ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ

Date: 03-11-2020

Location: ಬೆಂಗಳೂರು


’ಕಾಣದ ಹಕ್ಕಿಯ ಹಾಡನ್ನು ಕಾಣುವ ಗಿಡಗಂಟಿಯ ಕೊರಳು ಪ್ರಕಟಪಡಿಸುವ ರೂಪಕವೇ ವಿಶ್ವಮೈತ್ರಿಗೆ ಉದಾಹರಣೆ’ ಎನ್ನುವ ಕವಿ-ವಿಮರ್ಶಕಿ ಡಾ. ಗೀತಾ ವಸಂತ ಅವರು ’ಹಕ್ಕಿಯಕೊರಳೂ ಗಿಡಗಂಟಿಯ ಕೊರಳೂ ಅಭೇದವಾಗಿ ನಾದಹೊಮ್ಮಿಸುವಲ್ಲಿ ಅದು ನಿಚ್ಚಳವಾಗಿದೆ. ಪರಿಸರದಲ್ಲಿ ಜೀವಿಗಳ ಪರಸ್ಪರ ಅವಲಂಬನೆ ಹಾಗೂ ಸಂಬಂಧಗಳ ನೆಲೆ ದಕ್ಕದಿದ್ದರೆ ಬದುಕು ಮರಣಮುಖಿಯಾಗುವಲ್ಲಿ ಸಂಶಯವಿಲ್ಲ. ವ್ಯಕ್ತಿಯು ತಾನು ಸಮಗ್ರವಿಶ್ವಕ್ಕೆ ಸೇರಿದವ/ಳೆಂದು ತಿಳಿದಾಗ ಮಾತ್ರ ವಿಶ್ವಮೈತ್ರಿಯ ಪೂರ್ಣದೃಷ್ಟಿಯು ಅವತರಿಸುತ್ತದೆ’ ಎಂದು ವಿವರಿಸಿದ್ದಾರೆ.

ವಿಶ್ವಪ್ರಜ್ಞೆಯನ್ನು ಅಖಂಡವಾಗಿ ಭಾವಿಸಲು ಅಶಕ್ತರು ನಾವು. ಅದನ್ನು ದ್ವಂದ್ವದ ಮೂಲಕವೇ ಅರಿಯುವುದು ನಮ್ಮ ಪಾಡು. ಆಕಾಶಕ್ಕೊಂದು ಚೌಕಟ್ಟು ಹಾಕಿ ಆಲಯದಲ್ಲಿ ಬಯಲನ್ನು ಹಿಡಿಯ ಹೊರಡುವ ನಾವು, ನಾವು ಕಂಡದ್ದಷ್ಟೇ ನಮ್ಮ ಜಗತ್ತೆಂದು ಬೀಗುವುದು ಲೋಕವಾಸ್ತವ. ಅದನ್ನೇ ಬೇಂದ್ರೆಯವರು ’ಕಣ್ಣಜಂಭ’ ವೆನ್ನುತ್ತಾರೆ. ಅಣುವಿನೊಡಲನ್ನೂ ಕಾಣಲಾಗದ ನಾವು ಮಹತ್ತಿನ ಅನಂತ ಚಲನೆಯನ್ನೂ ಗುರುತಿಸಲಾರೆವು. ಈ ಅಣು ಮಹತ್ತುಗಳ ನಡುವಿನ ಸಂಬಂಧದ ಸ್ವರೂಪವನ್ನು ಧ್ಯಾನಿಸುವ ಬೇಂದ್ರೆಯವರ ಕಾವ್ಯಕ್ಕೆ ನಮ್ಮನ್ನು ತೆರೆದುಕೊಳ್ಳಲು ನೋಟದ ಮಿತಿಗಳನ್ನು ಮೀರಬೇಕೆಂಬುದು ನನ್ನ ನಮ್ರ ತಿಳಿವಳಿಕೆ. ಬೇಂದ್ರೆಯವರು ಅವರ ’ನಾನು’ ಎಂಬ ಕವಿತೆಯಲ್ಲಿ ವಿಶ್ವಮಾತೆಯ ಗರ್ಭಕಮಲಜಾತ ಪರಾಗ ಪರಮಾಣು ಕೀರ್ತಿ ನಾನು ಎಂಬ ನುಡಿಯೊಂದಿದೆ. ವಿಶ್ವದ ಭಾಗವೇ ಆದ ಪ್ರಜ್ಞೆಯು ’ನಾನು’ ಎಂದು ಒಡೆದು ತೋರುವುದೇ ಸೃಷ್ಟಿಯ ರಹಸ್ಯ. ಆ ಪ್ರಜ್ಞೆಯು ಮತ್ತೆ ಸೃಷ್ಟಿಯನ್ನು ನೋಡುವುದು, ಅದರ ಕುರಿತೇ ಹಾಡಬಯಸುವುದೊಂದು ಸೋಜಿಗ.

ವಿಶ್ವಚೈತನ್ಯವು ಆಕಾರ ತಳೆಯುವುದು ಸೃಷ್ಟಿಯಾದರೆ, ನಿರಾಕಾರಗೊಳ್ಳುವುದೇ ಪ್ರಳಯ. ವಿಶ್ವದ ಇರುವಿಕೆಯನ್ನು ಕಾಣಲು ’ನಾನೆಂಬ ಪ್ರಜ್ಞೆ’ ಎಚ್ಚರಗೊಳ್ಳಬೇಕು. ನಾನು ಮತ್ತು ವಿಶ್ವ ಎಂಬ ದ್ವಂದ್ವವು ಮೂಡಿ ಮತ್ತೆ ಅದು ಅಳಿಯುವ ನೋಟದ ಬೆಡಗನ್ನು ಬೇಂದ್ರೆಕಾವ್ಯವು ಹೊಂದಿದೆ. ಪ್ರಜ್ಞೆ ಮೊದಲೋ ಭೌತವಸ್ತು ಮೊದಲೋ? ಎಂಬ ಜಿಜ್ಞಾಸೆ ನಮ್ಮಲ್ಲಿ ಮೊದಲಿಂದಲೂ ಇದೆ. ಪ್ರಜ್ಞೆಯೆಂಬುದು ಜೀವವಿಕಾಸದ ಒಂದು ಹಂತದಲ್ಲಿ ಉಂಟಾದ ಸಂಕೀರ್ಣ ರಚನೆಯೆಂಬುದು ವಿಜ್ಞಾನದ ತಿಳಿವಳಿಕೆಯಾದರೆ, ವಿಶ್ವಪ್ರಜ್ಞೆಯೇ ಆದಿ ಆಧಾರವಾಗಿದ್ದು ಅಲ್ಲಿಂದ ಸೃಷ್ಟಿಯು ಮೂಡಿ ವ್ಯಷ್ಟಿ ಪ್ರಜ್ಞೆ ಪ್ರತ್ಯೇಕಗೊಂಡಿತೆಂಬುದು ಆಧ್ಯಾತ್ಮಿಕ ಸಾಧನಾ ಪಂಥಗಳ ನಿಲುವು. ಈ ಅರಿವು ಬೇಂದ್ರೆಯವರ ಕಾವ್ಯ ನಿರ್ಮಿತಿಯ ಜೀವಾಳವಾಗಿ ಹರಿಯುತ್ತ ಹೋಗಿದೆ. ವಿಶ್ವಪ್ರಜ್ಞೆಯೊಂದಿಗೆ ಬೆಸೆದುಕೊಂಡ ಮೈತ್ರಿಯ ಸ್ವರೂಪವನ್ನು ಕಾಣುವ ಹಂಬಲ ಅವರ ಕಾವ್ಯದಲ್ಲಿ ಹಾಸುಹೊಕ್ಕಾಗಿದೆ. ದೃಷ್ಟಿ- ದೃಶ್ಯ-ದೃಷ್ಟಾರ ಎಂಬ ಭೇದವಳಿಯುವಂತೆ ವಿಶ್ವಮೈತ್ರಿಯನ್ನು ಸಾಧಿಸುವ ಮಾರ್ಗಗಳ ಶೋಧವಾಗಿಯೂ ಬೇಂದ್ರೆಕಾವ್ಯವು ನಮಗೆ ಧ್ವನಿಸುತ್ತದೆ. ಕತ್ತಲು-ಬೆಳಕು, ನಾಮ-ರೂಪ, ಆಕಾರ ನಿರಾಕಾರಗಳ ದ್ವಂದ್ವ ಕಳೆದುಕೊಂಡು ಒಂದಾಗುವುದೇ ವಿಶ್ವಮೈತ್ರಿ.

ವಿಶ್ವವು ತಾನೇ ತಾನಾಗಿ ಇರುವ ಇರುವು. ಅದನ್ನು ಅರಿಯುವ ಮಹಾನ್ ಗಾಥೆಯಾಗಿ ಬೇಂದ್ರೆ ಕಾವ್ಯವು ಕಾಣಿಸುತ್ತದೆ. ಇರುವು ಮತ್ತು ಅರಿವಿನ ಮಧ್ಯೆ ಹರಿಯುವ ಈ ಕಾವ್ಯ ತನ್ನ ಸೃಜನಶೀಲ ವಿನ್ಯಾಸಗಳಿಂದಾಗಿ ನಮ್ಮನ್ನು ಇನ್ನಿಲ್ಲದಂತೆ ಸೆಳೆಯುತ್ತದೆ. ವಿಶ್ವಮೈತ್ರಿಯೆಂದಾಗ ವಿಶ್ವದೊಡನೆ ಯಾವುದರ ಮೈತ್ರಿ, ಅದು ಏಕೆ, ಹೇಗೆ ಎಂಬೆಲ್ಲ ಪ್ರಶ್ನೆಗಳು ಒಟ್ಟೊಟ್ಟಿಗೆ ಉದ್ಭವಿಸುತ್ತವೆ. ಇಡೀ ವಿಶ್ವರಚನೆಯಲ್ಲಿರುವ ಅನೂಹ್ಯ, ಅತಾರ್ಕಿಕವಾದ ಮೈತ್ರಿ ಹಾಗೂ ಅದರೊಂದಿಗೆ ಬೆಸೆದ ತನ್ನ ಸಂಬಂಧದ ಸ್ವರೂಪವನ್ನೂ ಈ ಕಾವ್ಯವು ಧ್ಯಾನಿಸಿದೆ. ಈ ಧ್ಯಾನವೇ ಬೇಂದ್ರೆಯವರ ಸಮರಸವೇ ಜೀವನ ಎಂಬ ಸೂತ್ರವಾಕ್ಯದ ರೂಪಣೆಗೆ ಕಾರಣವಾಗಿದೆ. ವಿಶ್ವಸಾಮರಸ್ಯವನ್ನು ಅರಿತ ಕವಿಮನವು ಅದನ್ನು ವಾಸ್ತವದ ಬದುಕಲ್ಲೂ ಕಾಣಲು ಹಂಬಲಿಸುತ್ತದೆ. ವೈಯಕ್ತಿಕ ಸಂಬಂಧಗಳಲ್ಲೂ ಅದನ್ನೇ ಹೆಣೆಯಲು ಬಯಸುತ್ತದೆ. ಸಾಮಾಜಿಕ ನೆಲೆಯ ಸಾಮರಸ್ಯವನ್ನೂ ಇದೇ ತಾತ್ವಿಕ ನೆಲೆಯಲ್ಲಿ ಕಾಣಲು ಹಾಗೂ ಕಟ್ಟಲು ಹವಣಿಸುವ ಜೀವದ ಸೊಲ್ಲುಗಳನ್ನು ಬೇಂದ್ರೆಕಾವ್ಯವು ಧ್ವನಿಸಿದೆ. ಕಾವ್ಯವೆಂಬ ಮಾಧ್ಯಮವು ಬೇಂದ್ರೆಯವರಿಗೆ ಲೌಕಿಕ ಲಾಭದ, ಯಶಸ್ಸಿನ ಸಂಗತಿಯಾಗಿರಲಿಲ್ಲ. ಅದು ವಿಶ್ವದ ಒಳನುಡಿಯನ್ನು ಕೇಳಿಸುವ ಮಾಧ್ಯಮವಾಗಿತ್ತು.

ವಿಶ್ವದ ಜೊತೆಗಿನ ಸಂಬಂಧವನ್ನು ಕಾಣಿಸುವ ಮಾಧ್ಯಮವೂ ಆಗಿತ್ತು. ಕವಿಗೆ ಅನುಭವವೇ ಮೂಲದ್ರವ್ಯ. ಇಂದ್ರಿಯಾನುಭವಗಳ ಮೂಲಕವೇ ವಿಶ್ವಸಾಮರಸ್ಯದ ವಿರಾಟ್ ಸ್ವರೂಪವನ್ನು ಅರಿಯುವುದು ಮನುಷ್ಯ ಮಾತ್ರನಾದ ಕವಿಗೆ ಅನಿವಾರ್ಯ. ಅದಕ್ಕಾಗಿಯೇ ಅವರಿಗೆ ಕಾವ್ಯವು ಸಾಧನೆಯ ಸಂಗತಿಯಾಗಿತ್ತು. ವಿಶ್ವವೇ ತಾನಾಗಿ ಹಿಗ್ಗುವ ಮೂಲಕ ವಿಶ್ವಮೈತ್ರಿಯನ್ನು ಹಂಬಲಿಸಿದ ಮಹಾನ್ ಗಾಥೆಯಾಗಿ ಅದು ಕಾಣಿಸುತ್ತದೆ. ಕಾವ್ಯವನ್ನು ಕಾವ್ಯೋದ್ಯೋಗ, ಅಂದರೆ ಉತ್+ ಯೋಗವೆಂದು ಬೇಂದ್ರೆ ಭಾವಿಸಿದ್ದರು. ಯೋಗವೆಂದರೆ ಕೂಡುವುದು. ಅಣುವು ಮಹತ್ತಿನೊಂದಿಗೆ, ಜೀವ ದೇವನೊಂದಿಗೆ, ವ್ಯಕ್ತಿಪ್ರಜ್ಞೆಯು ವಿಶ್ವಪ್ರಜ್ಞೆಯೊಂದಿಗೆ ಸೇರುವುದು. ಈ ಸಾಮರಸ್ಯದ ಕೊಂಡಿಯನ್ನು ಕಳಚಿಕೊಳ್ಳುವಲ್ಲಿಯೇ ಮನುಷ್ಯನ ಬದುಕಿನ ದುಃಖಗಳ ಮೂಲವಿದೆ. ವಿಘಟಿತ ಪ್ರಜ್ಞೆಯನ್ನು ಮತ್ತೆ ಸಾಮರಸ್ಯದ ಹದದಲ್ಲಿ ಬೆಸೆಯಲು ಅವರ ಇಡೀ ಕಾವ್ಯವು ಹಂಬಲಿಸುತ್ತಿರುವುದನ್ನು ಇಲ್ಲಿ ಕಾಣಿಸುವ ಪ್ರಯತ್ನ ನನ್ನದು.

ವಿಶ್ವದ ಮೂಲದೊಂದಿಗೆ ಐಕ್ಯಗೊಳ್ಳುವ ಹಂಬಲವೇ ವಿಶ್ವಮೈತ್ರಿಯ ನೆಲೆಗೇರುವ ಮೊದಲ ಸೋಪಾನ. ನಾನು ಎಂಬ ಸ್ವರೂಪವನ್ನು ಶೋಧಿಸುತ್ತ ಹೊರಟಾಗಲೇ ವಿಶ್ವದ ದರ್ಶನವಾಗುವುದು ಸಾಧ್ಯ. ಆದುದರಿಂದಲೇ ಆತ್ಮಜ್ಞಾನವು ಭಾರತೀಯ ದರ್ಶನಗಳ ಮೂಲದ್ರವ್ಯ. ಕೊನೆಯಲ್ಲಿ ವಿಶ್ವವೇ ತಾನೆಂಬ ತಿಳಿವಿನಲ್ಲಿ ನಮ್ಮ ಅರಿವು ವಿರಮಿಸುತ್ತದೆ. ಈ ಅದ್ವೈತ ಸಂಬಂಧವನ್ನು ದ್ವೈತದ ಮೂಲಕವೇ ಕಾಣಬೇಕಾದುದು ಮನುಷ್ಯರ ಪಾಡು. ಈ ಅನುಭವವನ್ನು ಭಕ್ತಿ ಹಾಗೂ ಯೋಗಗಳ ಮೂಲಕ ಸಾಧಿಸಲು ನಮ್ಮ ಪರಂಪರೆ ತಪಿಸಿದೆ. ಅದೇ ಪರಂಪರೆಯ ಮೂಲ ಸ್ಮೃತಿಗಳಿಗೆ ಬಾಯಿಯಾಗಿ ಅಂಬಿಕಾತನಯನಿದ್ದಾನೆ. ವಿಶ್ವಮೈತ್ರಿಯನ್ನು ಸಾಧಿಸಲು ಎರಡು ಮಾರ್ಗಗಳಿವೆ. ಒಂದು ವಿಶ್ವವನ್ನೇ ತಬ್ಬುವ ಅರಿವಿನದು. ಅದಕ್ಕೆ ವ್ಯಕ್ತಿಯು ಹಿಗ್ಗಬೇಕು. ತನ್ನ ಇಂದ್ರಿಯಗಳ ಮಿತಿಯನ್ನು ಹಿಗ್ಗಿಸಿ ವಿಶ್ವದ ಒಳನುಡಿಯನ್ನು ಕೇಳುವ, ವಿಶ್ವ ರಹಸ್ಯವನ್ನು ಕಾಣುವ, ವಿಶ್ವಕ್ಕೆ ಎದೆತೆರೆದು ಸಂವೇದಿಸುವ ಹಿಗ್ಗುವಿಕೆ ಅದು. ಇನ್ನೊಂದು ಭಕ್ತಿಯಲ್ಲಿ ಕರಗುವ ತಾದಾತ್ಮ್ಯದ ಮಾರ್ಗ. ಮಹತ್ತಿನೊಳಗೆ ಅಣುವು ಕರಗುವಂತೆ ಅಹಂ ನಿರಸನದ ಮೂಲಕ ಐಕ್ಯಗೊಳ್ಳುವ ಮಾರ್ಗವದು. ಆ ಮಹತ್ತನ್ನು ತನ್ನ ಇಷ್ಟದೈವದಲ್ಲಿ ಕಲ್ಪಿಸಿಕೊಳ್ಳುವ ಮೂಲಕ ವಿಶ್ವವನ್ನು ಭಾವದ ಮೂಲಕ ತಾಕುವ ರೀತಿಯದು.

ಯೋಗಮಾರ್ಗವು ದೇಹವನ್ನೇ ದೇವನ ಸಾಧನೆಯ ಮಾಧ್ಯಮವಾಗಿ ಮಾಡಿಕೊಂಡದ್ದು. ಸ್ವ-ಪ್ರಜ್ಞೆಯು ವಿಶ್ವಪ್ರಜ್ಞೆಯಲ್ಲಿಒಂದಾಗುವ ವಿಶ್ವಮೈತ್ರಿಯನ್ನು ಯೋಗಶಾಸ್ತ್ರವು ’ಪಿಂಡ ಬ್ರಹ್ಮಾಂಡ ಸಮರಸೀಕರಣ’ ವೆಂಬ ಸಂಜ್ಞೆಯ ಮೂಲಕ ವಿವರಿಸುತ್ತದೆ. ಬ್ರಹ್ಮಾಂಡದಲ್ಲಿ ಏನೇನು ಇವೆಯೋ ಅವೆಲ್ಲ ಪಿಂಡಾಂಡದಲ್ಲೂ ಇದೆಯೆಂಬ ತತ್ವ ಅವೆರಡನ್ನೂ ಸಮರಸಗೊಳಿಸುತ್ತದೆ. ಮಾನವನ ಶರೀರದಲ್ಲಿ ಕುಂಡಲಿನೀ ರೂಪದ ಶಕ್ತಿಯು ಸುಪ್ತವಾಗಿರುತ್ತದೆ. ಮಸ್ತಕದೊಳಗಿನ ಸಹಸ್ರಾರ ಚಕ್ರದಲ್ಲಿ ಶಿವನು ನೆಲೆಸಿರುತ್ತಾನೆ. ಜನ್ಮಜನ್ಮಾಂತರದ ಸಂಚಿತ ಮಲಭಾರದಿಂದ ಕುಂಡಲಿನೀ ಶಕ್ತಿಯು ಹತ್ತಿಕ್ಕಲ್ಪಡುತ್ತದೆ. ಒಂದುವೇಳೆ ಧ್ಯಾನ ಧಾರಣೆಯ ಸಹಾಯದಿಂದ ನಾಡೀ ಶೋಧನೆ ನಡೆಸಿದರೆ, ಕುಂಡಲಿನಿಯ ಸುಷುಮ್ನ ಮಾರ್ಗವ ತೆರೆದುಕೊಳ್ಳುತ್ತದೆ. ಬಳಿಕ ಅದು ಬ್ರಹ್ಮರಂಧ್ರದಿಂದ ಹಾದು ಸಿವನ ಸಮ್ಮಿಲನಕ್ಕಾಗಿ ಧಾವಿಸುತ್ತದೆ. ಅಗ್ನಿಚಕ್ರದಲ್ಲಿ ಸುಪ್ತವಾಗಿದ್ದ ಈ ಶಕ್ತಿಯು ಸಹಸ್ರಾರ ಮತ್ತು ಶೂನ್ಯಚಕ್ರದೊಳಗಿನ ಶಿವನೊಂದಿಗೆ ಸಮರಸಗೊಂಡಾಗ ಯೋಗಿಗಳಿಗೆ ಕೇವಲಾವಸ್ಥೆಯ, ಪರಮಾನಂದ ಸಹಜ ಸಮಾಧಿಯು ಪ್ರಾಪ್ತವಾಗುತ್ತದೆ. (ನಾಥಪಂಥದ ಇತಿಹಾಸ, ಢೆರೆ, ಪು.೨೪) ವಿಶ್ವಮೂಲವನ್ನು ಸೇರಿಹೋಗುವ ಈ ಯೌಗಿಕಾನುಭೂತಿಯೇ ಸಮಾಧಿಸ್ಥಿತಿ.

ವಿಶ್ವವೆಂಬುದು ಶಕ್ತಿಪ್ರವಾಹ. ಅದು ಅಣುಅಣುಗಳಿಂದಲೇ ಮೈದೋರುವುದು ಸಾಧ್ಯ. ಈ ಐಕ್ಯವನ್ನು ಶಿವ ಹಾಗೂ ಶಕ್ತಿಯರ ಮಿಲನದ ಪರಿಭಾಷೆಯಲ್ಲಿ ಯೋಗಿಗಳು ವರ್ಣಿಸಿದ್ದಾರೆ. ಅಮೂರ್ತವಾದದ್ದನ್ನು ವಿವರಿಸಲು ಮೂರ್ತ ಕಲ್ಪನೆಯು ಕೈಜೋಡಿಸಬೇಕಾದುದು ಭಾಷೆಯ ಅನಿವಾರ್ಯತೆ. ಸಂತ ಜ್ಞಾನೇಶ್ವರನಲ್ಲಿ ಈ ಯೌಗಿಕಾನುಭವವು ಕಾವ್ಯದ ಮೈಪಡೆದಿದೆ. ಬೇಂದ್ರೆ ಕಾವ್ಯವಂತೂ ಈ ಶಕ್ತಿವಿಲಾಸದ ವಿರಾಟ್ ನರ್ತನವಾಗಿದೆ.

ತಾವು ಇಬ್ಬರೂ ಒಬ್ಬರೆನ್ನುವದ ತೋರಿಸುವರು ಸತತ
ಅಗಲಿ ಕೂಡಿ ಒಂದಾಟ ಹೂಡಿ ಜಗಭರಿತರಾಗಿ ವಿತತ
ಬಿಂದು ರಜದ ಸಂಧಾನದಂತೆ ಈ ತಂದೆ-ತಾಯಿಯೊಂದು
ಶರಣು ಹೋಗುವೆವು ನಮ್ಮಪಡೆದವರ ನಾವೆ ಪಡೆಯಲೆಂದು (ಅಮೃತಾನುಭವ)

ಸತ್, ಚಿತ್, ಆನಂದಗಳ ಸಚ್ಚಿದಾನಂದ ವಿಜ್ಞಾನವನ್ನು ಕಾವ್ಯದ ನವೀನ ಕಲ್ಪನೆಯಾಗಿ ನೀಡಿದ ಅವರು ಆಧುನಿಕ ಭೌತ, ರಸಾಯನ, ಜೀವವಿಜ್ಞಾನಗಳ ದೃಷ್ಟಿಯನ್ನೂ ತಮ್ಮ ಆಧ್ಯಾತ್ಮಿಕ ದೃಷ್ಟಿಯೊಳಗೆ ಬೆಸೆದು ನವೀನ ಜೀವನದೃಷ್ಟಿಯನ್ನು ಕಾವ್ಯದಲ್ಲಿ ಕಂಡು ತೆರೆದರು. ಭೌತವಿಜ್ಞಾನದ ದೃಷ್ಟಿಗೆ ಯಾವ ವಸ್ತುವೂ ಜಡವಲ್ಲ. ವಿಶ್ವದ ನಿರಂತರ ಚಲನೆಯನ್ನು ಅದು ಕಾಣುತ್ತದೆ. ಜಡವೆಂದು ತೋರುವ ವಸ್ತುಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದಾಗ ನಿರಂತರ ಚಟುವಟಿಕೆ-ಚಲನೆಗಳು ಅಲ್ಲಿ ಗೋಚರಿಸುತ್ತವೆ. ನಮ್ಮ ಸುತ್ತಲಿನ ಪರಿಸರದಲ್ಲಿರುವ ಎಲ್ಲ ವಸ್ತುಗಳು ಪರಮಾಣುಗಳಿಂದ ರಚಿಸಲ್ಪಟ್ಟಿವೆ. ನಿರಂತರ ಮಾರ್ಪಾಟಾಗುವ ಶಕ್ತಿಯ ಎಗ್ಗಿಲ್ಲದ ಈ ಪ್ರಕ್ರಿಯೆಯಲ್ಲಿ ಭೌತಕಣಗಳು ಕೊನೆಯೇ ಇಲ್ಲದೆ ಹುಟ್ಟುತ್ತಾ ಸಾಯುತ್ತಾ ಇರುತ್ತವೆ. ಒಟ್ಟಾರೆ ಸೃಷ್ಟಿ ಪರಮಾಣುವಿನ ಅಂತಃಕಣಗಳ ಲಯಬದ್ಧ ನರ್ತನದಲ್ಲಿ ಮಗ್ನವಾಗಿದೆ. ಈ ಪ್ರಕ್ರಿಯೆಗೆ ಕೊನೆಯೆಂಬುದೇ ಇಲ್ಲ. ಪರಸ್ಪರ ಢಿಕ್ಕಿಹೊಡೆಯುವ ಕಣಗಳು ತಮ್ಮ ವಿನ್ಯಾಸದಲ್ಲಿ ರೂಪಾಂತರಗೊಳ್ಳುತ್ತವೆ. ಸಾವು ಮತ್ತೊಂದು ಸೃಷ್ಟಿಗೆ ಕಾರಣವಾಗುತ್ತದೆ. ಈ ನಿರಂತರತೆಯನ್ನು ಅರಿಯುವುದೇ ಸಾವು-ಬದುಕನ್ನು ಮೀರಿದ ದೃಷ್ಟಿ. ಭಾರತದ ಅನುಭಾವಿಕ ದೃಷ್ಟಿ. ಅವಧೂತ ಪಂಥಗಳ ಸಾಧನಾ ದೃಷ್ಟಿಕೂಡ ಇದೇ ಆಗಿದೆ. ಬೇಂದ್ರೆಯವರ ’ಸಮರಸ ದರ್ಶನ’ದ ಹಿಂದೆ ಈ ನಿಲುವು ಕೆಲಸಮಾಡಿದೆ. ’ಸೃಷ್ಟಿಯ ಲಯಬದ್ಧ ನರ್ತನ’ದ ಭೌತಶಾಸ್ತ್ರೀಯ ಪರಿಕಲ್ಪನೆಯು ಅವರೊಳಗೆ ಕಲ್ಪನಾವಿಲಾಸವನ್ನು ಉದ್ದೀಪಿಸಿ ಗಾಯತ್ರೀ ಸೂಕ್ತ, ನೃತ್ಯಯಜ್ಞ, ಕುಣಿಯೋಣು ಬಾರ, ಮುಂತಾದ ಕವಿತೆಗಳ ಸೃಷ್ಟಿಗೆ ಕಾರಣವಾಗಿದೆ. ಬದುಕಿನ ಸಾಮಾನ್ಯ ಘಟನೆಗಳಲ್ಲಿ ಅಸಾಮಾನ್ಯತೆಯನ್ನು ಕಾಣುವ ದಿವ್ಯದೃಷ್ಟಿ ಅವರಿಗೆ ಪ್ರಾಪ್ತವಾಗಲು ಕಾರಣ ಈ ಆಂತರಿಕ ಅರಿವು.

ವಿಶ್ವದ ಜೊತೆಗೆ ನಮ್ಮ ಸಂಬಂಧದ ಸ್ವರೂಪವನ್ನು ಅರಿಯುತ್ತಲೇ ಅನೇಕ ಜ್ಞಾನಶಾಖೆಗಳು ಜನ್ಮತಾಳಿವೆ. ಬೇಂದ್ರೆಯವರ ಆಸಕ್ತಿಯ ಹರಹು ಇವೆಲ್ಲವನ್ನೂ ಪ್ರವೇಶಿಸಿರುವುದು ಕುತೂಹಲಕರ. ವಿಶ್ವದ ಅನುಭಾವ ಪರಂಪರೆಯೊಂದಿಗಿನ ಮಾನಸಿಕ ಸಾತತ್ಯವು ಅವರನ್ನು ಹಿಗ್ಗಿಸಿದೆ. ಯೌಗಿಕ ಸಾಧನಾ ಧಾರೆಗಳ ಒಡನಾಟವು ಅನುಭವ ಕೇಂದ್ರಿತವಾದ ಸಾಮರಸ್ಯದ ಭಿನ್ನ ಆಯಾಮಗಳನ್ನು ತೆರೆದುತೋರಿದೆ. ದತ್ತಪಂಥದ ಯೋಗಿಗಳ ನೇರ ಸಂಪರ್ಕಕ್ಕೆ ಬಂದ ಬೇಂದ್ರೆ ಅವರಿಂದ ಸಾಧನಾ ದೀಕ್ಷೆ ಪಡೆದವರಾಗಿದ್ದರೆಂಬುದು ಅವರ ಕಾವ್ಯದ ಕುರಿತ ಹೊಸ ನೆಲೆಯ ಕಾಣ್ಕೆಗಳಿಗೆ ಕಾರಣವಾಗಿದೆ. ಮರಾಠಿ ಸಂತ ಪರಂಪರೆಯ ಒಲವು, ಕನ್ನಡದ ಭಕ್ತ ಕವಿಗಳ ನಿಲುವುಗಳು ಅವರ ಕಾವ್ಯವನ್ನು ಬೆರೆತಿವೆ. ಇದೆಲ್ಲವೂ ಅವರ ಅರಿವಿನ ವಿಕಾಸಕ್ಕೆ ಕಾರಣ. ಸ್ವತಃ ಅನುಭಾವದ ಉನ್ಮನಿಯಲ್ಲಿ ಮುಳುಗೇಳುತ್ತಿದ್ದ ಅವರ ಬಾಲ್ಯಕಾಲದ ಅನುಭವಗಳೂ ಸಹ ವಿಶ್ವಪ್ರಜ್ಞೆಯೊಂದಿಗೆ ಛಕ್ಕನೆ ಬೆರೆಯುತ್ತಿದ್ದ ಕ್ಷಣಗಳಿಗೆ ಸೂಚನೆಯಾಗಿವೆ.

ಪ್ರಕೃತಿಯ ಲಯದೊಂದಿಗೆ ಬೆರೆತು ಒಂದಾಗುವ ಬಾಲ್ಯದ ಪ್ರಜ್ಞೆಯಲ್ಲಿ ಮಿಂಚಿದ ವಿಶ್ವಾನುಭೂತಿಯನ್ನು ಅವರ ತುಂಬಿತ್ತು ಹಾಲಗೇರಿ, ಸಣ್ಣ ಸೋಮವಾರದಂತಹ ಕವಿತೆಗಳಲ್ಲಿ ಕಾಣಬಹುದು. ಸೋಮೇಶ್ವರದ ಜಾತ್ರೆಗೆ ಸಾಗುವ ಬಾಲಕನ ಪಯಣವು ಮನೋಲೋಕದ ಒಳಗಿಳಿವ ಪಯಣದಂತೇ ನಿಗೂಢವಾಗಿ ತೋರುತ್ತಾ ಕೊನೆಯಲ್ಲಿ ಛಕ್ಕನೆ ಹೊಳೆಯುವ ಚಂದ್ರಕ್ವಾರಿ ಲಿಂಗದ ದರ್ಶನ ಒಳಪ್ರಜ್ಞೆಯು ಹೊರಲೋಕದೊಂದಿಗೆ ಬೆರೆತ ದಿವ್ಯದರ್ಶನವೂ ಹೌದು. ಇಂಥದೇ ಅನುಭವವು ಗೊಂದಲಿಗರ ಹಾಡಿನ ಗುಂಗಿನಲ್ಲಿಯೂ ಅವರಿಗೆ ಉಂಟಾಗುತ್ತದೆ. ಅನುಭವವೇ ಅದರ ಉನ್ನತ ನೆಲೆಯಲ್ಲಿ ಅನುಭಾವವಾಗುವ ಬೆಡಗು ಇದು. ಜೋಗಿ ಕವಿತೆಯೂ ಇಂಥ ರಹಸ್ಯಾನುಭವಗಳ ಸಾಂಕೇತಿಕ ಜಗತ್ತನ್ನೇ ಕಟ್ಟಿಕೊಡುತ್ತದೆ. ಮನಸ್ಸಿನ ನಾಲ್ಕು ಅವಸ್ಥೆಗಳಾದ ಜಾಗೃತ, ಸ್ವಪ್ನ, ಸುಷುಪ್ತಿ, ತುರೀಯಗಳ ನೆಲೆಯನ್ನು ಅವರ ಕಾವ್ಯವು ಹಾಯ್ದು ಬರುತ್ತದೆ. ಈ ನಾಲ್ಕೂ ಅವಸ್ಥೆಗಳು ಒಂದಾಗಿ ಮಿಡಿಯುವ ’ನಾಕು ತಂತಿಯೇ’ ಅವರ ಕಾವ್ಯ. ನಾಕುತಂತಿಯು ವಿಶ್ವಮೈತ್ರಿಯ ಅದ್ಭುತ ರೂಪಕವಾಗಿದೆ.

ನಾದರೂಪಕದಲ್ಲಿ ವಿಶ್ವಸಾಮರಸ್ಯವನ್ನು ಕಾಣುವ ಬೇಂದ್ರೆಯವರ ಕಾವ್ಯ ಶೃತಿ ಹಾಗೂ ದರ್ಶನಗಳ ಸಂಗಮವಾಗಿದೆ. ಶಬ್ದದಿಂದಲೇ ಸೃಷ್ಟಿಯಾದ ಜಗವು ಶಬ್ದದಲ್ಲೇ ಲಯವಾಗುವ ಕಲ್ಪನೆಯು ನಮ್ಮ ದರ್ಶನಗಳು ಕಾಣಿಸುವ ಸತ್ಯವೂ ಹೌದು. ಭೌತವಿಜ್ಞಾನದ ಒಳನೋಟವೂ ಹೌದು. ಲಯಬದ್ದತೆಯೆಂಬುದು ನಾದದ ಕಲ್ಪನೆಯೇ. ಸಂಗೀತವು ಲಯಪ್ರಧಾನವಾದುದು. ಹಾಗೆಯೇ ವಿಶ್ವದ ಚಲನೆಯೂ ಲಯಬದ್ಧವೇ. ಬ್ರಹ್ಮಾಂಡದ ಸಕಲ ಗ್ರಹಗೋಲಗಳೂ ಲಯಬದ್ಧವಾಗಿ ಚಲಿಸುತ್ತವೆ.ಅವುಗಳ ನಡುವಿನ ಸಾಮರಸ್ಯದಲ್ಲಿ ನಾದವಿದೆ. ಬ್ರಹ್ಮಾಂಡದ ಲಯಬದ್ಧತೆಯು ಸಿಡಿದು ಚೂರಾಗಿ ಹೋಗದಂತೆ ವಿಶ್ವವನ್ನು ಸಂಬಂಧ ಸೂತ್ರದಲ್ಲಿ ಬೆಸೆದ ಬೆರಗನ್ನು ಬೇಂದ್ರೆ ನಾದವಾಗಿಯೇ ಕೇಳುತ್ತಾರೆ. ಅದನ್ನು ಗ್ರಹಗೋಲ ಸಿಂಫನಿ ಎನ್ನುತ್ತರೆ. ಅದನ್ನು ಗ್ರಹಮಾಲಾ ಸಂಗೀತವೆಂತಲೂ ಕರೆದಿದ್ದಾರೆ.

ಗ್ರಹಗೋಲ ಸಂಗೀತ ತಾನ ತಾನದ ನನೆಯು
ಭಾವದ ಪರಿಸ್ಪಂದ ಆತ್ಮ ಆತ್ಮವೇ ತಾನು
ವಾಚ್ಯವರ್ಣಗಳಲ್ಲಿ ನವಿರು ನವಿಲಿನ ಕೇಕೆ
ಶ್ರೀ ಅನಿರ್ವಾಚ್ಯಕ್ಕೆ ಬೇರೆ ಭಾಷ್ಯವು ಬೇಕೆ? (ನಾದಮಯೂರ, ನಾಕುತಂತಿ, ೨೩)

ನಮ್ಮೊಳಗೂ ಅದೇ ನಾದವಿದೆ. ಬ್ರಹ್ಮಾಂಡವನ್ನು ಸುತ್ತುವರೆದ ಅನಾಹತ ನಾದ. ಅದೇ ನಮ್ಮನ್ನೂ ವಿಶ್ವದೊಂದಿಗೆ ಬೆಸೆದಿದೆ. ಅದನ್ನು ಕೇಳಲು ಪ್ರಜ್ಞೆ ಸೂಕ್ಷ್ಮಗೊಳ್ಳಬೇಕು. ನಮ್ಮ ದೇಹವೂ ಆ ನಾದವನ್ನು ಪ್ರಕಟಿಸುವ ವಾದ್ಯದಂಥ ಮಾಧ್ಯಮವೇ ಆಗಿದೆ. ’ದೇಹವೊಂದು ದೇವವೀಣೆ’ ಎಂಬ ಕವಿತೆಯೂ ಇದನ್ನೇ ಧ್ವನಿಸುತ್ತದೆ. ಅವರ ಪ್ರಸಿದ್ದ ’ನಾಕುತಂತಿ’ಯು ವಿಶ್ವಮೈತ್ರಿಯ ನಾದಸಂಜ್ಞೆ. ಅದು ಭಿನ್ನವಾಗಿ ತೋರುವ ತಂತಿಗಳ ಒಂದೇ ಜೀವಲಯ. ಏಕಶೃತಿಯಲ್ಲಿ ಮಿಡಿವ ಸಾಧ್ಯತೆ. ಪರಾ, ಪಶ್ಯಂತಿ, ಮಧ್ಯಮಾ, ವೈಖರೀ ವಾಣಿಗಳು ಏಕವಾಗಿ ನುಡಿಯುವಂತೆ, ಜಾಗೃತ, ಸ್ವಪ್ನ, ಸುಷುಪ್ತಿ, ತುರೀಯಾವಸ್ಥೆಗಳು ಏಕಾನುಭೂತಿಯಾಗಿ ಹೊಳೆಯುವಂತೆ ನಾನು ಮತ್ತು ವಿಶ್ವ ಎಂಬ ಭೇದವೇ ಅಳಿಯುವಂಥ ನಾದವಿದು. ಈ ಸೃಷ್ಟಿಗೆ ಕಾರಣವಾದ ಪುರುಷ ಹಾಗೂ ಪ್ರಕೃತಿ ತತ್ವಗಳ ಸಂಯೋಗವಾಗಿಯೂ ಇದನ್ನು ಕಾಣಲಾಗಿದೆ.

ನಾನು ನೀನು
ಆನು ತಾನು
ನಾಕೆ ನಾಕು ತಂತಿ (ನಾಕುತಂತಿ, ಪು ೯)

ನಾನು ಎಂಬುದು ವಿಶ್ವವೀಣೆಯ ಮೊದಲತಂತಿಯಾದ ಪುರುಷ ತತ್ವ. ನೀನು ಎಂಬುದು ಅದೇ ಅಹಂ ತತ್ವದ ಸ್ತ್ರೀರೂಪ. ಇವೆರಡು ಸಮರಸಗೊಂಡಾಗ ಸೃಷ್ಟಿ. ಅಂದರೆ ಸಂತಾನ. ಇದು ಆನು. ಇವೆಲ್ಲವನ್ನೂ ಒಳಗೊಂಡ ಶಿಖರತತ್ವವೇ ತಾನು. ಇದೇ ಆದಿ ಆಧಾರ ಪರಾತ್ಪರ ಶಕ್ತಿ. ಇವು ಸಾಮರಸ್ಯದಿಂದ ಮಿಡಿಯುವುದೇ ಬದುಕು.

ವಿಶ್ವದ ಒಳದನಿಯನ್ನು ’ಗುಹಾಧ್ವನಿ’ಯೆನ್ನುವ ಬೇಂದ್ರೆ ಅದನ್ನು ಕನ್ನಡಿಸುವ ಮಾಧ್ಯಮ ಮಾತ್ರ ತಾನು ಎನ್ನುತ್ತಾರೆ. ಈ ಶೃತಿಯನ್ನು ಸರಸ್ವತಿಯಾಗಿ ಶಕ್ತಿ ಶಾರದೆಯರಾಗಿ ಕಾಣುವ ಅವರು ತಾಯಿ ಅಂಬಿಕೆಯಿಂದಲೂ ಅದನ್ನೇ ಪಡೆಯುತ್ತಾರೆ. ಬೇಂದ್ರೆಯವರ ಕಾವ್ಯವೇ ಈ ಮಾತೃಶಕ್ತಿಯ ಅನುಸಂಧಾನ. ತನ್ನ ಜನ್ಮವನ್ನೇ ಮಾತೃತ್ವದ ಹುಡುಕಾಟವಾಗಿ ಕಾಣುವ ಬೇಂದ್ರೆ ವಿಶ್ವಮೂಲದೊಂದಿಗೆ ಕರುಳಬಳ್ಳಿಯ ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತ ನಡೆಯುತ್ತಾರೆ. ಯಾವ ಮೂಲದಿಂದ ಸೃಷ್ಟಿಯಾಗಿದ್ದೇವೋ ಅದೇ ಮೂಲಕ್ಕೆ ಮರಳುವ ಆಟವಾಗಿ, ಲೀಲೆಯಾಗಿ ಅವರಿಗೆ ಬದುಕು ಕಂಡಿದೆ. ಬೇಂದ್ರೆಯವರ ‘ನಾನು’ ಹಾಗೂ ‘ಅಂಬಿಕಾತನಯದತ್ತ’ ಕವಿತೆಗಳು, ವಿಶ್ವಮೈತ್ರಿಯನ್ನು ತಾಯಿ ಮಗುವಿನ ಸಂಬಂಧದ ನೆಲೆಯಲ್ಲಿ ಕಟ್ಟಿಕೊಟ್ಟಿವೆ. ‘ನಾನು’ ಎಂಬ ಪ್ರಜ್ಞೆಯು ಪ್ರಕಟಗೊಳ್ಳಲು ರಕ್ತಮಾಂಸದ ಮೈ ಬೇಕು. ಭಾವವು ಬಲಿತು ಜೀವ ತುಂಬಲು ಒಂದು ಪರಿಸರ ಬೇಕು. ಆಗಲೇ ಅಸ್ತಿತ್ವದ ಅರಿವು ಮೂಡುವುದು. ಪ್ರಜ್ಞೆ ಮತ್ತು ಪರಿಸರದ ನಡುವಿನ ತಿಕ್ಕಾಟವು ತುಂಬ ಹಿಂದಿನಿಂದಲೂ ನಡೆದು ಬಂದಿದೆ. ಪಾಶ್ಚಾತ್ಯ ಚಿಂತನಾ ಆಕೃತಿಯಲ್ಲಿ ಪ್ರಜ್ಞೆ ಮತ್ತು ಪರಿಸರಗಳ ನಡುವಿನ ಬಿರುಕು-ಸಂಘರ್ಷವೇ ಮುಖ್ಯವಾದರೆ ಭಾರತೀಯ ಮೂಲದ ಚಿಂತನ ಪರಂಪರೆಯು ಪ್ರಜ್ಞೆ ಹಾಗೂ ಪರಿಸರದ ತಾದಾತ್ಮ್ಯಕ್ಕೆ ಒತ್ತು ಕೊಟ್ಟಿದೆ.

ವಿಶ್ವ ಮಾತೆಯ ಗರ್ಭಕಮಲಜಾತ-ಪರಾಗ-
ಪರಮಾಣು ಕೀರ್ತಿ ನಾನು |
ಭೂಮಿ ತಾಯಿಯ ಮೈಯ ಹಿಡಿಮಣ್ಣಗುಡಿಕಟ್ಟಿ
ನಿಂತಂಥ ಮೂರ್ತಿ ನಾನು |
(ನಾನು, ಬಾಹತ್ತರ, ಪು.೧೨)

ಇಡೀ ವಿಶ್ವ ಗರ್ಭದ ಒಂದು ಪರಮಾಣುವಾಗಿ ಅವ್ಯಕ್ತವಾಗಿದ್ದ ‘ನಾನು’ ಆಕಾರ ತಳೆದು ಪ್ರಕಟಗೊಳ್ಳಲು ಹಿಡಿಮಣ್ಣು ಬೇಕು. ಪ್ರಕಟಗೊಳ್ಳಲು ವ್ಯಕ್ತವಾದ ಮಾಧ್ಯಮವೊಂದು ಬೇಕು. ಆದ್ದರಿಂದ ದೇಹವೆಂಬುದು ಅತೀಮುಖ್ಯವಾದ ಮಾಧ್ಯಮ. ‘ನಾನು’ ದೇಹತಾಳಿ ಜೀವ ಪಡೆದ ಮೇಲೆ ಅಲ್ಲಿ ಭಾವ ಮೂಡುವುದು ಸೃಷ್ಟಿಯ ಮತ್ತೊಂದು ಸೋಜಿಗ. ವಿಶ್ವಮಾತೆ, ಭಾರತಮಾತೆ, ಕನ್ನಡದ ತಾಯಿ, ಧಾರವಾಡದ ತಾಯಿ, ಹೆತ್ತ ತಾಯಿ ಅಂಬಿಕೆ. . . ಹೀಗೆ ಕವಿಯನ್ನು ಪ್ರಕಟಗೊಳಿಸುವ ಗರ್ಭ ಹಲವು.

ಯಾವ ಯೋಗನಿದ್ರೆಯಲ್ಲಿ ಏನು ಕನಸ ಕಂಡೆನೋ
ಯಾವ ಹಾಲನುಂಡೆನೋ
ಈ ವಿಶ್ವಜಾಲದಲ್ಲಿ ಬಂದೆ ಅದಕೆ ಮಿಡುಕುತ
ಅದರಧಾರೆ ಹುಡುಕುತ (ಅಂಬಿಕಾತನಯ, ಬಾಹತ್ತರ,೧೩)

ಸೃಷ್ಟಿಗೂ ಮುಂಚಿನ ಯೋಗನಿದ್ರೆಯ ಸ್ಥಿತಿಯಲ್ಲಿ ಶುರುವಾದ ಸಂಚಲನವೇ ಹುಟ್ಟಿಗೆ ಕಾರಣ. ಆ ಸಂಚಲನವೇ ತಾಯಿಯ ಮಮತೆಯನ್ನು ಅರಸುವಂತೆ ಎಚ್ಚರಿಸಿದ ಭಾವ. ವಿಶ್ವಜಾಲದಲ್ಲಿ ಮೂಡುವ ಮುಳುಗುವ ಪ್ರಳಯ- ಸೃಷ್ಟಿಯಂತೆಯೇ ಈ ಹುಟ್ಟು ಸಾವುಗಳು. ಇಲ್ಲಿ ಸಾವೆಂದರೆ ಮತ್ತೆ ಗರ್ಭಕ್ಕೆ ಮರಳುವುದು. ಈ ಎರಡು ಅಂಚುಗಳ ಮಧ್ಯೆ ಹೆಣೆಯುವ ಸಂಬಂಧ ಸೂತ್ರವೇ ಬದುಕು. ತನಗೂ ವಿಶ್ವಕ್ಕೂ ಏನು ಸಂಬಂಧ? ಎಂದು ಯೋಚಿಸುವ ಬೇಂದ್ರೆಯವರ ಪ್ರಜ್ಞೆಯು ಕಂಡುಕೊಂಡ ಉತ್ತರವೇ ತಾನು ಅಂಬಿಕಾತನಯನೆಂಬುದು. ಇದು ನಮ್ಮ ಸಂಸ್ಕೃತಿಯ ತಾದಾತ್ಮ್ಯದ ವೈಚಾರಿಕ ಆಕೃತಿಯನ್ನು ಸೂಚಿಸುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ವೈಚಾರಿಕ ಆಕೃತಿಗಳ ಹಿಂದಿರುವ ಮಾತೃಶಕ್ತಿಯ ಮಿಥ್. ತಾಯಿಯ ಗರ್ಭದಲ್ಲಿರುವ ಶಿಶು ತನ್ನ ಪರಿಸರದಿಂದ ಭಿನ್ನವಾಗಿರುವುದಿಲ್ಲ.ಹೊಕ್ಕುಳಬಳ್ಳಿ ಅದನ್ನು ಗರ್ಭದೊಂದಿಗೆ ಬಿಗಿದಿರುತ್ತದೆ. ಅಲ್ಲಿ ಬೇರೆಯಾಗುವುದಕ್ಕೆ ಅವಕಾಶವಿಲ್ಲ. (ಕರುಳಬಳ್ಳಿಯಸೊಲ್ಲು, ರಾಜೇಂದ್ರ ಚೆನ್ನಿ, ೪೩)ತನ್ನ ಸೊಲ್ಲು ಆ ತಾಯಿಯದೇ ಎನ್ನುವ ಅಭಿನ್ನತೆಯ ತಾದಾತ್ಮ್ಯ ವಿಶ್ವದ ಒಳನುಡಿಯ ಬಾಯಿಯಾಗಿ ಅಂಬಿಕಾತನಯನ್ನು ರೂಪಿಸಿದೆ. ವಿಶ್ವದ ಸೃಜನಶಕ್ತಿಯನ್ನು ತಾಯಿಯಾಗಿ ಕಾಣುತ್ತಾ ಅದರೊಂದಿಗೆ ಕರುಳಬಳ್ಳಿಯ ಸಂಬಂಧ ಗುರುತಿಸುವ ಕವಿ, ವಿಶ್ವಮೈತ್ರಿಯು ಮೈಪಡೆವ ಬಗೆಯನ್ನು ಕಾವ್ಯವಾಗಿ ಕಟ್ಟುತ್ತಾರೆ. ನಾನು ಎಂಬುದು ಅಳಿದು ಅಂಬಿಕಾತನಯನಾಗುವುದೇ ಬೇಂದ್ರೆ ಕಾವ್ಯದ ಸಾಕ್ಷಾತ್ಕಾರ.

ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತನರನು
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ
ಅಂಬಿಕಾತನಯನಿವನು |
(ಅದೇ, ಪು.೧೨)

ಕವಿತೆಯು ಅಂತಿಮವಾಗಿ ನರ-ನಾರಾಯಣರ ಅದ್ವೈತವನ್ನು ಕಾಣುತ್ತದೆ. ‘ದೇವ’ ಭಾವವು ತನ್ನಿಂದ ಹೊರಗಿನದಲ್ಲ. ಅದು ತನ್ನೊಳಗೇ ಇದೆ ಎಂಬ ಅರಿವಿನಲ್ಲಿ ಕವಿ ವಿರಮಿಸುತ್ತಾನೆ. ವಿಶ್ವದ ಒಳನುಡಿಯನ್ನು ಪ್ರಕಟಗೊಳಿಸಲು ದತ್ತವಾದ ತಾನು ದತ್ತವಾಗಿದ್ದೇನೆ ಎಂಬ ಭಾವನೆಯು ಬಲವಾಗುತ್ತ, ಅದನ್ನು ಕನ್ನಡದ ವಾಣಿಯಲ್ಲಿ ಪ್ರತಿಫಲಿಸಲು ಬೇಂದ್ರೆಕಾವ್ಯವು ತೊಡಗುತ್ತದೆ.
ವಿಶ್ವಪ್ರಾಣವು ನೇಯುವ ವಿವಿಧ ರೋಪಗಳೇ ಸೃಷ್ಟಿಯೆಂದು ಕಾಣುವ ಬೇಂದ್ರೆ ಅದನ್ನೇ ದೇವಭಾವವಾಗಿ ಚಿತ್ರಿಸುತ್ತಾರೆ. ತನ್ನ ಒಡಲ ನೂಲನ್ನೇ ದ್ರವ್ಯವಾಗಿಸಿ ಲೋಕಗಳನ್ನು ನೇಯುವ ದೇವನ ಪ್ರತಿಮೆ ವಿಸ್ವಮೈತ್ರಿಯ ಸಂಕೀರ್ಣ ವಿನ್ಯಾಸವನ್ನು ತೆರೆದು ತೋರುತ್ತದೆ.

ಆತನು
ನೂಲು ನೂತನು
ಈತನು!
ತಾನೇ ತಾನು ಇರುವಾತನು
ಸ್ವರೂಪಭೂತನು
ಬಿಂಬ ಸಾಕ್ಷಿ (ನೂತನು)
ಬ್ರಹ್ಮಾಂಡವೆ ಒಂದುಬಿಂದು
ಎಲ್ಲ ಕಡೆಗು ಅದೇ ಬಂಧು
ಈ ಜಗದಲಿ ನಾನೀನು
ಅದೂ ಅವಳು ಮತ್ತವನು
ವಿಶ್ವರೂಪನಂಗವು (ಜಗದ್ರಂಗ)

ಒಂದೇ ಬಿಂದುವು ಹಿಗ್ಗಿ ವಿಸ್ತರಿಸುತ್ತಾ ಅವನು,ಅವಳು, ಅದು ಎಲ್ಲವೂ ಆಗುವುದು ಚೋದ್ಯ. ಒಡಲ ನೂಲನ್ನೆಳೆದು ತನ್ನ ಬಾಯಿಂದಲೇ ಬಲೆ ನಿರ್ಮಿಸಿಕೊಳ್ಳುವ ಜೇಡ, ಬೇಡವಾದಗ ಅದನ್ನು ನುಂಗುತ್ತದೆ. ತಾನು ಮಾತ್ರ ಕೇಂಂದ್ರದಲ್ಲಿದ್ದು ಆ ಎಳೆಯನ್ನೇ ಮಾಧ್ಯಮವಾಗಿಸಿ ಎಲ್ಲಕಡೆ ಚಲಿಸುತ್ತದೆ. ವಿಶ್ವದ ಸಾಕ್ಷಿಪ್ರಜ್ಞೆಯು ತಾನೇ ಸೃಷ್ಟಿಯೊಳಗೆ ಮೂಡುವ ಹಾಗೂ ಚಲಿಸುವ ಸಂಕೀರ್ಣ ವಿನ್ಯಾಸವಿದು. ಸೃಷ್ಟಿಯು ಸದಾ ಆಗುತ್ತಲೇ ಇರುತ್ತದೆ. ಆಗಿ ಇರುವುದಲ್ಲ. ಲೋಕಪ್ರವಾಹದಲ್ಲಿ ಪ್ರಳಯ ಸೃಷ್ಟಿಗಳು ನಿರಂತರ. ಆದರೆ ವಿಶ್ವದ ಇರುವಿಕೆಯಲ್ಲಿ ನಿರಂತರವಾದ ಮೈತ್ರಿ ಇದೆ. ಅದು ಅಳಿಯುವುದೇ ಮರಣ.

ರಸವೆ ಜನನ
ವಿರಸ ಮರಣ
ಸಮರಸವೇ ಜೀವನ (ಕೊನೆಯ ಹಾಡು)

ಎನ್ನುವುದೇ ಬೇಂದ್ರೆಯವರ ಸೂತ್ರವಾಕ್ಯವಾಗುವುದರ ಹಿಂದೆ ವಿಶ್ವಮೈತ್ರಿಯ ಧ್ಯಾನವಿದೆ. ಇದನ್ನು ಬದುಕಲ್ಲೂ ಕಾಣಲು ಅವರು ಹವಣಿಸಿದ್ದಾರೆ. ಒಂದೇ ವಿಶ್ವದ ಭಿನ್ನ ಅಂಗಗಳಾದ ನಾವು ಸಾಮರಸ್ಯದಿಂದ ವರ್ತಿಸುವ ಹದ ಕಲಿಯಲು ಬದುಕೇ ಭಿತ್ತಿಯಾಗಿದೆ. ಭಾವಪರಿಪಾಕ ಹಾಗೂ ಪ್ರಜ್ಞೆಯ ಪರಿಪಾಕದಲ್ಲಿ ಬದುಕನ್ನು ಹಿಗ್ಗಿಸುವ ಕಾವ್ಯಮಾರ್ಗ ಬೇಂದ್ರೆಯವರದು. ಒಲವು, ಸ್ನೇಹ, ಪ್ರೇಮ, ಕಾಮ, ವಾತ್ಸಲ್ಯ ಗಳಲ್ಲಿ ಈ ಸಾಮರಸ್ಯವನ್ನು ಬೆಸೆದು ಬದುಕನ್ನು ಕಟ್ಟುವ ಪಯಣವಾಗಿ ಬೇಂದ್ರೆಕಾವ್ಯವು ಹೃದ್ಯವಾಗಿದೆ. ಐಕ್ಯಭಾವವನ್ನು ವ್ಯಕ್ತಿಗಳ ನಡುವೆ, ಜಾತಿ ಧರ್ಮಗಳ ನಡುವೆ, ರಾಷ್ಟ್ರಜೀವನದಲ್ಲಿ, ಸಾಮಾಜಿಕ ಬದುಕಿನಲ್ಲಿ ಸ್ಥಾಪಿಸಬೇಕೆಂದು ಅವರ ಕಾವ್ಯ ನುಡಿಯುತ್ತದೆ.

ಜಿನ ಹರಿ ಅಲ್ಲಾ ಶಿವನೇ ಬಲ್ಲಾ
ಒಬ್ಬನಲ್ಲದೇ ಎರಡಿಲ್ಲಾ!
ಜೀವ ದೇವನೊಂದಾವಣೆ ಇಲ್ಲದ
ನೀರಿಲ್ಲದ ನೆಲ ಬರಡಲ್ಲಾ (ಪಾರ್ವತಿ ನೀನೆ ಸಲಹು)

ಅನೇಕಾಂಗವಿದೆ ಐಕ್ಯದ ಕೀಲ
ಅನೈಕ್ಯವಾದರೆ ಒಂದಲ್ಲ
ನಾ ನಾ ಎನ್ನುತ ನಾನತೆರದಲಿ
ವಿಭಕ್ತವಾದರೆ ಚೆಂzಲ್ಲ (ಪಾರ್ವತಿ ನೀನೆ ಸಲಹು)

ಈ ಹೃದಯಭೂಮಿಯನ್ನು ಸುಡುಗಾಡು ಮಾಡದಿರಿ, ಬಾಂಧವ್ಯದಲಿ ಅದನ್ನು ಪಾವನಗೊಳಿಸಿರಿ ಎಂದು ಪ್ರಾಜ್ಞರನ್ನು ಕವಿ ಬೇಂದ್ರೆ ವಿನಂತಿಸುತ್ತಾರೆ. ವಿಶ್ವದೈಕ್ಯದ ಸೂತ್ರವನ್ನು ವಾಸ್ತವದ ಬದುಕಿಗೂ ಕಸಿಕಟ್ಟುವ ಕಾವ್ಯ ತಂತ್ರವನ್ನು ಅವರು ನೀಡಿದ್ದಾರೆ.

ಬೇಂದ್ರೆಯವರು ವಿಶ್ವಮೈತ್ರಿಯನ್ನು ಪ್ರಜ್ಞೆ ಹಾಗೂ ಪರಿಸರದ ಎಲ್ಲ ನೆಲೆಗಳಲ್ಲಿ ವಿಸ್ತರಿಸುತ್ತಾ ಅವುಗಳನ್ನು ಒಂದಾಗಿ ಬೆಸೆದು ನಿಲ್ಲಿಸುವ ಬೆರಗು ಅವರ ’ಬೆಳಗು’ ಕವಿತೆಯಲ್ಲಿ ಉದಿಸಿದೆ. ಲೌಕಿಕ ಹಾಗೂ ಅಲೌಕಿಕವನ್ನು ಬೇರೆಯಾಗಿ ಭಾವಿಸದೇ ಇಹದಲ್ಲೇ ಪರದ ಚೆಲುವನ್ನು ’ಕಾಣುವ’ ಅವರ ತಾತ್ವಿಕತೆಗೆ ಈ ಕವಿತೆಯೊಂದು ಪರಿಪೂರ್ಣ ನಿದರ್ಶನವಾಗಿದೆ. ಜೀವಶಾಸ್ತ್ರೀಯ ಹಾಗೂ ಪರಿಸರಶಾಸ್ತ್ರೀಯ ನೆಲೆಯಲ್ಲಿ ಅನುಭವಕ್ಕೆ ಬರುವ ಈ ಜೀವಮೈತ್ರಿಯನ್ನು ಅನುಭವದ ಸ್ತರದಲ್ಲಿ ನಿರೂಪಿಸುತ್ತಹೋಗಿರುವುದು ಕವಿತೆಯ ವಿಶೇಷತೆ. ಕಣ್ಣು, ಕಿವಿ, ನಾಲಗೆ, ಮೂಗು, ಚರ್ಮಗಳ ಇಂದ್ರಿಯಾನುಭೂತಿಯ ಮೂಲಕವೇ ವಿಶ್ವವು ನಮ್ಮೊಳಗೆ ಇಳಿಯುತ್ತದೆ. ಇಂದ್ರಿಯದ ಮಿತಿಯನ್ನು ಹಿಗ್ಗಿಸುವ ಧ್ಯಾನವು ನಮ್ಮನ್ನು ವಿಶ್ವವಾಗಿ ಆವರಿಸಿಕೊಳ್ಳುವಂತೆ ಮಾಡುತ್ತದೆ. ಈ ಬೆಳಗು ನಾನು ಮತ್ತು ವಿಶ್ವ ಎಂಬ ದ್ವಂದ್ವವನ್ನು ಅಳಿಸಿ ದೀಪ್ತಗೊಳಿಸುವ ಬೆಳಗೂ ಹೌದು. ಮನಸ್ಸೇ ವಿಶ್ವದಲ್ಲಿ ಲಯಗೊಂಡಾಗ ದೃಷ್ಟಿ ದೃಶ್ಯ ದೃಷ್ಟಾರರೆಂಬ

ವಿಭಜನೆಯಳಿದು ಶಾಂತಿರಸವೇ ತಾನಾಗುವ ಭಾವದಬೆಳಗಿದು
ಗಿಡಗಂಟೆಯಾ ಕೊರಳೊಳಗಿಂದಾ
ಹಕ್ಕಿಗಳಾ ಹಾಡು
ಹೊರಟಿತು ಹಕ್ಕಿಗಳಾ ಹಾಡು (ಬೆಳಗು)

ಕಾಣದ ಹಕ್ಕಿಯ ಹಾಡನ್ನು ಕಾಣುವ ಗಿಡಗಂಟಿಯ ಕೊರಳು ಪ್ರಕಟಪಡಿಸುವ ರೂಪಕವೇ ವಿಶ್ವಮೈತ್ರಿಗೆ ಉದಾಹರಣೆ. ಹಕ್ಕಿಯಕೊರಳೂ ಗಿಡಗಂಟಿಯ ಕೊರಳೂ ಅಭೇದವಾಗಿ ನಾದಹೊಮ್ಮಿಸುವಲ್ಲಿ ಅದು ನಿಚ್ಚಳವಾಗಿದೆ. ಪರಿಸರದಲ್ಲಿ ಜೀವಿಗಳ ಪರಸ್ಪರ ಅವಲಂಬನೆ ಹಾಗೂ ಸಂಬಂಧಗಳ ನೆಲೆ ದಕ್ಕದಿದ್ದರೆ ಬದುಕು ಮರಣಮುಖಿಯಾಗುವಲ್ಲಿ ಸಂಶಯವಿಲ್ಲ. ವ್ಯಕ್ತಿಯು ತಾನು ಸಮಗ್ರವಿಶ್ವಕ್ಕೆ ಸೇರಿದವ/ಳೆಂದು ತಿಳಿದಾಗ ಮಾತ್ರ ವಿಶ್ವಮೈತ್ರಿಯ ಪೂರ್ಣದೃಷ್ಟಿಯು ಅವತರಿಸುತ್ತದೆ.

(ಛಾಯಾಚಿತ್ರಗಳು: ಮಲ್ಲಿಕಾರ್ಜುನಗೌಡ ತೂಲಹಳ್ಳಿ)

ಇದನ್ನು ಓದಿ:

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...