ಕಾರ್ನಾಡರ ತುಘಲಕ್: ವರ್ತಮಾನವಾಗುವ ಇತಿಹಾಸದ ತುಣುಕು

Date: 28-06-2021

Location: ಬೆಂಗಳೂರು


‘ಭಾರತೀಯ ರಂಗಭೂಮಿಯ ಮೇಲೆ ಅನ್ಯಾದೃಶವಾಗಿ ಮೂಡಿಬಂದ ‘ತುಘಲಕ್’ ನಾಟಕ ಕನ್ನಡ ರಂಗಭೂಮಿಯನ್ನೂ ಆವರಿಸಿಕೊಂಡಿದೆ’ ಎನ್ನುತ್ತಾರೆ ಲೇಖಕ ವಿಮರ್ಶಕ ಶ್ರೀಧರ ಹೆಗಡೆ ಭದ್ರನ್. ಅವರ ‘ಬದುಕಿನ ಬುತ್ತಿ’ ಅಂಕಣದಲ್ಲಿ ಗಿರೀಶ್ ಕಾರ್ನಾಡರ ‘ತುಘಲಕ್’ ನಾಟಕದ ಕುರಿತು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

“...ಕೇವಲ ಕಾಮಾತುರನಾಗಿ ಒಬ್ಬ ಹೆಣ್ಣನ್ನು ಎಳೆದರೆ ಏನು ಉಪಯೋಗ? ಇಲ್ಲ... ಇಲ್ಲ...ಮೊದಲು ಅಧಿಕಾರ ಪಡೆಯಬೇಕು. ಆಗ ಪೀಡೆ, ಕ್ರೀಡೆ, ಬಲತ್ಕಾರ-ಎಲ್ಲಕ್ಕೂ ಒಂದು ಅರ್ಥ ಬಂದುಬಿಡುತ್ತದೆ” ನಾಟಕ ಪಠ್ಯದ ಪಾತ್ರವೊಂದು ಆಡುವ ಮಾತು ಐತಿಹಾಸಿಕ ಸಂದರ್ಭದಲ್ಲಿ ಮೂಡಿಬಂದಿದ್ದರೂ ಸಮಕಾಲೀನ ರಾಜಕೀಯ ಸಂದರ್ಭಕ್ಕೂ ಕೆಲವೊಮ್ಮೆ ಹೊಂದಿಬಿಡುವ ಆಕಸ್ಮಿಕ ಸಾಹಿತ್ಯದ ಸಾರ್ವಕಾಲಿಕ ಶಕ್ತಿಯಾಗಿದೆ. ಇಂತಹ ಹಲವು ಸಮಕಾಲೀನವೆನ್ನಿಸುವ ಚಿತ್ರಣಗಳನ್ನು ಮಿಂಚಿಸುವ ಶಕ್ತ ಕೃತಿ ಗಿರೀಶ್ ಕಾರ್ನಾಡರ ನಾಟಕ-ತುಘಲಕ್.

ಗಿರೀಶ್ ಕಾರ್ನಾಡರು ನಾಟಕ ರಚನೆಯನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡು ಭಾರತೀಯ ಅಷ್ಟೇ ಯಾಕೆ ಜಾಗತಿಕ ರಂಗಭೂಮಿಯನ್ನೂ ಆವರಿಸಿಕೊಂಡವರು. ಚರಿತ್ರೆಯನ್ನು ತಮ್ಮ ನಾಟಕಗಳ ಒಂದು ಮುಖ್ಯ ಭಿತ್ತಿಯನ್ನಾಗಿಸಿಕೊಂಡಿದ್ದ ಕಾರ್ನಾಡರು ಇದೇ ಕಾರಣಕ್ಕೆ ಹಲವು ವಾಗ್ವಾದಗಳನ್ನು ಹುಟ್ಟುಹಾಕಿದವರು. ಅವರ ‘ತುಘಲಕ್’ ನಾಟಕ 1964ರಲ್ಲಿ ಪ್ರಕಟವಾದಾಗ ಉಂಟಾದ ರೋಮಾಂಚನ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ಒಂದು ಮುಖ್ಯ ಘಟನೆ. ಅದುವರೆಗಿನ ಚಾರಿತ್ರಿಕ ನಾಟಕಗಳಿಗಿಂತ ಭಿನ್ನವಾಗಿ; ಚರಿತ್ರೆಯನ್ನು ಸಮಕಾಲೀನ ತುರ್ತಿನಲ್ಲಿ ಪುನಾರಚಿಸುವ ಅನಿವಾರ್ಯತೆಯಿಂದಾಗಿಯೇ ಕಾರ್ನಾಡರು ವಿಭಿನ್ನರಾಗುತ್ತಾರೆ. ಹೀಗಾಗಿ ಅವರ ‘ತುಘಲಕ್’ ನಾಟಕ ಇಂದಿಗೂ ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸುತ್ತಾ ನಿತ್ಯನೂತನ ಕಲಾಕೃತಿಯೆನಿಸಿದೆ.

ಐಲು ದೊರೆಯೆಂದೂ ಹುಚ್ಚು ಮಹಮ್ಮದನೆಂದೂ ಇತಿಹಾಸದಲ್ಲಿ ಹೆಸರು ಪದೆದಿದ್ದ ಮುಹಮ್ಮದ್ ಬಿನ್ ತುಘಲಕ್ ನಾಟಕದ ನಾಯಕ. ಇಲ್ಲಿ ವಾಸ್ತವಕ್ಕೆ ಕುರುಡಾದ ಮಹತ್ವಾಕಾಂಕ್ಷಿ ದೊರೆಯಾತ. ಜೊತೆಗೆ ಕನಸುಗಾರ. ಔಚಿತ್ಯವನ್ನು ಮರೆತು ಹಿಂಸೆಯ ಸರಣಿಯನ್ನೇ ನಡೆಸುವುದು ಮತ್ತು ಧರ್ಮವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ಮೂಲಕ ಆತ ದುರಂತ ನಾಯಕನಾಗುತ್ತಾನೆ.

ಕ್ರಿ.ಶ.1327 ರಲ್ಲಿ ದಿಲ್ಲಿಯಲ್ಲಿ ನಡೆಯುವ ಘಟನೆಗಳೊಂದಿಗೆ ಆರಂಭವಾಗುವ ನಾಟಕ 13 ದೃಶ್ಯಗಳಲ್ಲಿ ಬಿಚ್ಚಿಕೊಂಡಿದೆ. ಉತ್ಕಟ ಮಹತ್ವಾಕಾಂಕ್ಷಿಯಾದ ತುಘಲಕ್ ಹಿಂಸೆ-ಕೊಲೆಗಳ ಮೂಲಕ ತನ್ನ ತಂದೆ ಹಾಗೂ ಸಹೋದರರನ್ನು ಮುಗಿಸಿ ಅಧಿಕಾರ ಸಂಪಾದಿಸಿದ್ದವನು. ಹದಿನಾಲ್ಕನೆಯ ಶತಮಾನದ ನಿರಂಕುಶ ದೊರೆಯೆಂದೇ ಇತಿಹಾಸದಲ್ಲಿ ದಾಖಲಾಗಿದ್ದವನು. ನಾಟಕದ ಆರಂಭದಲ್ಲೇ ಆತ ಕಟ್ಟಲು ಪ್ರಯತ್ನಿಸುತ್ತಿರುವ ಆದರ್ಶ ರಾಜ್ಯದ ಮಾದರಿ ಕಾಣಿಸುತ್ತದೆ. ಹಿಂದೂಗಳ ಮೇಲಿನ ಜಿಝಿಯಾ ತೆರಿಗೆಯನ್ನು ತೆಗೆದುಹಾಕಿದ್ದಾನೆ, ಹಿಂದೂ ಸ್ತ್ರೀಯರು ಸತಿ ಹೋಗುವುದನ್ನು ನಿಷೇಧಿಸಿದ್ದಾನೆ. ಎಲ್ಲ ಮುಸಲ್ಮಾನರೂ ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವುದನ್ನು ಕಡ್ಡಾಯಗೊಳಿಸಿದ್ದಾನೆ. ಹಿಂದಿನ ಸುಲ್ತಾನರಂತಲ್ಲದೇ ಜನರೊಂದಿಗೆ ತಾನೂ ಒಬ್ಬ ಮನುಷ್ಯನೆಂಬಂತೆ ವರ್ತಿಸುತ್ತಿದ್ದಾನೆ. ಅವನ ಸುಧಾರಣೆಗಳಿಗೆ ಕಳಸವಿಟ್ಟಿದ್ದು; ಸುಲ್ತಾನರಿಂದ, ಅಧಿಕಾರಿಗಳಿಂದ ಪ್ರಜೆಗಳಿಗೆ ಏನೇ ಅನ್ಯಾಯವಾದರೂ ಸುಲ್ತಾನರ ವಿರುದ್ಧವೇ ದೂರು ಕೊಡಬಹುದು ಎಂದು ಡಂಗುರ ಸಾರಿದ್ದು.

ನಾಟಕದ ಒಂದು ಮುಖ್ಯ ಕ್ರಿಯೆ ಮೊದಲನೆಯ ದೃಶ್ಯದಲ್ಲಿ ಮೇಲಿನಂತೆ ಡಂಗುರ ಸಾರುವುದರ ಮೂಲಕವೇ ಘಟಿಸುತ್ತದೆ. ಈ ನ್ಯಾಯದಾನದ ಹೊಸ ಕಾಯಿದೆಯನ್ನು ಅಝೀಝನೆಂಬ ಅಗಸ ಬ್ರಾಹ್ಮಣನ ವೇಷದಲ್ಲಿ ದಿಲ್ಲಿಗೆ ಬಂದು ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುತ್ತಾನೆ. ಆರಂಭದಲ್ಲಿ ಇದೇನೂ ಅಂತಹ ಪ್ರಮುಖ ಘಟನೆಯೆನಿಸದಿದ್ದರೂ ಕೊನೆಯವರೆಗೂ ಅಝೀಝ ತನ್ನ ಕುಟಿಲ ತಂತ್ರಗಳಲ್ಲಿ ಯಶಸ್ವಿಯಾಗುತ್ತಾ ಹೋಗುವುದು ಸರ್ಕಾರದ ಕಾನೂನುಗಳ ಉಳುಚುದಾಣಗಳಿಗೆ ಸಾಕ್ಷಿಯಾಗುತ್ತದೆ. ಹೀಗಾಗಿ ಕಾನೂನು ಮಾಡುವ ಸುಲ್ತಾನ್ ಮುಹಮ್ಮದ್ ನಾಟಕದ ಒಂದು ತುದಿಯಾದರೆ ಅದನ್ನು ವ್ಯವಸ್ಥಿತ ಸಂಚುಗಳ ಮೂಲಕ ಭಗ್ನಗೊಳಿಸಿ ನಿಲ್ಲುವ ಅಝೀಝ ಇನ್ನೊಂದು ತುದಿಯಾಗುತ್ತಾರೆ.

“ನನಗೆ ರಕ್ತಪಾತ ಬೇಡ” ಎನ್ನುತ್ತಲೇ ಮುಹಮ್ಮದ ಕೊಲೆ-ರಕ್ತಪಾತದ ಸರಮಾಲೆಯನ್ನೇ ಹೆಣೆಯುತ್ತಾನೆ. ಧರ್ಮಗುರುಗಳಾದ ಶೇಖ ಇಮಾಮುದ್ದೀನರನ್ನು ತನ್ನಂತೆ ವೇಷಾಂತರಗೊಳಿಸಿ ಬಲಿಕೊಟ್ಟು ಆಯಿನೆ ಉಲ್ಮುಲ್ಕನನ್ನು ಗೆಲ್ಲುತ್ತಾನೆ. ಶಿಹಾಬುದ್ದೀನನ್ನು ಇರಿದು ಇರಿದು ಕೊಂದು ಅದಕ್ಕೆ ರಾಜಕಾರಣದ ಬೇರೆಯೇ ಬಣ್ಣ ಬಳಿಯುತ್ತಾನೆ. ಶಿಹಾಬುದ್ದೀನನೊಂದಿಗೆ ಸಂಚಿನಲ್ಲಿ ಪಾಲುದಾರರಾಗಿದ್ದ ಶೇಖ್ ಶಮಸುದ್ದೀನ್ ಹಾಗೂ ಅಮೀರರನ್ನು ಶೂಲಕ್ಕೇರಿಸಿ ಅವರ ಹೆಣಗಳಿಗೆ ಹುಲ್ಲು ತುಂಬಿಸಿ ಅರಮನೆಯ ಹೊರಗೆ ಎಂಟು ದಿನ ತೂಗಿಸಿ ಅನಂತರ ಊರಿಂದೂರಿಗೆ ಒಯ್ದು ರಾಜಬೀದಿಗಳಲ್ಲಿ ಪ್ರದರ್ಶಿಸುವಂತೆ ಮುಹಮ್ಮದ್ ಆಜ್ಞೆ ಮಾಡುತ್ತಾನೆ. ವಜೀರ ನಜೀಬನನ್ನು ಕೊಲ್ಲಿಸಿದಳೆಂದು ತನ್ನ ಮಲತಾಯಿಗೆ ಸಾರಾಸಾರಾ ವಿವೇಚನೆಯಿಲ್ಲದೇ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ನೀಡುತ್ತಾನೆ. ರಾಜಧಾನಿಯನ್ನು ದಿಲ್ಲಿಯಿಂದ ದೌಲತಾಬಾದ್‍ಗೆ ಸ್ಥಳಾಂತರಿಸುವ ನೆವದಲ್ಲಂತೂ ಹೆಣಗಳ ರಾಶಿಯೇ ಬೀಳುತ್ತದೆ. ಇಂಥಲ್ಲೆಲ್ಲ ಮುಹಮ್ಮದ ಪ್ರದರ್ಶಿಸುವ ರಾಜಕಾರಣದ ವಿಕಟ ಅಟ್ಟಹಾಸ ಹಾಗೂ ರಕ್ತಪಾತದ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳುವ ದಾಹ ಕಾಣಿಸುತ್ತದೆ. ಅವನ ಮಲತಾಯಿಯೇ ಒಮ್ಮೆ ಹೇಳಿದಂತೆ; ‘ರಾಜ್ಯ ಮರಣದ ಬಚ್ಚಲು ಮನೆಯಾಗುತ್ತದೆ’ ಅಧಿಕಾರದ ಅಮಲಿಗೆ ಸಿಕ್ಕ ವ್ಯಕ್ತಿ ಹೇಗೆ ಬೇರೆಯ ಜೀವಗಳನ್ನು ತೃಣ ಸಮನಾಗಿ ಕಾಣಲು ತೊಡಗುತ್ತಾನೆ ಎಂಬುದರ ಸಕೃದ್ದರ್ಶನವಾಗುತ್ತದೆ.

ಅಧಿಕಾರದ ಕೇಂದ್ರದಲ್ಲಿರುವ ಸುಲ್ತಾನ್ ಅಂಥವರ ಹಿತೈಷಿಗಳಂತೆ ಕಾಣಿಸಿಕೊಳ್ಳುವ ಅಧಿಕಾರಿಗಳು ಹೇಗೆ ತಮ್ಮ ವರ್ತನೆಗಳು ಹಾಗೂ ಸಲಹೆಗಳಿಂದ ದಾರಿ ತಪ್ಪಿಸುತ್ತಾರೆ ಎಂಬುದಕ್ಕೆ ಮುಹಮ್ಮದ್ ಹಾಗೂ ನಜೀಬರ ಉತ್ತಮ ಉದಾಹರಣೆ ಇಲ್ಲಿದೆ. ಮುಹಮ್ಮದ್‍ನ ಜೊತೆಗಿರುವ ಆಪ್ತರಲ್ಲಿ ಇತಿಹಾಸಕಾರ ಬರನಿ ಸಂಭಾವಿತನಾದರೆ ನಜೀಬ ಕುತ್ಸಿತ. ಶೇಖ್ ಇಮಾಮುದ್ದೀನರನ್ನು ಬಲಿ ಹಾಕುವ ಯೋಜನೆ ರೂಪಿಸಿದವನೇ ಅವನು. ಧರ್ಮವನ್ನು ರಾಜಕಾರಣದ ದಾಳವಾಗಿ ಬಳಸಿಕೊಳ್ಳುವ ಹುನ್ನರವೂ ಅವನದೇ. ಆದರೆ ಈ ಎಲ್ಲ ತೀರ್ಮಾನಗಳ ವ್ಯತಿರಿಕ್ತ ಪರಿಣಾಮಗಳಿಗೆ ಮಾತ್ರ ಸುಲ್ತಾನ್ ಹೊಣೆಗಾರನಾಗಬೇಕಾಗುತ್ತದೆ. ನಮ್ಮ ‘ಬ್ಯೂರೊಕ್ರಸಿ’ಯ ಹಲವು ದುರಂತಗಳ ಸಾಧ್ಯತೆ, ಸಂದರ್ಭಗಳು ಇಲ್ಲಿ ಬೇಡವೆಂದರೂ ಕಣ್ಣಿಗೆ ಕುಕ್ಕುತ್ತವೆ.

ಧರ್ಮ ಮತ್ತು ರಾಜಕಾರಣ ನಾಟಕದ ಉದ್ದಕ್ಕೂ ಹೆಣೆದುಕೊಂಡು ಹಲವು ತಿರುವುಗಳಿಗೆ ಕಾರಣವಾಗುತ್ತದೆ. ದೈವಿಕ ಹುಚ್ಚು ಮುಹಮ್ಮದನಿಗಿದ್ದರೂ ವರ್ತನೆಯಲ್ಲಿ ಅವನು ಪಕ್ಕಾ ರಾಜಕಾರಣಿ. ಧರ್ಮದಿಂದ ತನ್ನ ರಾಜಕಾರಣಕ್ಕೆ ಏನು ಲಾಭವಾಗುತ್ತದೆ ಎಂದೇ ಆತ ಚಿಂತಿಸುತ್ತಾನೆ. ಧರ್ಮವನ್ನು ತನ್ನ ಹಂಗಿನಲ್ಲಿಟ್ಟುಕೊಳ್ಳುವುದೇ ಅವನ ಆತ್ಯಂತಿಕ ಉದ್ದೇಶವಾಗಿದೆ. ಒಂದೊಮ್ಮೆ ಅದರಿಂದ ವ್ಯತಿರಿಕ್ತವಾದುದೇನಾದರೂ ಘಟಿಸಬಹುದೆನಿಸಿದರೆ ಅಲ್ಲಿಯೇ ಚಿವುಟಿಹಾಕುವ ಕಲೆ ಅವನಿಗೆ ಕರಗತ. ಪ್ರಾರ್ಥನೆಯ ಸಂದರ್ಭದಲ್ಲಿಯೇ ತನ್ನ ತಂದೆ ಹಾಗೂ ತಮ್ಮಂದಿರನ್ನು ಆತ ಕೊಲೆ ಮಾಡಿಸಿದ್ದಾನೆ. ಶೇಖ್ ಇಮಾಮುದ್ದೀನ “ಕುರಾನಿನಲ್ಲಿ ಸ್ಪಷ್ಟವಾಗಿ ಬರೆದ ಕಟ್ಟಳೆಗಳನ್ನು ಮುರಿದವನು” ಎಂದು ಆಪಾದಿಸುತ್ತಾರೆ ಹಾಗೂ “ನಿಶ್ಪಕ್ಷಪಾತ ನ್ಯಾಯದ ಹೆಸರಿನಲ್ಲಿ ಎಷ್ಟು ಸಯ್ಯಿದರನ್ನು, ಉಲೇಯಾರನ್ನು ಸೆರೆಮನೆಗೆ ತಳ್ಳಿಲ್ಲ?” ಎಂದೂ ಪ್ರಶ್ನಿಸುತ್ತಾರೆ. ಅದಕ್ಕೆ ಮುಹಮ್ಮದನ ತಣ್ಣಗಿನ ಉತ್ತರ ಕುತೂಹಲಕಾರಿ. ಆತ ಹೇಳುತ್ತಾನೆ; “ಅವರು ಧರ್ಮ ಬಿಟ್ಟು ರಾಜಕಾರಣದಲ್ಲಿ ಕೈಹಾಕಿದರು. ನನ್ನ ಧರ್ಮಕ್ಕೂ ನನ್ನ ರಾಜಕಾರಣಕ್ಕೂ ಏನು ಸಂಬಂಧ?” ಈ ಚರ್ಚೆಯ ಕೊನೆಯಲ್ಲಿ ಇಮಾಮುದ್ದೀನ ಸುಲ್ತಾನನನ್ನು ಎಚ್ಚರಿಸುತ್ತಾರೆ; “ಸುಲ್ತಾನ ಧಾರ್ಮಿಕ ನೀವು ಮತ್ತು ರಾಜಕಾರಣಿ ನೀವು-ಈ ಇಬ್ಬರನ್ನೂ ಬೇರೆ ಬೇರೆಯಾಗಿಟ್ಟು ಸಂಘರ್ಷಕ್ಕೆ ಎಡೆಕೊಡುತ್ತಿದ್ದೀರಿ. ಸಂಘರ್ಷ ಬಲಿತರೆ ಇವರಲ್ಲೊಬ್ಬನು ಸಾಯಲೇಬೇಕು” ಆಗ ಮುಹಮ್ಮದ ಆರ್ತನಾಗುತ್ತಾನೆ. ಇಲ್ಲೆಲ್ಲ ಜಾಣ್ಮೆಯಿಂದ ಬಳಸುವ ಧರ್ಮ ವಿವೇಕ ಶೂನ್ಯವಾದಾಗ ಆಗುವ ಅನಾಹುತದ ಸೆಳಕುಗಳಿವೆ. ಈ ದುರಂತ ಪರಂಪರೆ ತುದಿ ಮುಟ್ಟುವುದು ಘಿಯಾಸುದ್ದೀನರ ವೇಷದಲ್ಲಿದ್ದ ಅಗಸ ಅಝೀಝನ ಕಾಲಿಗೆ ಸುಲ್ತಾನ ದೀರ್ಘದಂಡ ನಮಸ್ಕಾರ ಮಾಡುವಲ್ಲಿ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಧರ್ಮದ ಮರೆಯಲ್ಲಿರುವ ಯಾರ ಕಾಲಿಗಾದರೂ ಬೀಳುತ್ತಾರೆ. ಮುಂದೆ ಇದೇ ಸಂದರ್ಭವನ್ನು ಅಝೀಝ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾನೆ. ತನಗೆ ಬೇಕಾದ ಅಧಿಕಾರವನ್ನು ಪಡೆದುಕೊಳ್ಳುತ್ತಾನೆ.

ಐತಿಹಾಸಿಕವಾಗಿಯೂ ಮುಹಮ್ಮದ ಜಾರಿಗೆ ತಂದ ಎರಡು ಯೋಜನೆಗಳು ಅವನನ್ನು ‘ಹುಚ್ಚು ಮಹಮ್ಮದ್’ನನ್ನಾಗಿಸಿದ್ದವು. ನಾಟಕದಲ್ಲಿ ಅವೆರಡೂ ಸಂದರ್ಭಗಳು ವಿಶೇಷವಾಗಿ ಚರ್ಚೆಗೊಳಗಾಗಿವೆ. ಮೊದಲನೆಯದು; ರಾಜಧಾನಿಯನ್ನು ಬದಲಾಯಿಸುವ ನಿರ್ಧಾರ. ದಿಲ್ಲಿಯಿಂದ ದೌಲತ್ತಾಬಾದಿಗೆ ಹೋಗುವ ದಾರಿಯಲ್ಲಿ ಡೇರೆಯೊಂದರಲ್ಲಿ ಆಝಂ ಹಾಗೂ ಬ್ರಾಹ್ಮಣರ ವೇಷದಲ್ಲಿರುವ ಅಝೀಝ ಕುಳಿತಿದ್ದಾರೆ. ಸುಲ್ತಾನರ ನೌಕರನೆಂಬ ನಾತೆಯಿಂದ ಅಝೀಝ ಜನರಿಂದ ದುಡ್ಡು ಕೀಳುತ್ತಾ, ದಬ್ಬಾಳಿಕೆ ನಡೆಸುತ್ತಿದ್ದಾನೆ. ಪ್ರಯಾಣದಲ್ಲಿ ಹೊಟ್ಟೆಗಿಲ್ಲದೇ ಹಾದಿ ಹೆಣಗಳಾಗಿ ಜನ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಖಲೀಫರ ವಂಶಸ್ಥರು ಬಂದಿದ್ದಾರೆ, ಎಲ್ಲ ಮುಸಲ್ಮಾನರೂ ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡಿರಿ ಎಂದು ಸುಲ್ತಾನ ಡಂಗುರ ಹೊಡೆಸುತ್ತಾನೆ. ಆಗ ಜನರು ಆಡಿದ ಮಾತುಗಳು ಸಮಕಾಲೀನ ಸಾಂಕ್ರಾಮಿಕದ ಸಂದರ್ಭದಲ್ಲಿ ಕೇಳಿಸಿದ ಮಾತುಗಳಂತೆಯೇ ಇವೆ;

1ನೆಯವ- ಪ್ರಾರ್ಥನೆಯಂತೆ ಪ್ರಾರ್ಥನೆ! ಯಾರಿಗೆ ಬೇಕಾಗಿದೆ ಪ್ರಾರ್ಥನೆ?

2ನೆಯವ-ಅನ್ನ ಕೊಡಲಿಕ್ಕೆ ಹೇಳು ಅವರಿಗೆ.

1ನೆಯವ-ನಮಗೆ ಹಸಿವು. ಅದರ ಮೇಲೆ ಪ್ರಾರ್ಥನೆಯಂತೆ. ಪಾಪ-ಪುಣ್ಯಗಳ ಮಾತಂತೆ.

3ನೆಯವ-ದಾರಿಯಲ್ಲೆಲ್ಲ ಹೆಣಗಳ ಸಾಲಂತೆ, ನನ್ನ ತಮ್ಮನ ಕಣ್ಣೆದುರಿಗೇ ಒಬ್ಬ ಮನುಷ್ಯ ವಿಲಿವಿಲಿ ಒದ್ದಾಡಿ ಸತ್ತನಂತೆ...ದೋಆಬದಲ್ಲಿ ಕಟುಕರ ಅಂಗಡಿಯ ಮುಂದೆ ಜನರ ಸಂತೆ ನೆರೆದಿತ್ತಂತೆ, ಏಕೆಂದರೆ ಕಟುಕ ಪ್ರಾಣಿಯನ್ನು ಕೊಲ್ಲುವಾಗ ಕಾರಂಜಿಯಾಗಿ ಪುಟಿಯುವ ನೆತ್ತರನ್ನು ಬೊಗಸೆಯಲ್ಲಿ ಹಿಡಿದು ಕುಡಿಯಲಿಕ್ಕಂತೆ...

ಹೀಗೆ ಮುಂದುವರಿಯುವ ಸಂಭಾಷಣೆ ಬಡಿದಾಟದಲ್ಲಿ ಪರಸ್ಪರ ಅಂತ್ಯಕಾಣುತ್ತದೆ. ಇವೆಲ್ಲ ಮಾತು ಹಾಗೂ ಘಟನೆಗಳನ್ನು ಸಮಕಾಲೀನತೆಯ ಬೆಳಕಿನಲ್ಲಿ ನೋಡಿದಾಗ ಹಲವು ಅರ್ಥಗಳು ಸ್ಫುರಿಸುತ್ತವೆ.

ಇನ್ನೊಂದು ಐಲು ನಿರ್ಧಾರ; ತಾಮ್ರದ ನಾಣ್ಯಗಳ ಚಲಾವಣೆ. ಮತ್ತು ಅದಕ್ಕೆ ಬೆಳ್ಳಿಯ ನಾಣ್ಯದ್ದೇ ಮೌಲ್ಯವೆಂಬ ಘೋಷಣೆ. ಆಪ್ತರು ಅದನ್ನು ಪ್ರಶ್ನಿಸಿದಾಗ ‘ಬೆಲೆ ತಾಮ್ರಕ್ಕೂ ಅಲ್ಲ ಬೆಳ್ಳಿಗೂ ಅಲ್ಲ, ಸುಲ್ತಾನರ ಮಾತಿಗೆ’ ಎಂಬ ಅಹಂಕಾರವನ್ನು ಪ್ರದರ್ಶಿಸಿದಾತ. ಕೆಲವೇ ದಿನಗಳಲ್ಲಿ ಮನೆ ಮನೆಗಳಲ್ಲೂ ತಾಮ್ರದ ಖೋಟಾ ನಾಣ್ಯಗಳನ್ನು ಟಂಕಿಸುವ ಸಾಲೆಗಳು ಪ್ರಾರಂಭವಾಗುತ್ತವೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಕೊನೆಗೆ ತಾಮ್ರದ ನಾಣ್ಯಗಳನ್ನು ಹಿಂಪಡೆದು ಅವಕ್ಕೆ ಬದಲಾಗಿ ಬೆಳ್ಳಿಯ ನಾಣ್ಯವನ್ನು ಕೊಡುವ ಯೋಜನೆಯನ್ನು ಸುಲ್ತಾನ ಸಾರುತ್ತಾನೆ. ಮೊದಲ ದಿನವೇ ಐನೂರು ಬಂಡಿಗಳಷ್ಟು ತಾಮ್ರದ ನಾಣ್ಯಗಳು ವಿನಿಮಯಕ್ಕೆ ಬಂದಿವೆ. ಅವುಗಳಲ್ಲಿ ಮುಕ್ಕಾಲಿಗಿಂತ ಹೆಚ್ಚು ಸುಳ್ಳು ತಾಮ್ರದ ನಾಣ್ಯಗಳು. ಮಲತಾಯಿ ಮುಹಮ್ಮದನನ್ನು ಕೇಳುತ್ತಾಳೆ; “ಇವುಗಳನ್ನೆಲ್ಲ ತೆಗೆದುಕೊಂಡು ಬೆಳ್ಳಿಯ ನಾಣ್ಯಗಳನ್ನು ಕೊಟ್ಟರೆ ನಿನ್ನ ಬೊಕ್ಕಸದ ಗತಿಯೇನಾಗಬೇಕು?” ಆಗ ತನ್ನ ತಪ್ಪಿನ ಅರಿವು ಅವನಿಗೆ ಆಗುತ್ತದೆ. ಆದರೆ ತಪ್ಪು ಘಟಿಸಿಹೋಗಿದೆ. ಮುಂದಾಲೋಚನೆಯಿಲ್ಲದ ಆರ್ಥಿಕ ತೀರ್ಮಾನಗಳು, ಯೋಜನೆಗಳು ಹೇಗೆ ದೇಶವನ್ನು ಟೊಳ್ಳು ಮಾಡಿವೆ ಎಂಬುದನ್ನು ಸ್ವಾತಂತ್ರ್ಯೋತ್ತರ ರಾಜಕಾರಣದ ಬೆಳಕಿನಲ್ಲೂ ಕಾಣಬಹುದು.

ನಾಟಕದಲ್ಲಿ ಜೀವ ಪಡೆಯುವ ಇನ್ನೊಂದು ಮಹತ್ವದ ಪ್ರತಿಮೆ ಚದುರಂಗ. ಪ್ರಖರ ಜಾಣ್ಮೆ, ಭಾವನಾರಹಿತ ಲೆಕ್ಕಾಚಾರ, ಮಿಂಚಿನಂತಹ ಚುರುಕುತನ ಇವು ರಾಜಕಾರಣದ ನಡೆಗಳಾಗಿರುವಂತೆ ಚದುರಂಗದಾಟಕ್ಕೂ ಸಲ್ಲುವಂಥವು. ಮುಹಮ್ಮದ್ ತಲೆಕೆಡಿಸಿಕೊಂಡು ಚದುರಂಗದ ಸಮಸ್ಯೆ ಬಿಡಿಸುವುದರಲ್ಲೇ ತೊಡಗಿರುತ್ತಾನೆ. ಎರಡನೆಯ ದೃಶ್ಯದಲ್ಲೇ ಮುಹಮ್ಮದ ಚದುರಂಗದಾಟದ ಪ್ರಕ್ರಿಯೆಯ ಮೂಲಕ ತನ್ನ ಚದುರಂಗದ ಗೆಳೆಯ ಆಯಿನೇ ಉಲ್ಮುಲ್ಕನನ್ನು ಸೋಲಿಸುವ ಉಪಾಯವನ್ನು ಮಾಡುತ್ತಾನೆ. ಬುದ್ಧಿವಂತಿಕೆಯನ್ನು ನೆಚ್ಚಿಕೊಂಡ ಮುಹಮ್ಮದ್ ಇದೇ ಕಾರಣಕ್ಕೆ ಭಾವನೆಗಳಿಗೆ ಎರವಾಗುತ್ತಾನೆ. ಈ ಸನ್ನಿವೇಶ ನಾಟಕದುದ್ದಕ್ಕೂ ಬೇರೆ ಬೇರೆ ವಿನ್ಯಾಸದಲ್ಲಿ ಪ್ರತಿಫಲಿಸುತ್ತದೆ. ತುಘಲಕ್ ಹಲವರನ್ನು ಕೊಲ್ಲುತ್ತಾ ಕೇಂದ್ರದತ್ತ ಸಾಗುವುದು, ರಾಜಧಾನಿಯನ್ನು ಬದಲಿಸುವುದು ಚದುರಂಗದ ಮುಖ್ಯ ಕಾಯಿಗಳ ಚಲನೆಯಾದರೆ; ಅಝೀಝನಂತಹ ಸಾಮಾನ್ಯ ಮುಹಮ್ಮದನ ಸಮಾನಕ್ಕೆ ಬೆಳೆದು ನಿಲ್ಲುವುದು ಪೇದೆಗಳ ಚಲನೆಯ ಸಾಧ್ಯತೆಯೆನಿಸುತ್ತದೆ.

ನಾಟಕದ ಆರಂಭದಿಂದಲೂ ಮೋಸ ಮಾಡುತ್ತಾ ಸುಲ್ತಾನನ ಎಲ್ಲಾ ಕ್ರಿಯೆಗಳಲ್ಲೂ ಬಿರುಕುಗಳನ್ನು ಸೃಷ್ಟಿಸುತ್ತಾ ಬಂದಿದ್ದ ಅಝೀಝ ಸಮಕಾಲೀನ ಸಂದರ್ಭದಲ್ಲಿಯೂ ಕಾಣಬಹುದಾದ ಪಾತ್ರವೇ ಆಗಿದ್ದಾನೆ. ವ್ಯವಸ್ಥೆಯೇ ನಿರ್ಮಿಸಿದ ಉತ್ಪಾದನೆಯಾದ ಈತ ಶುರುವಿನಲ್ಲೇ ಬ್ರಾಹ್ಮಣನ ವೇಷ ಧರಿಸಿ ಸುಲ್ತಾನನನ್ನು ವಂಚಿಸಿ ಅವನಲ್ಲೇ ಕೆಲಸ ಗಿಟ್ಟಿಸಿದ್ದಾನೆ. ನಂತರ ರಾಜಧಾನಿಯ ಬದಲಾವಣೆಯ ಬವಣೆಯಲ್ಲಿ ಜನ ಬಸವಳಿದಿದ್ದಾಗ ಅವರನ್ನು ಅಧಿಕಾರದ ಭೂತ ತೋರಿಸಿ ಸುಲಿಯುತ್ತಾನೆ. ದೋಆಬ್ ಬರಗಾಲವನ್ನು ಬಳಸಿಕೊಂಡು ಹೊಲ - ಮನೆ ಆಸ್ತಿ ಸಂಪಾದಿಸುತ್ತಾನೆ, ಖೋಟಾ ತಾಮ್ರದ ನಾಣ್ಯಗಳನ್ನು ಟಂಕಿಸಿ ಹಣ ಮಾಡಿದ್ದಾನೆ, ತನ್ನ ಗುರುತು ಪ್ರಕಟವಾಗುತ್ತದೆ ಎನ್ನುವಾಗ ಸುಲ್ತಾನರ ಸೈನ್ಯದ ಛಾವಣಿಯಲ್ಲೇ ಕೆಲಸಕ್ಕೆ ಸೇರುತ್ತಾನೆ, ಕೊನೆಗೆ ಅರಮನೆಯ ಒಳಗನ್ನೇ ಪ್ರವೇಶಿಸುವ ತಂತ್ರವಾಗಿ ದೌಲತಾಬಾದಿಗೆ ಆಗಮಿಸಿದ್ದ ಖಲೀಫರ ವಂಶಸ್ಥ ಘಿಯಾಸುದ್ದೀನರನ್ನು ಕೊಲೆ ಮಾಡಿ, ಅವರ ಉಂಗುರ ಚಿಹ್ನೆಗಳನ್ನು ಧರಿಸಿ ಮುಹಮ್ಮದನೇ ತನ್ನ ಕಾಲಿಗೆ ಬೀಳುವಂತೆ ಮಾಡುತ್ತಾನೆ. ಮುಹಮ್ಮದನ ಮುಂದೆ ಅಝೀಝನ ಈ ಎಲ್ಲ ಕುತಂತ್ರಗಳೂ ಬಯಲಾಗುತ್ತವೆ. ಈ ಸಂದರ್ಭದ ಕೆಲವು ಸಂಭಾಷಣೆಗಳು ಅಜೀವವಾಗಿವೆ; ಅಝೀಝ ಮುಹಮ್ಮದ್ ಹಾಗೂ ಬರನಿ ಇವರ ಎದುರು ಹೇಳುತ್ತಾನೆ “...ನೀವು ನನ್ನನ್ನು ಧರ್ಮ ಗುರುಗಳು ಎಂದು ಸ್ವಾಗತಿಸಿದ್ದೀರಿ. ನನ್ನ ಹೆಸರಿನಲ್ಲಿ ಐದು ವರ್ಷಗಳವರೆಗೆ ನಿಲ್ಲಿಸಿದ್ದ ಪ್ರಾರ್ಥನೆಯನ್ನು ಮತ್ತೆ ಆರಂಭಿಸುವವರಿದ್ದೀರಿ. ಎಲ್ಲರೆದುರಿಗೆ ನನ್ನ ಕಾಲಡಿಗೆ ಬಿದ್ದಿದ್ದೀರಿ. ಈಗ ನಾನು ಘಿಯಾಸುದ್ದೀನ ಅಬ್ಬಸಿದನಲ್ಲ, ಬರೇ ಅಗಸ ಎಂದು ತಿಳಿದರೆ ಜನರೆಲ್ಲ ಬಿದ್ದು ಬಿದ್ದು ನಗುತ್ತಾರೆ. …ಘಿಯಾಸುದ್ದೀನರನ್ನು ಕೊಂದಿದ್ದಕ್ಕೆ ನಾನು ತಪ್ಪಿತಸ್ಥ ಎನ್ನುವುದಾದರೆ; ಶೇಖ್ ಇಮಾಮುದ್ದೀನರನ್ನು ಕೊಂದ ಸುಲ್ತಾನನೂ ನನ್ನಷ್ಟೇ ಅಪರಾಧಿ. ನನಗೆ ಶಿಕ್ಷೆಯಾಗುವುದಾದರೆ ಸುಲ್ತಾನನಿಗೂ ಅದೇ ಶಿಕ್ಷೆಯಾಗಬೇಕು” ಹೀಗೆ ಚದುರಂಗದ ನಡೆಯಂತೆಯೇ ಮುಹಮ್ಮದ್ ನನ್ನು ಅಝೀಝ ಹಿಡಿದು ಹಾಕುತ್ತಾನೆ.

ಇದಕ್ಕೆ ಪರಿಹಾರವೇನು ಎಂದು ಮುಹಮ್ಮದ್ ಅಸಹಾಯಕನಾದಾಗ ಅಝೀಝ ಅಧಿಕಾರವನ್ನು ಬೇಡುತ್ತಾನೆ. ಅನಿವಾರ್ಯತೆಯಲ್ಲಿ ಸಿಲುಕಿಕೊಂಡ ಮುಹಮ್ಮದ್; “ದಕ್ಷಿಣದಲ್ಲಿ ನನಗೆ ಹಲವು ಸರದಾರರು ಬೇಕಾಗಿದ್ದಾರೆ. ನೀನು ಗುಪ್ತವಾಗಿ ದಕ್ಷಿಣಕ್ಕೆ ಹೋಗಬೇಕು. ಅಲ್ಲಿ ನನ್ನ ಸೇನಾಪತಿ ಖುಶರೌಮಲೀಕನಿಗೆ ಪತ್ರ ಬರೆದು ನಿನ್ನನ್ನು ಸ್ವಾಗತಿಸಲಿಕ್ಕೆ ತಿಳಿಸುತ್ತೇನೆ. ಸರದಾರನಾಗುತ್ತೀ ಸಾಕಲ್ಲ?” ಎಂದು ಹೇಳಿ ಪದವಿಯನ್ನು ನೀಡುತ್ತಾನೆ. ಅಲ್ಲಿಂದ ಮಾಯವಾಗುವ ಮೊದಲು ಅಝೀಝ ಘಿಯಾಸುದ್ದೀನನ ವೇಷದಲ್ಲಿ ಜನರ ಎದುರು ಮುಹಮ್ಮದನಿಗೆ ಆಶೀರ್ವಾದ ಮಾಡಿಯೇ ಹೋಗುತ್ತಾನೆ. ಈ ನೀಚನಿಗೆ ಅಧಿಕಾರ ನೀಡಿದ್ದು ಅನ್ಯಾಯವೆಂದು ಬರನಿ ಪ್ರತಿಭಟಿಸಿ, ಅವನಿಗೆ ನೀಡಬೇಕಾದ ಚಿತ್ರಹಿಂಸೆಯನ್ನು ವಿವರಿಸುತ್ತಾನೆ. ಆದರೆ ಸುಲ್ತಾನ್ ಅಸಹಾಯಕನಾಗಿದ್ದಾನೆ. ಅಲ್ಲಿಗೆ ಗೆದ್ದವನು ಅಝೀಝನೇ. ನ್ಯಾಯ-ಅನ್ಯಾಯಗಳ ಗೋಜಲಿನಲ್ಲಿ ಮುಹಮ್ಮದ್ ಸೋತುಹೋಗುತ್ತಾನೆ. ಮರಣ ಸದೃಶ ನಿದ್ರೆಗೆ ಜಾರುತ್ತಾನೆ. ನಾಟಕ ದುರಂತವಾದರೂ ಮುಹಮ್ಮದ್ ಸಾಯುವುದಿಲ್ಲ. ಒಬ್ಬ ಸಾಮಾನ್ಯ ಮನುಷ್ಯನ ಕೈಯಲ್ಲಿ ಸುಲ್ತಾನ್ ಪರಾಜಿತನಾಗುವುದೇ ಚದುರಂಗದಾಟ ತಂತ್ರದ ಬಹುದೊಡ್ಡ ವ್ಯಂಗ್ಯವಾಗಿದೆ.

ನಾಟಕದ ಮುಖ್ಯ ಪಾತ್ರಗಳು ತುಘಲಕನ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಬಿಂಬಿಸುವಂತೆ ನಿರ್ಮಾಣಗೊಂಡಿವೆ. ಶೇಖ್ ಇಮಾಮುದ್ದೀನ್ ತುಘಲಕ್ ನ ಧಾರ್ಮಿಕ ಪ್ರಜ್ಞೆಯನ್ನು ಬಿಂಬಿಸಿದರೆ; ನಜೀಬ ಸುಲ್ತಾನನ ಹಿಂಸಾ ಪ್ರವೃತ್ತಿಯನ್ನು ಪ್ರತಿಫಲಿಸುತ್ತಾನೆ. ಬರನಿ ಅವನ ಐತಿಹಾಸಿಕ ಆಸಕ್ತಿಯನ್ನು ಪ್ರಕಟಿಸಿದರೆ ಅಝೀಝ ಮುಹಮ್ಮದನ ಪಿತೂರಿಕೋರ ವ್ಯಕ್ತಿತ್ವದ ವ್ಯಂಗ್ಯಚಿತ್ರವಾಗಿದ್ದಾನೆ. ತನ್ನೆಲ್ಲಾ ಮೌಲಿಕ ಗುಣಗಳನ್ನೂ ಕಳೆದುಕೊಂಡು ಕೇವಲ ವಿಕೃತಿಗಳೊಂದಿಗೆ ಸುಲ್ತಾನ ಎದುರಾಗುವುದೇ ನಾಟಕದ ಪರಾಕಾಷ್ಠೆಯಾಗಿದೆ.

ಗಿರೀಶ್ ಕಾರ್ನಾಡರು ಇಂಗ್ಲೆಂಡಿನಲ್ಲಿ ಉನ್ನತ ಶಿಕ್ಷಣ ಪಡೆದು 1963ರಲ್ಲಿ ಹಿಂದಿರುಗಿ ಬಂದ ಮೇಲೆ ಬರೆದ ನಾಟಕವಿದು. ಈಗಾಗಲೇ ಪ್ರಕಟವಾಗಿದ್ದ ‘ಯಯಾತಿ’ ಇನ್ನೂ ರಂಗವೇರಿರಲಿಲ್ಲ. ಈ ನಾಟಕದ ಗತಿಯೂ ಏನಾಗುತ್ತದೋ ಎಂಬ ಅನುಮಾನವಿತ್ತಂತೆ. ಕೀರ್ತಿನಾಥ ಕುರ್ತಕೋಟಿಯವರು; ‘ಪ್ರಥಮ ದರ್ಜೆಯ ಯಾವುದೇ ಐತಿಹಾಸಿಕ ನಾಟಕವೂ ಕನ್ನಡದಲ್ಲಿ ಕಂಡುಬರುವುದಿಲ್ಲ’ ಎಂದು ಮಾಡಿದ್ದ ಟೀಕೆ ಈ ಬಾರಿ ತಾವು ಐತಿಹಾಸಿಕ ವಸ್ತುವಿನತ್ತ ಹೊರಳಲು ಕಾರಣವಾಯಿತು ಎಂದು ಕಾರ್ನಾಡರು ಸ್ಮರಿಸಿದ್ದಾರೆ. ಬಾಲ್ಯದಲ್ಲಿ ನೋಡಿದ್ದ ಕಂಪನಿ ನಾಟಕಗಳ ರಚನಾ ಸಂವಿಧಾನ ಹಾಗೂ ವೈಚಾರಿಕವಾಗಿ ಪ್ರೇರಿಸಿದ ಸಮಕಾಲೀನ ರಾಜಕೀಯ ಸಂಗತಿಗಳು ನಾಟಕದ ಸ್ವರೂಪವನ್ನು ನಿರ್ಧರಿಸಿದವು. ಕುರ್ತಕೋಟಿಯವರು ಗುರುತಿಸಿರುವಂತೆ; “ಮನುಷ್ಯ ದೇವತ್ವದ ಕನಸನ್ನು ಕಾಣುವ ಪಶುವಾಗಿರುವುದೇ ಈ ನಾಟಕ ನಿರೂಪಿಸುವ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ತಾರ್ಕಿಕ ವಾದವೆಂಬಂತೆ ಚರ್ಚಿಸದೇ ಪಾತ್ರಗಳು ಮತ್ತು ಸನ್ನಿವೇಶಗಳ ಮುಖಾಂತರವಾಗಿ ಸಾಕಾರವಾಗಿ ನಿರೂಪಿಸುವುದೇ ನಾಟಕದ ಸಬಲತೆಗೆ ಮುಖ್ಯ ಕಾರಣವಾಗಿದೆ”.

ಭಾರತೀಯ ರಂಗಭೂಮಿಯ ಮೇಲೆ ಅನ್ಯಾದೃಶವಾಗಿ ಮೂಡಿಬಂದ ‘ತುಘಲಕ್’ ನಾಟಕ ಕನ್ನಡ ರಂಗಭೂಮಿಯನ್ನೂ ಆವರಿಸಿಕೊಂಡಿದೆ. ರಂಗಭೂಮಿಯಲ್ಲಿ ತುಘಲಕ್ ನ ಪಾತ್ರಕ್ಕೆ ಬಹುಕಾಲ ಜೀವ ತುಂಬಿ ನಟಿಸಿದವರು ಖ್ಯಾತ ನಟ ಸಿ. ಆರ್. ಸಿಂಹ. ಅವರು ತಮ್ಮದೊಂದು ಬರೆಹದಲ್ಲಿ ತುಘಲಕ್ ಪಾತ್ರದ ಅಗಾಧತೆಯನ್ನು ಕುರಿತು ಮಾತನಾಡಿದ್ದಾರೆ; “ತುಘಲಕ್ ನಾಟಕದ ಆಳ ವಿಸ್ತಾರಗಳೇ ಅಗಾಧವಾಗಿವೆ. ...ಪ್ರಚಂಡ ಬುದ್ಧಿ, ಕನಸುಗಾರಿಕೆ, ಭವ್ಯ ಭವಿಷ್ಯತ್ತಿನ ಹಂಬಲ ಅವನಿಗೆ ಅಪೂವ ಶೋಭೆಯನ್ನು ಕೊಟ್ಟಿವೆ. ದೇವರ ರಾಜ್ಯವನ್ನು ಭೂಮಿಯ ಮೇಲೆ ಸ್ಥಾಪಿಸುವ ಅವನ ದಿವ್ಯ ಬಯಕೆ, ಹಿಂದೂ ಮುಸಲ್ಮಾನರ ನಡುವೆ ಮೈತ್ರಿಯನ್ನು ಬೆಳೆಸುವ ಆಶಯದಿಂದ ಅವನೊಬ್ಬ ಧಾರ್ಮಿಕ ದಾರ್ಶನಿಕನಂತೆ, ವಿಷನರಿಯಂತೆ ಕಾಣುತ್ತಾನೆ. ಆದರೆ ಇವೆಲ್ಲದರ ಜತೆ ಕುಇಲತೆ, ಉಗ್ರವಾದ ಕ್ರೌರ್ಯ, ಹಿಂಸಾ ಪ್ರವೃತ್ತಿ, ಹೀನ ರಾಜಕೀಯದಾಟ ಅವನ ಪಾತ್ರವನ್ನು ಜಟಿಲವಾಗಿಸಿವೆ. ಕ್ಷಣಕ್ಕೊಮ್ಮೆ ಅವನ ಮನಸ್ಥಿತಿಯ ಪಲ್ಲಟಗಳು ವಿಸ್ಮಯಗಳನ್ನು ಚಿಮ್ಮಿಸುತ್ತವೆ. ..ಅವನನ್ನು ಕಂಡರೆ ಅಸಾಧ್ಯ ಮೆಚ್ಚುಗೆ, ಹಾಗೆಯೇ ಭಯ, ಹೇಸಿಗೆ ಎಲ್ಲವೂ ಸಾಧ್ಯ. ಇಂಥ ಆಳ ವಿಸ್ತಾರಗಳ, ಅನೇಕ ವೈವಿಧ್ಯ ಸ್ತರಗಳ ಒಂದು ಸಂಕೀರ್ಣ ಪಾತ್ರ ಸೃಷ್ಟಿ ಭಾರತೀಯ ನಾಟಕ ಸಾಹಿತ್ಯದಲ್ಲಿ ಇನ್ನೊಂದಿಲ್ಲ”. ಜಿ. ಎಸ್. ಆಮೂರ ಅವರು; “ಸ್ವಾತಂತ್ರ್ಯೋತ್ತರದ ದಶಕಗಳ ಭಾರತದ ನಾಯಕರು ಕಂಡ ಧರ್ಮ ನಿರಪೇಕ್ಷ ರಾಷ್ಟ್ರದ ಕನಸಿನ ಸೂಚನೆ ತುಘಲಕ್ ನಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ. ಹಾಗೆಯೇ ಆದರ್ಶವಾದದ ದುರಂತ ಕೂಡ ಕಾಲಾತೀತವಾದುದು” ಎಂದು ಅಭಿಪ್ರಾಯ ಪಡುತ್ತಾ; ನಾಟಕದ ಮೇಲೆ ಕಮ್ಯೂನ ‘ಕ್ಯಾಲಿಗುಲ’ದ ಪ್ರಭಾವವನ್ನು ಗುರುತಿಸಿದ್ದಾರೆ. ಭಾರತದ ಬಹುತೇಕ ಎಲ್ಲ ಭಾಷೆಗಳಿಗೂ ‘ತುಘಲಕ್’ ಅನುವಾದಗೊಂಡಿದೆ. ಹಾಗೂ ಭಾರತೀಯ ನಾಟಕ ಹಾಗೂ ರಂಗಭೂಮಿಯ ಮುಖ್ಯ ಕೃತಿಯಾಗಿದೆ.

ಈ ಅಂಕಣದ ಹಿಂದಿನ ಬರೆಹಗಳು:

ಎಂದಿಗೂ ಮುಪ್ಪಾಗದ ’ಹಸಿರು ಹೊನ್ನು’

ಪ್ರಾದೇಶಿಕತೆಯ ದಟ್ಟ ವಿವರಗಳ-ಮಲೆಗಳಲ್ಲಿ ಮದುಮಗಳು

ಗ್ರಾಮಾಯಣ ಎಂಬ ಸಮಕಾಲೀನ ಪುರಾಣ

ಬದುಕಿನ ದಿವ್ಯದರ್ಶನ ಮೂಡಿಸುವ `ಮರಳಿ ಮಣ್ಣಿಗೆ’

ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’

ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ

ಪುಸ್ತಕ ಲೋಕವೆಂಬ ಬದುಕಿನ ಬುತ್ತಿ

ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'

ಅಂಬಿಕಾತನಯದತ್ತರ ಸಖೀಗೀತ

ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...