು ನೋಡಿ ಅನಂತರ ನಿರ್ಣಯ ಹೇಳುತ್ತೇನೆ. ನೀವು ಇನ್ನೊಮ್ಮೆ ಬರುವಾಗ ಹುಳುಗಳನ್ನು ತನ್ನಿ. ಸದ್ಯಕ್ಕೆ ನೀವು ಇಷ್ಟು ಮಾಡಿ. ಗದ್ದೆ ನೀರನ್ನು ಸಂಪೂರ್ಣ ತೆಗೆಯಿರಿ. ಆ ಹುಳುಗಳು ಗಿಡದ ಬೊಡ್ಡೆಗಳಲ್ಲಿ ನೀರಿನೊಳಗೆ ಮುಳುಗಿಕೊಂದಿರುತ್ತವೆ. ಆದ್ದರಿಂದ ನಿಮ್ಮ ಔಷಧಿ ಅವುಗಳನ್ನು ತಲುಪಿಯೇ ಇಲ್ಲ. ನಿಮ್ಮ ವಿವರಣೆ ನೋಡಿದರೆ ಅವು ಆರ್ಮಿವರ್ಮ್ ಇರಬೇಕು” ಎನ್ನುತ್ತಾರೆ. ‘ತೊದರೆ ಕೊಟ್ಟೆನೇನೊ’ ಎಂಬ ನಿರೂಪಕರ ಮಾತಿಗೆ ಕರ್ವಾಲೊ; “ಮೈಡಿಯರ್ ಯಂಗ್ ಮ್ಯಾನ್, ಈ ಮಾತನ್ನ ನೀವು ಸೀರಿಯಸ್ಸಾಗಿ ಹೇಳಿಲ್ಲಾಂತ್ ತಿಳಿದಿದ್ದೀನಿ. ನನ್ನ ಕೆಲಸ ಇಲ್ಲಿ ನಿಮ್ಮಂಥೋರ ತೊಂದರೆ ತಾಪತ್ರಯಗಳನ್ನು ನೋಡಿಕೊಳ್ಳೋದು, ಕೈಲಾದ ಸಹಾಯ ಮಾಡೋದು. ಆದ್ದರಿಂದ ನನಗೆ ತೊಂದರೆ ಕೊಡುವುದು ನಿಮ್ಮ ಹಕ್ಕು”  ಎಂದರು. ಇದು ಸರ್ಕಾರಿ ಅಧಿಕಾರಿಯೊಬ್ಬ ಮಾತಿನಂತಿರದೆ, ಅವರ ಧ್ವನಿಯಲ್ಲಿ ಪ್ರಾಮಾಣಿಕತೆಯಿತ್ತು. ಗದ್ದೆಯ ನೀರು ತೆಗೆದಾಗ ಕರ್ವಾಲೊ ಹೇಳಿದ್ದೂ ನಿಜವಾಗಿರುತ್ತದೆ. ಪರಿಹಾರವೂ ದಕ್ಕುತ್ತದೆ. ಆಗ ಕರ್ವಾಲೊ ಹೇಳಿದ ಮಾತು; ‘ಈವರೆಗೆ ರಿಸರ್ಚ್ ಸೆಂಟರಿಗೆ ಬಂದ ಮೊದಲ ರೈತ ನೀವು’ ಎಂಬುದು ನಮ್ಮ ರೈತ ಸಮುದಾಯದ ಹಿಂಜರಿಕೆಗೆ ಹಿಡಿದ ಕನ್ನಡಿಯಾಗಿದೆ. ಕೃಷಿ ಇಲಾಖೆ ಹಲವಾರು ಅನುಕೂಲ ಅವಕಾಶಗಳನ್ನು ಒದಗಿಸಿದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವ ರೈತರ ಸಂಖ್ಯೆ ಕಡಿಮೆಯೇ. ಇದರಿಂದಾಗಿಯೇ ಇಲಾಖೆಗಳು ಬಿಳಿಯಾನೆಗಳಾಗಿ ವರ್ತಿಸುತ್ತಿರುತ್ತವೆ.

ನಡುಬಗ್ಗಿಸಿ ಜೀವಮಾನ ಪರ್ಯಂತ ದುಡಿದರೂ ಉದ್ಧಾರವಾಗದ ರೈತ ಸಮುದಾಯದ ದುರಂತ ಕಥನವನ್ನು ಕಾದಂಬರಿ ಹೀಗೆ ಚಿತ್ರಿಸಿದೆ; “ಮೊದಲನೆಯದಾಗಿ ವ್ಯವಸಾಯದಿಂದ ಲಾಭ ಬರುವುದೆಂಬ ನಂಬಿಕೆ ನನ್ನೊಳಗೆ ನಶಿಸತೊಡಗಿತ್ತು. ಲಾಭ ಮಾಡುವುದು ಇರಲಿ, ಬ್ಯಾಂಕಿನಲ್ಲಿ ಮಾಡಿಕೊಂಡ ಸಾಲದ ಬಡ್ಡಿ ಕಟ್ಟುತ್ತಾ ಹೆಚ್ಚು ಕಡಿಮೆ ಅಧಿಕಾರ ಶಾಹಿಯ ಜೀತದಾಳಾಗಿ ನಾನೂ ನನ್ನಂಥ ಅನೇಕ ರೈತರೂ ಪರಿವರ್ತಿತರಾಗಿದ್ದರು. ಹಾಕಿದ ಲೆಕ್ಕಾಚಾರ ಒಂದೂ ಗುರಿ ತಲುಪುತ್ತಿರಲಿಲ್ಲ. ಅಕಸ್ಮಾತ್ ಕೊಂಚ ಕರಾರುವಕ್ಕಾಗಿ ಬೆಳೆ ಬಂದರೂ ಆ ವೇಳೆಗಾಗಲೇ ಹಣದುಬ್ಬರ, ಏರಿದ ಸಾಮಾನಿನ ಬೆಲೆಗಳು, ವಿಷದಂತೆ ಏರುತ್ತಿದ್ದ ಬ್ಯಾಂಕ್ ಬಡ್ಡಿದರ ಅದನ್ನು ಕಬಳಿಸಿ ಬಿಡುತ್ತಿದ್ದವು. ಹೀಗಾಗಿ ಸದಾ ಮುಂದೆ ಸಿಕ್ಕುವ ಲಾಭದ ಮರೀಚಿಕೆಯ ಹಿಂದೆ ಆರ್ಥಿಕ ಬಿಕ್ಕಟ್ಟಿನ ಮರಳುಗಾಡಿನಲ್ಲಿ ಸಾಗುತ್ತಿದ್ದೆ”. ಇದು ಸಮಕಾಲೀನ ವಾಸ್ತವವೂ ಆಗಿದೆ. ವಾಣಿಜ್ಯ ಬೆಳೆಗಳನ್ನು ಬಿಟ್ಟರೆ ಉಳಿದವುಗಳನ್ನು ಬೆಳೆಯುವ ರೈತನ ಬದುಕು ಕಷ್ಟದಾಯಕವೇ ಆಗಿರುವುದನ್ನು ಇಂದಿಗೂ ಕಾಣುತ್ತೇವೆ.

ಕಾದಂಬರಿಯ ಅರ್ಧಭಾಗದ ನಂತರ ಇನ್ನೊಂದು ಮಹತ್ವಪೂರ್ಣ ಕಥನ ಆರಂಭವಾಗುತ್ತದೆ. ಅದು ಹಾರುವ ಓತಿಯ ಕುರಿತ ಸಂಶೋಧನೆ. ಕರ್ವಾಲೊ ನಿರೂಪಕರಿಗೆ ಹೇಳುವ ಈ ಮಾತುಗಳಿಂದ ಇದರ ಆರಂಭ; “ನೋಡಿ ನಾನು ಕೆಲವು ವಾರಗಳ ಹಿಂದೆ ನೀವು ಬಂದಾಗ ರಜ ಹಾಕಿ ನಾರ್ವೆಗೆ ಮಂದಣ್ಣನ ಜೊತೆ ಹೋಗಿದ್ದೆನಲ್ಲಾ, ಆಗ ಎರಡು ಪ್ರಾಣಿಗಳನ್ನು ನೋಡಬೇಕೆಂದು ಹೋಗಿದ್ದೆ. ಒಂದು ಈ ಗ್ಲೋವರ್ಮ್...ಇನ್ನೊಂದು ಫ್ಲೈಯಿಂಗ್ ಲಿಸರ್ಡ್ ಅಂತ. ಹಾರುವ ಓತಿ ಅನ್ನಬಹುದು. ನಮ್ಮ ಮಂದಣ್ಣನೇ ಈ ವಿಷಯ ನನಗೆ ತಿಳಿಸಿದ್ದು. ನಾರ್ವೆ ಬಳಿಯ ಕಾಡಿನಲ್ಲಿ ಇದನ್ನು ನೋಡಿದ್ದೇನೆ ಎಂದು ಹೇಳಿದ”. ಇಷ್ಟೇ ಅಲ್ಲ. ಮಂದಣ್ಣ ನೀಡಿದ ವಿವರಗಳ ಆಧಾರದ ಮೇಲೆ ಕರ್ವಾಲೊ ಒಂದು ರೇಖಾಚಿತ್ರವನ್ನೂ ಬರೆದಿದ್ದರು. ಬಾವಲಿಯಂತೆ ತೆಳ್ಳನೆಯ ರೆಕ್ಕೆ ಇರುವ, ಆದರೆ ಹಕ್ಕಿಯಂತೆ ಹಾರಲಾಗದ ಈ ಜೀವಿ ಆರರ ಮುಂದೆ ಒಂಬತ್ತು ಸೊನ್ನೆಗಳನ್ನು ಕೊಟ್ಟಾಗ ಆಗಬಹುದಾದಷ್ಟು ವರ್ಷಗಳಿಗಿಂತ ಹಿಂದೆ ಇದ್ದಿರಬಹುದಾದ, ವಿಕಾಸ ಪಥದಲ್ಲಿ ಚಲನಶೀಲವಾಗದ ಜೀವಿ. ಅದರ ಚರಿತ್ರೆಯನ್ನು ವಿವರಿಸುವ ಕರ್ವಾಲೊ ನಿರೂಪಕನಿಗೆ ಕಾಲಾತೀತ ತತ್ವದ ದರ್ಶನ ಮಾಡಿಸುತ್ತಾರೆ. ಈಗ ಕರ್ವಾಲೊಗೆ ಇದರದ್ದೇ ಧ್ಯಾನ. ಹಾರುವ ಓತಿಯನ್ನು ಹಿಡಿಯಲು ಹೋಗುವ ಸಿದ್ಧತೆಯಂತೂ ಕುತೂಹಲಕಾರೀ ನಿರೂಪಣೆಯಾಗಿದೆ.

ಹಾರುವ ಓತಿಯ ವಿವರಗಳನ್ನು ಕೇಳಿಸಿಕೊಂಡಿದ್ದ ಎಲ್ಲರೂ ಒಂದು ಭ್ರಮಾತ್ಮಕ ಸ್ಥಿತಿಯಲ್ಲಿದ್ದರು. ನಿರೂಪಕರು ಅದನ್ನು ಹೀಗೆ ಹಿಡಿದಿಟ್ಟಿದ್ದಾರೆ; “ಕಾಲದ ಪ್ರವಾಹದಲ್ಲಿ ಕಾಲಗತಿಯ ವಿರುದ್ಧ ದೋಣಿ ನಡೆಸುತ್ತಾ ಮಿಲಿಯಾಂತರ ವರ್ಷ ಹಿಂದಕ್ಕೆ ಯಾನ ಹೊರಟಂತಿತ್ತು. ನಮ್ಮ ತಲೆಯೊಳಗಿನ ಗಡಿಯಾರದ ಮುಳ್ಳು ಹಿಮ್ಮುಖವಾಗಿ ಪ್ರಚಂಡ ವೇಗದಲ್ಲಿ ತಿರುಗುತ್ತಿತ್ತು”. ಆದರೂ ಚರಿತ್ರೆಯನ್ನು ಮೀರಿದ ಈ ಹಾರುವ ಓತಿ ಎಲ್ಲರನ್ನೂ ಒಂದೇ ರೀತಿಯಲ್ಲಿ ಪ್ರಭಾವಿಸಿಲ್ಲ. ನಿರೂಪಕನಿಗೆ ಇದು ಒಂದು ದಿವ್ಯ ಅನುಭವ. ಕರ್ವಾಲೊನದು ವೈಜ್ಞಾನಿಕ ತಿಳಿವು. ಪ್ರಭಾಕರ ತನ್ನ ಫೋಟೋಗ್ರಫಿಯಲ್ಲೇ ಲೀನ. ಮಂದಣ್ಣ, ಕರಿಯಪ್ಪರಿಗೆ ದೈನಂದಿನ ಚಟುವಟಿಕೆ. ಕೊನೆಗೆ ಹಾರುವ ಓತಿಯನ್ನು ಕಂಡರೂ ಅದನ್ನು ಹಿಡಿಯಲಾಗದ ವಿಫಲ ಸಾಹಸದಲ್ಲಿ ಎಲ್ಲರೂ ಭಾಗವಾಗುತ್ತಾರೆ. ಇಲ್ಲಿ ಬರುವ ಮನುಷ್ಯರೆಲ್ಲ ಮಾನವ ಪ್ರಜ್ಞೆಯ ಸಂಕೇತವಾದರೆ, ಹಾರುವ ಓತಿ ಕಾಲ ದೇಶಗಳನ್ನು ಮೀರಿದ ಯಾವುದೋ ವಿಸ್ಮೃತಿಯ ಸಂಕೇತವಾಗುತ್ತದೆ. ಈ ಸಂದರ್ಭವನ್ನು ಪೋಲಂಕಿಯವರು ಆಧ್ಯಾತ್ಮೀಕರಿಸಿದರೆ, ಜಿ. ಎಚ್. ನಾಯಕರು; ‘ವಿಕಾಸ ಪಥದಲ್ಲಿ ಚಲನಶೀಲವಾಗದ ಹಾರುವ ಓತಿ ಚಿರವಾಸ್ತವದ ಸಂಕೇತ’ವೆಂದು ಕಂಡಿದ್ದಾರೆ.

ಕಣ್ಣಿಗೆ ಕಂಡೂ ಕೈಗೆ ಸಿಗದೆ ಸಾವಿರಾರು ಅಡಿಗಳ ಪ್ರಪಾತದತ್ತ ಹಾರಿ ಹೋದ ಓತಿಯನ್ನು ನೋಡಿ ನಿರೂಪಕರು; “ಹಾರೋ ಪ್ರಯತ್ನದಲ್ಲಿ ಅದು ತಪ್ಪುದಾರಿ ಹಿಡೀತು ಅಂತ ಕಾಣ್ತದೆ. ಕೈಗಳ ಬದಲು ಪಕ್ಕೆ ಉಪಯೋಗಿಸಿತು ಸಾರ್. ಅದಕ್ಕೇ ಅದು ಹಾಗೇ ಉಳೀತು. ಮಿಕ್ಕವು ರೆಕ್ಕೆ ಪುಕ್ಕ ಬೆಳೆಸಿಕೊಂಡು ಹಕ್ಕಿ ಆಗಿಬಿಟ್ಟವು” ಎನ್ನುತ್ತಾರೆ. ಇದಕ್ಕೆ ಕರ್ವಾಲೊ ನೀಡುವ ಉತ್ತರ ಇಡೀ ಕಾದಂಬರಿಯ ಸತ್ವವನ್ನು ಹೇಳುತ್ತದೆ; “ತಪ್ಪು ಸರಿ ಹೇಗೆ ಹೇಳ್ತೀರಿ. ನಮಗೆ ಈ ಕ್ಷಣ, ಇಲ್ಲಿ ಹೀಗನ್ನಿಸಿದೆ. ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!”. ಇದೊಂದು ನಿರಂತರವಾದ ಪ್ರಕ್ರಿಯೆ. ಜೀವ ವಿಕಾಸ ಮುಗಿಯುವುದಿಲ್ಲ. ಇವರಿಗೆ ಸಿಕ್ಕಿ ತೆಂದುಕೊಂಡಿದ್ದ ಹಾರುವ ಓತಿ ತಪ್ಪಿಸಿಕೊಂಡು ಅಂತರಾಳದತ್ತ ಹಾರುವ ಪಯಣ ಇದನ್ನೇ ಸೂಚಿಸುವಂತಿದೆ. ಮುಂದಿನ ದಿನಗಳಲ್ಲಿ ಸ್ಥಗಿತಗೊಂಡ ಪ್ರಜ್ಞೆಯ ಜೀವಿಗಳು ಪಡೆದುಕೊಳ್ಳಬಹುದಾದ ಹೊಸ ವಿಕಾಸದ ಚಿಂತನೆಯನ್ನೂ ಇಲ್ಲಿ ಕಾಣಬಹುದು. ತೇಜಸ್ವಿಯವರ ಬರೆವಣಿಗೆಯ ವೈಶಿಷ್ಟ್ಯವೇ ಆದ ವೈನೋದಿಕ ಶೈಲಿಯ ಮೂಲಕವೇ ಮನುಷ್ಯ ಪ್ರಪಂಚ ನಿಜವಾಗುತ್ತದೆ.

ತೇಜಸ್ವಿ ಕೃತಿ ಪ್ರಪಂಚದಲ್ಲಿ ಮಾತ್ರವಲ್ಲ, ನಮ್ಮ ಸಾಹಿತ್ಯ ಸಂದರ್ಭದಲ್ಲೇ ಕರ್ವಾಲೊ ಒಂದು ಮುಖ್ಯವಾದ ಸೃಜನಶೀಲ ಪ್ರಯೋಗ ಎಂದೇ ಹೆಸರಾಗಿದೆ. ಇಂಗ್ಲಿಷ್, ಹಿಂದಿ, ಮರಾಠಿ, ಮಲಯಾಳಂ ಮತ್ತು ಜಪಾನೀ ಭಾಷೆಗಳಿಗೆ ಅನುವಾದಗೊಂಡಿದೆ. ತೇಜಸ್ವಿಯವರ ಬರೆಹದ ವಾಸ್ತವಿಕತೆ ಎಷ್ಟು ಪ್ರಖರವಾದದ್ದೆಂದರೆ; ಕರ್ವಾಲೊ ಕಾದಂಬರಿಯಲ್ಲಿ ಬರುವ ಬಿರಿಯಾನಿ ಕರಿಯಪ್ಪ ಬಂದು ಇವರಿಗೆ ಬೈದನಂತೆ. ‘ಏನ್ ಸಾರ್ ನನ್ ಮರ್ಯಾದೆಯೆಲ್ಲಾ ತೆಗೆದುಬಿಟ್ಟಿದ್ದೀರಿ ಅದ್ರಲ್ಲಿ’ ಅಂತ. ಮೂಡಿಗೆರೆಯ ಹಲವರು ಇಲ್ಲಿಯ ಪಾತ್ರಗಳೊಂದಿಗೆ ಹೋಲಿಕೆ ಮಾಡಿಕೊಂಡು ತಗಾದೆ ತೆಗೆದಿದ್ದರು ಎಂದು ತೇಜಸ್ವಿಯವರ ಸ್ನೇಹಿತರಾದ ರಾಮದಾಸ್ ಹೇಳಿದ್ದಾರೆ. ಕಾಡಿನ ಅನುಭವಗಳನ್ನು ತೇಜಸ್ವಿ ಅನ್ಯಾದೃಶವಾಗಿ ತಮ್ಮ ಸಾಹಿತ್ಯದಲ್ಲಿ ಹಿಡಿದಿಟ್ಟಿದ್ದಾರೆ. ಕಾಡಿನ ನಡುವಿನ ಚಿತ್ರಕೂಟದಲ್ಲಿ ಹತ್ತು ವರ್ಷಗಳವರೆಗೆ ವಿದ್ಯುದ್ದೀಪ ಇಲ್ಲದೇ ಅವರು ಬದುಕಿದ್ದರು. ‘ಆ ದಿನಗಳಲ್ಲಿ ಸೀಮೆ ಎಣ್ಣೆ ದೀಪದ ಬೆಳಕಿನಲ್ಲಿ ಅವರ ಕ್ಲಾಸಿಕ್ ಕಾದಂಬರಿ ಕರ್ವಾಲೊ ಮೂಡಿಬಂದಿತು’ ಎಂದು ತೇಜಸ್ವಿಯವರ ಪತ್ನಿ ರಾಜೇಶ್ವರಿಯವರು ಸ್ಮರಿಸಿಕೊಂಡಿದ್ದಾರೆ.

ಕರ್ವಾಲೊ ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಈ ಅಂಕಣದ ಹಿಂದಿನ ಬರೆಹಗಳು:
ಅನಂತಮೂರ್ತಿಯವರ ‘ಸಂಸ್ಕಾರ’ : ಬದುಕಿನ ಭಿನ್ನ ಮುಖಗಳ ಅನಾವರಣ

ಕಾರ್ನಾಡರ ತುಘಲಕ್: ವರ್ತಮಾನವಾಗುವ ಇತಿಹಾಸದ ತುಣುಕು

ಎಂದಿಗೂ ಮುಪ್ಪಾಗದ ’ಹಸಿರು ಹೊನ್ನು’

ಪ್ರಾದೇಶಿಕತೆಯ ದಟ್ಟ ವಿವರಗಳ-ಮಲೆಗಳಲ್ಲಿ ಮದುಮಗಳು

ಗ್ರಾಮಾಯಣ ಎಂಬ ಸಮಕಾಲೀನ ಪುರಾಣ

ಬದುಕಿನ ದಿವ್ಯದರ್ಶನ ಮೂಡಿಸುವ `ಮರಳಿ ಮಣ್ಣಿಗೆ’

ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’

ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ

ಪುಸ್ತಕ ಲೋಕವೆಂಬ ಬದುಕಿನ ಬುತ್ತಿ

ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'

ಅಂಬಿಕಾತನಯದತ್ತರ ಸಖೀಗೀತ

ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ

 

MORE NEWS

ಮೃತ್ಯುಂಜಯ ಕಾದಂಬರಿ ತಾತ್ವಿಕ ವಿಶ್ಲೇಷಣೆ

14-09-2024 ಬೆಂಗಳೂರು

"ಚರಿತ್ರೆಯ ಬಗೆಗಿರುವ ಅವರ ಆಸಕ್ತಿ ಚರಿತ್ರೆಯ ಸಂಗತಿಗಳನ್ನು ಮಾನವಶಾಸ್ತ್ರಿಯ ದೃಷ್ಟಿಕೋನದಲ್ಲಿ ವಿಶ್ಲೇಷಿಸುವಂತೆ ...

ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ

13-09-2024 ಬೆಂಗಳೂರು

"ಶಿಕ್ಶಣ ಎನ್ನುವಂತದ್ದು ಮಗು ಪ್ರಯತ್ನಪೂರ‍್ವಕವಾಗಿ ಕಲಿಯಬೇಕಾಗಿರುವಂತದ್ದು. ಆದ್ದರಿಂದ ಇದು ಮನುಶ್ಯರ ಆಂತರಿ...

ಇತರೆ ರಂಗಾಯಣಗಳಿಗೆ 'ಕಾರಂತ' ಮಾದರಿ ಇದೆ, ದಾವಣಗೆರೆ ರಂಗಾಯಣಕೆ ಮಾದರಿ ಬೇಕಿದೆ..

09-09-2024 ಬೆಂಗಳೂರು

"ನಮ್ಮ ಕಾರು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಕಮಾನಿನೊಳಗೆ ಕಾಲಿಡುತ್ತಿದ್ದಂತೆ ಅವನ ಗೆಳೆಯರ ತಂಡ ಕಾರಿಗೆ ಅಡ್ಡ ಹ...